ಮಾನವರಾಗಿ ಜನಿಸಿ ಮಹಾತ್ಮರೆನಿಸಿಕೊಂಡ್ರ |
ಮೋಹನದಾಸ ಗಾಂಧಿಜಿಯವರು |
ತನುಮನಧನಗುಣ ಪ್ರಾಣ ಸಹೀತ ನಮ್ಮ ದೀನರಾಗಿ |
ವಿನಿಯೋಗಿಸಿದರು|| ಪ ||

ಪೊರ ಬಂದರದಿ ಕರಮಚಂದನ ಸತಿ ಪುತಳಾಬಾಯಿವರ |
ಸುತರಿವರು !
ಎರಡನೇ ತಾರೀಖ ಅಕ್ಟೋಬರ ಹದಿನೆಂಟನೂರಾ |
ಅರವತ್ತೊಂಬತ್ತರಲ್ಲಿ ಉದಯಾದರು ||
ಚಾಲ್ಯ ಸ್ವಭಾವ ಲಜ್ಜಾ ಶೀಲ ಸಂಕೋಚದ್ದು ಶಾಲೆಯಲ್ಲಿ |
ಕಾಲಿಟ್ಟರಿವರು |
ಮೂಲಸತ್ಯದ ಮೇಲೆ ನಂಬಿಕಿತ್ತ ಖಾಲಿ ಮಾತಿಗೆ |
ಬೆಲೆಕೊಡದವರು ||
ಪರೀಕ್ಷೆಯ ಕಾಲಕ್ಕೆ ಎರಡ್ನೇದವರ‍್ದು ನೋಡಂತ ಸೊನ್ನಿಲೆ |
ತೋರಿಸಿದರಮಾಸ್ತರರು |
ಸರಬಾರದ್ದಕ್ಕಾಗಿ ಸುಮ್ಮನೆ ಕೂತಲ್ಲೆ ಮೂರ್ಖನೆಂದು |
ಬೈದರು ಗುರುವರ್ಯರು ||

||ಚಾಲ||

ಹರಿಶ್ಚಂದ್ರ ನಾಟಕ ನೋಡ ಹೋಗಿ ಭಾರಿ ಮನಸಿನ |
ಮೇಲೆ ಪರಿಣಾಮವಾಗಿ ||
ಖರೆ ಮಾತನಾಡುವ ಗುರಿಯಾಗಿ | ಸರಳ ಜೀವನ |
ಸಾಗಿತು ಮುಂದಾಗಿ ||

||ಏರು||

ಮನಿಯ ಹಿರಿಯರು ಕಸ್ತೂರಬಾರವರಕೂಡ ಸಂಣಂದಿರತ |
ಲಗ್ನ ಮುಗಿಸಿದ್ದರು
ಹದಿನಾಲ್ಕನೇ ವರುಷಕ ಮ್ಯಾಟ್ರಿಕ್ ಪಾಸಾಗುವುದರೊಳಗ |
ಗಾಂಧಿಯವರ ತಂದೆಯವರು ತೀರಿಕೊಂಡರು |
ಮುಂದೆ ಇಂಗ್ಲಂಡಕ್ಹೋಗಿ ಬ್ಯಾರಿಷ್ಟರಾಗುವ ಹಂಬಲಿಟ್ಟ |
ತಾಯಿಯವರಿಗೆ ತಿಳಿಸಿದರು ||
ಮದ್ಯ ಸಿಗರೇಟ ಮಾಂಸ ಪರಸ್ತ್ರೀ ಮುಟ್ಟಬಾರದಂತ ತಾಕೀತ |
ಮಾಡಿ ಕಳಿಸಿದರು ಮಾತೆಯವರು |
ಅದರಂತೆ ಆಚರಿಸಿ ಬಂದ ತೊಂದರೆ ಸಹಿಸಿ ವಿದ್ಯಾಭ್ಯಾಸವನ್ನು |
ಸಾಗಿಸಿದರು ||
ಪರಭಾಷೆಯಲ್ಲಿದ್ದ ಸರ್ವ ಧರ್ಮ ಗ್ರಂಥಗಳನ ಪರಿಪೂರ್ಣ |
ಓದಿ ಸಾರ ತಿಳಕೊಂಡರು |
ಪರೀಕ್ಷೆ ಮುಗಿಸಿಕೊಂಡು ತಿರಿಗಿ ಬರುದರೊಳು ಮಾತೆಯವರು |
ಮೃತಪಟಿದ್ದರು.

