ಚಂದದಿಂದ ನರಗುಂದ ಬಾಬಾ ಸಾಹೇಬ
ರಾಜ್ಯವಾಳಿ ||
ಕುಂದದಂಥ ಬೆಳ್‌ಜಸದೊಳೆಸೆವನಾ
ಸ್ವಾಭಿಮಾನಶಾಲಿ|| ೧ ||

ಜನತೆಯಲ್ಲಿ ಸೌಜನ್ಯ ಜನಿಯಿಸುವ
ವಿದ್ಯೆ ಮೊಳಿಯಿಸಿದನು
ಮನವನಲರಿಸುವ ಚಲುವ ಕಳೆಯ
ಬಳ್ಳಿಯನು ಬೆಳೆಯಿಸಿದನು|| ೨ ||

ಅಂದು ಬ್ರಿಟಿಶರರೊಂದೊಂದೇ ರಾಜ್ಯಗಳ
ನುಂಗಿ ನೊಣೆಯುತಿರಲು |
ಬಂಧುರತೆಯ ನರಗುಂದ ಕೋಟೆಯನು
ಬೇಧಿಸಲ್ಕೆ ಬರಲು|| ೩ ||

ಶ್ರೇಷ್ಠ ತೋಟ ಹಾಳಾಗುವಾಗ
ಮರ್ಕಟನ ಮುಖದ ಕಾಯಿ |
ಹುಟ್ಟುವಂತೆ ಖಲರೊಗೆದು ಬಿಡಿಸಿದರು
ನಾಡ ಬಾಯಿ ಬಾಯಿ|| ೪ ||

ನಾಡಕೇಡಿಗಳು ಕೂಡಿಸಿದರು ಮದ್ದಿನಲಿ
ಸಗಣಿಯನ್ನು
ಓಡಲಿಲ್ಲ ದೊರೆ ಧೀರತನದೊಳೆದುರಿಸಿದ
ಬಂದುದನ್ನು|| ೫ ||

ಮೀರಿ ಹೋರಿ ವೈರಿಯನು ಹಣ್ಣುಗಾಯ್
ನೀರುಗಾಯಿ ಮಾಡಿ
ವೀರಸ್ವರ್ಗ ಏರಿದರು ಬಾಬಾ ಸಾಹೇಬ
ಕ್ರಾಂತಿ ಹೂಡಿ|| ೬ ||

ರಚನೆ : ಎ.ಜಿ. ನೀಲಗಾರ
ಕೃತಿ :
ಜಾನಪದ ಝೇಂಕಾರ