ಬೆಳಗಾಂವಿ ಜಿಲ್ಲಾ ಪೈಕಿ ಸಂಪಗಾಂವಿ ತಾಲೂಕಿನೊಳಗೆ
ಸಂಗವಳ್ಳಿ ಎಂಬ ಸಣ್ಣ ಹಳ್ಳಿ ಇತ್ತೊ ಹದ್ದಿನೊಳಗ
ತಾಯಿ ಕೆಂಚವ್ವನ ಹೊಟ್ಯಾಗ ಬೆಳೆದಾನು ರಾಯಣ್ಣಾಗ
ರೋಗವಣ್ಣವರ ರಾಯಾನೆಂದು ಹೆಸರು ಆದಾನು ದೇಶದ ಮ್ಯಾಗ
ಜಾತಿಯಿಂದ ರಾಯಣ್ಣ ತಾನು ಕುರುಬ ಆಗಿದ್ದನಾಗ
ಸಂಗವಳ್ಳಿ ವಾಲಿಕಾರಕಿ ಇತ್ತ ಅವರ ವಂಶಕ್ಕಾಗ
ಸಂಗವಳ್ಳಿ ಕುಲಕರ್ಣಿಕಿ ಮಾಡುತ್ತಿದ್ದನು ಬಾಳಣ್ಣಾಗ
ಅಷ್ಟಹೊತ್ತಿಗೆ ಇಂಗ್ರೇಜಿ ದರಬಾರ ಬಂದಿತು ದೇಶದಮ್ಯಾಗ
ಇಂಗ್ರೇಜಿ ಕಾಯದ ಪ್ರಕಾರ ಹುಕುಮು ಕಳಿಸ್ಯಾರು ಬಾಳಣ್ಣಗಾಗ
ಇನಾಮತಿ ಜಮೀನ ಎಲ್ಲಾ ಅಳತಿಮಾಡಿ ಕೊಡೋನಮಗ
ಹುಕುಮು ನೋಡಿ ಕುಲಕರ್ಣಿ ಹೇಳುತ್ತಿದ್ದಾನು ಫಕ್ಕೀರನಾಗ
ತಳವಾರ ಫಕೀರ ಲಗುಮಾಡಿ ಬಾರೋ ತಮ್ಮಾ ಈಗ
ಈಗ ಎಂಥಾ ಇಂಗ್ಲೀಷ ದರಬಾರ ಬಂತೋ ರಾಜ್ಯದಮ್ಯಾಗ
ಸಂಪಗಾಂವಿಗೆ ಲಗುಮಾಡಿ ಹೋಗಿ ಬರಬೇಕೋ ನೀನೀಗ
ಇಷ್ಟೆ ಹೇಳಿ ಬಾಳಣ್ಣ ತಾನು ಲಕೋಟಿ ಕೊಟ್ಟಾನೋ ಕೈಒಳಗ
ಮಧ್ಯಾಹ್ನ ಹೊತ್ತಿಗೆ ಕಛೇರಿ ನಡದಿತ್ತೊ ಭರಪೂರ ಸಂಪಗಾಂವ್ಯಾಗ
ಟೊಣ್ಯಾ ಸುಭೇದಾರನ ಕೈಯಾಗ ಲಕೋಟಿ ಕೊಟ್ಟಾನ್ರಿ ಆಗ
ಲಕೋಟೆ ಒಡೆದು ಸುಭೇದಾರ ಕಾಗದ ಓದಿಕೊಂಡಾನಾಗ
ಜೋಡ ಜೋಡ ಸರಪಳಿ ತಂದು ಚಲ್ಯಾನೋ ಸಂಗೊಳ್ಯಾಗ
ಇಷ್ಟೆ ನೋಡಿ ಬಾಳಪ್ಪ ತಾನು ಹೇಳತಿದ್ದಾನೋ ಫಕೀರಗಾಗ
ತಳವಾರ ಫಕೀರ ತಮ್ಮಾ ಲಗುಮಾಡಿ ಹೋಗೊ ನೀನೀಗ
ಪಂಚರಾದ ರೈತರನ್ನೆಲ್ಲಾ ಕರೆದುಕೊಂಡ ಬಾರೋ ಚಾವಡಿ ಒಳಗ
ಪಂಚರಾದ ರೈತರನ್ನೆಲ್ಲಾ ಕರೆದುಕೊಂಡು ಬಂದಾನ ಆಗ
ಯಾಕೋಯಾಕೋ ಬಾಳಪ್ಪಣ್ಣಾ ಕರಸಿದಿ ಹೇಳೋ ನಮಗ
ಇಷ್ಟೆ ಕೇಳಿ ಬಾಳಪ್ಪ ತಾನು ಹೇಳತಿದ್ದಾನೋ ಪಂಚರಿಗಾಗ
ಎಂಥಾ ಇಂಗ್ಲೀಷ ದರಬಾರ ಬಂತು ರಾಜ್ಯದಮ್ಯಾಗ
ಎರಡೂ ರಕ್ತ ಮಾನ್ಯದ ಹೊಲಾ ಅಳತಿ ಮಾಡಬೇಕ್ರೆಪ್ಪಾ ಈಗ
ಇಷ್ಟೆ ಕೇಳಿ ಪಂಚರಮಾತು ಮುಗಿಸಿ ಎದ್ದಾನು ಮುನಿಗಾಗ
ಮರುದಿವಸ ಮುಂಜಾನೆ ಎದ್ದ ಅಳತಿಮಾಡಾಕ ಬಂದಾರಾಗ
ಜೋಡ ಜೋಡ ಸರಪಳಿಲಿಂದ ಅಳತಿ ಮಾಡತಾರ ಹೊಲದಾಗ
ರಾಯಪ್ಪಣ್ಣನ ಹೊಲಾ ಅಳತಿ ಮಾಡಾಕ ಹತ್ತಾರಾಗ
ಅಳತಿ ಮಾಡಿ ಬಾಳಪ್ಪ ತಾನು ಹೇಳುತ್ತಿದ್ದಾನೋ ರಾಯಣ್ಣಗ
ಎರಡು ರಕ್ತ ಮಾನ್ಯದ ಹೊಲಾ ಯಾಕ ಬೇಕಪ್ಪ ರಾಯಾ ನಿನಗ
ಮೂವತ್ತೈದು ರೂಪಾಯಿ ಕೊಡಬೇಕು ನೀನು ಚಾವಡಿಯೊಳಗ
ಇಷ್ಟು ಕೇಳಿ ರಾಯಣ್ಣ ನಗುತ ಹೇಳುತಾನ ಬಾಳಣ್ಣಗ
ನಮ್ಮ ಅಜ್ಜ ರೋಗಣ್ಣನವರು ಯಾರು ಕೊಟ್ಟಿಲ್ಲ ಬಾಳಣ್ಣ ನಿನಗ
ಅವರಿಬ್ಬರು ಹಾಕ್ಯಾಡಿಕೊಂಡ ಬಂದಾರು ಮಲಪ್ರಭಾ ಹೊಳಿಗೆ
ಕುದರಿ ಹಿಡಿಯಲೇ ರಾಯಾ ಜಳಕಾಮಾಡತೇನಂತಾ ನಾಗ
ಇಷ್ಟೆ ಕೇಳಿ ರಾಯಣ್ಣ ತಾನು ಕುದರಿ ಹಿಡಕೊಂಡ ನಿಂತಾನಾಗ
ಜಳಕಾಮಾಡಿ ಕಲ್ಲಮ್ಯಾಗ ಪಂಜಿ ಬಿಟ್ಟ ಬಂದಾನಾಗ
ಕಲ್ಲಮ್ಯಾಗಿನ ಪಂಜಿ ಸೆಳೆದ ಕೊಡಲೆ ರಾಯಾ ನನಗ
ಇಷ್ಟೆ ಕೇಳಿ ರಾಯಪ್ಪ ತಾನು ಸಿಟ್ಟಿಬಾಳಾದಾನೋ ಅವನಮ್ಯಾಗ
ನಿನ್ನ ಪಂಜಿ ಸೆಳೆಯಾಕ ನಾನು ಸಿಟ್ಟಬಾಳಾದಾನೋ ಅವನಮ್ಯಾಗ
ನಿನ್ನ ಪಂಜಿ ಸೆಳೆಯಾಕ ನಾನು ಮಡಿವಾಳಲ್ಲೋ ಬಾಳ್ಯಾ ಈಗ
ಕಡಿ ಅಂದರ ನೂರಾಳು ಕಡಿಯಾಂವ ನೋಡೋ ಇನ್ನಮ್ಯಾಗ
ಇಂಥಾ ದೋಮ್ಯಾ ಕೆಲಸಾ ಹೇಳಾಕಾ ನಾಚಿಕೆ ಬರಲಿಲ್ಲೇನೋ ನಿನಗ
ಇಷ್ಟ ಕೇಳಿ ಬಾಳಪ್ಪ ತಾನು ಮತ್ತ ಹೇಳತಾನ ರಾಯಾಗಾಗ
ಎಂಥಾ ಹೆಣ್ಣ ದರಬಾರ ಬಂತೋ ರಾಜ್ಯದ ಮ್ಯಾಗ
ಇದನ್ನ ಕೇಳಿ ರಾಯಪ್ಪ ತಾನು ಸಿಟ್ಟುಬಾಳದಾನಾಗ
ಪಂಜಿ ಎಳತಂದು ಒಗೆದು ಬಿಟ್ಟಾನು ಬಾಳ್ಯಾನ ಮಾರಿಮ್ಯಾಗ
ಇಷ್ಟೆ ನೋಡಿ ಬಾಳಣ್ಣ ತಾನು ಸಿಟ್ಟ ಬಾಳ ಆದನೋ ಆಗ

||ಇಳುವು||
ಎಂಥಾ ಸೊಕ್ಕಿನ ಕುರುಬ ಹುಟ್ಟಿದಲ್ಲೇ ಸಂಗೊಳ್ಯಾಗ
ಏನು ಅಂದ್ಯೋ ಲಂಡ ಹಾರುವ ಜಿಗದ ಕಡದೇನೋ ರುಂಡವನೀಗ
ಕಣ್ಣು ಕಿಸ್ತ ರಾಯಪ್ಪ ತಾನು ಕತ್ತಿ ಹಿರದಾನು ಮಳಲಿನೊಳಗ
ಬಕ್ಕನೆತ್ತಿ ಬರೆ ಮೈಲೆ ಓಡುತ್ತಿದ್ದನು ಬಾಳ್ಯಾನಾಗ
ಅವರ ಸಂದು ಉಳದೀತ್ರಪಾ ಮಲಪ್ರಭಾ ಹೊಳಿಯಾಗ
ದಾತರಿದಂತಹ ಜಗಳ ಯಾತಕಪ್ಪ ರಾಯಾ ನಿನಗ
|| ಬೆಳಗಾಂವ ಜಿಲ್ಲಾಪೈಕಿ ……. ೧ನೆಯ ಚೌಕ ||

ನಡಿ ತಳವಾರ ಫಕೀರ ತಮ್ಮಾ ಲಗುಮಾಡೀಗ
ಆ ತುಡಗ ರಾಯಾನ ಹೋಗಿ ಕರಕೊಂಡ ಬಾರೀಗ
ಅಪ್ಪಪ್ಪ ರಾಯಪ್ಪಣ್ಣ ಅದಿಯೇನಪ್ಪ ಮುನಿಯಾಗ
ಬಾರೋ ಬಾರೋ ಫಕೀರ ತಮ್ಮಾ ಯಾಕ ಬಂದೀಗ
ಕುಲಕರ್ಣಿ ಬಾಳಪ್ಪನವರು ಕರಕೊಂಡ ಬಾ ಅಂದಾರ ನಿನಗ
ಮುಂದ ಆಗುವಂಥ ವಿಚಿಯಾರ ತಿಳಿಯಲಿಲ್ಲ ರಾಯಣ್ಣಗ
ಮಳ್ಳತನಕ ಬಿದ್ದು ರಾಯಾ ಚಕ್ಕನೆ ಮೇಲಕ್ಕೆದ್ದಾನಾಗ
ಬಿರಿ ಬಿರಿ ಬಂದಾನ ಬಂಟಾ ಸಂಗವಳ್ಳಿ ಚಾವಡ್ಯಾಗ
ಯಾಕೋ ಬಾಳಪ್ಪಣ್ಣಾ ಯಾಕ ಕರಿಸಿದಿ ಹೇಳೋ ನನಗ
ಇಷ್ಟೆ ಕೇಳಿ ಬಾಳಪ್ಪ ತಾನು ಹೇಳತಿದ್ದಾ ರಾಯಣ್ಣಗಾಗ
ಸಂಪಗಾಂವಿಗೆ ಚಾಕರಿ ಬಂದೈತಲೆ ತಮ್ಮಾ ನಿನಗ
ಇಷ್ಟೆ ಕೇಳಿ ಬಾಳಪ್ಪ ಲಕೋಟಿ ಕೊಟ್ಟಾನ ರಾಯಣ್ಣಗಾಗ
ಮಳ್ಳತನಕ ಬಿದ್ದು ರಾಯಾ ಲಕೋಟಿ ತೆಗೆದುಕೊಂಡಾಗ
ಬಿರಿ ಬಿರಿ ಬಂದಾನ ಬಂಟಾ ತನ್ನ ಅರಮನಿಯೊಳಗ
ಬಿಚ್ಚಗತ್ತಿ ಚನಬಸ್ಯಾ ತಮ್ಮಾ ಜೋಕೆಪ್ಪ ಮನೀಕಡಿಗೀಗ
ಸಂಪಗಾಂವಿಗೆ ಚಾಕರಿ ಬಂದೈತಿ ತಮ್ಮಾ ನನಗ
ಡಗಲಿ ಚಣ್ಣಾ ತೊಟ್ಟು ಮ್ಯಾಲೆ ಹಿಡಿಗ್ಯಾವಿ ಧರಿಸಿದನಾಗ
ಹಿಂಬಡಮಟಾ ಶಮನಾ ಬಿಟ್ಟು ಒತ್ತಿಸುತ್ಯಾನ ಮುಂಡಾಸಾಗ
ಕತ್ತಿ ಡಾಲು ಡುಬ್ಬಕ ಹಾಕಿ ಶ್ರೀಂಗಾರಾಗತಾನು ಮನಿ ಒಳಗ
ಸಂಜಿ ಮೂರತಾಸ ಹೊತ್ತಿಂತ ಕಚೇರಿತ್ತೊ ಭರಪೂರಾಗ
ದವಡಿಸಿ ಹೋದಾನು ಬಂಟರ ಸಂಪಗಾವಿ ಕಚೇರ‍್ಯಾಗ
ಟೋಣ್ಯಾ ಸುಭೇದಾರ ಕೈಯಾಗ ಲಕೋಟಿ ಕೊಟ್ಟ ನಿಂತಾನಾಗ
ಲಕೋಟೆ ಒಡೆದು ಸುಭೇದಾರ ಕಾಗದಾ ಓದಿ ಕೊಂತಾನಾಗ
ಕಾಗದ ಓದಿ ಸುಭೆದಾರ ಕರಕರ ಹಲ್ಲತಿಂದಾನಾಗ
ಅವನ ವಿಚಾರ ಮಾಡಲಿಲ್ಲ ದೂಡಿಬಿಟ್ಟಾರೋ ತುರಂಗದಾಗ
ಅವನ ದೂಡಿದ ಸುದ್ದಿ ಮುಟ್ಟಿತೋ ಸಂಗೊಳ್ಳಿಗಾಗ
ಅಷ್ಟ ಹೊತ್ತಿಗೆ ವೈರಿ ಬಾಳ್ಯಾ ಫಿತೂರಿ ನಡಸ್ಯಾನೋ ಸಂಗೊಳ್ಯಾಗ
ತಳವಾರ ಫಕೀರ ತಮ್ಮಾ ಲಗುಮಾಡಿ ಬಾ ಅಂತಾನಾಗ
ಆ ತುಡುಗ ರಾಯಾನ ತಾಯಿ ಕರಕೊಂಡ ಬಾ ಚಾವಡಿ ಒಳಗ
ಇಷ್ಟ ಕೇಳಿ ಫಕೀರ ತಾನು ದವಡಿಸಿ ಬಂದಾನಾಗ
ಅವ್ವವ್ವ ಕೆಂಚವ್ವ ಅದಿಯೇನವ್ವಾ ಮನಿಯಾಗ
ಬಾರೋ ಬಾರೋ ಫಕೀರ ತಮ್ಮಾ ಯಾಕ ಬಂದೀಗ
ಕುಲಕರ್ಣಿ ಬಾಳಪ್ಪನವರು ಕರಕೊಂಡ ಬಾ ಅಂದಾರು ನಿನಗ
ಮುಂದ ಆಗುವಂಥಹ ವಿಚಾರ ತಿಳಿಯಲಿಲ್ಲರಿ ಕೆಂಚವ್ವಗ
ಬಿರಿಬಿರಿ ಬಂದಾಳ ಕೆಂಚವ್ವ ಸಂಗೊಳ್ಳಿ ಚಾವಡೀಗಾಗ
ಯಾಕೋ ಬಾಳಪ್ಪಣ್ಣಾ ಯಾಕೆ ಕರಸೀದಿ ಹೇಳೋ ನನಗ
ಸಿಟ್ಟಿಲಿಂದ ಬಾಳಪ್ಪ ಹೇಳತಾನ ಕೆಂಚವ್ವಗಾಗ
ನಮ್ಮ ಮೂವತ್ತೈದು ರೂಪಾಯಿ ಕೊಡಬೇಕೀಗ
ಅಷ್ಟಕೇಳಿ ಕೆಂಚವ್ವ ಹೇಳತಾಳ ಬಾಳಣ್ಣಗೀಗ
ನನ್ನ ಮಗಾ ರಾಯಾ ಬಂದನಂತರ ರೂಪಾಯಿ ನಿನಗ
ಅಷ್ಟ ಕೇಳಿ ಬಾಳಪ್ಪ ತಾನು ಸಿಟ್ಟ ಆದಾನೊ ಆಗ
ಡೊಗ್ಗಿಸಿ ಡುಬ್ಬದಮ್ಯಾಗ ಕಲ್ಲ ಹೇರಿಸ್ಯಾನೋ ಕೆಂಚವ್ವಗ
ಬೆಳ್ಳವಡಿಯ ಯಂಕನಗೌಡಾ ಸೆರಿಯ ಬಿಡಿಸ್ಯಾನ ಕೆಂಚವ್ವಗ
ಕೆಂಚವ್ವ ಮೆಲ್ಲಕ ಚಾವಡಿ ಇಳಿದು ಹೇಳಿತಿದ್ದಳೋ ಬಾಳ್ಯಾಗ
ನನ್ನ ಮಗಾ ರಾಯ ಬರಲಿ ಚಂಡಕೋಸತೀನಿ ನಿಂದು ಈಗ
ಅಷ್ಟ ಹೊತ್ತಿಗೆ ಸುಭೇದಾರ ಕೇಳಿದಾನು ರಾಯಾಗಾಗ
ಸಂಪಗಾವ್ಯಾಗ ಮೂರು ದಿವಸ ಅತಲೆ ರಾಯಾ
ನೀನು ಜಮೀನ ಕೊಟ್ಟು ಹೋಗಲೆ ನಮಗಾ
ಕೇಳಿ ರಾಯಪ್ಪ ತಾನು ಕಣ್ಣತುಂಬ ನೀರತಂದಾನಾಗ
ಈ ಊರ ಒಳಗ ಗುರುತಿಲ್ಲ ಅಂತಾನು ಯಾರಿಗೀಗ
ಮೇಲಗಿರಿ ರಂಗನಗೌಡಾ ಕಣ್ಣ ಚಿವಟಿ ಹೇಳ್ಯಾನಾಗ
ಅಷ್ಟ ನೋಡಿ ರಾಯಪ್ಪ ತಾನು ಹೇಳುತಿದ್ದಾನ ಸುಭೇದಾರಗ
ಮೇಲಗಿರಿ ರಂಗನಗೌಡ್ರ ಜಾಮೀನ ಕೊಟ್ಟಾನ್ರಿ ಆಗ
ಸಂಜಿ ಮೂರ ಗಳಿಗಿರತ ಬಿಟ್ಟಾರು ಬಂಟನ್ನಾಗ
ದೀನಂತ ಕಟಂಜನ ಜಿಗಿದು ನಿಂತಾನು ರಸ್ತೆದಮ್ಯಾಗ
ಡಗ್ಗಾಲು ಮಂಡಿ ಊರಿ ಬಂಟಾ ಚೀರಲಬ್ಬಿ ಹೊಡೆದನಾಗ
ಸುಭೇದಾರಾ ನಿನ್ನ ಕರುಳು ಜನಿವಾರಾ ಹಾಕತೀನಿ ಕೊರಳಾಗ
ಸಂಪಗಾಂವಿ ಕಚೇರಿಗೆ ಬೆಂಕಿ ಹಚ್ಚತೀನಿ ಮಧ್ಯಾಹ್ನದಾಗ
ಅಷ್ಟೆ ಹೇಳಿ ರಾಯಪ್ಪ ತಾನು ಹಿಂದಕ ತಿರಗಿದನಾಗ
ದವಡಾಸಿ ಬಂದಾನು ಬಂಟಾ ಸಂಗವಳ್ಳಿ ಸ್ಥಳದಾಗ
ಆರು ತಾಸುರಾತ್ರಿಗೆ ಬಂದಾನು ಊರ ಒಳಗ
ಇನ್ನ ಮಾತ್ರ ನಮ್ಮ ತಾಯಿಗೆ ಭೆಟ್ಟಿ ಆಗಬಾರದೆಂದಾನಾಗ
ಇಷ್ಟೊಂದ ರಾಯಪ್ಪ ಕಣ್ಣತುಂಬ ನೀರ ತಂದಾನಾಗ
ಬಿಚ್ಚಗತ್ತಿ ಚನಬಸಪ್ಪ ತಮ್ಮಾ ಕದಾತಗಿಯಪ್ಪಾ ಈಗ
ಅಷ್ಟೆ ಕೇಳಿ ಚನಬಸ್ಯಾ ಕದಾತಗದ ನಿಂತಾನಾಗ
ಯಾಕೋ ರಾಯಪ್ಪಣ್ಣಾ ಮೂರುದಿನ ತಡಾ ಆತು ನಿನಗ
ಕೇಳಿ ರಾಯಣ್ಣ ತಾನು ಹೇಳುತಿದ್ದಾನು ಚನಬಸ್ಯಾಗಾಗ
ಏನ ಹೇಳಲಿ ತಮ್ಮ ಮಾನ ಕಳದಾರ ಕಚೇರಿಯಾಗ
ದುಃಖದಿಂದ ಚನಬಸ್ಯಾ ತಾನು ಹೇಳಿತಿದ್ದಾನು ರಾಯಾಗಾಗ
ವೈರಿ ಬಾಳ್ಯಾ ನಿಮ್ಮ ತಾಯಿಗೆ ಕಲ್ಲು ಹೊರಿಸ್ಯಾನೋ ಡುಬ್ಬದಮ್ಯಾಗ
ಅಷ್ಟ ಕೇಳಿ ರಾಯಪ್ಪ ಸಿಟ್ಟ ಬಾಳ ಆದಾನ್ರಿ ಬಾಳ್ಯಾನಮ್ಯಾಗ

||ಇಳುವು||
ಗಡಗಿಯಮ್ಯಾಲ ಗಡಗಿಯನಿಟ್ಟು ಅಟ್ಟುನ್ನಲೆ ಬಾಳ್ಯಾ
ನಾ ಹೋಗತೀನಿ ನಾಡಮ್ಯಾಲ ಮಂದಿ ಕಟ್ಟತೀನೀಗ
ನೀ ಹೋದ ಬಳಿಕ ನಂದೇನತಿಯಪ್ಪ ಊರ ಒಳಗ
ಹೆಂಡತಿ ಗುಳದಾಳಿ ಹರಕೊಂಡ ಬೆನ್ನ ಹತ್ಯಾನು ಚನಬಸವಣ್ಣ
ದವಡಸಿ ಬಂದಾನು ಬಂಟಾ ಬೆಳ್ಳವಡಿ ಸ್ಥಳದಾಗ
ಅವರ ಸಂದ ಉಳದೀತರೆಪ್ಪ ಬೆಳ್ಳವಡಿ ಸ್ಥಳದಾಗ
ದಾತರಿಲ್ಲದಂತಹ ಜಗಳ ಯಾತಕಪ್ಪ ರಾಯಾ ನಿನಗ
|| ಬೆಳಗಾಂವಿ ಜಿಲ್ಹಾ ಪೈಕಿ ….. ೨ನೆಯ ಚೌಕ ||

ದವಡಸಿ ಬಂದಾನ ಬಂಟಾ ಬೆಳ್ಳವಡಿ ಊರ ಒಳಗ
ಬೆಳವಡಿ ವಡ್ಡರಯಲ್ಲಾ ಮುಜರೀ ಸಲಾಮಪ್ಪ ನಿನಗ
ಬಾರೋ ಹೆಚ್ಚಿನ ಬಂಟಾ ಯಾಕ ಬಂದ್ಯೋ ಮಧ್ಯಾಹ್ನದಾಗ
ಮೊದಲಾದ ಮಜಕೂರ ಹೇಳತಿನಲೆ ತಮ್ಮಾ ನಿನಗ
ಕುಲಕರ್ಣಿ ಬಾಳ್ಯಾಗ ನನಗ ವರ್ಮ ಬೆಳದತಿ ಸಂಗೊಳ್ಯಾಗ
ನಾ ಹೋಗತೀನಿ ನಾಡಮ್ಯಾಗ ಮಂದಿ ಕಟ್ಟತೀನೀಗ
ನೀ ಹೋದಬಳಿಕ ನಂದೇನೈತಪ್ಪಾ ಬೆಳ್ಳವಡಿ ಊರಾಗ
ಡಗಲಿ ಚೊಣ್ಣಾ ತೊಟ್ಟ ಹೆಗಲಮ್ಯಾಗ ಸಲಕಿ ಹಾಕ್ಯಾನಾಗ
ಮೆಣಚ ಬಡಗಿ ಕೈಯಾಗ ಹಿಡದ ಬೆನ್ನ ಹತ್ಯಾನ ಯಲ್ಲಪ್ಪಾಗ
ದವಡಸಿ ಬಂದಾನು ಬಂಟಾ ಬೇವಿನಕೊಪ್ಪದ ಸ್ಥಳದಾಗ
ಬೇವಿನಕೊಪ್ಪದ ಭಾಲ್ಕೆ ನಾಯಿಕ ನಮಸ್ಕಾರಪ್ಪಾ ನಿನಗ
ಬಾರೋ ಹೆಚ್ಚಿನ ಬಂಟಾ ಯಾಕ ಬಂದ್ಯೋ ಮಧ್ಯಾಹ್ನದಾಗ
ಮಜಕೂರ ನಿನಗ ಹೇಳತೀನಲೆ ತಮ್ಮಾ ನಿನಗ
ಕುಲಕರ್ಣಿ ಬಾಳ್ಯಾಗ ನನಗ ವರ್ಮ ಬೆಳದೈತಿ ಸಂಗೊಳ್ಯಾಗ
ನಾ ಹೋಗತೀನಿ ನಾಡಮ್ಯಾಗ ಸೈನ್ಯ ಕಟ್ಟತೀನೀಗ
ನೀ ಹೋದಬಳಿಕ ನಂದೇನೈತೆಪ್ಪಾ ಈ ಊರ ಒಳಗ
ನೂರಾಳ ಕಟ್ಟಿಕೊಂಡು ಅಡ್ಲ ಜಿಗದಾನು ರಣದೊಳಗ
ದವಡಾಸಿ ಬಂದೀತು ದುಂಡು ಒಕ್ಕುಂದ ಸ್ಥಳದೊಳಗ
ಜಿಡ್ಡಿಮನಿ ಫಕೀರ ತಮ್ಮಾ ಹೊಂಡಬೇಕಲೇ ನೀನೀಗ
ಅವನ ಮಾತು ಮೀರಲಿಲ್ಲಾ ಹೊಂಟ ಬಂದಾನು ಫಕೀರಾಗ
ದವಡಾಸಿ ಬಂದು ದಂಡು ಬಲಕುಂದದ ತುರಬಂದಾಗ
ಕಾಳೀ ಭೀಮಣ್ಣ ನೀನು ಹೊರಡುತ್ತಲೇ ಬೇಕಲೆ ತಮ್ಮಾ ಈಗ
ಮಾತ ಮೀರಲಿಲ್ಲ ಭೀಮಣ್ಣ ಹೊರಟ ಬಂದಾನಾಗ
ರಣಹಲಗಿ ಹಣಮಂತನ ಕರಕೊಂಡು ಬಂದಾನಾಗ
ದವಡಿಸಿ ಬಂದಿತು ದಂಡು ಬತ್ತವಾಡದ ಸ್ಥಳದಾಗ
ಕಮ್ಮಾರ ಮೀರಾಸಾಬಾ ಹೊಂಡಬೇಕಲೇ ತಮ್ಮಾ ಈಗ
ಮಾತ ಮೀರಲಿಲ್ಲ ಹೊಂಟಬಂದಾನ ಮೀರಾ ಆಗ
ನೂರಾಳು ಕಮ್ಮಾರ ಕರಿದು ಬೆನ್ನ ಹತ್ಯಾನಾಗ
ದವಡಾಸಿ ಬಂದಿತು ದಂಡು ನೇಗಿನಾಳ ಸ್ಥಳದಾಗ
ಅರಮನಿಯ ಯಂಕನಗೌಡಾ ನಮಸ್ಕಾರಪ್ಪಾ ನಿನಗ
ಬಾರೋ ರಾಯಪ್ಪಣ್ಣಾ ಯಾಕ ಬಂದಿ ಮಧ್ಯಾಹ್ನದಾಗ
ಅಷ್ಟ ಕೇಳಿ ರಾಯಣ್ಣ ಹೇಳತಿದ್ದಾನು ಗೌಡರಿಗಾಗ
ಕಿತ್ತೂರ ದೇಶಗತಿ ಹೋಗತತಿ ಮಂದಿ ಕೊಡ್ರಪ್ಪಾ ನನಗ
ಅಷ್ಟು ಕೇಳಿ ಗೌಡ್ರ ತಾವು ಹೇಳತಿದ್ದಾನ ರಾಯಣ್ಣಗಾಗ
ಮಂದಿ ನಮ್ಮ ಕೈಯಾಗಿಲ್ಲಾ ಅಂತಾ ಹೇಳ್ಯಾರು ಗೌಡ್ರಾಗ
ಇದನ್ನು ಕೇಳಿ ರಾಯಣ್ಣ ಸಿಟ್ಟಬಾಳ ಆದಾನ್ರಿ ಗೌಡರಿಗೆ
ದವಡಾ ಬಂದೀತಾ ದಂಡು ಮೂಗಬಸ್ತದ ಸ್ಥಳದಾಗ
ರಜಪೂತ ರಾಮಸಿಂಗಾ ನಮಸ್ಕಾರ್ರೆಪ್ಪಾ ನಿಮಗ
ಬಾರೋ ಹೆಚ್ಚಿನ ಬಂಟಾ ಯಾಕಬಂದ್ರಿ ರಾತ್ರಿಯೊಳಗ
ಮಜಕೂರ ಹೇಳತೀನಲೆ ತಮ್ಮಾ ನಿನಗ

||ಇಳುವು||
ನಾ ಹೋಗತೀನಿ ನಾಡಮ್ಯಾಗ ಮಂದಿ ಕಟ್ಟತೀನೀಗ
ನೀ ಹೋದಬಳಿಕ ನಂದೇನೈತೆಪ್ಪ ಊರ ಒಳಗ
ವಾಯು ಹತ್ತಿ ಕಾಲ ಹೋಗ್ಯಾವ ಬಿಟ್ಟಹೋಗಬ್ಯಾಡ ಎಣ್ಣಾ ನನಗ
ಅಷ್ಟು ಹೇಳಿ ರಾಮಸಿಂಗ ಕಣ್ಣ ತುಂಬ ನೀರ ತಂದಾನಾಗ
ಬತ್ತಲಗುದರಿಗೆ ತಡಿ ಹಾಕಿ ಬೆನ್ನ ಹತ್ಯಾನೋ ರಾಯಣ್ಣಗ
ಅವರ ಸಂದ ಉಳದೀತ್ರೆಪ್ಪಾ ಮೂಗ ಬಸ್ತದ ಸ್ಥಳದಾಗ
ದಾತರಿಲ್ಲದಂತಹ ಜಗಳ ಯಾತಕಪ್ಪಾ ರಾಯಾ ನಿನಗ
|| ಬೆಳಗಾಂವ ಜಿಲ್ಲಾಪೈಕಿ ….. ೩ನೆಯ ಚೌಕ ||

ಗಟ್ಟುಳ್ಳ ಗಜವೀರ ಸುದ್ದಿಕೇಳ್ಯಾರ ನಾಡಮ್ಯಾಗ
ಕಾಳಿ ಭೀಮಣ್ಣಾ ನೀನು ಕರ್ಣಿ ಹಿಡಿಯಲೇ ಈಗ
ನಡಕಟ್ಟಿ ಭೀಮಣ್ಣ ಕರ್ಣಿ ಹಿಡದಾನು ಆಗ
ದವಡಾಸಿ ಬಂದೀತು ದಂಡು ಗೋದಳ್ಳಿಯ ಸ್ಥಳದಾಗ
ಗೋದಳ್ಳಿಯ ರೈತನು ಕೇಳುತ್ತಿದ್ದಾನು ರಾಯಣ್ಣಾಗ
ಗಟ್ಟುಳ್ಳ ಗಜವೀರನ ಮನಿಯ ತೋರಿಸಿರಪ್ಪಾ ಈಗ
ಅಷ್ಟ ಕೇಳಿ ರೈತರು ಹೇಳಿತಿದ್ದಾರು ರಾಯಣ್ಣಗಾಗ
ಅಷ್ಟ ಕೇಳಿ ಬಂಟನ ದಂಡು ಹಿಂದಕ ತಿರುಗಿತಾಗ
ದಂಡ ಬಂದೀತು ಮುರುಕುಪ್ಪಿಯದಾರಿಯೊಳಗ
ಒಡ್ಡರ ಯಲ್ಲಣ್ಣ ಸಂಗಡ ಕರಕೊಂಡ ಹೊಂಟಾನು ರಾಯಾ ಆಗ
ಮುಂದಿನ ಮಡ್ಡಿಹತ್ತಿ ಕಡಿಮಡ್ಡಿ ಇಳಿತಿದ್ದನಾಗ
ಮೂರಕೊಳ್ಳದ ನಡುವೆ ಹುಡಕಾಕ ಹತ್ಯಾರು ಗಜವೀರನಾಗ
ಬಿದರ ಮೆಳಿಯ ಮಂಚಕೀಯ ಮೇಲೆ ಗಜವೀರ ಮಲಗಿದ್ದಾ
ಹನ್ನೆರಡ ಮಣದ ಚಿಲಕತ್ತಿನಂಗಿ ಇತ್ತ ಮೈ ಒಳಗ
ಬಾರೋ ರಾಯಪ್ಪಣ್ಣ ಗೊತ್ತ ಹಚ್ಚೀನಿ ಗಜವೀರಗೀಗ
ಅಷ್ಟೆ ಕೇಳಿ ರಾಯಣ್ಣ ತಾನು ಮುಂದಕ ಓಡಿ ಬಂದಾನಾಗ
ಮಲಗಿರುವ ಗಜವೀರನ್ನ ಕಣ್ಣ ತುಂಬ ನೋಡುತಿದ್ದನಾಗ
ಏಳೋ ಏಳೋ ಗಜವೀರ ನಮಸ್ಕಾರಪ್ಪಾ ನಿನಗ
ಕೇಳಿ ರಾಯಣ್ಣ ತಾನು ಹೇಳ್ಯಾನ ಗಜವೀರಗಾಗ
ರೋಗಣ್ಣವರ ರಾಯಾ ಹುಡಕುತ್ತ ಬಂದಾನ ನಿಮಗ
ರೋಗಣ್ಣವರ ರಾಯಾ ಸುದ್ದಿ ಕೇಳ್ಯಾನು ಗಜವೀರಾಗ
ಧೀನಂತ ಮಂಚಿಕೆ ಜಿಗಿದು ತೆಕ್ಕಿ ಬಿದ್ದಾನು ರಾಯಣ್ಣಗ
ಯಾಕೋ ರಾಯಪ್ಪಣ್ಣಾ ಏನ ವ್ಯಾಗ ಒಳದೈತಿ ನಿನಗ
ಕೇಳಿ ರಾಯಣ್ಣ ಕಣ್ಣತುಂಬ ನೀರ ತಂದನಾಗ
ಏನ ಹೇಳಲಿ ತಮ್ಮಾ ಮಾನಕಳದಾರ ಕಚೇರಿಯಾಗ
ವೈರಿ ಬಾಳ್ಯಾ ನಮ್ಮ ತಾಯಿಗೆ ಕಲ್ಲುಹೊರಸ್ಯಾನ ಡುಬ್ಬದಮ್ಯಾಗ
ನಾ ಹೋಗತೀನಿ ನಾಡಮ್ಯಾಗ ಸೈನ್ಯ ಕಟ್ಟಿತೀನೀಗ
ಇದನ್ನ ಕೇಳಿ ಗಜವೀರ ಹೇಳತಿದ್ದಾನ ರಾಯಣ್ಣಗಾಗ
ಸಂಗವಳ್ಳಿ ಊರಾಗಿನ ಮಣ್ಣು ಹೊರತೀನೀಗ
ರಾತ್ರಿಯೊಳಗ ಸಂಗವಳ್ಳಿ ರೈತರನೆಲ್ಲಾ ಎಚ್ಚರಮಾಡತಿನೀಗ
ದವಡಾಸಿ ಬಂದೀತ ದಂಡ ಬಾಳೆಕುಂದದ ಕೊಳದಾಗ
ಕೊಳ್ಳಕ ಬಂದು ಕೇಳತಿದ್ದಾನ ಗಜವೀರಾ ಆಗ
ಇಷ್ಟ ದಂಡಿನ ಕೈಲೆ ಲಡಾಯಿ ಆಗುದುಲ್ಲೋ ಯಣ್ಣಾ ಈಗ
ಇದ ಕೇಳಿ ರಾಯಣ್ಣ ಮಾರಿ ಕಿಂಕರ ಮಾಡ್ಯಾನಾಗ
ನನ್ನ ಬುದ್ಧಿಯುಳ್ಳ ಒಡ್ಡರ ಯಲ್ಲಣ್ಣಾ ಮುಂದಕ ಬಾರೋ ಈಗ
ಗಟ್ಟುಳ್ಳ ಗಜವೀರ ನನಗ ನಕಲಿ ಮಾಡ್ಯಾನ ತಮ್ಮಾ ಈಗ
ನಾ ಹೋಗತೀನಿ ಮೊಗಲಾಯಿ ಸೀಮಗಿ ದಂಡ ತರತೇನೀಗ
ಅಷ್ಟೆ ಹೇಳಿ ರಾಯಪ್ಪ ತಾನು ಹಿಂದಕ ತಿರಗಿದ್ದನಾಗ
ದವಡಾಸಿ ಬಂದಾನು ಬಂಟಾ ನಂದಗಡದ ಪ್ಯಾಟಿ ಒಳಗ
ಸಾವಕಾರ ಚನಬಸಪ್ಪ ನಮಸ್ಕಾರಪ್ಪ ನಿನಗ
ಬಾರೋ ಹೆಚ್ಚಿನ ಬಂಟಾ ಯಾಕ ಬಂದ್ಯೊ ಮಧ್ಯಾಹ್ನದಾಗ
ಅಷ್ಟ ಕೇಳಿ ರಾಯಪ್ಪ ತಾನು ಹೇಳುತ್ತಿದ್ದಾನು ಸಾವಕಾರಗಾಗ
ದಂಡ ಬರಪೂರ ಕೂಡೇತಿ ಬಾಳೇಕುಂದದ ಕೊಳದಾಗ
ಖರ್ಚಿಗೆ ಕಡಿಮೆ ಆಗೇತಿ ಹೊನ್ನ ಕೊಡಬೇಕ್ರೆಪ್ಪಾ ನನಗ
ಬೇಕಾದಷ್ಟು ಹೊನ್ನ ಐತಿ ತಕ್ಕೊಂಡ ಹೇಗೋ ಬಂಟಾ ಈಗ
ಎರಡೂ ಕೊಡಪಾನ ಹೊನ್ನು ತಂದು ಕೊಟ್ಟಾನು ರಾಯಣ್ಣಗಾಗ

||ಇಳುವು||
ಎರಡೂ ಕೊಡಪಾನ ತಂದ ಇಟ್ಟಾನು ದಂಡಿನೊಳಗ
ನಾನು ಬರುವ ತನಕ ಖರ್ಚಿಗೆ ಕೊಡತೇನಿ ನಿಮಗ |
ಮೂರ ದಿವಸ ನನ್ನದಾರಿ ನೋಡಿರಿ ಅಂತಾನು ಆಗ
ಮೂರ ದಿವಸ ಆದನಂತರ ಸತ್ತನಂತ ತಿಳಿದಾಗ
ಅವನ ದಂಡಿಗೆ ಕೈಮುಗದ ಹಿಂದಕ ತಿರುಗಿದನಾಗ
ಅವರ ಸಂದು ಉಳದೀತ್ರೆಪ್ಪಾ ಬಾಳೇಕುಂದರಿ ಸ್ಥಳದಾಗ
ದಾತರಿಲ್ಲದಂತಾ ಜಗಳಾ ಯಾತಕಪ್ಪಾ ರಾಯಾ ನಿನಗ
|| ಬೆಳಗಾಂವ ಜಿಲ್ಲಾ ಪೈಕಿ ….. ೪ನೆಯ ಚೌಕ ||

ಅಷ್ಟ ಹೇಳಿ ರಾಯಪ್ಪ ತಾನು ಹಿಂದಕ್ಕೆ ತಿರುಗಿದ್ದನಾಗ
ಹರಕ ತೋರಿ ತುಂಡ ತೆಲಿಯಮೇಲೆ ಹೊತಕೊಂಡನಾಗ
ಮುದುಕನ ವೇಷ ಹಾಕಿ ರಾಯಾ ತಯಾರಾಗತಾನ ಕೊಳ್ಳದಾಗ
ದವಡಾಸಿ ಬಂದಾನು ಬಂಟಾ ಅಪರಾಧಿಯ ಸ್ಥಳದಾಗ
ಅಪರಾಧಿ ಸಂಗಡ ಮುಂದಿನ ಹೊಳಿ ದಾಟ್ಯಾನ ಗಳಗೊತ್ತಿನಾಗ
ಒಂದಿನಾ ಒಪ್ಪತ್ತೀನ್ಯಾಗ ಹೋಗಿ ಇಳದಾನು ಮೊಗಲಾವ್ಯಾಗ
ಆರತಾಸ ರಾತ್ರಿಗೆ ಹೋಗಿ ನಿಂತಾನು ತುರಮಂದ್ಯಾಗ
ಮೊಗಲಾಯಿ ಅಗಸಿಗೆ ತಲೆಗೊಟ್ಟು ಮಲಗಿದ್ದನಾಗ
ಮುಂಜಾನೆ ಮೂರತಾಸ ಹೊತ್ತಿಗೆ ದರಬಾರನಡದಿತ್ತ ಅರಮನ್ಯಾಗ
ತಲಿಯ ಮ್ಯಾಲಿನ ಕೋರಿ ತಗದು ಚಲ್ಯಾನ ತುರಮಂದ್ಯಾಗ
ಡಗಲಿ ಚಣ್ಣಾ ತೊಟ್ಟು ಮುಂಗೈ ಹಿಡಿಗ್ಯಾಂವಿ ಇರಿರಿಸಿನಾಗ
ಗಡ್ಡದಮಟಾ ಶಮನಾ ಬಿಟ್ಟು ಒತ್ತಿ ಸುತ್ಯಾನೋ ಮುಂಡಾಸದಾಗ
ಕತ್ತಿ ಢಾಲು ಕೈಯಾಗ ಹಿಡದ ತಯ್ಯಾರಾದಾನು ತುರಮಂದ್ಯಾಗ
ಮುಂದಿನ ಪಾರದವಾ ಯಾರಂತ ಧೀನಂತ ಜಿಗಿದಿದ್ದಾನಾಗ
ಏಳು ಅಗಸಿ ಜಿಕ್ಕೊಂತ ರಾಯಣ್ಣ ಬಂದಾನ ದರಬಾರದಾಗ
ಕತ್ತಿ ಢಾಲು ಕೈಯಾಗ ಹಿಡಿದುಕೊಂಡು ನಮಸ್ಕಾರಂದಾನರಸನಿಗಿ
ಪರ ನಾಡಿನ ಮನುಷ್ಯಾ ಯಾರ ಹೇಳಲೇ ನೀ ನಮಗ
ಅಷ್ಟ ಕೇಳಿ ರಾಯಪ್ಪ ತಾನು ಹೇಳತಿದ್ದನು ಅರಸನಿಗಿ
ರೋಗಣ್ಣವರ ರಾಯಾ ನಿನ್ನ ಸುದ್ದಿ ಕೇಳಿ ಬಂದೇನೀಗ
ಕಿತ್ತೂರ ದೇಶಗತಿ ಸಲುವಾಗಿ ಮಂದಿ ಕೊಡಬೇಕಪ್ಪಾ ನನಗ
ಏನ ಕಸರತ್ತ ನೋಡಿ ಮಂದಿ ಕೊಡಬೇಕಪ್ಪಾ ನಿನಗ
ಇಷ್ಟೆ ಅನ್ನುದು ನಿಂತಗೊಂಡ ಕೇಳತಿದ್ದ ರಾಯಣ್ಣಾಗ
ಹಚ್ಚಿ ನೋಡ ಲಢಾಯಿ ನಿನ್ನ ಮೀರಿದ ವೈರಿಗೆ ನನಗ
ಕೇಳಿ ಮೊಗಲಾಯಿ ಅರಸ ಹೇಳಿದಾನ ರಾಯಣ್ಣನಾಗ
ಕನಕೂರ ಭರಮ್ಯಾ ಭಾಳ ವೈರಿ ಆಗ್ಯಾನು ನನಗ
ಅವನ ಹೆದರಿ ಏಳಸಾವಿರ ದಂಡ ಸೇರೇತಿ ವಾಡೇದಾಗ
ಅವನ ರುಂಡ ತಂದ ಕೊಟ್ಟರ ಕೊಡತೇನಿ ದಂಡೆಲ್ಲ ನಿನಗ
ಇಷ್ಟೆ ಅನ್ನೋದು ರಾಯಣ್ಣ ನಿಂತಕೊಂಡು ಕೇಳುತ್ತಿದ್ದನಾಗ
ಕನಕೂರ ಭರಮ್ಯಾ ಇರುವ ಸ್ಥಳ ಹೇಳ್ರೆಪ್ಪಾ ನನಗ
ಕೇಳಿ ಅರಸಾ ಆನಂದಾಗಿ ಹೇಳತಿದ್ದಾನ ರಾಯಣ್ಣಗಾಗ
ಕಲ್ಲ ಭಾಂವಿ ಐತಿ ತಮ್ಮಾ ತುಳಸಿಗುಡ್ಡದ ವಾರಿಯೊಳಗ
ಸಾರಿ ಬರತಾನು ಭರಮ್ಯಾ ಮೂರತಾಸ ರಾತ್ರಿಯೊಳಗ
ಹೊಂಕಳಗಂಟಿ ಹುಲಿಯಚರ್ಮಾ ಮೇಲೆ ಮುಂದ ಅವಗ
ಐದನೂರು ದಂಡಿನೊಳಗ ಪಂಜು ಹಿಡಿಯತಾನು ಕೈಯೊಳಗ
ಇಷ್ಟು ಅನ್ನುದು ರಾಯಣ್ಣ ತಾನು ಧ್ಯಾನಿಸಿ ಕೇಳುತ್ತಿದ್ದಾಗ
ಸಂಜಿಗಳಿಗೆ ಹೊತ್ತ ಇರತ ಗುಡ್ಡದ ದಾರಿ ಹಿಡಿದನಾಗ
ದವಡಾಸಿ ಬಂದಾನೋ ಬಂಟಾ ತುಳಸಿಗುಡ್ಡದ ದಾರಿಯೊಳಗ
ಕಲ್ಲಭಾವಿ ಕಂಡಾನ ರಾಯಣ್ಣ ತುಳಸಿ ಗುಡ್ಡದ ದಾರಿಯೊಳಗ
ಸರಾ ಸರಾ ಇಳಿದು ರಾಯಾ ಸುಮ್ಮನೆ ಕುಂತಾನು ಭಾವಿಯೊಳಗ
ಸಾರಿ ಬಂದಾನು ಭರಮಾ ಮೂರು ತಾಸು ರಾತ್ರಿನಾಗ
ಸಾರಿ ಬರುವ ಭರಮನ ಕಣ್ಣತುಂಬ ನೋಡುತ್ತಿದ್ದನಾಗ
ಭಾವಿ ಸನಿಯಾಕ ಬಂದಾನ ರಾಯಣ್ಣ ಚಟ್ನ ಮೇಲಕ್ಕೆದ್ದನಾಗ
ಬಾರೋ ಕನಕೂರ ಭರಮಾ ಸಲಾಮಪ್ಪಾ ನಿನಗ
ಕೋಣಿನ ಸೊಕ್ಕಿನ ಬ್ಯಾಡಾ ತೆಗೆಯಲಿಲ್ಲ ಕಣ್ಣ ಆಗ
ಗುರುತಿಲ್ಲ ಕೂನಿಲ್ಲ ಯಾತರ ಸಲಾಮ ನನಗ
ಇಷ್ಟ ಕೇಳಿ ರಾಯಣ್ಣಗ ಬೆಂಕಿ ಬಿತ್ತೊ ಹೊಟ್ಟೆ ಒಳಗ
ರೋಗಣ್ಣವರ ರಾಯಾನೆಂಬುವ ಶಬ್ದ ಕೇಳಿ ಬಂದೇನಂತಾನಾಗ
ಕಿತ್ತೂರ ಮಲ್ಲಸರ್ಜನ ಹುಲಿಯು ಬಂದಾನು ತಮ್ಮಾ ಈಗ
ರೋಗಣ್ಣವರ ರಾಯಾನೆಂಬುವ ಶಬ್ದಕೇಳಿತ ದಂಡೆಲ್ಲಾಗ
ಚಟ್ಟಣೆ ಸಿಡಿದು ಹೋಗಿ ನಿಂತಿತು ದಂಡೆಲ್ಲ ವಾರಿ ಒಳಗ
ರಾಯಣ್ಣನ ನೋಡಿ ಭರಮ್ಯಾ ನಡಗಾಕ ಹತ್ಯಾನೋ ದಂಡಿನೊಳಗ
ಸುಳ್ಳ ಮೇಲಿನ ಧೈರ್ಯಕ ಹೇಳ್ಯಾನೋ ರಾಯಣ್ಣನಾಗ
ಒಳ್ಳೆ ಬಂದು ಕೂಡಿದಿ ಮೋಜ ಮಾಡು ಮಳಲಿನೊಳಗ
ತನ್ನ ದಂಡಿಗೆಲ್ಲಾ ಭರಮಣ್ಣ ಹೇಳತಿದ್ದಾನಪ್ಪಾ ಆಗ
ಅವನ ಸತ್ತರ ನನ್ನ ಹಿಂಬಾಲಿ ಇರುವಂತಿರಾಗ
ಇಷ್ಟ ಕೇಳಿ ಭರಮನ ದಂಡಿಗೆ ರಾಯಣ್ಣ ಹೇಳಿದನಾಗ
ದಂಡಿತೆವಗಡ ಕಾಳವ್ವನ ಆಣೆ ಆಗೈತಿ ತಮ್ಮಾ ನಿಮಗ
ಯಾರ ಭರವಸೆ ನಮಗ ಏನ ಹೋಗಿ ನಿಂದಿರ್ರಿ ಮಡ್ಡಿಮ್ಯಾಗ
ಇಷ್ಟಮಾತ ಮಾತಾಡುವುದರೊಳಗ ಕತ್ತಿ ಹಿರಿದಾರ ಮಳಲಿನೊಳಗ
ಹಿಡಿ ಬ್ಯಾಡನ ಗಜ್ಜ ಅಂತ ಸೆಳದನಿಂತಾಗ ಭರಮಣ್ಣಾಗ
ಭರಮನ ಕತ್ತಿಯ ಪೆಟ್ಟು ಢಾಲಿನ ಮೇಲಿಟ್ಟಗೊಂಡನಾಗ
ಇದು ಕುರುಬನ ಗಜ್ಜಂತ ಸೆಳೆದ ನಿಂತಾನ ರಾಯಣ್ಣಾಗ
ರಾಯಣ್ಣನ ಕತ್ತಿ ಪೆಟ್ಟಿಗೆ ಢಾಲುಕೊಟ್ಟಾನು ಭರಮ್ಯಾ ಆಗ
ಹಿಡಿ ಬ್ಯಾಡನ ಗಜ್ಜ ಅಂತ ಮತ್ತ ಸೆಳೆದನಿಂತಾನಾಗ
ಧೀನಂತ ರಾಯಣ್ಣ ತಾನು ಹಿಂಬರಕಿ ಜಿಗಿದಾನಾಗ
ಏಳು ಅಕ್ಕಡಿ ನೆಲಾ ಅಳತಿ ಮಡಲೆ ಭರಮ್ಯಾ ಈಗ
ಹಿಡಿ ಕುರುಬನ ಗಜ್ಜಂತ ಮತ್ತು ಸೆಳದ ನಿಂತಾನಾಗ
ಟಣ್ಣಂತ ಭರಮಣ್ಣ ತಾನೂ ಹಿಂಬರಕಿ ಜಿಗಿದಿದ್ದಾಗ
ಮೂರು ಅಕ್ಕಡಿ ನೆಲಾ ರಾಯಣ್ಣ ಅಳತಿ ಮಾಡಿಕೊಂಡನಾಗ
ಅಳತಿ ಮಾಡಿ ರಾಯಣ್ಣ ತಾನು ಕುಲು ಕುಲು ನಗತ್ತಿದ್ದಾಗ
ಚಟ್ಟಿ ಜೋಕಾ ಬೀಸುವತನಕಾ ಮೋಜ ಮಾಡ್ಯಾನೋ ಮಲಳಿನೊಳಗ
ಹೇಳಿಕೇಳಿ ಕಡಿಯತೀನಿ ಭರಮ್ಯಾ ಹುಷಾರಾಗಿರೋ ನಿನೀಗ
ಕಾಲಗೇರೆಯಮೇಲೆ ಸೆಳೆದು ಬಿಟ್ಟಾನು ಡೊಕ್ಕಿಯ ಮ್ಯಾಗ
ಬಕ್ಕಬಾರಲೆ ಬಿದ್ದ ಭರಮ್ಯಾ ಒದ್ದಾಡತಾನ ಮಳಲಿನೊಳಗೆ
ಭರಮನ ಚಂಡಿಕಿ ಹಿಡಿದು ರಾಯಣ್ಣ ಮೇಲಕ್ಕೆ ನೆಗವಿದಾಗ
ಅವನ ಚಂದಕೋದ ತನ್ನ ಢಾಲಿಗೆ ಹಾಕಿಕೊಂಡಾನಾಗ
ಒಳ್ಳೆ ಬಂಟಾ ಅದ್ದರೆ ಮೀರಿ ಹೋಗತೇನಿ ತಮ್ಮಾ ಈಗ
ಮಡ್ಡಿಮ್ಯಾಲೆ ಕುಂತ ಭರಮ್ಯಾನ ದಂಡು ಹೇಳತಿತ್ತ ರಾಯಣ್ಣಗಾಗ

||ಇಳುವು||

ಹಿಂಡಿನೊಳಗಿನ ಗಂಡೊಳ್ಳಿ ಕೊಯ್ದು ಚಲ್ಲಿದಿರಪ್ಪಾ ಈಗ
ಮುಂದ ಅನ್ನದ ಮಾರ್ಗಾ ಏನ ಹೇಳತೀರಪ್ಪಾ ನನಗ
ಕೇಳಿ ರಾಯಪ್ಪ ತಾನು ಹೇಳತಿದ್ದಾನು ದಂಡಿಗಾಗ
ಕತ್ತಿ ಮುಟ್ಟಿ ದಂಡೆಲ್ಲ ಆಣಿ ಮಾಡಬೇಕ್ರೆಪ್ಪಾ ಈಗ
ನಿನ್ನ ಮಾತಿನಮೇಲೆ ಎರಡನೆ ಇಲ್ಲೊಯಣ್ಣಾ ಈಗ
ಅದರಂತೆ ಕತ್ತಿ ಮುಟ್ಟಿ ಆಣಿ ಮಾಡಿತು ದಂಡೆಲ್ಲಾಗ
ಅವರ ಸಂದ ಉಳದೀತ್ರೆಪ್ಪಾ ತುಳಸಿಗುಡ್ಡದ ವಾರಿಯೊಳಗೆ
ದಾತರಿಯಲ್ಲದಂತಹ ಜಗಳ ಯಾತಕಪ್ಪ ರಾಯಾ ನಿನಗ
|| ಬೆಳಗಾಂವಿ ಜಿಲ್ಹಾಪೈಕಿ ….. ೫ನೆಯ ಚೌಕ ||

ಇಷ್ಟ ಹೇಳಿ ರಾಯಣ್ಣ ತಾನು ದಂಡ ಕರಕೊಂಡ ಬಂದನಾಗ
ದಂಡೆಲ್ಲ ಊರ ಒಳಗ ಒಯ್ಯಬಾರದಂತಾನಾಗ
ಮೊಗಲಾಯಿ ಸೀಮಿ ಹಿಂದ ದಂಡು ಬಿಟ್ಟ ಬಂದಾನಾಗ
ಏಳು ಅಗಸಿ ಜಿಕ್ಕೊಂತ ರಾಯಣ್ಣ ಬಂದನಿಂತಾನ ದರಬಾರದಾಗ
ಭರಮ್ಯಾನ ಚಂಡ ತಂದು ಅರಸನ ಮುಂದನಿಟ್ಟಾಗ
ಭರಮ್ಯಾನ ಚಂಡ ನೋಡಿ ಅರಸಾ ಹಿರಿಹಿರಿ ಹಿಗ್ಗಿದನಾಗ
ನಾನಾಳು ರಾಜ್ಯ ನೀನಾಳಲೆ ಕಲಿ ಬಂಟಾ ನೀನೀಗ
ನಿನ್ನ ರಾಜ್ಯ ಆಳಾಕ ನಾ ಇಲ್ಲೆ ಇರಾಕ ಬಂದಿಲ್ಲೀಗ
ಇಷ್ಟ ಮಾತಾಡಿಕೊಂತ ರಾಯಣ್ಣ ಹೊಕ್ಕಾನ ವಾಡೇದಾಗ
ಕತ್ತಿ ಒರಿಯಂತಹ ಹುಡುಗರನಾರಿಸಿ ತಕ್ಕೊಂಡಾನಾಗ
ಮೂರು ಸಾವಿರ ದಂಡು ಕರಕೊಂಡು ಹೊಂಟಾನು ರಾಯಣ್ಣಾಗ
ನನಗ ವ್ಯಾಳೇ ಆಗತೈತಿ ಅಪ್ಪನಿ ಕೊಡರಿ ಅರಸರಾ
ಅಷ್ಟ ಕೇಳಿ ಮೊಗಲಾವಿ ಅರಸು ಹೇಳತ್ತಿದ್ದಾನಾಗಾ
ರಾಯಣ್ಣಾ ನಿನಗ ಹೊನ್ನ ಕೊಡತೀನಿ ಸಂತೋಷಾಗ ಮನಸ್ಸಿನಾಗ
ನಿನ್ನ ಹೊನ್ನ ತಗೊಳ್ಳಾಕ ನಾ ದಾಸಲ್ಲ-ಡೊಂಬಲ್ಲಾ ಈಗ
ಇಷ್ಟೆ ಕೇಳಿ ಮೊಗಲಾವಿ ಅರಸ ಅಪ್ಪಣೆ ಕೊಟ್ಟಾನ ರಾಯಣ್ಣಗ
ದವಡಾಸಿ ಬಂದೀತು ದಂಡು ಗುಳೇದಗುಡ್ಡದ ವಾರಿಯೊಳಗ
ಅಲ್ಲಿಗಿ ಬಂದು ರಾಯಪ್ಪ ತಾನು ವಿಚಾರ ಮಾಡಾಕ್ಹತ್ಯಾನಾಗ
ಮುಂದ ಕಾಣು ಹಳ್ಳಿ ಶ್ರೀಮಂತರನ್ನ ಸುಲಗಿ ಮಾಡಿರೀಗ
ಹೆಣ್ಣು ಮಕ್ಕಳನ ಮುಟ್ಟಬ್ಯಾಡ್ರಿ ದೋಷ ತಟ್ಟೀತನಮಗ
ಸಿರಿ ಅರಿವಿ ಬಿಡದಂಗ ಸುಲಗಿ ಮಾಡಿರಿ ಸಿರಿವಂತನೀಗ
ಇಷ್ಟ ಹೇಳಿ ರಾಯಣ್ಣ ತಾನು ಹೊಕ್ಕಾನು ಗುಳೇದಗುಡ್ಡದಾಗ
ನೋಡ ನೊಡುದರೊಳಗ ಲೂಟಿ ಮಾಡ್ಯಾರ ಊರೊಳಗ
ನಡು ರಸ್ತೆದೊಳಗ ಸುಮ್ಮನೆ ಹೊಂಟಾನು ರಾಯಣ್ಣಾಗ
ಅಲ್ಲಿ ಒಬ್ಬ ಹೆಣ್ಣ ಮಗಳು ಜೋಗುಳ ಹಾಕಹತ್ತಿದ್ದಳಾಗ
ನನ್ನ ರಾಯಣ್ಣನಂತಹ ಮಗನೆ ಸುಮ್ಮನೆ ಮಲಗಪ್ಪ ಈಗ
ಇಷ್ಟ ಅನ್ನುದ ರಾಯಣ್ಣ ಕೇಳಿ ಅಡರಾಸಿ ಬಂದನಾಗ
ಹೆದರಬೇಡ ಹಡದವ್ವ ನೀನ  ಕದಾತಗಿಯವ್ವಾ ತಂಗಿ ನೀನಾ
ಕಡಿ ಮನಿಯಾನ ಎಮ್ಮಿ ತಂದ ಕಟ್ಯಾನ ಅವರ ಮನಿಯಾಗ
ನಾನಿರುತನಕ ತಾಪತ್ರ ಮಾಡಬೇಡವ್ವ ಮಗಗ
ನಿನ್ನ ಹೊಟ್ಟಿ ತನ್ನಗಿರಲಿ ಹೋಗಿ ಬರತೀನಿ ತಾಯಿ ಈಗ
ಇಷ್ಟಂದ ರಾಯಣ್ಣ ತಾನು ಅಕಿ ಪಾದಕ್ಕ ಎರಗೀದನಾಗ
ಒತ್ತರದಿಂದ ಬಂದು ಓಡಿ ದಂದ ಕೂಡಿಕೊಂತಾನಾಗ
ಬಂಗಾರದ ಸಾಮಾನ ತಂದು ಅವನ ಕೈಯಾಗ ಕೊಡತಾರಾಗ
ಒತ್ತರದಿಂದ ಬಂದೀತ ದಂಡು ನಿಂಗನ ಮಠದ ದಾರಿಯೊಳಗ
ಕಡ್ಡಿ ಬಸವ್ವಾ ತಾನ ಹೊರಬಿದ್ದ ಬಂದಾಳ್ರಿ ಆಗ
ನಿಲ್ಲೋ ರಾಯಣ್ಣ ನಾನು ಆರತಿ ಮಾಡತೇನಿ ನಿನಗ
ಇಷ್ಟ ಅನ್ನುದು ರಾಯಪ್ಪ ಕಿವಿಗೊಟ್ಟು ಕೇಳತಿದ್ದನಾಗ
ಅಷ್ಟ ಕೇಳಿ ರಾಯಪ್ಪ ತಾನು ದಂಡೆಲ್ಲ ತರುಬಿದನಾಗ
ಅವಸರದಿಂದ ಬಸವ್ವ ತಾನು ಆರತಿ ತಂದಾಳ್ರಿ ಆಗ
ತುಂಬಿದ ಆರತಿ ತಗೊಂಡು ಬಂದಾಳು ದಂಡಿನಮುಂದಾ
ಕರಿಯ ಕಂಬಳಿ ಮಡಚಿ ಗದ್ದಗಿ ಮಾಡಿ ಕುಂತಾನರಾಯ
ಕತ್ತಿ ಡಾಲು ತಗದ ರಾಯಾ ಇಟ್ಟಾನು ಗದ್ದಿಗಿ ಮ್ಯಾಗ
ಕತ್ತಿಗಾರುತಿ ಮಾಡಿ ಬಸವ್ವ ಕಪ್ಪ ಹಚ್ಯಾಳು ಢಾಲೀಗಿ
ಹಿಂದುಗಡೆ ಬಸವ್ವನ ಕೂಡ್ರಿಶ್ಯಾನು ಕಂಬಳಿಮ್ಯಾಗ
ತುಂಬಿದ ಆರುತಿ ತಗೊಂಡ ಬೆಳಗತಿದ್ದಾನು ಬಸವ್ವಗಾಗ
ಮಾರುದ್ದ ಮುತ್ತಿನದಂಡ ತಲಿಮ್ಯಾಲ ಹಾಕ್ಯಾನಾಗ
ಕರಿಯಸೀರಿ ತಂದು ಉಡಸಾಕ ಹತ್ಯಾನು ಬಸವ್ವಗಾಗ
ಬುಟ್ಟಿ ತುಂಬ ಹೊನ್ನ ತಂದ ಉಡಿಗಿ ಹಾಕಿದ್ದನಾಗ
ನಿನ್ನ ಮನಸ ಶಾಂತ ಇರಲಿ ಹೋಗಿ ಬರತೀನ ತಂಗಿ
ಇಷ್ಟೆ ಅಂದ ರಾಯಪ್ಪ ಪಾದಕ್ಕ ಎರಗೀದಾ ಮುಂದಾ
ಕಡ್ಡಿ ಬಸವ್ವನ ಕಳಸಾಗ ದಂಡು ತಿರಗೇತ್ರಪ್ಪಾ ಆಗ
ನಿನ್ನ ಮನಿ ಯಾವದು ತಂಗಿ ತೋರಿಸಂತಾನ ರಾಯಣ್ಣಾಗ
ಇದ ಕಡಿಮನಿ ನಮ್ಮ ಮನಿ ಅಂತ ತೋರಿಸಿದಳಾಗ

||ಇಳುವು||

ನಿಮ್ಮ ಮನಿಯಂದು ಏನೇನ ಹೋಗೆತೆವ್ವಾ ತಂಗಿ ಈಗ
ಆರುಗಾಲಿ ಸಂದುಕಾ ಬರಿದಾಗೈತಿ ಎಣ್ಣಾ ಈಗಂದೀಗ
ಆರುಗಾಲಿ ಸಂದುಕ ತುಂಬ ಹೊನ್ನ ತುಂಬ್ಯಾನ ರಾಯಣ್ಣಾಗ
ನಿನ್ನ ಆಶೀರ್ವಾದ ಇರಲಿ ಹೋಗಿ ಬರತೀನಿ ತಂಗೆವ್ವಾ ಈಗ
ಅಷ್ಟಂದು ರಾಯಣ್ಣ ತಾನು ಪಾದಕ್ಕ ಎರಗಿದ್ದಾನಾಗ
ಅವರ ಸಂದ ಉಳದೀತ್ರೆಪ್ಪಾ ನಿಂಗನ ಮಠದ ಊರೊಳಗ
ದಾತರಿಲ್ಲದಂತಾ ಜಗಳಾ ಯಾತಕಪ್ಪಾ ರಾಯಾ ನಿನಗ
|| ಬೆಳಗಾವಿ ಜಿಲ್ಹಾ ಪೈಕಿ …. ೬ನೆಯ ಚೌಕ ||

