ಶೂರನಾದ ಸಂಗೊಳ್ಳಿಯ ರಾಯನಾಯಕ ಪುಂಡಾ |
ಗೋರಾ ದಂಡಿಂದೆಲ್ಲಾ ಹಾರಿಸಿದನು ರುಂಡಾ|| ಪ ||

ಕುಲಕರ್ಣಿ ಬಾಳಣ್ಣಂವಗ ಧೋತ್ರಾ ಶಳತಾ ಅಂದಾ |
ಅಲ್ಲಿಗಿ ರಾಯಣ್ಣಗ ಬಂದೀತ ಕ್ರೋಧಾ |
ಸೊಲ್ಲ್ಯಾ ಅಂತ ತಿಳದಿ ಏನೋ ನೋಡಿ ಬಿಡತೀನಂದಾ |
ಬಲ್ಲಾಂಗ ನಡದೀತೆ ಇಬ್ಬರಿಗೆ ವಾದಾ|| ೧ ||

ಫಾಳೆ ಎತ್ತುವ ವ್ಯಾಳೆದಾಗ ಬಾಳಣ್ಣ ಸಾಧಿಸಿದಾ |
ನಾಳೆ ಅಂದ್ರ ಕೇಳಲಿಲ್ಲವರಪ್ಪನ ತರಸಿದಾ |
ಹೇಳಿ ಕೇಳಿ ಡುಬ್ಬದ ಮೇಲೆ ಕಲ್ಲ ಹೇರಿ ನಿಂದ್ರಿಸಿದಾ |
ಹಳಬರಾಯಂಣ ಹೋರಿ ಮಾರೀಹಪ್ತೆ ತುಂಬಿದಾ|| ೨ ||

ಸುರಪುರ ಅರಸಂದು ತಕ್ಕೊಂಡಾ |
ಮೂರನೂರ ಬೇಡರದೊಂದ ಕೂಡಿಸಿದ ಹಿಂಡಾ |
ಧೀರ ಗಜವೀರನ್ನ ಸಂಗಡ ಕರಕೊಂಡಾ |
ಮೀರಿದಾಂವ ಬಿಚ್ಚಗತ್ತಿ ಚನ್ನಬಸವಣ್ಣ ಮುಖಂಡಾ|| ೩ ||

ಬೀಡಿ ಸಂಪಗಾಂವಿ ಕಚೇರಿ | ಸುಟ್ಟ ಬೂದಿ ಮಾಡಿದಾ |
ನೋಡಿ ಸುಬೇದಾರ ಧಾರವಾಡಕ ತಿಳಿಸಿದಾ |
ದೊಡ್ಡ ಸಾಹೇಬ ವಿಕ್ಟೋರಿಯಾ ರಾಣಿಯವರಿಗೆ ಬರದಾ |
ದೌಡ ಮಾಡಿ ಕಳಿಸಿದರು ದಂಡ ಅಳತಿಲ್ಲದಾ|| ೪ ||

ಹಳ್ಳಕೊಳ್ಳ ಹುಡುಕುತ ಬಂತ ಪೌಜ ಖಬರಿಲ್ಲದಾ |
ಹಳ್ಯಾಳ ಗುಡದಾಗ ಸರ್ಜ ಫರಾಳ ನಡಸಿದ್ದಾ |
ಸುಳವ ಹಿಡಿದ ಗತ್ತಗಾರಕಿ ಯುದ್ಧ ನಡೆಸಿದಾ |
ಎಲ್ಲಾ ಕಂಟಗಿ ಅರವಿಸುತ್ತಿ ಬೆಂಕಿ ಹಚ್ಚಿಸಿದಾ|| ೫ ||

ಮಂದಿ ಇಲ್ಲೇ ಐತಿ ಅಂತ ಸಿಪಾಯಿಗಳು ತಿಳದಾ |
ಮದ್ದಗುಂಡ ತೀರುವ ತನಕ ಹೊಡದರು ಪಸಂದಾ |
ಆದದ್ದು ನೋಡಿ ರಾಯಣ್ಣವರ ಮೇಲೆ ಬಿದ್ದಾ |
ಗದ್ನಿ ಹೊಡದ ಕತ್ತೀ ಹಿರದ ರುಂಡಗಳ ತರದಾ|| ೬ ||

ಚಕ್ರ ಟೊಪಿಗಿ ಫೀರಂಗೇರನ ಲೆಕ್ಕವಿಲ್ಲದೆ ಕಡದಾ |
ಬಕ್ಕ ಬರ‍್ಲ ಬಿದ್ದವರನ್ನ ಬೆನ್ನ ಮೇಲೆ ತುಳದಾ |
ದಿಕ್ಕ ತಿಳಿಯದಂಗ ಆಯ್ತ ರಕ್ತಿದ್ಹೊಳಿಹರದಾ |
ಸೊಕ್ಕ ಮುರಿದು ಹೋಯಿತು ಆಗಿನ ರಾಣಿ ಸರ್ಕಾರದ್ದಾ|| ೭ ||

ಸಂಪಗಾಂವಿ ತಾಲ್ಲೂಕಿನ ಸುತ್ತಿನ ಹಳ್ಳಿ ಸುಲದಾ |
ಸಂಪತ್ತು ಇದ್ದವರದು ಮನಿ ಎಲ್ಲಾ ಬಳದಾ |
ಗುಂಪಿನೊಳಗಿದ್ದವರ ಹೊಟ್ಟೆ ದಶೆಯಿಂದಾ |
ಸಂಪೂರ್ಣ ಜಬಾಬದಾರಿ ತನ್ನ ಕೂಡ ಇದ್ದವರದಾ|| ೮ ||

ಉಪಟಳಕ್ಕ ಸರಕಾರದವರು ಕೋಪ ಆಗಿ ಮುಂದಾ |
ತಪಾಸ ಮಾಡಿ ಹಿಡಿದವರಿಗೆ ಇನಾಂ ಕೊಡತೀವಂದಾ |
ಉಪಾಯದಿಂದ ಡಂಗುರ ಹೊಡಿಸಿ ಮಾಡ್ಯಾರ ಪ್ರಸಿದ್ಧಾ |
ಕಪಟಿಗಳು ವಚನ ಕೊಟ್ರ ಮೂವರು ಕೂಡಿ ಬಂದಾ|| ೯ ||

ನಿಂಗನಗೌಡ ವೆಂಗಕನಗೌಡ ಬಾಳನಾಯ್ಕ ಕೂಡಿಕೊಂಡಾ |
ಹ್ಯಾಂಗ ಮಾಡಬೇಕಂತ ಲೆಕ್ಕ ಹಾಕಿ ಮನಗಂಡಾ |
ಸಂಗೊಳ್ಳಿರಾಯನಾಯ್ಕಗ್ಹೋಗಿ ಹೇಳತಾರ ಬಂಡಾ |
ಕಂಗಾಲಾಗಿ ಬೆನ್ನಿಗೆ ಬಿದ್ದ ಇರತೇವ ನಿಮ್ಮ ಕೂಡಾ|| ೧೦ ||

ಒಳ್ಳೆ ಮನುಷ್ಯ ರಾಯನಾಯ್ಕ ವಿಶ್ವಾಸ ಹಿಡದಾ |
ಹಳ್ಳಕ್ಹೋಗಿ ಜಳಕಕ್ಕ ಕುಂತಾ ಕತ್ತಿ ತಗದಿಟ್ಟಿದ್ದಾ |
ಕಳ್ಳರಿವರು ಮೂವರು ಕೂಡಿ ಆಗ ಮೇಲೆ ಬಿದ್ದಾ |
ತಳ್ಳಿ ಮಾಡಿ ಕೈಕಾಲ ಕಟ್ಟಿ ಹೊರಸಿನ ಮೇಲೆ ಒಗದಾ|| ೧೧ ||

ಸರದಾರನ ಮುಂದ ಇಟ್ರ ಕಚೇರಿಗಿ ಒಯ್ದಾ |
ಸರದಾರ ಸರ್ಜನ್ನ ನೋಡಿ ಮರ ಮರ ಮರಗಿದಾ |
ಶಿರ ಹೊಡೆಯುವ ಪರವಾನಗಿ ಸರಕಾರನ್ನ ಕೇಳಿದಾ |
ಮರಳಿ ಹುಕುಂ ಬರುದರೊಳಗೆ ಗಲ್ಲಿಗೆ ಹಾಕಿಸಿದ್ದಾ|| ೧೨ ||

ನಂದಗಡದೂರಲ್ಲಿ ದಫನ ಮಾಡಿಸಿದಾ |
ಮಂದೆಲ್ಲಾ ಮರಗಿದರು ಕೊಲಬಾರದಿತ್ತಂದಾ |
ಚಂದ ಆಲದ ಮರ ಒಂದ ಗುರ್ತಿಗೈತಿ ಇಂದಾ |
ಸುಂದರ ಹುಲಕುಂದ ಭೀಮ ಪದ ಮಾಡಿ ಸಾರಿದಾ|| ೧೩ ||

ರಚನೆ : ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀನ ಜನಪದ ಗೀತೆಗಳು