ಅಲ್ಲಿ ಅರಿಷಣ ನೆಲ್ಲು ಬೆಳೆಯುವ ಮಲ್ಲಾಡವೆನಿಸಿದ ಕಿತ್ತೂರು |
ಮಲ್ಲಸರ್ಜ ಧೊರಿಯ ನಲ್ಲಳಾದಂಥ ಬಲ್ಲಿದ ಚನ್ನಮ್ಮನ ಕಿತ್ತೂರು|| ಪ ||
ಕಟ್ಟಕಥೆಯಲ್ಲಿ ಕಟ್ಟಡವಿಯಲ್ಲಿ ಕಟ್ಟಿದ ಕೋಟಿಯು ಬಂಧೂರ |
ನಟ್ಟ ನಡುವೆ ಉತ್ಕೃಷ್ಟವಾದ ಅರಮನಿ ಭಟ್ಟಂಗಿ ಹೊಗಳುವಂತ ದರ್ಬಾರ ||
ರತ್ನಖಚಿತ ಸಿಂಹಾಸನ ಸುತ್ತು ಕಡೆ ಮುತ್ತಿನ ತೋರಣ ಭರಪೂರ
ರತ್ನಗಂಬಳಿಯ ಮೇಲೆ ನರ್ತನ ಮಾಡುವ ನರ್ತಕಿಯರದತಿ ಶಡಗರ |
ಛತ್ರ ಚಾಮರ ಅಷ್ಟೈಶ್ವರ್ಯದಿಂದ ಘಟ್ಟಿಗರಾಳತಿದ್ರ ಅರಸರ |
ಧಾತ್ರಿಯೊಳಗ ಸತ್ಪಾತ್ರರೆನಿಸಿಕೊಂಡ ಕೀರ್ತಿ ಗಳಿಸಿಕೊಂಡಿದ್ರ ಪೂರ ||
ಮದ್ದು ಗುಂಡ ಯುದ್ಧ ಸಾಮಗ್ರಿ ತುಂಬಿದಂಥ ಇದ್ದುವು ಖೋಲಿಗಳುತಯ್ಯಾರ |
ಬದ್ಧ ಖಜಾನಿ ಸಮೃದ್ಧಿ ಹೊಂದಿತ್ತು ಇದ್ದಲಿ ಬಿದ್ದಂತೆ ಮಸ್ತ ಬಂಗಾರ ||

||ಚಾಲ|||

ಇಪ್ಪತ್ತಾಲ್ಕ ಲಕ್ಷ ರೂಪಾಯಿತನ ಇದ್ದುವ ಕಿಮ್ಮತ್ತಿನ |
ಮುತ್ತುರತ್ನಾಭರಣಾ ||
ಹದಿನಾರ ಲಕ್ಷ ರೂಪಾಯಿ ನಗದ ಹಣಾ ||
ಅನೇಕ ಆನೆಗಳು ಮೂರುಸಾವಿರ ಕುದರಿ ಒಂಟಿ ಎರಡ ಸಾವಿರ |
ಲೆಕ್ಕಿಲ್ಲದಷ್ಟಧನಾ ||
ಜಾಂವಿಗಿ ಬಂದೂಕ ಐವತ್ತಾರ ಪೂರ್ಣ ||
ಕಬ್ಬಿಣ ಕಂಚಿನ ಕೋಪ ಮೂವತ್ತಾರ ವಿಷಗತ್ತಿ ಇಪ್ಪತ್ತಾರ |
ಬಾಲೆಗಳು ಗುರಾಣಿ ||
ಹತ್ತು ಬರಾಸ ಮದ್ದು ತುಂಬಿದ ಕೋಣೆ ||

||ಏರು||

ಎಲ್ಲಿ ನೋಡಿದಲ್ಲಿ ಬಲಾಢ್ಯ ವೀರರು ನೆಲೆಸಿದಂಥಸಲೆ ಕಿತ್ತೂರು ||
ಎಷ್ಟೋ ಜನರು ಮುಟ್ಟಾಳುಗಳು ಬಂದಬಂದ ಕಾಟಕಾಯಿ |
ಎಬ್ಬಿಸತಿದ್ರ ಬಲ್ಲಾಂಗ |
ಹೊಟ್ಟೆಕಿಚ್ಚಿನಿಂದ ಕೋಟೆ ತಕ್ಕೊಳ್ಳುವ ಗುಟ್ಟ |
ಇಟ್ಟಕೊಂಡ ಮನದೊಳಗ ||
ಟಿಪ್ಪುಸುಲ್ತಾನ ಬಂದ ಭೂಪ ಮಲ್ಲ ಸರ್ಜನ ತಪಾಸ ಮಾಡಿ |
ಓದ ಇಟ್ಟ ಕೊಪ್ಪಳದೊಳಗ |
ಅಪಾರ ಕಷ್ಟಸಹಿಸಿ ಭೂಪಾಲ ಮರ ಮರಗಿ ತಾಪತ್ರಯ |
ಸೋಸಿದ ಆಗ ||
ಉಪಾಯದಿಂದ ಅಲ್ಲಿಂದ ಸಫಲವಾಗಿ ದಾಟಿ ಬಂದ |
ಜೋಪಾನವಾಗಿದ್ದ ಕಿತ್ತೊರೊಳಗ |
ಕಪಟತನದಿ ಪಟವರ್ಧನರು ಮತ್ತೆ ಹಿಡಿದ ಸ್ಥಾನ ಬದ್ಧ |
ಮಾಡಿಟ್ರ ಮುಧೋಳದೊಳಗ ||
ಬಹು ಚಿಂತೆಯಿಂದ ಮರಗಿ ಕ್ಷಯರೋಗಕ್ಕ ತುತ್ತಾಗಿ |
ಇಹಲೋಕಯಾತ್ರೆ ಮುಗಿಸಿದರು ಬೇಗ |
ಶಿವಲಿಂಗ ರುದ್ರಪ್ಪನೆಂಬ ಕೊನೆಯ ದೇಸಾಯರನ್ನ ಕಿತ್ತೂರಿಗಿ |
ಪಟ್ಟಗಟ್ಟದ್ರ ಲಗ್ಗ ||
ಬ್ರಿಟೀಶ ರಾಜ್ಯ ಆಗ ಪಸರಿಸಿತ್ತ ನಾಡೊಳಗ ನದರ |
ಬಿದ್ದಿತ ಕಿತ್ತೂರ ಮ್ಯಾಗ |
ಜಟಿಲ ಪ್ರಶ್ನೆಯಿಂದ ಧೊರೆಗಳು ತೀರಿಕೊಂಡ್ರ ಕಾರಸ್ಥಾನ |
ಇಂಗ್ಲೀಷರದು ಒಳಗಿಂದೊಳಗ ||

||ಚಾಲ|||

ಸಂಸ್ಥಾನಕ ಸಂತತಿ ಇಲ್ಲದಕ | ದತ್ತಕ ತಗೊಳ್ಳುದಕ |
ಮಾಡಿದ್ರ ಹರಕತ್ತಾ ||
ಪೂರ್ತಿ ಸಂಸ್ಥಾನ ನುಂಗ ಬೇಕಂತಾ ||
ಚನ್ನಮ್ಮಾಜಿಗೆ ಬಂದೀತ ಕೋಪ | ಆಗಿ ಸಂತಾಪ |
ದರಬಾರ ಕರೆಯುತಾ ||
ಮುಂದಿನ ಮಾರ್ಗವನ್ನು ಹುಡುಕುತ್ತಾ ||
ಕೊನೆಯ ನಿರ್ಣಯಕ್ಕ ಬಂದಾರ | ಸರ್ವ ಜನರ |
ಯುದ್ಧ ಮಾಡುದು ಖಚಿತಾ ||
ಪರತಂತ್ರದೊಳಗ ಬೀಳಬಾರದಂತಾ ||

||ಏರು||

ಉಲ್ಲಾಸದಿ ಹೇಳ್ಯಾಳ ನಾರಿ ಖುಲಾಸ ಇದೊಂದು ಸಾರಿ |
ಎಲ್ಲಾರು ಕೂಡಿ ಉಳಿಸಿಕೊಳ್ರಿ ಕಿತ್ತೂರು|| ೨ ||

ತಾಯ್ನಾಡ ಸೇವೆಗೆ ಕಾಯ ಮೀಸಲಿಟ್ಟ ತಯಾರಾದ್ಲರಾಣಿ ಆಕ್ಷಣಕ |
ಧೈರ್ಯದಿಂದ ಬಲಗೈಯಲ್ಲಿ ಖಡ್ಗ ಹಿಡಿದ್ಲ ಧ್ಯೇಯ
ಸಾಧಿಸುವ ಗೋಸ್ಕರಕ ||
ಗಂಡುಗುದರಿ ಹತ್ತಿಕೊಂಡ ಇಂಗ್ಲಡದ ದಂಡಿನರುಂಡ ಚಂಡಾದುದಕ |
ಗಂಡುಗಲಿಗಳ ಪುಂಡ ರಕ್ಕಸರ ಹಿಂಡು ಖಂಡಿತ ತುಂಡರಿಸುದಕ ||
ಕೆಲವು ಕಾಲದಲ್ಲಿ ಕೊಲ್ಮಿಂಚಿನಂತೆ ಸುದ್ದಿ ಕಲೆಕ್ಟರಗೆ |
ಮುಟ್ಟಿತ ಧಾರವಾಡಕ |
ಪೊಲಿಟಿಕಲ್ ಏಜೆಂಟ ಥ್ಯಾಕರೆ ದಲತಕ್ಕೊಂಡ ಬಂದ |
ಕಲಿತನದಿಂದ ಕಾದಾಡುದಕ ||
ಬಾಳಾಸಾಹೇಬ ಅಮಟೂರ ಹಳಬ ಒಬ್ಬ ಕಳಾ ಹಿಡಿದ |
ತಾಳಲಾರದೆ ಒಗದಾನ ಬಂದೂಕ |
ವ್ಯಾಳೆ ಒದಗಿ ಬಂತ ಗೋಳಿ ಥ್ಯಾಕರೇಗ ಕುಂತ ತಳಮಳಸಿ |
ಬಿದ್ಧ ಭೂಮಂಡಲಕ ||

||ಚಾಲ|||

ಉಳಿದವರು ಹಿಡದ ತಲವಾರ | ಕಡದ ಚೂರ ಚೂರ |
ಮಾಡಿದರು ಹೆಣಾ ||
ಸಾಹೇಬಂದು ಹತ್ತದಾಂಗ ಕೂನಾ ||
ಕ್ಯಾಪ್ಟನ್ ಬ್ಲಾಕ್ ಇಲಿಯಟ್ ಸ್ವಿವನ್‌ಸನ್ |
ಇಂಗ್ಲೀಷ ಪ್ರಮುಖ ಜನ | ಮುಚ್ಚಿದರು ಕಂಣಾ ||
ಕಿತ್ತೂರ ಕೆಚ್ಚೆದೆಯ ವೀರರಿಗೆ ಜಯ ಪೂರ್ಣಾ ||
ವಾರ್ತಿ ಕೇಳಿ ಚಾಪ್ಲಿನ್ ಧೊರೆ ಬಂದ |
ಲೆಕ್ಕಿಲ್ದ ಸೈನ್ಯ ತಂದ | ಕೋಟಿ ಹಾರಿಸಿದಾ |
ಚನ್ನಮ್ಮ ರಾಣಿನ್ನ ಶರಿ ಹಿಡದೊದಾ ||

||ಏರು||

ಬೈಲ ಹೊಂಗಲದಲ್ಲಿ ಪ್ರಾಣ ಬಿಟ್ಟಳೆಂದ ಹುಲಕುಂದ ಭೀಮ |
ಪತನವಾಯ್ತ ಆಗ ಕಿತ್ತೂರು|| ೩ ||

ರಚನೆ : ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು