ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ‘ಕುಲಗುರು’ ಪಂ. ಪುಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರದ ಒಂದು ದಿವ್ಯ ರತ್ನ. ಸ್ವರ ಸಿಂಹಾಸನದ ಚಕ್ರವರ್ತಿ, ಉಭಯ ಗಾಯನಾಚಾರ್ಯ, ವಾಗ್ಗೇಯಕಾರ, ವಿವಿಧ ವಾದ್ಯ ವಾದಕ, ತ್ರಿಭಾಷಾ ಕವಿ, ನಾಟಕ-ಪುರಾಣ ಕರ್ತೃ, ಪುರಾಣ-ಪ್ರವಚನಕಾರ, ನಾದಯೋಗಿ, ತ್ರಿಕಾಲ ಲಿಂಗ ಪೂಜಾನಿಷ್ಠ, ಶಿವಯೋಗಿ.

ಅವರು ಜನಿಸಿದ್ದು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಹೊಸಪೇಟೆಯಲ್ಲಿ; ೧೯೧೪ರ ಮಾರ್ಚ್ ೩ ರಂದು. ತಂದೆ ರೇವಣಯ್ಯ, ತಾಯಿ ಸಿದ್ಧಮ್ಮ. ತೊಟ್ಟಿಲ ಹೆಸರು ಪುಟ್ಟಯ್ಯ, ಹುಟ್ಟಿದ ಆರು ತಿಂಗಳಲ್ಲಿ ಕಣ್ಣನ್ನು, ನಂತರ ಹೆತ್ತವರನ್ನು ಕಳೆದುಕೊಂಡು ಸೋದರಮಾವ ದೇವಗಿರಿ ಚಂದ್ರಶೇಖರಯ್ಯನವರಲ್ಲಿ ಆಸರೆ. ಹುಟ್ಟಿನೊಂದಿಗೆ ಆಗಾಧ ಸಂಗೀತ ಪ್ರತಿಭೆ ಹೊಂದಿದ ಪುಟ್ಟಯ್ಯನವರು ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳ ಶಿಷ್ಯತ್ವ ಸಂಗೀತದಲ್ಲಿ ಅಪಾರ ಸಾಧನೆ. ಬ್ರೈಲ ಲಿಪಿ ಕಲಿತು ಕನ್ನಡ – ಹಿಂದಿ – ಸಂಸ್ಕೃತದಲ್ಲಿ ಪಾಂಡಿತ್ಯ ಪ್ರಾಪ್ತಿ. ಕನ್ನಡದಲ್ಲಿ ೨೦ ನಾಟಕ, ೧೫ ಪುರಾಣ, ೩ ಸಂಗೀತ, ೬ ಇತರ, ೬ ಸಂಸ್ಕೃತ, ೪ ಹಿಂದಿ ಗ್ರಂಥ ರಚನೆ, ಬ್ರೈಲ್‌ ಲಿಪಿಯಲ್ಲಿ ಭಗವದ್ಗೀತೆ ಮತ್ತು ಉಪನಿಷತ್‌  ರಚನೆ. ‘ಪಂಚಾಕ್ಷರಿ’ ಎಂಬ ಅಂಕಿತದಲ್ಲಿ ಅನೇಕ ಕನ್ನಡ ಬಂದೀಶ್‌ ರಚನೆ.

ಅಂಧ, ಅನಾಥ, ಅಂಗವಿಕಲ ಮಕ್ಕಳಿಗಾಗಿ, ಸಂಗೀತ ಕಲಿಯುವವರಿಗಾಗಿ ವೀರೇಶ್ವರ ಪುಣ್ಯಾಶ್ರಮದಲ್ಲಿ ನಿತ್ಯನಾದ ನೈವೇದ್ಯ. ಲಕ್ಷೋಪಲಕ್ಷ ಜನರಿಗೆ ಸಂಗೀತ ದೀಕ್ಷೆ, ದೇಶದ ತುಂಬೆಲ್ಲ ಅವರ ಶಿಷ್ಯ ಬಳಗ. ಶಿಷ್ಯರಿಂದ ಗುರುವಿಗೆ ಗುರು ವಂದನ. ಗುರುವಿನ ಹೆಸರಿನಲ್ಲಿ ರಾಷ್ಟ್ರೀಯ ‘ಪುಟ್ಟರಾಜ ಸಮ್ಮಾನ್‌’ ಪ್ರಶಸ್ತಿ ಸ್ಥಾಪನೆ (೧೯೯೯). ಪ್ರತಿವರ್ಷ ರಾಷ್ಟ್ರಮಟ್ಟದ ಖ್ಯಾತ ಸಂಗೀತಗಾರರಿಗೆ ಆ ಪ್ರಶಸ್ತಿ ಪ್ರದಾನ. ‘ಪಂಚಾಕ್ಷರ ವಾಣಿ’ ಎಂಬ ಸಂಗೀತ ಪತ್ರಿಕೆ ಅವರ ಪ್ರಧಾನ ಸಂಪಾದಕತ್ವರಲ್ಲಿ ಪ್ರಕಟಗೊಳ್ಳುತ್ತಿದೆ.

