ಸಂಗೊಳ್ಳಿ ರಾಯನಾಯಕಾ ಸರ್ಜ್ಯಾ
ಸಂಪಗಾಂವಿ ಸುಭೆಯದಾರನ ಮ್ಯಾಗಾ
ತಳ್ಳಿ ಮಾಡತಾನೋ ಪುಂಡಾ
ಒತ್ತರದಿಂದ ಸುತ್ತಿನ ಹಳ್ಳಿ ಮುತ್ತಗಿ ಹಾಕಿ ಬಡದಾರಣ್ಣಾ
ಗೊತ್ತ ಇಲ್ಲದ ಹಾಂಗೆ ಹೋತ್ಯೊ ಬಂಡಾ|| ಪಲ್ಲಾ ||

೧ನೆಯ ನುಡಿ

ಪೂರ್ವದ ಮಾತ ಹೇಳತೆವ ನಿಮಗ
ಸರ್ವರು ಕುಂತ ಕೇಳರಿ ವಿಸ್ತಾರಾ
ಗರ್ವ ಬಂತ ಸಂಗೊಳ್ಳಿ ಕುಲಕಣ್ಣಿಗೆ
ಚಂದದಿಂದ ರಾಯನಾಯಕ ಹೊಂದಿಕೊಂಡ ಇದ್ದ
ಅವರ ಮುಂದ ಹುಟ್ಟಿತಲ್ಲೆ ಕದನ ಬ್ಯಾಗಿ
ಕುಲಕಣ್ಣಿ ಬಾಳಪ್ಪ ರಾಯಣ್ಣ ಜಳಕಾ ಮಾಡುಹೊತ್ನ್ಯಾಗ
ಧೋತರ ಸೆಳತಾ ಅಂತ ಕೊಟ್ಟನವನ ಕೈಗಿ
ಇಷ್ಟುಮಾತಿಗೆ ಸಿಟ್ಟಮಾಡಿ ಧಿಟ್ಟತಾನ ಹಿಡಿದು
ರಾಯಣ್ಣ ಮುಟ್ಟಾಕಿಲ್ಲದರವೀ ಯೆಂದಂದಿಗಿ
ಯಾಕಲೆ ಹಳಬಾ ಜೋಕ್ಯಾಗಿದ್ದಿ
ಸೊಕ್ಕ ಬಂತೀಗೇನೋ ನಿನಗ
ದಿಗರಾಡ್ತ ನಿಂತ ಇದರಿಗಿ
ಕೇಳಿ ರಾಯಣ್ಣ ತಾಳಿ ಸಿಟ್ಟು
ಹೋಳಿ ಆಡ್ನಿನ್ನ ಬಿಡುವೆನೆಂದು
ಹೇಳಿ ಹೊಂಟ ಹಿಂದಕ ತಿರುಗಿ
ಒಳ್ಳೇದೋ ಬಾಳಣ್ಣ ನನ್ನ ತಳ್ಳಿ ಮಾತರಹಿಡಿಯೊ
ಇನ್ನ ದಾಳಿ ಬಂತೋ ತಿಳಿಯೋ ಸುತ್ತಿನ್ಹಳ್ಳಿಗೆ

೨ನೆಯ ನುಡಿ

ಒತ್ತರ ಮಾಡಿ ರಾಯನಾಯಿಕಾ ಹೆತ್ತ ತಾಯಿ ಪಾದಕಬಿದ್ದು
ಮತ್ತೆ ಕತ್ತಿ ಹಿಡಿಕೊಂಡ್ಹೊಂಟ ಧೀರಾ
ಮಗಲಾಯರ ಸೀಮಗಿ ಹೋಗಿ
ಸುರಪೂರರಸರ ಯಿದಿರಿಗಿ ನಿಂತು
ಕರವ ಮುಗಿದು ಮಾಡಿದಾನ ನಮಸ್ಕಾರಾ
ಧೀರ ಹೌದೋ ರಾಯನಾಯಕಾ
ಹಾರಿ ಹನ್ನೆರಡಕ್ಕಡಿ ಜಿಗದಾ
ಅರಸ ನೋಡಿದಿವನ ಕಣ್ಹಾರಾ

ಅರಸ ಮೆಚ್ಚಿ ಹರುಷವಾಗಿ
ಸರ್ಜ್ಯಾ ನಿನಗೆ ಸರಿಯಿಲ್ಲೆಂದು
ಯೇನ ಬೇಡತಿ ಬೇಡಂದ ರಣಸೂರಾ

ಎನಗ ಒಲಿದಾರ ನೀನು
ಮುನ್ನುರು ಬ್ಯಾಡಕಿ ಕೊಡು
ಇನ್ನ ಆರಿಸಿ ಒಯ್ತೇನೋ ಪೂರಾ
ದಂಡನೆಲ್ಲಾ ತಕೊಂಡು ಬಂದು
ಭಂಡಾಯಿ ಮಾಡುನೆಂತೆಂದು
ಅವರಿಗ್ಹೇಳಿದಾನೋ ಚಾತುರಾ

ರವಡಮಾಡಿ ರಾಯನಾಯಕಾ
ದವಡಮಾಡಿ ತಂದ ದಂಡನ
ಗಿಡದಾಗವೋದಿಟ್ಟ ಎಲ್ಲಾ ಬಾರಾ

೩ನೆಯ ನುಡಿ

ತಂದ ದಂಡಿಗ್ಹೇಳತಾನೊ ಹೊಂದಿಕಿಂದ ಮಾತಗೊಳು
ಮುಂದ ನಿಂತ ಮಾಡಿ ಒಳೆ ಸಿಸ್ತಾ
ಎಚ್ಚರದಿಂದ ಇರರಿ ನೀಂವು
ಸುತ್ತುಕಡಿಸಿ ಹುಸಿಯರಾಗಿ ಯತ್ತರ ಹೋದಿರಿ, ನೀಂವು ಮತ್ತು
ಹಸ್ತರ ಮನುಷ್ಯರನ ತಿನ್ನುಹಂತಾ
ಹಬಶರನ್ನ ತಂದಿಟ್ಟಾನಲ್ಲೆ ಸುತ್ತುಕಡೆ
ಮಾಡಿ ಬಂದೋ ಬಸ್ತಾ ವಿಸ್ತಾರಾ ದಂಡಿಗೆಲ್ಲಾ
ಸಿಸ್ತ ಮಾಡಿ ತೈಯಾರಾಗಿ
ಒತ್ತರದಿಂದಾ ನಡಿರೆಂದಾಮತ್ತಾ

ಕಡವು ಕತ್ತಿ ಕೈಚೂರಿಗಳು
ಇರವು ಕಂಜಿರ ಚಾಕು ಪಿಸ್ತೂಲ
ಸಿಟ್ಟಿನ ಬಂಟರೋ ಸಮಸ್ತಾ
ಕಟಾರಿ ಬಿಲ್ಲು ಈಟಿ ಬಾಣ
ಧಿಟ್ಟ ತನದಲ್ಹಿಡವು ಢಾಲು ಮೈಗ ತೊಟ್ಟಿರೊ ಚಿಲ್ಕತ್ತಾ

ದುಂದಗ್ಯಾಂವಿ ಹೊಂದಿಕಿಂದ
ಗಂಧ ಕಸ್ತೂರಿಯ ಧರಿಸಿ
ಮುಂದ ಹೂಲಿಗಾಳಿ ಹಿಡಿಸುತಾ
ಅಬ್ಬರದಿಂದ ವೊಬ್ಬರ ಉಳಿಯದ
ಕಬರ ಇಲ್ಲದ ಬಂದರಣ್ಣಾ ರಣಸೂರಿ ಯಾವಾಗ ಮಾಡೆವಂತಾ

೪ನೆಯ ನುಡಿ

ಭೇರಿ ಕಾಳಿ ಕರ‍್ನಿ ಹಿಡಿಸಿ ಮೀರಿದ ಹಲಗಿ ಹೊಡಸಿ
ಕಾಲ್ ಮಂದಿ ಮುಂದಕ ಕಳವಿದಾ

ರಂಗವಾಗಿ ಇರುವುವ ಕರ‍್ನಿಗೆ ಚೆಂಗು ಜೆಲ್ಲಿ ಘಂಟಿಸರಪಳಿ
ಮುಂಗೈಯಾಗ ತೋಡೆವ ಹಾಕ್ಸಿದಾ

ಹಲ್ಲತಿಂತ ಹವಣಸ್ತ ಕಾಲಕೆದರಿ ಕತ್ತಿ ಹಿಡಿದು
ಜಿಗತಾ ಮಾಡತಾರ ಕುಸಿ ಬಂದು

ಬಿಚ್ಚಗತ್ತಿ ಚನಬಸಣ್ಣ ಮುಂಚೆ ಶಮಸರಗಡಕ ಹೋಗಿ
ವಿಚಿತ್ರ ಹೊಡವುನು ನಡಿಯರ್‌ಯೆಂದಾ
ಗಜವೀರ ಹೇಳತಾನು ಭಾಳ ಗದ್ದಲ ಮಾಡುನಯಿಂದಾ
ಏನ ಉಳಿಯದ ವಳಗಿಂದಾ

ಕಡ್ಡಿಗುಡ್ಡ ಬಾಳಣ್ಣಾ
ದೊಡ್ಡ ಕಿಲಿಯದ ಭೀಮಣ್ಣಾ
ಬೆಳ್ಳೋಡಿ ವಡ್ಡರ ಯಲ್ಲಣ್ಣಾ ಕತ್ತಿಹಿರದಾ
ಸುತ್ತ್ಯುಳ್ಳ ಶಿರಸಂಗಿ ಕಾಳವ್ವಾ
ಮತ್ತ ಕಕ್ಕೇರಿ ಕರಿಯವ್ವಾ
ನಮ್ಮ ಕತ್ತಿಗೆ ಬ್ಯಾಸನ ಕೊಡರೆಂದಾ
ಎಲ್ಲಾಮಂದಿ ಕೂಡಿಕೊಂಡು ನಿಲ್ಲದ್ಹೋಗಿ ಶಮಸರಗಡಾದ
ಹಲ್ಲಾಯೇರಿ ಮುತ್ತಗಿ ಹಾಕಿದಾ

೫ನೆಯ ನುಡಿ

ಗಡಾದವಳಗ ಹೋಗಿ ತಾಂವು ಬಾಳಗದ್ದಲ ಮಾಡ್ಯಾರಣ್ಣಾ
ಸಿಕ್ಕ ಮಂದಿ ಚಂಡ ಕೋದರಲ್ಲಾ

ಹಿಡಿದು ಹೊಡದು
ಕಡದು ಬಡದು
ದಂದಲ ಮಾಡ್ಯಾರ ಗಮಿಕಿಂದ
ಗಡಾದೊಳು ಮಂದ್ಯಾರು ಉಳಿಯಲಿಲ್ಲಾ

ಯಾತರದವಗ ಇಲ್ಲೋ ದರಕಾರಾ
ಕಾಲಿಲ್ಹಗರೊ ಕತ್ತಿಗಾರಾ
ಕಡದ ಹೋಗುತಾನು ಶಿಗುದಿಲ್ಲಾ

ಗಡಾದ ಒಳಗ ಗದ್ದಲ ಆದ
ಸುದ್ದಿಕೇಳಿ ಸುಭೆಯದಾರಾ ಗಾಬರಿಯಾಗಿ ಎದ್ದಬಂದಾನಲ್ಲಾ
ಹಿತ್ತಲ ಕಾಸಿ ಸುತ್ತ್ಯೇಳ ಸಮುದರ
ಮತ್ತ ನಮ್ಮ ನಾಡವಳಗ
ಹಿಂತಾವರು ಯಾರ‍್ಯಾರು ಬಂದಿದ್ದಿಲ್ಲ

ಲೂಟಿ ಮಾಡಿದ ಬದುಕು ಎಲ್ಲಾ
ರವಡ ಮಾಡಿ ಓದರಲ್ಲಾ
ಈಟ ಗಡಾದವಳಗ ಬಿಡಲಿಲ್ಲಾ

ಸುತ್ತು ಕಡಸೆ ನೋಡಿದರ
ಯಾತ್ತು ಯಾರ‍್ಯಾರಿಲ್ಲದಾಗಾಗಿ
ಕತ್ತಲ ಗಂವದ ಹಾಕಿತಣ್ಣಾ ಜಾಲಾ

ಆದ ರೀತಿ ಮಾತಗೋಳನು
ಸುಭೆಯದಾರ ಕುಂತುಕೊಂಡು ಧಾರವಾಡಕ ಬರದ ಹಾಕಿದಲ್ಲಾ

೬ನೆಯ ನುಡಿ

ಬರದ ಪತ್ತರ ವತ್ತರದಿಂದ
ವಾಲಿಕಾರರು ಓದರಣ್ಣಾ
ದಾರಿ ಕೂಡಿಕೊಂಡು ಧಾರವಾಡಕ

ಗಚ್ಚಿನ ಬಂಗಲೆದವೊಳಗ ಕಚೇರಿಯಾಗಿತ್ತು
ಕಾಗದಾ ಬಿಚ್ಚಿ ಒಯ್ದಾರ ಸಾಹೇಬನ ಹಂತೇಕ

ಓದಿಕೊಂಡ ಸಾಹೇಬ ನೋಡಿ
ಹೋದ ಮಾತಿಗೆ ಇನ್ನ್ಯಾಕೆಂದು
ಗಾದಿ ಬಿಟ್ಟ ಎದ್ದನಾಕ್ಷಣಕಾ

ಟೊಪ್ಪಗಿ ವೊಗಿದು
ಮುಂಗೈ ಕಡಿದು
ಶಿಟ್ಟಿಲಿಂದ ಹಲ್ಲ ತಿಂದು
ಕುಂತ ಪತ್ರ ಬರೆದ ಮುಂಬಾಯಕ

ವಿಕ್ಟೋರಿಯ ಯೆಂಬು ಹಂತಾ ಶಕ್ತಿಯುಳ್ಳ ರಾಣಿಯವರು
ಮೋಕ್ತಾ ನೋಡಿ ತಿಳಿದಾರ ತಮ್ಮ ಮನಕ

ಐದನೂರಾ ಸೋದರ ಮಂದಿ
ಎರಡನೂರ ಕರಿಯ ಮಂದಿ
ಕಳವಿ ಕೊಟ್ಟಾಳಾಗ ಟಾಕೊಟಾಕಾ

ಎಳೆದು ಅಷ್ಟು ದಂಡ ಬಂತು
ಕಾಳಗಕಸ್ತಾ ಮಾಡಲಿಕೆ
ಬೆಳಗಾಂವಿ ಧಾರವಾಡ ಜಿಲ್ಹೇಕಾ
ಸುಭೆಯದಾರ ತೊಗೊಂಡಯಿನ್ನ
ಸಬರ ಹಿಡಿಯದ ಹೋಗಬೇಕಂತಾನ
ಜಬರದಿಂದ ರಾಯನ ಕೊಲ್ಲುದಕ

೭ನೆಯ ನುಡಿ

ಸಿಟ್ಟಿನಿಂದ ಸುಭೆಯದಾರ
ಅಷ್ಟುಮಂದಿ ಹೊಂಡಿಸಿಕೊಂಡ್ಹೋಗಿ
ಹುಡುಕ್ಯಾನೋ ರಾಯನ ಮಂದೆಲ್ಲೈತೆಂತ
ಹಳ್ಳಾ ಕೊಳ್ಳಾ ಗುಡ್ಡ ಗಂವಿಯಾ
ಗಿಡ ಕಾಂತಾರಾ ಹುಡುಕುತ ಹೊಂಟಾರಾ
ಹಳ್ಯಾಳ ಗುಡ್ಡಕ ಹೋದರ ಮತ್ತಾ

ಇವರ ದಂಡಾ ಬಂತ ಅಂಬೊಸುಳವು ನೋಡ್ಯಾನು ರಾಯನಾಯಕಾ
ಫಳಾರ ಮಾಡುತವನ ಮಂದಿ ಕುಂತಾ

ತವಕದಿಂದ ತಯಾರಾಗಿ
ಗಿಡಕ ಜ್ಯಾಂವಿಗಿ ಕಟ್ಟಿ ದೂರ ಹೋಗಿ ನಿಂತಾರೋ
ಹೂಲಿಗಾಳಿ ಹಿಡಿಸೂತಾ

ಇಲ್ಲೆ ಅದಾನ ರಾಯನಾಯಕಾ
ಅಂದು ನೋಡೋ ಅವರು ಆಗ ಪೈರಗಟ್ಟಿ
ಹೊಡದಾರೋ ಸುತ್ತಾ

ಗುಂಡ ಮದ್ದು ಅವಟ ಗುಂಡು
ಗರನಾಲು ಟುಬಾಕಿ ಕರುಲಿ
ಹೊಡವುತಾರೊ ಇಲ್ಲ ಪುರಸೊತ್ತಾ

ಆವಾಜ ತಡಪಡ ಅಳ್ಳ ಹುರದಾಂಗ
ಕೊಳ್ಳದೊಳಗಿನ ಗಿಡಕ ಹೊಡದಾರ
ಗುಡ್ಡ ನಾದ್ಹಿಡದಿತ ಗದಣಿಸುತಾ

ಮೂರ ತಾಸ ಹೊಡದಾರ‍್ಯೆಲ್ಲಾ
ಮದ್ದು ಗುಂಡು ತೀರಿ ಹೋತಿ
ಮುನಿದಾನು ಅವರಿಗೆ ಭಗವಂತಾ

೮ನೆಯ ನುಡಿ

ಮದ್ದು ತೀರಿ ಬಂಡು ಆದಾರ
ಗುಂಡ ಹಾಕು ಸಪ್ಪಳ ನಿಂತದ್ದು
ಕಂಡ ರಾಯಣ್ಣ ಬಂದ ಬೆನ್ನ ಮ್ಯಾಲಿ

ಕುರಿಯೊಳಗ ತೋಳ ಹೊಕ್ಕ ಮುರಮುರದ
ಒಗೊಗದ ಹಿರಿಹಿರಿದು ಕಡದಾರ ಕತ್ತೀಲಿ
ಸುತ್ತಗಟ್ಟಿ ಕತ್ತಿಮಂದಿ ಎತ್ತೈತ್ಹೋಗಗೊಡದ ಕಡದಾರ
ಮುತ್ತಗಿ ಹಾಕ್ಯಾರೊ ದಂಡಿನ ಮ್ಯಾಲಿ
ಪಿಸ್ತೂಲ ಪಿರಂಗ ಹಿರದು
ಬಾಕ ಬಿಲ್ಲು ಬಾಲೆಲೊಗದು
ನಾಕನೂರಾಮಂದಿ ಕೊಂದರಲ್ಲಿ

ಕಂಡಮಂದಿ ಚಂಡಿ ಕೋದಾರ
ರುಂಡ ಬಿದ್ದವು ಗೊತ್ತ ಇಲ್ಲದ
ತುಂಡ ತುಂಡ ಮಾಡ್ಯಾರೊಂದೆ ಏಟು

ಕೊಳ್ಳದೊಳಗ ಕುತಂತ್ರ ಆಗಿ ನೆತ್ತರಕಾವಲಿ
ಹರದೀತಣ್ಣಾ ಹಿಂತಾ ಶರಿ ಸೂರಿ ಆಗಿದ್ದಿಲ್ಲೊಯಲ್ಲಿ

ಉಳದ ಮಂದಿ ತೆಳಗ ಬಿದ್ದು
ಕತ್ತಿಚೆಲ್ಲಿ ಹಲ್ಲ ಕಚ್ಚಿ
ಕಲ್ಲ ಹೊತ್ತಾರಣ್ಣಾ ತೆಲಿ ಮ್ಯಾಲಿ

ಆದಕೈಲೆ ಉದಯಕ ಯೆದ್ದು
ಹೋದ ಕಿತ್ತೂರ ತಳದಮ್ಯಾಲಿ
ತೇತಪಿರಂಗರ ದಂಡಿತ್ತಲ್ಲಿ

ಸೂರಿಮಾಡಿ ಬಿಡುವುನಂತಾರ
ಯಾರು ರಾಜ್ಯ ಆಳದಾಂಗ
ಮೀರಿ ಇರುವುನನಾವು ಲೋಕದಲ್ಲಿ

೯ನೆಯ ನುಡಿ

ಚಕ್ಕರ ಟೊಪ್ಪಿಗಿ ಪಿರಂಗೆರನಾ
ಲೆಕ್ಕವಿಲ್ಲದ ಕಡದ ದಂಡಿನ
ದಿಕ್ಕ ತಪ್ಪಿಸಿ ಬಿಟ್ಟಾರೆಲ್ಲಾ ಹೋತಿ

ಪುಂಡರಾಗಿ ತರುವುನ ಹೊನ್ನ
ಕಂಡಕಂಡ ಊರ ಬಡಿದು
ದಂಡಿಗಿ ನಮಗೆಲ್ಲಾರಿಗಿ ಆಗತತಿ
ಹಳ್ಯಾಳ ಹನಮನಗಟ್ಟಿ
ತಳ್ಳಿಮಾಡಿ ತಾಳವಾಡಿ
ಹೋಗಿ ಬಡದಾರಣ್ಣಾ ಗಡಾದಪ್ಯಾಟಿ

ಆಗಸನ್ಹಳ್ಳಿ ಅಂಬಡಗಟ್ಟಿ
ಕಾದರೊಳ್ಳಿ ಹುಣಸಿಕಟ್ಟಿ ಬೆಳವಡಿ ಬಡದಾರ ಎಲ್ಲಾರುಮುತ್ತಿ |
ಸೋದಳ್ಳಿ ಗೋದಗೇರಿ ಬಾಳಗುಂಡ ಇಟ್ಟಗಿ
ಬಡದ ಬಾಗೊಡೂರು ಮಂದಿ ಹೊಕ್ಕತಿ
ಚಮತದಿಂದ ರಾಯನಾಯಕಾ ಸಂಪಗಾಂವಿ ಕಛೇರಿ ಹೊಕ್ಕು
ಬೆಂಕಿ ಹೋದ ಸುಟ್ಟ ಹೋತಿ

ಹೊಂಗಲದೂರಾಗ ಹಾಸಿಕೊಂಡ ಕಿತ್ತೂರ ಕಿಲೆಯಕಹೋಗಿ
ಮತ್ತ ಅವರಿಗೆ ಹೇಳತಾನೊ ಈಗತಿ
ಅಂಜಬ್ಯಾಡರಿ ಯಾವಳಿನ್ನ ಬರತಾಳ ನೋಡುನಿಲ್ಲೆ
ಕಾವಲ ಕುಂತತಿ ಮಂದು ಹಿರದಕತ್ತಿ

ಎಷ್ಟ ದಾಳಿ ಮಾಡಿದಾನೋ
ಬಂಟ ಹೌದೋ ರಾಯನಾಯಕ
ಹುಟ್ಟಿದ ನಕ್ಷತ್ರ ಸಾಮರ್ಥಿ

೧೦ನೆಯ ನುಡಿ

ಅವನ ಹಿಡಿದ ಕೊಟ್ಟರ
ನಿಮಗ ಇನಾಮು ಕೊಡತೇವಂತ
ಡಂಗುರ ಸಾಹೇಬ ಹೊಡಸಿದಾನ ಹತ್ತಿಸಿಟ್ಟಾ

ಸೂರಿಮಾಡಿ ಬಿಟ್ಟಾನಣ್ಣಾ ಯಾರು ಇದರ ಆಗಲಿಲ್ಲಾಂವಗ
ಮೀರಿ ಕುಂತ ಸರವರ ವಳಗ ಬಂಟಾ
ಹರುಷದಿಂದ ಮೂವರ ಕೂಡಿ
ಕುಶಾಲದಿಂದ ಮಾತಾಡಿ
ಮಸಲತ್ತ ಮಾಡ್ಯಾರೊ ಕುನಗುಂಟಾ

ಸರ್ದಾರನ ಮುಂದ ಹೋಗಿ ವರ್ದಿ ಕೊಟ್ಟ
ಹೇಳತಾರು ಕಾಯಿಮ ಮಾಡಿ ಮಾತ ಗಟ್ಟಿಮುಟ್ಟಾ
ರಾಯನಾಯಕನ ಹಿಡಿದ ನಿಮಗ
ತಂದ ಕೊಡತೇವಂತ ಬಂದರ
ಮೂವರು ಕೂಡಿ ಕಾಗದ ಬರಕೊಟ್ಟಾ

ರಾಯನಾಯಕನಲ್ಹೋಗಿ
ಭಾಂವ ಸುದ್ದ ಮಾತನಾಡ್ಯಾರ
ಜೀಂವದೊಳಗಿನ ಕಾಳಜಿ ಎಲ್ಲಾ ಬಿಟ್ಟಾ

ನಿನ್ನ ಕಡಶಿ ಇರತೆವಣ್ಣಾ
ನಮ್ಮನ ಮಾತ್ರ ಉಳವಿಕೊಳ್ಳೊ
ಆಣೆ ಮಾಡಿ ಬಂದಿದೇವೋ ಹೊಂಟಾ

ಉಪ್ಪು ಗೊಬ್ಬರ ಮುಟ್ಟಿ
ಉರವು ದೀವಿಗೆ ಮುಂದಕುಂತು
ಹೇಳತಾರೋ ಕ್ರಿಯಾ ಕೊಟ್ಟಕೊಟ್ಟಾ

ಸಾವಿರ ದೇವರ ಆಣೆಕೊಟ್ಟು
ಸಕಾಟವಾಗಿ ಇದ್ದರಣ್ಣಾ
ತಿಳಿಯಲ್ಲಿಲ್ಲೊ ಮನಸ್ಸಿನ್ಯಾನ ಸಿಟ್ಟಾ

೧೧ನೆಯ ನುಡಿ

ನಡಿ ಹೊಗುವ ರಾಯನಾಯಕಾ
ನಾಡನೆಲ್ಲಾ ಬಡದ ತರವುನ
ಕೇಡಮಾಡಿ ಸುತ್ತಿನ ಹಳ್ಳಿಗೋಳಾ

ಕೂಡಿ ಮಂದಿ ಹೊಂಟಿತಣ್ಣಾ
ದವಡ ಮಾಡ ಹುಬ್ಬಳ್ಳಿಗೆ ಬಂದು
ಕೇಡಿ ಮಾಡಿ ಹೋದರ ಬಾಳಗೋಳಾ

ಮಂದಿನೆಲ್ಲಾ ಮುಂದ ಕಳವಿ
ಹೊಂದಕ್ಕಿಂದ ನಾಲ್ವರ ನಾವು
ಹಿಂದ ಹೋಗುನಂತರ ಅತಿ ನಿವಳಾ

ಮಾತಕೇಳಿ ರಾಯಣ್ಣ ಮನಸೋತ
ಅವರ ಬೆನ್ನ ಹತ್ತಿದ
ಇಸವಾಸಕ ಬಿದ್ದ ಆದಮಳ್ಳಾ

ಹಳ್ಳಕ ಹೋಗಿ ಜಳಕಾಮಾಡಿ
ಉಣ್ಣು ಯಾಳೇಕ ಹೋಗುನಂದರ
ಕೇಳಿದ ರಾಯಣ್ಣ ಮಾತಗೋಳಾ

ಕತ್ತಿ ಇಟ್ಟ ಕಬರ ಬಿಟ್ಟ
ತೊಟ್ಟ ಚಣ್ಣ ತಗಿಯಾಕ ಕುಂತನ
ಒತ್ತಿ ಹಿಡಿದಾರ ಬಂದ ಮಾಡಿ ಬಾಳ

ಮಂದಿಕೂಡಿ ಹೊರಸಿನ ಮೇಲೆ
ತಂದಹಾಕಿ ಬಿಕ್ಕೊಂಡ ಹೋದಾರ
ಅವರಿಗೆ ವೊದಗಿತಣ್ಣಾ ಮಾಯಾ ಕಳಾ

ಕಚೇರಿವಳಗ ಒಯ್ದ ಇಳವ್ಯಾರ
ಹೆಚ್ಚಿನ ಭಂಟ ರಾಯನಾಕನ್ನಾ
ಸರದಾರ ನೋಡಿದನ ಕಳಾ

ಧೀರ ಅಂಬು ಕೂನಾ ಸರದಾರ
ಪೂರಾ ತಿಳಿದು ಇವನ ಕೊಲಬಾರದಂದ
ಮರುಗ್ಯಾವ ಇವನ ಕರುಳಾ

ಇಷ್ಟು ಮತು ಕೇಳಿ ಮೂರು ಮಂದಿ
ನಿಷ್ಟಾದಿಂದ ಸಾಹೇಬಗ ಹೇಳ್ಯಾರ
ಕಷ್ಟತಂದ ಇಟ್ಟಿರಿ ನಮಗ ಬಾಳಾ

೧೨ನೆಯ ನುಡಿ

ಸರದಾರನ ಮುಂದ ನಿಂತು
ಕರವ ಮುಗಿದು ಹೇಳತಾರಯಿವರು
ನೀವು ತಂದಿರಿ ನಮ್ಮ ಜೀಂವದಸುತ್ತಾ

ರಾಯನಾಯಕನ ಬಿಟ್ಟರ ನೀಂವು
ನಾಂವು ಮಾತರ ನಾಡಾಗಿರುದಿಲ್ಲ
ನಮ್ಮನ್ನ ಕಡದ ಹಾಕತಾನ ಪೂರ್ತಾ

ನಮಗ ಮುಂಚೆ ಗಲ್ಲಿಗೆ ಹಾಕಿ
ಸುಮ್ಮನ ಬಿಡರಿ ನೀಂವು ಇವನ
ಅಂತಾರಿವರು ಸಾಹೇಬನ ಮುಂದ ನಿಂತಾ

ಇದನ್ನು ಕೇಳಿ ಸಾಹೇಬ ಆಗ
ಅದರಂತೆ ಮುಂಬಾಯಿಕ ಬರದಾ
ಹಾಕಿದಾನೊ ಮಾಡಿ ವಳೆ ಚಮತಾ

ತಳದಾಗ್ಹೋಗಿ ಚವಕಸಿ ಆಗಕ
ತಿಳದ ವಿಚಾರ ಮಾಡಿ ಕಳವ್ಯಾರ
ಬೆಳೆದ ಮನುಷ್ಯನ ಕೊಲ್ಲಬಾರ‍್ದಂತಾ

ಉತ್ತರ ಬರದ ಬರವುದರೊಳಗ
ಒತ್ತರ ಮಾಡಿ ರಾಯನಾಯಕನ್ನ
ಗಲ್ಲಿಗಿ ಹಾಕ್ಯಾರಣ್ಣಾ ಅವರು ನಿಂತಾ

ಧೀರ ರಾಯನಾಯಕಾನ ಕೊರಳಿಗಿ
ಸವಕ ಹಾಕಿ ತೂಗ ಬಿಟ್ಟಾರ
ನಿಂತರೊ ಜನರೆಲ್ಲಾ ಮರಗೂತಾ

ಹಿಂತಾಬಂಟ ರಾಯನಾಯಕನ
ಮತ್ತ ಕೊಲ್ಲಬಾರ‍್ದಿಂತಂತ
ಸುತ್ತಿನ ಜನರು ದುಃಖಾ ಮಾಡುತಾ

೧೩ನೆಯ ನುಡಿ

ಪಾಶ ಕೊಟ್ಟ ಸರದಾರ ಆಗ
ದ್ಯಾಸಾ ಆಗಿ ಮರಗುತ ನಿಂತಾನ
ಇಂತಾ ಬಂಟನ ಕೊಲ್ಲಬಾರ‍್ದಿತ್ತಂತಾ

ಹತ್ತ ರೂಪಾಯಿ ಖರ್ಚು ಮಾಡಿ
ಮತ್ತ ಇವರ ಮಣ್ಣ ಕೊಡರೆಂತ
ಒತ್ತರ ಮಾಡಿ ಹೇಳಿದ ಸಾಹೇಬ ನಿಂತಾ

ಚಂದದಿಂದ ರಾಯನಾಯಿಕನ
ಮಂದಿ ಕೂಡಿ ಮಣ್ಣ ಕೊಟ್ಟಾರ
ಇಂದಿಗಿ ಮುಳಗಿದಾಂಗ ಅತಿ ಹೊತ್ತಾ

ಆದ ಜಾಗದ ಮೇಲಿ ಗಿಡಾ
ಬ್ಯಾಗದಿಂದ ತಂದ ಹಚ್ಯಾರ
ತೂಗತಾವ ತೊಟ್ಟಿಲ ಸುತ್ತಮುತ್ತಾ

ಸತ್ಯಮಂತ ರಾಯನಾಯಕಗ
ಮತ್ತು ಜನರಿಗೆ ನಡಕೊಂಡವರಿಗೆ
ಪುತ್ರ ಸಂತಾನ ಕೊಟ್ಟುದಾನ ಮಸ್ತಾ

ವೆಂಕನಗೌಡಾ ನಿಂಗನಗೌಡಾ
ಬಾಳನಾಯಕಾ ಮೂವರಕೂಡಿ
ಹರುಷವಾಗಿ ಬಂದಾರ ನಕ್ಕೊಂತಾ

ಬಿಚ್ಚಗತ್ತಿ ಚನಬಸವಣ್ಣಾ
ಹೆಚ್ಚಿನ ಭಂಟಾ ಗಜವೀರಾ
ಇವರು ಕುಂತ ಹಾಕತಾರೋ ಮಸಲತ್ತಾ

ಕಡ್ಡಿಗುಡ್ಡ ಬಾಲಣ್ಣಾ ಕಿಲ್ಲೇದ ಭೀಮಣ್ಣಾ
ಬೆಳವಡಿ ಒಡ್ಡರ ಯಲ್ಲಣ್ಣಾ
ಕಚೇರಿಗೆ ಹೋದರೆಲ್ಲಾ ಮಂದಿ ಸಹಿತಾ

ಸರದಾರಗ ಹೋಗಿ ಅಂತರಯೇನ
ಬಿರದಾ ಕಳದೆ ನಮದು
ಹೋತೆ ನಮ್ಮ ಜೀವದ ಕಡ್ಡಿಸತ್ತಾ

ಹಿರದ ಕತ್ತಿ ಕೈಗೆ ಹಿಡಕೊಂದು
ತಿರುಗಿ ಗುಡ್ಡ ಬಿದ್ದ ಓಡ್ಯಾರ
ಮರತ ಹೋದಿತಣ್ಣಾ ಯಲ್ಲಮಾತಾ

ಮಂಡಲ ಹೆಬ್ಬಳ್ಳಿ ಪುಂಡರು
ಬಸುವರು ಮಾಡಿದ ಲಾವಣಿ
ಕಂಡು ಹೇಳಿದ ಕವಿಮಾಡಿ ಸ್ವಥಾ

ರಚನೆ :
ಹೆಬ್ಬಳ್ಳಿ ಬಸವ
ಕೃತಿ :
ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