ದಾಟಿ : ಮೈಸೂರ ಲಾವಣಿ

ಕಲಿಯುಗದೊಳಗ ಕರ್ಮ ಹೆಚ್ಚಾದಾಗ ಧರ್ಮದ ಗುರುಗಳು ಬರುತಿಹರು |
ಕಾಲ ಕರ್ಮ ನಿರ್ಮೂಲನ ಮಾಡುವರು |
ಮೂಲ ಮರ್ಮದ ಮಾತಿನ ಮಜಕೂರು |
ಸೊಲ್ಲಾಪೂರ ಊರಲ್ಲಿ ಆದ ಕಥಿ ಎಲ್ಲರೂ ಕೇಳಿರಿ ಬಲ್ಲವರು|| ಪ ||

ಎಂಭತ್ತೊಂಬತ್ತು ವರುಷ ತುಂಬಿದ ವಯಸ್ಸು ಮುಪ್ಪಿನವರು ಗಂಡ ಹೆಂಡಂದಿರು
ಮುದ್ದುಗೌಡ ಸುಗ್ಗಲದೇವಿ ಎಂಬವರು
ಖುದ್ಧ ಮಕ್ಕಳಿಲ್ಲದೆ ವದ್ದಾಡವರು |
ಮುದ್ದಾಂ ರೇವಣಸಿದ್ಧ ಗುರುಗಳು ವೃದ್ಧರಲ್ಲಿ ದಯಮಾಡಿಸಿದರು |
ಅಂತರಂಗದಲ್ಲಿ ಚಿಂತಿ ಮಾಡುತ ದಂಪತಿಗಳು ಪಾದಕೆರಗಿದರು |
ಭ್ರಾಂತಿ ಬಡದನಿಂತ ಕೊಂಡ ಮರಗಿದರು |
ಸ್ವಂತ ಸಂತತಿ ಇಲ್ಲಂತ ಕೊರಗಿದರು |
ಕಂತುಹರಾ ನಮಗೆಂಥ ವ್ಯಾಳೆ ತಂದ ಶ್ರೀಮಂತಿಕೆ ಯಾತಕೆಂದಾರು |

ಶಾಂತ ಮೂರ್ತಿಗೆ ಸಂತಾನ ಸಮೃದ್ಧಿರಸ್ತು ಬಂತ ಬಾಯಿಲೆ ಆಶೀರ್ವದಿಸಿದರು
ಕಾಂತಿಗೆ ಪುತ್ರವತೀ ಭವ ಅಂದಾರು |
ಕುಂತ ನಿಂತವರು ಆಶ್ಚರ್ಯ ಹೊಂದಿದರು |
ಅಂತ್ಯ ಕಾಲಕ್ಕ ಎಂತ ಮಕ್ಕಳಿವರ‍್ಹೆಂತ ಹರಿಕೆ ಕೊಟ್ರ ಗುರುವರು ||

ಸರೋವರ ನೀರೊಳು ಮುಳಿಗಿ ಬರ್ರಿ ಅಂತ ಗುರುಗಳು ಈರ್ವರಿಗ್ಹೇಳಿದರು |
ತ್ವರತದಿ ಸತಿಪತಿ ಸ್ನಾನ ಮಾಡಿದರು |
ವರ ಭಸ್ಮ ಗುರುವರರು ಕೊಟ್ಟಾರು |
ಶರೀರಕ್ಕೆ ವಿಭೂತಿ ಧರಿಸಿದ ಕೂಡಲೆ ತರುಣರಾಗಿ ಕರ ಮುಗಿದಾರು ||

ಶ್ರೀಗಳ ದಯದಿಂದ ಸುಗ್ಗಲಮ್ಮ ಸೌಭಾಗ್ಯದ ಗರ್ಭವ ಧರಿಸಿದರು |
ಮೊಗ ಬಿಳುಪರೀ ಆಲಸ್ಯ ಹೊಂದಿದರು |
ಆಗ ಶಿವರೂಪ ಬಯಕೆಯ ಬಯಸಿದರು |
ಸಾಗಿ ಮಂಚಕ ಹೋಗಿ ಮಲಗಿ ಶಿವಯೋಗಿ ಮಗನನು ಹೆತ್ತಾರು ||

ನರರೂಪ ಧರಿಸಿ ಧರೆಗವತರಿಸಿದ ಪರಮನೆಂದು ಜನ ನೆರೆದಾರು |
ಹರಿಹರ ಮಹಾದೇವ ಶಬ್ದ ಕೇಳಿದರು ದೇವಲೋಕದಿ
ಬಂದ್ರ ಪಾರ್ವತೆಮ್ಮನವರು |
ಹರುಷದಿ ತೊಟ್ಟಿಲ ಜುರು ಜುರು ತೂಗೂತ
ಪರಿ ಪರಿ ಜೋಗುಳ ಪಾಡಿದರು ||

ಜೋಗುಳ ಪದ

ಜೋ ಜೋ ಜೋ ಜೋ ಸಿದ್ಧರಾಮಯ್ಯಾ |
ಜೋ ಜೋ ಜೋ ಜೋ ಮುದ್ದು ಕಂದಯ್ಯಾ|| ಜೋ ||

ಹಾಲುಂಡ ಲೋಲಾಡು ಮೂಲ ನನ್ನಯ್ಯಾ |
ಪಾಲನ ಕರ್ತ ಹೋಗಿ ಬಾಲನಾದಯ್ಯಾ ||
ಚಲುವ ಸೊಲ್ಲಾಪೂರದ ಸಿದ್ಧರಾಮಯ್ಯಾ|| ೧ ||

ಹತ್ತು ವರುಷದ | ತನಕ ಹೆತ್ತಮ್ಮನ ಕೂಡ ಮಾತಿಲ್ಲ ಸಿದ್ಧರಾಮಯ್ಯನವರು |
ನಿತ್ಯ ಗೋವುಗಳ ಕಾಯಲಿಕ್ಕೆ ಹೋಗುವರು |
ಅತ್ತ ಅಡವಿಯೊಳು ಲಿಂಗ ಪೂಜೆ ನಡಿಸುವರು |
ಉತ್ತಮ ತರದ ಪತ್ರಿ ಪುಷ್ಪಗಳ ಮತ್ತಷ್ಟ ಲಿಂಗಕ್ಕೆ ಏರಿಸುವರು ||

ಭಕ್ತಿಗೆ ಮೆಚ್ಚಿ ಪ್ರತ್ಯಕ್ಷ ಹೊರಟರು ಶ್ರೀ ಶೈಲದಿಂದ ಮಲ್ಲಯ್ಯನವರು |
ಶಕ್ತಿ ಅವತಾರಿ ಭ್ರಮರಾಂಬಿಕೆಯವರು |
ಸತ್ವ ಪರೀಕ್ಷೆ ಮಾಡಲಿಕ್ಕೆ ಹೊರಟಾರು |
ಸೀತನಿ ತಿನ್ನುವ ಬೇತ ಮಾಡಿಕೊಂಡು ಆತುರದಿಂದ ಭೆಟ್ಟಿ ಕೊಟ್ಟಾರು ||

ಬಿಳಿ ಜೋಳ ಎಳಿ ಎಳಿ ಬೆಳಿಸಿ ತಿನ್ನುವ ಕಳಕಳಿಯಿಂದ ಅಲ್ಲಿಗಿಳಿದವರು |
ಒಳ್ಳೆ ಗಿಳಿಕೂಡ ತೆನಿಗಳ ಕೇಳಿದರು |
ಬುಳು ಬುಳು ಕಾಲಬೀಳಬೇಕೆ ಬಲು ಜೋರು |
ಕಳಕಳ ತೆನಿ ಮುರಿದು ಝಳ ಝಳ ಬೆಂಕಿಲೆ ವಳಿತಾಗಿ ಸುಡಂತ ಹೇಳಿದರು.
ಕಾಕುಳ್ಳ ಪುಟ ಮಾಡಿ ನಾಲ್ಕೆಂಟ ತೆನಿ ತಂದ ಹಾಕಿ ಸುಟ್ಟ ಶಿವಯೋಗಿಯವರು |
ಸಾಕಷ್ಟ ಉದರಿಸಿ ಕೊಟ್ಟಾರು |
ಬೇಕಂತ ನೆವ ತಗದ ಮಲ್ಲಿಕಾರ್ಜುನರು |
ಸಂಕಟ ಬಹಳ ನನಗ ಸಾವತೀನ ಅಂತ ಹೊರಳಾಡಿ ಅಳಲಿಕ್ಕೆ ಹತ್ತಿದರು ||

ಪ್ರಾಣ ರಕ್ಷಣಕ ಅನ್ನ ಮಸರ ಬುತ್ತಿ ತನ್ನಿರೆಂದು ಕಣ್ಣ ತಿರವಿದರು |
ಸೊನ್ನಲಗಿಗೆ ಹೋದ್ರ ಶಿವ ಶರಣರು |
ತನ್ನ ತಾಯ ಸುಗ್ಗಲ ದೇವಿಗ್ಹೇಳಿದರು |
ಚನ್ನಾಗಿ ಕೆನೆಮೊಸರನ್ನದೊಳಕ ಕಲಿಸಿ ಉಣಲಿಕ್ಕೆ ಕೊಟ್ಟ ಕಳುಹಿದರು ||

ತಿರುಗಿ ಬರುದರೊಳು ಮಾಯವಾಗಿದ್ದರು ಇದ್ದಿದ್ದಿಲ್ಲ ಅಲ್ಲಿ ಯಾರ‍್ಯಾರು |
ಅರಿಯದೆ ಮರಾ ಮರಾ ಮರಗಿದರು |
ಗಿರಿ ಮಲ್ಲೇಶ ಅಂತ ಚೀರಾಡಿದರು |
ಅರಣ್ಯದೊಳಗೆ ಹುಡಕಂತ ನಡೆದಾಗ ಪರ್ವತಕೋಗುವರು ದೊರತಾರು ||

ಪರ್ವತ ಗಿರಿ ಮೇಲೆ ಇರತಾನಂತ ಹೇಳಿ ಕರಕೊಂಡ ಹೋದರು ಯಾತ್ರಿಕರು
ತಿರ ತಿರುಗಿ ನೋಡಿದರು ಸಿಗಲೊಲ್ಲರು |
ಕರ ಕಳಕೊಂಡಾವಿನಂತೆ ಮಿಡಿಕಿದರು !
ಹರಿಯುವ ಝರಿ ಕಾಂತಾರ ಶೋಧಿಸಿ ಪರ್ವತ ಶಿಖರಕ್ಕೇರಿದರು ||

ಅಲ್ಲಿಯು ಮಲ್ಲಯ್ಯ ಇಲ್ಲದ್ದನ್ನು ನೋಡಿ ಹಲ್ಲಣ್ಣಾರಿ ಸಿದ್ಧೇಶ್ವರರು
ಮೇಲಿಂದ ಕೊಳ್ಳದೊಳು ಹಾರಿದರು |
ಎಲ್ಲ ಪ್ರಾಣ ಶರೀರದಾಶೆ ನೀಗಿದರು |
ಅಲಲ ಅಂತ ಅಲ್ಲಿ ಮಲ್ಲಿಕಾರ್ಜುನ ಬಂದ ಬಲ್ಲದ ಶರಣನ್ನ ಉಳಿಸಿದರು

ಪರ್ವತ ಮೇಲಿರುವ ಅರವತ್ತೆಂಟು ಲಿಂಗ ಸೊಲ್ಲಾಪೂರಕ ತಂದಿರಿಸಿದರು
ಗುರು ಚನ್ನ ಬಸವನಿಂದ ದೀಕ್ಷೆ ಹೊಂದಿದರು |
ಸರಳ ವಚನಗಳನ್ನ ಸ್ವಂತ ಸಾರಿದರು |
ಪರಮ ಶಿವಯೋಗಿ ಚರಿತೆಯ ಲಾವಣಿ ಹುಲಕುಂದ ಭೀಮಕವಿ ಸಾರಿದರು|| ೨ ||


ರಚನೆ :
ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು