ನಮ್ಮ ಬಾಲ್ಯದ ಕಡೆಗೊಮ್ಮೆ ನೋಡಿದರೆ ಅಲ್ಲಿ ಹಲವಾರು ಸುಂದರ ನೆನಪುಗಳ ಬುತ್ತಿ ಕಾಣುತ್ತದೆ.

ನಮ್ಮ ನೆನಪಿನ ಮೊದಲ ವರ್ತುಲಕ್ಕೆ ಬರುವವೆಂದರೆ ನಮ್ಮ ಸುತ್ತಲಿನ ಪರಿಸರಕ್ಕೆ ಸಂಬಂಧಿಸಿದ ನೆನಪುಗಳು. ಮೊದಲಿಗೆ ಕಂಡ ಸುಂದರ ಪ್ರಕೃತಿ, ಅದರೊಡನೆ ಅವಿನಾಭಾವದಿಂದ ಹೊಂದಿಕೊಂಡಂತಿದ್ದ ಪ್ರಾಣಿ ಪಕ್ಷಿಗಳು. ಅವುಗಳೊಡನೆಯ ಒಡನಾಟ ಇವೆಲ್ಲಾ ನಮ್ಮ ನೆನಪಿನಲ್ಲಿ ಅಚ್ಚೊತ್ತಿರುವ ಬಾಲ್ಯಕಾಲದ ನನಪುಗಳು.

ಬಾಲ್ಯಕಾಲಕ್ಕೆ ಹೋಗಿ ನೆನಪಿಸಿಕೊಂಡರೆ ಆ ನೆನಪುಗಳು ಅದೆಷ್ಟು ಮಧುರ? ನಾಯಿ ಮರಿಗಳು, ಬೆಕ್ಕಿನ ಮರಿಗಳು, ಗ್ರಾಮೀಣ ವಲಯದಲ್ಲಿದ್ದ ನನ್ನಂತಹವರಿಗೆ ವಿಶೇಷವಾಗಿ ಲಭಿಸುತ್ತಿದ್ದ ಹಸುಕರುಗಳ, ಮೇಕೆ ಮತ್ತು ಕುರಿಗಳ ಸುಂದರ ಬೊಂಬೆಯಂತಹ ಮರಿಗಳ ಒಡನಾಟ. ಬೇಕೆಂದಾಗ ಅಟವಾಡಲು ನಮ್ಮ ಕೈಗೆ ಸಿಕ್ಕುವಂತಿದ್ದ ಈ ರೀತಿಯ ಸುಂದರ ಮರಿಗಳ ನೆನಪಿನ ಜೊತೆಗೆ ಕೈಗೆ ಸಿಕ್ಕಿಯೂ ಸಿಕ್ಕದಂತೆ ಪುರ್ರನೆ ಹಾರಿಹೋಗುತ್ತಿದ ಸುಂದರ ವರ್ಣರಂಜಿತ ಹಕ್ಕಿಗಳು ಸಹಾ ನಮ್ಮ ನೆನಪಿನ ಮತ್ತೊಂದು ಮಧುರ ಕೊಂಡಿ. ಹಕ್ಕಿಗಳೆಂದರೆ ಮೊದಲಿಗೆ ನೆನಪಾಗುವುದೆಂದರೆ ಮನೆಯೊಳಗೇ ಬಂದು ಠಿಕಾಣಿ ಹಾಕುತ್ತಿದ್ದ ಮುಷ್ಟಿಗಾತವೂ ಇರುತ್ತಿರದ ಗುಬ್ಬಚ್ಚಿಗಳು! ಆ ಗುಬ್ಬಿಗಳಾದರೋ ಇತರ ಹಕ್ಕಿಗಳಿಗಿಂತ ಹೆಚ್ಚು ಪರಿಚಿತ ಮತ್ತು ಆತ್ಮೀಯ!! ಅವು ಯಾಕೆ ಹೆಚ್ಚು ಪರಿಚಿತ ಮತ್ತು ಆತ್ಮೀಯವೆಂದರೆ ಬೇರೆ ಹಕ್ಕಿಗಳು ನಮ್ಮನ್ನು ಕಂಡು ದೂರದಿಂದಲೇ ಬೆಚ್ಚಿಬಿದ್ದು ಹಾರಿಹೋಗುತ್ತಿದ್ದರೆ ಗುಬ್ಬಿಗಳು ಮಾತ್ರಾ ನಮ್ಮ ಹೆದರಿಕೆಯೇ ಇಲ್ಲದೆ, ನಮ್ಮ ಅನುಮತಿಯೂ ಬೇಕಾಗಿಲ್ಲವೇನೋ ಎಂಬಂತೆ ಮನೆಯೊಳಗೆ ನಿರುಮ್ಮಳವಾಗಿ ಪ್ರವೇಶಿಸಿ ಸುತ್ತಾಡಿಕೊಂಡಿರುತ್ತಿದ್ದುವು. ಮನೆಯಲ್ಲಿದ್ದ ಧವಸ ಧಾನ್ಯಗಳನ್ನು ನಮ್ಮೆದುರಿಗೇ ಯಾವ ಅಂಕೆ-ಶಂಕೆಯೂ ಇಲ್ಲದೆ ಕಬಳಿಸುತ್ತಾ, ನಾವೇನಾದರೂ ಪ್ರೀತಿಯಿಂದ ಕಾಳು ಚೆಲ್ಲಿದರೆ ಸನಿಹಬಂದು ಆರಿಸಿ ತಿನ್ನುತ್ತಿದ್ದ ಚಿಕ್ಕ ಗುಬ್ಬಿಗಳು ನಮಗೆ ಹೆಚ್ಚು ಹತ್ತಿರದ ಜೀವಿಗಳಾಗಿದ್ದುವು. ನಾವು ಹಾಕಿದ ಕಾಳನ್ನು ತಿನ್ನುತ್ತಿದ್ದವಾದರೂ ಕೈಗೆ ಸಿಕ್ಕದಂತೆ ಒಂದು ರೀತಿಯ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಲು ಅವು ಮರೆಯುತ್ತಿರಲಿಲ್ಲ. ನಾವು ಹಾಕಬಹುದಾದ ಕಾಳಿಗೆ ನಮ್ಮ ಹತ್ತಿರ ಬರುತ್ತಿದ್ದರೂ ಹತ್ತಿರ ಹೋದರೆ ಮಾತ್ರಾ ಪುರ್.. ಎಂದು ಕಣ್ಮರೆ.

ಈ ಗುಬ್ಬಿಗಳು ನಮ್ಮಂತಹ ಮಕ್ಕಳಿಗೆ ಮಾತ್ರಾ ಪ್ರಿಯವಾಗಿರಲಿಲ್ಲ. ನಮ್ಮ ಹಿರಿಯರಿಗೂ ಅವುಗಳನ್ನು ಕಂಡರೆ ಅದೊಂದು ತರಹದ ಮಮತೆ. ಅವು ಮನೆಯೊಳಗೆ ನುಗ್ಗಿ ಧವಸ ಧಾನ್ಯವನ್ನೆಲ್ಲಾ ತಿಂದು ಲಗಾಡಿ ತೆಗೆಯುತ್ತಿದ್ದರೂ ಅವು ಕಂಡಾಗ ಹುಷ್..ಹುಷ್ ಎಂದು ಸದ್ದು ಮಾಡಿ ಓಡಿಸುತ್ತಿದ್ದರೇ ವಿನಹ ಅವುಗಳನ್ನು ಹೊಡೆಯುವುದಾಗಲೀ, ಕೊಲ್ಲುವುದನ್ನಾಗಲೀ ಮಾಡುತ್ತಿರಲಿಲ್ಲ. ಬದಲಾಗಿ ಬೆಕ್ಕೋ ಮತ್ತೆಂತದೋ ಮಾಂಸಾಹರಿ ಪ್ರಾಣಿ ಗುಬ್ಬಿಯ ಮೇಲೆ ಕಣ್ಣು ಹಾಕಿಕೊಂಡು ಹಿಡಿಯಲು ಹೊಂಚುಹಾಕುತ್ತಿದ್ದರೆ ಪೆಟ್ಟು ಬೀಳುತ್ತಿದ್ದುದು ಬೆಕ್ಕಿಗೇ! ಎಲ್ಲರ ಕಣ್ಣಲ್ಲೂ ಗುಬ್ಬಿ ಎಂದರೆ ಪಾಪದ್ದು..! ಎಂಬ ಭಾವನೆ. ಅದೇನು ಮಹಾ ತಿಂದೀತು ಎಂಬ ಉದಾರತೆ!.

ಹಾಗೆ ನೋಡಿದರೆ ಗುಬ್ಬಿಗಳ ಜೀವನ ವಿಧಾನವೇ ಅಂತಹದು. ಸಾಮಾನ್ಯವಾಗಿ ಹಕ್ಕಿಗಳು ಮಾನವನಿಂದ ದೂರಾಗಿ ಗಿಡಮರಗಳಲ್ಲಿ ನೆಲೆ ಕಂಡುಕೊಂಡರೆ, ಗುಬ್ಬಿಗೆ ಮಾತ್ರಾ ಮನೆಯಂಗಳವೇ ಬೇಕು. ಮಾನವ ಕುಲದೊಡನೆ ನಿಕಟ ಸಂಬಂಧವಿರಿಸಿಕೊಂಡ ಏಕೈಕ ಪಕ್ಷಿ ಎಂದರೆ ಗುಬ್ಬಿಯೇ. ಗಿಣಿ, ಪಾರಿವಾಳ ಮೊದಲಾದ ಪಕ್ಷಿಗಳನ್ನು ಹಿಡಿದು ಬಂಧನದಲ್ಲಿರಿಸಿ ಸಾಕಿದರೆ ಮಾತ್ರಾ ನಮ್ಮ ಜೊತೆಯಲ್ಲಿರುತ್ತವಾದರೆ ಗುಬ್ಬಿ ಮನುಷ್ಯರ ಸಹವಾಸ ಅಪೇಕ್ಷಿಸಿ ಬರುವ ಏಕೈಕ ಹಕ್ಕಿ ಇರಬಹುದು. ನಮ್ಮ ಗುಬ್ಬಿಯೇ ಆಗಲಿ ಪ್ರಪಂಚದಾದ್ಯಂತ ಇರುವ ಗುಬ್ಬಿಯ ಜಾತಿಯ

[ಹೌಸ್ ಸ್ಪಾರೊ] ಇತರ ಪುಟ್ಟ ಹಕ್ಕಿಗಳೇ ಆಗಲಿ ಮಾನವರ ಸಾಮೀಪ್ಯವನ್ನೇ ಅಪೇಕ್ಷಿಸುವುದು ಕಂಡುಬರುತ್ತದೆ. ನಾವು ಉಪಯೋಗಿಸುವ ಧವಸ ಧಾನ್ಯಗಳೇ ಸಾಮಾನ್ಯವಾಗಿ ಗುಬ್ಬಿಗಳ ಆಹಾರ. ನಾವು ತಿಂದು ಬಿಟ್ಟ ಅಹಾರ ಪದಾರ್ಥಗಳೂ ಅವುಗಳಿಗೆ ಪ್ರಿಯವೇ. ಆಗಾಗ ಮನೆಯಂಗಳದಲ್ಲೇ ಸಿಕ್ಕುವ ಹುಳು ಹುಪ್ಪಡಿಗಳೂ, ಜೇಡಗಳೂ ಬಾಯಿ ರುಚಿಗೆ ಆಗಬಹುದು. ಗೂಡು ಕಟ್ಟಿ ಮರಿಮಾಡಲು ಮನೆಯ ಮಾಡು, ಹಂಚಿನ ಸಂದು ಅಥವಾ ಮನೆಯ ಗೋಡೆಗಳಲ್ಲಿರಬಹುದಾದ ಬಿರುಕು ಬೇಕು. ಒಟ್ಟಾರೆ ಮಾನವ ಸಾಮೀಪ್ಯ ಗುಬ್ಬಿಗಳಿಗೆ ಅವಶ್ಯವೂ, ಪ್ರಿಯವೂ ಆದುದಾಗಿತ್ತು. ನಾವು ಅಮ್ಮನಿಂದ ಕೇಳಿದ ಮೊದಲ ಬಾಲ ಕಥೆಗಳಲ್ಲಿ ಕಾಗಕ್ಕ- ಗುಬ್ಬಕ್ಕನ ಕಥೆಯೇ ಹೆಚ್ಚು ಆತ್ಮೀಯ. ಹಾಗಾಗಿ ನಮ್ಮ ನೆನಪಿನಂಗಳದಲ್ಲಿ ಪುಟ್ಟ ಪುಟ್ಟ ಗುಬ್ಬಿಗಳಿಗೆ ವಿಶೇಷವಾದ ಸ್ಥಾನಮಾನವಿರುತ್ತಿತ್ತು. ನಮ್ಮ ಸುತ್ತ ಸುಳಿದಾಡುತ್ತಿದ್ದ ಕಾಗೆ ಅನುಮಾನದ ಜೀವಿಯಾದರೆ ಗುಬ್ಬಿ ಸ್ನೇಹ ಜೀವಿ!.

 

ಈಗ ನಮ್ಮ ನೆನಪಿನಲ್ಲಷ್ಟೇ ಉಳಿದಿರುವ ಗುಬ್ಬಿಗಳನ್ನು ನಮ್ಮ ಮಕ್ಕಳಿಗೆ ತೋರಿಸಿ ನಮ್ಮ ಬಾಲ್ಯಕಾಲದ ನೆನಪು ಮಾಡಿಕೊಳ್ಳೋಣವೆಂದರೆ ಈಗೆಲ್ಲಿವೆ ಆ ಗುಬ್ಬಿಗಳು?. . .ಕಾಣುವುದಿಲ್ಲವಲ್ಲ?. . . ಹೌದು, ಎಲ್ಲಿ ಹೋದವು ಆ ಮರಿ ಗುಬ್ಬಿಗಳು?

ಒಮ್ಮೆ ಮನೆ ಪ್ರವೇಶಿಸಿದರೆ ಮತ್ತೆ ಮತ್ತೆ ಓಡಿಸಿದರೂ ಛಲ ಬಿಡದೆ ಮತ್ತೆ ನುಗ್ಗಿ ಮನೆಯೊಳಗೇ ಸಂಸಾರ ಮಾಡಿಕೊಂಡಿರುತ್ತಿದ್ದ ಆ ಗುಬ್ಬಿಗಳೆಲ್ಲಿ ಹೋದವು?

ದಿನಬೆಳಗಾದರೆ ಮನೆಯೊಳಗೆ ಬಂದು ಲೂಟಿಮಾಡುತ್ತಾ, ಸಂಜೆಯಾದೊಡನೆ ಬೀದಿ ಬದಿಯ ವಿದ್ಯುತ್ ತಂತಿಯ ಮೇಲೆ ತೋರಣದಂತೆ ಸಾಲಾಗಿ ಕುಳಿತು ಮೀಟಿಂಗ್ ಮಾಡುತ್ತಿದ್ದ ಗುಬ್ಬಿಗಳು ಎಲ್ಲಿ ಮಾಯವಾದವು?

