ಕಾಂತನ ಕಳಕೊಂಡ ಕಾಮಿನಿಯಂತೆ ಭಾರತ ಹಾಕ್ವದು ಕಣ್ಣೀರ
ಶಾಂತಿ ಸಮರದಲಿ ಗುಂಡಿನೇಟಿನೊಳು ಮಡಿದ ಮಹದೇವ ಮೈಲಾರ
ಕರಿನಾಡಿನ ಕರವೀರಕೇಸರಿಯ ನೆನಪಿರಲಿ ಎನ್ನುತ ನಿರಂತರ
ಬರೆದನು ಲಾವಣಿಕಾರನು ಹರಡಿದ ಹಾಡಲಿ ನಾನಾ ತರ
ತುಂಟರ ತುಂಟನು ಭಂಟರ ಭಂಟನು ಸಾತ್ವಿಕದೊಳು ಸರದಾರ
ದಿಟ್ಟನ ಹೆಸರನು ಹುಟ್ಟಿದ ಕೂಸಿಗೆ ಇಟ್ಟರೆ ತೀರದುಪಕಾರ

||ಇಳವು||

ರಾಣಿಬೆನ್ನೂರ ತಾಲೂಕಿನೊಳಗೆ ಐತಿ ಸಣ್ಣ ಹಳ್ಳಿ
ಘನಹಳ್ಳಿ ಎಂಬುದು ಮೋಟೆಬೆನ್ನೂರ ಎಂಬಲ್ಲಿ
ಜನಿಸಿದನು ನಮ್ಮ ವೀರರ ವೀರನು ಅಲ್ಲಿ

||ಏರು||

ಬಿತ್ತಿ ಜಗತ್ತಿಗೆ ಅನ್ನವ ಇಕ್ಕುವ ರೈತರೊಳು ಹುಟ್ಟಿದ ಗಂಭೀರ
ಶಾಂತಿ ಸಮರದಲಿ ಗುಂಡಿನೇಟಿನೊಳು ಮಡಿದ ಮಹದೇವಣ್ಣ ಮೈಲಾರ || ೧ ||

ಸಣ್ಣವನಿರುತಿರೆ ಶಾಲೆಗೆ ಹೋದರೆ ಸ್ವಾತಂತ್ರ್ಯ ವೀರರ ಚರಿತೆಯನು
ಬಣ್ಣದ ಮಾತಿಗೆ ಕಣ್ಣನು ಎತ್ತದೆ ಓದುವ ಆಸೆಯನಿಟ್ಟಿದ್ದನು
ಆಹಾ ಸ್ವಾತಂತ್ರ್ಯ ಮಹಾಸ್ವಾತಂತ್ರ್ಯ ಸ್ವಾತಂತ್ರ್ಯ ಮರುಗಿಸಿತು ಅವನನ್ನು
ಮಹಾದೇವಣ್ಣನ ನಾಡಿಯ ರಕ್ತವು ಪಠಿಸಿತು ಆ ಮಹಾ ಮಂತ್ರವನು
ಆರ್ಯಕಾಲದ ಭಾರತ ಸಿರಿಯನು ಮನದೊಳು ನೆನೆಯುತ ಮರುಗಿದನು
ಭಾರತ ಭಾಗ್ಯದ ಮಹಾತ್ಮಾಗಾಂಧಿಯ ಸ್ವಾತಂತ್ರ್ಯ ಕೂಗನು ಕೇಳಿದನು

||ಇಳವು||

ಕಡುಹರುಷದಿ ಶಾಲೆಗೆ ಶರಣು ಹೊಡೆದನಾ ಭಂಟ
ಬಾಡಿದ್ದ ಭಾರತದ ಸ್ವಾತಂತ್ರ್ಯ ಪಣವನು ತೊಟ್ಟ
ಕುಡಿಮೀಸೆಯ ತೀಡುತ ಶಾಂತಿ ಕಾಳಗಕೆ ಹೊಂಟ

||ಏರು||

ಸತಿಸಿದ್ಧಮ್ಮನ ಕೂಡಿಕೊಂಡು ತಾ ಸಾಬರಮತಿ ಕಂಡ ಮಹಾತ್ಮರ
ಶಾಂತಿ ಸಮರದೊಳು ಗುಂಡಿನೇಟಿನೊಳು ಮಡಿದ
ಮಹದೇವಣ್ಣ ಮೈಲಾರ  || ೨ ||

ಗಾಂಧಿಯ ದೀಕ್ಷೆಯ ಹೊಂದುತ ಹಿಂದುಸ್ಥಾನದ ಜನಗಳ ಮೂಲಹಿತ
ಖಾದಿಯ ಕೈಗಾರಿಕೆಯ ಕಾರ್ಯದೊಳು ಹಳ್ಳಿಗರ‍್ಹಿತವೆಂದವನರಿತ
ಉಪ್ಪಿನ ಸತ್ಯಾಗ್ರಹದೊಳು ಗಾಂಧಿಯ ಒಪ್ಪಿದ ಶಿಷ್ಯನು ಎಂದೆನಿಸುತ್ತ
ಹೊತ್ತ ಕೀರ್ತಿಯ ಕರ್ನಾಟಕದ ಮೊದಲನೆ ವೀರನು ಎಂದೆನಿಸುತ್ತ
ಸಹನೆಶೀಲತೆಯ ಶೂರ ಶಿಖಾಮಣಿ ಹುಟ್ಟಿದ ಸೀಮೆಯ ನೆನೆಯುತ್ತ

||ಇಳುವು||

ಬಂದೊಡನೆ ಕೂಗಿದನು ಭಾರತ ವೀರರೆ ಏಳಿ
ಖಾದಿಯ ತೊಡುತಲಿ ಸುಖದಿಂ ಬಾಳಿ
ಎಂದ್ಹೇಳುವ ಮಾತನು ಎಲ್ಲಾ ಜನಗಳು ಕೇಳಿ

||ಏರು||

ರಿತ್ತಿಯ ಬದಿ ಕೊರಡೂರ ಸಾಹುಕಾರರ ಸಹಾಯ ಸಿಕ್ಕಿತು ಭರಪೂರ
ಶಾಂತಿ ಸಮರದಲಿ ಗುಂಡಿನೇಟಿನೊಳು ಮಡಿದ ಮಹದೇವಣ್ಣ ಮೈಲಾರ|| ೩ ||

ಒಳ್ಳೆಯ ಮಾತಿನೊಳು ಹಳ್ಳಿಯ ಜನರಿಗೆ ಕಲಿಸಿದ ನೋಲುವದಾವಪರಿ
ಕೊಳ್ಳುವ ಜನರಿಗೆ ಉತ್ತಮ ಖಾದಿಯ ನೇಯಿಸಿದ ಸ್ವತಹದ ಕೈಮಾಸಿರಿ
ಉತ್ತಮ ಮಹದೇವಣ್ಣನ ಕೀರ್ತಿ ಹರಡಿತು ಸುತ್ತ ಹತ್ತಹರದಾರಿ
ಸತ್ಯಾಗ್ರಹದೊಳು ಎತ್ತಿದಕೈ ಜನಪ್ರೇಮವು ಬೆಳದಿತು ಮಿತಿಮೀರಿ
ಮಲಸರ್ಜನ ಜಗಜಟ್ಟಿಯಂತೆ ಮೈಕಟ್ಟು ಇತ್ತು ಪೈಲ್ವಾನ ಸರಿ
ಬಲದೊಳು ಭೀಮನು ಕಳೆಯೊಳು ಕಾಮನು ಛಲತೊಟ್ಟರೆ ಅಭಿಮನ್ಯ ಸರಿ

||ಇಳುವು||

ದರವೊಂದು ಕಾಂಗ್ರೆಸ್ಸಿನ ಕೆಲಸದೊಳು ಬಲು ಹುರುಪು
ಸರಕಾರದ ಬೆದರಿಕೆಗೆ ಹಾಕಲಿಲ್ಲ ಅಂವ ಸೊಪ್ಪ
ನೀರು ಬರುತಿಹೆ ಕಣ್ಣಿಗೆ ಬಂದರೆ ಆತನ ನೆನಪು

||ಏರು||

ಸತ್ಯ ಅಹಿಂಸೆಯ ಬಿತ್ತಿದ ಬೀಜವ ಕರ್ನಾಟಕದೊಳು ಸುಕುಮಾರ
ಶಾಂತಿ ಸಮರದಲಿ ಗುಂಡಿನೇಟಿನೊಳು ಮಡಿದ ಮಹದೇವಣ್ಣ ಮೈಲಾರ|| ೪ ||

ದೇಶ ಹಿತದ ಖರೆ ದಾಸನೆಂದು ಸಹವಾಸ ಮಾಡಿದರು ಜನಮಸ್ತು
ಬಂಧು ದೇಶಭಕ್ತ ಹೊಸಮನಿ ಸಿದ್ದಪ್ಪನವರದು ಮಹದೇವನೊಳು ಪ್ರೀತಿ ಬಹಳಿತ್ತ
ಅಷ್ಟರೊಳಗೆ ಮತ್ತೊಂದು ಕಾಂಗ್ರೆಸ್ ರಣಗಾಳಿಯ ಕೂಗು ಕೇಳಿಸಿತು
ಆಗಸ್ಟ್ ೯, ೧೯೪೨ ಚಲೇಜಾವ್ ಚಳವಳಿ ಠರಾವದು ಪಾಸಾಯಿತು

||ಇಳವು||

ಕೂಗಿದನು ನಮ್ಮ ಮಹದೇವಣ್ಣನು ಹಾಕಿದ ಖಾಸಿಯ ಪಣತೊಟ್ಟು
ಸಾಗಿರಿ ವೀರರೆ ಶಾಂತಿಯ ಕಾಳಗ ಮಾಡಲು ಸಿಕ್ಕೀ ನಮಗೀ ಹೊತ್ತು
ಕಟ್ಟಿಕೊಂಡ ಸಣ್ಣದೊಂದು ಟೋಳಿಯನು ಮಹದೇವ ಭಂಟ
ಹೊತ್ತು ಸಾಧಿಸಿ ನೂರಾರು ಚಾವಡಿ ಸುಟ್ಟ
ಇಷ್ಟಲ್ಲದೆ ಸರಕಾರಿ ಹಣ ಲೂಟಿಗೆ ಹೋದ

||ಏರು||

ಶರ್ತಮಾಡಿದ ನೂರಾರು ಪೋಲಿಸ್ ಬಂದೂಕ ಕಸಿದ
ಶಾಂತಿ ಸಮರದಲಿ ಗುಂಡಿನೇಟಿನೊಳು ಮಡಿದ ಮಹದೇವಣ್ಣ ಮೈಲಾರ|| ೫ ||

ಸುಸ್ತನು ಮಾಡದೆ ರುಸ್ತುಂ ನೆಗಳೂರ ಹಪ್ತೆಯ ಹೊಡೆದನು
ತೀವೃದಿ ಮುತ್ತಿತು ಸರಕಾರ ವಾರಂಟ ತೆಗೆಯಿತು ಸಿಕ್ಕಲ್ಲಿ ಹಿಡಿಯಬೇಕೆನುತಲಿ
ಇತ್ತ ಕೇಳಿ ತನ್ನ ಪತ್ತೆ ಹತ್ತದಂತೆ ವೇಷವ ಬದಲಿಸಿ ಧೈರ್ಯದಲಿ
ಹೊತ್ತು ಮಾಡದಲೆ ಬಾಳಾ ಹೊನ್ನತ್ತಿಯ ಹಪ್ತೆಯ ಹೊಡಿದನು ಜೋರಿನಲಿ
ಮತ್ತೆ ಹೊರಟ ಹೊಸರಿತ್ತಿಯ ಹಪ್ತೆಯ ಹಣವನು ಹೊಡೆಯಬೇಕೆನ್ನುತಲಿ
ಶಿಸ್ತಿನಿಂದ ಹತ್ತಾರು ವೀರಭಟರಿದ್ದರು ಆತನ ಸಂಗದಲ್ಲಿ

||ಇಳುವು||

ತವಕದಲಿ ಹೊರಟು ಹೂಡಿದನು ಜೋಡೆತ್ತಿನ ಬಂಡಿ
ಅಪಶಕುನ ತೋರಿ ನಡುದಾರಿಗೆ ಬಿದ್ದಿತು ಬಂಡಿ
ಅಪಶಕುನವ ಲೆಕ್ಕಿಸದ್ಹೊಡೆದನು ರಿತ್ತಿಗೆ ಗಾಡಿ

||ಏರು||

ಘಾತ ಕಾಣುತಿದೆ ಈ ದಿನ ಪಯಣವು ಬೇಡೆಂದು ಹೇಳುವ ಸ್ನೇಹಿತರ
ಶಾಂತಿ ಸಮರದಲಿ ಗುಂಡಿನೇಟಿನೊಳು ಮಡಿದ ಮಹದೇವಣ್ಣ ಮೈಲಾರ|| ೬ ||

ಕೊಂಚ ಮನಕೆ ದಯೆ ಬಾರದ ವಿಧಿಯು ಕರೆದೊಯ್ದಿತು ತಾ ಸರಿಯಾಗಿ
ಹೊಂಚು ಹಾಕಿ ಪೋಲೀಸರು ಪ್ರಾಣವ ತೆಗೆಯಲು ಕುಳಿತಿದ್ದರು ಏಕಾಗಿ
ನೋಡುವ ಪೋಲೀಸರಾಟದ ಸುಳಿವನು ಗೆಳೆಯರಿಗೆ ಹೇಳಿದನವ ಕೂಗಿ
ಮಾಡಿರಿ ಮಡಿಯಿರಿ ಹಿಂದಕೆ ಓಡದೆ ಭಾರತದೇಶದ ಹಿತಕಾಗಿ
ಚನ್ನಿಗ ವೀರನು ಶಾಂತಿಯಿಂದ ಮುನ್ನುಗ್ಗಿದ ಪೋಲೀಸರೆದುರಾಗಿ
ಕನಿಕರ ಇಲ್ಲದೆ ಕದ್ದು ಕುಂತ ಒಬ್ಬ ಪೋಲಿಸ ಗುಂಡಿಟ್ಟ ಬಲವಾಗಿ

||ಇಳುವು||

ಹಾ ಎನ್ನುವುದರೊಳಗಾಗಿ ಗುಂಡು ಎದೆಯಲಿ ಹೋಗಿ ಪಾರಾಗಿತ್ತು
ಗಾಯ ಕಂಡು ಜನರು ಕಣ್ಣೀರ‍್ಹಾಕಿದರು ಅತ್ತು
ಮಹದೇವ ಮಹಿಮೆಯ ಕೇಳಿರಿ ಜನ ಮನವಿತ್ತು

||ಏರು||

ನಾಟಿದ ಗುಂಡಿನ ಏಟಿಗೆ ಮಣಿಯದೆ ಮಾಡಿದ ಕಾಳಗ ಘನವೀರ
ಶಾಂತಿ ಸಮರದಲಿ ಗುಂಡಿನೇಟಿನೊಳು ಮಡಿದ ಮಹದೇವಣ್ಣ ಮೈಲಾರ|| ೭ ||

ನಿಷ್ಠಾವಂತ ಮಹದೇವನು ನಿಂತನು ಗಾಯದಿ ರಕ್ತವು ಸೋರುತಲಿ
ಅಷ್ಟರಲಿ ಮತ್ತೊಂದು ಬರ್ಚಿ ಬಂದು ನೆಟ್ಟಿತು ಎದೆಯೊಳು ಜೋರಿನಲಿ
ಕಿತ್ತು ಬರ್ಚಿಯನು ತಾಳಲಾರದೆ ಬಿದ್ದನು ಆ ಕ್ಷಣ ಭೂಮಿಯಲಿ
ಬಿಟ್ಟನು ಪ್ರಾಣವ ಗಾಂಧಿಯ ತತ್ವದ ವಂದೇ ಮಾತರಂ ಎನ್ನುತಲಿ
ಮಡದಿ ಸಿದ್ಧಮ್ಮನು ದುಃಖ ಮಾಡುತಲಿ ಕಾಂತನೆ ಪೋದಿಯಾ ಎನ್ನುತಲಿ
ಆಡಿದ ಮಾತನು ನಡೆಸು ರಮಣನೆ ಕರೆಹೋಗ ನಿನ್ನ ಸಂಗಡದಲಿ

||ಇಳುವು||

ಗಳಸಿದನು ಕೀರ್ತಿಯನು ಅಂತ್ಯದ ತನಕ
ಕಳಕೊಂಡಿತು ಭಾರತ ತನ್ನಯ ಕೊರಳಿನ ಪದಕ
ಕಳಕಳಿಯ ಸಮ್ಮಸಾಹೇಬರು ಮಾಡಿದ ತಕ್ಕ

||ಏರು||

ಅತ್ತರೆ ಬಾರನು ಸತ್ತರೆ ಬಾರನು ಮತ್ತೆಲ್ಲಿಗೆ ಆ ಶೂರ
ಶಾಂತಿ ಸಮರದೊಳು ಗುಂಡಿನೇಟಿನೊಳು ಮಡಿದ
ಮೈಲಾರ ಮಹದೇವಣ್ಣ || ೮ ||

ರಚನೆ : ರಾಣಿಬೆನ್ನೂರ ಸಮ್ಮಸಾಬ
ಕೃತಿ :
ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