ಧನ್ಯ ಧನ್ಯ ಚೆನ್ನಮ್ಮ ನಮ್ಮ ಕಿತ್ತೂರ ವೀರರಾಣಿ
ಮಾನ್ಯ ಮಲ್ಲಸರ್ಜನನ ಮನವ
ಮೆಚ್ಚಿಸಿದ ಜಾಣ ರಾಣಿ ||
ಚಿನ್ನ ರತ್ನದಿಂದಧಿಕ ಬೆಲೆಯ
ಸೌಶೀಲ್ಯ ಸುಗುಣ ಶ್ರೇಣಿ |
ಚನ್ನ ಕನ್ನಡದ ಕೆಚ್ಚಿನುಜ್ವಲದ |
ಬಲದ ಖಡ್ಗ ಪಾಣಿ || ೧ ||

ಪತಿಯ ಮೃತಿಯ ದುಃಖವನು |
ನುಂಗಿ ಗಡ ನಮ್ಮ ನಾಡಿಗಾಗಿ |
ಧೃತಿಯ ತೇಜಿಯನ್ನೇರಿ ಕಾದಿದಳು |
ಘೋರ ರಣಕೆ ಸಾಗಿ|| ೨ ||

ಕುಟಿಲ ಬ್ರಿಟಿಶ ಕಾಪಟ್ಯದೆದೆಗೆ
ನಿಡುಬಲ್ಲೆ ಎಸೆದು ತಾನು |
ದಿಟದಿ ದೇಶದಲ್ಲಿ ಧೈರ‍್ಯ
ಶೌರ‍್ಯ ತುಂಬಿದಳು ಪೇಳ್ವುದೇನು|| ೩ ||

ತುಂಗವೀರ ಸಂಗೊಳ್ಳಿರಾಯ
ಮೊದಲಾದ ವೀರರನ್ನು
ಸಂಘಟಿಸುತ ಸಾರಿದಳು
ನಾಡ ಬಿಡುಗಡೆಯ ಬವರವನ್ನು|| ೪ ||

ಸ್ವಾಭಿಮಾನ ಸ್ವಾತಂತ್ರ್ಯ ಬೀಜ ಬಿತ್ತಿದಳು
ಜನದ ಮನದಿ
ಶೋಭಿಸಿಹಳು ಜಾಜ್ವಲ್ಯಳಾಗಿ
ಭಾರತ ಚರಿತ್ರ ನಭದಿ

ರಚನೆ : ಎ.ಜಿ. ನೀಲಗಾರ
ಕೃತಿ :
ಜಾನಪದ ಝೇಂಕಾರ