ಚಿಕ್ಕವರಿದ್ದಾಗ ಕುತೂಹಲದಿಂದ ಗುಬ್ಬಿಯ ದಿನಚರಿ ನೋಡುತ್ತಿದ್ದುದು ನೆನಪಾಗುತ್ತದೆ. ಮನೆಯೊಳಗೊಂದಿಷ್ಟು ಲೂಟಿಮಾಡಿ ಹೊರಗೆ ಬಂದು ಒಣಮರದ ಸಂದಿಗಳಲ್ಲಿ, ಹಸಿಮಣ್ಣಿನೊಳಗೆ ಇದ್ದಿರಬಹುದಾದ ಹುಳುಗಳನ್ನು ಹುಡುಕಿಕೊಳ್ಳುತ್ತಿದ್ದುವು, ಎಲ್ಲಾದರೂ ಸ್ವಲ್ಪ ಹುಡಿಮಣ್ಣು ಅಥವಾ ನುಣುಪಾದ ಧೂಳು ಕಂಡರೆ ಆಗಾಗ ಮಣ್ಣಿನಲ್ಲಿ ಹೊರಳಾಡಿ ರೆಕ್ಕೆ ಪುಕ್ಕದ ತುಂಬೆಲ್ಲಾ ಮಣ್ಣಿನ ಹುಡಿ ತುಂಬಿಕೊಳ್ಳುತ್ತಿದ್ದವು [ಅದು ಪುಕ್ಕಗಳೊಳಗೆ ಸೇರಿಕೊಳ್ಳುವ ಕೀಟಗಳನ್ನು ನಿವಾರಿಸಿಕೊಳ್ಳುವ ವಿಧಾನ], ನಂತರ ನೀರು ಸಿಕ್ಕಿದಲ್ಲಿ ಪಟಪಟನೆ ರೆಕ್ಕೆ ಅರಳಿಸಿ ಮುಳುಗುಹಾಕಿ ಸ್ನಾನ ಮಾಡಿ ನಮಗೆ ಶುದ್ಧತೆಯ ಪಾಠ ಹೇಳಿಕೊಡುತ್ತಿದ್ದವು. ಅಂತಹ ಗುಬ್ಬಿಗಳು ಎಲ್ಲಿ ಹೋದವು?

ಮರಿ ಇಡುವ ಕಾಲ ಬಂದಾಗ ಜೋಡಿಯಾಗುತ್ತಿದ್ದ ಗಂಡು ಮತ್ತು ಹೆಣ್ಣು ಗುಬ್ಬಿಗಳು ಒಟ್ಟಾಗಿಯೇ ಗೂಡು ಕಟ್ಟಿ,ಮೊಟ್ಟೆ ಇಟ್ಟು ಮರಿಮಾಡಿ ಆ ಮರಿಗಳಿಗೆ ಹಾರಲು ಕಲಿಸುವವರೆಗೆ ಆದರ್ಶ ದಂಪತಿಗಳಂತೆ ಜೊತೆಯಾಗಿರುತ್ತಿದ್ದವು. ಆ ಗುಬ್ಬಿಗಳು ಎಲ್ಲಿ ಹೋದವು?

ಮಲೆನಾಡಿರಲಿ, ಬಯಲುಸೀಮೆಯಾಗಿರಲಿ ಕೊನೆಗೆ ಏನೂ ಬೆಳೆಯದ ಬೆಂಗಾಡಾಗಿರಲಿ ಎಲ್ಲಿ ಮಾನವ ವಸತಿಯಿದ್ದರೂ ಅಲ್ಲಿ ಹಾಜರಿರುತ್ತಿದ್ದ ಗುಬ್ಬಿಗಳ ಇಡೀ ಸಂತತಿ ಎಲ್ಲಿ ಹೋಯಿತು?

ಅವುಗಳು ನಮ್ಮ ಜೊತೆಯಲ್ಲಿದ್ದಾಗ ಅವುಗಳ ಸಂಖ್ಯೆ ನಿಧಾನಕ್ಕೆ ಕ್ಷೀಣಿಸುತ್ತಾ ಬರುತ್ತಿದ್ದರೂ ತಲೆಕೆಡಿಸಿಕೊಳ್ಳದ ನಾವು ಈಗ ಅವು ಸಂಪೂರ್ಣ ಕಣ್ಮರೆಯಾಗುವ ಹಂತಕ್ಕೆ ಬಂದಾಗ ಅವುಗಳೆಲ್ಲಿ ವಲಸೆ ಹೋದವೆಂದು ಕುತೂಹಲ ಪ್ರದರ್ಶಿಸುತ್ತೇವೆ. ವಾಸ್ತವವೆಂದರೆ ಅವು ಬೇರೆಡೆ ಎಲ್ಲಿಯೂ ವಲಸೆ ಹೋಗಿಲ್ಲ. ದುರಂತದ ಸಂಗತಿಯೆಂದರೆ ಗುಬ್ಬಿಗಳ ಇಡೀ ಸಂಕುಲವೇ ಕ್ಷೀಣೀಸುತ್ತಾ ನಾಮಾವಶೇಷವಾಗುವ ಹಂತ ತಲುಪಿವೆ!! ಹಿಂದೆಲ್ಲಾ ಗ್ರಾಮೀಣ ಪರಿಸರದ ಮನೆಗಳಲ್ಲಿ ಗುಬ್ಬಿಗಳಿಗೆ ಬೇಕಾದ ಆಹಾರ ಪದಾರ್ಥಗಳು, ಹುಳುಗಳೂ, ಮನೆಯೊಳಗೆ ಬಲೆ ಹೆಣೆಯುವ ಜೇಡಗಳು ಸಾಕಷ್ಟು ಸಿಕ್ಕುತ್ತಿದ್ದವು, ವಾಸಕ್ಕೆ ಬೇಕಾದ ಪೊದೆಗಳು, ಗೂಡು ಕಟ್ಟಲು ಬೇಕಾದ iನೆಯ ಹೆಂಚಿನ ಮಾಡುಗಳೂ ಯಥೇಚ್ಚವಾಗಿದ್ದವು. ಈಗೆಲ್ಲಾ ಕಾಂಕ್ರೀಟ್‌ಮಯವಾಗಿರುವ ಜನ ವಸತಿ ಪ್ರದೇಶಗಳಲ್ಲಿ ಈ ಎಲ್ಲಾ ಪರಿಸರಗಳನ್ನು ತರುವುದೆಲಿಂದ? ಕೊನೆಗೆ ಗುಬ್ಬಿಗಳು ಮೈಮೇಲೆ ಪ್ರೀತಿಯಿಂದ ಹುಯ್ದುಕೊಳ್ಳುತ್ತಿದ್ದ ಹುಡಿಮಣ್ಣು ಸಹಾ ಇಂದಿನ “ನಾಗರೀಕ” ಪರಿಸರದಲ್ಲಿ ಸಿಕ್ಕುವುದಿಲ್ಲವಲ್ಲ? ಹೀಗೆ ಬದಲಾಗಿರುವ ಪರಿಸ್ಥಿತಿ, ಬದಲಾದ ಪರಿಸರ, ಬದಲಾದ ವಾತಾವರಣ, ಅವುಗಳ ಸಹಜ ವಾಸಸ್ಥಳದ ನಾಶ, ಕೀಟನಾಶಕಗಳ ಅತಿಯಾದ ಬಳಕೆ, ವಾತಾವರಣವನ್ನೆಲ್ಲಾ ತುಂಬಿಕೊಳ್ಳುತ್ತಿರುವ ಹಲವಾರು ರೀತಿಯ ವಿದ್ಯುತ್‌ಕಾಂತೀಯ ಅಲೆಗಳ ಪರಿಣಾಮದಿಂದ ಗುಬ್ಬಿಗಳು ಸಂಪೂರ್ಣವಾಗಿ ಕಣ್ಮರೆಯಾಗುವ ಹಾದಿಯಲ್ಲಿವೆ.

ಪುಟ್ಟ ಗುಬ್ಬಿ ಎತ್ತುವ ದೊಡ್ಡ ಪ್ರಶ್ಣೆ.

ಪುಟ್ಟ ಗುಬ್ಬಿ ಕಣ್ಮರೆಯಾದದ್ದಕ್ಕಿಂತ ಅದು ನೀಡುವ ಎಚ್ಚರಿಕೆ ಹಾಗೂ ಎತ್ತುವ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ.

ಹಾಗೆ ಇಡೀ ಒಂದು ಪಕ್ಷಿ ಜಾತಿಯೇ ಕಣ್ಮರೆಯಾಗಲು ಕಾರಣವಾದ ಪರಿಸ್ಥಿತಿ ನಿರ್ಮಾಣವಾದುದು ಏಕೆಂಬ ಪ್ರಶ್ನೆ ಉದ್ಭವವಾಗುತ್ತದಲ್ಲವೆ?. ಇದು ನಮ್ಮ ಪ್ರೀತಿಯ ಗುಬ್ಬಚ್ಚಿಗಳು ಕಣ್ಮರೆಯಾದ ಕಥೆ ಮಾತ್ರವಲ್ಲ. ಇದು ಭಾರತವೂ ಸೇರಿ ಪ್ರಪಂಚದಾದ್ಯಂತ ನೂರಾರು ಜಾತಿಯ ಪ್ರಾಣಿ ಪ್ರಭೇದಗಳೂ, ಸಾವಿರಾರು ಜಾತಿಯ ಸಸ್ಯ ಪ್ರಭೇದಗಳೂ ಕಣ್ಮರೆಯಾಗಿ ಹೋಗಿರುವ ಮತ್ತು ಸುಮಾರು ಅಷ್ಟೇ ಜೀವ ಸಂಕುಲಗಳು ಈಗಾಗಲೇ ವಿನಾಶದ ಹಾದಿಯಲ್ಲಿರುವ ದೀರ್ಘ ಮತ್ತು ದುರಂತ ಕಥಾನಕ. . .ನಿಸರ್ಗದ ಸಮತೋಲನಕ್ಕೆ ಕಾರಣವಾದ ಅಹಾರ ಸರಪಣಿಯಲ್ಲಿ ಸಸ್ಯವಾಗಲೀ, ಪ್ರಾಣಿಯಾಗಲೀ ಅಥವಾ ಒಂದು ಸಣ್ಣ ಹುಳುವಾಗಲೀ ಅದಕ್ಕೆ ಅದರದೇ ಆದ ಮಹತ್ವವಿರುತ್ತದೆ. ಸಮತೋನ ಏರುಪೇರಾಗದಂತೆ ಪ್ರಕೃತಿಯೇ ಪ್ರತಿಯೊಂದನ್ನೂ ಯೋಚಿಸಿ ಯೋಚಿಸಿ ಸೂಕ್ತ ಸ್ಥಾನದಲ್ಲಿಟ್ಟಿರುತ್ತದೆ. ಅಗತ್ಯ ಬಿದ್ದಾಗಲೆಲ್ಲಾ ಮಾರ್ಪಾಟುಗಳನ್ನೂ ಮಾಡುತ್ತಾ ಬಂದಿರುತ್ತದೆ. ಅಹಾರ ಸರಪಣಿಯ ನಡುವಿನ ಯಾವುದೇ ಒಂದು ಕೊಂಡಿ ಕಿತ್ತುಹೋದರೂ ನಿಸರ್ಗದಲ್ಲಿ ಬಹಳಷ್ಟು ಏರುಪೇರಾಗುತ್ತದೆಂದು ಹಿಂದಿನಿಂದಲೂ ಎಚ್ಚರಿಸುತ್ತಲೇ ಬರಲಾಗುತ್ತಿದೆ. ದೊಡ್ಡ ದೊಡ್ಡ ಪ್ರಾಣಿಗಳನ್ನು ಕೊಲ್ಲುವ ಮಾತು ಒತ್ತಟ್ಟಿಗಿರಲಿ ಕ್ರಿಮಿನಾಶಕ ಹೊಡೆದು ಒಂದು ನಿರ್ದಿಷ್ಟ ಜಾತಿಯ ಗಿಡಗಳಿಗೆ ಬರುವ ನಿರ್ದಿಷ್ಟ ಜಾತಿಯ ಕೀಟಗಳನ್ನು ಕೊಲ್ಲುವುದೂ ಸಹಾ ಆ ಸರಪಣಿಯ ಒಂದು ಮಹತ್ವದ ಕೊಂಡಿ ಕಿತ್ತಂತೆಯೇ ಸರಿ. ಅಲ್ಲಿಂದ ಮುಂದಕ್ಕೆ ಆ ಸರಪಣಿಯ ಜೋಡಣೆಯಲ್ಲಿ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಪ್ರಾಕೃತಿಕ ಸಮತೋಲನಕ್ಕೆ ಪೆಟ್ಟು ಬೀಳುತ್ತದೆ.

ಇದೆಲ್ಲಾ ಗೊತ್ತಿದ್ದೂ ಮನುಷ್ಯಜಾತಿ ಪ್ರಕೃತಿನಿಯಮದತ್ತ ಗಮನ ಕೊಡದೆ ತನ್ನ ಸುಖಕ್ಕಾಗಿ ಬದುಕಲು ಪ್ರಯತ್ನಿಸುತ್ತಿರುವುದೇ ಗುಬ್ಬಚ್ಚಿಯಂತಹ ಪಾಪದ ಜೀವಿಗಳು ನಾಮಾವಶೇಷವಾಗುತ್ತಿರುವುದಕ್ಕೆ ಕಾರಣ.

ಹಿಂದೆ ಹೇಳಿದಂತೆ ಇದು ಗುಬ್ಬಿಯೊಂದರ ಅವಸಾನದ ಕಥೆ ಮಾತ್ರವಲ್ಲ. ಪರಿಸರ ತಜ್ಞರ ಅಧ್ಯಯನಗಳು ಸೂಚಿಸುವಂತೆ ಕಳೆದ ಐನೂರು ವರ್ಷಗಳ ಅವಧಿಯಲ್ಲಿ ೧೪೦ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ಕಣ್ಮರೆಯಾಗಿವೆ. ಕಳೆದ ಮುನ್ನೂರು ವರ್ಷಗಳಲ್ಲೇ ಸುಮಾರು ೯೦ ಪ್ರಭೇದಗಳು ನಾಶವಾಗಿವೆ. ಪ್ರಪಂಚದಾದ್ಯಂತ ಹತ್ತು ಸಾವಿರಕ್ಕು ಹೆಚ್ಚು ಪ್ರಭೇದದ ಹಕ್ಕಿಗಳಿದ್ದು ಅವುಗಳಲ್ಲಿ ಈಗಾಗಲೇ ಸಾವಿರದಿನ್ನೂರಕೂ ಹೆಚ್ಚು ಜಾತಿಯ ಹಕ್ಕಿಗಳು ನಾಶದ ಹಾದಿ ಹಿಡಿದಿವೆ. ಭಾರತದಲ್ಲೂ ಪ್ರಾಣಿ ಪಕ್ಷಿಗಳ ವೈವಿಧ್ಯಕ್ಕೇನೂ ಕಡಿಮೆ ಇಲ್ಲ. ಪ್ರಪಂಚದಲ್ಲಿರುವ ೧೦೦೦೦ ಪಕ್ಷಿ ಪ್ರಭೇದದಲ್ಲಿ ಸುಮಾರು ೧೨೦೦ ಪ್ರಭೇದಗಳು ಭಾರತದಲ್ಲೇ ಇವೆಯಂತೆ. ಈಗ ಪ್ರಪಂಚದಲ್ಲಿ ಉಳಿದಿರುವ ಜೀವಜಗತ್ತಿನ ಪ್ರಭೇದಗಳಿಗಿಂತ ಹೆಚ್ಚು ಪ್ರಭೇದಗಳು ಈ ಹಿಂದೆ ಕಣ್ಮರೆಯಾಗಿವೆ. ಆದರೆ ಅದೆಲ್ಲ ಪ್ರಕೃತಿಯ ವೈಪರೀತ್ಯದಿಂದ ಅಥವಾ ತನ್ನ ಸಮತೋಲನ ಕಾದುಕೊಳ್ಳಲು ಪ್ರಕೃತಿಯೇ ಹೂಡಿದ ಆಟದಿಂದ ಮಾಯವಾದವು. ಆದರೆ ಈಗಾಗುತ್ತಿರುವುದೇನು? ಈಗಾಗುತ್ತಿರುವುದೆಲ್ಲಾ ಮಾನವ ಕೃತ ಅಪರಾಧಗಳು. ಅನಿಯಂತ್ರಿತ ಬೇಟೆಯಿಂದ, ಅವುಗಳ ನೈಸರ್ಗಿಕ ವಾಸಸ್ಥಾನಗಳ ನಾಶದಿಂದ, ಅನೈಸರ್ಗಿಕ ರೀತಿಯ ಜಾತಿ ಸಂಕರಗಳಿಂದ, ಶಕ್ತಿಶಾಲಿ ವಿಷಗಳನ್ನು ಕೀಟನಾಶಕಗಳಾನ್ನಾಗಿ ಉಪಯೋಗಿಸುವುದರಿಂದ,  ಭೂಮಿಯ ಬಿಸಿಯೇರಿಸುವ ಹಸಿರುಮನೆ ಅನಿಲಗಳು ಉಂಟುಮಾಡುವ ನಿಸರ್ಗದ ವೈಪರೀತ್ಯಗಳಿಂದ ನೂರಾರು ಜೀವ ಜಾತಿಗಳು ನಾಶವಾಗಿವೆ, ಸಾವಿರಾರು ಸಾವಿನಭಯದಲ್ಲಿ ತತ್ತರಿಸುತ್ತಿವೆ. . . . ಆದರೆ ಅವುಗಳ ಕೂಗು ಯಾರಿಗೆ ಕೇಳುತ್ತಿದೆ?

