ಕನ್ನಡ ನಾಡಿನ ಅಧಿಕಾರ ಕನ್ನಡತಿ ಮಾಡತಿದ್ಲ |
ಫಿರಂಗ್ಯಾರದೇನ ಹೋಗತಿತ್ತ ಗಂಟಾ |
ಕನ್ನಡ ಸಂಸ್ಥಾನ ಮೇಲೆ ಕಾರಭಾರ ಮಾಡಲಿಕ್ಕೆ ಬಂದ |
ಥ್ಯಾಕರೆ ಸಾಹೇಬ ಹೊಡೆದ ಲಾಗಾಟಾ|| ಪ ||

ಹನ್ನೆರಡ ಜನ ಅರಸರು ಇನ್ನೂರ ಮೂವತ್ತೊಂಭತ್ತ ವರುಷ |
ಚೆನ್ನಾಗಿ ರಾಜ್ಯ ಆಳಿದರು ಕಿತ್ತೂರಿಗಿ |
ಅನ್ಯರ ಕಾಟಯಿಲ್ಲ ಅನ್ಯಾಯ ಏಟು ಇಲ್ಲ |
ಸನ್ಮಾರ್ಗದಿಂದ ಸುಖ ರೂಪವಾಗಿ ||
ಮೂನ್ನೂರೈವತ್ತೆಂಟ ಹಳ್ಳಿ ಎಪ್ಪತ್ತೆರಡು ಕೋಟಿಗಳು |
ಉತ್ಪನ್ ಏಳ ಲಕ್ಷಕ್ಕಿಂತ ಮಿಗಿಲಾಗಿ
ಧನ ದೌಲತ್ತ ಆನೆ ಒಂಟಿ ಕುದುರಿಗಳು ಹತ್ತಾರ ಬಂದೂಕ |
ತೋಫ ಮೂಲಿ ಮೂಲಿಗಿ ||
ಕನ್ಯ ಶಿರೋಮಣಿ ಚೆನ್ನಮ್ಮರಾಣಿ ಆಳತಿದ್ಲ ಸಂಸ್ಥಾನಕ |
ವಾರಸ ಪುತ್ರ ಇಲ್ಲದ್ದಕ್ಕಾಗಿ
ಸನ್ ಹದಿನೆಂಟನೂರು ಇಪ್ಪತ್ನಾಲ್ಕನೆ ಇಸ್ವಿಯಲ್ಲಿ ದುರಾಶೆ |
ಹುಟ್ಟಿತ ಆ ಫಿರಂಗ್ಯಾರಿಗಿ ||
ಹನ್ನೊಂದ ಹಳ್ಳಿ ಇನಾಮ ಹಾಕಿ ಉಂಣಲಿಕ್ಕೆ ಕೊಡತೀವ |
ಬಾಕಿದೆಲ್ಲ ಬಿಡ ಅಂದ್ರ ಚನ್ನಮ್ಮಾಜಿಗಿ |
ನನ್ನಿ ಸಂಸ್ಥಾನ ಮೇಲೆ ನಿಮ್ಮದೇನ ಹಕ್ಕ ಅಂದ್ಲ |
ಹೆಣ್ಣಮಗಳು ಅಂಜಲಿಲ್ಲ ಬ್ರಿಟಿಷರಿಗಿ ||

||ಚಾಲ|||

ಥ್ಯಾಕರೆ ಸಾಹೇಬ ಕೇಳಿ ಕೋಪಾದಾ
ನೌಕರಿ ಮೇಲೆ ಧಾರವಾಡಕ ಇದ್ದಾ ||
ಸಾಕಷ್ಟ ಸೈನ್ಯ ಕೂಡಿಸಿದಾ |
ಭೀಕರ ಯುದ್ಧ ಹೂಡಿದಾ ||
ಬ್ಲಾಕ ಕಪ್ತಾನನ್ನ ಕರಸಿದಾ |
ಅಕ್ಟೋಬರಕ ಕಿತ್ತೂರಿಗಿ ಬಂದಾ ||

||ಏರು||

ಘನ್ ಮಸೀನ್ ತೋಫ ಬ್ಯಾನಿಟ್ ರಾಯಫಲ್ ಧರ್ಪ |
ಕಣ್ಣ ಮುಚ್ಚ ತಿದ್ದುವ ನೋಡಿ ಆರ್ಭಾಟಾ|| ೧ ||

ತೋಫ ಹಚ್ಚಿ ಕೋಟಿಯಲ್ಲಾ ಸಾಪ ಮಾಡಿ ಬಿಡಬೇಕಂತ |
ವ್ಯಾಪ ಹಾಕಿದ್ದರು ಆ ಸೈನಿಕರ |
ಇಪ್ಪತ್ತ ನಿಮಿಷದೊಳಗೆ ಕೋಟಿ ಬಾಗಿಲ ತಗಿಯದಿದ್ರ |
ಹಲ್ಲಾ ಮಾಡತೀವಂತ ಸಾರಿದರ ||
ತಡಾ ಮಾಡದೆ ಲಢಾಯಿ ನಡೆಸಿ ಸಿಡ್ಲ ಬಡದಂಗ ಘುಡಿ ಘುಡಿಸಿ |
ನಡು ಬಾಗಿಲಕ್ಹೊಡದ ಪುಡಿ ಮಾಡ್ಯಾರ |
ಧಡಬಡಿಸಿ ಒಳಗಡೆ ನಡದಿತ್ತ ಫಿರಂಗ್ಯಾರ ದಂಡ ಬಿಡಲಿಲ್ಲ |
ಬಾಗಿಲ ಕಾಯುವ ಸೈನಿಕರ ||
ಪುಂಡ ಕಿತ್ತೂರ ನಾಡ ಗಂಡುಗಲಿಗಳು ತಂಡ ತಂಡ |
ಬಂದ ಮುಂದ ನಿಂತಾರ |
ಹೆಂಡ ಇಂಗ್ಲೀಷರ ರುಂಡಾ ಚಂಡಾಡಿ ಬಿಡಬೇಕಂತ |
ಗಂಡುಗುದರಿ ಏರಿ ಬಂದ್ಲ ಚನ್ನಮ್ಮನವರ ||
ಧ್ಯಾಕರೆ ಸಾಹೇಬ ಹೂಂಕರಿಸಿ ತಕ್ಷಣ ಕುದರಿ ಏರಿ |
ಧಕ್ ಧಕ್ ಆಗಿ ಬಂದ ಬೇಖಬರ
ಆ ಕಾಲದ ರಾಣಿಯವರ ಮೈಗಾವಲಿಗೆ ನಿಂತಿದ್ದ |
ಅಮಟೂರ ಬಾಳಾ ಸಾಹೇಬ ಮುಸಲ್ಮಾನ ವೀರ ||

||ಚಾಲ|||

ವೀರಮಾತೆಯ ಆಜ್ಞೆ ಪಡಕೊಂಡಾ |
ಗುರಿ ಹಿಡಿದ ಹಾರಿಶಾನ ಗುಂಡಾ ||
ಜಾಂವಿಗಿ ಬಂದೂಕನ ಸಪ್ಪಳ ಮನಗಂಡಾ |
ಢಂ ಅಂತ ಸಪ್ಪಳಾತ ಗಡಾ ||
ಥ್ಯಾಕರೆ ಸಾಹೇಬಂದು ಹಾರಿತ ರುಂಡಾ |
ದಿಕ್ಕೆಲ್ಲ ಓಡೀತ ಅವನ ದಂಡಾ ||

||ಏರು||

ಸಂಣ ಸಂಣ ಬ್ರಿಟಿಶ ಹುಡುಗರು ಸೈನಿಕ ಹತ್ತೊಂಭತ್ತ ಜನರು |
ಶರಿಯಾಳಾದ್ರ ಉಳಿದವರದು ಹಾರಿತ ಚಟ್ಟಾ
ಮಾತ ಮಾತಾಡುದರೊಳಗ ಸೋತ ಸುದ್ಧಿ ಹೋತ ಆಗ |
ಘಾತ ಆಯ್ತು ಕೇಳಿ ಬಿಳಿ ಮೋತಿ ಜನಕ |
ಕೂಡಕೊಂಡ ವಿಚಾರ ನಡೆಸಿ ಚತುರಂಗ ಮಾರ್ಬಲ ಕೂಡಿಸಿ |
ವತ್ತರ ಮಾಡಿ ಕಳಿವ್ಯಾರ ಲಢಾಯಕ ||
ಸುತ್ತುಕಡೆ ಶಸ್ತ್ರಾಸ್ತ್ರದಲ ಮತ್ತೊಂದು ಯೂರೋಪಿಯನ್ನದಲ |
ತೋಫದಲ ಕುದರಿ ಸವಾರರು ಖಡಕ ||
ಕಿತ್ತೂರ ಸಂಸ್ಥಾನವೆಲ್ಲಾ ಮುತ್ತಿಗಿ ಹಾಕಿದರು ಆಧುನಿಕ |
ಪದ್ಧತಿ ಯುದ್ಧ ಮಾಡುದಕ ||
ಹತ್ತೀತ ಕಾಳಗ ಸನ್ ಹದಿನೆಂಟನೂರೂ ಇಪ್ಪತ್ತಾಲ್ಕ |
ಡಿಶೆಂಬರ ಎರಡನೆ ತಾರೀಖ |
ರಕ್ತದ ಕಾವಲಿ ಹರದ ಸತ್ತ ಹೆಣ ತೇಲಿಹೋಗಿ |
ಸಂಸ್ಥಾನ ಪತನವಾಯ್ತು ಒಂದ ದಿವಸಕ್ಕ ||
ನಾಲವತ್ತಾರ ವಯಸ್ಸಿನ ಚನ್ನಮ್ಮ ರಾಣಿಯವರನ್ನ |
ಸ್ಥಾನಬದ್ಧಮಾಡಿ ಇಟ್ರ ಬೈಲಹೊಂಗಲಕ |
ಅಲ್ಲಿಂದ ಆರ ವರುಷ ಅದೇ ಸ್ಥಾನದಲ್ಲಿ ಇದ್ದ |
ಲಿಂಗದೊಳಗ ಆದರು ಕಡಿಕಾಲಕ ||

||ಚಾಲ|||

ಸ್ವಾತಂತ್ರಕಾಗಿ ಹೋರಾಡಿ |
ಪತಿವ್ರತಿ ಹೋದಳು ಭವದೂಡಿ ||
ಕನ್ನಡ ನಾಡಿಗೆ ತನ್ನ ಪ್ರಾಣ ನೀಡಿ |
ಧನ್ಯವಂತಿ ಹೋದಳು ದೇವರಕಡಿ ||
ಕಲ್ಮಠದಲ್ಲಿ ಸಮಾಧಿಮಾಡಿ |
ಅಲ್ಲಿ ಸ್ವಾಮಿಗಳು ಕಟ್ಟಿಶ್ಯಾರ ಗುಡಿ ||

||ಏರು||

ಚನ್ನಮ್ಮರಾಣಿ ಇತಿಹಾಸ ಮಂಡಲ ಸಂಣ ಕೂಸ |
ಹುಲಕುಂದ ಭೀಮನ ಪದ ರುಚಿ ಕಟ್ಟಾ|| ೩ ||

ರಚನೆ : ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು