ವೀರರಾಣಿ ಕಿತ್ತೂರ ಧೀರಚನ್ನಮ್ಮ ತಾ ಶೂರಳಾಗಿ |
ಪಡಕೊಂಡ್ಲ ಕೀರ್ತಿ |
ನಾರಿ ಮಣಿಯರಲ್ಲಿ ಶೌರ್ಯ ಧೈರ್ಯವಂತಿ ಯಾರಿಗೆ |
ಹೆದರದ ಎದೆಗಾರ್ತಿ|| ಪ ||

ಕಾಗತಿ ದೇಶಾಯರ ಮಗಳು ಭಾಗ್ಯವಂತಿಯು ಕಿತ್ತೂರ |
ಅರಸರಿಗೆ ಸೊಸೆಯಾಗಿ |
ಆಗಿನ ಕಾಲದ ಅಗಣಿತ ವೈಭವದ ಮಲ್ಲಸರ್ಜನ |
ಧೊರಿಯ ಸತಿಯಾಗಿ ||
ಸುಂದರಾಂಗಿ ಸದ್ಗುಣೆ ಸಂಪನ್ನಿ ರಾಜಕಾರಣದಲ್ಲಿ ಮಿಗಿಲಾಗಿ |
ಸಂದೇಹವಿಲ್ಲದೆ ಮುಂದೆ ಸಾಗತಿದ್ಲ ಬಂದ ಪ್ರಸಂಗಕ್ಕೆ ಎದುರಾಗಿ |
ಪತಿಯು ಸುತರು ಎಲ್ಲಾ ಗತಿಸಿ ಹೋದಮೇಲೆ ಸಂಸ್ಥಾನ |
ಕಾರಭಾರಕ್ಕೆ ಹೊಣೆಯಾಗಿ |
ಅತಿ ಮಹತ್ವದ ಪ್ರತಿ ಕೆಲಸದಲ್ಲಿ ಸ್ವತಾ ನೋಡುವಳು ಒಳಿತಾಗಿ ||

||ಚಾಲ|||

ದೇಶಗತಿಗೆ ವಾರಸ ಇಲ್ಲದಕ ಮಸಲತ ನಡದೀತ |
ದತ್ತಕ ತಗೊಳ್ಳುದಕ ||
ದ್ವೇಷ ಹುಟ್ಟಿ ಸಂಸ್ಥಾನ ಆತ ಒಡಕು ಮೋಸಗಾರರಿಗೆ
ಸಾಧಿಸಿತ ಸಮಯಕ್ಕ ||
ಆದ ಮಜಕೂರ ತಿಳಸತಿದ್ರ ಚೊಕ್ಕ ಭೇದ ನೀತಿಯ |
ಬ್ರಿಟಿಷ ಸರಕಾರಕ್ಕ |

||ಏರು||

ಕಾರಣ ತಿಳಕೊಂಡ ಬಿಳಿ ಮೋರೆಯ ಇಂಗ್ಲಿಷರು |
ಧಾರವಾಡಕ ತಿಳಸತಿದ್ರ ಸರ್ವ ವಾರ್ತಿ|| ೧ ||

ಮಾಸ್ತ ಮರಡಿ ಗೌಡರ ಮಗನ ದತ್ತಕವಾಗಿತ್ತ ಮದಲ |
ಇತ್ಯರ್ಥವಾಗುದು ಉಳದಿತ್ತಸಿಲಕ |
ಪೂರ್ತಿಯಾಗುವವರೆಗೆ ಮತ್ತೊಬ್ಬ ಅಧಿಕಾರಿ ಕೊಟ್ರ |
ಕಿತ್ತೂರ ಕಾರಭಾರದ ಸಹಾಯಕ್ಕ ||
ಆತನ ಕೇಳಿದಲೆ ಕೆಲಸ ಪ್ರತಿಯೊಂದ ನಡಿಸಬಾರದಂತ |
ನೋಟೀಸ ಕಳಿಸಿದ್ದರಾಗ ದರಬಾರಕ |
ಕಿತ್ತೂರ ಕೇಸರಿ ಕೆಚ್ಚದಿ ಚೆನ್ನಮ್ಮ ರಾಣಿಗೆ |
ಆಶ್ಚರ್ಯವಾದೀತ ಆ ಕ್ಷಣಕ ||
ತಡವಿದ ಮಿಡಿನಾಗರ ಹಾವೆ ಹೆಡೆದೆಗೆದಂತೆ ರಾಣಿ |
ಕಿಡಿಕಿಡಿಯಾದಳು ಕ್ರೋಧ ತಡೆಯದಕ |
ಗಡಿಬಡಿಸಿ ದರಬಾರದ ಪುಡಾರಿಗಳನ್ನೆಲ್ಲಾ ಕರಿಸಿ |
ನಡಿಶ್ಯಾಳ ವಿಚಾರ ಮಾರ್ಗ ಹುಡುಕುದಕ ||

||ಚಾಲ|||

ಪ್ರತಿಯೊಬ್ಬರು ಹಾಕ್ಯಾರ ಹಂಚಿಕಿ |
ಸ್ವಾತಂತ್ರಕ ಬಂದೀತ ಧಕ್ಕಿ ||
ಸಧ್ಯ ತಯಾರಾಗಬೇಕ ಬಹಳ ಜೋಕಿ ||
ಮದ್ಗುಂಡ ತೋಫ ತುಬಾಕಿ |
ಸಿದ್ಧಮಾಡಿಕೊಂಡ ಇಡಬೇಕ ಹುಡುಕಿ ||

||ಏರು||

ಫಿರಂಗ್ಯಾರ ದಂಡಿನ ಕೂಡ ಹುರಿಪಿಲೆ ಹೋರಾಡುವ ತರುಣರಿಗೆ |
ಬರಬೇಕಂತಾಳ ಸ್ಫೂರ್ತಿ|| ೨ ||

ಲಡಾಯಿ ತಯ್ಯಾರಿ ಸುದ್ದಿಗಡ ತಿಳಿಸಿದರು ಗುಪ್ತಚಾರರು |
ಥ್ಯಾಕರೆ ಸಾಹೇಬಗ |
ಕೂಡಿಸಿ ದಂಡ ಗರಗದ ಮಾರ್ಗವಾಗಿ ಕಳಿಸಿದ ಭರಾಟ |
ಬಂತ ಖಬರಿಲ್ಲದಂಗ ||
ಗಂಡುಗಲಿ ಪುಂಡಕಿತ್ತೂರನಾಡ ಪುಂಡರು ಇಂಗ್ಲೆಂಡದ |
ದಂಡಿಗೆ ಹೆದರದೆ ಸವದರಾಗ |
ಓಡಿ ಹೋದೀತ ಪೌಜ ಕೆಲವರು ಸೆರೆಯಾಳಾದ್ರ ಚಿಕ್ಕ ಮಕ್ಕಳು |
ಇದ್ರ ಅದರೊಳಗ ||
ಸಂಣವರನ್ನ ಚನ್ನಮ್ಮತಾಯಿ ಚೆನ್ನಾಗಿ ಜೋಪಾನ ಮಾಡಿ |
ಕರಕ್ಕೊಂಡೋಗರಂತ | ಪತ್ರ ಬರದ್ಲ ಬೇಗ |
ಧನ್ಯಧನ್ಯಳೆಂದು ಮಾನ್ಯತೆಕೊಟ್ಟರು ಹನ್ನೊಂದ್ಹಳ್ಳಿ |
ಇನಾಮ ಕೊಡತೀವಂದ್ರ ಲಗ್ಗ ||

||ಚಾಲ||

ಸಂಧಾನಕ ಥ್ಯಾಕರೆ ಸಾಹೇಬ ಬಂದಾ |
ಮುಂದೆ ಬಿಳಿಯ ನಿಶಾನೆ ಹಿಡದಿದ್ದಾ ||
ಅಮಟೂರ ಬಾಳಾ ಸಾಹೇಬ ನೋಡಿದಾ |
ಜಾಂವಿಗಿ ಬಂದೂಕಿಲೆ ಥ್ಯಾಕರೆನ್ನ ಹೊಡದಾ ||
ಉರಳಿ ಕುದರಿ ಮ್ಯಾಲಿಂದ ನೆಲಕ ಬಿದ್ದಾ |
ಚೂರಚೂರ ಮಾಡ್ಯಾರ ಕಡಕಡದಾ ||

||ಏರು||

ಗೋರಾ ಲಷ್ಕರ ಫರಾರಿಯಾದಿತು ಧಾರವಾಡತನಕ |
ಮಾಡಲಿಲ್ಲ ಸುಸ್ತಿ|| ೩ ||

ಧಾರವಾಡದಿಂದ ಚಾಪ್ಲೀನ ಸಾಹೇಬ ತನ್ನ ಸೈನ್ಯ ತಗೊಂಡ |
ಕಿತ್ತೂರಿಗಿ ಬಂದಾ |
ಕರ್ ಕರ್ ಹಲ್ಲತಿಂದ ಹುರದ ಬಡಿತೀನಂದ ಅರ್ಭಾಟ ನಡಿಸಿದ |
ದರವಾಜ ಮುಂದಾ ||
ಕಿಲ್ಲೇದ ಕದಾ ಇಪ್ಪತ್ತ ನಿಮಿಷದೊಳಗ ತಗಿಯದಿದ್ರ ತೋಪ |
ಹಾರಸುವೆನೆಂದು ಹೆದರಿಸಿದಾ |
ಅಲ್ಲಿಂದ ಬಾಗಿಲ ತಗದ ಬಲ್ಲಾಂಗ ನಡದೀತ ಯುದ್ಧ ಎಲ್ಲಾ ಕಡೆ
ಹೆಣಗಳು ಬಿದ್ದಾ ||
ತನ್ನಕಡೆಯ ಜನರು ಫಿತೂರಿಯಾದದ್ದು ತಿಳಿದ ಇನ್ನ ಮೇಲೆ ನಮಗೆಲ್ಲಾ
ಜಯ ಇಲ್ಲಂದಾ |
ಮಾನವಂತಿ ಚನ್ನಮ್ಮ ಮೇಣಿದೊಳಗ ಕುಳಿತ ತಾನೆ ಹೊರಟಳು
ಕಿತ್ತೂರಿಂದಾ ||

||ಚಾಲ|||

ಬೈಲ ಹೊಂಗಲದಲ್ಲಿ ಖೈದಿಯಾಗಿ ಉಳದಾ |
ಕೆಲವು ದಿವಸದ ಮೇಲೆ ಅಲ್ಲಿ ಶರೀರಕಳದಾ ||
ಹೆಣ್ಣು ಮಕ್ಕಳ ವಂಶಕ್ಕೆ ಯಶತಂದಾ |
ಧನ್ಯ ಸ್ವಾತಂತ್ರದ್ದು ತೋರಿಶಾಳ ಬಿರದಾ ||
ಮುಂದೆ ಸ್ವರಾಜ್ಯ ಬೀಜವು ಬೆಳದಾ ||
ಇಂದಿನವರೆಗೆ ಬಂದಿತ ಸುಳಿದೆಗೆದಾ ||

||ಏರು||

ಸಾರ ಹೇಳಿದ ಕವೇಸೂರ ಹುಲುಕುಂದ ಭೀಮ ಊರ ಕಿತ್ತೂರಕಾಳಗದ ಕತಿ ||


ರಚನೆ :
ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು