ಸರ್ವದೈವಕ ಶಿರವ ಬಾಗಿ ಕರವ ಮುಗಿದು ಹೇಳುವ ನಿಂತು |
ಶಾರದೆ ಸ್ಮರಿಸಿ ಸಾರುವೆ ಕಿನ್ನರಿ ಬೊಮ್ಮಯ್ಯನ ಕಥಾ |
ಶಿವಾಚಾರ ಶೀಲಸಂಪನ್ನ ಶಿವನ ಪೂಜಿಸುವ ಭಕ್ತ |
ಶಿವನಿಗೆ ತನು ಮನವೊಪ್ಪಿಸಿ ಶಿವನಕೂಡಿ ಆದನು ಸನ್ಮುಕ್ತ ||
ಸಂಗೀತ ವಿದ್ಯೆಯ ಇಂಗಿತ ತಿಳಿದು ಇಂಪಾದ ಕಿನ್ನರಿ ಬಾರಿಸುತ |
ಲಿಂಗ-ಜಂಗಮ-ಗುರುವಿನ ಪೂಜಿಸಿ ಭಕ್ತಿಲೆ ನಡೆಯುತ |
ಗಾನಲೋಲನಾಗಿ ಧ್ಯಾನಿಸಿ ಜಂಗಮರಿಚ್ಛೆಯ ತೀರಿಸುತ |
ಅನ್ನ-ವಸ್ತ್ರ ದಾನ ಮಾಡಲು ಅವನ ಆಸ್ತಿಯು ತೀರಿತ ||

||ಚಾಲ|| 

ಇದ್ದ ಆಸ್ತಿಯೆಲ್ಲ ಹೋಯ್ತಂತ ಆಗಲಿಲ್ಲ ಭ್ರಾಂತ |
ಮನಸು ಮಾಡಿ ಶಾಂತ ಆನಂದದಿಂದ ಶಿವನ ಒಲಿಸಿ ಗಾಯನದಿಂದ ||
ಶಿವನೊಲಿದು ಕೊಡುತಲಿರೆ ಹಣ ತಂದು ಅಡಿಗೆ ಮಾಡಿ |
ಜಂಗಮಭಕ್ತಿ ಪ್ರೀತಿಯಲಿ ಮಾಡಿ ಮೋದದಿ ಬೊಮ್ಮಯ್ಯ ದಿನಗಳೆಯುವನಾ ||
ಕಲ್ಯಾಣದಲ್ಲಿಯ ಹೆಸರನೊಂದು ಬಲ್ಲಿದ ಬಸವ ಎಂಬುದನಂದು |
ನಾಲ್ಕು ಕಡೆಯಿಂದ ಕೇಳಿ ಹೊರಟ ತನ್ನ ಊರಿಂದ |

||ಏರ||
ಇಷ್ಟಲಿಂಗದಲ್ಲಿ ಕಂಡ ಬೊಮ್ಮಯ್ಯನು ಶ್ರೇಷ್ಠ ಬಸವನನು ಹುಡುಕುತ || ೧ನೆಯ ಚೌಕ ||
ಕಲ್ಯಾಣ ಪಟ್ಟಣದ ಎಲ್ಲ ಜಂಗಮರ ಮಧ್ಯ ಬೊಮ್ಮಯ್ಯ ತಾನಿರುತ
ಬಲ್ಲಿದ ಶರಣರ ಬಳಗದ ನಡುವೆ ಕಾಲವ ಕಳೆಯುತ |
ಕೆಳಗಿನ ಓಣಿಯ ಸೂಳಿಯೊಬ್ಬಳು ವಿಟನಕೂಡ ಸರಸವಾಡುತ |
ಸೂಳಿ ಅಂತಾಳ ವಿಟ ಪುರುಷನಿಗೆ ಮಾರಿ ಹಬ್ಬ ಮಾಡೋಣ ಅಂತ ||
ಸೂಳಿಯ ಮಾತ ಕೇಳಿ ಹೊಂಟಾನೋ ಕುರಿಯನೊಂದ ತರಬೇಕಂತ |
ಹೇಳಿದಷ್ಟು ಬೆಲೆಯನಿತ್ತು ತಂದನು ಕುರಿಯ ಜಗ್ಗಾಡುತ್ತ ||

||ಚಾಲ|| 

ಊರ ಹೊರಗ ಇತ್ತ ಒಂದು ಗುಡಿ ಬೊಮ್ಮಯ್ಯ ಧ್ಯಾನ ಮಾಡಿ |
ಸಹಜ ಕೂತಿದ್ದಾ ಬಾಗಿಲ ತೆರೆದು ತ್ರಿಪುರಾಂತಕಾ ಎಂಬ ದೇವರದ |
ಆ ಕುರಿಯು ಸಾವಿಗೆ ಹೆದರಿ ಒದರತಾದ ಚೀರಿ |
ಅತ್ತಿತತ ಓಡಿ ಹೌಹಾರಿ ಗುಡಿಯೊಳಗ ಹೋಗಿ ಸೇರ‍್ಯಾದ |
ವಿಟಪುರುಷ ಬೆನ್ನ ಹತ್ತ್ಯಾನ ಗುಡಿಯ ಹೊಕ್ಕಾನ
ಕುರಿಯ ಹಿಡಿದು ಮನಸಿನಾಗ ಅಂದಾ ಆಯುಷ್ಯ ಮುಗಿತು ನಿನ್ನದ |

||ಏರ||
ಬೆನ್ನಿಗೆ ಬಿದ್ದಾದಂತ ಕಿನ್ನರಿ ಬೊಮ್ಮಯ್ಯ ಹೋಗಿ ಹಿಡಿದಾದನ ಕುರಿ
ಬಿಡುವದಿಲ್ಲ ಅಂತ || ೨ನೆಯ ಚೌಕ ||

ವಿಟ ಪುರುಷನು ಬಲು ದಿಟದಿಂದ ನುಡಿದನು ಕುರಿಯ ನೀ ಬಿಡು ಅಂದ |
ಶ್ರೇಷ್ಠ ಶರಣನಾದ ಕಿನ್ನರಿ ಬೊಮ್ಮಯ್ಯ ಸ್ಪಷ್ಟ ಬಿಡುವುದಿಲ್ಲ ನಾ ಅಂದ ||
ಸತ್ಯ ಅಹಿಂಸೆಯ ತತ್ವವ ತಿಳಿದ ಸತ್ಯ ಶರಣನ ಮಾತೊಂದ |
ಸ್ತುತ್ಯ ಬಸವ ಸ್ತೋತ್ರವ ಮಾಡುತ ಬೊಮ್ಮಯ್ಯ ಹೇಳ್ಯಾನ ವಚನ ಒಂದ |
ದಯವಿಲ್ಲದ ಧರ್ಮವಾವುದಯ್ಯ ಎಂದ ||
ಮರಣದ ಭಯದಿಂದ ಮೊರೆಹೊಕ್ಕ ಕುರಿಯ ಬಿಡುವದಿಲ್ಲ ನಾ ಒಂದೆಂದ |
ದುರಾಸೆಯಿಂದ ದುಡ್ಡು ಬೇಡಿದರ ಬೇಡಿದಷ್ಟು ಕೊಡುವೆನು ಅಂದ ||

||ಚಾಲ|| 

ಬೊಮ್ಮಯ್ಯ ಅಂದ ಮಾತ ಕೇಳಿ ವಿಟನು ಕೋಪ ತಾಳಿ |
ಕುರಿಗೆ ಹೇಳಿದ ಸಾವಿರ ಹೊನ್ನ ಬೊಮ್ಮಯ್ಯ ಕೊಟ್ಟಾನ ||
ಆ ವಿಟನು ಹಿಗ್ಗಿ ಮನಸಿನಲಿ ಹೋಗ್ತ ದಾರಿಯಲಿ ಕುರಿಯ ಕೊಂಡಾನ |
ಸಾವಿರ ಹೊನ್ನ ಸೂಳಿಗಿ ಒಯ್ದು ತೋರಸ್ಯಾನ ||
ರೂಪಾಯಿ ಗಂಟ ನೋಡಿ ಸೂಳಿ ಎಲ್ಲಾ ಕತಿ ಕೇಳಿ ದೇವರ |
ಹೆಸರುಗೊಂಡು ಕುರಿಯ ನೀನು ಮಾರಿದಿ ಹ್ಯಾಂಗ ಅದನ ||
ಇತ್ತ ಬೊಮ್ಮಯ್ಯನು ಲಿಂಗಮುದ್ರೆಯನೊತ್ತಿ ಇದ್ದನು ಕುರಿಯನು
ಪ್ರೀತಿಸುತ || ೩ನೆಯ ಚೌಕ ||

ಕೂಡಲೆ ಸೂಳಿಯು ಬಿಡದೆ ಬಯ್ಯತಾಳ ಬೇಗನೆ ಈಗ ಹೋಗಂತ |
ಸಿಡಿಲಿ ನಿನ್ನನು ಸುಡಲಿ ನೆತ್ತಿಯ ಬಡಿಲಿ ಅದೇ ಕುರಿ ಬೇಕಂತ |
ಬಲ್ಲಂಗ ಬಸವಿಯರೆಲ್ಲರು ಕೂಡಿ ಕುಳಿದಾರೊ ನನ್ನಯ ಕಿಮ್ಮತ್ತ
ಕೊಲ್ಲಲು ತಂದ ಕುರಿಯ ಮಾರಿದರ ದೇವಿಗೆ ಯೋಗ್ಯ ಹ್ಯಾಂಗ ಆದೀತ
ಸಿಟ್ಟಗೇರಿ ತಾ ಸೂಳಿ ಒಗಿತಾಳ ರೂಪಾಯಿದೇನ ನನಗ ಕಿಮ್ಮತ್ತ
ಗಟ್ಟಿ ಹೇಳತಾಳ ತಂದರ ಒಳಿತು ಇಲ್ಲದಿದ್ದರ ಬರಬ್ಯಾಡಂತ ||

||ಚಾಲ|| 

ತ್ರಿಪುರಾಂತಕ ದೇವರ ಗುಡಿ | ಬಂದ ಲಗುಮಾಡಿ | ಹಿಡಿದ ಲಿಂಗ ಮುದ್ರೆ |
ಬತ್ತಿದ ಕುರಿಯನು | ಬೊಮ್ಮಯ್ಯ ದಿಟ್ಟಿಸಿ ನೋಡ್ಯಾನ ||
ಹಿಡಿದಿದ್ದ ಕುರಿಯ ಬಿಡು ಅಂದಾ | ಮುಂದ ನೋಡಂದಾ |
ದೇವರ ಮುದ್ರೆಯ ತೋರಿಸಿದಾ | ಬೊಮ್ಮಯ್ಯ ಸಿಟ್ಟಿಗೇರಿದಾ ||
ಇಷ್ಟ ಮಾತ ಕೇಳಿ ಆ ವಿಟ | ಬಿಡಲಿಲ್ಲ ತನ್ನಯ ಹಟ |
ಸಿಟ್ಟು ತಡೆಯದೆ ಥಟ್ಟನೆದ್ದು ಕತ್ತಿ ಹಿಡಿದಾನ | ಬೊಮ್ಮಯ್ಯ ಅವತಾರ ತಾಳ್ಯಾನ |

||ಏರ||
ವೀರಭದ್ರನಂತೆ ಅವತಾರ ತಾಳಲು ವಿಟನ ರುಂಡ ಸಿಡಿದು
ಹೊರಬಿತ್ತು || ೪ನೆಯ ಚೌಕ ||
ವಿಟಪುರುಷನ ಘಟ ಪುಟದು ಬಿದ್ದಿತೋ ಗುಡಿಯ ಹೊರಗ ಗೋಡೆಗೆ ಸಿಡಿದು |
ಅಷ್ಟರಲ್ಲಿ ವಿಟಪುರುಷನು ಮಡಿದ ಸುದ್ದಿ ಕೇಳಿ ಸರ್ವರೂ ನೆರೆದ ||
ಊರೊಳಗಿನ ಜನರೆಲ್ಲರೂ ಕೂಡಿ ರಾಜನಲ್ಲಿ ಹೋಗಿ ಫಿರ್ಯಾದೆ |
ಕಿನ್ನರಿ ಬೊಮ್ಮಯ್ಯ ಕಟ್ಟಿದ ಕುರಿಯನು ವಿಟನು ಕೇಳಲು ಸಾಯಿಸಿದ ||
ಬಿಜ್ಜಳ ಸಹಿತ ಎಲ್ಲರೂ ಬಂದರು ಹಳಿಯಲು ಬಸವನ ಮನೆಯಿಂದ |
ನಿಜ ಸಂಗತಿಯನು ಅರಿಯದ ಬಸವನು ಗುಡಿಯೆಡೆ ಓಡುತ ತಾ ಬಂದ ||
ತಿಳಿಯದೆ ಎಲ್ಲರು ಬಲ್ಲಂತೆ ಬೈದರು ಇದೇನು ಬಸವನ ಶರಣರು |
ಕಳೆದ ಕುರಿಯನು ಹುಡುಕಲು ಬಂದ ವಿಟನನು ಕೊಂದನು ಈ ಶರಣ ||

||ಚಾಲ|| 

ಬೊಮ್ಮಯ್ಯ ಶರಣ ಇದು ಕೇಳಿ | ಶಾಂತಿಯನು ತಾಳಿ |
ಆದ ಕತೆಯನು ಹೇಳಿ ನಿಂತ ಕೈಮುಗಿದು | ತ್ರಿಪುರಾಂತಕನೇ ಸಾಕ್ಷಿ ಅಂದ ||
ಲಿಂಗಕ್ಕ ಕೇಳ್ತಾನ ಸ್ವತಃ ಭಕ್ತ ಮಹೇಶ ಸಾಕ್ಷಿಯ ನೀ ಹೇಳೋ |
ಸ್ವತಃ ಬಂದು ಇದ್ದದ್ದು ಸತ್ಯ ಹೇಳಂದಾ |
ಖಟ್ ಖಡಖಡ ಶಬ್ದ | ಬಂದ ವೀರಭದ್ರಾ |
ಏಳು ಸಮುದ್ರ ತುಳಿಯುವಂತೆ ಎದ್ದ | ಸಾಕ್ಷ ಹೇಳಿದ ಖರೇ ಇದ್ದದ್ದ ||
ಆವಾಗ ಎಲ್ಲರು ಗಾಬರಿಯಾಗಿ ನಿಂತರು ಶಿರಬಾಗಿ
ಬಸವ ಶರಣರ ಮಹಿಮೆ ಹೆಚ್ಚೆಂದು | ಕಾಲು ಹಿಡಿದಾರೊ ಬೊಮ್ಮಯ್ಯನದು |
||ಏರ|| ಕೂಸ ಶರಣನು ದಾಸನಾಗಿ ಸದಾ ಶರಣರ ಸ್ಮರಣೀಯ ಮಾಡುತ್ತಾ|| ೫ನೆಯ ಚೌಕ ||

ರಚನೆ : ಶರಣಪ್ಪ ವಾಲಿ
ಕೃತಿ :
ಶರಣಸ್ಮೃತಿ