ಚಿತ್ತಗೊಟ್ಟ ಕೇಳರಿನ್ನ ಕಿತ್ತೂರ ನಾಡಾನ ಸುದ್ದಿ
ಕತ್ತಿ ಹಿರದ ನಿತ್ತಿದಾನ ಲಡಾಯಕ
ಸಂಗೊಳ್ಳಿ ರಾಯಣ್ಣನಂಥ ಬಂಟ ಇದ್ದಿರಬೇಕ
ತಾಯಿ ಕೆಂಚವ್ವ ತಂದಿ ಹಳಬ ಭರಮನಾಯಕ ||
ಜಾತಿಯಿಂದ ಹಾಲಮತ ಛಾತಿಲಿಂದ  ಶಮರಂತ
ಸೋತ ನಡಿಲಿಲ್ಲ ಪ್ರಾಣ ಹೋಗೂತನಕ
ಬಂಟರಿದ್ದರಿರಬೇಕ ಇಂಥ ಪುಂಡ ಪ್ರಖ್ಯಾತ ||

ಮಲಪುರಿ ಹೊಳಿಯೊಳಗ ಹುಟ್ಟಿತ ಕದನದ ಬ್ಯಾಗಿ
ಕುಲಕರ್ಣಿ ಬಾಳಪ್ಪ ಅಂದ ದೊತ್ರಾ ಒಗದ ಕೊಡಬೇಕ
ಹಳಬ ಆದ ಮ್ಯಾಲ ಅಲಕ್ಷತನ ನಿನಗ್ಯಾಕ
ಚಾಕ್ರಿಮಾಡೋದಾದರ ಹೇಳಿದ್ದನೆಲ್ಲಾ ಕೇಳಬೇಕ ||
ಇಷ್ಟಕೇಳಿ ರಾಯಣ್ಣ ನಿಷ್ಠುರದಿಂದ ಹೇಳತಾನ
ಹೆಂತಾ ಕೆಟ್ಟ ಮಾತನಾಡಿದೆಪ್ಪ ಕೇಡಗಾಲಕ್ಕ
ನಾಚಿಕೆ ಬರಲಿಲ್ಲೇನೋ ಹಿಂತಾ ಕೆಲಸ ಹೇಳುದಕ ||

ಎಂಟದಿನ ಆಗಿದ್ದಿಲ್ಲ ಸಿಟ್ಟ ಇತ್ತ ಕುಲಕರ್ಣಿಗೆ
ಗಂಟ ಬಿದ್ದ ಸರಕಾರಿ ಪಾಳೇಕ
ರಾಯಣ್ಣ ಹೊಂಗಲಕ ಹ್ವಾದ ಹೋರಿಗಳನ ಮಾರೂದಕ
ಬಾಳಣ್ಣ ಕೆಂಚವ್ವನ್ನ ಕರಿಸಿದಾನೊ ಚಾವಡಿತನಕ ||
ಮಾಡಿದಾನ ಚೀಮಾರಿ ಡುಬ್ಬದಮ್ಯಾಲಿ ಕಲ್ಲಹೇರಿ
ಎಲ್ಲಿಹೋಗತಿ ಸದ್ದೆ ಪಾಳೆ ಕೊಡಬೇಕ
ನಿನ್ನ ಮಗಾ ರಾಯಾಗ ಬಂದತೀಗ ಬಾಳಸೊಕ್ಕ ||

ಹೋರಿ ಮಾರಿದ ಹಣಾತಂದ ಮಾರಿಮ್ಯಾಗ ಒಗದ
ತಾಯಿ ದುಬ್ಬದ ಮ್ಯಾಲಿನ ಕಲ್ಲ ಇಳಿವ್ಯಾನ ನೆಲಕ
ಬಾಳ್ಯಾ ನಿನ್ನ ಚೆಂಡ ಕಡದ ಇಡತೇನಂದ ಕಡಿಯಾಕ
ಕುತಿಗಿ ಹಿಡಿದ ಕತ್ತಿ ಕೈ ಎತ್ತಿ ಮ್ಯಾಲಕ್ಕ ||
ಗಾಬ ಆಗಿ ಬಾಳಣ್ಣ ಬಾಯೊಳು ಹಲ್ಲಕಚ್ಚಿ
ಜೀವದಾನಾ ಬೇಡಿದಾನ ಬಿದ್ದಪಾದಕ
ನಿನ್ನ ಮಗಾ ಆಗಿ ಇರತೇನಪ್ಪಾ ಕಡಿತನಕ ||

ದಯಾಬಂತ ರಾಯಣ್ಣಗ ಜೀವದಾನಾ ಕೊಟ್ಟಿದಾನ
ಕುಲಕರ್ಣಿ ಕೊಟ್ಟಿ ರಿಪೋರ್ಟ ಬರದ ಕಂಪನಿ ಸರಕಾರಕ್ಕ
ವಾರಂಟ ಹುಟ್ಟೀತ ರಾಯಣ್ಣನ ಹಿಡಿಯೂದಕ್ಕ
ಸಂಪಗಾಂವ ಬೀಡಿ ಕಚೇರಿ ಸುಟ್ಟಿದಾನ ಆ ಕ್ಷಣಕ ||
ಬಲ್ಲಿದ ಬಂಟರ ಹಿಂಡ ಒಪ್ಪುವಂಥಾ ಒಣಕಿ ದಂಡ
ಕೂಡಿಸಿಕೊಂಡ ರಾಯಣ್ಣ ಬೆಂಬಲಕ
ಬೆನ್ನ ಹತ್ತೀತ ಬ್ರಿಟೀಷ ದಂಡ ಹಿಡಿಯೋದಕ ||

ಒಂದನೇ ಚಾಲ

ಕೂಡುಕೊಂಡ ಹ್ವಾದ್ರ ಮಲ್ಲಾಡಕ ಬಾಳಗುಂಡ ಸ್ಥಳಕ
ಇಳಕೊಂಡಾರ ಸ್ವಸ್ಥಾ
ಬ್ರಿಟಿಷರ ದಂಡ ನಡೀತ ಹುಡಕೂತಾ ||

ಗೋರಾದಂಡ ಇಳದೀತ ಗೋದಳಿಗಿ ರಾತ್ರಿ ಹೊತ್ತ ಮುಳಗಿ
ರಾಯಣ್ಣಗಾತ ಗೊತ್ತಾ
ಮುಗಿ ಹಾಕಿದ್ರ ಆಗಲಿಲ್ಲಾ ಸುಸ್ತಾ ||

ಕಡಕಡದ ಒಗದ್ರ ಚಂಡ ರುಂಡ ಮುಗಿದ ಎಲ್ಲಾ ದಂಡ
ಒಬ್ಬನ್ನ ಬಿಟ್ರ ಬೇಕಂತಾ
ಸಾಹೇಬಗ ಸುದ್ದಿ ತಿಳಸಂತಾ ||

ಬ್ರಿಟಿಷರಿಗೆ ಬಿದ್ದಿತ ಬಾಳ ದಿಗಿಲ ಜಾಹೀರ ನಾಡಮ್ಯಾಲ
ಹಿಡಕೊಟ್ರ ಇನಾಮ ಐತಿ ಮಸ್ತಾ
ನೇಗಿನಾಳ ಖೋದಾನಪುರ ಗೌಡ್ರ ಹಿಡಕೊಡತೇವಂತಾ ||

ಎರಡನೇ ಚಾಲ

ಗುಡ್ಡಗಂವಾರ ಹುಡುಕೂತ ನಡದಾರು
ರಾಯಣ್ಣನ ಭೆಟ್ಟಿ ಆದಾರು ||

ವಿಶ್ವಾಸಕೊಟ್ಟ ಮಾತನಾಡ್ಯಾರು
ರೊಟ್ಟಿಬುತ್ತಿ ನಿನಗ ತಂದೇವಂದಾರು ||

ಜಳಕಾ ಮಾಡೂದಕ ಕರಕೊಂಡ ನಡದಾರು
ಬಾಳಗುಂಡ ವರ್ತಿಗಿ ಇಳದಾರು ||

ಕತ್ತಿ ತಗದೊಗದ ಸಿಳ್ಳ ಹೊಡದಾರು
ಲಷ್ಕರ ಬಂದು ಸುತ್ಹಾಕಿ ಹಿಡಿದಾರು ||

||ಏರ||
ಧಾರವಾಡದಲ್ಲಿ ಚೌಕಶಿ ಮಾಡಿದಾರ ಬಾಳ ಗಾಸಿ
ರಾಯಣ್ಣನ ಗಲ್ಲಿಗ್ಹಾಕಿದಾರ ಓದ ನಂದಗಡಕ
ತಿಗಡೊಳ್ಳಿ ಮರಿಕಲ್ಲ ಮಾಡಿದಕವಿ ಬಲುಟೀಕ
ಬಲ್ಲಿದ ಬಲಭೀಮ ಆದಾನ ಅವನ ಸಾಯಕ್ಕ ||
ಜಾತಿಯಿಂದ ಹಾಲಮತ ಛಾತಿಲಿಂದ ಶಮರಂತ |
ಸೋತ ನಡಿಲಿಲ್ಲ ಪ್ರಾಣ ಹೋಗೋತನಕ
ಸಂಗೊಳ್ಳಿ ರಾಯಣ್ಣನಂತಾ ಬಂಟ ಇದ್ರ ಇರಬೇಕ ||

ರಚನೆ :
ಮರಿಕಲ್ಲಕವಿ
ಕೃತಿ :
ಮರಿಕಲ್ಲಕವಿಯ ಕೃತಿಗಳು