ಬುದ್ಧಿವಂತರು ನೆರೆದು ಕುಂತೀರಿ ತಿದ್ದಿ ನಿಮಗ ಹೇಳತೀನಿ
ಶುದ್ಧಭಾವದಿಂದ ನಿತ್ಯ ಕಾಯಕ ಶರಣರ |
ಇದ್ದನೊಬ್ಬ ನುಲಿಯ ಚೆಂದಯ್ಯನೆಂಬ ಸುಕುಮಾರ |
ಕಂದುಗೊರಳ ಶಂಕರನನ್ನು ಒಲಿಸಿ ಬಹದ್ದೂರ |
ಎದ್ದ ಕೂಡಲೆ ಶಿವನನು ಭಜಿಸಿ ಮೆದಿ ಹಣ್ಣು ಕೊಯ್ದು ಕೂಡಿಸಿ
ನುಲಿಯ ಹೊಸೆದು ಬೆಲೆಗೆ ಮಾರಿ ಧಾನ್ಯ ತರುವರು
ತಂದು ಜಂಗಮಗುಣಿಸಿ ದಾಸೋಹ ನಡೆಸಿ ತಾವು ಉಣ್ಣುವರು|| ೧ ||

ಗುರುಕೊಟ್ಟ ಇಷ್ಟಲಿಂಗ ಶ್ರೇಷ್ಠವೆಂದು ಕೊರಳಿಗೆ ಕಟ್ಟಿ |
ಎಷ್ಟೋ ದಿವಸವಾದರೂ ಲಿಂಗ ಅಲ್ಲೇ ಮರತಾರ |
ಕಾಯಕವೇ ಕೈಲಾಸವೆಂದು ಬಿಡದೇ ದುಡಿಯುವರು |
ಕಟ್ಟಿದ ಇಷ್ಟಲಿಂಗಕ್ಕಿಂತ ಕಾಯಕ ಮಿಗಿಲೆಂದು ಸಾಗಲಾಗಿ |
ಕೊರಳಿಗೆ ಸುತ್ತಿದ ವಸ್ತ್ರಕೊಳೆತು ಹರಿದು ಲಿಂಗ ಧರೆಗೆ ಬಿದ್ದು |
ಶ್ರದ್ಧಾನೋಡಿ ಲಿಂಗಯ್ಯ ತಾನೇ ಬೆನ್ನು ಹತ್ತಿದರ |
ಉದ್ಯೋಗದಲ್ಲಿ ಚೆಂದಯ್ಯನಿಗೆ ಇಲ್ಲ ದರಕಾರ|| ೨ ||

ಕುಳಿತು ಧ್ಯಾನಿಸಿದರೆ ಶಿವ ನಿಂತು ಕೇಳುವನೆಂಬರು |
ನಿಂತು ಭಜಿಸುವ ಭಕ್ತನ ಬೆನ್ನ ಹತ್ತುವನೆನ್ನುವರು |
ಅದರಂತೆ ಚೆಂದಯ್ಯ ಕೇಳತಾನ ಲಿಂಗದ ಎದುರು |
ಯಾರಿಗಿ ಕೇಳಿ ಭೂಮಿಗಿ ಬಿದ್ದೆಂತ ತಪ್ಪ ಹೊರಿಸ್ಯಾರ |
ಎಷ್ಟು ಬೆನ್ನ ಬಿದ್ದರು ಕೂಡ ಮುಟ್ಟಲಾರೆ ನಿನ್ನ ನಾನು |
ನನ್ನ ಅಪ್ಪಣೆ ಇಲ್ಲದೆ ಭೂಮಿಗಿ ಹ್ಯಾಂಗ ಬಿದ್ದಿ ಎಂದಾನ |
ಆಗ ಲಿಂಗ ತಾನೇ ಬೆನ್ನು ಹತ್ತಿ ನಡದೈತಿ ಆತನ|| ೩ ||

||ಚಾಲ||

ಲಿಂಗ ಜಂಗಮ ಆಗಿ ಚೆಂದಯ್ಯಗ | ಬಿದ್ದು ಬೆನ್ನಿಗಿ |
ಮೆಚ್ಚೀನಿ ನಿನ್ನ ಭಕ್ತಿಗಿ | ಕಟ್ಟಿಕೊಳ್ಳು ನಿನ್ನ ಕೊರಳಾಗ || ೧ ||

ಚೆಂದಯ್ಯ ಬಂದ ಸಿಟ್ಟೀಗಿ | ಕೇಳ್ದ ಲಿಂಗಯ್ಯಗ
ನನ್ನ ಬಿಟ್ಟು ಬಿದ್ದ್ಯಾಕ ಭೂಮಿಗಿ ಬ್ಯಾಡ ಹೋಗು ನೀನು ನನಗ|| ೨ ||

ಅಗಸರ ಶರಣ ಮಾಚಯ್ಯ | ಕೇಳಿ ಇವರ ಜಗಳ |
ಕರೆದು ಇಬ್ಬರನ ಕೂಡಿ ಹೊರಟಾರ | ದಾರ‍್ಯಾಗ ತಿಳಿಸಿ ಹೇಳ್ಯಾರ|| ೩ ||

||ಏರ||

ಕಲ್ಯಾಣ ಬಸವಗ ಸುದ್ದಿ ತಿಳಿಸಿ ಚೆಂದಯ್ಯನಿಗೆ ಲಿಂಗ ಕಟ್ಟಿಸಿ
ಕೂಡಿಸು ಎಂದು ಮಡಿವಾಳನಿಗೆ ಲಿಂಗಯ್ಯ ಹೇಳ್ಯಾರ |
ಮಡಿವಾಳ ಅಂತಾನ ಹೇಳ್ತಿನಿ ನಾನೇ ಕೇಳ್ರಿ ಇಬ್ಬರು |
ತಪ್ಪಿಗಿ ಕ್ಷಮಾ ಕೇಳಿಸ್ತೀನಿ ಮಾಡ್ರಿ ವಿಚಾರ|| ೧ನೆಯ ಚೌಕ ||
ಮಡಿವಾಳ ಮಾಚಯ್ಯ ಲಿಂಗಯ್ಯಗ ಹೇಳತಾರ |
ಸ್ವತಃ ನೀನೇ ಜಂಗಮ ಆಗಿ ಹುಲ್ಲಿಗಿ ಹೋಗಬೇಕು
ಹುಲ್ಲು ಕೊಯ್ದು ತಂದು ನುಲಿಯ ಹಗ್ಗ ಹೊಸಿಬೇಕು |
ಹೊತ್ತು ಪ್ಯಾಟಿಯೊಳಗ ಮಾರಿ ಧಾನ್ಯ ದವಸ ತರಬೇಕು ||
ಹೊತ್ತು ಆಗುವ ಮೊದಲ ಬಂದು ಅಡಗಿ ಮಾಡಿ ಜಂಗಮಗುಣಿಸಿ
ಮೂರು ಹೊತ್ತಿನ ಪೂಜಿಗಿ ನೀನು ತಯಾರು ಇರಬೇಕು |
ಅಂದರ ಅವನ ಕೊರಳಾಗ ನಿನ್ನನು ನಾನು ಕಟ್ಟಿತೀನಿ|| ೧ ||

ಆಗ ಲಿಂಗದೇವರು ಒಪ್ಪಿ ಚೆಂದಯ್ಯ ಮಡುವ ಕೆಲಸಕ ಹತ್ತಿ |
ಮುಂಜಾನೆದ್ದು ಹುಲ್ಲಿಗೆ ಹೋಗಿ ಕೊಯ್ದಾನಾಕ್ಷಣಕ |
ನುಲಿಹೊಸ್ತು ಹಗ್ಗಾಮಾಡಿ ತಂದಾನ ಬಜಾರಕ |
ಬಜಾರದಲ್ಲಿ ಬೇಗನೆಮಾರಿ ತರಬೇಕು ರೊಕ್ಕ ||
ಎಷ್ಟೊತ್ತು ಕೂತರೂ ಗಿರಾಕಿಲ್ಲ ಹತ್ತಿತು ಜೀವಕ |
ಹ್ಯಾಂಗ ಮಾಡಲಿ ಎಂಬುವ ಚಿಂತಿ ಆಯಿತು ಮನಕ |
ಹೋಗದೆ ನಿಂತರ ಚೆಂದಯ್ಯ ಒದ್ದು ಮುರಿತಾನ ಸೊಣಕ|| ೨ ||

ಕಲ್ಯಾಣ ನಾಡಿನ ಬಲ್ಲಿದ ಬಸವ ಎಲ್ಲಾ ಶರಣರು ಕೂಡಿಕೊಂಡು |
ಭಕ್ತರ ಗತಿ ನೋಡಲಾಕ ಬಂದಾನ ಬಜಾರಕ |
ಲಿಂಗಯ್ಯ ಒಣಮಾರಿ ಮಾಡಿ ಕೂತಾನ ವ್ಯಾಪರಿಲ್ಲದಕ |
ಅಂತಃಕರಣದಿ ಶರಣಮಾಡಿ ಕೇಳ್ಯಾನ ಲಿಂಗಕ್ಕ ||
ನನ್ನಕಿಂತ ಕಿರಿಯರಿಲ್ಲ ಭಕ್ತರಿಗಿಂತ ಹಿರಿಯರಿಲ್ಲ |
ಭಕ್ತರ ಬಲಿಗೆ ಬಿದ್ದು ನಾನು ನಿಂತಿನಿ ದುಡಿಯುದಕ |
ತಪ್ಪಿನಡದರ ಚೆಂದಯ್ಯಗ ನಾ ಏನು ಹೇಳಬೇಕ|| ೩ ||

||ಚಾಲ||

ಲಿಂಗಯ್ಯನ ಸ್ಥಿತಿಯನು ನೋಡಿ | ಬಸವ ಲಗುಮಾಡಿ |
ಹಣಕೊಡುವೆ ನಡ ಮನಿಕಡಿ | ಲಿಂಗಯ್ಯ ಹೊರಟ ಗಡಿಬಿಡಿ|| ೧ ||

ಗಂಟ ಕಟ್ಟಿಕೊಟ್ಟ ಕಾಳುಕಡಿ | ಬಂಗಾರದ ತುಕಡಿ |
ರೊಕ್ಕ ರೂಪಾಯಿ ಅರಿವೆ-ಅಂಚಡಿ | ಹೊತ್ತು ನಡೆದ ಚೆಂದಯ್ಯನ ಕಡಿ|| ೨ ||

ಚೆಂದಯ್ಯ ಲಿಂಗಯ್ಯನ ನೋಡಿ | ಕಣ್ಣಲಿ ಕಿಡಿಕಿಡಿ |
ಸಿಟ್ಟಿನಿಂದ ಬಂದ ಲಗುಮಾಡಿ | ತಂದೀದಿ ಇದನ ತುಡುಗು ಮಾಡಿ|| ೩ ||

||ಏರ||
ಲಿಂಗಯ್ಯ ಹೇಳತಾನ ಥರಥರ ನಡುಗಿ ಬಸವಣ್ಣ ಕೊಟ್ಟಾನ ತಾಬೇಕಾಗಿ
ಅಡಗಿಮಾಡಿ ನಡಿಸಬೇಕು ದಾಸೋಹ ಅಂದಾರ |
ಅದಕ ಚೆಂದಯ್ಯ ಅಂತಾನ ಬಸವಗ ರೊಕ್ಕದ ಸೊಕ್ಕ ಬಂದರ |
ಅವನ ಮುನಿಮುಂದ ನೀನು ಎಲ್ಲಿಯಾರೆ ಒಯ್ದು ಸುರುವು ಅಂದಾರ
|| ೨ನೆಯ ಚೌಕ||

ದುಡಿsಲಾರದೆ ತಂದ ಹಣ ಸಾಲಕ್ಕಿಂತ ಕೀಳು ಅಂತ |
ತಡಾಮಾಡದೆ ಹೋಗಿ ಹೇಳು ಆ ಬಸವಗ |
ದುಡಿದ ಹಗ್ಗದ ಬೆಲೆಯೇ ಸಾರ್ಥಕ ಸತ್ಯವಂತರಿಗೆ |
ರೊಕ್ಕದ ಮದ ಏರಿದರ ನಡೆಯದು ನಮಗ |
ಇಷ್ಟು ಅಂದಕೂಡಲೆ ಲಿಂಗಯ್ಯ ಗಾಬರ‍್ಯಾಗಿ ಓಡತಾನ |
ಹೋಗಿ ನಡದ ಸುದ್ದಿ ತಿಳಿಸ್ಯಾನ ಅಣ್ಣ ಬಸವಗ |
ಬಸವಣ್ಣ ತಾನೇ ಅಂದ ಸತ್ಯಶರಣ ಚೆಂದಯ್ಯಗ|| ೧ ||

ಬಸವಣ್ಣ ಸಹಿತ ಶರಣರಗೂಡಿ ಚೆಂದಯ್ಯನ ನೇಮವ ನೋಡಿ |
ಅಂಗಕ ಲಿಂಗ ಸಂಗಮಾಡಲು ಕೇಳ್ಯಾರ ಚೆಂದಯ್ಯಗ |
ಆಗ ಅಂಗಸತಿ ಲಿಂಗಪತಿ ಬೇಕು ಮೊದಲಿಗಿ |
ಅಂಗ ತಾನೇ ಲಿಂಗವಾದಮ್ಯಾಲ ಮತ್ತ್ಯಾಕ ಲಿಂಗ ||
ಕಣ್ಣೀಗಿ ಕಾನದ ಗುರಿತಾಗಲು ನಡುವೆ ಒಂದುs ಗುರ್ತುಬೇಕ |
ಅದಕ್ಕಾಗಿ ಲಿಂಗ ಬೇಕು ನಮ್ಮ ಕೊರಳಾಗ |
ಲಿಂಗದ ಮ್ಯಾಲ ಮನಸಿಟ್ಟು ಹೊರಗಿನ ವ್ಯಾಪಾರ ಮರಿಲಾಕ|| ೨ ||

ಹೃದಯದಲಿ ಇದ್ದ ಆತ್ಮಾ ಅರಳಿದಾಗ ಅಂತರಾತ್ಮಾ |
ಕೂಡಿದಾಗ ಪರಮಾತ್ಮ ಅಂತ ಆಧ್ಯಾತ್ಮದಾಗ |
ಅರಳುವ ಅಂತರಾತ್ಮನೆ ಇಷ್ಟಲಿಂಗ ದೇಹದಮ್ಯಾಗ |
ಪರಮಾತ್ಮನನು ಕೂಡಿಸುವವನೇ ಸಂಗಮಲಿಂಗ ||
ಇಷ್ಟು ತತ್ವ ಬಸವಣ್ಣನವರು ಚೆಂದಯ್ಯನಿಂದ ಕೇಳುವಾಗ |
ಕೂಡಲಸಂಗಮ ಲಿಂಗನೆ ಪ್ರತ್ಯಕ್ಷ ಆಗಿ ಎದುರಿಗಿ |
ಚೆಂದಯ್ಯನ ಅಪ್ಪಿಕೊಂಡು ಮಾಯವಾದ ಅವನ ಭಕ್ತಿಗಿ|| ೩ ||

||ಚಾಲ|| 

ಲಿಂಗಯ್ಯ ಚಂದಯ್ಯರ ಕತೆ | ಒಪ್ಪುವುದಿಲ್ಲ ಜನತೆ |
ವಿಜ್ಞಾನಿಗಳ ಮನಸಿಗಿ | ಲಿಂಗಯ್ಯ ಆಡಿದ ಮಾತಿಗಿ|| ೧ ||

ವಿಶ್ವವ್ಯಾಪಿ ಪರಮಾತ್ಮನ | ಗುರುತ ಗೋಲ ಲಿಂಗಂತ |
ಆಕಾಶ ಬಣ್ಣ ನೀಲವಾಗಿ | ಏಕಾಕಾರದ ನಿಧಿಧ್ಯಾಸಾsಗಿ|| ೨ ||

ಜೀವಭಾವದ ವ್ಯವಹಾರವೆಲ್ಲ ಮರೆತ | ವಿಶ್ವತುಂಬ ಬೆರೆತ |
ವಿಶ್ವವೆಲ್ಲ ತಾನೇತಾನಾಗಿ | ಮುಕ್ತನಾಗು ತನ್ಮಯನಾಗಿ|| ೩ ||

||ಏರ||
ಮೂಲತತ್ವ ತಿಳಿಸಿದಂಥ ವಾಲಿ ಶರಣನ ಸಣ್ಣ ಕಥಾ |
ಹಣ್ಣ ಮಾಡಿ ತಿಳಿಯಬೇಕು ತಾವೇ ಸರ್ವರೂ
ಎಲ್ಲರಿಗೆ ಮಾಡಿ ಹೇಳತಾನ ತನ್ನ ನಮಸ್ಕಾರ
ಗೀಗೀ ಮೇಳ ಕಟ್ಟಿದ ನಾಲ್ವರಿವರು ಸಾಲೋಟಗಿಯವರು|| ೩ನೆಯ ಚೌಕ ||

ರಚನೆ : ಶರಣಪ್ಪ ವಾಲಿ
ಕೃತಿ :
ಶರಣಸ್ಮೃತಿ