ನಿರಾಕಾರ ರೂಪೀದೇವನೆ ನರನ ರೂಪ ಧರಿಸಿ ಧರೆಯ
ನರರು ಮಾಡಿದ ಪಾಪಕರ್ಮದ ಕಟ್ಟಿನ ಫಲವನ್ನು |
ಮಾಡಿದ ಪಾತಕಿ ತಪ್ಪನು ಒಪ್ಪಿ ಬೇಡಿದ ಕ್ಷಮೆಯ ಜನರನು ಅಪ್ಪಿ
ತಾನೇ ಭೋಗಿಸಿ ಮರಣವನಪ್ಪಿದ ಏಸುಕ್ರಿಸ್ತನು || ೧ ||

ಮೇರಿ ಎಂಬುವ ಮಹಾತಾಯಿಯ ವರಿಸಲು ಒಪ್ಪದ ಜೋಸಫ
ಮಹಿಮನ ಮದುವೆಯ ಮೊದಲೇ ಏಸುಕ್ರಿಸ್ತನ ಜನ್ಮಯೋಗವನು |
ಜನರುದ್ಧಾರಕೆ ಜನಿಸುವನೆಂದು ಜಗದ ಜನಕೆ ಇದೇ ಗುರ್ತೆಂದು
ಕೋಟಿ ಸೂರ‍್ಯರ ಮಿಂಚಿನ ಪ್ರಭೆಯನು ಬೆಳಗಿಸಿ ಭೂಮಿಯನು || ೨ ||

ಮೇರಿ ಜೋಸಫ ದಂಪತಿ ಮನದಿ ವಿರಸವಾಗದ ತೆರದಿ ಜಗದ
ಜನಕೆ ತಿಳಿಯುವಂತೆ ಮಾಡಿ ಆಕಾಶವಾಣಿಯನು |
ಪರಿಶುದ್ಧಾತ್ಮಕ ಗರ್ಭದಿಂದ ಧರೆಗೆ ಜನಿಸಿ ಬರುವನೆಂದು
ಕರ್ತೃ ಏಸುಕ್ರಿಸ್ತನೆ ಸಾರಿದ ನಂಬಿಗೆ ತತ್ವವನು || ೩ ||

||ಚಾಲ|||

ದಾವದ ವಂಶದರಸನು | ಜನತೆಯ ಜನನವನು |
ಬರೆಯಲ್ಕೆ ಹಳ್ಳಿಗಟ್ಟಿದನು | ಮೇರಿ ಜೋಸಫ ದಂಪತಿಗಳನು || ೧ ||

ದಿನ ತುಂಬಿದ ಹೆಂಡತಿಯನು | ಕೂಡಿ ಹೋಗಿಹನು |
ಬೆತ್ಲೆ ಹೇಮಿಗೆ ಹೋಗಿ ಮುಟ್ಟಿದನು | ದನದ ಹಕ್ಕಿಯಲಿ ಇಳಿದಿಹನು || ೨ ||

ಅರ್ಧರಾತ್ರಿ ಅಲ್ಲಿ ಕಳೆದಿಹನು | ಏಸು ಜನಿಸಿದನು |
ಆಗ ತಂದೆ ಕಂಡಿಹನು | ಪ್ರಜ್ವಲಿಪ ನಕ್ಷತ್ರವನು || ೩ ||

||ಏರು||

ನಕ್ಷತ್ರ ಹುಟ್ಟಿದ ಲಕ್ಷಣ ನೋಡಿ | ಲೆಕ್ಕ ಹಾಕಿ ಭವಿಷ್ಯ ಕೂಡಿ |
ಪಂಡಿತರ‍್ಹೇಳ್ಯಾರ ಮಹಾತ್ಮಾ ಏಸುಕ್ರಿಸ್ತನು ಹುಟ್ಟಿದನು || ೧ನೆಯ ಚೌಕ ||
ತಾರಾ ಜ್ಯೋತಿಯ ಪ್ರಖರತೆ ಬೆದರಿ | ಕುರಿಕಾಯುವ ಕುರುಬರು ಹೆದರಿ |
ಎದೆಯೊಡೆದು ಗಾಬರಿಯಾಗಿ ಒಡಲು ನಿಂತಿಹರು |
ಸರ್ವರಕ್ಷಣೆ ಮಾಡುವ ಗುರುವೆ | ದಾವದ ರಾಜನ ಮನೆತನದಲ್ಲಿ |
ಹುಟ್ಟಿದನೆಂಬ ದೂತನ ಮಾತಿಗೆ ದಂಗ ಬಡಿದಿಹರು || ೧ ||

ಸುರಸ ಲೋಕದ ದೇವನೆ ಬಂದು | ನರರ ಲೋಕದ ಜೀವಿಯು ಆಗಿ |
ಧರೆಗೆ ಬಂದ ಸುದ್ದಿಯ ಕೇಳಿ ಕುರುಬರು ಹಿಗ್ಗಿದರು |
ಬರೇ ಅನ್ನುವ ಮಾತಿಗೆ ಕುರುಬರು | ಕುರಿ ಮರಿ ಕಾಣಿಕೆ ತಂದು |
ಕೊಟ್ಟಿಗೆಯಲ್ಲಿ ಬಟ್ಟೆ ಸುತ್ತಿದ ಕೂಸಿನ ನೋಡಿದರು || ೨ ||

ದೂರದವರೆಗೆ ಸುದ್ದಿಯು ಹೋಗಿ | ಜರೂಸಲೇಮದ ರಾಜಗೆ ತಾಗಿ |
ಹೆರೋಡ ಎಂಬುವ ಹಿರಿಯ ಅರಸನು ಆಗಿ ಎಚ್ಚರ |
ಹಿರಿಯನೆಂಬುವ ಹೆಸರಿಗೆ ಇನ್ನು ಕೊರತೆ ಬರುವ ಕೊನೆಮಾತನ್ನು |
ನಾಶಮಾಡುವ ಆಶೆಗೆ ಬಿದ್ದು ಕರೆಸಿದ ಪಂಡಿತರ || ೩ ||

||ಚಾಲ|||

ಮೂಡಣ ದೇಶದ ಪಂಡಿತರನ್ನು | ಕರೆಯಿಸಿ ಹೇಳಿದನು |
ಶಾಸ್ತ್ರಿ ಗಣಿತದಿ ಭವಿಷ್ಯವನು | ಹೇಳಿದ ಸತ್ಯವನು || ೧ ||

ನಕ್ಷತ್ರದ ಗುರ್ತಿನ ಚಿಹ್ನ ಸತ್ಯವೇದವನು ನೋಡಿ |
ತೆಗೆದಿರುವಂಥ ಉತ್ತರವನ್ನು | ಏಸುಕ್ರಿಸ್ತನ ಜನ್ಮದ ಸುದಿನ|| ೨ ||

ಹೆರೋಡ ರಾಜಗೆ ಮುಂದೆ ಅಳಿಗಾಲ | ಬರುವ ಸ್ಥಿತಿ ಮೊದಲ |
ಕ್ರಿಸ್ತನ ಮಾಡಿ ನಾಶವನ್ನು | ಅನ್ನುವ ಮನದ ನೋವನ್ನು|| ೩ ||

||ಏರು||

ಹಿರಿಯ ಪಂಡಿತರನ್ನು ಕರೆಸಿ | ಬೆತ್ಲೆ ಹೇಮ ಊರಿಗೆ ಕಳಿಸಿ |
ಚಿನ್ನಧೂಪ ಕಾಣಿಕೆಕೊಟ್ಟು ಬರಲು ಕಳಿಸಿದನು || ೨ನೆಯ ಚೌಕ ||

ಮೋಸ ಮಾಡಿ ಕೂಸಿನ ಕೊಲ್ಲುವ ಹೊಸ ಆಲೋಚನೆಯ ಮಾಡಿ |
ಎರಡು ವರ್ಷದ ಒಳಗಿನ ಕೂಸನ್ನು ಕೊಲ್ಲುವ ಕಾಯ್ದೆಯನು ||
ಪಾಸುಮಾಡಿ ಕಳಿಸಲಾಗಿ ಸ್ವತಃ ದೇವದೂತನೆ ಬಂದು |
ಕನಸಿನಲ್ಲಿ ಕಾಣಿಸಿಕೊಂಡ ದಾರಿಯ ತೋರಿದನು || ೧ ||

ಮೇರಿ ಮಗನ ಕೂಡಿಕೊಂಡು ರಾತ್ರಿಯೊಳಗೆ ನಡೆದು ಬಂದು |
ಪ್ರವಾದಿ ಹೇಳಿದ ಪ್ರಮಾಣದಂತೆ ಗುಪ್ತದಿ ಸಾಗಿಹರು |
ಕಿರಿಯ ಏಸುಕ್ತಿಸ್ತ ಬೆಳೆದು ಹಿರಿಯ ದೇವನಾಗಿ ಬಂದು |
ಜಗಕೆ ಬೋಧಕನಾಗಿ ಬೆಳೆದನು ಆ ಮಹಾತ್ಮನು || ೨ ||

ಜಗದಿ ದೇವನು ಒಬ್ಬನೆ ಎಂದು ಜಗದ ಜೀವಿ ರಕ್ಷಕನೆಂದು
ಜಗದ ಒಡೆಯ ದೇವನ ಮೇಲೆ ಇಟ್ಟು ದೃಢತೆಯನು ||
ನಂಬಿಗೆಟ್ಟು ನಡೆದವರಿಗೆ ಇಂಬುಗೊಡುವನು ದೇವನೆಂದು |
ನಂಬಿದವರಿಗೆ ದಾರಿಯ ತೋರಿದ ಕ್ರಿಸ್ತನ ಜನನವನು || ೩ ||

||ಚಾಲ|||

ಪಾಶ್ಚಿಮಾತ್ಯ ನಾಸ್ತಿಕರಿಗೆ | ಕ್ರಿಸ್ತನ ಬೋಧೆಗೆ |
ಆಸ್ತಿಕವಾದಿ ಪ್ರಚಾರ | ಧರ್ಮದ್ರೋಹ ತಪ್ಪು ಹಚ್ಚಿಹರು || ೧ ||

ಶಿಲುಬೆಯ ಶಿಕ್ಷೆ ವಿಧಿಸಿದರು | ಹಲಗೆ ಕುಟ್ಟಿದರು |
ಕಾಲು ಕೈಗೆ ಮೊಳೆಯ ಹೊಡಸಿದರು | ಏಸುವಿನ ಗಲ್ಲಿಗೆ ಏರ‍್ಸಿದರು|| ೨ ||

ಕ್ರಿಸ್ತನ ಬೋಧೆಯೇ ಬೆಳೆದು | ಜನರ ಮನ ಸೆಳೆದು |
ದೃಢದಿಂದ ಮಾಡಿರಿ ವಿಚಾರ | ಏಸುವಿನ ತತ್ವ ಆಚಾರ || ೩ ||

||ಏರು||

ಇಲ್ಲಿಗೆ ಕ್ರಿಸ್ತನ ಕತೆಯನು ಮುಗಿಸಿ ಮುಂದಿನ ಬೋಧೆಯ ಮುಂದುವರಿಸಿ
ಮಂಗಳ ಮಾಡಿದ ಸಾಲೋಟಗಿಯ ಶರಣನ ಈ ಹಾಡು|| ೩ನೆಯ ಚೌಕ ||

ಖ್ಯಾಲಿ

ಏಸುವಿನ ಪವಾಡ ಮಹಿಮೆಯನು | ಸರ್ವರಿಗೆ ಸಾರುವೆನು || ಪ ||

ಕಷ್ಟಪಡುವ ಕುಷ್ಟರೋಗಿ ಮನುಜನು | ನಿಷ್ಠೆಯಿಂದ ಏಸುವಿನ ಪಾದವನು |
ಮುಟ್ಟಿ ಕಷ್ಟವ ಪರಿಹರಿಸೆನ್ನಲು | ಹಸ್ತ ಇಟ್ಟು ಏಸು ಗುಣಪಡಿಸಿದನು|| ೧ ||

ಶತಾಯುಷ್ಯದ ಹಿರಿಯನೊಬ್ಬಗೆ | ಪಾರ್ಶ್ವವಾಯುದಿಂದ ಬಳಲುವಾತಗೆ |
ನೋಡದೆ ಬೇನೆಯ ಕಳೆದ ಕ್ರಿಸ್ತನ | ವಾಕ್ ಸಿದ್ಧಿಯೆ ನೋಡಾತನ ಮಹಿಮೆಯ|| ೨ ||

ಪತಿಯು ತೀರಿದ ಗರತಿಯೊಬ್ಬಳ | ಇದ್ದೊಬ್ಬ ಮಮತೆಯ ಮಗನು ಸಾಯಲು |
ಸಾವಿನಿಂದ ಅವನ ಪಾರುಮಾಡಿಸಿ | ತಾಯಿಯ ದುಃಖವ ನೀಗಿಸಿದಾತನು|| ೩ ||

ರಕ್ತ ಕುಸುಮದ ರೋಗಿಯೋರ್ವಳು | ಕ್ರಿಸ್ತನ ಉಡುಪಿನ ಗೊಂಡೆಮುಟ್ಟಲು |
ರಕ್ತಸ್ರಾವವು ನಿಂತು ರೋಗದ | ಭೀತಿಯು ಕಳೆದ ಏಸುಕ್ರಿಸ್ತನ || ೪ ||

ಅಪಸ್ಮಾರ ರೋಗ ದೆವ್ವ ಬಿಡಿಸಿದನು | ಹುಟ್ಟು ಕುರುಡರಿಗೆ ಕಣ್ಣು ಕೊಟ್ಟನು |
ಬೀಸುವ ಭೀಕರ ಗಾಳಿ ಮಳೆಯನು | ಗದರಿಸಿ ಬೆದರಿಸಿ ತಿರುಗಿಸಿದವನು|| ೫ ||

ಸರ್ವಶಕ್ತಿಗೂಡಿ ಲೋಕಕ ಬಂದಾನ ಏಸುಕ್ರಿಸ್ತ ತಾ ದೇವ ಅನಸ್ಯಾನ |
ನಂಬಿನಡೆದರೆ ಇಂಬುಗೊಡುವನು ಕೇಳಿರಿ ಶರಣನು ಈ ಹಾಡನ್ನು|| ೬ ||

ಸುಖಿ

ಜಗದೊಡೆಯನೆ ಜಗದುದ್ಧಾರನೆ ಜಗದರಕ್ಷಕ ಜಗದ ಈಶನೆ |
ಜಗದೀಶನ ಪ್ರತಿರೂಪವು ನೀನೇ ಜಗಕೆ ಜನಿಸಿ ಬಂದಿ |
ಏಸುಕ್ರಿಸ್ತ ಹೆಸರು ಪಡೆದಿ || ೧ ||

ಜಗದ ಕರ್ತ ಜಗಪಾಲಕ ನೀನೆ ಜಗದ ಜನರ ಸುಖ-ದುಃಖವು ನೀನೆ |
ಜಗದ ದುಃಖಗಳ ಅಳಿದವ ನೀನೆ ಉದ್ಧಾರಕೆ ಬಂದಿ |
ಮಾಡುವ ಜನಪಾಪಕೆ ನೊಂದಿ || ೨ ||

ಮಾಡಿದ ಪಾಪಕೆ ತಪ್ಪೆಂದು ಒಪ್ಪಿ ಬೇಡುವ ಕ್ಷಮೆಗೆ ಅವರನು ಅಪ್ಪಿ
ಉದ್ಧಾರದ ಉದ್ದೇಶವನೊಪ್ಪಿದಿ ಪಾಪವ ಕಿತ್ತೊಗೆದಿ |
ನೀನೇ ಶೂಲವನಪ್ಪಿದಿ || ೩ ||

ಮಾನವಕೋಟಿಯ ಮನುವನು ತಿಳಿದಿ ನಿನ್ನಯ ತನುವಿನ ಸುಖವನು ತೊರೆದಿ |
ಜನತೆಯ ತಪ್ಪಿಗೆ ನೀ ಗುರಿಯಾದಿ ಶಿಲುಬೆಗೇರಿ ನಿಂತಿ |
ವಾಲಿ ಶರಣಗೆ ನೀ ಒಲಿದಿ || ೪ ||

ರಚನೆ : ಶರಣಪ್ಪವಾಲಿ
ಕೃತಿ :
ಶರಣ ಸಂಸ್ಕೃತಿ