ಬೆಳಗಾಂವಿ ಬೆಳವಲ ನಡುವೆ ಬೆಳೆದ ಬೆಳವಡಿ ಮಲ್ಲಮ್ಮಾ |
ಇಳಿಯೊಳಗ ಕೀರ್ತಿ ಗಳಿಸಿದೆಮ್ಮಾ || ಪ ||

ವಿದ್ಯದಲ್ಲಿ ಪ್ರತ್ಯಕ್ಷ ಸರಸ್ವತಿಯ ಸರಿಯಾಗಿ |
ವೇದಾಂತದಲ್ಲಿ ಬ್ರಹ್ಮಜ್ಞಾನಿ ಗಾರ್ಗಿದೇವಿಯಾಗಿ |
ಕ್ರೋಧದಲ್ಲಿ ಕಾಲದೇವಿಯಂತೆ ಅರ್ಭಾಟ ಮೇಲಾಗಿ |
“ರಣದಲ್ಲಿ’’ ರಣದಲ್ಲಿ ದುರ್ಗಾದೇವಿಯಂತೆ ಭೋರ್ಗರಿದ ಜಲ್ಮಾ|| ೧ ||

ಪಾತಿವ್ರತ್ಯದಲ್ಲಿ ಪಾರ್ವತಿಯಂತೆ ನೀತಿ ನೇಮಾ |
ಕ್ಷಿತಿಯಲ್ಲಿ ರೂಪ ರತಿ ಸಮಾ ||
ದಾನದಲ್ಲಿ ಕಲ್ಪವೃಕ್ಷದಂತೆ ಶ್ರೀಮತಿಯ ಗುಣಾ |
ಜ್ಞಾನಿಯಾದ ಗುರುಗಳಿಗೆ ತಾನೆ ಕೊಡುವಾಕಿ ಹಣಾ |
ರಾಜತಂತ್ರದಲ್ಲಿ ಪ್ರಮೀಲೆಯಂತೆ ಪ್ರವಿಣಾ |
“ಪತಿಹತಿಯಾರ” ಪತಿಹತಿಯಾರ ಹಿಡಿದು ಸ್ವತಾಯುದ್ಧಕ ನಡದಮ್ಮಾ|| ೨ ||

ಧೈರ್ಯವಂತಿ ಶೌರ್ಯವಂತಿ ಆರ್ಯಮಾತೆ ಮಲ್ಲಮ್ಮಾ |
ಮರ್ಯಾದಿ ಕಾಯ್ದ ಕನ್ನಡಮ್ಮಾ ||
ಛತ್ರಪತಿ ಶಿವಾಜಿನ್ನ ಮೆತ್ತಗಮಾಡಿದ ರಾಣಿ |
ತಪ್ಪದಿಪ್ಪತ್ತೇಳ ದಿವಸ ಕಾಳಗ ಮಾಡಿದ ವೀರಾಂಗಿಣಿ |
ಸಂಸ್ಥಾನ ದರ್ಬಾರ ಪ್ರಥಮ ರಾಜಕಾರಣಿ |
“ಮುನ್ನೂರ’’ ಮೂನ್ನೂರ ಇಪ್ಪತಹಳ್ಳಿ ಪಡಿಯಳಾದ ಹಡದಮ್ಮಾ|| ೩ ||

ವೀರಗಲ್ಲು ಸ್ಥಾಪನೆಯಾಗಿ ಸ್ಮಾರಕವಾಯಿತು ನಾಮಾ |
ನಾರಿರತ್ನ ಶಿರೋಮಣಿ ಧರ್ಮಾ ||
ಹೆಂಣ ಮಕ್ಕಳಿಗೆಲ್ಲ ಸೈನ್ಯ ಶಿಕ್ಷಣ ಕೊಟ್ಟಾ |
ಕನ್ನಡ ನಾಡಿನ ಸೇವೆಗೆ ಮಾಡಿ ಒಕ್ಕಟ್ಟಾ |
ಧನ್ಯ ಜಯಭೇರಿ ಹೊಡಿಸಿ ಉನ್ನತ ಕೀರ್ತಿ ಗಳಿಸಿಟ್ಟಾ |
“ಪ್ರಖ್ಯಾತ’’ ಪ್ರಖ್ಯಾತವಾದಳೆಂದು ಹೇಳಿದ ಹುಲಕುಂದ ಭೀಮಾ|| ೪ ||

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು