||ಲಾವಣಿ||

ಶೂರ ಬಾಬಾ ಸಾಹೇಬ್ನ  ಸತ್ಯುಳ್ಳ ರಾಜ್ಯವ
ಸೂರೆ ಮಾಡ್ಯಾರೊ ಫಿರಂಗೇರು
ಮೀರಿದ ನರಗುಂದದ ಹೆಸರನ್ನ ಅಳಿಸ್ಯಾರೊ
ಈ ಭೂಮಿ ಮ್ಯಾಗಿಂದ ಫಿರಂಗೇರು
ಕೆಂಪ ಕುಂಪಣಿ ದೊರೆಗಳಿಗೆ ಯಾರು ಸರಿ
ಅವರ ಮೀರಿದ ಮೋಸಕ್ಕ ಹೌಹಾರಿ
ತಮ್ಮ ರಾಜ್ಯವ ಕಳಕೊಂಡು ಕುಂತಾರ್ರಿ
ಇನ್ನ ಬಂತೆಮಗ ವನವಾಸ ಅಂತಾರ್ರಿ
ಕೆಂಪನ್ನ ಮೋರೆಯವರ ರಾಜ್ಯದಾಗ್ರಿ | ಕೆಂಪ ಕುಂಪಣಿ ……

||ಚಾಲ|||

ಉತ್ತರದಾಗ ಎದ್ದಿತೊ ಬಂಡ ಮತ್ತ ಅದ ಕಂಡು
ಫಿರಂಗೇರ ದಂಡು ಹೊರಟಿತ್ತೊ ಶಸ್ತ್ರ ಕಸಗೊಂತ
ಊರು ಕೇರಿ ಪ್ಯಾಟಿ ಕ್ವಾಟಿಗಳು ಎಲ್ಲ
ಒಂದು ಉಳಿಲಿಲ್ಲ ಬಿಡದೆ ಹುಡುಕಿದ್ರಲ್ಲ
ಎಲ್ಲಿ ನಿಮ್ಮ ಬಿಲ್ಲು ಬಾಣ ಕಠಾರಿ ಕತ್ತಿ
ಕುಡಗೋಲ ಕೊಡ್ಲಿ ಎಂದೆನುತ
ಸಾರಿ ಇಳಿದು ಬಂದಾರೊ ಧಾರ‍್ವಾಡಕ
ಇನ್ನು ಈ ಸೀಮ್ಯಾಗ ನಮ್ಮ ಬ್ಯಾಟಿ ಎಲ್ಲೈತಿ
ಎಂದು ಮೂಸಿ ಮೂಸಿ ನೋಡ್ಯಾರೊ
ಇಲ್ಲೆ ಇದೆ ನರಗುಂದ ನಮಗ ದಿಗ್ಬಂಧ
ವೆನುತ ಹಾರ‍್ಯಾಡಿ ಹಾಡ್ಯಾರೊ
ಪೋಲೀಸ ಸಾಬ ತನ್ನ ಜನರ ಕರದಾನೊ
ಸ್ವಾರನಾಗಿ ಬಂಟ ಹೊಂಟಾನೊ
ಪುಂಡರ ಮನ್ಯಾನಶಸ್ತ್ರ ಹಿರಿದಾನೋ
ಕದ್ದು ಮುಚ್ಚಿಟ್ಟವರ ಪ್ರಾಣ ಹಿಂಡ್ಯಾನೊ
ಏನಂತ ಹೇಳಲಿ ಅವನ ಕಲಿತನ
ಶಕ್ತಿ ಇಲ್ಲೊ ಮಾಡುದಕ ವರ್ಣನ
ಬಂದು ನಿಂದಾರೊ ನರಗುಂದ ಸೀಮ್ಯಾಗ
ಬಿಟ್ಟು ಬಿಡದೆ ನೋಡ್ಯಾರ ಭಾರಿ ದುರ್ಗಕ್ಕ
ಆಶೆಬಿಟ್ಟು ಕುಂತಾರೊ ನೆಲಕ

||ಏರು||

ಭಾಸ್ಕರ ರಾಜನ ಕರೆಯ ಕಳವ್ಯಾರೊ
ಶರಣು ಬಾರೆಂದ್ನಯದಿ ಹೇಳ್ಯಾರೊ
ಮದ್ದು ಗುಂಡು ಕತ್ತಿ ಕಠಾರಿ ಬಿಟ್ಟುಕೊಂಡಂದಾರೊ
ಬಿಡದೆ ಮುಚ್ಚಿಟ್ರ ಕೇಡೆಂದಾರೊ
ನಿನ್ನ ಧಣೇರ ಮಾತ ಕೇಳೆಂದಾರೊ
ಸೀಮ್ಯಾನ ಕೈದುಗಳನ್ನೆಲ್ಲ ಒಪ್ಪಿಸಿ ಬಿಡಬಾರೊ
ಕುಂತರರಮನ್ಯಾಗ ನಿನಗಾವ ಹಿತವಿಲ್ಲ || ೨ ||

||ಚಾಲ|||

ಒಗರಿನ ಮಾತಿಗೆ ಸಿಡಿದು ನಿಂತ ಬಾಬಾಸಾಹೇಬ ಸರದಾರ
ಕಿಡಿಕಿಡಿಯಾಗಿ ನುಡಿದಾನ ನಿಮ್ಮ ಸರಕಾರವಿಲ್ಲ ದರಕಾರ
ಆದ್ರ ತಡದು ಗುಡುಗ್ಯಾನ ಆಗ್ಲಿ ನಿಮ್ದೆ ಕಾರಭಾರ
ಹೊಂಟು ಬಿಟ್ಟಾನೆನುತ ಮೌನವೀಗಾಧಾರ
ನಂಜಿನ ಸವಿಕಂಡ ಬಾಬಾಸಾಹೇಬ
ಥೇಟಾಗಿ ಬಂದಾನೊ ಅರಮನಿಗಿ | ಮಂತ್ರಿ
ರಾಘೋಬ್ನ ಕರಸ್ಯಾನೊ ಚಂದಾಗಿ | ಉತ್ತರ
ಏನಂತ ಕಳುಹಿಸಬೇಕಾಗಿ | ಮತ್ತೆ
ಹೋಗಬಾರ‍್ದು ಅಭಿಮಾನ ಮುಕ್ಕಾಗಿ | ಅಂತ
ಆಲೋಚ್ನಿ ನಡೆಸ್ಯಾರೊ ಹಿರಿದಾಗಿ | ಕೊಟ್ಟ
ಭಾಷೆಯ ತಾಪಕ್ಕ ಗುರಿಯಾಗಿ

||ಏರು||

ಮದ್ದು ತೋಫು ಗುಂಡು ನಮ್ಮವೆಲ್ಲ
ಕತ್ತಿ ಕಠಾರಿ ನಿಮಗ ಕೊಡುದಿಲ್ಲ
ಕೇಳೊ ಕೇಳೊ ಮಾತು ಬೇರಿಲ್ಲ
ಬಂದು ಬಂದೇ ಬಿಡುದು ಜನವೆಲ್ಲ
ಸುಮ್ನೆ ಕೈಗೆ ಸಿಗದೆ ತೊಲಗಲ್ಲ
ಎಂದು ಖಡಾಖಡಿಯಾಗಿ
ಜವಾಬ ಕಳಸ್ಯಾನೊ ಹೊರಗ ನಿಂತ ಸಾಹೇಬಗ
ಸಿಡಿಲಿನಂಥ ಜವಾಬನ್ನ ನೋಡಿ
ಪೋಲೀಸ ಸಾಹೇಬ ಆದ ಕಿಡಿಕಿಡಿ
ಸಿಡಿರು ನುಡಿದಾನ್ಮೀಸಿ ಹುರಿಮಾಡಿ
ಹಿಡಿದು ತರಿಸೇವ ನಿನ್ನ
ಜಡಿದು ಬಿಟ್ಟೇವಿನ್ನ
ಕೆಡೆದು ಕುಡಿಸೇವ ನಿನಗ
ಕತಕತಾ ಕುದಿವ ಸೀಸ | ಕರುಣೆ ಇಲ್ಲಿಲ್ಲ ಲವಲೇಶ
ಹುಲ್ಲುಕಡ್ಡಿ ನೀನು ಬೆಂಕಿಯೊಡನಾಟ
ಯಾಕ ಹುಚ್ಚಾಟ | ಭೂಮಿ ನುಂಗುವ-ಮಾಟವೆಂಥ ಸೆಣಸ್ಯಾಟ
ಇದ್ರ ಬುದ್ಧಿ ನಿನಗ ಏನಾದ್ರ
ಶರಣು ಬಂದು ಬಿಡಬಾರೋ | ಮುಗಿತಲ್ಲೊ ನಿನ್ನ ಅವತಾರ
ಬಿಡದ ಸುದ್ದಿ ಕಲೆಕ್ಟರಗ ತಿಳಿಸ್ಯಾರೊ
ಆಗಿಂದಾಗ ರಾಣಗಿರುವ್ಯಾರೊ
ಫರ್ಮಾನ ಹೊಂಡಿಸಿ ಮ್ಯಾನ್ಸನ್ನ ಕಳುವ್ಯಾರೊ
ಬಾಬಾಸಾಹೇಬ್ನ ಕಟ್ಟಿ ಹಿಡಿತಾರೊ
ಎಂದದಕ ಹೊರಟ ಮ್ಯಾನ್ಸನ್ | ನೆನೆನೆನೆದು ತನ್ನ ಕೆಲಸವ

||ಚಾಲ|||

ಒಂದೆ ಉಸುರಿನಿಂದ ಬಂದಾನೊ ರಾಮದುರ‍್ಗಕ
ರಾವಸಾಹೇಬನ್ನ ಕಂಡಾನೊ ಮ್ಯಾನ್ಸನ
“ಮರಣ ತಪ್ಪಿಸಿಕೊ ಶರಣಾಗಿ  ಹೊರಟ್ಹೋಗೊ
ಧಾರ‍್ವಾಡಕೆ’’ಂದಾನೊ ಮ್ಯಾನ್ಸನ
ತಕ್ಷಣ ಸಮ್ಮತಿಯಿತ್ತಾನೊ ರಾವಸಾಹೇಬ
ಪಿಸಿನಕ್ಕು ಹೊಂಟಾನೊ ಮಾನ್ಯನ
ನರಗುಂದ ದಾರ‍್ಯಾಗ ಬೀಡು ಬಿಟ್ಟಾನಲ್ಲೆ
ಸುರೆಬಾನ ಊರಾಗ ಮ್ಯಾನ್ಸನ
ಹದಿನೆಂಟು ಪೋಲಿಸರ ಬಲವಾದ ಕಾಪಿನ
ಮೇಣೆದಾಗ ಮಲಗ್ಯಾನೊ ಮ್ಯಾನ್ಸನ
ದಾರಿಯ ದಣಿವಿಗಿ ಕಣ್ಣೆಳೆದು ಕೊಂಡಾನೊ
ಗಾಢ ನಿದ್ರ್ಯಾಗಿದ್ದ ಮಾನ್ಸನ

||ಏರ||
ನೂರಾರ ಜನರ ಮ್ಯಾಳ ತಂದಾನೊ
ಬಾಬಾಸಾಹೇಬ ಬಂದೆರಗ್ಯಾನೊ
ಪೋಲೀಸರನ ಕಡಿದು ಚಲ್ಯಾನೊ
ಅಬ್ರಕೇಳಿ ಮ್ಯಾನ್ಸನ ಎದ್ದಾನೊ
ಕಿಡಿಕಿಡಿ ಆಗಿ ಸಿಡಿದು ನಿಂತಾನೊ
ಆದ್ರೇನು ಹತ್ತು ಹುಲಿ ಸುತ್ತ | ನಡುವೊಂದು ಕುರಿಯು ಸಿಕ್ಕಬಿದ್ದು
ಸುತ್ತ ಮುತ್ತ ಗುಂಡ ಹಾರಿಸುತ್ತ | ಮ್ಯಾನ್ಸನ ಕೂಗಿದರೇನಾಯ್ತ
“ಹಿಡಿದವನ ಕೆಡಹಿಕೊಚ್ಚುತ್ತ | ನುಚ್ಚು ನೂರು ಮಾಡಿರೆನ್ನುತ್ತ
ಬಾಬಾಸಾಹೇಬ್ನ ಮಾತಕೇಳುತ್ತ | ಮುಗಿಸ್ಯಾರ ಅವರ ರಾತ್ರಿಹೊಡೆದು[ಏರ]
ಮ್ಯಾನ್ಸನ ಸಾಹೇಬ್ನ ರುಂಡ ಹಿಂಡಕೊಂಡ
ಬಂದ್ರ ಮೆರೆಕೊಂತ | ಊರ ಜನರ ನಡುವೆ ಕುಣಕೊಂತ
ವೈರಿ ರುಂಟ ಕಟ್ಟಿ ಅಗಸೀಗಿ ಊರಿಗ್ಹಬ್ಬ ಮಾಡಿಬಿಟ್ಟರವರಂತ|| ೪ ||

||ಚ್ಯಾಲ||
ಮರುದಿನ ಊರಗಸಿ ಮುಚ್ಚಿಸಿ ಬಿಟ್ಟಾನೊ
ಕಾವಲಿಗಿಟ್ಟಾನೊ ಬಂಟರನ
ಯುದ್ಧದ ಸಿದ್ಧತೆ ಬಾಬಾಸಾಬ ನಡೆಸ್ಯಾನೊ
ದರ್ಬಾರ ಕರಸ್ಯಾನೊ ತನ್ನವರನ
ಬಂದಂಥ ಜನರಿಗೆ ತಾಂಬೂಲವಿತ್ತಾನೊ
“ಕಾಯಲಿಕೆ ನರಗುಂದ ಮಾನವನ
ಕಡಿಕಡಿದು ಒಟ್ಟಿರೊ ವೈರಿನ್ನ’’ ಅಂದಾನೊ
“ಮೆರೆಯಿಸಿರಿ ನಿಮ್ಮ ಅಭಿಮಾನವನ’’
ಸಂದೇಹವಿಂದೇಕೆ ಧಣಿಗಳಿಗೆ ಬಂದಿತೊ
ಮುಕ್ಕಿ ನೀರ‍್ಗುಡಿವೆವೋ ಫಿರಂಗೇರ‍್ನ’’
ಎಂದು ಭೂಮಿ ಮುಟ್ಟಿ ಆಣಿಮಾಡಿ ಗಟ್ಟಿ
ಬಾಬಾಗ ಇತ್ತರೋ ಧೈರ‍್ಯವನಾ
“ಹೇಡಿಕೇಡಿಗಳಿವರು ಕದನವ ಗೆದ್ದವರೆ?
ಕೊಂಡರೋ ಭೂಮಿಯನತಿ ಮೋಸದಿ
ದಣಿಸಿ ಕುಣಿಸಿ ಬಿಟ್ಟು ರಣಕೆ ದಿಗ್ಬಲಿಕೊಟ್ಟು
ಮೆರೆಯೋಣ’’ವೆಂದಾನೋ ಸಂತೋಷದಿ
ಉಕ್ಕುಕ್ಕು ಉತ್ಸಾಹದಿಂದಲಿ ದರುಶನ
ಪಡೆದಾನೊ ಕುಲಸ್ವಾಮಿ ವೆಂಕಟೇಶನ
ಸಾಷ್ಟಾಂಗ ಹಾಕ್ಯಾನೊ ತಾರಿಸೊ ಎಂದಾನೊ
ಕಾರುಣ್ಯದಿಂದಲಿ ರಿಪು ಬಂಧನ
ನರಗುಂದ ಕ್ವಾಟಿ ಸುತ್ತಿ ನೋಡ್ಯಾನೊ
ಶಸ್ತ್ರಾಸ್ತ್ರ ಸಜ್ಜ ಮಾಡ್ಯಾನೊ
ಬಂಟರಿಗೆಲ್ಲ ಮೇಜವಾನಿ ಮಾಡಸ್ಯಾನೊ
ಕಂಡವರ ತೋಫಿನಾರ‍್ಭಾಟ ಭೂಮಿ ನಡುಗಿ ನಡುಗಿ ಹೋತ್ಯಕಟ ||

||ಚಾಲ|||

ಮ್ಯಾನ್ಸನ ಸಾಹೇಬನ ಹತ್ರ
ಸಿಕ್ಕ ಕಾಗದ ಪತ್ರ ನೋಡಿ ಒತ್ರ
ದಿಂದ ಓದ್ಯಾನೊ ಕುಂತು ವಾಡೇದಾಗ | ಘಾತವಾಯಿತೆಂದಾನೊ ಮನ |
ರಾವಸಾಹೇಬ ಫಿತೂರಾಗ್ಯಾನ
ನಮ್ಮ ಸಂಚನ್ನೆಲ್ಲ ತಿಳಿಸ್ಯಾನ
ಕೇಳಿ ಮ್ಯಾನನಸಾಂಬ ಬಂದಾನ
ನರಗುಂದ ಕ್ವಾಟ್ಯಾಗ ಫಿತೂರಿ ನಡಸ್ಯಾನ
ಬನ್ಯಾಬಾಪು ಕೃಷ್ಣಾಜಿಪಂತನ್ನ
ಮಳ್ಳಮಾಡಿ ಒಡಕೊಂಡಾನ
ಶಗಣಿ ಮದ್ದಿನಾಗ ಕೂಡಿಸ್ಯಾನ ಕ್ವಾಟ್ಯಾನ ಮದ್ದು ಗೊಬ್ಬರ
ಬೇರಿಗೆ ಕೊಡಲಿ ಹಾಕ್ಯಾನ
ಕದನ ಹ್ಯಾಂಗ ನಡೀಬೇಕಿನ್ನ

||ಏರು||

ಹಿಂತೆಗೆಯಬೇಕ ಹ್ಯಾಂಗಿನ್ನ | ಅಂತ ಒಳಗ ಬೆಂದು ನೊಂದಾನ

||ಚಾಲ|||

ಕುದಿಕುದಿ ಕುದಿದು ಅಂತಾನ
ಬನ್ಯಾ ಬಾಪು ಕೃಷ್ಣಾಜಿ ಪಂತನ್ನ
ಕಟ್ಟಿ ತರ್ರೀಗ ಬಿಡಬ್ಯಾಡ್ರಿನ್ನ
ಎಂದು ದೂತರ‍್ನ ಬ್ಯಾಗ ಕಳವ್ಯಾನ
ಕಾಲಮಿಂಚಿ ಹೋಗಿ-ಬಿಟ್ಟಿತ್ತು | ಓಡಿ ಹೋದ್ರೊ ಮಾಡಿ ಮಸಲತ್ತು
ಬಾಬಾಸಾಹೇಬ್ಗ ಬಂದಿತಾಪತ್ತು | ಇನ್ಹ್ಯಾಂಗ ದಾಟಬೇಕು ಕುತ್ತು
ಕುಂತು ಯೋಚಿಸ್ತಾನ ಭಾಳಾಹೊತ್ತು | ಇನ್ನೇನ ಮಾಡಬೇಕು ಗತ್ತು

||ಏರು||

ಕೊನೆಗೆ ನಿರ‍್ಧಾರಕ್ಕ ಬಂದು ಬಿಟ್ಟಾನ
ಎದುರ್ಸಾಕ ರಣದಾಗ ಫೀರಂಗೇರ‍್ನ
ಸಡ್ಡ ಹೊಡದು ನಿಂತಾನೊ | ತನ್ನ ದೈವ ಪರೀಕ್ಷಾಕ

||ಚಾಲಾ||
ಅರಮನೆಗೆ ಬಂದಾನ ಬಾಬಾಸಾಹೇಬ
ರಾಣಿನ್ನ ನುಡಿಸ್ಯಾನ ಕೌತುಕದಿ
ಚಿಂತೆಯ ಕಂತ್ಯಾಕ ಜೀವದ ಚಿಂತ್ಯಾಕ
ಈಶ ಸಂಕೇತಕ್ಕ ತಲೆ ಬಾಗಿದಿ,
ನೊಂದು ಬೆಂದ ರಾಣಿ ಕುಂದದೆ ಕೇಳ್ಯಾಳೊ
ನಮಗೇನು ಗತಿಯಿನ್ನು ಮರುಗಿದರೆ?
ಭಾರಿ ಫಿರಂಗೇರ ಕಾಲ್ಕೆದರಿ ಕದನವ
ನಾವಾಗಿ ಬೇಕಾಗಿ ಹೂಡಿದರೆ
ದೇವರ ದಯೆಯಿಂದ ಸಕಲ ಬೆಂಬಲದಿಂದ
ಹೋರಾಟಕಿಳಿದೇನೆ ಮುದ್ದು ಖಣಿ
ಹೇವದಿ ಹೋರಾಡಿ ವೈರಿನ್ನ ಈಡಾಡಿ
ಸಂತೋಷ ತಾರೆಮಗೆ ಶೂರಮಣಿ,
ಎಂದು ತಾವs ಮಾತನಾಡ್ಯಾರ
ಮುಂದಿನ ಯೋಚನಿ ಮಾಡ್ಯಾರ

||ಚಾಲ|||

ಧಾರವಾಡ ದೊರೆಗಳು ಮ್ಯಾನ್ಸನ ಕಗ್ಗೊಲೆಯ
ಸುದ್ದಿಯ ಕೇಳ್ಯಾರೊ ಹೌಹಾರಿ
ಕಿಡಿಕಿಡಿಯಾಗುತೆ ರಾಣಿನ್ನ ಕೇಳ್ಯಾರೊ
ದಂಡನೆ ದ್ರೋಹಿಗೆ ಏನ್ಹೇಳಿರಿ
ರಾಣಿ ದರ್ಬಾರಾದಾಗ ಮಂತ್ರಿಮಂಡಳದಾಗ
ಮಾಡ್ಯಾಳೊ ಸಾರಾಸಾರಾ ವಿಚಾರ
ಕೆಂಗಿಡಿ ಕಾರುತ ಹೇಳ್ಯಾರಾ ರಾಣಿಗಿ
‘ನಮ್ಮೊಡಲ ತಾಪವ ನೀವ್ಬಲ್ಲಿರಾ’
ಸೇಡು, ತಾಯೆ, ಸೇಡು ಬೇಕು ಸೇಡು ಮತ್ತೇನಿಲ್ಲ
ಮುರುಕದ ಮಾತೀಗ ಬೇಕಾಗಿಲ್ಲ
ವೀಳ್ಯೆವ ಕೊಡು ಬ್ಯಾಗ ಸೈನ್ಯವ ಕಳುವೀಗ
ದಾಸನ್ನ ದಂಡಿಸಿ ಬರಬೇಕಲ್ಲ.

||ಯೇರ|
|ಹೊಂಟಿತೊ ರಾಣಿಯ ಫರ್ಮಾನ | ಮತ್ತ
ಹೊರಟಾರೊ ನರಗುಂದಕಾಗಿನ್ನ | ಕೆಂಪು
ಸೈನಿಕರು ಕರ‍್ನಲ ಸಾಹೇಬನ | ಮುಂದ
ಸಾಗೂತ ಬಿಟ್ಟಾರ ಬೀಡನ್ನ | ಕಂಡು
ಗುಂಡಿಗೆ ಒಡದಿತೊ ಬಾಬಾನ | ನಿಂತು
ನೋಡ್ತಾನೊ ಬಿಟ್ಬಟ್ಟ ಕಣ್ಕಣ್ಣ
ವೆಂಕಟರಮಣಗೆರಗಿ ಬೇಡ್ತಾನೊ | ತನ್ನ
ಜನರ ಬಿಡದೆ ಕರಸ್ಯಾನೊ | ದಾಳಿ
ಮಾಡಿರೆಂದು ಹುರಿದುಂಬಿಸ್ಯಾನೊ | ರಣ
ಭೇರಿ ಬಿಡದೆ ಹೊಡ್ಸ್ಯನೊ | ಸಿಡಿ
ಲೆರಗಿದಂತೆ ಧುಮಕ್ಯಾನೊ |