||ಚಾಲ||

ಜಾತಿ ಬಾಂಧವರು ಬಹಿಷ್ಕಾರ ಹಾಕಿ ನೀತಿಗೆಟ್ಟಾನ ಮಾಡಬಾರದಂದ್ರ ಬಳಕಿ
ಪರರಾಷ್ಟ್ರಕ್ಹೋದ್ರ ಜಾತಿಗೇನ ಧಕ್ಕಿ ಧೈರ್ಯ ತಂದಕೊಂಡ್ರು
ಶಾಂತಿ ಮಾರ್ಗ ಹುಡುಕಿ ||

||ಏರು||

ಮುನ್ನ ದಕ್ಷಿಣಾಫ್ರಿಕೆಗೆ ಖಟ್ಲೆ ನಡಸಿಲಿಕ್ಕೆ ಹೋಗಿ |
ವರ್ಣ ದ್ವೇಷಕಾಗಿ ಹೋರಾಡಿದರು|| ೨ ||

ಅನ್ಯಾಯದ ವಿರುದ್ಧ ಸತ್ಯಾಗ್ರಹ ಹೂಡುವ ಯುಕ್ತಿಯನ್ನು | ತಗದಾರ ಸ್ವತಾ |
ಜನ ಜಂಗುಳಿಯನ್ನು ಘನ ಸಂಘಟಿಸಿ ಮನವಲಿಸುವ | ಹಂಚಿಕಿ ತುರ್ತಾ ||
ನೋಡಿ ನೋಡಿ ವಿಚಾರ ಮಾಡಿ ಮಾಡಿ ಕಡೆಗೆ ಪ್ರತಿಜ್ಞಾ |
ಮಾಡುವರು ಖಚಿತಾ |
ಆಡಿದಂತೆ ಕೃತಿ ಮಾಡಿ ತೋರಿಸಿ ರೂಢಿಯೊಳಗ ಆದ್ರ | ಪ್ರಖ್ಯಾತಾ ||
ಸತ್ಯ ಅಹಿಂಸಾವ್ರತ ನಿತ್ಯ ಧ್ಯೇಯವಾಗಿ ಪ್ರಾರ್ಥನೆ |
ಮಾಡಿ ಓದುವರಗೀತಾ |
ಮತ್ತೆ ಸ್ವಾತಂತ್ರ ಬೀಜಾ ಬಿತ್ತಿ ಮೃತ್ಯುದೊಳು |
ಇತಿಹಾಸ ಪ್ರಸಿದ್ಧವಾಗಿಹನೇತಾ ||

||ಚಾಲ||

ಯಾರ‍್ಯಾರಿಗೆ ಹೆದರಲಿಲ್ಲ ಚೂರಾ ತುರಂಗದವರಿಗೆ ತವರೂರಾ ||
ಪಾರತಂತ್ರ ಬಿಡಿಸಿದ ಧೀರಾ ಸ್ವರಾಜ್ಯ ಕೊಡಿಸಿ ಹೋದ್ರ ಪೂರಾ ||

||ಏರು||

ಧನ್ಯ ಧನ್ಯ ಜಗಮಾನ್ಯರಾದರೆಂದು ಹುಲಕುಂದ | ಭೀಮಕವಿ ಸಾರಿದರು|| ೩ ||

ರಚನೆ : ಹುಲಕುಂದ ಭೀಮಕವಿ
ಕೃತಿ : ಸರ್ವೋದಯ ಗ್ರಾಮೀಣ ಜನಪದ ಗೀತೆಗಳು