ಪುಂಡ ಕಿತ್ತೂರ ನಾಡಿನೊಳಗ ಭಂಡಾಯ ಮಾಡಿದರಾಯಾ |
ಪಂಡಿತರೆಲ್ಲಾ ಇಟ್ಟ ಕೇಳರಿ ಚಿತ್ತಾ|| ಪಲ್ಲವಿ ||

೧ನೇ ಚೌಕ

ಅಂವ ಜಾತಿಲೆ ಕುರಬ ಭೀರುನ ಭಕ್ತಾ
ಹಳಬ ಸರಕಾರದ ಚಾಕರಿ ಮಾಡುತಿದ್ದೊ ಸಿಸ್ತಾ
ಕುಲಕರ್ಣಿ ದಶಿಯಿಂದ ಪೈಲೆ ಕದನ ಹುಟ್ಟಿ ಊರಬಿಟ್ಟ
ಸುತ್ತೆಲ್ಲ ಹಾವಳಿ ಮಾಡಿದೋ ವಿಪರೀತಾ
ಬಂಟ ಇದ್ದರ ಇರಬೇಕೋ ಪುಂಡ ರಾಯ ಪ್ರಖ್ಯಾತ
ಮುಂದಿನ ಕೆಡಗಾಲಕಿನ್ನ ಅಂದಾನೋ ಬ್ರಾಹ್ಮಣ
ಬಂದ ಉಟ್ಟಿರುವ ಧೋತ್ರಾ ಒಗತಾರಾಕೋ ರಾಯಾ ನೀನಾ |

ಹಳಬರಾದ ಮೇಲೆ ಹೇಳಿದ ಮಾತ ಮೀರುವರೇನಾ |
ತುಸು ಅಲಕ್ಷ ಮಾಡದೆ ಪಾಲಿಸೆನ್ನ ವಚನಾ
ಸಿಟ್ಟಿಗೆದ್ದ ಅಂತಾನ ರಾಯಾ ಉಟ್ಟಿರುವ ಧೋತ್ರಾ
ಒಗತರಲಾಕು ಬಿಟ್ಟ ಆಳಗಳ ಕೆಲಸ ಮಾಡವಲ್ಲ ನಾನಾ |
ಎಂಥ ಕೆಟ್ಟ ಮಾತನಾಡಿದೆಪ್ಪ ಬಾಳಣ್ಣ ನೀನಾ
ಕಡಿಯಂದ್ರ ನೂರ ಮಂದೀನಾ ಕಡಿಯಾವ
ಹೊಡಿಯಂದ್ರ ನೂರ ಮಂದೀನ ಹೊಡಿಯಾವ
ಇಂಥ ಡೊಮ್ಮಾನ ಕೆಲಸ ಮಾಡಲಾಕ ನಾಚಿಕಿಲ್ಲೇನ
ಬಗ್ಗಿ ಒಲಿಯ ಊದಿ ಬಸದ ಬಾಣಾ ಮಾಡಾವಲ್ಲೋನಾ |
ದೊಡ್ಡ ದೊಡ್ಡ ಮೇಲಮಾಳಿಗಿ ಅಂತ್ರಾಟಿಲೆ ಜಿಗದ ಹೋಗುವಾಂವ ನಾನಾ |
ಮನಸಿನೊಳಗೆ ಇಟ್ಟ ಬ್ರಾಹ್ಮಣ್ಣ ಮೈಲಿಗಿ ಧೋತ್ರಾ
ಮನಿಗಿ ತಂದು ಸಿಕ್ಕರ ಸಿಗಲಿ ನನ್ನ ಕೈಯೊಳಗೊಂದಿನಾ
ಬಗ್ಗಿಸಿ ಡುಬ್ಬದ ಮೇಲೆ ಕಲ್ಲುಹೇರಿ ಕಳಿಯುವೆನು ಮಾನಾ

ಇತ್ತ ಎರಡು ಮೂರು ತಿಂಗಳ ಮತ್ತೆ ಹೊತ್ತ ಹೋದ ಮೇಲೆ
ಒತ್ತರಲೆ ಕೊಡೂದು ಸರಕಾರದ ಪಾಳೆವನಾ |
ಕುಲಕರ್ಣಿ ಅಂತಾನ ಮೀಸೆ ಹುರಿ ಹಾಕಿ ಮಾಡಲಿನ್ನೇನಾ |
ರಾಯಣ್ಣನ ಮನೆಗೆ ಕಳುಹಿದ ನಾಲ್ಕು ಮಂದಿ ಹಳಬರನಾ |
ನಾಳೆ ಪಾಳೆ ಕೊಡದಿದ್ರ ಓಳಿ ಆಡೀವಂತ ಹೇಳ್ರಿ ಆಂವದೇನಾ |
ಬಿಸಾಟ ಮಳ್ಳ ಕುರಬಂದಾ ಜಾಸ್ತಿ ಕಡಿಮೆ ಮಾತಾಡಿದ್ರ ಎಳತರ್ರಿ ಅವನಾ |

||ಚಾಲ|||

ನಾಲ್ಕ ಮಂದಿ ಹಳಬರಿಗೆ ಕೈಮುಗದ ಹೇಳತಾನ ರಾಯಾ
ಮಾಡಬ್ಯಾಡ್ರಿ ನಮ್ಮನ್ನ ಅಬರುಗೇಡಾ |
ಮನಿಯಾಗ ಅದಾವ ಚಲೋ ಹೋರಿ ಜೋಡಾ
ನಾಳೆ ಕಿತ್ತೂರ ಸಂತಿಗೆ ಹೋಗಿ ಆತುರದಿಂದಲೆ ಮಾರಿ
ತರತೀವೆಪ್ಪ ಅಣ್ಣ ತೋಡ ಜೋಡಾ ||

ಇನ್ನ ಬಾಳ ಮಾತಾಡಿದ್ರ ಅಲ್ಲ ಪಾಡಾ
ಕಣ್ಣೀರ ಉದರಸುತೆ ರಾಯಾ ಎರಡು ಹೋರಿ ಕನ್ನಿಬಿಟ್ಟ
ಕೈಯಲ್ಲಿರುವ ಕತ್ತಿ ಕಟ್ಟಿದ ನಡಾ
ನೋಡಿ ತಾಯಿ ಅಂತಾಳ ಮಗನೆ ಹೋಗ ಬೇಡಾs
ಕೂಡ ಸುಮ್ಮನಿರು ಹಡದವ್ವ ನೀನಾ |
ಹೆಮ್ಮೆ ಬಹಳ ಕುಲಕರಣಿದು ಪಾಳೆದ ರೂಪಾಯಿ ಹೋರಿ ಮಾರಿ ಕೊಡುವೆನ ತುರ್ತಾ |
ಹಿಂದುಗಡೆ ಅವನ ಬನವಿಗೆ ಬೆಂಕಿ ಹಚ್ಚುದು ತುರ್ತಾ
ಇಷ್ಟ ಹೇಳಿ ಸಂತಿಗಿ ಹೊಡಕೊಂಡು ಹೋದ ಸಮರ್ಥ
|| ಪುಂಡ ಕಿತ್ತೂರ ನಾಡಿನೊಳಗ ….||

೨ನೇ ಚೌಕ

ಹಳಬರ‍್ಹೋಗಿ ಕುಲಕರ್ಣಿಗೆ ಹೇಳ್ಯಾರ ರಾಯಣ್ಣಾಡಿದ ಮಾತಗಳೆಲ್ಲಾ |
ಪಾಳೇದ ರೂಪಾಯಿ ಹೋರಿ ಮಾರಿ ಕೊಡತೀನ ತಂದಾ |

ನಿಮ್ಮ ಮ್ಯಾಲ ಸಿಟ್ಟಾಗಿ ಕರಕರ ಹಲ್ಲ ತಿಂದಾ |
ನಮ್ಮ ಹುಜೂರ ಇಷ್ಟೆ ಹೇಳಿ ಕಿತ್ತೂರ ಸಂತಿಗೆ ಹೋದಾ
ಬಿಟ್ಟರ ಕುಲಕರ್ಣಿ ನಿಂದಿಗೆ ಉಟ್ಟಂಗ ಹೆಂಗಸರ ಸೀರಿ
ತೊಟ್ಟಂಗ ಕುಬ್ಬುಸವೆಂದು ನಿಷ್ಟುರ ಹೇಳಿದಾ |
ಭಂಟ ಭರಮಣ್ಣನ ಹೊಟ್ಟಿಲೆ ಹುಟ್ಟಿ ಇರಬಾರದೆಂದಾ |
ಊರ ಕುಲಕರ್ಣಿ ಬರದಾನ ವಾರಂಟ ಪತ್ತರಾ ವಾಯಿದೆ ಮೀರಿತೆಂದಾ |

ರಾಯಣ್ಣನ ಮನೆಗೆ ಸೆಮನಾಸ ಹಚ್ಚಿದಾ
ರಾಯಣ್ಣನ ತಂದಿ ಭರಮಣ್ಣ ನೋಡಿ ಕಣ್ಣಿಗೆ ನೀರತಂದಾ
ನಾಳೆ ಪಾಳೆ ಕೊಡಲೀನ ತಂದ ಕುಲಕರ್ಣಿ ಪಾದಹಿಡದಾ
ಕರುಣ ಬರಲಿಲ್ಲ ಹಿಕ್ಕಟ್ಟಿನ ಕುರಕುರಿಯಿಂದ
ಜೋರಿಲೆ ನೂಕೂತ ಚಾವಡಿಗೆ ಒಯ್ದಾ ||

ಚಂಡ ಬಾಗಿಸಿ ಡುಬ್ಬದ ಮ್ಯಾಲ ಕಲ್ಲ ಹೇರಿದಾ
ಎರಡು ಹೋರಿ ಮಾರಿ ರಾಯಾ ಒಡಲೊಳು ತಳಮಳಿಸುತ್ತಾ
ಚಿಂತಿ ಮಾಡುತಲಿ ಕೊಟ್ಟ ಚೀಟಿ ಬರದ ಮೂನ್ನುರಾ
ರೂಪಾಯಿ ತೆಗೆದುಕೊಂಡ ಪದರೊಳಗ ಕಟ್ಟಿದಾ

ಸಂಜಿ ತಾಸೊತ್ತ ಇರತ ತನ್ನ ದಾರಿ ಹಿಡದಾ |
ದೀಪಾ ಹಚ್ಚಿದ್ದಿಲ್ಲ ಇನ್ನೂ ಸಂಗೊಳ್ಳಿಯ ಸೀಮಿಕಂದಾ |

ಮನಿಗೆ ಬಂದ ತನ್ನ ತಾಯಿಗೆ ನೀರ ಕೊಡೆಂದಾ |
ಕೆಂಚವ್ವ ನೀರಕೊಟ್ಟ ಹೇಳ್ಯಾಳ ಕಂತ್ರಾಟ ಆದದ್ದಾ |
ಕೇಳಲಿಲ್ಲ ಕುಲಕರ್ಣಿ ಹಿರಿಯಾನ ಗೋಳಮಾಡಿ |
ಒಯ್ದಿದಾರ ಹೇರಿದಾರ ಡುಬ್ಬದ ಮ್ಯಾಲ ಕಲ್ಲ ||

||ಚಾಲ|||

ಶಿವಶಂಕರ ವ್ಯಾಳೆ ತಂದ ನಮ್ಮ ಮ್ಯಾಲಾ
ರೂಪಾಯಿ ತಕ್ಕೊಂಡ ಹೋಗಿ ರಾಯಾ ಉಪಾಯವಿಲ್ಲಾ
ಸರಕಾರ ಮಾಲೆಂದ ಪಾಳೆಕೊಟ್ಟ ಡುಬ್ಬದಮಾಲಿನ ಕಲ್ಲಾ
ಕಡಿಕ ತಗದ ತಿಂದ ಕುಲಕರ್ಣಿ ಮ್ಯಾಲ ಕರಕರ ಹಲ್ಲತಿಂದಾ |
ತಂದಿನ ಮನಿಗೆ ಕರಕೊಂಡ ಹೋಗಿ ವಂದನೆ ಮಾಡಿ ಹೇಳತಾನ ರಾಯಾ |

ಇಂದಿಗಿ ಬಿಟ್ಟ ಬಿಡ್ರಿ ನನ್ನ ಹಂಬಲಾ |
ನಿಮ್ಮ ಹೊಟ್ಟಿಲಿ ಹುಟ್ಟಿದ ಪುತ್ರ ನಾಯೇನಲ್ಲಾ |
ಮಡದಿ ಕೊರಳಾಗಿನ ಗುಳದಾಳಿ ಹರದ ನಡದಾನ
ಕುಲಕರ್ಣಿ ಹೊಲಕ ಜೋಳ ಚಾಪಿಸಿದ ಅಗಣಿತ
ಲಂಕಾ ಹಾರ‍್ಯಾಡಿದಂಗೋ ವೀರ ಹನುಮಂತ
ವೈರಿ ಮನಿಗೆ ಬೆಂಕಿ ಹಚ್ಚಿ ನಡದಾನ ಹಿಡಿರಂತ || ಪುಂಡ ಕಿತ್ತೂರ ನಾಡಿನೊಳಗ ||

೩ನೇ ಚೌಕ

ಜೀವದ ಗೆಳೆಯ ಬಿಚ್ಚಗತ್ತಿ ಚನಬಸುನ ಹಂತೇಲಿ ಹೋಗಿ |
ರಾಯಣ್ಣ ಕರದ ಕೇಳತಾನ ಏಕಾಂತ ತಳ್ಳಿಮಾಡಿ ಬಂದಿನ ಕುಲಕರ್ಣಿ ಬಾಳ್ಯಾನ ಮ್ಯಾಗ |
ದೇಹ ಜೀವದ ಕಬರ ಇಲ್ಲೋ ಎಳ್ಳಿನಷ್ಟೆ ನನಗ |
ಚನಬಸು ಅಂತಾನ ಗೆಳೆಯಾ ಸುಸ್ತಿ ಮಾಡಬ್ಯಾಡ ಸದ್ಯ
ಶಿವಗುತ್ತಿ ಅರಸನ ಹಂತೇಲಿ ಹೋಗಬೇಕ ಬೇಗ
ಒಬ್ಬ ಪುಂಡ ಅದಾನಂತ ಅವನ ದಂಡಿನೊಳಗ
ಸೂರ ರಾಯಾ ಸುದ್ದಿ ಕೇಳಿ ಯುದ್ಧ ಮಾಡಿ ಅವನ ಪ್ರಾಣಾಗೆದ್ದ ತರಬೇಕಂತ |
ಎದ್ದಾನ ಆಗಿಂದಾಗ ಕತ್ತಿ ಡಾಲ ಪೊಶೇಕ ಶಿಸ್ತಹಿಡದ ನಡದಾನ ಕೈಯಾಗ |
ಚನ್ನಬಸವಣ್ಣನವರ ನಿನ್ನ ಕೃಪಾ ಇರಲಿ ನನ್ನ ಮ್ಯಾಗ |
ಅರಸನ ಹಂತೇಲಿ ನಿಂತಹೋಗಿ ಸರಸದಿಂದ
ಮುಜರಿ ಹೊಡೆದ ಕರಸರಿ ಅಂತಾನ ರಾಯಾ ನಿಮ್ಮ ಬಂಟಗ
ನಾನು ಬಹದ್ದೂರ ಮಲ್ಲಸರ್ಜನ ಹಳಬ ಕಿತ್ತೂರ ನಾಡಾಗ
ಕಣ್ಣಿಲೆ ನೋಡಿ ಕುಸಿಬಂದ ಮನ್ನಿಸಿ ಕರದಕೂಡ್ರಿಸ್ಯಾನ ಅರಸ
ಸಣ್ಣಾಂವ ಕಾಣಸ್ತಿ ಲಡಾಯಿ ಮಾಡುವದ್ಹೆಂಗ
ಅವನ ಕೈಯಾಗ ಪ್ರಾಣಹೊಂದಿ ಸುಮಾರಮಾಡಿ ನನಗ
ಮಡಿದಂಗ ಆದಿತೋ ಅಭಿಮನ್ಯು ಚಕ್ರಭೀಮರಕೋಟ್ಯಾಗ |
ಗೊಬ್ಬರಕ್ಕೊಗದಂಗ ಆದೀತೋ ಬೆಂಕಿ
ಅಬ್ಬರಲಿ ಅಂತಾನ ರಾಯಾ ಇಬ್ಬರನು ಕಾದಬಿಟ್ಟ ನೋಡ
ಒಳತಂಗ ಸುಳ್ಳ ಅಬ್ಬರಲಿ ಮಾತಾಡಿದ್ರ ಏನಾತಂದ ||

||ಚಾಲ|||

ಬಹದ್ದೂರ ರಾಯಣ್ಣನ ಬದಿಯಲ್ಲಿ ಕೂಡ್ರಿಸಿಕೊಂಡ
ನಟ್ಟಿತೋ ಮನಕ ದಿಟ್ಟಿಸಿ ಆಡಿದ ಮಾತಾ |
ತನ್ನ ಪುಂಡನ ಕರಸಿದೋ ತುರತಾ |
ಬಂಡಾಯದ ಸುದ್ದಿ ಕೇಳಿ ಕೆಂಡದಂಗ ಆದಣ್ಣಾ
ಮದ್ದು ಗುಂಡು ತುಂಬಿ ಮಾಡಿದಾರೋ ಸಿಸ್ತಾ ||
ಬಂದ ಕಾಲಕೆದರಿ ಮುಂಡಿ ಹೊಡೆಯುತ

ನಿಂತ ಕೂಡಿದ್ಹಂಗ ಆದೀತೋ ದಶರಥನ ಮಿತ್ರ ಲಕ್ಷಣ
ಇಂದ್ರಜೀತ ಅರಸ ಇಟ್ಟ ಇಬ್ಬರ ತೆಲಿಮ್ಯಾಲ ಹಸ್ತ
ನಾಳಿಗೆ ಲಡಾಯಿ ಮಾಡಿರೆಂತ ವೀಳ್ಯಕೊಟ್ಟಾನ ಅರಸ |
ಜಾಳಿಗೆ ಹೊನ್ನ ಕೊಡುವೆನು ಮಾಣಿಕ ಮುತ್ತು
ಮತ್ತು ಏನಬೇಕು ಬೇಡ್ರಿ ನಿಮ್ಮ ಸನಮಂತ
ವೀಳ್ಯೆ ಹಿಡದಾರೋ ನಗನಗತ ಏಕಾಗದಲ್ಲಿ ದಂತ |
|| ಪುಂಡ ಕಿತ್ತೂರ ನಾಡಿನೊಳಗ ….||

೪ನೇ ಚೌಕ

ಮರುದಿನ ಮಧ್ಯಾಹ್ನದಾಗ ಶಿವಗುತ್ತಿ ಊರ ಹೊರಗ ದಂಡುಕೂಡಿತ್ತೊ |
ಒಂದು ಅಜಮಾಸ ಏಳು ಎಂಟು ಸಾವಿರಾ |
ಕರಾರ ಮಾಡ್ಯಾನ ಕತ್ತಿಯ ಮೂರು ಮೂರು ಭಾರಾ |
ನೋಡಲಾಕ ಕೂಡ್ಯಾರೊ ಸಣ್ಣ ದೊಡ್ಡವರಾ |
ಬಂದಾನ ಶಿವಗುತ್ತಿ ಪುಂಡ ದುಂಡ ಗ್ಯಾಮಿ ಹಚ್ಚಿಕೊಂಡಾ |
ಚಂದದಿಂದಲಿ ತಿರುವ್ಯಾಡುತ ತನ್ನ ಹತಿಯಾರಾ |
ರಾಯಣ್ಣನ ಒಂದುಗಳಿಗ್ಯಾಗ ಹೊಡೆಯುವನೋ ಠಾರಾ |
ರಾಯಣ್ಣ ರಣಗೂದಲ ಬಿಚ್ಚಿ ನಡಕ ಸುತ್ತಿದ ಬಿಚ್ಚಿ ನಗನಗುತ |
ನಿಂತಾನೋ ಶಿವಗುತ್ತೆವನ ಎದುರಾ |
ಟನ್ ಟನ್ ಜಿಗದ ವಗದ ಅಂತರಲಾಗಾ |
ಕಣ್ಣ ಮುಚ್ಚಿ ಕಣ್ಣ ತೆಗೆಯುವುದರೊಳಗ ಶಿವಗುತ್ತಿ
ಪುಂಡನ ಚಂಡ ಕಡಿಕೆ ಮಾಡಿ ಬಿಟ್ಟೋ ರಾಯಾ |
ಬಾದ್ದೂರ ಅರಸ ಸಾಕ್ಷಾತ ನೋಡಿದೋ ತನ್ನ ಕಣ್ಣಾರಾ
ಅರಸನ ಮನಸ್ಸಿಗೆ ಬಂದ ಸರಸದಿಂದ ರಾಯಣ್ಣನ
ಮೆರಿಸ್ಯಾರೋ ಇಲ್ಲಂತ ಇವನ ಹಂತವರಾ |
ಆಯಾರ ಮಾಡ್ಯಾರೋ ಕಡೆ, ತೋಡೆ, ಉಂಗರ ಉಡದಾರಾ
ಡಂಗುರ ಹೊಡಿಸ್ಯಾರೋ ಸತ್ತಂತ ಶಿವನಗುತ್ತಿ ಸೂರಾ
ಮುಜರಿ ಹೊಡದ ಮುಗಳನಗಿ ನಗನಗತ ಅಂತಾನ
ರಾಯಣ್ಣ ಬೇಡಿದ್ದ ಕೊಡತಿನಂಬು ಕರಾರಾ
ವಚನದಂತೆ ದಂಡಕೊಡ್ರಿ ನನಗೊಂದು ಸಾವಿರಾ |

||ಚಾಲ|||

ಕೊಟ್ಟಾನ ಒಂದು ಸಾವಿರ ದಂಡಾ ದಿಟ್ಟು ರಾಯಣ್ಣ ಮಾಡಿದಂತ
ಶ್ರೇಷ್ಠ ತನ್ನ ಮನಸ್ಸಿಗೆ ಬಂದ ಹಿಕ್ಕಟ್ಟ ಮುಕ್ಕಟ್ಟ ಇವನಂತವನ ನೋಡಿಲ್ಲಂದ
ಅಪ್ಪಣೆ ತಕ್ಕೊಂಡರಾಯಾ ಶಿವನಗುತ್ತಿ ಊರಬಿಟ್ಟ ಹೊಂಟಾ
ಜೀವದ ಗೆಳೆಯನ ಹಂತೇಲಿ ಬಂದಾ ||
ನೋಡಿ ಚನಬಸು ಆದಾನೋ ಆನಂದಾ |
ಒಡ್ಡರ ತಿಮ್ಮಣ್ಣ ಏನಲಡ್ಡಿ ಹುಡುಗನಲ್ಲಾ
ಬಿಗವಲಿ ಚಡ್ಡಿ ತೊಟ್ಟಾನ ಅವಸರದಿಂದ
ಭೇಟಿಯಾದಾನೋ ಮಿತ್ರರಿಗೆ ಪ್ರೀತಿಯಿಂದಾ
ಕಿತ್ತೂರ ಮಲಸರ್ಜನ ಮೋಸ ಮಾಡಿದ ಇಂಗ್ರೇಜ ||
ಚನ್ನಮ್ಮನ ಕೂಡ ಹಾಕಿಕೊಂಡ ಪಂಥಾ |
ತಾಯಿ ಕುಂತಾಳೋ ಮಗನ ಶೋಕ ಮಾಡುತಾ
ಲಡಾಯಿ ಮಾಡಿ ತಕ್ಕೊಂಡಾನೋ ಆತ ಪಿರಂಗ್ಯಾನಂತ |
|| ಪುಂಡ ಕಿತ್ತೂರ ನಾಡಿನೊಳಗ …..

೫ನೇ ಚೌಕ

ಗೋದಳ್ಳಿ ಕೆರಿಮ್ಯಾಗ ಇಳದಿತೋ ಸರಕಾರ
ದಂಡಾ ರಾಯಣ್ಣನ ಚಂಡಕಡದ ಜಯಯುದುಕ ಸಾಯ್ಬ
ಡೇರೆ ಹೊಡದ ಕುಂತ ಕೋಪ ತುಂಬಿ ಮನಕ ||
ಹತಿಯಾರ ಬಂದೂಕನೆಲ್ಲ ಗೂಡಹಚ್ಚಿ ಇಟ್ಟಾರ ನಡಕ
ಕುದರಿ ಸ್ವಾರರು ಮತ್ತು ಚತುರ ಬಲ ಆರಂಭದಿಂದ ಜಳಕಮಾಡಿ ಕುಂತಾರೋ |
ಎಲ್ಲರೂ ಉಣಲಾಕ ವರ್ತಮಾನ ಕೇಳಿ ರಾಯಣ್ಣ ಅಂದಾನ
ಗಜವೀರ ರಾಯಣ್ಣ ಸಹಜವಾಗಿ ಹೊಂಟಾರ ಜೋಡಿ
ತಜವಿಜ ಮಾಡಿ ಬರುನ ಸುಮ್ಮಕ ||
ಹೋದಾರೋ ಗೂಡ ಹಚ್ಚಿದ ಬಂದೂಕಿನ ಸನೇಕ
ಗಜವೀರ ಮರಿ ಆದಾನೋ ಬಿದರ ಮೆಳೆಯ ಬಲಕ
ಟುಬಾಕ್ಯಾಗ ಗುಂಡಹಾಕಿ ಬಾಯಿಗಿ ಜರಜಾಂವಿಗಿ
ದಕ್ಕಿಕೊಟ್ಟ ಹೊಡೆದ ಸಾಯ್ಬಗ ಗುಂಡು ತಾಕಿ ಬಿದ್ದೊ ನೆಲಕ |
ಹತಿಯರ ಬಂದುಕನೆಲ್ಲಾ ವಯದ ಜಿಗಿದಾನೋ ದೊಡ್ಡ ಮಡಕ |
ಅಲಿಮಾನ ಕತ್ತಿಯ ಹಿರಿದು ಆರ‍್ಯಾರಿಸಿ ಕಡದ
ಅರ್ಧ ಚಂಡರುಂಡ ಆಗಿ ಬಿದ್ದಾವ ತುಣಕ
ಕುರಿ ಹಿಂಡಿನ್ಯಾಗ ಮುರಿದಾಂಗಾತೋ ಹೆಬ್ಬುಲಿ ಹೊಕ್ಕ ||
ತಿರಿವ್ಯಾಡಿ ಕಡಿದಾನೋ ಕಬರ ಹಾರಿ ತಪ್ಪಿತೋದಿಕ್ಕಾ
ಚಾಪಹಾಸಿದ ಲೋಪ ಮಾಡಿದ ಕಲಿದೀಪ ಭೂಪ ರಾಯಣ್ಣ ಕೌತುಕ |
ಒಬ್ಬನ ಮಾಪ ಮಾಡಿಸಿ ಇಟ್ಟಾನ ಸುದ್ಧಿ ಹೇಳಿದಕ

||ಚಾಲ||

ಇದರ ಬದರಾ ನಿಂತು ತಾರಾಬಾರಾ ಕಾದುವಾಗ
ಹಾರತಾವ ಗೋರಾಜನರ ತೆಲಿ |
ಬಿದ್ದ ಗೋರಾ ತಾ ಬಕ್ಕಬಾರಲಿ ಸಾಯ್ಬ ಕೇಳಿಕೊಂಡ ತನ್ನ ಮುಂಗೈ ಕಡಕೊಂಡ |
ಮತ್ತು ದಂಡ ಸಂಹಾರ ಮಾಡ್ಯಾನ ಹುಲಿ |
ತಾಪಾಸ ಮಾಡಿರಿ ಹಾಕೋಣ ಅದಾನೆಲ್ಲಿ |
ರಕ್ತದೊಳಗ ಬಟ್ಟಹಾಕಿ ಹಣಿಮ್ಯಾಲ ಇಟಗೊಂಡ
ಚಟ್ಟನ ಹೋದಾನ ಮೈತರ ಬದಿಯಲ್ಲಿ
ರಣರಂಗನೆಲ್ಲಾ ಮಾಡಿದಾನೋ ಖಾಲಿ
ಸಿಂದಿ ಸೆರೆ ತರಸಿ ಬಹಳ ದುಂದದಿಂದಲ್ಲಿ
ಕುಡದಾಡಿ ಚಂದದಿಂದ ಹೊಂಟಾರೋ ತಮ್ಮ ಸೈನ್ಯಸಹಿತ |
ಬಾಳಿಗುಂದಿ ಗುಡ್ಡದ ದಾರಿ ಹಿಡಿದ ನಡೆಯುತಾ |
ಆರ‍್ಯಾಣದಾಗ ಇಳಿದಾರೋ ರಾತ್ರಿ ಇತ್ತೊ ಸರವತ್ತಾ |
|| ಪುಂಡ ಕಿತ್ತೂರ ನಾಡಿನೊಳಗ …..||

೬ನೇ ಚೌಕ

ಬಹದ್ದೂರ ಇಂಗ್ರೇಜನ ದಂಡ ಬಂದಿತೊ ಮತ್ತೊಂದು
ಕೇಪ ಬಾಳಿಗುಂದಿ ಗುಡ್ಡಕ ಹಾಕ್ಯಾರೊ ಮುತ್ತಿಗಿ
ಅದರ ಸೂಚನಾ ಮುಟ್ಟಿತೋ ರಾಯಣ್ಣಗ ಹೋಗಿ
ಅವನ ಕಲ್ಪನಾ ತಿಳಿಯಲಾಕ ಇಲ್ರಿ ಯಾರ‍್ಯಾರಿಗಿ |
ಗುಡ್ಡದೊಳಗ ಇರುವಂಥ ಕಂಟಿಗಿಡಗಳನ್ನೆಲ್ಲ
ಮಂಡಮಾಡಿ ಅರಿವಿ ಸುತ್ತಿ ಹಚ್ಚಾರೋ ಬ್ಯಾಗಿ |
ರಾಯಣ್ಣನ ದಂಡ ಇಳದ ಮಾಡತತಿ ಅನ್ನ-ಅಡಗಿ |
ಉರಿಯ ನೋಡಿ ಅದಾರೆಂದು ಬಿಗಿಲ್ ಮಾಡಿ
ಬಂದಾರೊ ಲಗು ಗುರಿಯ ಹೂಡಿ ಹೊಡೆದಾರ, ಕತಲಗವದೀತಹೋಗಿ |
ಕೂಗ ಹೊಡದ ರಾಯಣ್ಣನ ದಂಡ ಬಂದ ಮಾರ‍್ಯಾಗಿ
ಎಳಎಳದ ಕೊಂದಾರಣ್ಣಾ ಧೀರಾ |
ತುಳತುಳದ ಒಬ್ಬೊಬ್ಬರನ್ನಾ ಹೊರಹೊರಳಿಸಿ ತರದಾರ
ಕತ್ತಿಮಿಂಚಿನ ಪರಿಯಾಗಿ ತಪ್ಪಿಸಿ ಉಳಉಳದ
ಹೋದಾರೋ ಕಂಟಿಯ ಮರಿಗೆ
ನಿತ್ತ ಚಿತ್ತ ಬಲ್ಲಾಂಗ ಕತ್ತಿಲಿಕಡದಾನ
ಸುತ್ತ ಕತ್ತಿರಿಸಿ ಬಿದ್ದಾವ ರಕ್ತ ಹರದಿತೋ ಧರಿಗಿ |
ದಿಕ್ಕತಪ್ಪಿ ಕಾಳಗವಾತೋ ಅವರ ಇದರಿಗಿ
ಸುತ್ತಗಟ್ಟಿ ಹೊಡದೋ ಒಬ್ಬರು ಹೋಗಲಿಲ್ಲ ತಿರುಗಿ |
ಪ್ರಾತಃಕಾಲದಲ್ಲಿ ರಕ್ತ-ಮಾಂಸ ತಿನ್ನಲಾಕ
ಸುತ್ತುಕಡೆ ಮುತ್ತಿದಾವೋ ಹದ್ದುಕಾಗಿ

||ಚಾಲ|||

ತೋಟಿ ಇಲ್ಲದ ಮಾಡಿದಾಂಗ ಆತೋ ಹಬ್ಬ ಆನಂದವಾಗಿ |
ಆನಂತ್ರ ಅರಣ್ಯದೊಳು ಸ್ವಾತಂತ್ರ್ಯ ತಪ್ಪಿತು
ಅದಕ್ಕ ತಂತ್ರ ಹೇಳುವಷ್ಟು ಇಲ್ಲ ಶಕ್ತಿ
ಹತಿಯಾರ ಧೈರ್ಯ ಪ್ರಭೂ ಶಕ್ತಿ ಊಟಾಬಸಿ
ಮಾಡಿ ಯುಕ್ತಿಯಿಂದ ಎಲ್ಲರೂ ಕೂಡಿ ದಿನ್ನ ಅಂತ
ಜಯ ಅಂತ ಜಿಗಿದಾರೋ ಸರ್ವ ಎಲ್ಲಾ
ಸರ್ವರೂ ಕಾದಿದಾರೋ ರಣ ಗೂದಲಾ
ಸೃಷ್ಟಿಯೊಳು ಪ್ರಸಿದ್ದ ಆದ ಹುಟ್ಟಿದಂತ ವೇಳೆ
ಜೀವದ ಆಶೆಬಿಟ್ಟಿದಾರ ಯೆಲ್ಲಾ ಇರ್ಸೆತೊಟ್ಟಿದಾರ ಏರುಣಂತ ಹಲ್ಲಾ
ಬಾಲಿ ಬಾಕ ಕೈಚೂರಿ, ಪಿಸ್ತೂಲಗಳ ಪಟ್ಟಿ ಡಾಲ
ಕೈಯಲ್ಲಿ ಹಿಡಿದ ನಡದಾನೋ ತುರತಾ ||
ಅಲ್ಲಲ್ಲಿಗೆ ಹಳ್ಳಿ ಸುಲಗಿ ಮಾಡುವವನ ತಗದ ಬಂದಾನೋ ಪೂರ್ವದಲಿ ||
|| ಪುಂಡ ಕಿತ್ತೂರ ನಾಡಿನೊಳಗೆ ….. ||

೭ನೇ ಚೌಕ

ಕ್ವಾಟೆ ಕಿಲ್ಲೆ ಹಳ್ಳದ ಮ್ಯಾಲೆ ಕಳವ್ಯಾಳ ಚೀಟಿ
ರಾಯಣ್ಣಗ ಚನ್ನಮ್ಮಗ ಭೆಟ್ಟಿಯಾಗಿ
ಬರಬೇಕಂತ ಕಿತ್ತೂರಿಗೆ ಹೊಂಟ |
ಹೊಲಸಿದ ಬಿಗಿಯಾಗಿ ಕ್ಯಾವಿಯ ಗುಂಡಿಗೆ
ಚನ್ನಾ ತೋಟಾ ಮ್ಯಾಲೆ ಬಂದೂಬಸ್ತಾ |
ಸುತ್ತಿದಾನ ಸೀಮಿ ನಡಕಟ್ಟಾ
ತನ್ನ ಹಂತೇಲಿ ಸಾವಿರ ದಂಡಿಗೆ ಹಸದಂಗ ಊಟಾ |
ಮಾಡಿಕ್ಯಾರ ಸ್ವಸ್ತಾ ಇರಬೇಕಂತ ಹೇಳಿ ತಾಕಿತಕೊಟ್ಟಾ |
ಹೇಳಿ ಚನ್ನವ್ವನ ಬೆಟ್ಟಿಗಿ ಹೊಂಟಾನ ಗೋಪಾಲ
ಚೆನ್ನವ್ವ ರಾಯಣ್ಣನ ಮುಂದ ಇನ್ನೇನು ಐತಿ ಅಂತಾಳ ಮಗನ |
ಮೊನ್ನೆ ಮಲ್ಲಸರ್ಜ ಹೊದಾನ ಕೈಬಿಟ್ಟ ಘನಘಾತುಕರು ಕೆಂಪ ಸೋಜರು ಕೆಟ್ಟ |
ಇಷ್ಟು ಮನ್ನಿಸಿ ಕೇಳಿ ಹಳಬರಾಯಾಗ ಬಂದಿತೋ ಸಿಟ್ಟ
ಹಲ್ಲ ತಿಂದ ಅಂತಾನೋ ದೊರಿ ಮಲ್ಲಸರ್ಜ ಹೋದಬಳಿಕ
ಎಲ್ಲಾನು ಕಚೇರಿ ಬಿಡತೀನಿ ಸುಟ್ಟಾ
ಎಲ್ಲೆಲ್ಲಾ ನಡಿದಾಂಗ ಮಾಡತೀನ ಇಂಗ್ರೇಜನ ಆಟ ||
ಹೊಳ್ಳಿ ಬಂದ ಸಾವಿರದಂಡ ಸಂಗಾಟ ತಕ್ಕೊಂಡ
ಬೀಡಿ ಸಂಪಗಾಂವ ಕಚೇರಿಗೆ ಬೆಂಕಿ ಹಚ್ಚಿ ಬಿಟ್ಟಾ
ರಾಣಿ ಪೌಜ ಹಿಡಲಾಕ ಬಂತೋ ಕಡಿದ ಕೆಡಿವ್ಯಾರೋ ದಿಟ್ಟ ||
ಇಂಗ್ರೇಜಿ ನಡೆಸಿದಾರೋ ಒಳವರ್ತಿ ಆಗ ಪಿತೂರಿನಾಟಾ
ನೇಗಿನಾಳ ನಿಂಗನಗೌಡ ಖುದಾನಪೂರ ಯಂಕನಗೌಡಾ
ಮಸಲತ್ತು ಮಾಡಿ ತಿಳಿಸ್ಯಾರ ಒಬ್ಬರಿಗೊಬ್ಬಾ

||ಚಾಲ|||

ಚಿಂತಿ ಬಿಡ್ರಿ ಹಿಡದಕೊಡತೀನಿ ತಿಂಗಳ ಮುದ್ದತ ಕೊಟ್ಟಾ
ಸಾಹೇಬ ಕೊಡತೀನಿ ಅಂತಾ ಸಹಿ ಹಾಕಿದ ಕಾಗದ ಮ್ಯಾಲ
ಕಡೆಗೆ ಕೂತ ಉಣ್ಣುವಂತ ಹೊಲಾ |
ಯಂಕನಗೌಡ ನಿಂಗನಗೌಡ ಅದಾರೋ ಖಬೂಲಾ
ಜಳಕಮಾಡಿ ರಾಯಣ್ಣ ಕ್ಯಾವಿಗುಂಡಗಿ ತೊಡುವಾಗ
ಬಂದ ಮೋಸಮಾಡಿ ಕರಿಕಂಬಳಿ ಒಗಿದಾರ ದುರಿಮ್ಯಾಲ ಜಾಲ |
ಪಿತುರಿನ ಸಾಹೇಬರೆಲ್ಲಾ ಆತುರದಿಂದಲಿ ಹೋಗಿ ಕಟ್ಟಿ ಬಿಗಿದ ಒಗದಾರ ಕೈಕಾಲಾ |
ಆಗ ಶಂಕರ ಮುನದಾನ ರಾಯಣ್ಣನ ಮ್ಯಾಲಾ
ನಂದಗಡದ ಊರಹೊರಗ ಕೂಡಿ ಸರ್ವರೆಲ್ಲಾ
ಆಗ ನಿಂತ ನೋಡಿ ಮಾತಾಡತಾರೋ ರಾಯಣ್ಣನ ಸೂರತಾ
ಕೇವಲ ವಿಷ್ಣು ಪರಮೇಶ್ವರನ ಮಗಾ ಇದ್ದಾಂಗ ಮನ್ಮಥಾ
ಮನ ಹೌಸದಿಂದ ಬಂದ ಮೌನಿವೆರ್ಥಾ || ಪುಂಡ ಕಿತ್ತೂರ ನಾಡಿನೊಳಗ ….. ||

೮ನೇ ಚೌಕ

ಹೆಬ್ಬುಲಿ ಹಿಡದ ಒಯ್ಯುವಾಗ ಹಬ್ಬಿಸಿ ನೋಡುವ ಮಂದು ಭಾಳಾ |
ಸಾಬ ಸುಬೇದಾರ ಪಾರಾ ಅವರ ಮ್ಯಾಲಾ |
ಸಬ್ಬ ದಂಡ ಎಲ್ಲಾ ನಿಂತಾರ ಅವನ ಸುತ್ತುಮುತ್ತಲೆ |
ಮೈ ಉಬ್ಬಿಸ್ಯಾನ ಕಟ್ಟಿರುವ ಹಗ್ಗಾ ಕಿತ್ತವ ಮಿಗಿಲಾ
ಹನ್ನೆರಡಾಳ ಉದ್ದಗೋಡಿ ಓಡಿಬಂದ ಜಿಗದ ಹೋದಾ ಹದಿನೆಂಟು ಮಂದು ಪಾರಾ
ಸಿಪಾಯರು ಅವನಮ್ಯಾಲಾ ಮುತ್ತ ಮುತ್ತಗಿ ಹಾಕಿ ಹಿಡಿದಾರ ಅವನ ಒತ್ತರದಿಂದಲಿ
ಹಿಡಿದವರ ಪೌರುಷ ಬೆಳಸಿ ಪತ್ರಬರದ ಕಳುಹಿದರಾ |
ಬಿತ್ತಾರದಲ್ಲಿ ಹೋಗಿ ಮುಟ್ಟಿತ ರಾಣಿಯವರ ಕರದಲ್ಲಿ
ಓದಿ ನೋಡಿ ಆದ್ರ ಬಹಳ ಹರುಷದಲ್ಲಿ |
ಇಂಥಾ ಒಬ್ಬ ಬಹದ್ದೂರ ಇರಲಿ ನಮ್ಮ ದಂಡಿನಲ್ಲಿ
ತಿರುಗಿ ಉತ್ರಾ ಕಳುಹಿದಾರ ಜಕಮು ಏನೂ ಮಾಡಬಾರದು
ಜೋಕುಮ ಇಲ್ಲದ ತಕ್ಕೊಂಡು ಬರ್ರಿ ||
ವಿಲಾಯತಿಯಲ್ಲಿ ನಮ್ಮ ಸರಕಾರ ಮರ್ಜಿ ಅತಿ
ರಾಯಣ್ಣನ ನೋಡುದ ಇಲ್ಲಿ
ಹಿಂತಾ ಉತ್ತರ ಓದಿನೋಡಿ ಮತ್ತ ನಮ್ಮ ಜೀವದಸುತ್ತ ಮುಳವ ಉಳದೀದಂತ
ಚಿಂತೆ ಮಾಡುತಲಿ ಯಂಕನಗೌಡ ನಿಂಗನಗೌಡ
ಅಂಜಿದಾರ ಮನಸ್ಸಿನಲ್ಲಿ ಒಳಗಿಂದ ಒಳಗ |
ಬೇತ ನಡಸಿದಾರ ತಿಳಿಯದಲ್ಲಿ ದಿಕ್ಕುತಪ್ಪಿ
ಓಡ್ಯಾಡುತಾರ ಧಕ್ಕಾ ಅಂತ ಮನಸ್ಸಿನೊಳಗೆ
ಏಕದಮ್ಮ ಬಿಡಬ್ಯಾಡ್ರಿ ಅಂದಾರ ಹೋಗಿ
ಸಾಹೇಬರಂತೇಲಿ ಎಂದಿದ್ದರ ಒಂದಿನಾ ಹೊಡೆಯುತಾರ ನಮ್ಮತೆಲಿ ||
ಜೋರ ಹುಕುಂ ನಡಿಸ್ಯಾರ ದೂರತನಕ ಜಾಹೀರ ಹೋತು |
ನೋಡಲಾಕ ಕೂಡಿಸ್ಯಾರ ಜನಾ |
ಗಲ್ಲಿಗೇರಿಸತಾರ ಸೋಮವಾರ ದಿನಾ |
ಮುಸುಕಿಲೆ ಹಗ್ಗಾ ಹಿಡದಾ ವೀರರಾಯಾ |

||ಚಾಲ|||

ಜಿಗದನಿಂತ-ಹಾರಿಹೋದಿತ ಹೌಸೀನಾ |
ರಾಯಣ್ಣ ನೆನಸತಾನ ವೀರ ಮಾರೋತನಾ |
ಮಾರುತಿ ಲೋಕದ ಗಂಡ ಪುಂಡ ಅರ್ಜುನಾ |
ನಂತರ ಹೋದ ಮುಳಗಿ ಹೋದಿತೋ ರತನಾ |
ದೇವರಾ ಮಾಡಿ ಪೂಜಿಸತಾರೋ ಆತನ್ನಾ |
ಶಾಹೀರ ಶಾಮರಾವ ಬಾರೋ ಜಾಹೀರ ಕರ್ನಾಟಕದೊಳು |
ತಯಾರ ಮಾಡ್ಯಾರೋ ಚಂದ ಚಂದ ಕವಿತಾ
ತಾಯಿ ಕ್ಷೀರ ಕುಡದಂಗ ಆತೋ ಹಸುಗೂಸಿಗೆ ಹಿತಾ
ಬೈಲಹೊಂಗಲ ಶಹರಾ ಬಲಭೀಮನ ದಯಾಪೂರ್ತಾ
ಕುಲಕರ್ಣಿದಶಿಯಿಂದ ಪೈಲೆ ಕದನ ಹುಟ್ಟಿ
ಊರ ಬಿಟ್ಟ ಸುತ್ತೆಲ್ಲಾ ಹಾವಳಿ ಮಾಡಿದ ವಿಪರೀತಾ |
ಬಂಟನಿದ್ದರಿರಬೇಕ ರಾಯಣ್ಣ ಪುಂಡ ಪ್ರಖ್ಯಾತಾ
|| ಪುಂಡ ಕಿತ್ತೂರ ನಾಡಿನೊಳಗ … ||

ರಚನೆ : ಶಾಹೀರ ರಾಮರಾವ್
ಕೃತಿ :
ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