ಇಲಿಯಾಗಿ ನೂರು ವರ್ಷ ಬಾಳೂದು ಬ್ಯಾಡಂತ
ಹುಲಿಯಾಗಿ ಮೂರು ವರ್ಷ ಬಾಳೂದು ಪಾಡಂತ
ವೀರ ಟೀಪು ಹೇಳಿದ ಮಾತ
ಅವನಿಗೆ ಒಲದಿದ್ದ ರಂಗನಾಥ ||
ಹಿಂದು ಮುಸ್ಲಿಂ ಒಂದೇ ಅಂತ
ನೀತಿ ಮಾರ್ಗವ ಅರಿತ
ಪ್ರಜರಲ್ಲಿ ತಾ ಬೆರತ
ಸುಖ-ದುಃಖವನ್ನ ಅರಿತ
ಟೀಪು ಮಾಡಿದ ಪ್ರಜಾಹಿತ
ಅವನಿಗೆ ಒಲದಿದ್ದ ರಂಗನಾಥ|| ೧ ||

ರಾಜಕಾರಣ ಧೂರ್ತ
ಸಮರದಲ್ಲಿ ಸಮರ್ಥ
ಭುಜಬಲ ಸಾಮರ್ಥ್ಯ
ದೇಶದಲ್ಲಿ ಪ್ರಖ್ಯಾತ
ದೇಹ ದೇಶ ಭಕ್ತಿ ಭರಿತ
ಅವನಿಗೆ ಒಲಿದಿದ್ದ ರಂಗನಾಥ|| ೨ ||

ಕಂಪನಿ ಸರಕಾರ ಬಂತ
ನಮ್ಮ ಸೈನ್ಯ ನಿಮ್ಮಲ್ಲೆಂತ
ಕರಾರಿಗೆ ಒಪ್ಪಂತ
ಭಾಳ ಒತ್ತಾಯ ತಂತ
ಟೀಪು ಒಪ್ಪುದಿಲ್ಲ ಅಂತ ನಿಂತ
ಅವನಿಗೆ ಒಲಿದಿದ್ದ ರಂಗನಾಥ|| ೩ ||

ಇಂಗ್ಲೀಷರೊಡನೆ ಕಾದುತ್ತ
ದೇಶ ರಕ್ಷಣಾ ಮಾಡುತ್ತಾ
ವೀರತನ ತೋರುತ್ತ
ವೈರಿಯನ್ನು ಹಣಿಯುತ್ತ
ಟೀಪು ಕುಣಿಯುತ ನಿಂತ
ಅವನಿಗೆ ಒಲಿದಿದ್ದ ರಂಗನಾಥ|| ೪ ||

ದೇಶದ್ರೋಹಿ ಮಾಡಿದ ಘಾತಾ |
ಮೈಸೂರ ಹುಲಿ ತಾ ಸೋತಾ |
ಮಕ್ಕಳನ್ನು ಅಡವು ಇಡುತಾ |
ಖಡ್ಗ ಹಿರಿದು ಕಾದುತ ನಿಂತಾ |
ಟೀಪು ಪ್ರಾಣ ಬಿಟ್ಟ ಕಾದುತ್ತ |
ಅವನಿಗೆ ಒಲಿದಿದ್ದ ರಂಗನಾಥ|| ೫ ||

ಹಾಡಬೇಕ ವೀರ ಗೀತ
ಮಾಡಬೇಕ ದೇಶ ಹಿತ
ಒಲಿತಾನ ರಂಗನಾಥ
ಇದನ್ನ ಕೇಳು ನೀ ಮತ್ತ
ನುಡಿಯುತ್ತ ನುಡಿಯುತ್ತ |
ಶ್ರೀರಂಗನಾಥಗೆ ನಮಿಸುತ್ತ|| ೬ ||

ರಚನೆ : ಎ.ಜಿ. ನೀಲಗಾರ
ಕೃತಿ :
ಜಾನಪದ ಝೇಂಕಾರ