ಸಂಗೊಳ್ಳಿ ರಾಯನಾಯ್ಕ ಸರ‍್ಪ ಸಂಪಗಾಂವಿ ಸುಭೇದಾರನ ಮ್ಯಾಗ |
ತಳ್ಳಿ ಮಾಡಿದನು ಮಹಾ ಪುಂಡಾ |
ಒತ್ತರದಿಂದ ಸುತ್ತಿನ ಹಳ್ಳಿ ಮುತ್ತಿಗಿ ಹಾಕಿ ಬಡದರಣ್ಣ |
ಗೊತ್ತ ಇಲ್ಲದಂಗಾಗಿ ಹೋಯಿತು ಬಂಡಾ|| ಪ ||

ಪೂರ್ವದ ಮಾತ ಹೇಳತೀನ ನಿಮಗ ಸರ್ವರು ಕುಂತ ಕೇಳಿರಿ |
ಗರ್ವ ಬಂತ ಸಂಗೊಳ್ಳಿ ಕುಲಕರ್ಣಿಗಿ |
ಚಂದದಿಂದ ರಾಯನಾಯ್ಕ ಹೊಂದಿಕೊಂಡ ಇದ್ದ ಅವರ |
ಮುಂದ ಹುಟ್ಟಿತ ಕದನದ ಬ್ಯಾಗಿ ||
ಕುಲಕರ್ಣಿ ಬಾಳಪ್ಪ ರಾಯಣ್ಣಗ ಜಳಕ ಮಾಡು ಹೊತ್ತಿನಾಗ |
ಧೋತ್ರಾ ಶಳತಾ ಅಂತ ಕೊಟ್ಟ ಅವನ ಕೈಯಿಗಿ |
ಇಷ್ಟ ಮಟ್ಟಗಿ ಸಿಟ್ಟಮಾಡಿ ಧಿಟ್ಟತನ ಹಿಡದ ರಾಯಣ್ಣ |
ಮುಟ್ಟಾಕಿಲ್ಲ ಅಂದ ಅರಿವಿ ಎಂದೆಂದಿಗೆ ||
ಯಾಕಲೆ ಹಳಬಾ ಜೊತ್ಯಾಗಿದ್ದಿ ಸೊಕ್ಕಬಂತ ಏನೋ ಈಗ |
ದಿಗರ ಆಡತಿಯೋ ನಿಂತ ಇದಿರಿಗಿ |
ಕೇಳಿ ರಾಯಣ್ಣ ತಾಳಿ ಸಿಟ್ಟು ಹೋಳಿ ಆದ ನಿನ್ನ |
ಬಡುವೆನೆಂದು ಹೇಳಿ ಹೊಂಟ ಹಿಂದಕ ತಿರಿಗಿ ||
ಒಳ್ಳೇದ ಬಾಳಣ್ಣ ನನ್ನ ತಳ್ಳಿ ಮಾತ್ರ ಹಿಡಿಯೋ ಇನ್ನ |
ದಾಳಿ ಬಂಟ ತಿಳಿಯೊ ಸುತ್ತಿನ ಹಳ್ಳಿಗಿ |
ಒತ್ತರದಿಂದ ರಾಯ ನಾಯ್ಕ ಹೆತ್ತಬಾಯಿ ಪಾದಕ ಬಿದ್ದು |
ಮತ್ತೆ ಕಟ್ಟಿಕೊಂಡ ಹತ್ತೀತ ಬ್ಯಾಗಿ ||

||ಚಾಲ|||

ಮೊಗಲಾಯಿ ಸೀಮೆಗೆ ಹೋಗಿ | ಸುರಪುರ ಅರಸನಿದಿರಿಗಿ | ನಿಂತ ಕೈ ಮುಗದಾ |
ಶಿರಬಾಗಿ ನಮಸ್ಕಾರ ಮಾಡಿದಾ
ಧೀರ ಹೌದೊ ರಾಯನಾಯಕ | ಹಾರಿದ ಹೆನ್ನೆರಡ ಪಕ್ಕ ಅಕ್ಕಡಿ ಜಿಗಿದಾ
ಅರಸ ಸ್ವತಾ ಕಣ್ಣಾರೆ ನೋಡಿದಾ ||
ಅರಸ ಮೆಚ್ಚಿ ಹರುಷವಾದ ಭಾರೀ ಸರ‍್ಜ ನಿನಗ ಸರಿ |
ಯಾರು ಇಲ್ಲಂದಾ |
ಏನ ಬೇಡ್ತಿ ಬೇಡ ಕೊಡತೇನಂದಾ ||

||ಏರು||

ಎನಗ ಒಲಿದರ ನೀನು ಮುನ್ನೂರ ಬೇಡರನಕೊಡ |
ಆರಿಸಿಕೊಂಡ ವಯ್ಯತೇನ ಮನಗಂಡಾ|| ೧ ||

ದಂಡ ಎಲ್ಲಾ ತಕ್ಕೊಂಡ ಬಂದು ಬಂಡಾಯ ಮಡುವೆನೆಂತೆಂದು |
ಅವರಿಗೆ ಹೇಳಿದನು ಪಂಡೀತಾ |
ರವಡ ಮಾಡಿ ರಾಯನಾಯಕ ದವಡಮಾಡಿ ತಂದ ದಂಡಿನ |
ಗುಡದಾಗ ವೈದ ಇಟ್ಟ ಎಲ್ಲ ತುರತಾ ||
ತಂದ ದಂಡಿಗೆ ಹೇಳತಾನ ಹೊಂದಿಕಿಂದ ಮಾತಗಳನು |
ಮುಂದನಿಂತ ಚಂದ ಮಾಡಿ ಒಳೆ ಸಿಸ್ತಾ |
ಎಚ್ಚರದಿಂದ ಇರ್ರಿ ನಿಮ್ಮ ಸುತ್ತುಕಡೆ ಹುಷಾರಾಗಿ |
ಎತ್ತರೆ ಹೋದಿರಿ ನೀವು ಮತ್ತಾ ||
ಹಸದರ ಮನುಷ್ಯರನ್ನ ತಿನ್ನುವಂಥ ಹಬಸೇರನ ತಂದ ಇಟ್ಟಿ |
ಎಲ್ಲಾ ಸುತ್ತು ಕಡೆ ಮಡಿ ಬಂದು ಬಸ್ತಾ |
ವಿಸ್ತಾರ ದಂಡಿಗಿಲ್ಲಾ ಸಿಸ್ತಮಾಡಿ ತಯ್ಯಾರಾಗಿ ವತ್ತರದಿಂದ |
ನಡಿರೆಂದ ಜಿಕ್ಕೊಂತಾ ||
ಕಡುವ ಕತ್ತಿ ಕೈಚೂರಿಗಳು ಇರಿಯುವ ಕಂಜೀರ ಬಾಕ |
ಪಿಸ್ತೂಲ ಸಿಟ್ಟಿನ ಬಂಟರು ಸಮಸ್ತಾ |
ಕಠಾರಿ ಬಿಲ್ಲು ಈಟಿ ಬಾಣ ಧಿಟ್ಟತನದಲ್ಲಿಡುವ ಡಾಲು |
ಮ್ಯಾಗ ತೊಟ್ಟಾರ ಚಿಲಕುತ್ತಾ ||

||ಚಾಲ|||

ದುಂಡಗ್ಯಾಮಿ ಹೊಂದಿಕಿ ಗಂಧ ಕಸ್ತೂರಿ ಧರಿಸಿ ಮುಂದೆ |
ಹುಯಿಲಗಾಳಿ ಹಿಡಿಸುತಾ |
ಅಬ್ಬರದಿಂದ ಒಬ್ಬರು ಉಳಿಯದಂತಾ ||
ಖಬರಿಲ್ಲ ಬಂದರಂಣ ಆಗ |
ರಣಸೂರಿ ಯಾವಾಗ | ದೌಡ ಮಾಡೇವಂತಾ |
ಒಳಗ ಉಕ್ಕತಿತ್ತ ಅವರ ರಕ್ತಾ ||
ಭೇರಿ ಕಾಳಿ ಕರುಣಿಯ ಹಿಡಿಸಿ | ಮಿರೀದ ಹಲಗಿ ಹೊಡಿಸಿ |
ಕಾಲ ಮಂದಿ ಸಹಿತಾ |
ಮುಂದಕ ಕಳವಿದ ಪ್ರಖ್ಯಾತಾ ||

||ಏರು||

ರಂಗವಾಗಿ ಇರವುವ ಕರ್ನಿಗೆ ಜಂಗು ಜಲ್ಲಿ ಘಂಟೆ ಸರಪಳಿ |
ಮುಂಗೈಯಾಗ ತೊಡೆ ಹಾಕಿಸಿದ್ದ ಎರಡಾ|| ೨ ||

ಹಲ್ಲತಿಂತ ಹವಣಸ್ತ ಕಾಲಕೆದರಿ ಕತ್ತಿ ಹಿರಿದು |
ಜಿಗತಾ ಮಾಡತಾರ ಅವರು ಕುಸಿ ಬಂದಾ |
ಬಿಚ್ಚಗತ್ತಿ ಚನ್ನಪ್ಪಣ್ಣ ಮುಂದೆ ಶಮಸೇರ |
ಗಡೇಕ ಹೋಗಿ ವಿಚಿತ್ರಹೊಡವುನ ನಡಿರೆಂದಾ ||
ಗಜವೀರ ಹೇಳತಾನ ಬಹಳ ಗದ್ದಲ ಮಾಡುನು ಇಂದ |
ಏನೇನು ಉಳಿದಂಗ ಒಳಗಿಂದಾ |
ಕಡ್ಡಿಗುಡ್ಡ ಬಾಳಣ್ಣ ದೊಡ್ಡ ಕಿಲ್ಲೇದ ಭೀಮಣ್ಣ |
ಬೆಳವಡಿ ವಡ್ರ ಎಲ್ಲಣ್ಣ ಕತ್ತಿ ಹಿರದಾ ||
ಸತ್ಯುಳ್ಳ ಸಿರಸಂಗಿ ಕಾಳವ್ವ ಮತ್ತೆ ಕಕ್ಕೇರಿ ಕರಿಯವ್ವ |
ನಮ್ಮ ಕತ್ತಿಗೆ ಬೇಸ್ಯಾನ ಕೊಡಿರೆಂದಾ |
ಎಲ್ಲಾ ಮಂದಿ ಕೂಡಿಕೊಂಡು ನಿಲ್ಲದೆ ಹೋಗಿ ಶಮಸಾರ ಗಡದ |
ಹಲ್ಲಾ ಏರಿ ಮುತ್ತಿಗಿ ಹಾಕಿದ್ದಾ ||
ಗುಡ್ಡದ ಒಳಗ ಹೋಗಿ ತಾವು ಬಹಳ ಗದ್ದಲ ಮಾಡ್ಯಾರಣ್ಣ |
ಸಿಕ್ಕ ಮಂದಿನೆಲ್ಲಾ ಚಂಡ ಕೋದಾ |
ಹಿಡದ ಹೊಡದ ದಂಧಲ ಮಾಡ್ಯಾರ ಗಮಿಕಿಲಿಂದ ಗಡಾದೋಳು |
ಮಂದಿ ಯಾರ‍್ಯಾರುಳಿಯಲಿಲ್ಲ ವಳಗಿಂದಾ ||

||ಚಾಲ|||

ಯಾತರದಿಲ್ಲ ಅವಂಗ ದರಕಾರ | ಕಾಲಲ್ಲಿ ಹಗರ |
ಕತ್ತಿ ಹಿಡದ ಢಾಲಾ |
ಕಡದ ಹೋಗತಾನ ಸಿಗುದಿಲ್ಲಾ ||
ಗಡಾದ ವಳಗ ಗದ್ದಲ ಆದ | ಸುದ್ದಿ ಕೇಳಿದ |
ಸುಭೇದಾರ ಎಲ್ಲಾ |
ಘಾಬರ‍್ಯಾಗಿ ಎದ್ದ ಬಂದನಲ್ಲಾ ||
ಸುತ್ತ ಮುತ್ತ ನೋಡಿದನು ಆಗ | ನಮ್ಮ ನಾಡ ವಳಗ |
ಏನೇನು ಆಗಿದ್ದಿಲ್ಲಾ |
ಹಿಂತವರ‍್ಯಾರು ಇಲ್ಲಿ ಬಂದಿದ್ದಿಲ್ಲಾ ||