||ಇಳವು||
ಫಿರಂಗೇರ‍್ನ ಕಡಿದು ಹಾಕುವದಕ | ರಣಬಲಿಯನೀಗ ಕೊಡುವುದಕ ||
ಸಾಗಿ ಬರುವ ಸೈನ್ಯ ನೋಡುತಲಿ
ಫಿರಂಗೇರು ಕುದರಿ ತಿರವುತಲಿ
ಬೆನ್ನು ತೋರಿ ಓಡಿ ಓಡುತಲಿ
ಒಡ್ಡ್ಯಾನೊ ಜಾಲ ಮೋಸದಲಿ

||ಏರು||

ಕನ್ನಡದ ಬಂಟರಿಂದ ಕಂಡು
ಮತ್ತ ಹುರುಪುಗೊಂಡ
ಹಿಡಿ ಹಿಡಿ ಕಡಿ ಬಡಿಯೆಂದು
ಅಟ್ಟಿಕೊಂಡು ಬಂದು
ಮತ್ತ ತಡದಾರೊ ಹಳ್ಳದ ದಂಡ್ಯಾಗ

||ಬದಲಾ||
ಅಡಗಿದ್ದ ಫಿರಂಗೇರು ಧುಮುಕಿ
ತೋರ‍್ಯಾರೊ ಮರ್ದುಮಕಿ
ತರತರ ತರ್ರನೆ ತರಿದಾನೊ
ಬಾಬಾಸಾಹೇಬ್ನ ದಂಡ ಕೊಚ್ಚಾರೊ
ಕ್ಷಣದಾಗ ಮುಗಿಸಿಬಿಟ್ಟಾರೊ
ಬಂಡಿನ ಜನರು ಸಾರಿ ಬಂದಾರೊ
ಕತ್ತಿ ಕಠಾರಿ ಬಿಟ್ಟು ಕೊಟ್ಟಾರೊ
ಪ್ರಾಣದಾನ ನೀಡಿರೆಂದಾರೊ
ಸ್ವಾಭಿಮಾನ ಬಿಟ್ಟನಿಂದರೊ
ಹೆಂಡ್ರು ಮಕ್ಕಳ್ನ ಬಿಡದೆ ನೆನಿಸ್ಯಾರೊ ಹುಲ್ಲುಕಡ್ಡಿ ಕಚ್ಚಿನಿಂದಾರೊ

||ಚಾಲ|||

ದಂಡಿನ ದುರ‍್ಗತಿ ಕಂಡ ಬಾಬಾಸಾಹೇಬ
ಮಮ್ಮಲ ಮರುಗ್ಯಾನೊ ಮನದಾಗ
ಕೊಟ್ಟ ಭಾಷೆಗೆ ತಪ್ಪಿ ವಂಚಕನಾದೆಯೊ
ಡಂಬಳ ಭೀಮರಾಯನೆಂದಾನೊ
ಕ್ವಾಟ್ಯಾಗ ಇರುತನಕ ಗಂಡುಗಲಿಗಳು ನಮ್ಮ
ಬಂಟರು ಕೈಬೀಸಿ ಕಾದಲಿಲ್ಲ
ನಂಬಿದ ನನ್ನನ್ನ ಹಳ್ಳಕ್ಕ ನೂಕಿದರು
ತಾವಂತು ದಡವನ್ನೆ ಕಾಣಲಿಲ್ಲ
ನಾನಿನ್ನ ಭಕ್ತನು ಎನ್ನಾಪರಾಧವನು
ಮನ್ನಿಸಿ ಕಾಪಾಡೊ ಮುರವೈರಿಯೆ
ಎಂದು ತಿರುಗಿಸಿ ತೇಜಿ ಧಾವಸ್ಯಾನೊ ಕ್ವಾಟಿಗಿ
ಬಂದರೇನಗಸಿಯು ತೆರೆಯಲಿಲ್ಲ
ನಿಂದರದೆ ಫರಾರಿ ಆದನಲ್ಲ

||ಇಳುವು||

ಯುದ್ಧದ ಸುದ್ದಿಕೇಳಿ ಹೌಹಾರಿ
ಕುಸಿದುಬಿದ್ದಾಳೊ ರಾಣಿ ಸಾವಿತ್ತರಿ
ಮತ್ತು ಅತ್ತಿನ್ನಕರೆದು ಕೇಳ್ಯಾಳೊ
ದಾರಿ ನಮಗ ಏನಂತ್ರಿ
ಸೊಸಿನ ಮೈದಡವಿ ಮುಪ್ಪಿನ ಮುದಕಿ ಹೇಳ್ಯಾಳೊ
ಹೀಂಗ ಮೋಸಮಾಡಬಾರದಿತ್ತು
ಕಡಿದು ಹಾಕಿ ಹೋಗಬೇಕಿತ್ತು
ಇನ್ನೇನು ನಮಗ ಸಂಪತ್ತು
ಬಾಬಾಸಾಹೇಬನಿಲ್ಲದೀ ಹೊತ್ತು
ಹೊಂಟಾರೆ ಹೋಗುನ ಮಗಳೆ
ಅವನ ಹುಡಿಕ್ಯಾಡುತೀಗಳೆ

||ಚಾಲ|||

ಘೋರಾಂಧಕಾರದಲಿ ಸಾರಿ ಹೊಂಟಾರವರು
ಹೆಂಗಳೆಯರಿಬ್ಬರು ಕೆಚ್ಚಿನಲಿ
ಎಡವಿ ಮುಗ್ಗರಿಸುತ್ತ ಕಲ್ಮುಳ್ಳ ತುಳಿಯುತ್ತ
ಕಂಗಾಲಾದರೊ ವಿಧಿವಶದಲಿ
ಬೆಳಗಾಗ ಬಂದರೂ ಸುಳಿವೇಸಿಗಲಿಲ್ಲ
ಭಂಡ ಬಾಳೇಕಿನ್ನು ಈ ಜಗದಲಿ
ನಾವೇಕೆ ಸಿಕ್ಕೇವೊ ಎಂದೆನುತ ಹಾರ‍್ಯಾರೊ
ಮಲಪೆಯ ತುಂಬಿದ ಮಡುವಿನಲಿ
ಕನ್ನಾಡ ಸತಿಯರು ಇನ್ನೆಂತು ತಾಳುವರೊ
ಅಪಮಾನ ವೈರಿಯ ಬಂಧನದಲಿ|| ೯ ||

ಇತ್ತ ಫಿರಂಗೇರು ಸಾಗಿ ಮುನ್ನುಗ್ಗ್ಯಾರು
ತೆರದಿದ್ದ ನರಗುಂದದಗಸೀಗಿ
ಹೊಡಿಬಡಿ ಕಡಿಬಡಿಯೆಂದು ಧಾವಿಸಿಬಂದಾರು
ಬಾಬಾಸಾಹೇಬನ ಅರಮನಿಗಿ
ಹಕ್ಕಿಹಾರಿತಲ್ಲ ಪಾರಾಗಿ ಹೊಯ್ತಲ್ಲ
ದೂರದಿ ಕಂಡರು ದುರ‍್ಗವನು
ನಿಂದರದೆ ಹಾರ‍್ಯಾರು ಕ್ವಾಟ್ಯಾಗ ಹುಡುಕಿದರು
ಬಾಬಾಸಾಹೇಬನು ಸಿಗಲೇ ಇಲ್ಲ
ಭೂಮಿಯ ಋಣ ಇಂದು ತೀರಿಹೋಯ್ತಿಂದು
ಪಾರಾಗಿ ಹೋಗುವೆ ಇನ್ನೆಲ್ಲಿಗೆ
ಇಲ್ಲಿಲ್ಲದಿದ್ದರೂ ಮತ್ತೆಲ್ಲಿಹೋದರು
ಹಿಡತಂದುಹಾಕೇವು ನಿನ ಗಲ್ಲಿಗೆ
ಎಂದು ಕರ‍್ನಲಸಾಬ ಮನಸು
ಮಾಡ್ಯಾನೊ ಊರಸುಲಗಿಗಿ | ಸೈನಿ
ಕರ‍್ನ ಬಿಟ್ಟು-ಬಿಟ್ಟಾನೊ ಹಾದಿಹಾದೀಗಿ |

||ಏರು||

ಘುಡುಘುಡುನೆ ಹರಿದು-ಬಂದಾರೊ ಹತ್ಹ
ತ್ತರಂತೆ ಗುಂಪುಗ್ಯಾರೊ | ಕೇರಿ
ಕೇರಿಗಳನ ಶೋಧಿಸ್ಯಾರೊ | ಕೆತ್ತಿ
ಕಠಾರಿ ಜಪ್ತಮಾಡ್ಯಾರೊ | ಕೊಡ್ಲಿ
ಕುಡುಗೋಲ ಬಿಡದಾದರೊ | ಊರ
ಜನರು ಹೌಹಾರ‍್ಯಾರೊ | ಮನಿ
ಮಾರೀಗಿ ಎರವಾದರೊ | ಕಣ್
ಕಣ್ಣ ಬಿಟ್ಟು ನಿಂದಾರೊ
ಫಿರಂಗೇರ ಅಟ್ಟಹಾಸಕ್ಕ | ನರಗುಂದ ನಡುಗಿ ಹೋಯ್ತದಕ
ತುಂಬಿದ ಪ್ಯಾಟಿ ಭರದಿ ಹೊಕ್ಕಾರೊ
ಸರಾಫಗಟ್ಟಿ ಬಿಡದೆ ಸುಲಿದಾರೊ
ಮುತ್ತು ಮಾಣಿಕ ಬಳಿದೊಯ್ದಾರೊ
ಸಾರಿ ಕಂಚಗಾರೋಣಿ ಸೂರಿ-ಮಾಡ್ಯಾರೊ
ಮನ್ಯಾನ ಹಾಲು ಬೆಣ್ಣೆ ಬಿಡದಾದರೊ
ಕಾಳುಕಡಿ ತುಂಬಿ ಸಾಗಸ್ಯಾರೊ
ಜವಳಿ ಸಾಲೆಲ್ಲ ಖಾಲಿಮಾಡ್ಯಾರೊ
ಖಜ್ಜೂರಿ ಸಕ್ಕರಿಬೆಲ್ಲ | ಮೆದ್ದು ಹುಡದಿ ಹಾಕಿ ಬಿಟ್ರಲ್
ಕೊಂಡೊಯ್ಯಲಾಗಲಿಲ್ಲ ಎಲ್ಲ | ಈಡಾಡಿ ಚಲಿ ಬಿಟ್ರಲ್ಲ
ಊರಿಗೂರೆ ತೊಳೆದು ಹೋದ್ರಲ್ಲ | ರಾಕ್ಷಸರೊ ಮನುಜರೇನಲ್ಲ

||ಇಳುವು||

ವೆಂಕಟೇಶ ದೇವರ ಮೂರ‍್ತಿ ಆಗೇದೊ ಭಿನ್ನಾ
ಗೋವಿಗೆಚೂರಿ ಹಾಕೋರೋ ಇನ್ನಾ
ಎಂಬೊ ಕಣಿ ನಿಜವೊ ಎಂಬುದನ್ನಾ
ಮನಗಾಣಿಸಿಕೊಟ್ಟು ಹೋದಾರೊ | ಕಟುಕರೊ ಫಿರಂಗೇರಿವರೊ|| ೧೦ ||

||ಚಾಲ||

ಇತ್ತ ಫಿರಂಗೇರು ಬಾಬಾಸಾಹೇಬನ
ಶೋಧವ ಮಾಡುತ್ತ ತಿರುಗ್ಯಾರೊ
ತೊರಗಲ್ಲ ದೂರ‍್ಯಾಗ ಹೆಡೆತುಳಿದ ಹಾವಾಗಿ
ಹರಿದಾಡುತಿದ್ದವನ ಕಂಡಾರೊ
ಬೆನ್ನಟ್ಟಿ ಮುತ್ತ್ಯಾರೊ ಬಿಡದೆ ಗುಂಡ್ಹಾಕ್ಯಾರೊ
ಗುಂಡಿಗೆ ಬಿದ್ದವನ ಹಿಡಿದಾರೊ
ವೈರಿ ಸಿಕ್ಕನೆಂದು ಕುಣಿಕುಣಿದು ಕುಣಿದಾರೊ
ಬಿಡದೆ ಬೆಳಗಾವಿಗೆ ಕಳಿಸ್ಯಾರೊ
ಹಿಡದೊಯ್ದ ಬೆಳಗಾವಿ ಕ್ವಾಟ್ಯಾಗ
ವಿಚಾರ್ಣೆ ನಡೆಸ್ಯಾರೋ | ಮತ್ತ
ಗಲ್ಲಿನ ಶಿಕ್ಷೆ ಮಾಡ್ಯಾರೊ | ಇರದ
ಶೂಲಕ್ಕೇರಿಸ ಬೇಕಂತಾರೊ | ಫಾಸಿ
ಕೊಡುವ ದಿನ ಬಂತಲ್ರೊ | ಆದ್ರ
ಬಾಬಾಸಾಹೇಬ ಸಿಗಲಿಲ್ಲೊ | ಕೆಲಸ
ಮುಗಿಸಿ ಬಿಟ್ಟವೆಂದಾರೊ | ಸುಮ್ನೆ
ಜನರ ಮಂಕ ಮಾಡ್ಯಾರೊ |
ಕಳ್ಳರಂತೆ ಬಂದು ಮಳ್ಳ ಜನರ ಮೋಸ
ಮಾಡಿ ರಾಜ್ಯ ವಾಳ್ತಾರೊ !|| ೧೧ ||

ರಚನೆ : ಶ್ರೀ ದ.ಲ. ಕೆರೂರ, ಎಂ.ಎಂ. ಹುಬ್ಬಳ್ಳಿ
ಕೃತಿ :
ಕ್ರಾಂತಿವೀರ ಬಾಬಾ ಸಾಹೇಬ