ಎಂದು ಮರಿಯಲಾರೆ ಮಹಾತ್ಮಾಗಾಂಧಿ ನಿನ್ನ
ಹಿಂದೂಸ್ತಾನದ ತಂದಿ |
ಸತ್ಯ ಅಹಿಂಸಾ ಸುತ್ತರಾಜ್ಯೇದ ಮ್ಯಾಲ
ಜೈಭೇರಿ ಹೊಡಿಸಿದಿ ಜಗದಿ ||

ಮೂರು ಲೋಕದಲ್ಲಿ ಮೀರಿದಂತಾವ ನಿನ್ನ
ಸರಿಯಗಾಣೆನು ಗಾಂಧಿ |
ರೈತರ ಸಲುವಾಗಿ ಹಗಲು ರಾತ್ರಿ ನೀನು
ಬಿಡವು ಇಲ್ಲದೆ ದುಡದಿ ||

ಸತ್ಯಾಗ್ರಹಿಗಳ ಸಂಘ ಕಟ್ಟಿಕೊಂಡ
ಆಂಗ್ಲರನ ಓಡಿಸಿದಿ |
ನಾಲ್ವತ್ತೇಳನೆ ಇಸ್ವಿ ಆಗಸ್ಟ್ ಹದಿನೈದಕ್ಕ
ಸ್ವಾತಂತ್ರ್ಯ ತಂದಿ ಜಲದಿ ||

ಸತ್ಯ ಶಾಂತಿಗಾಗಿ ಹಟಾತೊಟ್ಟ ನೀನು
ಉಪವಾಸ ವ್ರತಾ ಹಿಡದಿ |
ಹಟಾ ಹಿಡಿದ ನೀನು ಹರಿಜನರನ್ನು
ಮುಂದ ತಂದ್ಯೋ ಗಾಂಧಿ ||

ದ್ವಾಪಾರ ಯುಗದ ಕೃಷ್ಣನ ಅವತಾರ
ಕಲಿಯುಗದಲಿ ಪಡದಿ |
ವಾಲ್ಮೀಕನಂಬೊ ನಥುರಾಮ ಗೋಡಸೇನ
ಗುಂಡಿಗಿ ಗುರಿಯಾದಿ ||

ಚಳವಳಿಯಲ್ಲಿ ಮಿಗಿಲಾತ ತಿಗಡೊಳ್ಳಿ
ಬಲಭೀಮ ಕೊಟ್ಟ ಬುದ್ಧಿ |
ನಿತ್ಯನೇಮ ನಿಮ್ಮ ಸ್ತುತಿ ಮಾಡುವ
ಮರಿಕಲ್ಲಗ ಒಲದಿ ||

ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀ ಪದಗಳು