ದೇವ ದೇವ ಗುರು ನಾಮನ  ಸ್ಮರಿಸುತ |
ಹೇಳುವೆ ಕೇಳಿರಿ ಮುಂದಿನ ಕಥನವನು |
ವೀರ ಕೇಸರಿ ರಾಯಣ್ಣನ ಚರಿತ್ರವನೊ |
ಜನ್ಮ ಸ್ಥಾನವ ಸಂಗೊಳ್ಳಿ ಗ್ರಾಮವನೊ ||

ಬೆಳಗಾಂವಿ ಜಿಲ್ಹಾ ಸಂಪಗಾಂವಿ ತಾಲೂಕ |
ಸನ್ನ ಹಳ್ಳಿ ಸಂಗೊಳ್ಳಿ ಗ್ರಾಮವನ್ನು |
ತಾಯಿ ಕೆಂಚವ್ವನ ಗರ್ಭದಲಿ ಜನಿಸಿದನೋ |
ಕೀರ್ತಿ ಪಡೆದನೀ ಹಿಂದುಸ್ತಾನವನೊ ||

ಇಂಗ್ರೇಜಿ ಇಂಗ್ಲೀಷರು ಬಂದಾರ ನಾಡಮ್ಯಾಲ |
ನಡಸ್ಯಾರೊ ಆಗ ದರಬಾರವನೋ |
ಈನಾಮ ಜಮೀನ ಮ್ಯಾಲ ಕಾಯ್ದೆಯನೊ |
ಆಗ ಕಳಿಸ್ಯಾರೊ ಕುಲಕರ್ಣಿಗೆ ಹುಕುಮನೊ ||

ತಳವಾರ ಫಕ್ಕೀರಗೆ ಹೇಳ್ಯಾನ ಕುಲಕರ್ಣಿ |
ಕೊಟ್ಟಾನ ಕೈಯಾಗ ಲಕುಟಿಯನೊ |
ತಾಲೂಕ ಕಚೇರಿ ಸಂಪಗಾಂವಿಯನೋ |
ಸುಭೆದಾರಿಗೆ ಕೊಟ್ಟ ಹೊಡೆದ ಮುಜರಿಯನೋ ||

ಕೊಟ್ಟಾಗ ಸರಪಳಿ ತಂದಾನ ತಳವಾರ |
ಇಟ್ಟಾನ ಚಾವುಡ್ಯಗ ತಿಳಿಸಿದನೊ ಪಂಚ |
ರೈತರಿಗೆ ಕುಲಕರ್ಣಿ ಹೇಳಿದನೊ ರಕ್ತ |
ಮಾನೆವ ಮಡಿದರೊ ಅಳತಿಯನೂ ||

ಕುಲಕರ್ಣಿ ರಾಯಪ್ಪಗ ಹೇಳ್ಯಾನ |
ಕೊಡಬೇಕ ಮೂವತ್ತ ಐದು ರೂಪಾಯಿ |
ಹಪತೆಯನೂ ಯಾರು ಕೊಟ್ಟಿಲ್ಲ ರೊಗನ್ನರ |
ರಶವನೊ ಆಗ ಬಂದಾರ ನದಿಯ ದಂಡಿಯನೋ ||

ಜಳಕ ಮಾಡ್ಯಾನ ಆಗ ಬಿಟ್ಟಾನ ಪಂಜಿ |
ಒಗಿಯಲೆ ರಾಯಾ ಹೋಗಿ ಪಂಜಿಯನು |
ತೋಸಿ ಒಗದಾನೊ ಮಾರಿಗಿ ಪಂಜಿಯನೂ |
ಎಂಥ ಸೊಕ್ಕಿನ ಕುರುಬಲೆ ಅಂದಿದನೊ ||

ಏನ ಅಂದಿಲೆ ಮಂಡ ಹಾರವಾ ಹಿರಿದಾನ |
ವರಿಯಿಂದ ಖಡ್ಗವನೂ ವದ್ದ ಕೆಡದೇನ |
ತಗದೇನ ರುಂಡವನೋ ಇಷ್ಟ ಕೇಳಿ
ಕುಲಕರ್ಣಿ ಹೌಹಾರಿದನೊ ||

ಓಡುತ ಬಾಳಪ್ಪ ಬರಮೈಯೆ ಬಕತೇಲಿ |
ಹಿಡಿದಿತ್ತ ಪಂಜಿಯ ರಾಡಿಯನೊ |
ಆಗ ಗದಬಡಿಸಿ ಹೊಕ್ಕ ಊರವನೋ |
ಬೆನ್ನತ್ತಿ ತಿರುವಿದನ ರಾಯಪ್ಪನೊ ||

ಗುಡುಗಿ ಚೆನ್ನ ತೊಟ್ಟ ಹಚ್ಯಾನ ಕ್ಯಾಂವಿ |
ಮುಂಡಾಸ ಸುತ್ತಿ ಬಿಟ್ಟ ಚಮನವನೋ |
ಡಾಲ ಹಿಡಿದಾನ ಕೈಯಾಗ ಖಡ್ಗವನೋ |
ದೇವಾಂಶ ದೇವಿ ವರ ಪಡಿದವನೋ ||

ಕೊಟ್ಟ ಕುಲಕರ್ಣಿ ಕಳಿಸಿ ಕೊಟ್ಟಿದಾನ |
ಮೋಸ ಮಾಡಿ ಕೈಯಾಗ ಲಕುಟಿಯನೂ |
ಸಂಪಗಾಂವಿಗೆ ಹೋಗುವ ಚ್ಯಾಕರಿನೊ |
ಸುಭೆದಾರಗ ಕೊಡಬೇಕ ಚೀಟಿಯನೂ ||

ಸುಭೆದಾರನ ಕೈಯಾಗ ಕೊಟ್ಟಾನ ಲಕುಟಿ |
ಓದಿಕೊಂಡು ಆದಾನ ಕೋಪವನೋ |
ವಿಚಾರ ಇಲ್ಲದ ಹಾಕ್ಯಾನ ತುರಂಗನೊ |
ಇನ್ನ ಕೇಳಿರಿ ಮುಂದಿನ ಲೋಕವನು ||

ತಾಯಿ ಕೆಂಚವ್ವನ ಕರಿಸ್ಯಾನ ಕುಲಕರ್ಣಿ |
ದುಬ್ಬದ ಮ್ಯಾಲ ಕಲ್ಲ ಹೊರಸಿದನೊ |
ಈಗ ಕೊಡಬೇಕ ರೂಪಾಯಿ ಹಪತೆಯನೂ |
ಬೆಳವಡಿ ವೆಂಕನಗೌಡ ಆಗ ಬಿಡಿಸಿದನೂ ||

ಮರದಿವಸ ಆತ ಹೇಳ್ಯಾನ ಸುಭೆದಾರ |
ಕೊಡಬೇಕ ಜಾಮೀನ ಬಿಡುವೆನು |
ಆಗ ರಂಗನಗೌಡ ಜಾಮೀನ ಆಗಿದಾನೊ |
ಆಗ ಬಂದಾನ ಹೊರಗ ಸಾರಿ ಹೇಳಿದಾನೊ ||

ಕರಳ ಕತ್ತರಿಸಿ ಹಾಕುವೆ ಜನಿವಾರ |
ಸುಭೆದಾರಗ ಹೇಳಿದ ರಾಯಪ್ಪನೂ ಆಗ |
ಹಿಂಬರಕಿ ಜಿಗಿದ ಹನ್ನೆರಡ ಮಾರವನೊ |
ಮಧ್ಯ ರಾತ್ರಿಗೆ ಬಂದ ಸಂಗೊಳ್ಳಿ ಗ್ರಾಮವನೊ ||

ಬಿಚ್ಚಗತ್ತಿಯ ಚನ್ನಬಸಪ್ಪನ ಕರಕೊಂಡ |
ಬಂದಾರ ಬೆಳವಡಿ ಗ್ರಾಮವನೂ ಅಲ್ಲಿ |
ವಡ್ಡರ ಎಲ್ಲಪ್ಪ ಕೂಡಿದನು ಬಂದ |
ಹೊಕ್ಕಾರ ಬೆವಿನ ಕೊಪ್ಪವನೊ ||

ನಾಯಕ ಕೂಡೆರಿ ನಾಲ್ವರೂ ಧಾವಿಸಿ ಬಂದಾರ |
ಮುಕ್ಕುಂದ ಗ್ರಾಮವನು ಅಲ್ಲಿ ಜೇಡಮನಿ ಫಕ್ಕಿರಪ್ಪ |
ಕೂಡಿದನೊ ಆಗ ಬಂದಾರ ಬಲಗುಂದ
ಗ್ರಾಮವನೊ ||

ರಣಹಲಗಿ ಹನುಮಂತ ಕಾಶಿಯ ಭೀಮಪ್ಪ ಬಂದಾರ
ಚಿತವಡಿ ಗ್ರಾಮನೊ ಮೇರೆ ಸಾಹೇಬನ ಕೂಡಿ
ನೇಗಿನಹಾಳವನೊ ಬಂದ ಹೊಕ್ಕಾರ ಮುಗಸ್ತ ಗ್ರಾಮವನೊ ||

ರಾಮಶಿಂಗ ಆಗ ರಜಪೂತ ಕೂಡ್ಯಾರ |
ಕೇಳ್ಯಾರ ಗಜವೀರನ ಸುದ್ದಿಯನೂ |
ಬಂದ ಕೇಳ್ಯಾರ ಗೊದಳ್ಳಿ ಗ್ರಾಮವನೂ |
ಆಗ ಬಂದಾರ ಮರಕುಂಟಿ ದಾರಿಯನೂ ||

ವಡ್ಡರ ಎಲ್ಲಪ್ಪನ ಕರಕೊಂಡ ರಾಯಪ್ಪ |
ಬಂದಾನ ಗುಡ್ಡದ ವಾರಿಯನು ಇಳಿದ |
ಬಂದಾರು ಸರ್ವರು ಕೊಳ್ಳವನೂ |
ಮಂಜ ಮುಸಕಿತ್ತೂ ಅದ್ಭುತ ಕೊಳ್ಳವನೂ ||

ಬಿದಿರಿನ ಮೇಳಿ ಒಳಗ ಮಂಚವ ಮಾಡಿ |
ಮಲಗಿದ ಗಜವೀರ ನಿದ್ದಿಯನೂ ಆಗ |
ನೋಡ್ಯಾನ ಮಲ್ಲಪ್ಪ ರಾಯಪನೂ |
ಕರಡಿ ಹುಲಿಗಳ ಸುತ್ತ ಮುತ್ತು ವಾಸವನೂ ||

ಹನ್ನೆರಡು ಮಣದ ಚಿಲಕತ್ತಿನಂಗಿ |
ತೊಟ್ಟಿದ್ದ ಉಕ್ಕಿಂದ ಗಜವೀರನು ಮದ್ಯಮಾಂಸದ
ಅಮಲೇರಿ ಮಲಗಿದನೊ ಆಗ ಕೂಗ್ಯಾಡಿ |
ರಾಯಪ್ಪ ಎಬಿಸಿದನೂ ||

ಎದ್ದಾನ ಗಜವೀರ ಹೇಳ್ಯಾನ ರಾಯಪ್ಪ |
ತಿಳಿಕೊಂಡ ಹಿರಿದಾನ ಖಡ್ಗವನೂ |
ಹೋಗಿ ಸುಡುವನೂ ಸಂಗೊಳ್ಳಿ ಗ್ರಾಮನೋ |
ಸಾರಿ ಹೇಳ್ಯಾನ ಪ್ರತಿಜ್ಞೆ ಮಾಡಿದನೊ ||

ರಚನೆ : ಎ.ಜಿ. ನೀಲಗಾರ
ಕೃತಿ :
ಜಾನಪದ ಝೇಂಕಾರ