ತಮ್ಮದಲ್ಲದ ತಪ್ಪಿಗಾಗಿ ಸಾವಿನ ಮನೆಯ ಬಾಗಿಲು ತಟ್ಟುತ್ತಾ, ಕಣ್ಮರೆಯಾಗುವ ಹಂತದಲ್ಲಿರುವ ಜೀವ ಜಾತಿಯ ದೊಡ್ಡದಾದ ಪಟ್ಟಿಯೇ ಇದೆ. ಎರಡು ವರ್ಷದ ಹಿಂದೆ ಮಾಡಿದ್ದ ಅಂದಾಜಿನಂತೆ ಭೂಮಿಯ ಮೇಲಿನ ಜೀವ ಸಂಕುಲದ ಸುಮಾರು ೪೦ ಪ್ರತಿಶತ ಜೀವಿಗಳು ನಾಶದ ಹಾದಿ ಹಿಡಿದಿವೆಯಂತೆ!! ವಿಜ್ಞಾನಿಗಳ ಅರಿವಿಗೆ ಬಾರದಂತೆ ನಾಶದ ಹಾದಿ ಹಿಡಿದಿರುವ ಜೀವಿಗಳ ಪಟ್ಟಿಯೂ ದೊಡ್ಡ್ಡದೇ ಇರಬಹುದು!! ಹಾಗೆ ಕಣ್ಮರೆಯ ಹಂತದಲ್ಲಿರುವ ಪ್ರಮುಖ ಜೀವಿಗಳ ಪಟ್ಟಿಯತ್ತ ಸ್ವಲ್ಪ ಕಣ್ಣು ಹಾಯಿಸಿದರೆ, ಭಾರತದ [ಏಷಿಯನ್]ಆನೆಗಳು, ಆಫ಼್ರಿಕಾದ ದೊಡ್ಡ ಕಿವಿಗಳ ಆನೆಗಳು, ಕಾಡುನಾಯಿ, ಕೆನಡಾದ ಹೆಬ್ಬಾತು, ಹದ್ದು , ರಣಹದ್ದು, ಕಾಡೆಮ್ಮೆ, ಕಾಡುಬೆಕ್ಕು, ಪೆಲಿಕನ್, ಹುಲಿ, ಚಿರತೆ, ಸಿಂಹ, ಚಿಂಪಾಂಜಿ, ಗೊರಿಲ್ಲ, ಕೆಲ ಜಾತಿಯ ಆಮೆಗಳು, ತಿಮಿಂಗಿಲ, ಪಾಂಡಾ, ಒಂಟಿ ಕೊಂಬಿನ ಖಡ್ಗಮೃಗ, ಎರಡು ಡುಬ್ಬದ ಬ್ಯಾಕ್ಟ್ರಿಯನ್ ಒಂಟೆ, ಯಾಕ್, ನೀರುನಾಯಿ, ಹಿಪ್ಪೋಪೊಟಮಸ್, ಬಾವಲಿ, ನವಿಲು, ಕೋಗಿಲೆ, ಕೊಕ್ಕರೆ, ಬಾತುಕೋಳಿ, ಕಿಂಗ್ ಫ಼ಿಷರ್ ಮೊದಲಾದ ಹಕ್ಕಿಗಳು. . ಇವೆಲ್ಲಾ ಸಾಲಾಗಿ ನಿಂತಿರುವುದು ಕಾಣುತ್ತದೆ. ಮತ್ತು ಈ ಪಟ್ಟಿ ಇಲ್ಲಿಗೇ ನಿಲ್ಲದೆ ಬೆಳೆಯುತ್ತಲೇ ಹೋಗುತ್ತದೆ. ಹೀಗೆ ಸಕಲವೂ ವಿನಾಶದ ಹಾದಿ ಹಿಡಿದಿರುವುದನ್ನು ನೋಡಿದರೆ ನಮ್ಮ ಭುವಿಗೆ ಭವಿಷ್ಯವೇ ಇಲ್ಲವೇನೋ ಎನ್ನಿಸುತ್ತದೆ. ಇದಕ್ಕೆಲ್ಲಾ ಕಾರಣ ಯಥಾಪ್ರಕಾರ ಮಾನವನ ಸ್ವಾರ್ಥ. ಈ ಪ್ರಪಂಚ ತನಗೆ ಮಾತ್ರಾ ಸೇರಿದೆ ಎಂಬ ಅಹಂಕಾರ!!

ಕೊಲ್ಲುವುದು ಏತಕ್ಕೆ?

ಈಗಾಗಲೇ ನಾಶವಾಗಿರುವ ಅಥವಾ ವಿನಾಶದ ಹಾದಿಯಲ್ಲಿರುವ ಜೀವ ಜಾತಿಗಳನ್ನು ಗುರುತಿಸುವಾಗ “ಅಳಿದು ಹೋದ”, “ತೀವ್ರ ಅಪಾಯದಲ್ಲಿರುವ” ಮತ್ತು “ಅಪಾಯದಲ್ಲಿರುವ” ಸಂತತಿಗಳು ಎಂದು ವರ್ಗೀಕರಿಸಲಾಗುತ್ತದೆ. ಈಗಾಗಲೇ ಒಂದು ಜಾತಿಯ ಜೀವಿಗಳು ಒಂದೂ ಇಲ್ಲದಂತೆ ಸತ್ತು ಹೋಗಿದ್ದರೆ ಅದನ್ನು ನಾಶವಾಗಿರುವ ತಳಿ ಎಂದೂ, ಒಂದು ಜೀವ ವೈವಿಧ್ಯದ ಸಂಖ್ಯೆ ಬೆರಳೆಣಿಕೆಯಷ್ಟಿದ್ದು ಸಧ್ಯದಲ್ಲೇ ಅವೂ ನಾಶವಾಗುವ ಭಯವಿದ್ದರೆ ಅವುಗಳನ್ನು ತೀವ್ರ ಅಪಾಯದಲ್ಲಿರುವ ಜೀವ ಜಾತಿ ಎಂದೂ. ಜನನ ಸಂಖ್ಯೆ ಕಡಿಮೆಯಾಗುತ್ತ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಾ ಇರುವ ಜೀವ ಜಾತಿಯನ್ನು ಅಪಾಯದಲ್ಲಿರುವ ವರ್ಗ ಎಂದೂ ಹೇಳುತ್ತಾರೆ.

ಮಡಗಾಸ್ಕರ್ ದ್ವೀಪದಲ್ಲಿದ್ದ ‘ಡೋಡೋ’ ಎಂಬ ವಿಶಿಷ್ಟ ಹಕ್ಕಿಗಳನ್ನು ನಾಶವಾಗಿರುವ ವರ್ಗಕ್ಕೆ ಸೇರಿಸಬಹುದು. ಆರೇಳು ಶತಮಾನಗಳ ಹಿಂದೆ  ಮಡಗಾಸ್ಕರ್ ದ್ವೀಪದಲ್ಲಿ ಜನವಸತಿ ಇಲ್ಲದಿದ್ದಾಗ ಶತ್ರುಭಾದೆ ಇಲ್ಲದೆ ಅಸಂಖ್ಯಾತ ಡೋಡೋ ಹಕ್ಕಿಗಳು ವಂಶಾಭಿವೃದ್ಧಿ ಮಾಡಿಕೊಂಡು ಹಾಯಾಗಿದ್ದವು. ಪ್ರಾಣಭಯವೆಂದರೇನೆಂದೇ ತಿಳಿಯದ ಅವು ಎಷ್ಟು ಮೊದ್ದಾಗಿದ್ದುವೆಂದರೆ ಹಕ್ಕಿಯಾಗಿದ್ದರೂ ಹಾರುವುದನ್ನೇ ಮರೆತು ಪೆದ್ದು ಪೆದ್ದಾಗಿ ಅಡ್ಡಾಡಿಕೊಂಡಿದ್ದವು. ಒಂದೊಮ್ಮೆ ಪೋರ್ಚುಗೀಸರು ಮಡಗಾಸ್ಕರ್‌ಗೆ ಬಂದಿಳಿದಾಗ ಅವರ ಜಿಹ್ವಾಚಾಪಲ್ಯವನ್ನು ತಣಿಸಲು ಈ ಹಕ್ಕಿಗಳೇ ಕಣ್ಣಿಗೆ ಬಿದ್ದವು. ಹಾರುವ ಸಾಮರ್ಥ್ಯವೂ ಇಲ್ಲದೆ, ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲ ಕೌಶಲ್ಯವೂ ಇಲ್ಲದ ಪಾಪದ ಡೋಡೋಗಳು ಪೋರ್ಚುಗೀಸರ ಹೊಟ್ಟೆ ಸೇರತೊಡಗಿದಂತೆ ಸಂಪೂರ್ಣವಾಗಿ ನಿರ್ನಾಮವಾದವು. ಮಡಗಾಸ್ಕರ್ ಸುತ್ತಮುತ್ತಲ ಹಲವಾರು ದ್ವೀಪಗಳಲ್ಲಿದ್ದ ಪ್ಯಾಸೆಂಜರ್ ಪಿಜನ್, ಮಮೋ, ಅಕ್, ಕರಾಕರಾ, ಸ್ಟರ್ಲಿಂಗ್ ಮೊದಲಾಗಿ ಸುಮಾರು ೨೦-೨೫ರಷ್ಟು ಜಾತಿಯ ಹಕ್ಕಿಗಳೂ ಸಹಾ ಮಾನವನ ಉದರ ಸೇರಿ ನಿರ್ನಾಮವಾದವು. ಇಂದು ಅವೆಲ್ಲಾ ಕೇವಲ ಚಿತ್ರಗಳಲ್ಲಿನ ನೆನಪಾಗಿವೆ.

ಹಸಿರು ಬಣ್ಣದ ಆಮೆಗಳು, ನೀಲಿ ತಿಮಿಂಗಿಲಗಳು, ಆಫ಼್ರಿಕದ ಕಾಡುನಾಯಿಗಳು, ಸುಗಂಧ ಸೂಸುವ ಬೆಕ್ಕಿನ ಜಾತಿಯ ಪ್ರಾಣಿಗಳೇ ಮೊದಲಾದವು ತೀವ್ರ ಅಪಾಯದಲ್ಲಿರುವ ಜೀವ ವರ್ಗಗಳೆಂದು ಪರಿಗಣಿಸಲ್ಪಟ್ಟಿವೆ. ಪ್ರಕೃತಿ ಇವುಗಳಿಗೆ ನೀಡಿರುವ ವಿಶೇಷವಾದ ಬಣ್ಣ, ದೇಹದಲ್ಲಿ ಸಿಕ್ಕುವ ಎಣ್ಣೆ, ಸುಂದರ ಚರ್ಮ ಮೊದಲಾದುವೇ ಅವುಗಳನ್ನು ತೀವ್ರವಾಗಿ ಬೇಟೆಯಾಡಿ ಕೊಲ್ಲಲು ಕಾರಣವಾಗಿವೆ. ಇದು ಹೀಗೇ ಮುಂದುವರೆದರೆ ಈ ಎಲ್ಲಾ ಜೀವಿಗಳು ಬೇಗದಲ್ಲೇ ಭೂಮಿಯಿಂದ ನಿರ್ಗಮಿಸಬಹುದು.

ಇನ್ನು ಅಪಾಯದ ಅಂಚಿನಲ್ಲಿರುವ ಜೀವ ವರ್ಗಗಳ ಪಟ್ಟಿಯನ್ನು ನೋಡಿದರೇನೆ ಗಾಭರಿಯಾಗುತ್ತದೆ., ಚಿಕ್ಕ ಪುಟ್ಟ ಪ್ರಾಣಿ ಪಕ್ಷಿಗಳನ್ನು ಬಿಡಿ, ಆನೆ, ಹಿಮಕರಡಿ, ಟಿಬೆಟ್‌ನ ಆಂಟಿಲೋಪ್‌ಗಳು, ಹುಲಿ, ಚಿರತೆ, ಮೊಸಳೆ, ಕಾಟಿ, ಘೇಂಡಾಮೃಗದಂತಹ ದೈತ್ಯ ಜೀವಿಗಳೆ ಆ ಪಟ್ಟಿಯಲ್ಲಿವೆ. ಪ್ರಕೃತಿ ರಕ್ಷಣೆಗಾಗಿ ನೀಡಿದ ದಂತ, ಮೈಮೇಲಿನ ತುಪ್ಪಳ, ಸುಂದರ ಮತ್ತು ಬೆಲೆಬಾಳುವ ಚರ್ಮ, ರುಚಿಕರ ಮಾಂಸ ಮೊದಲಾದುವೇ ಈ ಪ್ರಾಣಿಗಳಿಗೆ ಶತ್ರುವಾಗಿ ಅವುಗಳ ವಿನಾಶಕ್ಕೆ, ಸಾವಿಗೆ ಕಾರಣವಾಗಿವೆ. ಕೆಲವು ದಶಕಗಳ ಹಿಂದೆ ಕೇವಲ ಭಾರತದಲ್ಲೇ ಸುಮಾರು ೫೦೦೦೦ದಷ್ಟಿದ್ದ ಹುಲಿಗಳ ಸಂತತಿ ಇಂದು ಒಂದೆರಡು ಸಾವಿರದ ಅಂಚಿಗೆ ಬಂದು ನಿಂತಿದೆ. ಟಿಬೆಟಿನ ಆಂಟಿಲೋಪ್‌ಗಳು ಸುಂದರ ತುಪ್ಪಳಕ್ಕೆ ಹೆಸರಾದವು. ಅವುಗಳ ತುಪ್ಪಳಕ್ಕಾಗಿಯೇ ವಾರ್ಷಿಕವಾಗಿ ಕನಿಷ್ಟ ೧೫೦೦೦ ಆಚಿಟಿಲೋಪ್‌ಗಳನ್ನು ಕೊಲ್ಲಲಾಗುತ್ತಿದೆಯಂತೆ. ಇನ್ನು ರಕ್ಷಣೆಗೆಂದು ಪ್ರಕೃತಿ ನೀಡಿದ ಆಯುಧವಾದ ದಂತಗಳೇ ಆನೆಗಳ ಕುಲ ಕ್ಷಯಕ್ಕೆ ಕಾರಣವಾಗಿರುವುದಂತೂ ವಿಪರ್ಯಾಸ. ಘೇಂಡಾಮೃಗದ್ದಂತೂ ಮತ್ತೂ ದಯನೀಯ ಪರಿಸ್ಥಿತಿ. ಅಷ್ಟು ಬೃಹದ್ದೇಹಿಯ ಮೇಲಿರುವ ಪುಟ್ಟ ಕೊಂಬು ಅದಕ್ಕೆ ಮಾರಕವಾಗಿವೆ. ಆ ಕೊಂಬಿನಲ್ಲಿ ಪುರುಷತ್ವ ವೃದ್ಧಿಗೆ, ವೀರ್ಯ ವೃದ್ಧಿಗೆ ಬೇಕಾದ ಔಷಧೀಯ ಅಂಶಗಳಿವೆಯೆಂಬ ತಪ್ಪು ಕಲ್ಪನೆಗಳಿಂದಲೇ ಅವುಗಳನ್ನು ಬೇಟೆಯಾಡಲಾಗುತ್ತಿದೆ. ಸಂತಾನೋತ್ಪತ್ತಿಯ ವೇಗ ಈಗಾಗಲೇ ಕುಂಠಿತವಾಗಿರುವ ಈ ಪ್ರಾಣಿಗಳ ಕಗ್ಗೊಲೆಯೂ ನಿರಂತರವಾಗಿ ನಡೆಯುತ್ತಿರುವುದರಿಂದ ಈ ಜೀವಿಗಳೂ ಚಿತ್ರಪಟ ಸೇರುವ ದಿನ ದೂರವಿಲ್ಲವೆನ್ನಿಸುತ್ತದೆ.

ಕಾನೂನಿನ ರಕ್ಷಣೇ ಇಲ್ಲವೆ?

ಹೀಗೆ ಮಾನವನನ್ನುಳಿದು ಸಮಸ್ತ ಜೀವ ಜಗತ್ತು ನಾಮಾವಶೇಷವಾಗುವ ಹಾದಿಯಲ್ಲಿರುವಾಗ ದೇಶ ವಿದೇಶಗಳ ಸರ್ಕಾರಗಳು ಕೈಕಟ್ಟಿ ಕುಳಿತಿವೆಯೆ? ತಮ್ಮ ತಮ್ಮ ದೇಶದ ಅಪರೂಪದ ಜೀವ ವೈವಿಧ್ಯದ ಉಳಿವಿಗಾಗಿ ಅವೇನನ್ನು ಮಾಡುತ್ತಿವೆ?

ಈಗ್ಗೆ ೩೦ ವರ್ಷಗಳ ಮೊದಲೇ ಕೆಲವು ವಿದೇಶಗಳು “ಎಂಡೇಂಜರ್ಡ್ ಸ್ಪೀಸೀಸ್ ಆಕ್ಟ್” “ಮರೈನ್ ಮ್ಯಾಮ್ಮಲ್ ಆಕ್ಟ್” ಮೊದಲಾದ ಕಾನೂನನ್ನು ಜಾರಿಗೆ ತಂದಿವೆ. ನಾಶವಾಗಿ ಹೋಗಿರುವ ವರ್ಗವನ್ನು ಬಿಟ್ಟು ಇನ್ನು ಮುಂದೆ ನಾಶದ ಹಾದಿ ಹಿಡಿಯಲಿರುವ ಸಸ್ಯ, ಪಶು, ಪಕ್ಷಿ ಮೊದಲಾದ ಸುಮಾರು ೧೮೦೦ ಜೀವ ವರ್ಗಗಳ ಪಟ್ಟಿ ಮಾಡಿ ಅವುಗಳು ವಿನಾಶದ ಹಾದಿ ಹಿಡಿಯಲು ಪ್ರೇರೇಪಿಸಿದ ಕಾರಣಗಳನ್ನು ಗುರುತಿಸಿ, ಅವುಗಳನ್ನು ಬೇಟೆಯಾಡುವುದು, ಬಂಧನದಲ್ಲಿರಿಸುವುದು, ಮಾರುವಿಕೆ ಮತ್ತು ಕೊಳ್ಳುವಿಕೆ, ಜೀವ ವೈವಿಧ್ಯವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವುದು ಮತ್ತು ಅವುಗಳಿಗೆ ಹೊಂದದ ಜಾಗಗಳಲ್ಲಿ ಬೆಳೆಸುವುದು ಅಥವಾ ಸಾಕುವುದನ್ನು ನಿರ್ಬಂಧಿಸಿವೆ. ಇಂಗ್ಲೆಂಡ್ ಮತ್ತು ಅಮೆರಿಕಾದ ಕೆಲವು ನಗರಗಳ ನಗರ ಪಾಲಿಕೆಗಳು ನಾಶದ ಅಂಚಿನಲ್ಲಿರುವ ಹಲವಾರು ಕಾಡುಹೂಗಳ ತಳಿ ಬೆಳೆಸಲು ಪ್ರಾಣಿ ಅಭಯಾರಣ್ಯದಂತೆ ಸಸ್ಯ ಅಭಯಾರಣ್ಯವನ್ನು ರೂಪಿಸಿವೆ. ಪರಿಸರವನ್ನು ಕಲುಷಿತಗೊಳಿಸುವ ಇಂಧನ ಮತ್ತು ರಾಸಾಯನಿಕಗಳ ಬಳಕೆಗೂ ಕಡಿವಾಣ ಹಾಕುತ್ತಿವೆ. ಐಶಾರಾಮಿ ವಸ್ತುಗಳ ತಯಾರಿಕೆಯಲ್ಲಿ ಪರಿಸರ ಪ್ರೇಮಿ ರಾಸಾಯನಿಕಗಳ ಬಳಕೆಗೆ ಒತ್ತು ಕೊಡುತ್ತಿದ್ದಾರೆ. ಇದೆಲ್ಲದರ ಜೊತೆಗೆ ಜನಗಳ ಸಹಭಾಗಿತ್ವವೂ ಇರುವುದರಿಂದ, ಜನಗಳೂ ಸಹಾ ಸರಕಾರದ ಚಟುವಟಿಕೆಗಳಲ್ಲಿ ಮುಕ್ತ ಮನಸ್ಸಿನಿಂದ ಸಹಕಾರ ನೀಡುತ್ತಿರುವುದರಿಂದ ಅನುಸೂಚಿತ ಪಟ್ಟಿಯಲ್ಲಿನ ಜೀವ ವರ್ಗಗಳ ಸಂಖ್ಯೆಯಲ್ಲಿ ನಿಧಾನಕ್ಕೆ ಹೆಚ್ಚಳವಾಗುತ್ತಿರುವುದು ಕಂಡುಬರುತ್ತಿದೆಯಂತೆ! ಇದಲ್ಲವೆ ಪ್ರಕೃತಿ ಪ್ರೇಮ?

