ಚೆನ್ನಪಟ್ಟಣದೊಳು ಹೊನ್ನೆ ಭರತಪುರ
ಪುಣ್ಣ್ಯಶಹರ ದಿಲ್ಲಿಯೊಳಗ |
ಹೆಸರಿಗೆ ಕಿಲ್ಲೇವು ಕಟ್ಟೀಸಿದವರಿಗೆ
ಕೋಟಿ ಪಾಲಿಗೆ ಸಾಟಿ ಉಂಟೆ
ಹೊಸ ಕೀಟಕ ಭೀಮರಾಯ ದೊರೆಯೆ
ಧೀರ ಕುಂಪಣಿ ಸರದಾರ ಟೈಲರ
ಸಾಹೇಬಗ್ಯಾರ ಸರಿಯೋ ಧರೆಯೊಳಗ ||

ಎಲ್ಲಿ ಹಮ್ಮಿಗಿ ಎಲ್ಲಿ ದೇಸಾಯಿ
ಎಲ್ಲಿ ಮದ್ದು ಗುಂಡು | ಠಾಣಾ ಪೋಲಿಸ ಬಂದ ನಗುತ
ಕರಸೀದ ಶಾನುಭೋಗರನು ಹೋಗುತ
ತೋರಿಸು ಮದ್ದುಗುಂಡು ಎಮಗೆಂಬುತಾ
ದೇಸಾಯಿ ಒಳಗೆ ಬಂದರು ಬಹು ತುರ್ತಾ
ಮೆಲ್ಲಕೆ ಇವರು ಕೊಲ್ಲಲಿಕ್ಕೆ ಬಂದರೆಂದು
ಓಡ್ಯಾನು ದೇಸಾಯಿ ಅಳುತ
ಧೀರ ಕುಂಪಣಿ ಸರದಾರ ಟೈಲರ
ಸಾಹೇಬಗ್ಯಾರ ಸರಿಯೋ | ಧರಿಯೊಳಗ|| ೧ ||

ಬಿಡುಬಿಡು ದೇಸಾಯಿ ಹಿಡಿಹಿಡಿ ಕತ್ತಿ
ನಡಿನಡಿ ಕುದುರೆಯನು ಏರು
ಇರುತಲಿ ಬಂಟರನು ಕರಿಸಿದನು
ಹಮ್ಮಿಗಿಪುರ ಆ ಕ್ಷಣಕೆ ಹೊಕ್ಕನು
ಶಾನುಭೋಗನ ಕಿವಿ ಮೂಗು ಕೊಯ್ಸಾನು
ಬಂದ ಸವಾರನ ಕಡಿದು ಬಡಿದು
ಧಮ್ ಧುಡುಕು ಮಾಡಿದನು
ಧೀರ ಕುಂಪಣಿ ಸರದಾರ ಟೈಲರ
ಸಾಹೇಬಗ್ಯಾರಿಲ್ಲ ಸರಿಯೋ | ಧರೆಯೊಳಗ|| ೨ ||

ಭೀಮರಾಯ ಕೊಪ್ಪಳಕೆ ಬಂದಾನೆಂದು
ಆಗ ಬರೆದನು ಸುಭೇದಾರಾ
ಲಿಂಗಸೂರ ಛಾವಣಿ ಇತ್ತೊ ಸಾವಿರ
ತುರ್ತಿನ ಮಂದಿ ತಂದ ಸರದಾರ
ಕೊಪ್ಪಳ ಸುತ್ತ ಕುದರೆ ವ್ಯಾಪಾರ
ನಾಲ್ಕು ಕಡೆ ತೋಪು ತಯ್ಯಾರಾ
ಹೂಡಿ ಹೊಡೆದನೋ ನೆಲೆ ಇಲ್ಲದ ಗುಂಡು
ಕಿಲ್ಲೆ ಮಾಡಿದನು ಚೂರು ಚೂರಾ
ಧೀರ ಕುಂಪಣಿ ಸರದಾರ ಟೈಲರ
ಸಾಹೇಬಗ್ಯಾರ ಸರಿಯೋ | ಧರೆಯೊಳಗ|| ೩ ||

ಕಿತ್ತ ಕತ್ತಿ ಕೈ ಎತ್ತಿ ಸುತ್ತಮುತ್ತ
ಕೇಳತಾನ ಭಂಟರನ
ಭೀಮರಾಯ ಹೊಡೆದ ರಣಶೂರ
ತಡೆಯದೆ ಹಾರುತಿದ್ದವು ಶಿರಾ
ಹರಿಯುತೈತೋ ಕೆಂಪು ನೆತ್ತರಾ
ಒಮ್ಮೆ ಗುಂಡು ಹಾರಿತೋ ಸಾವಿರಾ
ಹಮ್ಮಿಗಿ ದೇಸಾಯಿ ಭೀಮರಾಯ ದೊರೆ
ಅದೆ ಕ್ಷಣಕ ಸಂಹಾರಾ
ಧೀರ ಕುಂಪಣಿ ಸರದಾರ ಟೈಲರ
ಸಾಹೇಬಗ್ಯಾರ ಸರಿಯೋ | ಧರೆಯೊಳಗ|| ೪ ||

ರಚನೆ : ಎ.ಜಿ. ನೀಲಗಾರ
ಕೃತಿ :
ಜಾನಪದ ಝೇಂಕಾರ