ಪಂ. ಪುಟ್ಟರಾಜ ಗವಾಯಿಗಳು ಅನೇಕ ವಾದ್ಯ ನುಡಿಸುವಿಕೆಯಲ್ಲಿ ನಿಷ್ಣಾತರು. ಹಾರ್ಮೋನಿಯಂ ನುಡಿಸುವುದರಲ್ಲಿ ಅವರದು ಅಪ್ರತಿಮ ಪಾಂಡಿತ್ಯ. ಪಿಟೀಲು, ವೀಣೆ, ತಬಲಾ, ಸಾರಂಗಿ, ದಿಲರುಬಾ, ಸರೋದ – ಹೀಗೆ ಅನೇಕ ವಾದ್ಯಗಳಲ್ಲಿ ಅವರು ಪರಿಣಿತರು. ಅವರ ಶಿಷ್ಯ ಸಂಪತ್ತು ಅಸಂಖ್ಯ. ದೇಶದ ಉದ್ದಗಲಕ್ಕೂ ತುಂಬ ವಿಸ್ತಾರ. ರಾಷ್ಟ್ರವ್ಯಾಪಿ ಅವರ ಶಿಷ್ಯ ಸಂಕುಲ ಹರಡಿಕೊಂಡಿದೆ. ಸಂಗೀತ ಕಲೆಯ ಅಭಿವೃದ್ಧಿಗಾಗಿ ಪಂ. ಪಂಚಾಕ್ಷರ ಗವಾಯಿ ಸಂಗೀತ ಮಹಾವಿದ್ಯಾಲಯ ಸ್ಥಾಪಿಸಿದ್ದಾರೆ. ‘ಜ್ಞಾನದೇಗುಲ’ವೆಂಬ ಬೃಹತ್‌ ಅಭಿನಂದನ ಗ್ರಂಥ ಅವರಿಗೆ ಅರ್ಪಿಸಲಾಗಿದೆ.

ಪಂ. ಪುಟ್ಟರಾಜ ಗವಾಯಿಗಳಿಗೆ ಸಂದಿರುವ ಪ್ರಶಸ್ತಿ-ಪುರಸ್ಕಾರಗಳು ಅಸಂಖ್ಯ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (೧೯೬೧-೬೨), ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌, ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ, ಕರ್ನಾಟಕ ಸರ್ಕಾರದ ರಾಜ್ಯ ಸಂಗೀತ ವಿದ್ವಾನ್‌ ಪುರಸ್ಕಾರ, ಕರ್ನಾಟಕ ಸರ್ಕಾರದ ಕನಕ-ಪುರಂದರ ಪ್ರಶಸ್ತಿ (೧೯೯೮), ರಾಷ್ಟ್ರೀಯ ಬಸವ ಪುರಸ್ಕಾರ (೨೦೦೩), ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಗೌರವ ಫೆಲೋಶಿಪ್‌, ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಪಾಲ್‌ ಹ್ಯಾರಿಸ್‌ ಗೌರವ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೯೯) ಹಿಂದಿ ಬಸವ ಪುರಾಣಕ್ಕೆ ರಾಷ್ಟ್ರಪತಿ ಪುರಸ್ಕಾರ ಮುಂತಾದವುಗಳು. ಶಿಷ್ಯರು, ಅಭಿಮಾನಿಗಳು, ಅನೇಕ ಸಂಘ-ಸಂಸ್ಥೆಗಳು ಅವರಿಗೆ ನೀಡಿರುವ ‘ತುಲಾಭಾರ’ ಒಂದು ಸಾವಿರಕ್ಕಿಂತ ಅಧಿಕ. ಅದು ಗಿನ್ನಿಸ್‌ ದಾಖಲೆಯಾಗಿದೆ.