ಪುಣ್ಯ ಪ್ರಭಾವದಿಂದ ಮುನೇಶ್ವರ ಅನಿಸಿಕೊಂಡ್ರ
ಖಾನಾಪುರ ತಾಲ್ಲೂಕದಲ್ಲಿ ಇರುವಂಥಾ ಹೆಸರಾ
ಚಿಕ್ಕದಿನಕೊಪ್ಪ ಅಂತ ಐತಿ ಸಣ್ಣ ಹಳ್ಳಿ ಊರಾ ||
ಶ್ರೇಷ್ಠ ಜೈನ ಧರ್ಮದಲ್ಲಿ ಹುಟ್ಟಿಬಂದ್ರ ತವನಣ್ಣ
ಅಷ್ಟೈಶ್ವರ್ಯಕ್ಕೆ ಕಡಿಮಿ ಇಲ್ಲದವರಾ
ಮೊದಲ ಮರ್ಡಿ ಅಂತ ಅವರ ಮನಿ ಅಡ್ಡಹೆಸರಾ ||

ಚಿಕ್ಕಂದಿಂದ ಅವರು ಚಿಕ್ಕದಿನಕೊಪ್ಪದೂರಾಗ
ಶೇತ್ಕಿ ಉದ್ಯೋಗದಲ್ಲಿ ಪ್ರವೀಣ ಆದವರಾ
ಶಕ್ತಿವಂತರು ಕುಸ್ತಿ ಆಡೋದರಲ್ಲಿ ಪ್ರಸಿದ್ಧ ಆದವರಾ ||
ಕುಸ್ತಿಗೆ ಹೋದಾಗ ಕೂಡಿ ಬಂತ ಅವರಿಗೆ
ಬೆಳಗೋಳ ಬೆಟ್ಟದ ಮೂರ್ತಿ ಸುಂದರಾ
ದರ್ಶನ ಆದೀತ ಬಾಹುಬಲಿ ಗೊಮ್ಮಟೇಶ್ವರಾ ||

ದರ್ಶನ ಮಾತ್ರದಿಂದ ಅವರ ಮನಸ ಬದಲಾತು
ಧಾರ್ಮಿಕ ಕೆಲಸಗಳನ ನಡಸಿದರಾ
ಸ್ವಂತ ಬಸ್ತಿ ಒಂದ ಊರಾಗ ಕಟ್ಟಿಸಿದರಾ ||
ನಿತ್ಯನೇಮದಲ್ಲಿ ಅವರು ವ್ರತಗಳ ಪಾಲನ
ನಿಷ್ಠೆಯಿಂದ ಬಿಟ್ಟೂಬಿಡದ ನಡಸಿದರಾ
ಹಿಂಗ ಮಾಡತಿದ್ರ ಮುಂದಿನ ವಿಚಿಯಾರಾ ||

ಮದಿವಿಯಾದೀತು ಮಡದಿನ್ನ ಕರತಂದ
ಸುಖವಾಗಿ ಇದ್ರ ಗಂಡ ಹೆಂಡರಾ
ತೀರ್ಥಯಾತ್ರಿ ಮಾಡೋದ ಒಳ್ಳೆ ಉಮೇದ್ವರಾ ||
ಧರ್ಮಶಾಸ್ತ್ರ ಮರ್ಮ ತಿಳಿಯಲಿಕ್ಕಿ
ಓದು ಬರಿಕಲಿತಿಲ್ಲ ಅಕ್ಷರಾ
ಹಂಗ ಅಂತಿದ್ರ ಭಗವಂತ ಜಿನೇಶ್ವರಾ ||
||ಚಾಲ|||

ತೀರ್ಥಯಾತ್ರಿ ಮಾಡುವ ಮರ್ಜಿ ಸ್ವಾಮಿ ಶಿಖರಜಿ
ಹೋಗಿದಾರ ಹೊಂಟಾ
ಕಟ್ಟಿಕೊಂಡ ರೊಕ್ಕದ ಗಂಟಾ ||
ನೋಡಿ ಮನಸಿಗಾತ ಹರುಷ ವ್ರತನೇಮ ಮಾಡ್ಯಾರ ಉಪವಾಸ
ಹುಟ್ಟಿ ಬಂದ ಜನ್ಮ ಪುಕ್ಕಟ್ಟಾ
ಸುಖಾ ಇಲ್ಲ ಇದರಲ್ಲಿ ಏಟೇಟಾ ||

ಹಿಂಗ ಹೊಳಿಯತಿತ್ತ ಆಗ ಜ್ಞಾನ ತಿಳದಾರ ಸಂಪೂರ್ಣ
ಸಂಸಾರ ಲಂಪಟಾ
ಬಿಡಬೇಕೆಂದ್ರ ಇನ್ನ ಒಕ್ಕೊಟ್ಟಾ ||

||ಏರು||

ಆತುರದಿಂದ ಶಿಖರ್ಜಿ ಯಾತ್ರೆಯನ್ನು
ಎರಡು ಸಾರೆ ಆಗ ಮುಗಿಸಿದರಾ
ಮಕ್ಕಳಾಗಿದ್ದುವ ಎರಡ ಗಂಡ ಹುಡಗೋರಾ ||
ಶ್ರೇಷ್ಠ ಜೈನಧರ್ಮದಲ್ಲಿ ಹುಟ್ಟಿಬಂದ್ರ ತವನಣ್ಣ
ಅಷ್ಟ ಐಶ್ವರ್ಯಕ್ಕ ಕಡಿಮಿ ಇಲ್ಲದವರಾ
ಮೊದಲ ಮರ್ಡಿ ಅಂತ ಮನಿ ಅಡ್ಡಹೆಸರಾ || || ೧ ||

ಹೆಂಡಿರು ಮಕ್ಕಳು ನನ್ನವರ ಅಲ್ಲಂತ ತಿಳದಾರ
ಯಾರ‍್ಯಾರು ಸಂಗಾಟ ಬರುದಿಲ್ಲಾ
ಹರದೊಗದಾರ ಮಾಯಾ ಎಂಬುವ ಜಾಲಾ ||
ಗಟ್ಟಿಮನಸ ಮಾಡಿ ಬಿಟ್ಟಾರ ಸಂಸಾರ
ಹೊಂಟಹೋದ್ರ ರಾಜ್ಯದ ಮ್ಯಾಲ
ಮನಸಿನಲ್ಲಿ ಏನು ಮೋಹಾ ಇಡಲಿಲ್ಲಾ ||

ಊರೂರ ತಿರಗುತ್ತ ಗುರುಗಳನ್ನು ಹುಡುಕುತ್ತ
ದೀಕ್ಷಾ ತಗೊಳ್ಳೊ ಹಂಬಲಾ
ಬಂದ ಮುಂದ ನಿಂತಿತ್ತ ಪುಣ್ಯೇದ ಫಲಾ ||
ಉದಗಾಂವದಲ್ಲಿ ಗುರುಗಳು ಸಿಕ್ಕಾರ
ಮಲ್ಲಿಸಾಗರ ಮುನಿ ಭೂಪಾಲಾ
ಅಲ್ಲೆ ಉಳದಾರ ಗುರುಗಳ ಹಿಂಬಾಲಾ ||

ಮುನಿಗಳ ಬೆನ್ನಹತ್ತಿ ಬೋಧಾ ಕೇಳಿಕೊಂತ
ಹಳೆ ಇಂಗಳಿಗೆ ಬಂದಾರ ಬಿಡಲಿಲ್ಲಾ
ಗುರುಸೇವಾ ಮಾಡತಿದ್ರ ಹಗಲೆಲ್ಲಾ ||
ಕ್ಷುಲ್ಲಕ ವ್ರತ ಅಲ್ಲೆ ಖಾಯಮ್ಮ ಆದೀತ
ತಿಳಿಯತಿತ್ತ ತತ್ವದ ಕೀಲಾ
ಆಗ ವಿಜಯಸೇನ ಅಂದ್ರ ಜನರೆಲ್ಲಾ ||

ಉಪವಾಸ ವ್ರತಾ ಅತಿ ಜೋರಿನಿಂದ ಮಾಡುತ್ತ
ನಸಲಾಪುರಕ ಬಂದ್ರ ಸಂಘದ ಹಿಂಬಾಲಾ
ಅಲ್ಲಿ ಐಲಕ ವ್ರತ ಆತ ಪುಣ್ಯೇದ ಫಲಾ ||
ಓದು ಬರಹ ಕಲೀಲಕ್ಕೆ ಪಾಟಿಪುಸ್ತಕ ಗಂಟ
ಕಟ್ಟಿಕೊಂಡ ತಿರಗತಿದ್ದರ ಹಿಂಬಾಲಾ
ಕಟಪಟ ಮಾಡಿ ಕಲತ್ರ ಬಿಡಲಿಲ್ಲಾ ||

||ಚಾಲ|||

ನಂದ ಅಲ್ಲ ಅಂದ್ರ ಶರೀರ ಆದ್ರ ದಿಗಂಬರ
ಶಿರಗುಪ್ಪಿಯಲ್ಲಿ
ಕಡಿತಂದ್ರ ಕರ್ಮದ ಕತ್ತಲಿ ||
ಮೊದಲಿನ ಹೆಸರು ತವನಣ್ಣ ಆಮೇಲೆ ವಿಜಯಸೇನ
ವೀರಸಾಗರ ಆದ್ರ ಇಲ್ಲಿ
ಮಿಗಿಲಾದ್ರ ವ್ರತನೇಮದಲ್ಲಿ ||

ಉದಗಾಂವ ಮುಂದ ಮಹಿಷವಾಡಿಗಿ ಮತ್ತ ಬ್ಯಾಡಗಿ
ಇಷ್ಟು ಊರಲ್ಲಿ
ಚಾತುರ್ಮಾಸ ಮಾಡ್ಯಾರ ಮ್ಯಾಲಿ ಮ್ಯಾಲಿ ||

||ಏರು||

ಮಲ್ಲಿಸಾಗರ ಗುರುಗಳ ಕೂಡ ಎಂಟ ವರ್ಷ ಇದ್ದಾರ
ಅಷ್ಟಾಣಿಕ ವ್ರತವನ್ನು ಮುಗಿಸಿದರಾ
ನಾಡಮ್ಯಾಲ ಹಬ್ಬೀತ ಅವರ ಹೆಸರಾ ||
ಶ್ರೇಷ್ಠ ಜೈನ ಧರ್ಮದಲ್ಲಿ ಹುಟ್ಟಿ ಬಂದ್ರ ತವನಣ್ಣ
ಅಷ್ಟ ಐಶ್ವರ್ಯಕ್ಕೆ ಕಡಿಮಿ ಇಲ್ಲದವರಾ
ಮೊದಲ ಮರ್ಡಿ ಅಂತ ಅವರ ಮನಿ ಅಡ್ಡಹೆಸರಾ || ೨ ||

ಗಾಡಿ ಮೋಟಾರ ಬಿಟ್ಟ ಕಾಲ ನಡಿಗಿಯಿಂದ
ಶಿಖರ್ಜಿಯಾತ್ರಿಗಿ ಹೋದಾರ ಹೊಂಟಾ
ದಣಿವ ಆಗಲಿಲ್ಲ ಅವರಿಗೆ ಏಟೇಟಾ ||
ಹೊಳ್ಳಿ ಬಂದಾರ ಬೇಗ ಊರ ಹಳ್ಳಿ ಹುಡುಕುತ್ತಾ
ಅಳವಾಡದಲ್ಲಿ ಹಾಕ್ಯಾರ ಮೆಟ್ಟಾ
ಅಲ್ಲಿ ಮಂದಿ ಪ್ರೀತಿ ಬಾಳ ಆತು ಕಟಪಟಾ ||

ಹುಂಬ ಜನರನ್ನ ಹಾದೀಗಿ ತರಬೇಕಂತ
ಬೋಧಾ ಮಾಡಿದಾರ ಸಾಕಷ್ಟಾ
ತಿಳಿಹೇಳತಿದ್ರ ಒಳಗಿನ ಗುಟ್ಟಾ ||
ಅಳವಾಡ ಮಂದೆಲ್ಲಾ ಆನಂದ ಹೊಂದ್ಯಾರ
ಹೋಗಬ್ಯಾಡ್ರಿ ಅಂತಾರ ಹೊಂಟಾ
ನಮ್ಮ ಊರ ಬಿಟ್ಟಾ ||

ಬಾಳಸಾರೆ ಅಲ್ಲೆ ಚಾತುರ್ಮಾಸಮಾಡಿ
ನಾಡಮ್ಯಾಲ ನಡದಾರ ಹೊಂಟಾ
ಕಟ್ಟಿಕೊಂಡ ಜ್ಞಾನದ ಗಂಟಾ ||
ತತ್ವದ ವಿಚಿಯಾರ ಬಿಚ್ಚಿ ಹೇಳತಾರ
ಕಸರ ಇಲ್ಲರಿ ಒಂದೀಟಾ
ಇನ್ನೂ ಹೇಳರಿ ಅಂತಾರ ಜನಾ ಮತ್ತಿಷ್ಟಾ ||

ಜಗತ್ತಿನ ಜನರೆಲ್ಲಾ ಜಯಾ ಬೇಕಂತಾರ
ಹೆಂಗ ಸಿಕ್ಕೀತು ಅದು ಪುಕ್ಕಟ್ಟಾ
ಬಾಳ ಜಡ ಐತಿ ಜ್ಞಾನದ ಗುಟ್ಟಾ ||
ಜಯಾ ಬೇಕಾದರ ಮೋಹಾ ಜೈಸಬೇಕ
ಸಾಕ ಮಾಡ್ರಿ ಈ ಲಂಪಾಟಾ
ಹಿಂಗ ಹೇಳತಾರ ಸ್ಪಷ್ಟಾ |

||ಚಾಲ||

ಕೊಡಚವಾಡ ಮುಂದ ಗಂದಿಗವಾಡ
ಮತ್ತ ತಿಗಡೊಳ್ಳಿಗಿ
ಸಂಚಾರ ಮಾಡುತ್ತ ಹೋದ್ರ ಸೀಗೀಹಳ್ಳಿಗಿ ||
ಇಸ್ವಿ ಹತ್ತೊಂಭತ್ತ ನೂರ ಐವತ್ತಮೂರ
ಚಾತುರ್ಮಾಸ ಶೀಗೀಹಳ್ಳಿಗಿ
ದರ್ಶನ ತಗೊಂಡ್ರ ಜನಾ ಅಲ್ಲೆ ಹೋಗಿ ||

ನಾಡೊಳು ನಮ್ಮ ತಿಗಡೊಳ್ಳಿ ಅತಿ ಸಣ್ಣ ಹಳ್ಳಿ
ಪದಾ ಮಾಡಿದ ಮರಿಕಲ್ಲ ಪ್ರೇಮಕ್ಕಾಗಿ
ಜಿನೇಶ್ವರ ಸ್ವಾಮಿ ಚರಣಕ್ಕೆರಗಿ ||

||ಏರು||

ವೀರ ಸಾಗರ ಮೂರ್ತಿ ಕೀರ್ತಿ ಕೇಳಿದ ಮೇಲೆ
ಹರುಷ ಆಗಬೇಕ ನೀವು ಎಲ್ಲಾರಾ
ಅವರು ದಾಟಿದಾರ ಸಂಸಾರ ಸಾಗರಾ ||
ಶ್ರೇಷ್ಠ ಜೈನ ಧರ್ಮದಲ್ಲಿ ಹುಟ್ಟಿಬಂದ್ರ ತವನಣ್ಣ
ಅಷ್ಟ ಐಶ್ವರ್ಯಕ್ಕ ಕಡಿಮಿ ಇಲ್ಲದವರಾ
ಮೊದಲ ಮರ್ಡಿ ಅಂತ ಅವರ ಮನಿ ಅಡ್ಡಹೆಸರಾ || ೩ ||

ರಚನೆ : ಶರಣಪ್ಪವಾಲಿ
ಕೃತಿ :
ಶರಣ ಸಂಸ್ಕೃತಿ