ಕನ್ನಡ ಕಿತ್ತೂರ ಚನ್ನಮ್ಮ ರಾಣಿ |
ಧನ್ಯ ಧನ್ಯ ಮಾನಿನಿ|| ಪ ||

ಉನ್ನತ ಸ್ವಾತಂತ್ರ ಸ್ವಾಭಿಮಾನವನು |
ಚನ್ನಾಗಿ ಜನತೆಯ ಕಂಣ ಮುಂದೆ ಇಟ್ಟ |
ಹೆಂಣು ವಂಶಕೆಲ್ಲಾ ರನ್ನಗನ್ನಡಿಯಾಗಿ |
ರಣಭೇರಿ ಹೊಡಿಸಿದ ಮಾನ್ಯ ಮಹಾರಾಣಿ|| ೧ ||

ಸಂಸ್ಥಾನಕ ಸಂತತಿ ಇಲ್ಲದಕ |
ದತ್ತಕ ಮಾಡ್ಸಿ ವ್ಯವಸ್ಥಾನಡಿಸಿದ್ಲ |
ದತ್ತಕ ಸುಳ್ಳಂತ ಬ್ರಿಟಿಶರು ಬರೆದ |
ಪತ್ರಾ ನೋಡಿ ಪ್ರತಿಭಟನಾ ಮಾಡಿದಳು|| ೨ ||

ಊಟಕ ನಿನಗ ಪೋಟಗಿ ಕೊಡತೀವ ಕ್ವಾಟಿಯ
ಬಿಡ ಅಂತ ಬ್ರಿಟಿಶರ‍್ಹೇಳಿದಾಗ |
ನಿಷ್ಟಾವಂತಿ ತಾ ದಿಟ್ಟತನದಿಂದ |
ಘಟ್ಟಿಗಳಾಗಿ ಕೊಟ್ಟಾಳ ಉತ್ತರ|| ೩ ||

ಚಾಕರಿ ಮಾಡುವ ಥ್ಯಾಕರೆ ಸಾಹೇಬ |
ಕಾಕ ಬುದ್ಧಿಯಿಂದ ಕಾರಭಾರ ನಡಿಸಿದ್ದ |
ಆ ಕಾಲಕ್ಕ ಸಾಕಷ್ಟ ಸೈನ್ಯ ಕೂಡ್ಸಿ |
ಬೇಕಂತ ಆತನ ಸೊಕ್ಕ ಮುರಿಸಿದಳು|| ೪ ||

ತಂಡ ತಂಡ ಇಂಗ್ಲೆಂಡ ದಂಡ ಬಂತ ಗುಂಡ
ಹಾರಿಸುತ ವಾಡೇದಮ್ಯಾಗ
ಕಂಡ ಆಗ ಗಂಡಗುದರಿ ಏರಿ ಬಂದ್ಲ |
ಚಂಡಿ ಚೌಡಿಯಂತೆ ಖಡ್ಗ ಹಿರಿದಳು|| ೫ ||

ವೈರಿಗಳ ಮಕ್ಕಳು ಶರೆ ಸಿಕ್ಕರವರ‍್ನ |
ಕರುಣದಿಂದ ಜೋಪಾನ ಮಾಡಿಸಿ |
ಯುರೋಪ ಖಂಡಕ ಪರತ ಕಳಿಸಿಕೊಟ್ಟ
ಕೀರ್ತಿ ಪಡೆದಳು ನೀತಿವಂತಿಯು|| ೬ ||

ಸ್ವಾಭಿಮಾನ ಸ್ವಜನಾಭಿಮಾನ
ನಾಡಾಭಿಮಾನ ದೇಶಾಭಿಮಾನಕಾಗಿ |
ನಶ್ವರ ಶರೀರ ಮೀಸಲಿಟ್ಟಳೆಂದು |
ಹುಲಕುಂದ ಭೀಮೇಶ ಸಾರಿದನ್ಹಿಂಗ|| ೭ ||

ರಚನೆ : ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು