ತನ್ನೊಳ ತಾನು ತಿಳಿಬೇಕ | ಮನುಷ್ಯನಾದ ಬಳಿಕ | ಮನಸ್ಸಿನ ಕೊಳಕ ತೊಳೆಯ ಬೇಕ ಮೊದಲ
ಝಳ ಝಳಾ ಹೊಳೆಯುವು ಕಳಿಯಳ್ಳ ಎಳೆ ತಿಳೆ ಬಿಸಲಾ || ಪ ||
ಬಿಸಲಿನ ಮಹತ್ವದ ಅಸಲ | ತತ್ವದ ಕುಶಲ | ಪಸರಿಸಿದ ಸೊಲ್ಲ | ಶರಣರಿಂದ ಹೊರಟಾಗ
ಈ ಧರಣಿಯೊಳಗ ಅನುಕರಣ ಮಾಡುವಂಥ ಆಟಾ ||
ಆ ಶರಣರು ಶಿವ ಶರಣೆಯರು | ಇನ್ನೂರ ಹದಿಮೂರ | ಸ್ತ್ರೀ ವಚನಕಾರ ಇದ್ರ ಇಪ್ಪತ್ತೆಂಟಾ
ಆತ್ಮಜ್ಞಾನ ಸ್ಫೂರ್ತಿಯಿಂದ ಕೀರ್ತಿ ಪಡದ ಆದ್ರ ಶ್ರೇಷ್ಟಾ ||
ಅವರಲ್ಲಿ ಅಕ್ಕಮಹಾದೇವಿ | ಉಡುತಡಿ ಊರಕವಿ | ಮೂಡಿದಂತೆ ರವಿ | ಪೂರ್ವದಲ್ಲಿ ಥೇಟಾ |
ವಿಮಲ ಸುಮತಿ ಎಂಬ ದಂಪತಿಯ ಗರ್ಭದಲಿ ಪ್ರಕಟಾ ||
ಹದಿನಾರು ವರುಷದ ವಯಾ | ಚಿನ್ನದಂತ ಕಾಯ | ಸುಂದರ ಸೌಂದರ್ಯ ಮಾತಿನಲಿ ದಿಟ್ಟಾ |
ಆಕಿ ರೂಪ ನೋಡಿ ಆ ಊರ ಅರಸ ಮನಸಿಟ್ಟಾ ||
ರಾಜನ ಹೆಸರ ಕೌಶೀಕ | ಇದ್ದವನ ಠೀಕ | ಈಕಿನ್ನ ಆಗುದಕ | ಹಿಡಿದನು ಹಠಾ
ಮೋಹದಾಹದಿಂದ ಅಹಂಕಾರ ಕೂಡಿ ತಲಿ ಕೆಟ್ಟಾ ||

||ಚಾಲ|||

ಮಹಾತ್ಮಳನ್ನು ಕರಿಸಿ ಅಂದಾನು | ಸ್ನೇಹ ಮಾಡ ನನ್ನ ಕೂಡ ನೀನು ||
ಆ ಕ್ಷಣದಿ ಪೇಳ್ಯಾಳ ಅಕ್ಕ | ದೀಕ್ಷಾ ಹೊಂದಿ ಕಟ್ಟೊಲಿಂಗವನು
ಕಬುಲಾಗಿ ಕರಕೊಂಡ ಹೋದಾನು | ಸಭಾದೊಳಗ ನಿರಾಕರಿಸಿದನು

||ಏರು||

ಬಲತ್ಕಾರ ಮಾಡಲಿಕ್ಕೆ ಹೋದ ಧೊರಿ ಅಂತ ತಿಳಿದ | ಚೋರ ಮಾಡಿದ |
ದಾರಿ ಬಿಡಲಿಲ್ಲಾ || ೧ ||

ಅಕ್ಕಗ ಬಂದೀತ ಸಿಟ್ಟ | ಅಲ್ಲಿಯ ಸ್ಥಾನ ಬಿಟ್ಟ | ವೈರಾಗ್ಯ ತೊಟ್ಟ | ಹೊರಟ್ಲಾ ಭರರಾ |
ಉಟ್ಟ ವಸ್ತ್ರ ಕಳದಿಟ್ಟ ಆಗಿ ದಿಗಂಬರಾ ||
ಮಲ್ಲಿಕಾರ್ಜುನನೇ ನನ್ನ ಗಂಡ | ಉಳಿದವರ ಕಂಡ | ನಶ್ವರ ಪಿಂಡ | ಅಂತ   ವಿಚಿಯಾರಾ |
ಹಿಂಗ ಸಾರುತ ನಡದಾಳ ಅಲ್ಲಮ ಪ್ರಭುವಿನ ಹತ್ತರಾ ||
ಸೃಷ್ಟಿಯೊಳಗ ಶ್ರೇಷ್ಟವಾದ ವ್ರತಾ | ಉತ್ಕೃಷ್ಟ ಮಾತ | ಹಿಡದಾಳು ಪಂಥ | ಯವ್ವನದ ಭಾರಾ |
ಪ್ರೌಢ ವಯಸ್ಸಿನಲ್ಲಿ ತ್ಯಾಗ ಮಾಡಿದ್ಲ ಸಂಸಾರಾ ||
ಅಂತರಂಗ ಆತ್ಮದ ಜೋರ ಬಹಿರಂಗ ವ್ಯಾಪಾರ | ಅದೇ ಕ್ಷಣ ದೂರ | ಮನಸ ನಿರ್ಧಾರ |
ಇಕಿ ಶೌರ್ಯ ನೋಡಿ ಬೆಪ್ಪಗಿ ಕೂತ್ರ ಸಾಧೂರ ||
ಪ್ರಭು ದೇವರ ಪ್ರಶ್ನ ಹಾಕಿದ | ನೀನು ಲಗ್ನವಾದ | ಗಂಡನ ಬೀರದ | ಹೇಳತಾಯಿ ಪೂರಾ |
ಹೇಳದಿದ್ರ ಇಲ್ಲಿ ನಿಲ್ಲಬ್ಯಾಡ ಹೋಗ ವತ್ತಾರ ||

||ಚಾಲ|||

ಇಷ್ಟ ಕೇಳಿ ಕೊಟ್ಟಾಳ ಉತ್ತರಾ | ನನ್ನ ಪ್ರೇಮ ಪತಿಯ ದೇವರಾ ||
ತಪಶ್ಚರ್ಯ ಮಾಡಿದಾಗ ಜೋರಾ ಅವನಿಗೆ ಕೊಟ್ಟಾರ ನಮ್ಮವರಾ ||
ಧರ್ಮ ಬಿಟ್ಟ ಹೇಳಲಿಲ್ಲ ಹೆಸರಾ | ಮರ್ಮ ಭೇದಕ ಶಬ್ದದ ಸಾರಾ ||

||ಏರು||

ಕಲ್ಯಾಣ ಅನುಭವ ಮಂಟಪ | ಹಚ್ಚಿದಂಗ ದೀಪ | ಪ್ರಶ್ನೋತ್ತರ ಹೊಳಪ ಜ್ಞಾನದ   ಕುಶಲಾ   || ೨ ||

ದೀಕ್ಷಾ ಆಗಲಿಲ್ಲ ಕೌಶಿಕ | ಸಿಟ್ಟಾಗಿ ಅದಕ | ಬಂದಿ ಇಲ್ಲಿ ತನಕ | ಅಕ್ಕಮಹಾದೇವಮ್ಮಾ |
ನೀ ವಿರಕ್ತಿ ಇದ್ದರ ಕೂದಲ ಮರಿಯಾಕಮ್ಮಾ ||
ಉತ್ತರ ಕೊಟ್ಟಳ ಅವರಿಗಿ | ನಿಮ್ಮ ಸಲುವಾಗಿ | ಮಾಡಿದಿನಿ ಬಗಿ | ಮರ್ಯಾದಿಯ ಕಲಾ
ಕಾಮನ ಮುದ್ರಿ ಕಂಡ ನಿಮಗ ಆದೀತಂತ ಭ್ರಮಾ  ||
ನಾ ಶರೀರದ್ದು ಇಟ್ಟಿಲ್ಲ ಮಾಯಾ | ಕರಗಿದರೇನಯ್ಯಾ |
ಮಿರಿಗಿದರೇನಯ್ಯಾ | ಧೊರಿ ಅಲ್ಲಮಾ ||
ಇರವ ಅರವ ತಪ್ಪಿದರ ಉರುಳಾಡಿ ಹೋಗುವದು ನೇಮಾ ||
ಪ್ರಭು ದೇವರ ಮನಸ್ಸಿಗೆ ಬಂದ | ಉಕ್ಕಿ ಆನಂದ | ಶರಣರಿಗೆ ತಿಳಿದ | ಹೊರಬಿದ್ದ ಪ್ರೇಮಾ ||
ಬಸವಣ್ಣನವರು ನಿಂತು ಹೊಗಳಿದರು ಆಕಿ ನಾಮಾ ||
ಪ್ರತಿಯೊಂದು ಮಾತಿನಲ್ಲಿ ವಚನ | ವಾಙ್ಮಯದ ಹಸನ | ಅನುಭವ ಚಿನ್ಹ | ವಿಷಯ ಉತ್ತಮಾ |
ಅಚ್ಚ ಕನ್ನಡದೊಳಗ ಬಿಚ್ಚ ಶಬ್ದದ ಮರ್ಮಾ ||

||ಚಾಲ|||

ಆದ್ಯರ ವಚನವು ಐವತ್ತಾ | ದಣ್ಣಾಯಕರವು ಇಪ್ಪತ್ತಾ ||
ಪ್ರಭು ದೇವರ ವಚನವು ಹತ್ತಾ | ಅಜಗಣ್ಣನವು ಐದ ಸಹಿತಾ ||
ಇಕಿ ಬಂದ ವಚನದ ಕಿಮ್ಮತ್ತಾ | ಚನ್ನ ಬಸವ ಹೇಳಿದ ಈ ಮಾತಾ ||

||ಏರು||

ಸ್ತ್ರೀ ಸಮಾಜಕ್ಕೆ ಭೂಷಣ | ಪಡಕೊಂಡಳು ಜ್ಞಾನ | ಹುಲಕುಂದ
ಭೀಮೇಶನು | ಹೇಳಿದ ಈ ಲೀಲಾ || ೩ ||
ರಚನೆ : ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು