ಕ್ರಾಂತಿ ವೀರ ವಾಲಿ ಚನ್ನಪ್ಪನವರ ಕಥಿ
ಪ್ರೀತಿಲಿಂದ ಕೇಳರಿ ಕುಂತ ಜನರ
ಸ್ವಾತಂತ್ರ್ಯ ಸಲುವಾಗಿ ಆತ್ಮದ ಪರಿವಿಲ್ಲದ ದುಡದ
ಕೀರ್ತಿಪಡೆದ ಭಾರತಾಂಬೆ ಕುವರ
ಸಂಪಗಾಂವಿ ಊರಲ್ಲಿ ಜನ್ಮ ತಾಳಿದರ
ಸಂಣಂದಿರತ ಶೌರ್ಯ ಧೈರ್ಯವಂತರಿವರ
ಸೊಪ್ಪ ಹಾಕಲಿಲ್ಲ ಗಂಡುಗಲಿ ನಾಡಿನವರ
ಕೆಂಪಮೋತಿ ಜನರನ್ನು ಗಾಬ ಮಾಡಿದರ
ಮಾಡಬೇಕು ಇಲ್ಲವೆ ಮಡಿಬೇಕು ಅಂದ ಗಾಂಧೀಯವರ
ಮಾತ ದೃಢವಾಗಿ ನಡಿಸಿದರ
ಭಂಡ ಇಂಗ್ಲೀಷರ ಕೂಡ ತರತರದ ವೇಷ ಹಾಕಿ
ಮೋಸಮಾಡಿ ಚಳವಳಿ ಹೂಡಿದರ
ಬೆಳಗಾಂವಿ ಜಿಲ್ಲೆ ಬಾಗೇವಾಡಿ ಊರಲ್ಲಿ
ಗೆಳೆಯರ ಕೂಡುಕೊಂಡ ಮೊದಲ ಕಾರ್ಯ ನಡಸಿದರ
ಬೆಳಗಾಗುದರೊಳಗ ಹನ್ನೊಂದುಮೈಲ ತಾರ
ಕಂಬಕಿತ್ತ ತಂತಿ ಕತ್ತರಿಸಿದರ
ಮುಂದ ಒಂದು ತಿಂಗಳ ತನಕ
ಒಂದೊಂದ ವಾರದ ತನಕ
ಇಬ್ಬಿಬ್ರ ಸತ್ಯಾಗ್ರಹ ಮಾಡುತ
ಪೋಷ್ಟಡಬ್ಬಿ ಬಾಂವ್ಯಾಗ ಒಗೆಯುತ
ಐದುಸಾವಿರ ಕಿಮ್ಮತ್ತಿನ ಸಾಲಿ ಸುಟ್ಟಬಿಟ್ಟ ಕ್ಷಣದಲ್ಲಿ
ಏನು ಉಳಿಯುದಂತೆ ತಾರ ತಂತಿ ಕಂಬ ಕಡಿಯುದ ನಡದೇ ಇತ್ತ

ಗುರ್ತ ಹತ್ತದ್ಹಾಂಗ ಫೌಜದಾರ ಡ್ರೆಸ್‌ಹಾಕಿ
ಬೆತ್ತ ಹಿಡಕೊಂಡ ತಿರಗ್ಯಾಡವರ ಸ್ವಾತಂತ್ರ್ಯ ಸಲುವಾಗಿ
ಅಕ್ಟೋಬರ ೨೨ ಆ ದಿನ ಸಂಪಗಾಂವಿಯಲ್ಲಿ
ಪೋಲೀಸರ ಬಂದೂಕ ಕಸಿದುಕೊಂಡರ
ಕಣ್ಣಿಗೆ ಖಾರಪುಡಿ ಎಸೆದ ಗುಂಡ ಹಾರಿಸಿದರ
ಕೇಳಲೆ ತಮ್ಮ ಕೆಲಸವನು ಸಾಧಿಸಿದರ

ಸಣ್ಣ ಕೆಲಸಗಳಿಗೆ ಅಣ್ಣ ಮನಸ ಹಾಕಲಿಲ್ಲ
ತಾಲೂಕ ಕಚೇರಿ ಮ್ಯಾಲ ದಾಳಿ ಮಾಡಿದರ
ಏನು ಹೇಳುದೇನು ಅದನ ಪೂರ್ವ ತಯ್ಯಾರ ಮಾಡಿ
ಪೋಲೀಸರಿಗೆ ತಿಳಿಯದಂತೆ ನಡಸಿದರ
ಧಾರವಾಡದಿಂದ ಆರು ಲಾರಿ ಪೋಲೀಸರು ಬಂದಿದ್ದರ
ಕಚೇರಿ ಕಾವಲಕ್ಕೆ ತಯ್ಯಾರ
ಪೂರ ತಿಳಿಕೊಂಡು ಹೊಂಗಲಕ್ಕೆ ಬಂದು ಅಲ್ಲಿ
ಪೋಷ್ಟ ಆಫೀಸ ಸುದ್ಧ ನಷ್ಟಪಡಿಸಿದರ

ಹೇಳಿದರ ತೀರುದಿಲ್ಲ ಇವರ ಕೆಲಸ
ಕೇಳಿದವರಿಗೆ ಸಂತೋಷ ಮನಕ್ಕೆ ವೀರಾವೇಶ
ಇಂಥವರಿದ್ದಾಗ ಆಗುವುದು ಮಹಾಕೆಲಸ
ಸೇನಾಪತಿ ಎನಿಸಿಕೊಂಡಾರ
ಕನ್ನಡನಾಡಿನ ವೀರ ಚಿನ್ನದುಂಗುರ
ಚನ್ನಪ್ಪಣ್ಣ ವಾಲಿ ಅಂತ ಇವರ ಹೆಸರ
ಕ್ರಾಂತಿಕಾರರ ಪದ ಸ್ವತಃ ರಚಿಸಿ ಹೇಳಿದ
ಹುಲಕುಂದ ಭೀಮ ನಾಡೊಳು ಜಾಹೀರ

ರಚನೆ : ಹುಲಕುಂದ ಭೀಮಕವಿ
ಕೃತಿ :
ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