ಕಿತ್ತೂರ ಸಂಸ್ಥಾನದೊಳು ರಾಜ್ಯಭಾರ ಮಾಡುವಂತಾ
ಶಿವಲಿಂಗ ಭೂಪ ಮರಣ ಹೊಂದಿದರಾ
ವಟ್ಟಗೂಡಿ ದತ್ತಕ ಮಾಡಿದರಾ |
ಕನ್ನೂರ ಮಲ್ಲಪ್ಪಸೆಟ್ಟಿ ಕಂಪನಿ ಸರಕಾರಕ್ಕ
ಒಳಗಿಂದೊಳಗೆ ಮಾಡಿದಾನ ಪೀತೂರಾ
ಬರದ ಪತ್ತರಾ ||

ಕಪಿಕುಲದ ಪಿರಂಗೇರನ ಕೈಮಾಡಿ ಕರದಂಗಾತು
ಹಾತವರಿದ ಬಂದ ಹೊಕ್ಕರ ಕಿತ್ತೂರಾ
ಅಲ್ಲಿ ಅಧಿಕಾರಿಗಳ ಮನಸ ಒಡೆಸಿದರಾ |
ಸಂಸ್ಥಾನ ಕೈಸೇರಿತಂತೆ ಖಜಾನಿ ಎಲ್ಲಾ ಸೀಲ ಮಾಡಿ
ಶಾಮರಾಯ ಮಲ್ಲಪ್ಪಸೆಟ್ಟಿಗೆ ಒಪ್ಪಿಸಿದರಾ
ಎಲ್ಲಾ ಅಧಿಕಾರಾ ||

ಮನಸಿನೊಳಗ ಮಾಡಿದ ಸಾಸ ನೆನಸಗೊಡದ ಆದೀತಂತ
ಉಲ್ಲಾಸದಿಂದ ಇಬ್ರು ಉಬ್ಬಿದರಾ
ಒಳ್ಳೆ ಉಮೇದ್ವಾರಾ |
ಕುಟಿಲ ಕಾರಸ್ಥಾನವಿದು ಕಣ್ಣಮುಂದೆ ಆಗೋದ ಕಂಡ
ಚೆನ್ನಮ್ಮಾಜಿ ಹಲ್ಲ ತಿಂದಳ ಕರಾಕರಾ
ಆಗ ಇಲ್ಲ ಖಬರಾ ||

ಕಷ್ಟ ಸಹಿಸಿ ಚೆನ್ನಮ್ಮರಾಣಿ ಕರದ ಕೇಳತಾಳ ತನ್ನ
ಸಂಸ್ಥಾನದ ಉಪ್ಪ ಉಂಡ ಬಂಟರಾ
ಬಂದ್ರ ಎಲ್ಲಾರಾ |
ಉಪಾಯ ಏನ ಮಾಡೋಣಂತ ವಟ್ಟಗೂಡಿ ಮಾತಾಡತಾರ
ಸಂಧಾನಗೋದೊಂದೆ ಸಧ್ಯ ವಿಚಿಯಾರಾ
ಬರದ್ರ ಪತ್ತರಾ |

ಅಷ್ಟರೊಳಗ ಇಂಗ್ಲೀಷರ ದಂಡ ಐದನೂರ ಲಕ್ಷರಹಿಂಡ
ಸಜ್ಜಾಗಿ ಯುದ್ಧಕ್ಕೆ ಬಂದಾರಾ
ಡೊಂಬರಕೊಪ್ಪಕ್ಕೆ ಠಾಣಾ ಅವರು ಒಗದಿದ್ದರಾ |
ಮುಚ್ಚಲ್ಪಟ್ಟ ಕ್ವಾಟಿಯನ್ನು ಕುಲ್ಲಾ ಮಾಡದಿದ್ರ ಇನ್ನು
ಹಲ್ಲಾ ಮಾಡತೇವಂತ ಹೇಳಿ ಕಳಿವಿದರಾ
ಯುದ್ಧಕ್ಕ ಬಾ ಅಂತ ಕೊಟ್ಟಾರಿವರು ಪ್ರತ್ಯುತ್ತರಾ ||

ಒಂದನೇ ಚಾಲ

ಹದಿನೆಂಟನೂರ ಇಸ್ವಿ ಇಪತ್ತ ನಾಲ್ಕ
ಅಕ್ಟೋಬರ ಇಪ್ಪತ್ತಮೂರನೇ ತಾರೀಖ
ಮುಂಜಾನೆ ಮುತಿಗಿ ಹಾಕ್ಯಾರು |
ಕ್ವಾಟಿ ವಡದ ಒಳಗ ಬಂದಾರು ||

ಚೆನ್ನಮ್ಮಾಜಿ ಕುದರಿಯ ಹತ್ತಿ
ಹಿರಿದಾಳೊ ಕತ್ತಿ
ರಣದೊಳಗ ಬಂದ ಹೊಕ್ಕಾರು |
ಕಣಾಕಟ್ಟಿ ಕಾಳಗ ನಡಿಸ್ಯಾರು ||

ಥ್ಯಾಕರೆನ್ನ ಕೊಂದಾರ ಹೊಡದ ಗುಂಡ
ಬ್ರಿಟಿಷರ ದಂಡ
ಹೊರಳಿ ಓಡ್ಯಾರು |
ಎಷ್ಟೊ ಮಂದಿನ್ನ ಸೆರೆ ಹಿಡಿದಾರು ||

ಇಂಗ್ಲೀಷರು ಆದಾರ ಬಲು ಗಾಸಿ
ಚೆನ್ನಮ್ಮ ಕೆಡಿವ್ಯಾಳ ಹೆಣದ ರಾಶಿ
ಕಿತ್ತೂರ ಧ್ವಜಾ ಏರಿಸ್ಯಾರು |
ಶಂಭೋ ಹರಾ ಜೈಘೋಷ ಮಾಡ್ಯಾರು ||

ಎರಡನೇ ಚಾಲ

ಡಿಸೆಂಬರ ಎರಡಕ್ಕೆ ಎರಡನೇ ಯುದ್ಧಾ
ಮೋಸ ಮಾಡಿ ತೋಸಿದ್ರ ಎಲ್ಲಾ ಮದ್ದಾ ||

ಚಾಪ್ಲಿನ್ ತಗೊಂಡಾನ ಕಿತ್ತೂರ ಗೆದ್ದಾ
ಚೆನ್ನಮ್ಮನ ಇಟ್ಟಾರೊ ಹೊಂಗಲಕೋದಾ ||

ತಿಗಡೊಳ್ಳಿ ಮಾರುತಿ ದಯದಿಂದಾ
ಮರಿಕಲ್ಲ ಕವಿ ಮಾಡಿದಾ ||

||ಏರು||

ಮೋಸ ಮಾಡಿದ ಮಲ್ಲಪ್ಪನ್ನ ಗಾಸಿ ಮಾಡಿ ಬ್ರಿಟಿಷರು
ಆನಿ ಕಾಲಿಗಿ ಕಟ್ಟಿ ಎಳಿಸಿದರಾ
ಪರವಶ ಆದೀತಾಗ ಕಿತ್ತೂರಾ ||

ಕನ್ನೂರ ಮಲ್ಲಪ್ಪಸೆಟ್ಟಿ ಕಂಪನಿ ಸರಕಾರಕ್ಕೆ
ಒಳಗಿಂದೊಳಗ ಮಾಡಿದಾನ ಪೀತೂರಾ
ಬರದ ಪತ್ತರಾ |

ರಚನೆ :
ಮರಿಕಲ್ಲಕವಿ
ಕೃತಿ :
ಮರಿಕಲ್ಲಕವಿಯ ಗೀಗೀ ಪದಗಳು