||ಏರು||

ಆದ ರೀತಿ ಮಾತಗಳನು ಶೋಧ ಮಾಡಿ ಸುಭೇದಾರ |
ಧಾರವಾಡಕ ಬರದ ಹಾಕಿದ ಕೂತಕೊಂಡಾ|| ೩ ||

ಬರದ ಪತ್ತರ ವತ್ರರದಿಂದ ವಾಲಿಕಾರರು ಓದರಣ್ಣಾ |
ದಾರಿ ಕೂಡಿಕೊಂಡ ಆಗ ಧಾರವಾಡಕ |
ಗಚ್ಚಿನ ಬಂಗ್ಲೇದ ವಳಗ ಕಚೇರಿಯಾಗಿತ್ತು ಕಾಗದ |
ಬಿಚ್ಚಿ ಓದರು ಸಾಹೇಬನ ಹಂತೇಕ ||
ಓದಿಕೊಂಡ ಸಾಹೇಬ ನೋಡಿ ಹೋದ ಮಾತಿಗಿ |
ಇನ್ನ ಯಾಕ ಎಂದು ಗಾದಿ ಬಿಟ್ಟ ಎದ್ದನಾಕ್ಷಣಕ |
ಟೊಪ್ಪಿಗಿ ಒಗಿದು ಮುಂಗೈ ಕಡಿದು ಸಿಟ್ಟಿಲಿಂದ ಹಲ್ಲತಿಂದು |
ಕುಂತ ಪತ್ರ ಬರದ ಮುಂಬಾಯಿಕ ||
ವಿಕ್ಟೋರಿಯಾ ಎಂಬುವಂಥ ಶಕ್ತಿಯುಳ್ಳ ರಾಣಿಯವರು |
ಮೊಕ್ತಾ ನೋಡಿ ತಿಳಿದರು ತಮ್ಮ ಮನಕ |
ಐದನೂರ ಸೋದರ ಮಂದಿ ಎರಡನೂರ ಕರಿಯ ಮಂದಿ |
ಕಳಿವಿ ಕೊಟ್ಟರಾಗಿನ ಕ್ಷಣಕ ||
ಹೇಳದ ಅಷ್ಟು ದಂಡ ಬಂತ ಕಾಳಕಸ್ತಾಮಾಡಲಿಕ್ಕೆ |
ಬೆಳಗಾಂವಿ ಧಾರವಾಡ ಜಿಲ್ಲೇಕ |
ಸುಭೇದಾರ ತಗೊಂಡ ಇನ್ನ ಸಬರ ಹಿಡಿಯದ ಹೋಗಬೇಕಂದ
ಜಬರದಿಂದ ರಾಯಣ್ಣನ ಕೊಲ್ಲುದಕ ||

||ಚಾಲ|||

ಅಷ್ಟು ಮಂದಿ ಕೂಡಿಸಿಕೊಂಡ ಹೊಂಟ |
ಸುಭೇದಾರ ಸಿಟ್ಟ | ಅಡ್ಡಾಡಿ ಹುಡುಕುತಾ |
ರಾಯಣ್ಣನ ಮಂದೆಲ್ಲಾ ಐತೆಂತಾ ||
ಹಳಕೊಳ್ಳ ಗುಡ್ಡ ಗಂವ್ಹಾರ | ಅಡವಿ ಕಾಂತಾರ |
ಹೊಂಟಾರ ನೋಡುತಾ |
ಹಳ್ಯಾಲ ಗುಡ್ಡಕ ಹೋದಾರ ಆಹೊತ್ತಾ ||
ಇವರ ದಂಡ ಬಂತ ಅಂಬುವ ಗುರ್ತಿ |
ರಾಯಣ್ಣಗಾದೀತ | ನೋಡ್ಯಾನ ಶಮರಂತಾ |
ಫರಾಳ ಮಾಡೀತ ಅವನ ದಂಡ ಕೂತಾ ||

||ಏರು||

ತವಕದಿಂದ ತಯ್ಯಾರಾಗಿ ಗಿಡಕ ಜಾಂವಿಗಿ ಕಟ್ಟಿ ದೂರ ಹೋಗಿ
ನಿಂತಾರ | ಹುಯಿಲ ಗಾಳಿ ಹಿಡಿಸಿ ಕೊಂಡಾ
ಇಲ್ಲೇ ಅದಾನ ರಾಯ ನಾಯಕ ಅಂದು ನೋಡು ಅವರು |
ವೈರಗಟ್ಟ ಹೊಡೆದರು ಸುತ್ತಾ |
ಗುಂಡು ಮದ್ದು ಆವತ ಗುಂಡು ಗರ್ಸಲ್ ತಬಾಕಿ ಕರುಲಿ |
ಹೊಡುವತಾರ ಇಲ್ಲ ಪುರುಸೊತ್ತಾ ||
ಅವಾಜ ಧಡ ಫಡ ಅಳ್ಳ ಹುರದಾಂಗ ಕೊಳ್ಳದೊಳಗಿನ ಗಿಡಕ |
ಹೊಡೆದರ ಗುಡ್ಡನಾದ ಹಿಡದೀತ ಗದ್ದನಿಸುತಾ |
ಮೂರ ತಾಸ ಹೊಡದರ ಎಲ್ಲಾ ಮದ್ದ ಗುಂಡ ತೀರಿ ಹೋತ |
ಮುನದಾನ ಅವರಿಗೆ ಭಗವಂತಾ ||
ಮದ್ದತೀರಿ ಬಂದ ಆದಾರ ಗುಂಡ ಹಾಕುವ ಸಪ್ಪಳ ನಿಂತದ್ದು |
ಕಂಡ ರಾಯಣ್ಣ ಬೆನ್ನಮ್ಯಾಲ ಬಂದಸ್ವತಾ |
ಕುರಿ ವಳಗ ತೋಳ ಹೊಕ್ಕ ಮುರ ಮುರದ ವಗವಗದ |
ಹಿರ ಹಿರದ ಕಡದಾರ ಕತ್ತಿಲೆ ವಿಪರೀತಾ ||
ಸುತ್ತಗಟ್ಟಿ ಮಂದಿ ಯತ್ತ ಯತ್ತ ಹೋಗಗೊಡದ ಕಡದಾರ |
ಮುತ್ತಿಗಿ ಹಾಕ್ಯಾರ ದಂಡಿಗಿ ಬಂತ ಕುತ್ತಾ |
ಪಿಸ್ತೂಲ ಫಿರಂಗ ಹಿರಿದು ಬಾಕ ಬಿಲ್ಲ ಬಾಲಿಲೆ ಒಗೆದು |
ನಾಕನೂರ ಮಂದು ಕೊಂದಾರಾ ಹೊತ್ತಾ ||

||ಚಾಲ|||

ಕಂಡ ಮಂದಿ ಚಂಡ ಕೋದಾರ | ಗುಂಡಿಲೊಗದಾರ |
ರುಂಡ ಪತ್ತಾ ಇಲ್ಲಾ |
ತುಂಡ ತುಂಡ ಮಾಡ್ಯಾರ ಕೈಕಾಲಾ ||
ಕೊಳ್ಳದೊಳಗ ಆಗಿ ಕುತಂತ್ರ | ಹರದೀತ ನೇತ್ರ |
ಭೂತಗಳ ಪಾಲಾ |
ಇಂಥ ಶರಸೂರಿ ಎಲ್ಲಿ ಆಗಿದ್ದಿಲ್ಲಾ ||
ಉಳಿದ ಮಂದಿ ತೆಳಗ ಬಿದ್ದಾರ | ಕತ್ತಿ ಚಲ್ಯಾರ |
ಕಚ್ಚಿದರು ಹಲ್ಲಾ |
ಕಲ್ಲ ಹೊತ್ತರಣ್ಣ ತಲಿ ಮ್ಯಾಲಾ ||

||ಏರು||

ಆದ ಕೈಲೆ ಸರಕ್ಕನ ಎದ್ದ ಕಿತ್ತೂರ ತಳದ ಮ್ಯಾಲ ಹೋದ್ರ |
ಇತ್ತ ಅಲ್ಲಿ ಥೇಟ ಫಿರಂಗ್ಯಾರ ದಂಡಾ|| ೫ ||

ಚಕ್ಕರ ಟೊಪ್ಪಿಗಿ ಫಿರಂಗ್ಯಾರನ ಲೆಕ್ಕವಿಲ್ಲದ ಕಡದ ದಂಡಿನ |
ದಿಕ್ಕ ತಪ್ಪಿಸಿ ಬಿಟ್ಟಾರ ಎಲ್ಲಾ ಹೋತಿ |
ಪುಂಡರಾಗಿ ತರವೂನ ಹೊನ್ನ ಕಂಡ ಕಂಡ ಊರ ಬಡದು |
ದಂಡಿಗೆಲ್ಲಾ ಪುರವಟ ಆಗತತಿ ||
ಹಳ್ಯಾಳ ಹನಮಗಟ್ಟಿ ತಳ್ಳಿಮಾಡಿ ತಾಳವಾಡಿ ಹೋಗಿ |
ಬಡದರಂಣ ಗಡಾದ ಪ್ಯಾಟಿ |
ಅಗಸನ ಹಳ್ಳಿ ಅಂಬಡಗಟ್ಟಿ ಕಾದರೊಳ್ಳಿ ಹುನಸಿಕಟ್ಟಿ |
ಬೆಳವಡಿ ಬಡದಾರ ಎಲ್ಲಾರು ಮುತ್ತಿ ||
ಸೌದಳ್ಳಿ ಗುಡಗೇರಿ ಬಾಳಗುಂದ ಇಟಗಿ |
ಬಡದ ಬಾಗೋಡಿ ಊರ ಮಂದಿ ಹೊಕ್ಕತಿ |
ಚಮತದಿಂದ ರಾಯ ನಾಯಕ ಸಂಪಗಾಂವಿ ಕಚೇರಿ ಹೊಕ್ಕ |
ಬೆಂಕಿ ಹಚ್ಚಿ ಹೋದ ಸುಟ್ಟ ಹೋತಿ ||
ಹೊಂಗಲ ಊರಾಗ ಹಾಸಿಕೊಂಡ ಕಿತ್ತೂರ ಕಿಲ್ಲೇಕ ಹೋಗಿ |
ಮತ್ತು ಅವರಿಗೆ ಹೇಳತಾನ ಯುಕ್ತಿ |
ಅಂಜಬ್ಯಾಡ್ರಿ ಯಾವಕಿನ್ನ ಬರತಾಳ ನೋಡುನ ಇಲ್ಲಿ |
ಕಾವಲ ಕುಂತೈತಿ ಮಂದಿ ಹಿರದ ಕತ್ತಿ ||

||ಚಾಲ|||

ರಾಯನಾಯ್ಕ ಹುಟ್ಟಿದ ನಕ್ಷತ್ರ | ಬಹಳ ಪವಿತ್ರ |
ಹಡದ ತಾಯಿ ಶ್ರೇಷ್ಟಾ |
ಬಸ್‌ಧಾಳಿ ಮಡ ಬಹುದ ಬಂಟಾ ||
ಸೂರಿ ಮಾಡಿ ಬಿಟ್ಟ ಬಹದ್ದೂರ | ಯಾರು ಇಲ್ಲ ಇದರ |
ಆಗಲಿಲ್ಲ ನೇಟಾ |
ಮೀರಿ ನಿಂತ ಸರ್ವರೊಳು ಧಿಟ್ಟಾ ||
ಅವನ ಹಿಡಿದ ತಂದ ಕೊಟ್ಟರ | ಇನಾಮ ಭರಪೂರ |
ಕೊಡತೇವ ಅಂತ ಸ್ಪಷ್ಟಾ |
ಸಾಹೇಬ ಡಂಗುರ ಹೊಡಿಶಾನ ಹತ್ತಿ ಸಿಟ್ಟಾ ||

||ಏರು||

ಹರುಷದಿಂದ ಮೂವರು ಜೋಡಿ ಕುಶಲದಿಂದ ಮಾತಾಡಿ |
ಮಸಲತ್ ಮಾಡ್ಯಾರ ಕೂಡಿಕೊಂಡಾ|| ೬ ||

ಸರದಾರನ ಮುಂದ ಹೋಗಿ ವರದಿ ಕೊಟ್ಟ ಹೇಳತಾರ
ಕಾಯಮ ಮಾಡಿ ಮಾತಘಟ್ಟಿ ಮುಟ್ಟಾ
ರಾಯ ನಾಯ್ಕನ್ನ ಹಿಡದ ನಿಮಗೆ ತಂದ ಕೊಡತೀವಂತ |
ಬಂದಾರ ಮೂವರು ಕಾಗದ ಬರಕೊಟ್ಟಾ ||
ರಾಯ ನಾಯ್ಕನಲ್ಹೋಗಿ ಭಾವ ಶುದ್ಧ ಮಾತಾಡ್ಯಾರ |
ಜೀವದ ವಳಗಿನ ಕಾಳಜಿ ಎಲ್ಲಾ ಬಿಟ್ಟಾ |
ನಿನ್ನ ಕಡೆ ಇರತೇವಣ್ಣ ನಮ್ಮನ್ನು ಮಾತ್ರ ಉಳವಿಕೊಳೊ |
ಆಣಿ ಮಾಡಿ ಬಂದಿದೆವೊ ಹೊಂಟಾ ||
ಉಪ್ಪು ಗೊಬ್ಬರ ಮುಟ್ಟಿ ಉರುವ ದೀವಿಗಿ ಮುಂದಕುಂತ |
ಹೇಳತಾರ ಕ್ರಿಯ ಕೊಟ್ಟ ಕೊಟ್ಟಾ |
ಸಾವಿರ ದೇವರ ಆಣಿ ಕೊಟ್ಟ ಸಕಾಟ ಆಗಿ ಇದ್ದರಂಣ |
ತಿಳಿಯಲಿಲ್ಲ ಮನಸಿನಾನ ಸಿಟ್ಟಾ ||
ನಡಿ ಹೋಗುನು ರಾಯನಾಯ್ಕ ನಾಡೆಲ್ಲಾ ಬಡದ ತರೂನ |
ಕೇಡಮಾಡಿ ಸುತ್ತಿನ ಹಳ್ಳಿ ಸಗಟಾ |
ಕೂಡಿ ಮಂದಿ ಹೊಂಟಿತಂಣ ದವಡ ಮಾಡಿ ಹುಬ್ಬಳ್ಳಿಗೆ |
ಬಂದು ಗಡಿಬಡಿಸಿ ಬಿಟ್ಟಾರ ಆತನಷ್ಟಾ ||