ನಮ್ಮ ದೇಶದಲ್ಲಿ ಸಹಾ ಈ ರೀತಿಯ ಹಲವಾರು ಕಾನೂನುಗಳು ಜಾರಿಯಲ್ಲಿವೆ. ಆದರೆ ಇಲ್ಲಿನ ವಿಶೇಷ ಪದ್ಧತಿಯಂತೆ ಪ್ರತಿಯೊಂದು ಕಾನೂನಿಗೂ ಒಂದು ತಿದ್ದುಪಡಿ ಇದ್ದೇ ಇರುತ್ತದೆ!!! ಉದಾಹರಣೆಗೆ ಕಾಡಿನಲ್ಲಿ ಮರ ಕಡಿಯಬಾರದೆಂಬ ಕಾನೂನಿದೆ. ಆದರೆ ವಿವಿಧ ಕಾರಣಗಳಿಂದ ಅಥವಾ ಒತ್ತಡಗಳಿಂದ ಮರಕಡಿಯಲು  ಪರ್ಮಿಟ್ ದೊರಕುತ್ತಲೇ ಇರುತ್ತದೆ. ಜೊತೆಗೆ ಸಹಜವಾಗಿ ಒಣಗಿ ಬಿದ್ದಿರುವ  ಮರಗಳನ್ನು ಉರುವಲಿಗೆ ತರಬಹುದೆಂದೂ ಒಂದು ತಿದ್ದುಪಡಿ ಮಾಡಲಾಗಿದೆ. ಅದರ ದುರುಪಯೋಗ ಮಾಡಿಕೊಳ್ಲಲು ಜೀವಂತ ಮರಗಳನ್ನು ಒಣಗಿಸುವುದು ಹೇಗೆಂದು ಮರಗಳ್ಳರು ಈಗಾಗಲೇ ಕಲಿತಿದ್ದಾರೆ. ಜೊತೆಗೆ ಒಣಗಿದಮರಗಳೂ ಕೆಲವು ಕ್ರಿಮಿ ಕೀಟಗಳ ವಾಸಸ್ಥಾನವಾಗಿದ್ದು ಹಕ್ಕಿಗಳಿಗೆ ಆಹಾರಮೂಲವಾಗಿರುತ್ತದೆಂಬುದನ್ನು ಉದ್ದೇಶಪೂರ್ವಕವಾಗಿ  ಮರೆಯಲಾಗಿದೆ. ಹಕ್ಕಿಗಳನ್ನು, ಕಾಡು ಹಂದಿಗಳನ್ನು, ಜಿಂಕೆಗಳನ್ನು ಹಿಡಿದು ತಿನ್ನುವವರಿಗೆ ಶಿಕ್ಷೆಯಾದುದನ್ನಂತೂ ಯಾರೂ ಕೇಳಿಲ್ಲ. ನಕ್ಷತ್ರ ಕಡಲಾಮೆಗಳು, ಕಾಳಿಂಗ ಸರ್ಪಗಳು, ಹೆಬ್ಬಾವುಗಳು, ಹತ್ತು ಹಲವು ಹಕ್ಕಿಗಳನ್ನು ಕಳ್ಳಸಾಗಣೆ ಮಾಡುವವರು ಸಿಕ್ಕಿಬಿದ್ದರೂ ಮುಂದೆ ಯಾವ ಕ್ರಮ ಕೈಗೊಳ್ಳಲಾಯಿತೋ ನಮ್ಮಂತವರಿಗಂತೂ ತಿಳಿಯುವುದಿಲ್ಲ. ಬೆಟ್ಟದ ತುದಿಯಲ್ಲಿ ಗಣಿಗಾರಿಕೆಗೂ, ಬೆಟ್ಟದ ತಪ್ಪಲಿನಲ್ಲಿ ವಿದ್ಯುದಾಗಾರದ ಅಣೆಕಟ್ಟೆಗೂ ಅನುಮತಿ ಕೊಟ್ಟಾಗ “ಲೆಖ್ಖತಪ್ಪಿ’’ ನೂರಾರು ಎಕರೆ ಕಾಡನ್ನು ಹೆಚ್ಚಾಗಿಯೇ ಕಡಿಯಲಾಗುತ್ತದೆ. ನಂತರ ಸಂಪರ್ಕ ರಸ್ತೆಗಳಿಗಾಗಿ ಮತ್ತೊಂದಿಷ್ಟು ಕಾಡಿನ ಹನನ. ಹೀಗೆ ಪಶು-ಪಕ್ಷಿಗಳ ನೈಸರ್ಗಿಕ ವಾಸ ಸ್ಥಾನ ನಾಶವಾದಾಗ ಸಾಯದೆ ಅವೆಲ್ಲಿ ಹೋಗಬೇಕು?

ಪ್ರಪಂಚದಲ್ಲಿ ಜೀವ ಸೃಷ್ಟಿಯಾದಾಗಿನಿಂದ ಮಾನವನ ವಿಕಾಸವಾಗುವವರೆಗೆ ಸಾವಿರಾರು ಜೀವ ವರ್ಗಗಳು ನಾಮಾವಶೇಷವಾಗಿ ಹೋಗಿವೆ. ಅವೆಲ್ಲ ತನ್ನ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಕೃತಿ ಮಾಡಿಕೊಂಡ ಮಾರ್ಪಾಡುಗಳು. ಅದರೆ ಈಗಾಗುತ್ತಿರುವುದು ಮಾತ್ರಾ ದುರಂತ. ಪ್ರಕೃತಿನಿಯಮಕ್ಕೆ ವಿರುಧ್ಧವಾಗಿ ಮಾನವ ನಡೆದುಕೊಳ್ಳುತ್ತಿರುವುದರಿಂದ ನಿಧಾನಕ್ಕೆ ಒಂದೊಂದೇ ಜೀವಿಗಳು ಕಣ್ಮರೆಯಾಗುತ್ತಿವೆ. ಇದು ಎಲ್ಲಿಯವರೆಗೆ? ಎಂಬುದೇ ದೊಡ್ಡ ಪ್ರಶ್ನೆ

ಇದೆಲ್ಲವನ್ನೂ ಗಮನಿಸಿ ೨೦೧೦ರಿಂದ ಪ್ರತೀವರ್ಷ ಮಾರ್ಚ್ ೨೦ರಂದು ‘ವರ್ಲ್ಡ್ ಸ್ಪಾರೋ ಡೆ’ ಹೆಸರಿನಲ್ಲಿ ಗುಬ್ಬಿಗಳಿಗಾಗಿ ಪ್ರಪಂಚದಾದ್ಯಂತ ಒಂದು ದಿನದ ಆಚರಣೆ ನಡೆಸಲಾಗತ್ತಿದೆ. ಇದು ಗುಬ್ಬಚ್ಚಿಯನ್ನು ಮಾತ್ರ ಉಳಿಸುವ ಸಂಚಲನವಾಗಿರದೆ ಆ ಮೂಲಕ ನಶಿಸುತ್ತಿರುವ ಎಲ್ಲ ಜೀವವೈವಿಧ್ಯಗಳ ಬಗ್ಗೆ ಮತ್ತು ಅವುಗಳ ಸಹಜ ಪರಿಸರವನ್ನು ಕಾಪಾಡುವ ಅಗತ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವನ್ನು ಮೂದಿಸುವುದು ಈ ‘ಗುಬ್ಬಿ ದಿನಾಚರಣೆಯ’ ಉದ್ದೇಶವಾಗಿದೆ. ಇಂತಹ ಸದುದ್ದೇಶದ ಆಚರಣೆಗಳಿಂದಾದರೂ ಗುಬ್ಬಿ ಮತ್ತು ಅದರಂತಹ ಪಾಪದ ಹಲವು ಹಕ್ಕಿಗಳ ಉಳಿವು ಸಾಧ್ಯವಾಗುತ್ತದೆಯೋ ಕಾದು ನೋಡಬೇಕಾಗಿದೆ.

ಸಣ್ಣ ಗುಬ್ಬಚ್ಚಿಯ ಕಣ್ಮರೆ ಎತ್ತಿರುವ ಹಲವಾರು ದೊಡ್ಡ ಪ್ರಶ್ನೆಗಳಿಗೆ ಉತ್ತರ ಮಾತ್ರಾ ಸಿಗುವಂತಿಲ್ಲ!!. . . . .