ನಿಂಗನ ಮಠದ ದಾರಿಯೊಳಗ ಮೂರುದಿವಸ ಮಿಕ್ಕಿತ್ತಾಗ
ನಮ್ಮ ರಾಯಪ್ಪ ಸತ್ತಾನಂತ ದಂಡು ತಿರಗಾಕ ಹತ್ತಿತ್ತಾಗ
ಅವನ ಬುದ್ಧಿಯುಳ್ಳ ಒಡ್ಡರ ಯಲ್ಲಾ ಸಮಾಧಾನ ಹೇಳತಾನ ದಂಡಿಗಿ
ಭೂಮಿಗಿ ಕಿವಿಯ ಹಚ್ಚಿ ಕಾಲ ಸಪ್ಪಳ ಕೇಳ್ಯಾನಾಗ
ಹೋಗ ಬ್ಯಾಡರಿ ತಮ್ಮಗಳಿರಾ ರಾಯಣ್ಣ ಬಂದ ಅಂತ ಹೇಳ್ಯಾನಾಗ
ಇಷ್ಟು ಅಂದು ಒಡ್ಡರ ಯಲ್ಲಾ ದಂಡಿನೆದುರಿಗಿ ಬಂದಾನಾಗ
ದಂಡಿನೆದುರಿಗಿ ಬಂದು ಯಲ್ಲಣ್ಣ ಕೈಮುಗಿದು ನಿಂತಾನಾಗ
ಬರುವ ಗುರ್ತಾ ಹೇಳತೀನಿ ಕಾಲಸಪ್ಪಳ ಮಾಡಬ್ಯಾಡ್ರೀಗ
ಇಷ್ಟು ಅನ್ನುದು ರಾಯಣ್ಣ ಕೇಳಿ ಕುಲುಕುಲು ನಕ್ಕಾನಾಗ
ನನ್ನ ಬುದ್ಧಿಯುಳ್ಳ ಒಡ್ಡರ ಯಲ್ಲಣ್ಣ ಮುಂದಕ ಬಾರೋ ಈಗ
ಮುಂಡಾಸ ಕೈಯಿಲೆ ತಗಿದು ಯಲ್ಲಣ್ಣಗ ಹಾಕಿದಾನಾಗ
ಬುದ್ಧಿಯುಳ್ಳ ಯಲ್ಲಣ್ಣ ನಿನಗ ಒಪ್ಪತತಿ ಮುಂಡಾಸೀಗ
ದವಡಾಸಿ ದಂಡು ಬಂತೋ ಬಾಳೇಕುಂದದ ಕೊಳ್ಳಕ್ಕಾಗ
ಬಿಚ್ಚಗತ್ತಿ ಚನಬಸ್ಯಾ ತಮ್ಮಾ ಮುಂದಕ ಬಾರೋ ಬಹಾದ್ದೂರಾ
ಮುಂಡಾಸಾದಾನ ಗುಂಡಗಡಗಿ ಕೊಟ್ಟಾನ ಚನಬಸಣ್ಣಗಾ
ಅವರಿಗಿಷ್ಟು ಮಾಡುದೆಲ್ಲಾ ಗಜವೀರ ನೋಡಿಕೊಂತಾನಾ
ಚಿಟ್ಟನ ಚೀರಿ ಗಜವೀರ ಮುಂಗೈ ಕಡಕೊಂತಾನಾಗ
ಇನ್ನ ಮೂರ ದಿವಸಕ ಜಗಳದ ಮಾರಿ ಬೇಕ ಯಣ್ಣಾ ನನಗ
ಬಾಳೇಕುಂದದ ಗುಡ್ಡಾಕಿತ್ತು ಇಡತೇನಿ ಯಣ್ಣಾ ಈಗ
ಇಷ್ಟ ಕೇಳಿ ರಾಯಣ್ಣಾ ತಾನು ಸಮಾಧಾನ ಹೇಳ್ಯಾನ ಗಜವೀರಗ
ನನ್ನ ರಕ್ತ ಮಾನ್ಯದ ಹೊಲಾ ಜೋಳಾ ಒಕ್ಕಲೆ ತಮ್ಮಾ ಈಗ
ಜೋಳಾ ಒಕ್ಕಿ ಹಗೇಕ ಹಾಕಿ ಹೋಗುನಂತಾನ ರಾಯಣ್ಣಾಗ
ಅಷ್ಟು ಹೊತ್ತಿಗೆ ಗಜವೀರಾ ಕೇಳುತ್ತಿದ್ದಾನು ರಾಯಣ್ಣಾಗ
ಯಾರ ಭರವಸಿ ಯಾರಿಗೆ ಆಣಿ ಮಾಡಬೇಕು ಕಕ್ಕೇರಿಯೊಳಗ
ಕಾಳಿ ಭೀಮಣ್ಣಾ ನೀನು ಕರ್ಣಿ ಹಿಡಿಯಲೇ ತಮ್ಮಾ ಈಗ
ಇದು ಮಾತು ಖರೆಐತಿ ನಡಿರಂತಾನು ರಾಯಣ್ಣಾಗ
ಒತ್ತರದಿಂದ ದಂಡು ಬಂತು ಕಕ್ಕೇರಿಯ ತುರಮಂದ್ಯಾಗ
ಬಿಷ್ಟೆವ್ವನ ಗುಡಿಮುಂದ ಸುಮ್ಮನೆ ನಿಂತಿತು ದಂಡೆಲ್ಲಾಗ
ಅಷ್ಟ ಹೊತ್ತಿಗೆ ದಂಡಿಗೆಲ್ಲಾ ಹೇಳುತಿದ್ದಾನು ಗಜವೀರಾಗ
ಯಾಕೋ ಯಾಕೋ ತಮ್ಮಗಳಿರಾ ಸುಮ್ಮನೆ ನಿಂತಿರುತಾನಾಗ
ಇಷ್ಟ ಕೇಳಿ ರಾಯಪ್ಪ ತಾನು ತಯಾರ ಮಾಡಕ್ಹತ್ಯಾನಾಗ
ಕರಿಯ ಕಂಬಳಿಯ ಮಡಚಿ ಗದ್ದಗಿ ಹಾಕತಿದ್ದಾ ರಾಯಣ್ಣಾಗ
ನಡಕಟ್ಟಿ ರಾಯನ ದಂಡ ತಯ್ಯಾರಾದೀತು ಗುಡಿಯೊಳಗ
ಕತ್ತಿ ಮುಟ್ಟಿ ರಾಯಣ್ಣನ ದಂಡು ಆಣಿ ಮಾಡಾಕ ಹತ್ತಿತಾಗ
ನಿನ್ನ ಮ್ಯಾಲ ಎಳ್ಳಷ್ಟು ಎರಡಿಲ್ಲೊ ಗಜವೀರಾ ನಾನೀಗ

||ಇಳುವು||

ಹಿಂಗ ಕತ್ತಿ ಮುಟ್ಟಿ ಆಣಿ ಮಾಡಿತು ದಂಡೆಲ್ಲಾಗ
ಹಿಂದಿನಿಂದ ಗಜವೀರ ತಾನು ಆಣಿ ಮಾಡುತ್ತಿದ್ದನಾಗ
ಇದರಾಗ ಫಿತೂರಿ ಮಾಡಿದವನ ಗುದ್ದಿ ಕೊಲ್ತೇನಿ ನೆತ್ತಿಮ್ಯಾಗ
ಇದರಂತೆ ಕತ್ತಿ ಮುಟ್ಟಿ ಆಣೆ ಮಾಡಲಾದ ಗಜವೇರಾಗ
ಅವರ ಸಂದ ಉಳದೀತ್ರೆಷ್ಟಾ ಕಕ್ಕೇರಿಯ ತುರಮಂದ್ಯಾಗ
ದಾತರಿಲ್ಲದಂತಾ ಜಗಳಾ ಯಾತಕಪ್ಪಾ ರಾಯಾ ನಿನಗ
|| ಬೆಳಗಾಂವಿ ಜಿಲ್ಹಾ ಪೈಕಿ …. ೭ನೆಯ ಚೌಕ ||

ಅಷ್ಟೆಮಾಡಿ ರಾಯಣ್ಣ ತಾನು ದಂಡು ಕರಕೊಂಡ ಬಂದಾನಾಗ
ತೀವ್ರದಿಂದ ಬಂದೀತ ದಂಡು ಬಾಳೇಕುಂದದ ಕೊಳದಾಗ
ಬಾಳೇಕುಂದದ ಕೊಳ್ಳಕ ಬಂದು ಹೇಳತಿದ್ದಾನ ರಾಯಣ್ಣಾಗ
ನನ್ನ ಬುದ್ಧಿಯುಳ್ಳ ಯಲ್ಲಣ್ಣ ಹುಷಾರಿರಪ್ಪಾ ದಂಡಿನೊಳಗ
ಮಂಗಳವಾರ ಮಧ್ಯಾಹ್ನಕ್ಕೆ ದಂಡ ಕರಕೊಂಡ ಬಾರೋ
ಅಷ್ಟು ದಂಡಿಗೆ ಕಣ್ಣ ಹಬ್ಬ ಮಾಡಸ್ತೇನಿ ಅಂತಾನೋ
ದಂಡಿಗೆ ಕೈ ಮುಗಿದ ಹಿಂದಕ ರಾಯಣ್ಣ ತಿರಗಿದ್ದನಾಗ
ದವಡಾಸಿ ಬಂದಾನು ಬಂಟಾ ಸಂಗವಳ್ಳಿ ಸ್ಥಳದಾಗ
ತಾನು ಕೂಡ್ರುವ ಕಟ್ಟಿ ನೋಡಿ ಕಣ್ಣತುಂಬ ನೀರತಂದಾನೊ
ತಳವಾರ ಫಕೀರ ತಮ್ಮಾ ತೀವ್ರದಿಂದ ಬಾರೋ
ಬಾಳ್ಯಾನ ಮೂವತ್ತೈದ ರೂಪಾಯಿ ಕೊಡತೇನಿ ಚಾವಡಿಯೊಳಗ
ಕುಲಕರ್ಣಿ ಬಾಳ್ಯಾನ ಕರಕೊಂಡ ಬಾರೋ ಚಾವಡಿಯೊಳಗ
ಇಷ್ಟೆ ಕೇಳಿ ಫಕೀರ ತಾನು ಊರ ಒಳಗ ಹೊಕ್ಕನಾಗ
ಅಪ್ಪಪ್ಪ ಬಾಳಪ್ಪನವರ ಅದಿರೇನ್ರೆಪ್ಪಾ ಮನಿಯಾಗ
ಬಾರೋ ಫಕೀರಾ ಯಾಕ ಕರಿಯಾಕ ಬಂದ್ಯೊ ನನಗ
ಫಕೀರ ಕೇಳಿ ತಾನು ಹೇಳತ್ತಿದ್ದಾನು ಬಾಳಣ್ಣಗಾಗ
ಕಿತ್ತೂರ ಮಲ್ಲಸರ್ಜನ ಹುಲಿಯ ಕುಂತೈತಿ ಚಾವಡಿಯೊಳಗ
ನಿಮ್ಮನ್ನ ಕಂಡಗಳಿಗೆ ಮುರಕೊಂಡ ತಿಂತೈತೀಗ
ನಿಮ್ಮ ಮೂವತ್ತೈದ ರೂಪಾಯಿ ಇಟಕೊಂಡು ಕುಂತಾನೀಗ
ಇದನ್ನು ಕೇಳಿ ಬಾಳಪ್ಪ ತಾ ಉಚ್ಚಿಹೋದಾ ಧೋತರದಾಗ
ಸುಳ್ಳ ಮನಿಯಾಗ ಇಲ್ಲಂತ ಹೇಳೋ ಹೋಗೋ ನೀನೀಗ
ಫಕೀರ ತಾನು ಒತ್ತರದಿಂದ ಓಡಿ ಬಂದಾನ ಚಾವಡೀಗಿ
ಅಂಜಿ ಹೇಳಲ್ಯೋ ಅಳುಕಿ ಹೇಳಲ್ಯೋ ಯಣ್ಯಾ ನಿನಗ
ಅಂಜ ಬ್ಯಾಡಲೇ ತಮ್ಮಾ ನೆಟ್ಟಗ ಹೇಳು ಅಂತಾನಾಗ
ಅಂಜಿ ನಡುಗಿ ಫಕೀರಾ ಖರೇ ಮಾತ ಹೇಳತಿದ್ದಾನಾಗ
ಮನಿಯಾಗ ಅದಾನು ಬಾಳ್ಯಾ ಇಲ್ಲಂತೆ ಹೇಳಂದಾನು ನನಗ
ಇಷ್ಟ ಕೇಳಿ ರಾಯಣ್ಣ ಸುಮ್ಮನಾದನು ಚಾವಡಿಯೊಳಗ
ಬಿರಿಬಿರಿ ಬಂದಾನು ಬಂಟಾ ತನ್ನ ಅರಮನಿಗಿ ಆಗ
ಮಗನ ಮಾರಿ ಕಾಣದ ತಾಯಿ ಆರ ತಿಂಗಳಾತ್ತಾಗ
ಯವ್ವಾ ಕೆಂಚವ್ವ ತಾಯಿ ಕದಾತಗಿಯವ್ವಾ ರಾಯಣ್ಣಗ
ಮಗನ ದನಿಯ ಕೇಳಿ ಕೆಂಚವ್ವ ಕದಾತಗದಾಳಾಗ
ಅವಸರದಿಂದ ಚಕಮಕಿ ಕಡಿದು ದೀಪಾ ಹಚ್ಚೆಳ್ರೆಪ್ಪಾ ಆಗ

||ಇಳುವು||

ಯಾಕೋ ರಾಯಣ್ಣ ಇಷ್ಟ ದಿನಾ ತಡಾ ಯಾಕೋ ನಿನಗ
ಇಷ್ಟ ಕೇಳಿ ರಾಯಣ್ಣ ತಾನು ಕಣ್ಣೀಗಿ ನೀರತಂದಾನಾಗ
ಸುಳ್ಳ ತಾಯಿಗಿ ಸಮಾಧಾನ ಹೇಳತಿದ್ದಾನು ರಾಯಣ್ಣಾಗ
ಹಸಿವು ಬಹಳ ಆಗಿತಿತಿ ಅಡಗಿ ಮಾಡ ಅಂತಾನಾಗ
ಇಷ್ಟ ಹೊತ್ತಿಗಿ ವೈರಿ ಬಾಳ್ಯಾ ಪಿತೂರಿ ನಡಿಸ್ಯಾನ ಸಂಗೋಳ್ಯಾಗ
ಅವರ ಸಂದ ಉಳದೀತ್ರೆಪ್ಪಾ ಸಂಗೊಳ್ಳಿಯ ಸ್ಥಳದಾಗ
ದಾತರಿಲ್ಲದಂತಾ ಜಗಳಾ ಯಾತಕಪ್ಪಾ ರಾಯಾ ನಿನಗ
|| ಬೆಳಗಾಂವ ಜಿಲ್ಹಾ ಪೈಕಿ ….. ೮ನೆಯ ಚೌಕ ||

ತಳವಾರ ಫಕೀರ ಲಗುಮಾಡಿ ಬಾರೋ ನೀನೀಗ
ತುಡಗ ರಾಯಾ ಒಬ್ಬನೆ ಬಂದು ಸಿಕ್ಕಾನ ಸಂಗೋಳ್ಯಾಗ
ಸಂಪಗಾಂವಿಗೆ ಲಗುಮಾಡಿ ಹೋಗಿ ಬರಬೇಕೀಗ
ಹೇಳಿ ಬಾಳಣ್ಣ ತಾನು ಲಗುಮಾಡಿ ಲಕೋಟಿ ಕೊಟ್ಟಾನ ಕೈಯಾಗ
ಕಟ್ಟ ಒಡೆದು ಸುಭೇದಾರ ಕಾಗದ ನೋಡಿಕೊಂತಾನಾಗ
ಕಾಗದನೋಡಿ ಸುಭೇದಾರ ಮುಂಗೈ ಕಡಕೊಂತಾನಾಗ
ಏಳ ಮಂದಿ ಬಾರಿನ್ನವರ‍್ನ ಕೊಟ್ಟು ಕಳಿಸ್ಯಾನ ಸುಭೇದಾರಾಗ
ತೀವ್ರದಿಂದ ಕುಲಕರ್ಣಿ ಮನೆಗೆ ಬಂದಾರವರಾ
ಹಲವು ತರದ ಅಡಗಿ ಮಾಡಿ ಉಣಿಸ್ಯಾನ ಅವರೀಗೆ
ಸಂಜಿ ತಾಸೊತ್ತ ಇತ್ತಂತ ಊರಾಗ ತಿರುಗ್ಯಾಡತಿದ್ದರಾಗ
ಊರಾನ ಗಂಡ ಹೆಣ್ಣ ಜನಾ ಮಾತಾಡತ್ತಿದ್ದರಾಗ
ರಾಯಪ್ಪಣ್ಣನ ಹೊಡಿಯಲಾಕ ಬಂದಾರು ಈ ಜನಾ
ಏಳ ಮಂದಿ ಬಾರಿನವರು ಕೊಡಿ ಕೇಳತ್ತಿದ್ದರ ಜನರನ್ನಾ
ಆ ತುಡುಗ ರಾಯಾನ ಹೊಲದ ದಾರಿ ತೋರಿಸರಿ ನಮಗಾ
ದ್ಯಾವಲಾರ್ಪದ ಮಾರ್ಗದೊಳು ಕಳ್ಳಿ ಬೆಳೆದೈತಿ ನೋಡಾ
ಇದ ಈಗ ಸಂಜಿ ಕಡೆ ಹೊಲಕ ಬರತಾನಂತಾರಾಗ
ಇಷ್ಟೆಕೇಳಿ ಏಳು ಮಂದಿ ದವಡಾಸಿ ಬಂದಿದ್ದರಾಗ
ತೀವ್ರದಿಂದಲಿ ಬಂದಾರವರು ದ್ಯಾವಲಾರ್ಪದ ಮಾರ್ಗದಾಗ
ನಡಕಳ್ಳಿಗೆ ಬಂದು ಅವರು ಸುಮ್ಮನೆ ಕುಂತಾರಾಗ
ಅಷ್ಟೊತ್ತಿಗೆ ಕೆಂಚವ್ವ ತಾಯಿ ಅಡಗಿ ತೈಯಾರ ಮಾಡ್ಯಾಳಾಗ
ಅಡಗಿ ಆಗೇತಿ ರಾಯಣ್ಣ ಊಟ ಮಾಡಬಾ ಅಂತಾಳಾಗ
ಅಣ್ಣ ಸಿದ್ದಪ್ಪ ಬಂದರ ಊಟ ಮಾಡತೇನಿ ಹಡದವ್ವಾ
ಕೇಳಿ ಕೆಂಚವ್ವ ತಾನು ಹೇಳತಿದ್ದಾಳು ರಾಯಣ್ಣಗಾ
ಅಣ್ಣ ಸಿದ್ದಪ್ಪ ಅದಾನು ರಕ್ತಮಾನ್ಯದ ಹೊಲದಾಗ
ಬುಟ್ಟಿತುಂಬ ಹಡದವ್ವ ಹೊಲಕ ಹೋಗತೇನಂತಾನಾಗ
ಅವಸರದಿಂದ ಕೆಂಚವ್ವ ಬುಟ್ಟಿ ತುಂಬಿ ಕೊಟ್ಟಾಳಾಗ
ಸಂಜಿ ಗಳಿಗಿ ಹೊತ್ತಿರತ ಹೊಲದ ದಾರಿ ಹಿಡಿದನಾಗ
ತುರ್ತದಿಂದ ಬಂದಾನ ಬಂಟಾ ದ್ಯಾವಲಾರ್ಪದ ಮಾರ್ಗದಾಗ
ಅಲ್ಲಿ ಪಾಂಡವರ ದೇವರನ್ನ ನೋಡಿದಾನಾಗ
ಬುಟ್ಟಿ ಇಳಸಿ ರಾಯಣ್ಣ ಬೇಡಿಕೊಳ್ಹಾಕತ್ಯಾನಾಗ
ನಿಮ್ಮ ವರವ ನನ್ನ ಮೇಲೆ ಆಗಬೇಕಂತಾನಾಗ
ನಮ್ಮ ರೋಗಪ್ಪನವರ ದಯಾ ಇರಬೇಕ ನನ್ನಮ್ಯಾಗ
ಅದರಂತೆ ರಾಯಾ ಬೇಡಿಕೊಂತಾನ ಪಾಂಡವರಿಗಾಗ
ದ್ಯಾವಲಾರ್ಪದ ಮಾರ್ಗ ಬಿಟ್ಟು ಅಡ್ಡಮಾರ್ಗ ಹಿಡಿದನಾಗ
ತುರ್ತದಿಂದ ಬಂದಾನ ರಾಯಣ್ಣ ರಕ್ತಮಾನ್ಯದ ಹೊಲದಾಗ
ರಕ್ತಮಾನ್ಯದ ಹೊಲಕ ಬಂದು ಬುಟ್ಟಿ ಇಳಿಸ್ಯಾನ ಗುಡಸಲದಾಗ
ಅಣ್ಣ ಸಿದ್ದಪ್ಪನ ಕರಕೊಂಡ ಊಟ ಮಾಡತಾನ ಕಣದಾಗ
ಊಟ ಮಾಡಿ ರಾಯಣ್ಣ ತಾನು ಹೇಳತಿದ್ದಾನ ಸಿದ್ದಣ್ಣಗಾಗ
ದಂಡ ಬಹಳ ಕೂಡೇತಿ ಬಾಳೇಕುಂದದ ಕೊಳದಾಗ
ಸಣ್ಣ ದೊಡ್ಡ ಮಂದಿನೆಲ್ಲಾ ಹಚ್ಚಪ್ಪಾ ಯಣ್ಣ ಕೆಲಸಕ್ಕಾ
ಮಂದಿ ಹಚ್ಚಿ ತೆನೆ ಮುರಸಿ ಮಾಡಸಪ್ಪಾ ರಾಸಿನಾ
ಹೆಣ್ಣ ಮಕ್ಕಳ ಬಂದರ ಮರೆಯದ ಕೊಡು ಜೋಡ ಕೂಲಿನಾ
ಬೇಕಾದಷ್ಟ ಗೋದಿ ಬ್ಯಾಳಿ ತಂದಾ ಮಾಡಪ್ಪ ಕಣಾ ಹಬ್ಬಾನಾ

||ಇಳುವು||

ಚಿಟ್ಟಾನಿಯಂತಹ ಗಜವೀರ ಇರತಾನ ದಂಡಿನ್ಯಾಗ
ಅಂವಗ ತಿನ್ನಾಕ ಕೋಡೋ ಬುಂದೇ ಬಾಸುರಿನಾ
ಬಿಚ್ಚಗತ್ತಿ ಚನಬಸವಣ್ಣನ ಫಳಾರ ಮರತಿಯೋ
ಅವಾಗ ಫಗರ ತಂದ ಕೊಡೋ ಬೇಡಿದ ಉತ್ತತ್ತಿನಾ
ಅವರ ಸಂದ ಉಳದೀತ್ರೆಪ್ಪಾ ರಕ್ತಮಾನ್ಯದ ಹೊಲದಾಗ
ದಾತರಿಲ್ಲದಂತಾ ಜಗಳಾ ಯಾತಕಪ್ಪಾ ರಾಯಾ ನಿನಗ
|| ಬೆಳಗಾಂವ ಜಿಲ್ಹಾ ಪೈಕಿ …. ೯ನೆಯ ಚೌಕ ||

ಅಷ್ಟ ಹೇಳಿ ರಾಯಣ್ಣ ತಾನು ಹಿಂಣದಕ್ಕ ತಿರುಗಿದ್ದಾನಾಗ
ತುರ್ತದಿಂದ ಬಂದಾನು ಬಂಟಾ ಹುಲಗಲಿ ಹಳ್ಳದ ದಾರಿಯೊಳಗ
ಹವಣಿ ಕೊಡಾ ತಕ್ಕೊಂಡು ಸಿದ್ದಪ್ಪಾ ಒರತಿ ನೀರಿಗೆ ಬಂದಾನಾಗ
ಒರತಿಯೊಳಗ ಕೊಡಾ ಇಟ್ಟ ಅಡರಾಸಿ ಓಡಿ ಬಂದಾನಾಗ
ಓಡಿ ಬಂದು ತಮ್ಮನ ಮುಂದು ಹೇಳತ್ತಿದ್ದಾನ ಸಿದ್ದಣ್ಣಾಗ
ಯಾರೋ ಏಳಮಂದಿ ಜನರು ಕಳ್ಯಾಗ ಕುಂತಾರೀಗ
ಇಷ್ಟ ಕೇಳಿ ರಾಯಣ್ಣ ಸಿಟ್ಟ ಭಾಳ ಆದಾನೋ ತಾನಾ
ಯಾರ ಯಾಕ ಆಗ ಬಲ್ಲರು ಕಣಕ ಹೋಗಪ್ಪಾ ನೀನಾ
ಅಣ್ಣಗ ಹೇಳಿ ರಾಯಣ್ಣ ಹಿಂದಕ ತಿರಗಿದನು ತಾನಾ
ತೀವ್ರದಿಂದ ಬಂದಾನು ಬಂಟಾ ಸಂಗವಳ್ಳಿ ಸುಡಗಾಡಕ್ಕಾ
ಹರಕ ಕೋರಿ ತಕ್ಕೊಂಡು ತೆಲಿಮ್ಯಾಲ ಸುತಕೊಂಡನಾಗ
ಮುದುಕನ ವೇಷ ಹಾಕಿಕೊಂಡು ರಾಯಾ ಸಿಂಗಾರಾದಾನ ಸುಡಗಾಡದಾಗ
ಕಳ್ಳಿಯ ಸಮೀಪ ಬಂದು ರಾಯಾ ಬಾರಿ ನೆಳ್ಳತ್ತಿದ್ದನಾಗ
ಅವರ ಸನಿಯಾಕ ಬಂದು ಬಂಟಾ ಬಲಬಾರೆ ಕೆಮ್ಮುತ್ತಿದ್ದನಾಗ
ಆಹಾ ಅಂತ ಏಳಮಂದಿ ಸರಾಬರಾ ಕತ್ತಿ ಹಿರಿದಾರಾಗ
ಎಲಾ ಬ್ಯಾಡ ಸೂಳೇಮಗನ ಎಷ್ಟ ಹೆದರತಿಲೆ ನಮಗ
ಆ ತಂಡಗ ರಾಯಾ ಬಂದನಂತ ಕಡಿಯತಿದ್ವಿ ನಾವು ನಿನಗ
ಆ ತುಡಗ ರಾಯಾ ಬರುವ ಸುದ್ದಿ ತಿಳಸ್ತಿ ಏನೋ ನಮಗ
ರೋಖ ಐದನೂರು ರೂಪಾಯಿ ಕೊಡತೀವ ನಿನಗ ಈಗ
ಇಷ್ಟ ಕೇಳಿ ರಾಯಪ್ಪ ತಾನು ಹೇಳುತಿದ್ದಾನ ರಾಜೇಸಾಹೇಬಗ
ಆ ತುಡಗ ರಾಯಾ ಇರುವುದು ನನಗೇನ ಗೊತ್ತಪ್ಪ ಈಗ
ನನಗ ತೆಲಿಬಾಗೇತಿ ಬತ್ತಿ ಕೊಡರೆಂತಾನಾಗ
ಏಳಮಂದಿ ಸೇದಿ ಕರಬತ್ತಿ ಕೈಯಾಗ ಕೊಟ್ಟರಾಗ
ಸುಳ್ಳ ಸೇದಿದಂಗ ಮಾಡಿ ಇಟ್ಟ ಬಿಟ್ಟಾನೋ ಕಲ್ಲಿನ ಮ್ಯಾಗ
ಕಲ್ಲಿನ ಮ್ಯಾಲೆ ಗುರ್ತಾಮಾಡಿ ಇಟ್ಟ ಮೇಲಕ್ಕೆದ್ದಾನಾಗ
ರಾಜೇಸಾಹೇಬ ಬಂದ ಮತ್ತು ಕೇಳತಾನ ರಾಯಣ್ಣಗ
ಆ ತುಡಗ ರಾಯಾ ಸಿಕ್ಕರ ಈಗ ಕಡಿತೀವಿ ಗೆಬ್ಬಿಯಮ್ಯಾಗ
ಇಷ್ಟ ಕೇಳಿ ರಾಯಪ್ಪ ತಾನು ಮತ್ತ ಕೇಳತಿದ್ದಾನಾಗ
ಯಾಕ ಆಗವಲ್ಲದರೆಪ್ಪ ತಿರುಗಿ ಬಂದ ಹೇಳತೀನಿ ನಿಮಗ
ಕೆಮ್ಮಿಕೊಂತ ನೆಳ್ಳಿಕೊಂತ ಮುಂದಕ ಬಂದಾನಾಗ
ಒಂದ ಬಾಂದಿನ ಸರಿಗೈ ಬಂದು ಹಿಂದಕ ತಿರಿಗಿದ್ದನಾಗ
ತೆಲಿಮ್ಯಾಲಿನ ಕೋರಿ ತೆಗೆದು ಚೆಲ್ಲಿ ಬಿಟ್ಟಾನು ರಾಯಣ್ಣಾಗ
ಹೊಳಿಯ ಒಡಲೊದೊಳಗ ರಾಯಾ ಜಳಕಾ ಮಾಡಾಕತ್ಯಾನಾಗ
ಗುಡಗಿ ಚೆಣ್ಣ ತೊಟ್ಟು ಮ್ಯಾಲೆ ಹಿಡಿಗಾವಿ ಧರಸಿದನಾಗ
ಹಡ್ಡದ ಮಟಾ ಶಮನಾ ಬಿಟ್ಟು ಒತ್ತಿ ಸುತ್ಯಾನ ಮುಂಡಾಸಾಗ
ಕತ್ತಿ ಢಾಲು ಕೈಯಾಗ ಹಿಡಿದು ತೈಯಾರಾಗತಾನು ಹೊಳಿಯಾಗ
ಕಳ್ಳಿ ಸನಿಯಾಕ ಬಂದು ರಾಯಾ ಬಲುಬಾರಾ ಜಿಗದಿದ್ದನಾಗ
ಮುಂಬರುವ ಬಂಟಾ ಯಾಂವ ಅದಿರಿ ಬರ್ರಿ ಅಂತಾನಾಗ
ಇಷ್ಟ ಕೇಳಿ ಏಳು ಮಂದಿ ಮೇಲಕೆದ್ದಾರು ಆಗಿಂದಾಗ
ಮೇಲಕ್ಕೇಳುದರೊಳಗ ಆರ ಮಂದಿನ ಕಡದಾನಾಗ
ಯಾಕೋ ರಾಜೇಸಾಹೇಬ ಬಲುಬಾರೆ ಬೈತಿದ್ದಿ ನನಗ
ಇಷ್ಟ ಕೇಳಿ ರಾಜೇಸಾಹೇಬ ಹೇಳಿಕೊಂತಾನು ರಾಯಣ್ಣಗಾಗ
ದೇವರಾಣಿ ದೊಡ್ಡಪ್ಪಗ ನಿನಗ ಭೇದ ಇಲ್ಲಂತಾಗನಾಗ
ಕೇಳಿ ರಾಯಣ್ಣ ತಾನು ಸಿಟ್ಟಬಾಳ ಆದಾನೊ ರಾಜಾಗ
ನಿನ್ನ ಹೆಣತಿ ಗಂಡಾ ನಾನು ಬತ್ತೀ ಇಟ್ಟೀನಿ ನೋಡೀಗ
ಬತ್ತಿ ನೋಡಿದ ಬಳಿಕ ಬಾಯಿ ಹೋತೋ ಸಾಂಬದಾಗ
ಇವಾರು ಹೆಣಾ ಹೊತ್ತಕೊಂಡ ಹೋಗಬೇಕ ನೀನೀಗ
ಇವಾರು ಹೆಣಾ ಹ್ಯಾಂಗ ನೆಗಿವ್ಯಾವ ಯಣ್ಣಾ ನನಗ

||ಇಳುವು||

ಅಂಜಿ ನಡುಗಿ ರಾಜೇಸಾಹೇಬ ಹೇತಕೊಂಡಾನ ಕಚ್ಯಾಗ
ವೈರಿ ಬಾಳ್ಯಾನ ಮನಿಗಿ ಹೋಗಿ ಸುದ್ದಿ ಹೇಳಲೇ ಈಗ
ಮಂಗಳವಾರ ಮಧ್ಯಾಹ್ನ ಬರತಿನ್ಹಂತ್ಹೇಳ ಬಾಳ್ಯಾಗ
ಸುದ್ದಿ ಹೇಳಾಕ ನಿನ್ನೊಬ್ಬನ ಜೀವಂತ ಬಿಡತೀನೀಗ
ಅವರ ಸಂದ ಉಳಿದೀತ್ರೆಪ ದ್ಯಾವಲಾರ್ಪದ ಮಾರ್ಗದಾಗ
ದಾತರಿಲ್ಲದಂತಹ ಜಗಳಾ ಯಾತಕಪ್ಪ ರಾಯ ನಿನಗ
|| ಬೆಳಗಾಂವ ಜಿಲ್ಹಾಪೈಕಿ …. ೧೦ನೆಯ ಚೌಕ ||

ಇಷ್ಟ ಹೇಳಿ ರಾಯಪ್ಪ ಹಿಂದಕ ತಿರುಗಿದನಾಗ
ಅಷ್ಟ ಹೊತ್ತಿಗೆ ಯಲ್ಲಣ್ಣ ದಂಡ ಕರಕೊಂಡ ಬಂದಾನಾಗ
ದಂಡಿನೆದುರಿಗಿ ಹೋಗಿ ರಾಯಾ ಕೈಮುಗಿದ ನಿಂತಾನಾಗ
ನಾವು ಬೈಲಿಗೆ ಬೀಳತೀವಿ ಕಾಲ ಸಪ್ಪಳ ಮಾಡಬ್ಯಾಡ್ರೀಗ
ಒತ್ತರದಿಂದ ಬಂದೀತು ದಂಡು ರಕ್ತಮಾನ್ಯದ ಹೊಲದಾಗ
ಗಟ್ಟಿಯುಳ್ಳ ಗಜವೀರಗ ಊಟಕ್ಕ ಕೊಟ್ಟಾ ರಾಯಣ್ಣಾಗ
ಇಂಬಾಗಿ ಮಡ್ಡಿಯ ಮ್ಯಾಲ ಕುಂತ ಊಟ ಮಾಡೀಗ
ಬಿಚ್ಚಗತ್ತಿ ಚವಬಸಣ್ಣ ಫರಾಳ ಮಾಡೋ ಗುಡಿಸಿಲದಾಗ
ಅಷ್ಟ ಹೊತ್ತಿಗೆ ಸಂಗೋಳ್ಯಾಗ ಫಿತೂರಿ ನಡಿಸ್ಯಾನೊ ಬಾಳ್ಯಾ
ಮ್ಯಾದಾರ ಪರಶ್ಯಾನ ಮಗನ ಹುರುಪು ಬಹಳಿತ್ತೊ ಊರಾಗ
ಕುಲಕರ್ಣಿ ಬಾಳ್ಯಾನ ಕಡೆ ವೀಳೆ ಹಿಡದಿದ್ದನಾಗ
ರಾಯಾನ ಚಂಡ ತರತೇನಂತ ವಚನ ಕೊಟ್ಟಾನ ಬಾಳ್ಯಾಗ
ರೋಖ ಐದನೂರ ರೂಪಾಯಿ ತಕ್ಕೊಂಡಾನೋ ಕೈಯೊಳಗ
ಕತ್ತಿ ಢಾಲು ಕೈಲಿ ಹಿಡಿದು ಸಿಂಗಾರಾಗತಾನ ಮನಿಯೊಳಗ
ಒತ್ತರದಿಂದ ಬಂದಾನ ಹಣಮಂತ ರಕ್ತಮಾನ್ಯದ ಕಣಕಾಗ
ಅಷ್ಟೋತ್ತಿಗೆ ರಾಯಾನ ದಂಡ ಊಟಕ ಕುಂತಿತ್ತ ಕಣದಾಗ
ಅಷ್ಟ ಮಂದಿಗೆ ನೀಡಿಕೊಂತ ಒಬ್ಬನೇ ಉಳಿದಾನ ರಾಯಣ್ಣಾಗ
ಕಣಕಿ ಇಕ್ಕಲ ಹತ್ತಿರ ರಾಯಾ ಸುಮ್ಮನೆ ಕುಂತಿದ್ದಾಗ
ತೊಗರಿ ಸಾಲಿನೊಳಗ ಡೊಗ್ಗಿ ಬರತಿದ್ದ ಹನಮಂತನಾಗ
ತೊಗರಿ ಸಾಲ ಅಗಳಾಡುದು ರಾಯಣ್ಣ ಕಣ್ಮುಟ್ಟ ನೋಡಿದನಾಗ
ಸನಿಯಾಕ ಬಂದಗಳಿಗ್ಗೆ ರಾಯಾ ಜುಟ್ಟಲ ಹಿಡಿದಾನ ಹಣಮ್ಯಂದಾಗ
ಜುಟ್ಟಲ ಹಿಡಿದ ಗಳಿಗ್ಗೆ ಹನಮಾ ಹೇಳತಿದ್ದಾನ ರಾಯಣ್ಣಗ
ಹಣಮಂತನ ಹರಕಿ ಕೊಡಲು ಹಿಡಿಯಬ್ಯಾಡೋ ಎಣ್ಣಾ ಈಗ
ನಿನ್ನ ಮಗನಾಗಿ ಇರತೀನಿ ಬಿಟ್ಟ ಬಿಡೋ ರಾಯಣ್ಣಾ ನನಗ
ಇವರು ಗದ್ದಲ ಮಾಡುವದೆಲ್ಲಾ ಗಜವೀರಾ ಕೇಳ್ಯಾನ್ರೀಗ
ಗಟ್ಟಿ ಹಿಡದಿರೋ ರಾಯಣ್ಣ ಗುದ್ದಿ ಕೊಲ್ತೀನಿ ನೆತ್ತಿಮ್ಯಾಗ
ಕೆಟ್ಟ ಹಬಸ್ಯಾನ ದನಿ ಕೇಳಿ ಹೇತಕೊಂಡಾನೋ ಹಣಮಂತಾಗ
ಗಜವೀರ ಬಂದರ ಇವನು ದುಲ್ಲಂತಾನು ರಾಯಣ್ಣಗಾಗ
ಕತ್ತಿ ಢಾಲು ಕಸಕೊಂಡು ಒದ್ದ ಬಿಟ್ಟಾನು ಮುಕಳಿ ಮ್ಯಾಗ
ಓಡಿ ಹೋಗಿ ಬಾಳ್ಯಾನ ಮುಂದ ಹೇಳತಿದ್ದಾನು ಹನುಮಂತಾಗ
ನಮ್ಮ ತಾಯಿ ಹೊಟ್ಟೆ ತನ್ನಗಿತ್ತು ತಿರುಗಿ ಬಂದಾಂಗೋ ನಾನಾ
ನೀನು ರೂಪಾಯಿ ಕೇಳಿದರ ಕೊಡತೇನಿ ತಿರುಗಿ ಈಗ
ಅಷ್ಟೊತ್ತಿಗೆ ರಾಯಣ್ಣನ ದಂಡು ಊಟ ಮಾಡಿತ ಕಣದಾಗ
ಅಮಟೂರ ಬಾಳಪ್ಪಗ ಹೇಳಿ ಕಳಿಸ್ಯಾನು ರಾಯಣ್ಣಾಗ
ಹತ್ತು ಹದಿನಾರ ಎತ್ತಿನ ಹಳೀಬಂಡಿ ಬರಲೆಂತಾನಾಗ
ಇದರಂತೆ ಭೀಮಣ್ಣ ಕರ್ಣಿ ಹಿಡದಾನ ಕಣದಾಗ
ಕರ್ಣಿ ಸಪ್ಪಳ ಕೇಳಿ ಬಂಡಿ ಕೊಳ್ಳಾ ಕಟ್ಯಾರಾಗ
ರಕ್ತಮಾನ್ಯದ ಹೊಲಕ ಬಂದು ಕೊಳ್ಳ ಕಟ್ಯಾರು ಬಂಡೀನಾಗ
ರಕ್ತಮಾನ್ಯದ ಕಣಕ ಬಂದು ಕೊಳ್ಳ ಹರಿದಾನು ಬಂಡಿನಾಗ
ಮುತ್ತಿಕೊಂಡು ದಂಡೆಲ್ಲಾ ಜೋಳಾ ಹೇರಿತು ಬಂಡ್ಯಾಗ
ಒತ್ತರದಿಂದ ಬಂಡೀ ಹೊಡೆದಾರು ಅಮಟೂರ ಬಾಳಪ್ಪನಲ್ಲೀಗಿ
ಗಂಗಿ-ಗೌರಿ ಅನ್ನುವ ಹಗೇದ ಬಾಯಿ ತೆಗದ ಬಿಟ್ಟಾರಲ್ಲಿ
ಮುತ್ತಿಕೊಂಡು ಹಗೆಗಳ ತುಂಬಿ ಬಿಟ್ಟಾರ ತಂದು ತಂದಲ್ಲಿಗಿ
ಜೋಳಾ ತುಂಬಿ ರಾಯಣ್ಣ ತಾನು ಹೇಳತಿದ್ದಾನ ಬಾಳಣ್ಣಗ
ನನ್ನ ಹಡದ ತಾಯಿ ಕೆಂಚವ್ವಗ ಬಹಳ ಜೋಕೆಪ್ಪ ಬಾಳಣ್ಣಾ
ನನ್ನ ತಂದಿ ಭರಮಣ್ಣನ ಶೂರತನಕ್ಕ ಅಂಜಿಕಿಲ್ಲೊ ನನಗಾ

||ಇಳುವು||

ನಾನು ತಿರುಗಿ ಬರುವುದು ಭರವಸಿ ಇಲ್ಲೋ ನನಗ
ಇಷ್ಟ ಅಂದು ರಾಯಣ್ಣ ಸಂತೋಷದಿಂದ ನೀರ ತಂದನಾಗ
ಇಂಗ್ರೇಜರನ್ನ ಹೊರಗ ಹಾಕಿದಾಗ ಸಮಾಧಾನ ನನಗ
ಮಗನಪ್ಪಿ ಕೆಂಚವ್ವ ದುಃಖ ಮಾಡತಾಳ್ರಿ ಧರಣಿ ಮ್ಯಾಗ
ತಾಯಿಗೆ ಸನಮಂತ ಹೇಳ್ಯಾನ ರಾಯಣ್ಣ ಧರಣಿಯ ಮುಟ್ಯಾಗ
ಅಷ್ಟು ಅಂದು ರಾಯಪ್ಪ ತಾನು ಪಾದಕ ಬಿದ್ದಾನಾಗ
ಅವರ ಸಂದು ಉಳದೀತ್ರಪ್ಪಾ ಅಮಟೂರ ತುರಮಂದಿಯೊಳಗ
ದಾತರಿಲ್ಲದಂತಹ ಜಗಳ ಯಾತಕಪ್ಪ ರಾಯಾ ನಿನಗ
|| ಬೆಳಗಾಂವ ಜಿಲ್ಹಾ ಪೈಕಿ …. ೧೧ನೆಯ ಚೌಕ ||

ತಾಯಿ ಪಾದಕ್ಕ ಬಿದ್ದು ರಾಯಾ ದಂಡ ಕರಕೊಂಡು ಹೊಂಟನಾಗ
ಒತ್ತರದಿಂದ ಬಂದೀತು ದಂಡು ಬಾಳೇಕುಂದದ ಕೊಳದಾಗ
ಬಾಳೇಕುಂದದ ಕೊಳ್ಳಕ ಬಂದು ಕೇಳತಿದ್ದಾನು ಗಜವೀರ
ವೈರಿ ಬಾಳ್ಯಾನ ಹೊಲಾ ತೋರಿಸಬೇಕೋ ಯಣ್ಣಾ ಈಗ
ಇಷ್ಟ ಕೇಳಿ ರಾಯಣ್ಣ ತಾನು ಕುಲಕುಲು ನಕ್ಕನಾಗ
ಮೊಗಲಾವಿ ಸೀಮಿ ಹುಡುಗರಿಗೆ ಕೈ ಪಂಜು ಹಚ್ಚಿರಂತಾನಾಗ
ನಡಕಟ್ಟಿ ರಾಯಣ್ಣನ ದಂಡು ತಯ್ಯಾರಾದೀತು ಕೊಳ್ಳದಾಗ
ಕಾಳಿ ಭೀಮಣ್ಣ ನೀನು ಕರ್ಣಿ ಹಿಡಿಯಲೇ ತಮ್ಮಾ ಈಗ
ತೀವ್ರದಿಂದ ಬಂದೀತ ದಂಡು ವೈರಿ ಬಾಳ್ಯಾನ ಹೊಲಕಾಗ
ವೈರಿ ಬಾಳ್ಯಾನ ಹೊಲಾ ಇವನೋಡ್ರಿ ತಮ್ಮಗಳೀರಾ ನೀವೀಗ
ಊರಾನ ಜನರನೆಲ್ಲಾ ಮಾತಾಡಿಸಿ ಬರೋಣ ತಮ್ಮಾ ಈಗ
ಬಿಚ್ಚಗತ್ತಿ ಚೆನ್ನನ ಹಿಂಬಾಲ ಕರಕೊಂತಾನಾಗ
ದವಡಾಸಿ ಬಂದಾನ ಬಂಟಾ ಸಂಗವಳ್ಳಿ ಬೇಲಿಯೊಳಗ
ಅಷ್ಟು ಹೊತ್ತಿಗೆ ರಾಯಣ್ಣನ ದಂಡು ತೈಯಾರಾದೀತ ಹೊಲದಾಗ
ಹತ್ತು ಹದನಾರಕ್ಕಡಿ ಗೂಡು ಬೆಂಕಿ ಹಚ್ಚಿ ಸುಡತಾರಾಗ
ಆ ಉರಿಯ ಬೆಳಕು ಊರಮ್ಯಾಲ ಬಿದ್ದೀತಾಗ
ಊರಾನ ಹೆಣ್ಣು-ಗಂಡು ಜನಾ ಮಾತಾಡಾಕ ಹತ್ತಿದ್ದಿತಾಗ
ಕುಲಕರ್ಣಿ ಬಾಳಪ್ಪನ ಹೊಲದ ಬೆಳಕ ನೋಡ್ರಿ ಈಗ
ಮತ್ತೆ ಮ್ಯಾದಾರ ಪರಸ್ಯಾನ ಮಗನ ಹುರುಪ ಎದ್ದೀತ ಊರಾಗ
ಕತ್ತಿ ಢಾಲು ಕೈಯಾಗ ಹಿಡದ ಜಿಗಿದಾಡತಿದ್ದಾನ ಓಣಿಯೊಳಗ
ತುಡಗ ರಾಯ ಸಿಕ್ಕರ ಹೊಡಿಯತಿದ್ದೇನು ಕೆನ್ನಿಯ ಮ್ಯಾಗ
ಇಷ್ಟ ಅನ್ನುದು ನಿಂತಕೊಂಡ ಕೇಳತಿದ್ದನು ರಾಯಣ್ಣಾಗ
ಬೇಲಿ ಸನಿಯಾಕ ಬರಬಿಟ್ಟು ಧೀನಂತ ಜಿಗದಿದ್ದನಾಗ
ಏನಬರಾ ಕಡದಲೇ ಪರಶ್ಯಾ ಅಂತ ಎದುರಿಗೆ ನಿಂತಾನಾಗ
ಕತ್ತಿ-ಢಾಲು ಒಕ್ಕೊಟ್ಟ ಪರಶ್ಯಾ ಓಡುತ್ತಿದ್ದಾನ ಓಣಿಯೊಳಗ
ಓಡಿಹೋಗುವ ಪರಶ್ಯಾನ ಕಂಡು ಕುಲಕುಲು ನಗುತ್ತಿದ್ದನಾಗ
ಅಷ್ಟೊತ್ತಿಗೆ ಯಲ್ಲಣ್ಣ ದಂಡ ಕರಕೊಂಡ ಬಂದಾನಾಗ
ದವಡಾಸಿ ಬಂದೀತೋ ದಂಡು ಸಂಗವಳ್ಳಿ ತುರಮಂದ್ಯಾಗ
ಡಗ್ಗಾಲಮಂಡಿ ಊರಿ ಗಜವೀರಾ ಚೀರಲಬ್ಬಿ ಹೊಡದಾನಾಗ
ಕೆಟ್ಟದ ಹಬಸ್ಯಾನ ದನಿಕೇಳಿ ಗಡಿಬಿಡಿ ನಡಿಶ್ಯಾನೋ ಬಾಳ್ಯಾ
ರಾಯಾನ ದಂಡ ಬಂತ ಅಂತ ಓಡಿಹೋಗತಾನ ಹಿತ್ತಲದಾಗ
ಕಿಟ್ಟದ ಕುಣಿಯಾಗ ಡೊಗ್ಗಿಕೊಂಡ ಚಿಪ್ಪಾಡಿ ಎಳಕೊಂಡಾನ ಮ್ಯಾಗ
ಗಜವೀರನ ದನಿಕೇಳಿ ಓಡಿಬಂದಾನು ರಾಯಣ್ಣಾಗ
ದಂಡಿನ ಎದುರಿಗೆ ಬಂದು ಕೈಯ ಮುಕ್ಕೊಂಡು ನಿಂತಾನಾಗ
ಈ ಊರೊಳಗ ಬಾಳ್ಯಾನ್ಹೊರ್ತು ವರ್ಮ ಇಲ್ಲ ತಮ್ಮಾ ನಮಗ
ದವಡಾಸಿ ಬಂದೀತ ದಂಡು ವೈರಿ ಬಾಳ್ಯಾನ ಮನೀಗೀಗ
ತಳವಾರ ಫಕೀರಪ್ಪ ಮಲಗಿದ್ನರೀ ಕಟ್ಟಿಮ್ಯಾಗ
ಚಾಡಕೋರ ಮಲಿಗ್ಯಾನು ನೋಡು ಕಟ್ಟಿಮ್ಯಾಗ
ಇಷ್ಟ ಕೇಳಿ ಚನಬಸ್ಯಾ ತಾನು ಧೀನಂತ ಜಿಗದಿದ್ದನಾಗ
ಕಾಲ ಮೆಟ್ಟಿ ಕಾಲ ಹಿಡಿದಿ ಸೀಳಿ ಒಗದಾನೋ ರಸ್ತೆದಾಗ
ಮಗಲಾಯಿ ಸೀಮಿ ದಂಡ ಎಕದಮ್ಮ ಮುಗಿಬಿದ್ದಾರಾಗ
ರಸ್ತೆದಾಗ ನಿಂತು ರಾಯಣ್ಣ ಹೇಳತಿದ್ದಾನ ಸೈನಿಕರಿಗಾಗ
ಹೆಣ್ಣು ಮಕ್ಕಳನ ಮುಟ್ಟಬ್ಯಾಡ್ರಿ ದೋಷ ತಟ್ಟಿತ ನಮಗ
ತೊಟ್ಟಿಲದಾಗಿನ ಗಂಡೆಂಬು ವಂಶ ಚಂಡ ಆಡೀರಿ ಈಗ
ಬಿಳಿ ಅರಿವಿ ಮೊದಲ ಬಿಡದ ಸುಲಗಿ ಮಾಡಿರಿ ಮನಿಯಾಗ
ಅಷ್ಟೊತ್ತಿಗೆ ಯಲ್ಲಣ್ಣ ಬಾಳ್ಯಾನ ಹುಡಕಾಕ ಹತ್ಯಾನಾಗ
ಮನಿಯಲ್ಲಾ ಹುಡುಕಿದನು ವೈರಿ ಬಾಳ್ಯಾ ಸಿಗಲಿಲ್ಲಾಗ
ಹೊರಗ ಬಂದು ರಾಯಣ್ಣ ಮುಂದ ಯಲ್ಲಣ್ಣ ಹೇಳತಿದ್ದನಾಗ
ವೈರಿ ಬಾಳ್ಯಾ ನನಗ ಮಾತ್ರ ಸಿಗವಲ್ಲನೋಯಣ್ಣ ಈಗ
ಹಿತ್ತಲದಾಗ ಸಂಶಯ ಬರತೈತಿ ನೋಡಿ ಬರತೇನಂತಾನಾಗ
ಹಿತ್ತಲದಾಗ ಬರತಾರಂತ ಅಡರಾಸಿ ಬಾಳ್ಯಾ ಎದ್ದಾನಾಗ
ಓಡಿಹೋಗಿ ಬಲಭೀಮನ ಬೆಣ್ಣ ಬಿದ್ದಾನೋ ಬಾಳ್ಯಾ ಆಗ
ಅಷ್ಟೊತ್ತಿಗೆ ಒಡ್ಡರ ಯಲ್ಲಣ್ಣ ಹುಡಕ ಹತ್ಯಾನ ಹಿತ್ತಲದೊಳಗ
ಹಿತ್ತಲದಾಗ ಸಿಗವಲ್ಲ ಬಾಳ್ಯಾ ಇದೇ ಈಗ ಹೋಗ್ಯಾನ ಹೊರಗ
ಹುಷಾರೀರೋ ಯಲ್ಲಣ್ಣ ಹುಡಕ ತೆಗೆಯತೀವ ನಾವೀಗ
ಗಜವೀರನ ಕರಕೊಂಡ ಹೊಂಟಾನ ರಾಯಾ ಹೊರಹೊರಗ
ದವಡಾಸಿ ಬಂದಾರ ಬಂಟರಾ ಬಲಭೀಮನ ಗುಡಿಯೊಳಗ
ಬಲಭೀಮನ ಗುಡಿಗಿ ಬಂದು ಬೇಡಿಕೊಂತಾನೋ ರಾಯಾಣ್ಣಾಗ
ವೈರಿ ಬಾಳ್ಯಾ ಸಿಕ್ಕರ ನಿನಗ ಬಂಗಾರ ಜಡಸ್ತೇನೋ ಈಗ

||ಇಳುವು||

ಹಿಂದುಗಡೆ ಗಜವೀರ ಬಂದು ಬೇಡಿಕೊಂತಾನಾಗ
ವೈರಿ ಬಾಳ್ಯಾ ಸಿಕ್ಕರ ಸುಟ್ಟು ತಿಂತೇನಿ ನಿನ್ನ ಗುಡಿಯಾಗ
ಗಜವೀರ ವೀರತನದಿಂದ ಕೂಗಿ ಬೇಡಿಕೊಂತಾನಾಗ
ಗರ್ಜನೆ ಮಾಡಿ ರಾಯಣ್ಣ ಮತ್ತು ಬೇಡಿಕೊಂತಾನ ಬಲಭೀಮಗ
ದೇಶಕ್ಕ ಘಾತಕ್ಕನಾದ ವೈರಿ ಕೊಡೋ ನಮಗೀಗ
ನೀ ದೇವರಾದರ ಎದ್ದು ಪ್ರಸನ್ನಾಗೋ ನಮಗೀಗ
ವೀರ ಮಕ್ಕಳ ನಾವು ಸೂರಿಯಿಂದ ಹೋರಾಡತೇವೀಗ
ಅವರ ಸಂದ ಉಳದೀತ್ರೆಪ್ಪಾ ಬಲಭೀಮನ ಗುಡಿಯೊಳಗ
ದಾತರಿಲ್ಲದಂತಹ ಜಗಳ ಯಾತಕಪ್ಪ ರಾಯಾ ನಿನಗ
|| ಬೆಳಗಾಂವ ಜಿಲ್ಹಾ ಪೈಕಿ ….. ೧೨ನೆಯ ಚೌಕ ||

ಅವರಿಬ್ಬರೂ ಮಾತನಾಡತಾ ತಮ್ಮ ದಂಡಿಗೆ ಬಂದಾರಾಗ
ಬಾಳ್ಯಾ ನನಗ ಸಿಗಲಿಲ್ಲ ಅಂತಾನ ಗಜವೀರ ಗರ್ಜಿಸಿದಾಗ
ದವಡಾಸಿ ಬಂದೀತ ದಂಡು ಬಾಳೇಕುಂದದ ಕೊಳ್ಳಕ್ಕಾಗ
ಬಾಳೆಕುಂದದ ಕೊಳ್ಳಕ ಬಂದ ಸುಮ್ಮನೆ ಮಲಗಿದ್ದ ಯಲ್ಲಪ್ಪಾಗ
ರಾಯಣ್ಣನ ಹಾವಳಿ ಕೇಳಿ ಇಂಗ್ರೇಜಾ ದಂಡು ತೈಯಾರ ಮಾಡ್ಯಾನಾಗ
ಹತ್ತನೂರ ಇಂಗ್ರೇಜಿ ದಂಡು ತೈಯಾರಾದೀತ ಕೊಳ್ಳದಾಗ
ಇಂಗ್ರೇಜಿ ದಂಡ ಬಂದದ್ದು ಗೊತ್ತಿದ್ದಿಲ್ಲೋ ರಾಯಣ್ಣಗಾಗ
ನನಗೊಂದು ಕೆಟ್ಟ ಕನಸಾ ಬಿದ್ದಿತಪ್ಪಾ ಯಣ್ಣಾ ಈಗ
ನನ್ನ ಕೆಟ್ಟ ಕನಸಿನ್ಯಾಗ ಇಂಗ್ರೇಜಾನ ದಂಡ ಬಂದೀತೀಗ
ನನ್ನ ಶೂರ ಯಲ್ಲಣ್ಣ ತಯಾರ ಮಾಡಿರ‍್ಯೋ ದಂಡನೀಗ
ಡಗಲಿ ಚಣ್ಣ ತೊಟ್ಟು ಶಸ್ತ್ರ ಹೆಗಲಮೇಲೆ ಹಾಕ್ಯಾನಾಗ
ಮೆಣಚ ಬಡಗಿ-ಬಂದೂಕಾ ಕೈಯಾಗ ಹಿಡದ ತೈಯಾರಾದನಾಗ
ದವಡಾಸಿ ಬಂದಾನು ಎಲ್ಲಾ ಇಂಗ್ರೇಜಿ ದಂಡಿನೊಳಗ
ನಡು ದಂಡಿನೊಳಗ ಹಾದು ಮುಂದಕ ಪಾರಾದನಾಗ
ದಂಡಿನ ಕಡೆ ಪಡೆ ನಿಂತು ಲೆಕ್ಕಾ ಮಾಡತಾನು ದಂಡೆಲ್ಲಾಗ
ಹತ್ತನೂರಾ ಇಂಗ್ರೇಜಿ ದಂಡು ಲೆಕ್ಕಾ ಮಡಿಕೊಂಡನಾಗ
ಲೆಕ್ಕಾಮಾಡಿ ಯಲ್ಲಣ್ಣ ಓಡಿ ಬಂದಾನ ಒಂದೇ ಉಸರಿನಾಗ
ಓಡಿಬಂದು ರಾಯಣ್ಣನ ಮುಂದ ಹೇಳಿದಾನ ಯಲ್ಲಣ್ಣಾ
ಇಂಗ್ರೇಜಿ ದಂಡು ಒಳ್ಳೆ ಭರಪೂರಾ ಕೂಡೆತಂತಾನಾಗ
ಅದಕ್ಕೊಂದು ಹಂಚಿಕಿ ನಾನು ಬ್ಯಾರೆ ಮಾಡತೀನಂತಾನಾಗ
ತೆಕ್ಕಿ ತುಂಬ ಕಾತಿ ಹಗ್ಗಾ ಕಾತಿ ಹಗ್ಗಾ ಬಗಲಾಗ ಹಿಡಕೊಂದಾ
ಇಂಗ್ರೇಜಿ ದಂಡಿನ ಮುಂದಿನ ಮಡ್ಡಿ ಹತ್ಯಾನ ಯಲ್ಲಣ್ಣಾ
ಮಳಾ ಮಳಾ ಕಾತಿ ಹರಿದು ಬೆಂಕಿ ಹಚ್ಚತಾನ ಕಾತಿಗಾಗ
ಕಂಟಿಗೊಂದು ಕಾತಿಕೊಳ್ಳಿ ಕಟ್ಟಗೊಂತ ಹೋಗತಿದ್ದನಾಗ
ಕಂಟಿಗೊಂದು ಕಾತಿಕೊಳ್ಳಿ ಕಟ್ಟಗೊಂತ ಹೋಗತಿದ್ದನಾಗ
ಕೊಳ್ಳಿ ಕಟ್ಟಿ ಯಲ್ಲಣ್ಣ ಓಡಿ ಬಂದಾನ ದಂಡಿನಾಗ
ಕೊಳ್ಳಿ ಬೆಳಕಾನೋಡಿ ಇಂಗ್ರೇಜಿ ದಂಡ ಮಾತನಾಡತಿದ್ದಿತಾಗ
ರಾಯನ ದಂಡ ಮಾತ್ರ ಅಡಗಿ ಹೋಗೇತಂತಾರಾಗ
ಇಷ್ಟಂದು ಎಕದಮ್ಮ ಕವಾಯತ ಮಾಡತಿದ್ದರಾಗ
ಕೊಳ್ಳಿ ಬೆಳಕಾ ನೋಡಿ ಇಂಗ್ರೇಜಿ ದಂಡು ಮದ್ದು ಸುಡಾಕ್ಹತ್ತಿತಾಗ
ಮುಂದೆ ಮದ್ದಿಗೆ ಇಂಗ್ರೇಜಿ ದಂಡು ಗುಂಡ ಹೊಡೆಯುತಿದ್ದಿತಾಗ
ಅಷ್ಟೊತ್ತಿಗೆ ರಾಯಣ್ಣನ ದಂಡು ಹಿಂದ ಬಂದ ನಿಂತಿತಾಗ
ಇಂಗ್ರೇಜಿ ಹತ್ತಿಲಿದ್ದ ಮದ್ದೆಲ್ಲ ತೀರಿ ಹೋತೋ ಕ್ಷಣದಾಗ
ಅಷ್ಟೊತ್ತಿಗೆ ಯಲ್ಲಣ್ಣ ಹೇಳುತಿದ್ದಾನೋ ದಂಡಿನೊಳಗ
ಯಾಕೋ ತಮ್ಮಗಳಿರಾ ಸುಮ್ಮನೆ ಯಾಕ ನಿಂತೀರೀಗ
ಬಂದೂಕ ಸೀಮಿ ದಂಡು ಏಕದಮ್ಮ ಮುಗಿಬಿದ್ದಾರಾಗ
ಹಸಿದಂಟು ಕಡದಂಗ ಕಡದ ಚೆಲ್ಲ್ಯಾರ ದಂಡೆಲ್ಲಾಗ
ಅಡರಾಸಿ ಗಜವೀರಾ ಬಂದ ಹೇಳತಿದ್ದಾನೋ ರಾಯಣ್ಣಗಾಗ
ಊಟಾ ಆಗಲಿಲ್ಲೋ ರಾಯಣ್ಣಾ ಈ ದಂಡು ಎಲ್ಲಾ ನನಗ
ಇಷ್ಟ ಕೇಳಿ ರಾಯಣ್ಣ ಕುಲುಕುಲು ನಗತಾನಾಗ
ದವಡಾಸಿ ಬಂದೀತ ದಂಡ ಬಾಳೇಕುಂದದ ಕೊಳದಾಗ
ಬಾಳೇಕುಂದದ ಕೊಳ್ಳೊಕ ಬಂದು ಕೇಳತಿದ್ದಾನ ಗಜವೀರಾ
ಸಂಪಗಾಂವಿ ಕಚೇರಿ ಒಂದಾ ಎದಿಮ್ಯಾಗ ಐತೋ ನನಗಾ
ರಾಯಣ್ಣ ಕೇಳಿ ತಾನು ನಕಲ ಮಾಡ್ಯಾನ ಗಜವೀರಗಾಗ
ಸಂಪಗಾಂವಿ ಕಚೇರಿ ಮುರಿಯುವುದಾಗುದೆಲ್ಲಾ ನಮಗ
ಸಂಪಗಾಂವಿ ಕಚೇರಿ ಬಹಳ ಬಂದು ಬಸ್ತ ಐತೀಗ
ಇಷ್ಟ ಕೇಳಿ ಗಜವೀರಾಗ ಹೊಂಚಹಾಕಿಕೊಂಡಾನ ಮನದಾಗ
ಬಿಡು ಬಿಡು ರಾಯಪ್ಪಣ್ಣಾ ಹೆದರಿಕೆ ಹೇಳಬ್ಯಾಡ ನನಗ

||ಇಳುವು||

ಸಂಪಗಾಂವಿ ಕಚೇರಿ ಮುರಿಯುವದಿಲ್ಲೇನೊ ನಾನಾ
ಸಂಪಗಾಂವಿ ಕಚೇರಿ ಮುರಯದಿದ್ದರೆ ಶೂರರೇನಾ
ನಾ ಮುರಿಯದಿದ್ದರೆ ನನಗ ಉಡಸರಿ ಶೀರಿಯನಾ
ವೀರ ಗಜವೀರ ಚೀರ‍್ಯಾನ ಕೇಸರಿಯಂಗ ರಣಧೀರನಾ
ದನಿಗೆ ದನಿ ಬರತೈತ್ಯೋ ಏರೇರಿ ಭೂಮಿ ಮ್ಯಾಗಾ
ತಾಯಿ ಬಲಾ ಇರಲ್ಯೋ ರಾಯಣ್ಣಾ ನಮ್ಮ ಮ್ಯಾಗಾ
ಅವರ ಸಂದ ಉಳಿದೀತ್ರೆಪ್ಪಾ ಬಾಳೇಕುಂದದ ಕೊಳ್ಳದಾಗ
ದಾತರಿಲ್ಲದಂತಹ ಜಗಳ ಯಾತಕಪ್ಪಾ ರಾಯಾ ನಿನಗ
|| ಬೆಳಗಾಂವಿ ಜಿಲ್ಹಾ ಪೈಕಿ ….. ೧೩ನೆಯ ಚೌಕ

ಇಷ್ಟ ಕೇಳಿ ರಾಯಣ್ಣ ದಂಡಿಗೆ ಯುಕ್ತಿಯಿಂದ ಹೇಳಿದಾಗ
ಮೊಗಲಾಯಿ ಸೈನಿಕರಿಗೆ ಕೈಪಂಜ ಹಚ್ಚಿರಂತಾನಾಗ
ನಡಿಕಟ್ಟಿ ರಾಯನ ದಂಡು ತೈಯಾರಾದೀತ ಕೊಳ್ಳದಾಗ
ಕಾಳಿ ಭೀಮಣ್ಣಾ ಕರ್ಣಿ ಹಿಡಿಯಲೇ ತಮ್ಮಾ ನೀನೀಗ
ನಡಕಟ್ಟಿ ದಂಡಿನ ಮುಂದ ಕರ್ಣಿ ಹಿಡಿದಾನ ಭೀಮ್ಯಾ ಆಗ
ದವಡಾಸಿ ಬಂದೀತು ದಂಡು ಸಂಪಗಾಂವಿ ತುರಮಂದ್ಯಾಗ
ಕಾಳಿ ಶಬ್ದಾ ಸಂಪಗಾಂವಿ ಸುಭೇದಾರಾ ಕೇಳತಿದ್ದನಾಗ
ರಾಯಾನ ದಂಡು ಬರಾಕತ್ತೇತಿ ಅಂತ ಸಂಪಗಾಂವಿ ಬಿಡಾಕತ್ಯಾನಾಗ
ತನ್ನ ಕುಟುಂಬ ಸಹಿತವಾಗಿ ಊರ ಬಿಡತಾನ ಸುಭೇದಾರಾಗ
ದವಡಾಸಿ ಬಂದೀತು ದಂಡು ಸಂಪಗಾಂವಿ ಊರೊಳಗ
ಡಗ್ಗಾಲಮಂಡಿ ಊರಿ ಗಜವೀರಾ ಚೀರಲಬ್ಬಿ ಹೊಡದಾನಾಗ
ವೀರ ಹಬಸ್ಯಾನ ದನಿ ಕೇಳಿ ದಡಬಡಿಕಿ ಹುಟ್ಟಿತವರಿಗಾಗ
ಹರಕ ಕೋರಿಯ ಸಿಂಬಿ ಮಾಡಿ ಪಾದಕ್ಕ ಕಟ್ಟಿದ್ದಾನಾಗ
ಸಿಂಹ ಗರ್ಜನಮಾಡಿ ಗಜವೀರಾ ಒದ್ದ ಮುರದಾನ ಕಟಂಜನಾಗ
ಮೂಗಲಾಯಿ ಸೂರರಾ ಎಕದಂ ಮುಗಿಬಿದ್ದಾರ ವಿಸ್ತಾರಾಗಿ
ಮಧ್ಯಾಹ್ನ ಆರು ತಾಸು ಹೊತ್ತಿಗೆ ಬೆಂಕಿ ಹಚ್ಯಾರ ಕಚೇರಿಗಿ
ಸಂಪಂಗಾವಿ ಕಚೇರಿನೆಲ್ಲಾ ಸುಟ್ಟ ಬೂದಿ ಮಾಡಿದರವರಾ
ಅಷ್ಟೊತ್ತಿಗಿ ರಾಯಣ್ಣ ತಾನು ಹುಡುಕುತ್ತಿದ್ದನ ಸುಭೇದಾರನಾ
ಸುಭೇದಾರ ಸಿಗದ ಕಾಲಕ್ಕ ಕತ್ತಿ ಹಿರದಾನ ದಡದಂದಾ
ಜನಾ ಹೋದ ಬಳಿಕ ಇದೊಂದು ಗುರುತು ಇರಲೆಂತಾನಾ
ಕೇಸರಿ ಗರ್ಜಿಸಿದಂಗ ಗರ್ಜಿಸಿ ಉಕ್ಕಿನ ಕಂಬಾ ಕಡಿದನಾ
ಉಕ್ಕಿನ ಕಂಬದಾಗ ರಾಯಣ್ಣನ ಕತ್ತಿ ನಟ್ಟ ಬಂದಿತಾಗ
ಸಂಪಂಗಾಂವಿ ಕಛೇರಿ ಹೊನ್ನ ಎಳದ ತಂದಾನೊ ತುರಮಂದ್ಯಾಗ
ಅಷ್ಟ ಹೊತ್ತಿಗೆ ಗಜವೀರಾ ಮತ ಕೇಳತಾನ ರಾಯಣ್ಣಾಗ
ಬೀಡಿ ಹಳ್ಳಿ ಕಚೇರಿ ಒಂದ ಎದಿಮ್ಯಾಲ ಐತೋಯಣ್ಣಾ ಈಗ
ಇಷ್ಟ ಕೇಳಿ ರಾಯಣ್ಣ ತಾನು ಮತ್ತ ಹೇಳತಾನು ಗಜವೀರಗಾಗ
ಬೀಡಿ ಹಳ್ಳಿ ಕಚೇರಿ ಬಹಳ ಬಂದುಬಸ್ತಿ ಐತಿ ಈಗ
ಈ ವಿಚಾರ ಕೇಳಿ ಗಜವೀರ ಹಾಕಿದ ನಿಂತಕೊಂಡ ಅಕಲಾ
ಬಿಡೋ ರಾಯಪ್ಪಣ್ಣಾ ಬಂತ ನನಗ ಶಕ್ತಿ ಮತ್ತು ಯುಕ್ತಿನಾ
ನಡಿಯೋ ಯಣ್ಣಾ ಮುರದ ಬರೋನ ಬೀಡಿ ಕಚೇರಿನಾಗ
ಇಂಗ್ರೇಜಿಯರಿಗೆ ಬೀಳಲಿನ್ನಾ ನಮ್ಮ ಶಕ್ತಿ ಗುರತವನಾ
ಕಾಳಿ ಭೀಮಣ್ಣನ ಕಾಳಿ ರಣಕಾಳಿಯಾಗಿ ಕೂಗಿತಾಗ
ಕಾಳಿ ದನಿಕೇಳಿ ಬೀಡಿರೈತರ ಮಾತಾಡತಿದ್ದಾರಾಗ
ರಾಯನ ದಂಡು ಬಂದೀತಂತ ಊರ ಬಿಡಾಕ ಹತ್ಯಾರಾಗ
ದವಡಾಸಿ ಬಂದೀತ ದಂಡು ಬೀಡಿ ಊರ ತುರಮಂದ್ಯಾಗ
ಡಗ್ಗಾಲಮಂಡಿ ಊರಿ ಗಜವೀರಾ ಚೀರಲಬ್ಬಿ ಹೊಡದಾನಾಗ
ಕೆಟ್ಟ ಹಬಸ್ಯಾನ ದನಿಕೇಳಿ ಗಡಬಡ ನಡಶ್ಯಾರೋ ಆಗ
ಹರಕೆ ಕೋರಿಯ ಸಿಂಬಿ ಮಾಡಿ ಅಂಗೈಯಿಗೆ ಸುತ್ತಿದ್ದನಾಗ
ಚಿಟ್ಟನೆ ಚೀರಿ ಗಜವೀರಾ ಗುದ್ದಿ ಮುರಿದಾನೋ ಕಟಂಜನಾಗ
ಮೊಗಲಾಯಿ ಸೀಮಿಯ ಸೈನಿಕರ ಎಕದಂ ಮುಗಿಬಿದ್ದಾರಾಗ
ಎಲಿಗೆ ಸುಣ್ಣಾ ಹಚ್ಚೂದರೊಳಗ ಲೂಟಿ ಮಾಡತಾರ ಊರೊಳಗ
ಬೀಡಿಹಳ್ಳಿ ಕಚೇರಿ ಹೊನ್ನ ಎಳೆದು ತಂದಾರ ತುರಮಂದ್ಯಾಗ
ಅಷ್ಟು ಎಲ್ಲಾ ಹೊನ್ನ ತಕ್ಕೊಂಡು ತೆಲಿಮ್ಯಾಲೆ ಹೊತಕೊಂಡಾರಾಗ
ದವಡಾಸಿ ಬಂದೀತ ದಂಡು ಬಾಳೇಕುಂದದ ಕೊಳದಾಗ
ಬಾಳೇಕುಂದದ ಕೊಳ್ಳಕ ಬಂದು ಕೇಳುತ್ತಿದ್ದಾನ ಗಜವೀರಾ

||ಇಳುವು||

ಹಂಗ ಒಬ್ಬರ ನಮ್ಮ ಹೊನ್ನ ಕಲಾಲ ಆಗತೈತೋ ರಾಯಣ್ಣಾ
ಬಾಳೇಕುಂದದ ಮಡ್ಡಿಮ್ಯಾಗ ಕಿಲ್ಹೆ ಕಟ್ಟಿಸೂನಂತನಾಗ
ಅಷ್ಟೊತ್ತಿಗೆ ರಾಯಣ್ಣಗ ಅಪಶಕುನಾಗಿ ತಿಳಿದ ಬಂದೀತಾಗ
ಯಾರ ಬ್ಯಾಡ ಅಂತಾನು ಕಟ್ಟಿಸೂನಂತಾನು ರಾಯಣ್ಣನಾಗ
ಕಿತ್ತೂರ ಅರಸರ ಕೂಡಿ ಬಂದನಾಗಿ ಇಂಗ್ರೇಜರನ ಕಳಸೂನೀಗ
ಕಿತ್ತೂರ ನಾಡೀನ ವೀರರ ನಾವೆಲ್ಲ ಇಂಗ್ರೇಜರನ ದೂಡೂನೀಗ
ಯಾರ ಬ್ಯಾಡ ಅಂತಾರೆಪ್ಪ ನಿನ್ನ ವಿಚಾರದಂಗ್ಹಂದ ಗಜವೀರೀಗ
ಅವರ ಸಂದ ಉಳದೀತ್ರೆಪ್ಪ ಬಾಳೇಕುಂದದ ಕೊಳದಾಗ
ದಾತರಿಲ್ಲದ ಜಗಳಾ ಯಾತಕಪ್ಪ ರಾಯಾ ನಿನಗ
|| ಬೆಳಗಾಂವ ಜಿಲ್ಹಾಪೈಕಿ …. ೧೪ನೆಯ ಚೌಕ ||

ಅಷ್ಟೆ ಆದ ಬಳಿಕ ಗಜವೀರಾ ಮತ್ತ ಕೇಳತಾನ ರಾಯಣ್ಣಗಾಗ
ಹಳ್ಯಾಳ ಕಚೇರಿಯೊಂದು ಎದಿಮ್ಯಾಲೈತೋ ಎಣ್ಣಾ ನಮಗ
ಇಷ್ಟ ಕೇಳಿ ರಾಯಣ್ಣ ತಾನು ಮಾರಿ ಕಿಂಕರ ಮಾಡ್ಯಾನಾಗ
ಹಳ್ಯಾಳ ಮೇಲೆ ನಮ್ಮ ಲಢಾಯಿ ಬ್ಯಾಡೋ ತಮ್ಮಾ ಈಗ
ರಾಯಪ್ಪಣ್ಣಾ ಏನ ಬರಾ ಜಿಗದ್ಯೋ ಕೇಸರಿಯಂಗ
ಹೇಳಿದರ ನನ್ನ ದಂಡ ಗಾಬರಿ ಅಗತೈತಂತಾನಾಗ
ಜಿಗಿಯಾಕ ಭೂಮಿತಾಯಿ ಕರುಣಾ ಇತ್ತ ನಮ್ಮ ಮ್ಯಾಗ
ಹತ್ಯಾಳ ದಾಗಿನ ಹೊನ್ನಾ ಹಿಡಿಯಬ್ಯಾಡ ನೀವೀಗ
ಹಿಡಿದರ ಕಕ್ಕೇರಿ ಬಿಷ್ಟವ್ವನ ಆಣೆ ಆಗೇತಿ ನಿಮಗೀಗ
ಮೀನ ಗಂಡಕ ಗುಂಡ ಬಡಿದು ಪಾರಾದೀತೋ ಈಗ
ಇಷ್ಟ ಕೇಳಿ ರಾಯಣ್ಣನ ದಂಡು ಬಂದು ನಿಂತೀತ ಸುತ್ತಮುತ್ತಾ
ರಾಯಣ್ಣನ ಸಂಕಟ ಮಾಡೂದ ನೋಡಿ ಕಣ್ಣೀಗಿ ನೀರ ತಂದಾರಾಗ
ಗಟ್ಟಿಯುಳ್ಳ ಗಜವೀರಾ ಹೆಗಲಮ್ಯಾಲೆ ತಗೊಂಡನಾಗ

||ಇಳುವು||

ದವಡಾಸಿ ದಂಡು ಬಂದೀತ ಬಾಳೇಕುಂದದ ಕೊಳ್ಳದಾಗ
ಬಾಳೇಕುಂದದ ಕೊಳ್ಳದಾಗ ಡೇರೆ ಹೊದಿಸಿದ್ದನಾಗ
ಬುದ್ಧಿಯುಳ್ಳ ಸೈನಿಕರೆಲ್ಲಾ ವಿಚಾರ ಮಾಡಿರೀಗ
ಯುದ್ಧ ಮಾಡಿ ಮಡಿಯುದು ನಮ್ಮ ಧರ್ಮವೀಗ
ಈ ದೇಶದಿಂದ ಇಂಗ್ರೇಜರನೋಡಿಸುವ ನಮ್ಮ ಗುರಿ ಈಗ
ಎಲ್ಲಾ ರೀತಿಯಿಂದ ಫಾಯಾ ಕಟ್ಟಿರಿ ಮನಸಿನಾಗ
ದುಃಖದಾಗ ರಾಯಾನ ದಂಡ ಸುಮ್ಮನೆ ಕುಂತೀತಿಗ
ಡೇರೆದಾಗ ಅವರ ಸಂದ ಉಳಿದೀತ್ರೆಪ್ಪಾ ಕೊಳ್ಳದಾಗ
ದಾತರಿಲ್ಲದ ಜಗಳಾ ಯಾತಕಪ್ಪಾ ರಾಯಾ ನಿನಗ
|| ಬೆಳಗಾಂವ ಜಿಲ್ಹಾ ಪೈಕಿ …… ೧೫ನೆಯ ಚೌಕ ||

ರಾಯಣ್ಣಗ ಗುಂಡ ಬಡದೈತಿ ಅಂತ ಜಾಹೀರಾತ ದೇಶದಮ್ಯಾಗ
ಹದಿನೆಂಟ ನೂರು ಇಂಗ್ರೇಜಿ ದಂಡು ಬಂದೀತ ಕೊಳದಾಗ
ಇಂಗ್ರೇಜಿ ದಂಡು ಬಂದದ್ದು ಗೊತ್ತಿದ್ದಿಲ್ಲೋ ರಾಯಣ್ಣಗಾಗ
ರಾಯಣ್ಣನ ಗೊತ್ತು ಹಚ್ಚಿ ಕೊಲ್ಲಬೇಕಂತಾನ ಇಂಗ್ರೇಜಿ ಆಗ
ಅಷ್ಟೊತ್ತಿಗೆ ಗಜವೀರ ತಾನ ಮತ್ತ ಕೇಳಿದ ರಾಯಣ್ಣಗ
ಮೊಗಲಾಯಿ ಸೈನಿಕರು ಪ್ಯಾಟಿ ನೋಡತೀವ ಅಂತಾರಣ್ಣಾ ಈಗ
ಕಿತ್ತೂರ ಪ್ಯಾಟಿ ನಾನು ತೋರಿಸಿಕೊಂಡ ಬರತೀನೀಗ
ಹೊರಸಿನ ಮ್ಯಾಗ ಮಲಗಿಕೊಂಡ ಹೇಳತಿದ್ದನಾಗ
ಹದಿನೈದು ದಿವಸಕ ನನ್ನ ಕಾಲ ಮಾಯತೈತಿ ತಮ್ಮಾ ಆಗ
ಕಕ್ಕೇರಿ ಬಿಷ್ಟವ್ವನ ಮೂರ್ತಿ ಐತೋ ಅದರಮ್ಯಾಗ
ರಾಯಣ್ಣ ಹೇಳಿದ ಮಾತ ಕೇಳಲಿಲ್ಲರಿ ಗಜವೀರಾಗ
ಬಿಡೋ ರಾಯಪ್ಪಣ್ಣಾ ಹಿಂತಾ ಮಾತ ಹೇಳಬ್ಯಾಡ ನನಗ
ದಕ್ಕಿ ಆದರ ನನಗಾಗಲಿ ಹೋಗಿ ಬರತೀನಿ ಈಗ
ಕಾಳಿ ಭೀಮಣ್ಣಾ ನೀನು ಕರ್ಣಿ ಹಿಡಿಯಲೇ ಈಗ
ಹಳ್ಯಾಳ ಮಾಲ ನಡಕಟ್ಟಿ ಕರ್ಣಿ ಹಿಡದಾನ ಭೀಮಣ್ಣಾಗ
ಕರ್ಣಿ ಶಬ್ದಾಕೇಳಿ ಅವರು ಅತಗೊಂತ ಕುಂತಾರ ಕಚೇರ‍್ಯಾಗ
ಕಚೇರ‍್ಯಗಿನ ಜನರೆಲ್ಲಾ ಒಬ್ಬರಕೊಬ್ಬರ ಮಾತಾಡಾಕತ್ಯಾರಾಗ
ರಾಯಣ್ಣನ ದಂಡ ಬರತೈತಿ ಅದಕೇನ ಹಂಚೀಕಿ ಅಂತಾರಾಗ
ಅಷ್ಟೊತ್ತಿಗೆ ಒಬ್ಬ ಮ್ಯಾದಾರ ಕೇಳತಿದ್ದಾನು ಕಚೇರ‍್ಯಾಗ
ಅವನ ಗುರ್ತಾ ಹೇಳರಿ ನನಗ ಹೊಡೆಯತೇನಂತಾನಾಗ
ಇಷ್ಟ ಕೇಳಿ ಮ್ಯಾದಾರವಗ ರಾಯಣ್ಣನ ಗುರ್ತಾ ಹೇಳಿದ್ದಾರ ಮ್ಯಾದಾರಗ
ಅಷ್ಟ ದಂಡಿನೊಳಗ ಮೂಳಾ ಎತ್ತರ ಇರತಾನು ರಾಯಾ
ಗುಡಿಗಿ ಚೊಣ್ಣ ತೊಟ್ಟು ಮ್ಯಾಲ ಹಿಡಗ್ಯಾಂವಿ ಧರಿಸತಾನಾ
ಕುಡಿ ಕುಡಿ ಹುಬ್ಬಿಗೆ ಗಂಧಾ ಧರಿಸಿರತಾನ ರಾಯಾ
ಅಷ್ಟ ದಂಡಿನಾಗ ಅವನ ಕತ್ತಿ ಮೇಲೆ ಇರತೈತಿ ಇನ್ನಾ
ಅಷ್ಟ ಹೇಳಿ ಜನರೆಲ್ಲರೂ ಮನಿಕಡಿಗಿ ಬಂದದ್ದರಾಗ
ಜೋಡಲಳಗಿ ಬಂದೂಕಬಾರ ಮಾಡ್ಯಾನ ಮ್ಯಾದರಾಗ
ಮಾಳಗಿ ಹತ್ತಿ ಜಿರಗಂಡ್ಯಾಗ ಕುಂತಾನ ಮ್ಯಾದಾರಾಗ
ದವಡಾಸಿ ಬಂದೀತು ದಂಡು ಹಳ್ಯಾಳ ತುರಮಂದ್ಯಾಗ
ಡಗ್ಗಾಲ ಮಂಡು ಊರಿ ಗಜವೀರ ಚೀರ ಲಬ್ಬಿ ಹೊಡದಾನಾಗ
ಕೆಟ್ಟ ಹಬಸ್ಯಾನ ದನಿಕೇಳಿ ದಡಬಡಾ ಕದಾ ಹಾಕ್ಯಾರಾಗ
ಮೊಗಲಾವಿ ಸೈನಿಕರು ಸುತ್ತಮುತ್ತ ಮುಗಿಬಿದ್ದಾರಾಗ
ಕಚೇರಿ ಅಂಗಳದೊಳಗೆ ರಾಯಣ್ಣ ಸುಮ್ಮನೆ ನಿಂತಿದ್ದನಾಗ
ಕುಡಿ ಕುಡಿ ಹುಬ್ಬಿಗೆ ಗುರಿ ಇಟ್ಟ ಕುಂತಾನ ಮ್ಯಾದರಾಗ
ಫಳ್ಳನೆ ಕಣ್ಣ ತಗದ ಮೇಲಕ್ಕೆ ನೋಡ್ಯಾನ ರಾಯಣ್ಣಾಗ
ಮೇಲಕ ನೋಡೂದರೊಳಗ ಹಿಚಕಿ ಬಿಟ್ಟಾನ ಮ್ಯಾದಾರಾಗ
ಕಿವಿಗೆ ಬೆಂಕಿ ಬೀಳುದರೊಳಗ ಧೀನಂತ ಜಿಗಿದಿದ್ದನಾಗ
ಗುಂಡಿನ ಹೊಗಿಯಾಗ ಮ್ಯಾದಾರನ ಚಂಡ ಕೋದಾನ ರಾಯಣ್ಣಾಗ
ಮೀನ ಗಂಡಕ ಗುಂಡ ಬಡಿದು ಪಾರ ಆದೀತೋ ರಾಯಣ್ಣಗಾಗ
ಬಿಚ್ಚಗತ್ತಿ ಚನಬಸ್ಯಾ ತಾನು ಹೇಳತಿದ್ದಾನ ರಾಯಣ್ಣಗಾಗ
ಏನಾರಾ ಗದ್ದಲಾ ಮಾಡಸಿ ಬ್ಯಾಡಂತ ಹೇಳತಿದ್ದನಾಗ
ಶೂರ ಹಬಸ್ಯಾ ಹೇಳಿದರ ಕೇಳಲಿಲ್ಲ ಅವನ ಮಾತಾಗ
ಗದ್ದಲಾ ಮಡೋದಿಲ್ಲೋ ಎಣ್ಣಾ ಹೋಗಿ ಬರತೀವಿ ಅಂತಾರಾಗ
ಮಳ್ಳತನಕ ಬಿದ್ದು ರಾಯಣ್ಣ ಅಪ್ಪಣಿ ಕೊಟ್ಟಾನ ಗಜವೀರಗ
ಬುದ್ಧಿಯುಳ್ಳ ಯಲ್ಲಣ್ಣ ಹುಷಾರಾಗಿರಪ್ಪ ದಂಡಿನೊಳಗ
ಹೊರಸಿನ ಮ್ಯಾಲ ಮಲಗಿರಾಯಣ್ಣ ಕೈಮುಗಿತಾನ ದಂಡಿಗಾಗ
ಮುಂಜಾನೆ ಗಳಗಿ ಹೊತ್ತೇರಿ ಅಪ್ಪಣೆ ಕೊಟ್ಟಾನ ದಂಡಿಗಾಗ
ದವಡಾಸಿ ಬಂದೀತ ದಂಡು ಸಿಂದೀಗಡಂಗಕಾಗ ಗಡಂಗದೊಳಗ
ರಾಯಣ್ಣನ ದಂಡು ಸಿಂದಿ ಕುಡಿದೀತ ಬಲ್ಲಾಂಗ
ದಂಡಿನೊಳಗ ಒಬ್ಬ ಯಲ್ಲಣ್ಣ ಕುಡಿಯಲಿಲ್ಲಾಗ
ಏರ ಬಿಸಲಿಗಿ ರಾಯಣ್ಣನ ದಂಡಿಗಿ ನಿಸೆ ಆದೀತ ಭರಪೂರಾ
ಕಿತ್ತೂರ ಪ್ಯಾಟಿ ನಡು ಪ್ಯಾಟ್ಯಾಗ ಬಂದರಾ ಪೂರಾ
ಬುದ್ಧಿಯುಳ್ಳ ಯಲ್ಲಣ್ಣ ಎಲ್ಲರಿಗೂ ಬುದ್ದಿ ಹೇಳಿದನಾ
ಸಂತಿ ಬೆದರೀತ ಯಣ್ಣಾ ಚೀರಬ್ಯಾಡ ಅಂತಾನವನಾ
ನಿಸೇದ ಒಳಗ ರಾಯಣ್ಣನ ದಂಡು ಕಿತ್ತೂರ ಕಿಲ್ಲೆ ಹತ್ತಿದಾಗ
ಅಷ್ಟರೊಳಗ ಇಂಗ್ರೇಜಿ ದಂಡು ಬೆನ್ನು ಹತ್ತಿದಾಗ
ಕಿಲ್ಲೇದ ಮ್ಯಾಗ ನಿಂತ ಗಜವೀರ ಸುತ್ತಮುತ್ತ ನೋಡಿದನಾಗ
ಸುತ್ತಮುತ್ತ ಇಂಗ್ರೇಜಿ ದಂಡು ನೋಡುತಿದ್ದಾನು ಗಜವೀರಾ
ನಿಸೇದ ಒಳಗ ಗಜವೀರಾ ತಾ ಹೇಳಿದಾನ ದಂಡಿಗಾಗ
ನಾವ ಅಷ್ಟೊರು ಹೋದರೆ ಇಡಲಾಗುವುದಿಲ್ಲ ಈಗ
ಒಬ್ಬೊಬ್ಬ ಹೋಗಿ ನೀವು ಲqಮಯಿ ಮಾಡಿ ಬರ್ರೀಗ

||ಇಳುವು||

ಇಷ್ಟ ಕೇಳಿ ಒಡ್ಡರ ಯಲ್ಲಣ್ಣ ಕಣ್ಣತುಂಬ ನೀರತಂದಾನಾಗ
ನಮ್ಮ ರಾಯಣ್ಣ ಇದ್ರ ಇಂತಾ ಹೊತ್ತ ಬರತಿದ್ದಿಲ್ಲೋ ನಮಗ
ಆದರಾಗಲಿ ರಾಯಣ್ಣನ ಸ್ಮರಿಸಿ ಮಾಡೂನ ಯುದ್ಧ ಈಗ
ಈಗ ಒಲ್ಲೆವಂದರ ಹ್ಯಾಂಗ ಬಿಸಾಕ ಬರತತಿ ನಮಗ
ಭೂಮಿ ತಾಯಿ ತೋರಲಿ ಶಕ್ತಿ ಬಿಷ್ಟವ್ವ ನೀಡಲಿ ಯುಕ್ತಿನೀಗ
ಕಿತ್ತೂರವರ ಕಣ್ಣ ತೆರದ ಕೊಡಲಿ ಮದ್ದ ಗುಂಡವನೀಗ
ನಾ ಮೊದಲ ಹೋಗತೇನಿ ತಮ್ಮಾ ಲಡಾಯಿ ನೋಡಿರಂತಾನಾಗ
ಅವರ ಸಂದ ಉಳಿದೀತ್ರೆಪ್ಪಾ ಕಿತ್ತೂರ ಕಿಲ್ಹೆದಾಗ
ದಾತರಿಲ್ಲದ ಜಗಳಾ ಯಾತಕಪ್ಪಾ ರಾಯಾ ನಿನಗ
|| ಬೆಳಗಾಂವ ಜಿಲ್ಹಾ ಪೈಕಿ …. ೧೬ನೆಯ ಚೌಕ ||

ದಂಡಿಗೆ ಕೈಮುಗಿದು ಯಲ್ಲಣ್ಣ ಧೀನಂತ ಜಿಗದಿದ್ದನಾಗ
ಏಳನೂರಾಳು ಕಡಕೊಂತ ಯಲ್ಲಣ್ಣ ಹೋಗತಿದ್ದನಾಗ
ಕೈಯ ಸೋತ ಯಲ್ಲಣ್ಣ ಹಿಂದಕ ತಿರಗತಿದ್ದನಾಗ
ಇವನ ಒಬ್ಬನ ಹೊಡೆದರೆ ಗುಳದಾಳಿ ಹರಿತಂತಾರಾ
ಅಷ್ಟೊಂದು ಇಂಗ್ರೇಜಿ ದಂಡು ಏಕದಂ ಮುಗಿಬಿದ್ದಿತಾಗ
ಕಮ್ಮಾರ ಮೀರಾ ಧೀನಂತ ಜಿಗದಿದ್ದನಾಗ
ಎಂಟನೂರ ಇಂಗ್ರೇಜಿ ದಂಡ ಕಡಕೊಂತ ಹೋಗತಿದ್ದನಾಗ
ಕೈಸೋತ ಮೀರಾ ಧೀರಾ ಹಿಂದಕ ತಿರಿಗಿದನಾಗ
ಹಿಂದಕ ತಿರಗಿದ ಗಳಿಗ್ಗೆ ಏಕದಂ ಮುಗಿಬಿದ್ದಾರಾಗ
ಹಣಿ ಪಟ್ಟಿಗೆ ಗುಂಡ ಬಡಿದು ತಿರುಗಿ ಬಿದ್ದಾನ ಸೂರಾ
ಜಿಡ್ಡಿಮನಿ ಫಕೀರ ವೀರಾವೇಶದಿಂದ ಜಿಗಿದಾಡಾಕ್ಹತ್ತಿದ್ದನಾಗ
ಐದನೂರ ಇಂಗ್ರೇಜಿ ದಂಡು ಕಡಕೊಂತ ಹೋಗತಿದ್ದನಾಗ
ಕೈಸೋತ ಫಕೀರ ತಾನ ಹಿಂದಕ ತಿರಗಿದ್ದನಾಗ
ಹಿಂದಕ ತಿರಗಿದ ಗಳಿಗ್ಗೆ ಮುಗಿಬಿದ್ದರಾಗ
ಎದಿಗೆ ಗುಂಡು ಬಡಿದು ತಿರುಗಿದಾನ ಫಕೀರಾಗ
ರಜಪೂತ ರಾಮಸಿಂಗನ ಕುದರಿ ಕುಣದಾಡತೈತಿ ರಣದಾಗ
ರಾಮಸಿಂಗ ದಂಡಿನಕೂಡ  ಲಡಾಯಿ ಮಾಡಾಕ್ಹತ್ಯಾನಾಗ
ಇಂಗ್ರೇಜಿ ದಂಡ ಸಿಟ್ಟಿಗೆದ್ದ ಮುಕ್ಕಿತ ರಾಮಸಿಂಗನಾಗ
ಹನ್ನೊಂದನೂರಾಳಾ ರಾಮಸಿಂಗಾ ಚಂಡ ಕಡಿದನಾಗ
ಐದನೂರ ಇಂಗ್ರೇಜಿ ದಂಡು ಕುದರಿ ತುಳದ ಕೊಂದಿತಾಗ
ಕೈಯ ಸೋತ ರಾಮಸಿಂಗ ಕುದರಿ ತಿರವ್ಯಾನ ಹಿಂದಕಾಗ
ಹಿಂದಕ ಹೊಳ್ಳಿದ ಕೂಡಲೆ ಏಕದಂ ಮುಗಿಬಿದ್ದರಾಗ
ಹಣೆ ಪೆಟ್ಟಿಗೆ ಗುಂಡು ಬಡಿದ ತಿರುಗಿ ಬಿದ್ದಾನ ರಾಮಸಿಂಗಾಗ
ಕುದರಿಗೆ ತೆಕ್ಕಿ ಬಿದ್ದು ಜೋತಾಡತಾನ ರಾಮಸಿಂಗಾಗ
ತಲಿಗೆ ಗುಂಡು ಬಡಿದು ಕುದರಿ ತಿರುಗಿ ಬಿದ್ದೀತ ರಣದಾಗ
ಮೊಗಲಾಯಿ ವೀರ ಸಿಂಹಗಳು ಏಕದಂ ಮುಗಿಬಿದ್ದಾವಾಗ
ಒಬ್ಬೊಬ್ಬರು ನೂರಾಳು ಕಡಕೊಂತ ಕಾದಾಡಾಕ ಹತ್ತಿದರಾ
ನಸೇದ ಒಳಗ ಹೋರಾಡರಯಾರ ವೀರರಾ ದಿಕ್ಕ ತಿಳಿದ್ಹಂಗಾ
ರಾಯಣ್ಣನ ದಂಡ ಸೋಲು ಲಕ್ಷಣ ಕಂಡೀತಾಗ
ಅಷ್ಟ ಹೊತ್ತಿಗೆ ಗಜವೀರನ ನಿಸೆ ಇಳಿದೀತ ಸಂಪೂರ್ಣ
ನಿಸೆದೊಳಗ ಅಪ್ಪಣೆ ಕೊಟ್ಟಿದ್ದೊ ಗೊತ್ತಿದ್ದಿಲ್ಲೋ ಗಜವೀರಾಗ
ತನ್ನ ದಂಡು ಎಲ್ಲೇತಿ ಅಂತ ನೋಡಿಕೊಂತಾನು ಗಜವೀರಾಗ
ಕಿಲ್ಲೆದೊಳಗ ನೋಡುವುದರೊಳಗೆ ಕತ್ತಿ ಹಂದರ ಹಾಕಿತ್ತಾಗ
ವೀರ ಒಡ್ಡರ ಯಲ್ಲಣ್ಣ ನೆನಸಿ ಕಣ್ಣ ತುಂಬ ನೀರ ತಂದಾನಾಗ
ನನ್ನ ರಾಯಣ್ಣ ಕೇಳಿದರ ಏನ ಹೇಳಲಿ ಅಂತಾನಾಗ
ದುಃಖ ಸೈರಿಸಿ ಬಂಟ ತೈಯಾರಾದಾನು ಗಜವೀರಾಗ
ಮಂಡಿ ಊರಿ ಗಜವೀರಾಗ ಗುಂಡು ಜಡಿಯುತ್ತಿದ್ದಾನಾಗ
ಬಂದೂಕ ತಿರುವಿ ಹಿಡಿದು ಇಂಗ್ರೇಜಿ ದಂಡು ಹೊಡಿಯಾಕ ಹತ್ಯಾನಾಗ
ಒಬ್ಬ ಮನುಷ್ಯನ ತಗೊಂಡು ಮತ್ತೊಬ್ಬಗ ಹೊಡಿದಾನಾಗ
ಕಂಟಿಗೆ ಕಟ್ಟಿದ ಕುದುರೆಗಳನು ಗುದ್ದಿ ಕೊಂದಾನ ಟೊಂಕದಮ್ಯಾಗ
ಹನ್ನೆರಡ ಮನದ ಚಿಲಕತ್ತಿನಂಗಿ ಇತ್ತೊ ಮೈಯೊಳಗ
ಇಂಗ್ರೇಜಿ ದಂಡಿಗಲ್ಲ ಹೊಡೆದು ಬಡೆದು ಕೊಂದಾನ ಗಜವೀರಾಗ
ಕತ್ತಿ ಹೊರಿಕಟ್ಟಿ ಇಟಗೊಂಡು ಹೊಂಟಾನು ತೆಲಿಮ್ಯಾಗ
ಒಡ್ಡರ ಯಲ್ಲಣ್ಣ ನೆನಸಿ ದುಃಖ ಮಾಡುತ್ತ ಹೊಂಟಾನಾಗ
ದವಡಾಸಿ ಬಂದಾನೋ ಗಜವೀರಾ ಬಾಳೆಕುಂದದ ಕೊಳ್ಳಕ್ಕಾಗ
ಕೊಳ್ಳಕ್ಕ ಬಂದು ಡೇರೇದ ಹಿಂದ ಸುಮ್ಮನ ಕುಂತಾನ ಗಜವೀರಾಗ
ಅಷ್ಟ ಹೊತ್ತಿಗೆ ರಾಯಣ್ಣಗ ಜಂಪ ಹತ್ತಿತ್ತೊ ಡೇರೆದಾಗ
ಗಜವೀರನ ಕಣ್ಣೀರ ಹೊರಸಿನ ಬುಡುಕ ಹರದಾವಾಗ
ರಾಯಣ್ಣನ ಕತ್ತಿ ಕನಸಿನಾಗ ಹೋಗಿ ಹೇಳ ಹತ್ತಿತಾಗ
ಕಿತ್ತೂರ ಪ್ಯಾಟ್ಯಾಗ ನಿನ್ನದಂಡು ಮಡಿದು ಹೋದಿತೆಂದಿದಾಗ
ಕೇಳಿ ರಾಯಪ್ಪ ತಾನು ಚಟ್ಟನೆ ಮೇಲಕ್ಕೆದ್ದಾನಾಗ
ಬಿಚ್ಚಗತ್ತಿ ಚನಬಸಪ್ಪ ತಮ್ಮಾ ಮುಂದಕ ಬಾರೋ ಈಗ
ನನ್ನ ಕನಸಿನಾಗ ಇಂಗ್ರೇಜಿ ದಂಡು ಬಂದಂತಾಗಿತ್ತಾಗ
ನನ್ನ ದಂಡು ಕಿತ್ತೂರ ಪ್ಯಾಟ್ಯಾಗ ಸೋತಂಗಾಗಿತ್ತಾಗ

||ಇಳುವು||

ಇಷ್ಟ ಅನ್ನುದು ಗಜವೀರಾ ಹಿಂದಕುಂತ ಕೇಳತಿದ್ದನಾಗ
ಹೌದು ಹೌದು ರಾಯಣ್ಣ ಸುಳ್ಳಲ್ಲ ಅಂತಾನಾಗ
ಕೇಳಿ ರಾಯಣ್ಣ ಕಣ್ಣತುಂಬ ನೀರತಂದಾನಾಗ
ಕೆಟ್ಟ ಹಬಸ್ಯಾ ಹೇಳಿದರ ಕೇಳಲಿಲ್ಲ ನನ್ನ ಮಾತಾಗ
ನನ್ನ ಯಲ್ಲಣ್ಣ ಇಲ್ಲಿ ಹುಡಕಿದರ ಸಿಕ್ಕಾನೀಗ
ನನ್ನೆದುರಿಗೆ ಲಢಾಯಿ ಮಾಡಿ ಮಡಿಯಲಿಲ್ಲೊ ತಮ್ಮಾ
ಯಲ್ಲಣ್ಣನ ನೆನಸಿ ರಾಯಣ್ಣ ಕಣ್ಣತುಂಬಾ ನೀರತಂದಾ
ಅವರ ಸಂದ ಉಳದೀತರೆಪ್ಪ ಬಾಳಕುಂದದ ಕೊಳ್ಳದಾಗ
ದಾತರಿಲ್ಲದಂತಹ ಜಗಳ ಯಾತಕಪ್ಪ ರಾಯಾ ನಿನಗ
|| ಬೆಳಗಾಂವ ಜಿಲ್ಲಾ ಪೈಕಿ …. ೧೭ನೆಯ ಚೌಕ ||

ರಾಯಣ್ಣ ದಂಡ ಮುಳಗೀತಂತ ಜಾಹಿರಾತೋ ದೇಶದಮ್ಯಾಗ
ನೇಗಿನಾಳದ ಯಂಕನಗೌಡ ತಯಾರ ಆಗಾಗಕ ಹತ್ಯಾನಾಗ
ಕುಂದಾನಪುರದ ನಿಂಗನಗೌಡನ ಬೆನ್ನಕ್ಕ ಕರಕೊಂತನಾಗ
ಅವರಿಬ್ಬರು ಮಾತಾಡಿ ದವಡಾಸಿ ಬಂದಾರಾಗ
ಧಾರವಾಡಕ ಬಂದ ಕೇಳತಿದ್ದಾರ ಇಂಗ್ರೇಜಿ ಸಾಹೇಬಗಾಗ
ತುಡಗ ರಾಯಣ್ಣನ ಹಿಡಕೊಟ್ಟರ ಏನ ಕೊಡತೀರಂತಾರಾಗ
ಏಳನೂರ ಊರ ಇನಾಮ ಹಾಕಿ ಕೊಡತೇನಿ ನಿಮಗ
ಇಷ್ಟ ಕೇಳಿ ವಚನ ತಕ್ಕೊಂಡು ಹಿಂದಕ ತಿರಗಿದರಾಗ
ರಾಯಣ್ಣನ ಹುಡುಕೂತ ನಡದಾರಾಗ ಗೌಡರಾ
ಇತ್ತಕಡೆಗೆ ರಾಯಣ್ಣನ ಚನ್ನಮ್ಮ ಚೀಟಿ ಕಳಿಸಿದಳಾಗ
ಬರಬೇಕಂತ ಕಿತ್ತೂರಿಗೆ ಹೊಂಟಾನೋ ಬಂಟನಾಗ
ಹತ್ಯಾನ ತನ್ನ ಬತ್ತಲೆ ಕುದುರಿ ಕತ್ತಿಯ ಸಹಿತನಾಗ
ಉಳದ ರಾಯಣ್ಣನ ಬಂಟರ ಹತ್ಯಾರವನ ಬೆನ್ನಹಿಂದಾಗ
ಅವರ ಹಂತೇಲಿ ಕೂಡೇತಿ ಲೆಕ್ಕವಿಲ್ಲದ ದಂಡಾಗ
ಚನ್ನಮ್ಮಗ ಆಗೇತಿ ಬಹು ಹರ್ಷ ಬಂಟರನ ನೋಡಿ ಆಗ
ಸುತ್ತ-ಮುತ್ತ ಬೆನ್ನ ಹತ್ತೇತಿ ಇಂಗ್ರೇಜಿನ ದಂಡಾಗ
ಮಲ್ಲಸರ್ಜಾನ ದುಃಖ ಬಂದ ಹೋದೀತ ಮನಸಿನಾಗ
ರಾಯಣ್ಣ ಚಿಂತೀಸ ಬೇಡ ತಾಯಿ ಈ ಲಢಾಯಿದಾಗ
ಎಲ್ಲಾರು ಒಟ್ಟಾಗಿ ಫಿರಂಗ್ಯಾರನ ಹಾಕೂನು ದೇಶದ ಹೊರಗ
ರಾಯಣ್ಣನ ಮಾತಿಗೆ ಚೆನ್ನಮ್ಮ ಆದಾಳ ದುರ್ಗಾದೇವಿಯಾಗ
ನೆನಸಿ ಮಲ್ಲಸರ್ಜಾನ ಕತ್ತಿ ಹಿಡಿದಾಳ ಕೈಯಾಗ
ಊದಿಸ್ಯಾರ ರಣಕಹಳಿ ಬಾರಿಸ್ಯಾರ ನಗಾರಿಯಾಗ
ಭದ್ರಪಡಿಸ್ಯಾರ ಕೋಟೆಯ ಬಾಗಿಲಗಳನಾಗ
ತಯಾರಾದೀತ ಮದ್ದುಗುಂಡು ಆಗಿಂದಾಗ ಕೋಟ್ಯಾಗ
ದಂಡ ನಿಂತೀತ ಕೋಟಿ ಒಳಗ ತಯಾರಾಗ್ಯಾಗಿ
ಒಮ್ಮಿಲೆ ತಗದಾರೋ ಕೋಟಿಯ ಬಾಗಿಲಗಳನಾಗಿ
ಪಶ್ಚಿಮ ದಿಕ್ಕಿಗಿ ರಾಯಣ್ಣ ಸವರ‍್ಯಾಣ ವೈರಿಯು ಚಂಡಗಳನಾಗ
ಉತ್ತರ ದಿಕ್ಕಿಗಿ ಚನ್ನಮ್ಮ ನಿಂತಾಳ ದುರ್ಗಿಯಾಗಿ ಆಗ
ಫಿರಂಗ್ಯಾರ ಹೆಣಗಳ ಬಿದ್ದಾವ ಬಣವಿಯಂಗ ಆಗ
ಕುದರಿ ಬಿದ್ದಾವ ಒಂದರಮ್ಯಾಲ ಒಂದು ದಿಕ್ಕಿಲ್ಲದಂಗ
ರಕ್ತ ಹರಿಯಿತೋ ಮುಂಗಾರಿ ಮಳಿ ನೀರ ಹರದಂಗ
ಕೋಟಿಯಿಂದ ತೋಪಿನಗುಂಡ ಹಾರಿದಾವ ಸಿಡ್ಲಮಿಂಚಿನಂಗಾ
ಥ್ಯಾಕರೆ ಹೇಳತಾನ ಅಂಜಿ ಸೈನಿಕರಿಗೆ ಹಿಂದ ಸರಿಯದಂಗ
ಸಿಂಹ ಗರ್ಜಸಿದಂಗ ರಾಯಣ್ಣ ಗರ್ಜಿಸಿದಾನಾಗ ರಣದಾಗ
ದುರ್ಗಿಯಾಗಿ ಕೂಗಿ ಹೇಳಿದಾಳ ಚನ್ನಮ್ಮ ತನ್ನ ಬಂಟರಿಗಾಗ
ರಾಯಣ್ಣ-ಚನ್ನಮ್ಮರ ಬಂಟರು ಹೋರಾಡ್ಯರ ಸಂಜಿತನಕ
ರಾಯಣ್ಣ ಹೇಳತಾನ ಕಲಿಗಳಿಗೆ ಗೆಲವು ನಮ್ಮದೀಗ
ಹಾರಿಸಿರಿ ಇಂಗ್ರೆಜಿಯರಿಗೆ ತೋಪಗಳ ಬಿಡದೀಗ
ಕ್ಷಣ ಕ್ಷಣಕ ರಾಯಣ್ಣನ ಮಾತಿಗೆ ಕಾವೇರಿತು ರಣಕಾಗ
ಕಿತ್ತೂರ ವೀರರು ಗುರಿಯಿಟ್ಟಾರ ತೋಪಿಂದ ಥ್ಯಾಕರೆಗಾಗ
ಡಂ ಎನ್ನುದರೊಳಗ ಥ್ಯಾಕರೆ ಬಿದ್ದಾನೋ ಭೂಮಿಯ ಮ್ಯಾಗ
ಅವನ ಪ್ರಾಣಪಕ್ಷಿ ಹಾರಿ ಹೋಯಿತ ಗೊತ್ತಿಲ್ಲದಂಗ
ಉಳಿದ ಪಿರಂಗ್ಯಾರ ಸೈನ್ಯ ಓಡಿತೋ ಜೀವದಾಸೆಯಿಂದಾಗ
ಇತ್ತ ಕಿತ್ತೂರ ಕೋಟಿಯೊಳಗ ಮೊಳಗಿತು ಜಯಭೇರಿಯಾಗ

||ಇಳುವು||

ಚನ್ನಮ್ಮ ಹರಿಸ್ಯಾಳ ಕಿತ್ತೂರ ಪುತ್ರರನಾಗ
ಕಿತ್ತೂರ ವೀರರಿಗೆ ಮಾನಸನ್ಮಾನ ಮಾಡಿದಳಾಗ
ರಾಯಣ್ಣಗ ಹೇಳತಾಳ ಕಿತ್ತೂರ ಬಿಡಬ್ಯಾಡ ರಾಯಣ್ಣಾ ಈಗ
ದೇಶದ ಭವಿಷ್ಯ ನಿಂತತಿ ನಿನ್ನ ತೆಲಿಯಮ್ಯಾಲೀಗ
ರಾಯಣ್ಣ ಹೇಳತಾನ ಹೋಗಿ ಬರತೀನಿ ತಾಯಿ ತಿರಿಗೀಗ
ಚನ್ನಮ್ಮನಿಂದ ವಚನ ಪಡದ ಹೊಂಟಾನ ನಡುರಾತ್ರ್ಯಾಗ
ಕುದುರಿ ಓಡಿಸುತ ಹೋಗ್ಯಾನ ಬಾಳೇಕುಂದದ ಕೊಳದಾಗ
ಅವರ ಸಂದ ಉಳದೀತರೆಪ್ಪಾ ಬಾಳೇಕುಂದದ ಕೊಳದಾಗ
ದಾತರಿಲ್ಲದಂತಹ ಜಗಳ ಯಾತಕಪ್ಪ ರಾಯಾ ನಿನಗ
|| ಬೆಳಗಾಂವ ಜಿಲ್ಹಾ ಪೈಕಿ ….. ೧೮ನೆಯ ಚೌಕ ||

ರಾಯಣ್ಣ ದಣದ ಮಲಿಗ್ಯಾನ ಹೊರಸಲಮ್ಯಾಲ ಡೇರೆದೊಳಗ
ಹೊತ್ತ ಪುರುದುರೊಳಗ ಬಂದು ಗೌಡರು ಕುಂತ ಹೇಳತಾರ ರಾಯಣ್ಣಗ
ನಿನ್ನ ಮ್ಯಾಗ ಏಟೇಟು ಎರಡ ಇಲ್ಲೊ ಯಣ್ಣ ಈಗ
ಘಟ್ಟದ ಕೆಳಗಿನ ಹುಡುಗರನ ತಂದ ಕೊಡತೇವಿ ನಿನಗ
ಕೇಳಿ ರಾಯಣ್ಣ ಹಿಗ್ಗಿದಾನ ತನ್ನ ಮನದೊಳಗ ಆಗಿಂದಾಗ
ಸೈನ್ಯ ಕೊಡುಸುದುಕ ಘಟ್ಟದ ಕೆಳಗ ಬಂದಾನ ಹಿಂಬಾಲಗ
ಗೌಡ್ರ ಹೇಳತಾರ ವ್ಯಾಳೆ ಆಗತೈತಿ ಜಳಕಾ ಮಾಡೋಣಂತಾರಾಗ
ಮಳ್ಳತನಕ ಬಿದ್ದು ರಾಯಣ್ಣ ಜಳಕಾ ಮಾಡಿರಿ ಅಂತನಾಗ
ನೇಗಿನಾಳಗೌಡ ಕೇಳಿದಾನು ಯಾಕೋ ರಾಯಣ್ಣ ಜಳಕಾ ಮಾಡುದುಲ್ಲೇನೀಗ
ಚಿಂತಿ ಒಳಗ ರಾಯಣ್ಣ ತಾನು ಮೇಲಕ್ಕೆದ್ದಿದ್ದಾನಾಗ
ಡೋರಿ ಬೆಣಚಿ ಹಳ್ಳದ ಬಂಟಾ ಅರವಿ ತಗಿತಿದ್ದಾನಾತ
ಬಾಯೊಳಗ ಕತ್ತಿ ಹಿಡಿದು ಜಳಕಾ ಮಾಡಕ್ಹತ್ಯಾನಾಗ
ನೇಗಿನಾಳ ಗೌಡಾ ಕೇಳ್ಯಾನು ರಾಯಣ್ಣ ಭರವಸಿ ಇಲ್ಲೇನೋ ನಿನಗ
ಹೆಂಗಸೂರ ಜಳಕಾ ಮಾಡುವಾಗ ಹಿಡಿತಾರ ಗುಳದಾಳಿ ಬಾಯಾಗ
ಹಂಗ ನೀನು ಕತ್ತಿ ಹಿಡಕೊಂಡೆಲ್ಲೊ ಬಾಯಾಗ ಈಸುವಾಗ
ಕೇಳಿ ರಾಯಣ್ಣ ಬಾಯಾನ ಕತ್ತಿ ಕೊಡತಾನ ಗೌಡರಿಗಾಗ
ಕತ್ತಿ ಕೊಟ್ಟ ಬಳಿಕ ಗೌಡ ಕುಸಿಯಾದಾನ ಮನಸಿನ್ಯಾಗ
ಜಳಕಾಮಾಡಿ ರಾಯಣ್ಣ ಚೊಣ್ಣಾ ತೊಡಾಕ ಹತ್ಯಾನಾಗ
ಅಷ್ಟೊತ್ತಿಗೆ ಸಿಳ್ಳನೆ ಸೀಟಿ ಹೊಡೆದು ಮುಗಿಬಿದ್ದಾರ ಬಂಟಗಾಗ
ಬಟ್ಟ ಬರೇ ಮೈಲೆ ರಾಯಣ್ಣನ ಬಿಗಿ ಬಿಗಿದು ಕಟ್ಟತಿದ್ದರಾಗ
ಅಷ್ಟಹೊತ್ತಿಗೆ ಗೌಡರು ತಾವು ಮಸಲತ್ತು ಮಾಡಿ ಕುಂತಾರಾಗ
ರಾಯಣ್ಣನ ಕೊರಳ ಮ್ಯಾಗ ಇಟ್ಟಾರ ಹತಿಯಾರ ಆಗಿಂದಾಗ
ಆತಗೊಂತ ಗಜವೀರಾ ತಾನು ಬೆನ್ನ ಹತ್ಯಾನು ರಾಯಣ್ಣಗಾಗ
ಹೊತ್ತ ತಂದಾರ ರಾಯಣ್ಣನ ಹೊರಸಲ ಮ್ಯಾಗ ಧಾರವಾಡಕ
ಇಂಗ್ರೇಜಿ ಸಾಹೇಬನ ಮುಂದೆ ಹೇಳತಾರ ರಾಯಣ್ಣನ ಹಿಡಿದ ಕೌತುಕ
ಹೆಬ್ಬುಲಿ ಬಿದ್ದಾಂಗ ಬಿದ್ದಾನೋ ರಾಯಣ್ಣ ಹೊರಸಲಮ್ಯಾಗ
ಸಾಹೇಬ ಹೇಳತಾನ ಗೌಡರಿಗೆ ಗಲ್ಲ ಹಾಕರಿ ನಂದಗಡದಾಗ
ಇಂಗ್ರೇಜಿ ಸಿಪಾಯಿಗಳು ಹೊತ್ತ ಓದಾರ ನಂದಗಡಕ
ಗಜವೀರ ತಾನು ಮತ್ತ ಕೇಳತಾನ ರಾಯಣ್ಣಗಾಗ
ಈಗ ಅಪ್ಪಣಿ ಕೊಟ್ಟರ ಯಣ್ಣಾ ಗುದ್ದಿ ಕೊಲತೀನಿ ನೆತ್ತಿಮ್ಯಾಗ
ಇಂದಿಗೆ ತೀರಿತು ನಮ್ಮ ಋಣ ದೇಶಕೀಗ ಗಜವೀರಾ
ನೀ ಚಿಂತಿ ಮಾಡಬ್ಯಾಡೋ ನನ್ನ ಸಾವಿಗೆ ತಮ್ಮಾ ಈಗಾ
ಪಿರಂಗ್ಯಾರನ ಹೊಡೆಯುದಕ ಹುಟ್ಟತಾರೋ ಮನಿ ಮನಿಗಿ ವೀರರಾ
ಇಷ್ಟ ಹೇಳಿ ಗೌಡರಿಗೆ ಹೇಳತಾನ ದೇಶದ್ರೋಹಿಗಳು ನೀವೀಗಾ
ನಿಮ್ಮನ ಮುಟ್ಟೊದಿಲ್ಲೋ ಗಾಳಿ, ಬೆಂಕಿ, ನೀರ, ನೆಲಾ, ಪ್ರಾಣಿ ಪಕ್ಷಿಗಳಾ
ನಿಮಗ ಜಾಗವಿಲ್ಲೋ ಸ್ವರ್ಗದಲ್ಲಿ ಗತ್ತಮ್ಯಾಗ ಇರುದಕಾ
ಆಗ ರಾಯಣ್ಣನ ಗಲ್ಲಕ ಕೊಡತಾರ ಗಡದಾಗ\

||ಇಳುವು||

ತನ್ನ ಬಂದೂಕ ಹೊಳಸಿ ಎದಿಗಿ ಹೊಡಕೊಂಡಾನ ಗಜವೀರಾಗ
ಬಿಚ್ಚಗತ್ತಿ ಚನಬಸಪ್ಪ ಸೇವಾ ಮಾಡಾಕ ಬಂದಾನಾಗ
ಒಣಾದೊಂದು ಆಲದ ಟೊಂಗಿ ಅವನ ಗೋರಿ ಮ್ಯಾಗ ಊರ‍್ಯಾನಾಗ
ಸಂಗವಳ್ಳಿ ಮೋದಿನ ಸಾಬ ಸಾರಿ ಹೇಳತಾನ ದೇಶದಮ್ಯಾಗ
ಅವರ ಸುಂದ ಮುಗದೀತರೆಪ್ಪಾ ನಂದಗುಡದ ಗಿಡದ ಬುಡದಾಗ
ದಾತರಿಲ್ಲದಂತಹ ಜಗಳ ಯಾತಕಪ್ಪ ರಾಯಾ ನಿನಗ
|| ಬೆಳಗಾಂವ ಜಿಲ್ಹಾ ಪೈಕಿ ….. ೧೯ನೆಯ ಚೌಕ ||

ರಚನೆ :
ಮೋದಿನಸಾಬ
ಕೃತಿ :
ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