||ಚಾಲ|||

ಮಂದಿನೆಲ್ಲಾ ಮುಂದ ಕಳಿವ್ಯಾರ |
ಹೊಂದಿಕಿಂದ ನಾಲ್ವರ | ಮಾತಾಡುತ ಸರಳಾ |
ಹಿಂದ ಹೋಗುನಂತಾರ ಆತ ನಿವಳಾ ||
ಮಾತಕೇಳಿ ರಾಯ ನಾಯಕ | ಮನಸೋತ ಆಕ್ಷಣಕ |
ಬೆನ್ನ ಹತ್ತಿದ ಸುಳ್ಳ |
ವಿಶ್ವಾಸಕ ಬಿದ್ದ ಆದ ಮರಳಾ ||
ಹಳ್ಳಕೆ ಹೋಗಿ ಮಾಡಿ ಜಳಕ | ಉಣ್ಣುವ ವ್ಯಾಳೇಕ |
ಬಿಡುವು ನಂದ ಸ್ಥಳಾ |
ಕೇಳಿದ ರಾಯಣ್ಣಾ ಮಾತುಗಳಾ ||

||ಏರು||

ಕತ್ತಿ ಇಟ್ಟ ಖಬರ ಬಿಟ್ಟ ತೊಟ್ಟ ಚೊಣ್ಣ ತಗಿಯಾಕ |
ಕುಂತ ವತ್ತಿ ಹಿಡಿದಾರ ಬಂದ ಮಾಡಿ ಗಡಾ
ಮಂದಿ ಕೂಡಿ ಹೊರಸಿನ ಮ್ಯಾಲ ತಂದ ಹಾಕಿ ಬಿಕ್ಕೊಂಡ ಹೋದ್ರ
ಅವಗ ಒದಗಿತ್ತಂಣ ಮಾಯ ಕಾಳಾ |
ಕಚೇರಿ ವಳಗ ಓದ ಇಳಿವ್ಯಾರ ಹೆಚ್ಚೆಚ್ಚಿನ ಬಂಟರಾಯ ನಾಯ್ಕನ
ಸರದಾರ ನೋಡಿದಾನ ಕಳಾ ||
ಧೀರ ಅಂಬುಕೂನ ಸರದಾರ ಪೂರ ತಿಳದ ಇವನ |
ಕೊಲಬಾರದಂತ ಮರಿಗ್ಯಾನ ಅವನ ಕರಳಾ |
ಇಷ್ಟ ಮಾತ ಕೇಳು ಮೂವರ್ ನಿಷ್ಟಾದಿಂದ ಸಾಹೇಬಗೆ ಹೇಳ್ಯಾರ
ಕಷ್ಟ ತಂದ ಇಟ್ಟರಿ ನಮಗೆ ಬಹಳಾ ||
ಸರದಾರನ ಮುಂದ ನಿಂತ ಕರವ ಮುಗಿದು ಹೇಳತಾರ ಇವರು |
ನೀವು ತಂದಿರಿ ನಮ್ಮ ಜೀವಕೆ ಗೋಳಾ |
ರಾಯನಾಯ್ಕನ್ನ ಬಿಟ್ಟರ ನಾವು ನೀವು ಉಳಿಯುದಿಲ್ಲ |
ನಮ್ಮನ್ನ ಕಡದ ಹಾಕತಾನ ಝಳ ಝಳಾ ||
ಸಾಹೇಬನ ಮುಂದ ನಿಂತ ಅಂತಾರ ಇವರು ನಮಗೆ |
ಮುಂಚೆ ಗಲ್ಲಿಗ್ಹಾಕಿ ಅವನ್ನ ಬಡಿರಿ ಪಳ್ಳಾ |
ಇದನ ಕೇಳಿ ಸಾಹೇಬ ಆಗ ಅದರಂತೆ ಮುಂಬೈಕ ಬರದ |
ಚಮತಮಾಡಿ ಹಾಕಿದ ರಿಪೋರ್ಟಗಳಾ ||

||ಚಾಲ|||

ತಳದಾಗ ಹೋಗಿ ಆಗಿ ಚೌಕಸಿ | ತಿಳದ ವಿಚಾರಿಸಿ |
ಕಳವಿದಾರ ತುರತಾ |
ಬೆಳದ ಮನುಷ್ಯನನ್ನ ಕೊಲ ಬಾರದಂತಾ ||
ಉತ್ತರ ಬರುವದರೊಳಗೆ | ವತ್ತರ ಮಾಡ್ಯಾರಾಗ |
ರಾಯಣ್ಣನೊಯ್ಯುತಾ |
ಗಲ್ಲಿಗ್ಹಾಕ್ಯಾರಣ್ಣ ಅವರು ನಿಂತಾ ||
ಧೀರ ರಾಯ ನಾಯ್ಕನ್ನ ಕೊರಳಿಗಿ | ಶವಕ ಹಾಕಿ ತೂಗ |
ಬಿಟ್ಟರ ಆತ ಘಾತಾ |
ನಿಂತಾರ ಜನರೆಲ್ಲಾ ಮರಗುತಾ ||

||ಏರು||

ಇಂಥಾ ಬಂಟ ರಾಯನಾಯ್ಕನ್ನ ಕೊಲಬಾರದಿತ್ತಂತ ಸುತ್ತಿಜನರು |
ದುಃಖ ಮಾಡತಾರ ಬಡ ಬಡಕೊಂಡಾ|| ೮ ||

ಘಾಸಿ ಕೊಟ್ಟ ಸರದಾರ ಆಗ ಧ್ಯಾಸ ಆಗಿ ಮರಗುತ ನಿಂತ |
ಇಂಥ ಬಂಟನ ಕೊಲಬಾರದಿತ್ತಂತಾ |
ಹತ್ತು ರೂಪಾಯಿ ಖರ್ಚು ಮಾಡಿ ಮತ್ತೆ ಮಂಣ ಕೊಡಿರೆಂತ |
ವತ್ತರ ಮಾಡಿ ಹೇಳಿದಾನ ಸಾಹೇಬ ನಿಂತಾ ||
ಚಂದದಿಂದ ರಾಯನಾಯ್ಕನ್ನ ಮಂದಿ ಕೂಡಿ ಮಣ್ಣ ಕೊಟ್ರ |
ಇಂದಿಗಿ ಮುಳಿಗಿದಂಗ ಆತ ಹೊತ್ತಾ |
ಅದ ಜಾಗಾದ ಮ್ಯಾಲ ಗಿಡ ಬೇಗ ತಂದ ಹಚ್ಯಾರ |
ತೂಗತಾವ ತೊಟ್ಟಿಲ ಸುತ್ತ ಮುತ್ತಾ ||
ಸತ್ಯವಂತ ರಾಯನಾಯ್ಕಗೆ ಮತ್ತೆ ಜನರು ನಡಕೊಂಡವರಿಗಿ |
ಪುತ್ರ ಸಂತಾನ ಕೊಟ್ಟಾನ ಮಸ್ತಾ |
ವೆಂಕನಗೌಡ ನಿಂಗನಗೌಡ ಬಾಳ ನಾಯ್ಕ ಮೂವರು |
ಹರುಷವಾಗಿ ಬಂದಾರ ನಕ್ಕೊಂತಾ ||
ಬಿಚ್ಚಗತ್ತಿ ಚನಬಸಣ್ಣ ಹೆಚ್ಚೆಚ್ಚಿನ ಬಂಟ ಗಜವೀರ |
ಇವರು ಕುಂತ ಹಾಕ್ಯಾರ ಮಸಲತ್ತಾ |
ಕಡ್ಡಿಗುಡ್ಡ ಬಾಳಣ್ಣ ಕಿಲ್ಲೇದ ಭೀಮಣ್ಣ ಬೆಳವಡಿ |
ವಡ್ಡರ ಎಲ್ಲಣ್ಣ ಆದ ಜತ್ತಾ ||

||ಚಾಲ|||

ರಾಯಣ್ಣನ ಸಂಗಡ ಇದ್ದವರ | ಅವನ ಮಿತ್ರರ |
ದುಃಖ ಮಾಡುತಾ |
ಕಚೇರಿಗಿ ಹೋದ್ರ ಎಲ್ಲಾ ಮಂದಿ ಸಹಿತಾ ||
ಸುಬೇದಾರನ ಮುಂದ ನಿಂತಾರ | ಸಿಟ್ಟಲೆ ಅಂತಾರ |
ಏನ ಮಾಡಿದಿ ಘಾತಾ |
ಹೋತ ನಮ್ಮ ಜೀವದ ಕಡ್ಡಿ ಸತ್ತಾ ||
ಹಿರದ ಕತ್ತಿಕೈಯಾಗ ಹಿಡದ | ತಿರಿಗಿ ಗುಡ್ಡ ಬಿದ್ದ |
ಪರತ ಓಡುತ್ತಾ |
ಮರತ ಹೋದಿತಣ್ಣಾ ಎಲ್ಲಾ ಮಾತಾ ||

||ಏರು||

ಕ್ಷತಿ ಮೇಲೆ ಹುಲಕುಂದ ವಾಸ ಮತಿವಂತ ಬಲ ಭೀಮೇಶ |
ಇತಿಹಾಸ ಪದ ಮಾಡಿದ ಕೂತಕೊಂಡಾ|| ೯ ||

ರಚನೆ : ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು