ಯದಾಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತೆಂಬೋಕ್ತಿಯನು |
ನಂದಿಯೆ ಬಸವನ ಹೆಸರನು ಧರಿಸಿ ಸಿದ್ಧಸಿ ಭಾರತ ಬೆಳಗಿದನು || ೧ ||

ಶುದ್ಧ ಬ್ರಾಹ್ಮಣ ಮಾದರಸನ ಸುತ ಬಾಗೆವಾಡಿಯೊಳು ಜನಿಸಿದನು |
ಬಿದಿಗೆಯ ಚಂದ್ರನ ತದುಪರಿ ಬೆಳೆದನು ಇಹಪರ ವಿದ್ಯೆಯ ಗಳಿಸಿದನು || ೨ ||

ಹದಗೆಡಿಸುವ ಖಲ ಮೂಲ ವಿಚಾರವ ಸದೆಬಡಿಯುವ ನಿಜತತ್ವವನು |
ಮದಮತ್ಸರ ಮೋಹಾದಿ ಅಳಿಸುವ ಸದಸದ್ಗುರುವಿನ ಶೋಧವನು|| ೩ ||

||ಚಾಲ||

ತಂದೆ ತಾಯಿ ಬಂಧು ಬಳಗವನು | ಮಾಯಾ ಮೋಹವನು |
ಅಳಿದು ಮನೆಬಿಟ್ಟು ನಡೆದು ಹಿಡಿದನು | ಕೂಡಲ ಸಂಗಮ ದಾರಿಯನು |
ವಂದ್ಯ ಜಾತವೇದ ಮುನಿಯನ್ನು | ಮಾಡಿ ಸೇವೆಯನು |
ಶಾಸ್ತ್ರ ವೇದಾಗಮ ಅಭ್ಯಾಸವನು | ಸಾಧಿಸಿದ ಆದಿ ಆತ್ಮನನು ||
ಒಂದೇ ಇರುವ ಸರ್ವರಾತ್ಮವನು | ಮಾಡಿ ಭೇದವನು |
ಜಾತೀಯತೆ ಅತಿ ದ್ವೇಷವನು | ನೋಡಿ ಮನದಿ ಬಹಳ ನೊಂದಿಹನು ||

||ಏರು||

ಮೋದದಿ ಬ್ರಾಹ್ಮಣ ಧಾರ್ಮಿಕದೀಕ್ಷೆ | ಮಾದರಸನು ತಾ ಮಾಡುವುದಕ್ಕೆ
ಪ್ರೇಮದಿ ಕರೆಸಿ ಹೇಳತಾರ ಬಸವಣ್ಣನ|| ೧ನೆಯ ಚೌಕ ||

ನಂದಿಯೆ ಬಸವನ ಹೆಸರನು ಧರಿಸಿ ಸಿದ್ಧಿಸಿ ಭಾರತ ಬೆಳಗಿದನು ||
ಸೊಟ್ಟಮೂರು ಎಳೆಕಟ್ಟಿದರೇನು | ನಿಷ್ಠೆಬೇಕು ನಿಜ ತಿಳಿಯುದಕೆ |
ಮುಟ್ಟುವ ಗುರಿಯನು ಸ್ಪಷ್ಟ ತೋರಿಸುವ | ಶ್ರೇಷ್ಠ ತತ್ವಮತ ಧರಿಸುದಕೆ || ೧ ||

ನಷ್ಟವಾದ ವೀರಶೈವ ಶ್ರೇಷ್ಠಮತ | ಸೃಷ್ಟಿಸಿ ಪುನಃ ಉದ್ಧರಿಸುದಕೆ |
ಶ್ರೇಷ್ಠ ಇಷ್ಟಲಿಂಗ ಕಟ್ಟಿ ನಡೆದನು | ಅಷ್ಟಾವರಣವ ತಿಳಿಯುದಕೆ || ೨ ||

ಅಷ್ಟರಲ್ಲಿ ಬಲದೇವ ಮಾವನು | ಮಗಳು ಗಂಗಾಂಬಿಕೆ ವರಿಸುದಕೆ |
ಇಷ್ಟದಿಂದ ಕರೆಸಿದನು ಕಲ್ಯಾಣಕ್ಕೆ | ಮಂತ್ರಿಪದವ ಒಪ್ಪಿಸುವದಕ್ಕೆ || ೩ ||

||ಚಾಲ|| 

ಬಲದೇವಮಾವ ಮಡಿದನು | ಅಳಿಯ ಬಸವನ |
ಕರೆದುಕೊಟ್ಟಾನ ಮಂತ್ರಿಪದವನು | ಕಲ್ಯಾಣ ರಾಜ ಬಿಜ್ಜಳನು ||
ಬಸವಣ್ಣ ಲಿಪಿ ಓದಿದನು | ನೆಲವ ಅಗಿಸಿದನು |
ಮುತ್ತು ರತ್ನದ್ರವ್ಯ ತೆಗೆಸಿದನು | ಬಿಜ್ಜಳ ರಾಜ ಮೆಚ್ಚಿದನು ||
ಕೀರ್ತಿಯ ಪಡೆದನು ಬಸವಣ್ಣ | ಮಾಡಿ ನಡೆಸಿಹ ಧಾರ್ಮಿಕ ಜ್ಞಾನ |
ಮಂತ್ರಿಕಾರ್ಯದ ಮಾನ | ಪರಮಾರ್ಥ ಚರ್ಚಾಕೂಟವನು ||

||ಏರು||

ಜಾತಿ ವಿಜಾತಿ ಭೇದವ ತೆಗೆದು | ನೀತಿಯೆ ನಿಜವಾದ ಜತಿಯು ಎಂದು |
ಮಾತಿನ ಚರ್ಚೆಗೆ ರಚಿಸಿದನವನು ಅನುಭವ ಮಂಟಪವ|| ೨ನೆಯ ಚೌಕ ||

ನಂದಿಯೆ ಬಸವನ ಹೆಸರನು ಧರಿಸಿ ಸಿದ್ಧಿಸಿ ಭಾರತ ಬೆಳಗಿದನು ||
ಅನುಭವ ಮಂಟಪ ಅಧ್ಯಕ್ಷತೆಯನು | ಅಲ್ಲಮಪ್ರಭುವರ ವಹಿಸಿದನು |
ಚೆನ್ನಬಸವ ಮೆರೆಮಿಂಡದೇವ | ತಿರುವಾಂಕುರೀಶ ಚೋಳ ಚೌಡಯ್ಯನು|| ೧ ||

ಕಿನ್ನರಿ, ಕೋಹಾರ ಬೊಮ್ಮಯ್ಯ | ಹರಳಯ್ಯ ಕಕ್ಕಯ್ಯ ಮಡಿವಾಳ ಮಾಚಯ್ಯನು |
ಪೊನ್ನಾಂಬಲ ಮಾರಯ್ಯ ಕೇತಯ್ಯ | ಓಹಿಲಾರ್ಯ ಶಿವಶರಣರನ|| ೨ ||

ಅಣ್ಣನ ಬಳಗದ ಹಿನ್ನಲೆಯಾಗಿ | ಅಕ್ಕನ ಬಳಗವ ಬೆಳೆಸಿದನು |
ಹೊನ್ನಮ್ಮ ಲಕ್ಕಮ್ಮ ಅಕ್ಕಮಹಾದೇವಿ | ಜ್ಞಾನವಂತ ಶರಣೆಯರನು|| ೩ ||

||ಚಾಲ||

ಜೀವಿಗಳೆಲ್ಲ ಒಂದೇ ಜಾತಿ | ಎಲ್ಲರಲಿ ಪ್ರೀತಿ |
ದಯವಿರುವದೇ ಧರ್ಮದಮೂಲ ಉಚ್ಚ ನೀಚ ಜಾತಿಯಲಿಲ್ಲ ||
ದೇವನೊಬ್ವನಿರುವನೆಲ್ಲರಲಿ | ಸರ್ವ ಹೃದಯದಲಿ |
ತಿಳಿದುನಡೆಯುವದೇ ನೀತಿಯ ಮೂಲ | ನೀತಿಗೆ ಜಾತಿ ಭೇದವಿಲ್ಲ ||
ಭಾವ ಶುದ್ಧಬೇಕು ಸರ್ವರಲಿ | ಸಲ್ಲಬೇಕು ಇಲ್ಲಿ |
ಅಲ್ಲಿ ಸಲ್ಲುವವರು ಮಾತಿನಮೂಲ | ಅರಿ ಕೃತಿಯಲ್ಲಿ ಮಾತಿನಲ್ಲಿಲ್ಲ ||

||ಏರು||

ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜನರು ಸುಧೆಯುಂಡವರು |
ತಾತ್ವಿಕ ನುಡಿಯನು ನಡೆದು ತೋರಿಸಿದ ಸ್ವತಃ ಬಸವಣ್ಣನು|| ೩ನೆಯ ಚೌಕ ||

ನಂದಿಯೆ ಬಸವನ ಹೆಸರನು ಧರಿಸಿ ಸಿದ್ಧಿಸಿ ಭಾರತ ಬೆಳಗಿದನು ||
ಅನುಭವ ಮಂಟಪ ದಿನದಿನ ಬೆಳೆಯಿತು | ಕೈಲಾಸವೆನಿಸಿತ್ತು ಕಲ್ಯಾಣ
ಮಾನವ ಕುಲ ಉದ್ಧಾರವಾಗುವ | ವೀರಶೈವ ಮತ ಹೆಚ್ಚಾಯ್ತು|| ೧ ||

ಅನ್ಯರ ಕುಲವನು ಸೇರನು ಎಂಬ | ಮತ್ಸರ ಭಾವನೆ ಹುಟ್ಟಿತ್ತು |
ಕನಲಿದ ಕೊಂಡಿ ಮಂಚಣ್ಣರ ಜಾಡಿಗೆ | ರಾಜನ ಮನವದು ಒಡೆದಿತ್ತು|| ೨ ||

ಋಣಸಂಬಂಧ ಮಧುವಯ್ಯ ಹರಳಯ್ಯ | ರಾಜನ ಕಿವಿಗೆ ಮುಟ್ಟಿತ್ತು |
ಕಣ್ಣು ಕಿತ್ತಿಸಿ ಇಬ್ಬರ ಶಿಕ್ಷಿಸಿದ್ದು | ಜನತೆಯ ಈರ್ಷೆಗೆ ಗುರಿಯಾಯ್ತು|| ೩ ||

||ಚಾಲ|||

 ಕಲ್ಯಾಣ ಕ್ರಾಂತಿ ಎದ್ದಿತು | ಕೊಲೆಯು ನಡೆಯಿತು |
ಬಿಜ್ಜಳನ ಮರಣವಾಯಿತು | ಬಸವಗೆ ದೋಷ ತಟ್ಟಿತು ||
ಶರಣರ ಕೊಲೆಯು ತಿಳಿಯಿತು | ಬಸವಗೆ ಕಸವಿಸಿಯಾಯಿತು |
ನಾಲ್ಕೂ ದಿಕ್ಕಿನ ಹೋಳಿಗೆ ಮನನೊಂದು | ಅಣ್ಣನು ಕೂಡಲ ಸೇರಿದನು ||
ಬಸವನ ತತ್ವವೆ ವಚನಗಳಾದವು | ಎಂಟು ನೂರು ವರ್ಷದ ಈ ಮಾತು |
ಇಂದಿಗು ನಾಡಲಿ ಮೆರೆಯುತಿದೆ | ವಾಲಿ ಶರಣರ ಹಾಡಿನಲಿ ||

||ಏರು||

ಬಸವನ ಚರಿತೆಯ ಬಣ್ಣಿಸಿ ಬೆಳೆಸದೆ ಕನ್ನಡಿ ಹಿಡಿದು ತೋರುವ ತೆರದಿ |
ವಿಶ್ವಮಾನ್ಯ ಬಸವಣ್ಣನ ಚರಿತೆಯ ಕೇಳಿರಿ ಕೂಡಿದ ಜನರೆಲ್ಲ|| ೪ನೆ ಚೌಕ ||
ನಂದಿಯೆ ಬಸವನ ಹೆಸರನು ಧರಿಸಿ ಸಿದ್ಧಿಸಿ ಭಾರತ ಬೆಳಗಿದನು ||

ರಚನೆ :
ಶರಣಪ್ಪ ವಾಲಿ
ಕೃತಿ :
ಶರಣಸ್ಮೃತಿ