ಅಕ್ಕರೆಯಿಂದಲಿ ಅಕ್ಕಮಹಾದೇವಿಯ ಚರಿತ್ರೆ ಕೇಳಿರಿ ಕೂತವರಾ
ಮುಕ್ಕಂಣ ಶ್ರೀ ಮಲ್ಲಿಕಾರ್ಜುನ ಗಂಡನೆಂದು
ಹುಡಿಕಿಕೊಂಡ ಹೋದಳು ದೇವರಾ|| ಪಲ್ಲವಿ ||
ಧರಣಿ ತಲದೋಳು ಉರುತರ ಸಿರಿಯಿಂದ
ಮೆರೆಯುವ ಕರ್ನಾಟಕದಲ್ಲಿ ಇರುತಿಹ ಭಕ್ತಿಗೆ ಮುಕ್ತಿಗೆ ತವರ ಮನೆ
ಎನಿಸಿದ ಉಡಿತಡಿವೆಂಬಲ್ಲಿ ||
ಪರಮ ಶಿವಭಕ್ತರು ನಿರ್ಮಲ ಸುಮತಿಗಳೆಂಬುವ ದಂಪತಿಗಳು ಅಲ್ಲಿ
ನಿರುತದಿ ಮುರಹರನ ಭಕ್ತಿಲೆ ಭಜಿಸುವ
ಸದ್ಗುಣಮಣಿಗಳು ನಿಜದಲ್ಲಿ ||
ಮುಕ್ತಿಯ ಹೊಂದುವ ಮಿಗಿಲಾದ ಆಶೆಯು
ಮನೆಮಾಡಿಕೊಂಡಿತ್ತು ಅವರಲ್ಲಿ
ಅಂಥವರ ಉದರದಿ ಜನಿಸಬೇಕಂತ
ಮನಸವಾಯ್ತು ಮಹಾದೇವಿಯಲ್ಲಿ ||
ಗಿರಿಜಾ ಮಹಿಮಳ ಕರುಣದಿ ಸಮಿತೆಯು
ಪರಿತರ ಗರ್ಭ ತಾಳಿದಳಲ್ಲಿ
ತರುಣಿಯು ತ್ವರತದಿ ದಿನ ತುಂಬಿದ ಮೇಲೆ
ಹರುಷದಿ ಹೆತ್ತಳಾನಂದದಲಿ
ತೊಟ್ಟಿಲದೊಳಗೆ ಆ ಉಮಾ ಮಂತ್ರವ
ಗಟ್ಟಿಯಾಗಿ ನುಡಿತ್ತಿದ್ದಳಲ್ಲಿ
ದಿಟ್ಟ ಗಗನದೋಳ್ ಮನಸಿಟ್ಟ ಭೂಮಿತಾ
ಬಿಟ್ಟ ಹೋಗುವ ಭಾವನೆಯಲ್ಲಿ ||

೧ನೇ ಚಾಲ

ಬಿದಿಗೆಯ ಚಂದಿರನಂತಾ
ಅಕ್ಕದೇವಿ ಬಾಲ್ಯ ದಾಟುತಾ ||
ಜಗಕೆಲ್ಲ ಯೌವ್ವನ ಸೊಬಗದಿಂದ ಕಾಣುತ್ತಾ
ತಂದಿ ತಾಯಿ ಸರ್ವರಿಗನ್ನುತ್ತಾ ||

೨ನೇ ಚಾಲ

ದಾನಧರ್ಮ ಜಡಧ್ಯಾನ ಗಳಿಕೆ ಮಾಡಿಕೊಂಡಳು
ಅವು ತನ್ನ ಕರ‍್ತವ್ಯ ಕರ್ಮವಾಗಿಟ್ಟುಕೊಂಡಳು ||
ಜಾಣರ ಸಂಗದಿ ಜನ್ಮದೋಚನೆ ಕಾಲ ಗತಿಸುವ ನಡೆದಳು
ದುರ್ಜನ ಸಂಗ ದೂರಿಕರಿಸಿಬಿಟ್ಟಳು ||

||ಏರ||

ಒಂದಾನೊಂದ ದಿನ ಕೌಸಿಕ ರಾಜನು
ಊರೊಳಗ ಬಂದನು ಕೇಳ್ರಿ ಜರಾ|| ೧ ||

ಸಂಭ್ರಮದಿಂದಲಿ ಪ್ರಜೆರನು ನೋಡಲು
ಆತನು ಬಂದಿದ್ದ ಊರೊಳಗೆ
ಸೌಂದರ್ಯದ ನಿಧಿ ಅಕ್ಕನ ಕಾಣುತ
ಮೋಹಿತನಾದನು ಮನದೊಳಗೆ ||
ಅಕ್ಕನ ಮದುವೆಯ ಆಗುವ ಹುಚ್ಚವು
ಹೆಚ್ಚಿತ ಕೇಳರಿ ರಾಜನಿಗೆ
ಕಕ್ಕಸ ಬಡುತಲಿ ಮಂತ್ರಿಯ ಕರೆಯಿಸಿ
ಪೇಳಿದ ನೇಕಾಂತದೊಳಗೆ
ಮಂತ್ರಿಯು ಬಂದನು ಮಹದೇವಿ ಮನೆಗೆ
ರಾಜನ ಆಜ್ಞೆಯ ಬಗೆಯಾಗೆ
ಕರಳವು ಕರಗುವ ಮೋಹದ ಮಾತನು
ಪೇಳಿದನಾ ಶಿವಶರಣಿಗೆ ||
ಸೋಮಶೇಖರಾ ಗುರುವೇ ಹಂಬಲ
ಮೊರೆ ಇಟ್ಟಿಹೆನಾ ಮನದೊಳಗೆ
ನಿಮಗದು ತಿಳಿಯದು ಮುಸಿಕಿದ ಕತ್ತಲೆ
ಪೇಳುದಲ್ಲಾ ಎದ್ದೋಗೆ ||
ಮಂತ್ರಿಯು ಪೇಳಿದ ಅಕ್ಕನ ಮಾತನು
ಸರಿಯಾಗಿ ಆಗ ರಾಜನಿಗೆ
ನಡಿಯುತ ಬಂದನು ರಾಜನು ಆಗ
ಕಾಮುಕದಿಂದಕ್ಕನ ಮನೆಗೆ ||
ಇಲ್ಲದ ಸಲ್ಲದ ಮಾತನು ಹೇಳಿದ
ರಾಜನು ಆನಂದ ಭರದೊಳಗೆ
ರಾಣಿಯ ಸ್ಥಾನವು ಕೊಡುವೆನು
ನಿನಗೆ ಬೇರಿನ್ನಾವದು ಬೇಕೆನಗೆ ||

೧ನೇ ಚಾಲ

ಅಕ್ಕ ಗಂಭಿರ ವಾಣಿಯಿಂದಾ
ನನ್ನ ಕರಾರ ನೀವು ಒಪ್ಪಿದ್ದಿಂದಾ
ಆ ಮೇಲೆ ಪ್ರೀತಿ ಮದುವೆಂದಾ
ಹೇಳಿದಳು ಆಕಿ ಪಸಂದಾ ||

೨ನೇ ಚಾಲ

ಅರಸನೊಪ್ಪಿದ ಅಕ್ಕನ ಮಾತನು
ಬರಹೇಳಿದ ಆಕೆಗೆ ಅರಮನೆಗಿನ್ನು ||
ತಿಳಿಲಿಲ್ಲಾತಗೆ ಅಕ್ಕನ ಗುಟ್ಟೇನು
ಮಾಡಿದ್ದುಣ್ಣುದು ಬಂತ ಕಡೆಗಿನ್ನ ||

ಏರ

ಚೆಕ್ಕನ ಅಕ್ಕನ ಸೆರಗನು ಸೆಳೆದನು
ಕಾಮುಕದಿಂದಲಿ ಅಂವಪೂರಾ|| ೨ ||

ದೇವಿಯ ಮಹಿಮೆಯದು ಅವನಿಯೋಳ್
ತಿಳಿಯದು ಕೇಳ್ರಿ ಸಾವಧಾನದಿಂದ
ರಾವತಾಳಿ ಆ ಕೌಸಿಕ ರಾಜನ ಸುಟ್ಟ
ಭಸ್ಮ ಮಾಡಿದಳಂದು ||
ಉಟ್ಟಿರು ಸೀರೆಯ ನಾಚಣ ಬಿಸುಟುತ
ತೊಟ್ಟಿರು ತೊಡಿಗೆಯ ಹರಿದ್ಹೋಗೆದು
ಬಿಟ್ಟಳು ಬಿಡಿಮುಡಿ ಹೊರಟಳು
ಕೌಶಿಕ ರಾಜನ ರಾಜ್ಯಕೆ ನೀರೆರೆದು ||
ಅಕ್ಕನು ಪೋಗುವ ರೀತಿಯ ನೋಡಿ
ತಾಯಿಯು ಮರಗುತ ಮನದಂದು ||
ಎತ್ತದು ಪೋಗುವೆ ನಿಲ್ಲಲೆ ಮಗಳೇ
ಅನ್ನುತ ಅಪ್ಪಿದಳು ಆಕಿ ಅಂದು ||
ಅಪ್ಪಿದ ತಾಯಿಗೆ ಒಪ್ಪುವ ಮಾತನು
ಅಕ್ಕನು ಪೇಳಿದಳಿಂತೆಂದು
ಮುಪ್ಪಾಗದ ಮಲ್ಲಿಕಾರ್ಜುನ ಗಂಡಗೆ
ತನುಮಣಗಳ ನೀಡಿದೆನೆಂದು ||

೧ನೇ ಚಾಲ

ತಾಯಿ ತಂದಿ ಮಾತನು ಕೇಳ್ದಾ
ಕಲ್ಯಾಣದ ದಾರಿ ಹಿಡಿದಾ ||
ಅಲ್ಲಿಂದ ಅನುಭವ ಮಂಟಪಕ ಬಂದಾ
ಅಲ್ಲಮಪ್ರಭು ನನ್ನ ತಂದೆಂದಾ ||

೨ನೇ ಚಾಲ

ಅಲ್ಲಿ ಕೆಲವು ದಿನ ಕಾಲ ಕಳೆದಳು
ಮುಂದೆ ಶ್ರೀಶೈಲಕೆ ಬಂದಳು ||
ಶ್ರೀಶೈಲ ಚೆನ್ನಮಲ್ಲಿಕಾರ್ಜುನೊಳ್ ಐಕ್ಯ ಆದಳು
ಜಗದೊಳು ಕೀರ‍್ತಿಯನು ಪಡೆದಳು ||

ಏರ

ಅಕ್ಕನ ಬಳಗದ ಪರವಾಗಿ ಹಾಡಿದ
ಹುಲಕುಂದ ಕುಂದ ಭೀಮಕವೇಶ್ವರಾ|| ೩ ||

ರಚನೆ : ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು