ಕೇಳಿರಿನೀವೆಲ್ಲ ಗಾಂಧಿಯಕಥೆಯ |
ತಾಳಿರಿಹರುಷವ ತೊರೆಯುತ ವ್ಯಥೆಯ ||
ಜಯ ಜಯ ಗಾಂಧಿ ಮಹಾತ್ಮಗಾಂಧಿ |
ಜಯ ಜಯ ಗಾಂಧಿ ಮಹಾತ್ಮಗಾಂಧಿ|| ೦ ||

ಪೋರಬಂದರಿನ ರಾಜಕೋಟೆಯೊಳು |
ಧೀರಗಾಂಧಿಯು ಬನಿಯರ ಕುಲದೊಳು ||
ಜನಿಸಲು ಮೋಹನದಾಸನೆಂಬನಾಮ |
ಜನನಿ ಜನಕರಿಡೆ ಹೊಂದುತ ಪ್ರೇಮ|| ೧ ||
ಜಯ ಜಯ ಗಾಂಧಿ ಮಹಾತ್ಮಗಾಂಧಿ (ಎರಡುಸಲ)

ಚಿಕ್ಕವಯಸಿನಿಂದ ಮೋಹನದಾಸನು |
ಚೊಕ್ಕತನಕೆ ಬಹುಬೆಲೆ ಕೊಡುವವನು ||
ಅಕ್ಕರೆಯಿಂದಲಿ ದೇವಿ ಪುತಲಿಬಾಯಿ |
ನಕ್ಕುನಲಿಯುತಲಿ ಸಲಹಲು ತಾಯಿ|| ೨ ||
ಜಯ ಜಯ ಗಾಂಧಿ ||

ತಂದೆ ಕರಮಚಂದ ವಿದ್ಯೆಯ ಕೊಡಿಸಿದ |
ಅಂದದೊಳೊಳ್ಳೆಯ ಗುಣಗಳ ತೊಡಿಸಿದ ||
ಬಾಲಕತನದಲಿ ಕುಮಾರ ಮೋಹನ |
ಶಾಲೆಯೊಳಗೆ ಪಡೆದನು ಅತಿಜ್ಞಾನ|| ೩ ||
ಜಯ ಜಯ ಗಾಂಧಿ ||

ಹರಿಶ್ಚಂದ್ರನ ನಾಟಕನೋಡಲು |
ಉರುತರ ಸತ್ಯವನೋಡುತ ಮೆಚ್ಚಲು ||
ಬಾಳಿನ ಪರಿಯಂತ ಅವನೊಲುತಾನು |
ಬಾಳಲು ನಿರ್ಧರಿಸಿದ ಮೋಹನನು|| ೪ ||
ಜಯ ಜಯ ಗಾಂಧಿ ||

ದಾಸನು ಮೆಟ್ರಿಕ್ ಪರೀಕ್ಷೆ ಮುಗಿಸಲು |
ಆಶಿಸಿದನು ಹೆಚ್ಚು ವಿದ್ಯೆಯ ಕಲಿಯಲು ||
ಅಗ್ರಜತಮ್ಮನ ಆಸೆಯಸಲಿಸಲು ||
ವ್ಯಗ್ರನಾಗದೆ ವಿದೇಶಕೆ ಕಳಿಸಲು|| ೫ ||
ಜಯ ಜಯ ಗಾಂಧಿ ||

ಹದಿನಾಲ್ಕು ವರುಷ ಆಗಲು ಮದುವೆಯ |
ಮುದದಲಿ ಕಸ್ತೂರಿಬಾಯಿಯ ಜೊತೆಯಲಿ ||
ಮಾಡಲು ಸತಿಯಳ ಮಾತೆಯ ಸನಿಹದಿ |
ದೂಡುತ ವಿದೇಶದೆಡೆ ನಡೆದಿಹನು|| ೬ ||
ಜಯ ಜಯ ಗಾಂಧಿ ||

ಮಾತೆಗೆ ವಿದೇಶದೆಡೆಯಲಿ ಕೊಟ್ಟನು |
ಮಾತನು ಮಾಂಸವ ಮದ್ಯವ ಮುಟ್ಟೆನು ||
ಎನ್ನುತ ಹೋಗಿಹ ಮೋಹನದಾಸನು |
ಭಿನ್ನಭೇದಲಿ ಕುಲಜನ ದೂಷಿಸೆ|| ೭ ||
ಜಯ ಜಯ ಗಾಂಧಿ ||

ಕುಲಛಲಶೀಲವು ಕೆಟ್ಟಿತು ನಮ್ಮಯ |
ಕುಲದಲಿ ಸೇರಿಸಲಾರೆವು ಸುಮ್ಮನೆ ||
ಕಳಿಸಲಿಬೇಡರಿ ವಿದೇಶಕೆನ್ನುವ |
ತಿಳಿಗೇಡಿಗಳನು ತಾ ಮನ್ನಿಸದೆ|| ೮ ||
ಜಯ ಜಯ ಗಾಂಧಿ ||

ಮೋಹನದಾಸನು ಲಂಡನ್ ನಗರಕೆ |
ಆಹಾನಡೆದನು ದಾಟುತ ಸಾಗರ ||
ಮೂರು ವರ್ಷದಲಿ ವ್ಯಾಸಂಗ ಮಾಡುತ |
ಬ್ಯಾರಿಸ್ಟರ್ ಪಡೆದನು ಕಾಲದೂಡತ|| ೯ ||
ಜಯ ಜಯ ಗಾಂಧಿ ||

ಬಗೆಬಗೆ ಧರ್ಮದ ಗ್ರಂಥಗಳನ್ನು |
ನಗುಮೊಗದಿಂದೋದಿನವುಗಳನು ||
ಕೊನೆಯಲಿ ಗೀತೆಯ ನಚ್ಚುತ, ಸಂತತ |
ಅನುಸರಿಸಿದ ಜೀವನ ಪರಿಯಂತ|| ೧೦ ||

ಜಯ ಜಯ ಗಾಂಧಿ ||
ಶಾಖಾಹಾರದಿ ಬಾಳನು ನಡೆಸಿದ |
ಬೇಕುಗಳೆಂಬುದ ಪರಿಮಿತಗೊಳಿಸಿದ ||
ಬ್ರಹ್ಮಚರ್ಯವನು ಸಾಧಿಸತನುದಿನ |
ಬ್ರಹ್ಮತನದಿ ನಡೆಯಲ್ಮನಮಾಡಿದ|| ೧೧ ||
ಜಯ ಜಯ ಗಾಂಧಿ ||

ಭಾರತದೇಶಕೆ ಹಿಂತಿರುಗಲು ಘನ |
ಭಾರದುಃಖದ ಸುದ್ದಿಗಳವನಾ ||
ಮಾತೆಯುಮಡಿದಿಹ ಕುಲಜನರೆಲ್ಲರು |
ಜಾತಿಯಿಂದ ಹೊರಹಾಕಿದಬಲ್ಲುಲಿ|| ೧೨ ||
ಜಯ ಜಯ ಗಾಂಧಿ ||

ಮನೆತನಕಷ್ಟಗಳೊಂದೇ ಅಲ್ಲವು |
ದಿನದಿನದಲಿ ನಮ್ಮ ದೇಶದೊಳೆಲ್ಲವು ||
ಪರಕೀಯರಾದ ಆಂಗ್ಲರು, ನಮ್ಮನು,
ಗರುವದಿ ಘಾಸಿಸುತಾಳ್ದರು ನಮ್ಮನು|| ೧೩ ||
ಜಯ ಜಯ ಗಾಂಧಿ ||

ಎಲ್ಲಾ ಕಚೇರಿ ಆಡಳಿತದಲಿ |
ಲ್ಲಂತೆ ಆಂಗ್ಲರು ಭಾರತದಲ್ಲಿ ||
ಬಹುತರ ಘಾತಕತನ ತೋರುತಲಿ |
ಅಹಿತವಮಾಡುತ ವಿಷಕಾರುತಲಿ|| ೧೪ ||
ಜಯ ಜಯ ಗಾಂಧಿ ||

ಸಿರಿವಂತರು, ವರಜಮಿನುದಾರರು |
ಅರಸರು ವಿದ್ಯಾಬುದ್ಧಿಯುಳ್ಳವರು ||
ಪರಕೀಯರಾಸೆಯ ನೆರವೇರಿಸಲು |
ಅರಿಯದಬಡವರ ತೊತ್ತಳದುಳಿಯಲು|| ೧೫ ||
ಜಯ ಜಯ ಗಾಂಧಿ ||

ಎತ್ತನೋಡಿದರು ಭಾರತದಲ್ಲಿ |
ಮತ್ತೆ ಕಾಣುತಿದೆ ಬಡವರನಿಲ್ಲಿ ||
ಯಾರು ರಕ್ಷಿಸದೆ, ತಮ್ಮ ತಮ್ಮ ಸೌಖ್ಯಕೆ |
ಸೂರೆಗೊಳ್ಳುವರು, ಸಿರಿಯಂ ಮುಖ್ಯದೆ|| ೧೬ ||
ಜಯ ಜಯ ಗಾಂಧಿ ||

ಪರಿಶೋಕವ ತುಂಬಿರ್ಪುದುದಂ |
ತಾಪದಿನೋಡಿದ ಮೋಹನದಾಸಂ ||
ನಿರಾಸೆಹೊಂದದೆ ಜನರಲಿ ಜಾಗ್ರತೆ |
ತ್ವರೆಯಿಂ ಮೂಡಿಸಿದನು ಮತೆ-ಮತ್ತೆ|| ೧೭ ||
ಜಯ ಜಯ ಗಾಂಧಿ ||

ಇದೇ ಸಮಯದಿ ಆಫ್ರಿಕದಿಂದಲಿ !
ಒದಗಿತುಕರೆ ಮೋಹನದಾಸರಿಗೆ ||
ಶೇಕಬ್ದುಲ್ಲಾಶೇಟರ ಕಡೆಯಿಂ |
ಶೋಕಮೊಕದ್ದಮೆ ಬಿಡಿಸಲ್ಭಿಡೆಯಿಂ|| ೧೮ ||
ಜಯ ಜಯ ಗಾಂಧಿ ||

ನಡೆದನು ಆಫ್ರಿಕದೇಶದೊಳಲ್ಲಿ |
ಬಿಡಿಸಿದ ಶೇಟರ ಬಹುಪರಿಯಲಿ ||
ಕೆಟ್ಟಮೊಕದ್ದಮೆಯನು ಸರಿಪಡಿಸಿದ |
ದಿಟ್ಟತನದ ಸತ್ಯದಮೇಳದಲಿ|| ೧೯ ||
ಜಯ ಜಯ ಗಾಂಧಿ ||

ಆ ದೇಶದಲಿ ಭಾರತೀಯರಿಗೆ |
ಸಾಧಿಸಿಬಿಳಿಯರು ವಿಧವಿಧದಿಂ, ಢಗೆ ||
ತಲೆಗಂದಾಯವ ಹೇರುತಘನತರ |
ಗುಲಾಮರಂತೆ ಆಳುತಲಿವರಾ|| ೨೦ ||
ಜಯ ಜಯ ಗಾಂಧಿ ||

ಕಷ್ಟದಿಶಿಲುಕಿಸಿ ಮೋಜನು, ನೋಡ್ವದು |
ದುಷ್ಟರಪರಿಯಿದ ಮೋಹನ ನೋಡುತ ||
ಗಟ್ಟಿಮನಸಿನಿಂದ ಭಾರತೀಯರನು |
ಒಟ್ಟುಮಾಡಿ ನಡೆಸಿದ ಚಳವಳಿಯನು|| ೨೧ ||
ಜಯ ಜಯ ಗಾಂಧಿ ||

ಚಳವಳಿ ಸರಕಾರವಿರುದ್ಧ ನಡೆಸಲು |
ಬಿಳಿಯರು ಬೆದರದೆ ಆಡಳಿತ ನಡೆಸಲು ||
ಕೊನೆಗೆಬಿಳಿಯರು ತಗ್ಗಿ ಕುಗ್ಗುತಲಿ |
ಮನಮಾಡಿಹರಾ ಕ್ರಾಂತಿವೀರರು|| ೨೨ ||
ಜಯ ಜಯ ಗಾಂಧಿ

ಇಷ್ಟವನಡೆಸಲು ಮೋಹನದಾಸನು |
ಇಷ್ಟು ಮಾಡಲು ಆಫ್ರಿಕದೇಶಕೆ ||
ಎರಡುಬಾರಿಯೂ ಹೋದನು ದಯದಿಂ |
ಸಿರಿಸಂಪದನವನು ನೀಡಲುನಯದಿಂ|| ೨೩ ||
ಜಯ ಜಯ ಗಾಂಧಿ ||

ತೊರೆಯು ತಲಾ ಸಿರಿಕಾಣಿಕೆಯನ್ನು |
ತಿರುಗಿಬರುವಾಗ ಭಾರತಕಿನ್ನು ||
ಪೇಳಿದನಾಸಿರಿ ಬಡವರಿಗೀಯಿರಿ |
ತಾಳಿರಿ ಸಂತಸಮೆನ್ನುತ್ತವರನು|| ೨೪ ||
ಜಯ ಜಯ ಗಾಂಧಿ ||

ಸತಿಗೆ ಶಾಂತಿಯನು ಹೇಳುತಲಾತನು |
ಋತದಿಂ ನಮ್ಮಯದೇಶಕೆ ಬಂದನು ||
ಇಲ್ಲಿಯಜನಕಿಹ ಕಷ್ಟವನೋಡುತ ||
ಮಲ್ಲಮನದಲಿ ದೃಢತೆಯ ಮಾಡುತ|| ೨೫ ||
ಜಯ ಜಯ ಗಾಂಧಿ ||

ಟಳಕರ ಕೆಚ್ಚನು, ಬಿಪಿನರ, ಲಾಲರ |
ತಿಳಿವನು ಗೋಖಲೆಯವರಾ ಶೀಲದ ||
ತಾ, ಸಹಕಾರವ ಪೊಂದುತ ದೇಶದಿ |
ಸೂಸುವಧೈರ್ಯದಿ ಚಳವಳಿನಡೆಸಿದ|| ೨೬ ||
ಜಯ ಜಯ ಗಾಂಧಿ ||

ಇದಕಿಂ ಮೊದಲೇ ಕಾಂಗ್ರೆಸಪಕ್ಷವು |
ಮುದದಿಂ ಸ್ಥಾಪನೆ ಗೊಂಡಿರಲದನು ||
ಅದಕೆನಾಯಕನು, ತಾನಾಗುತಲಿ |
ಅದರಲಿ, ತಿದ್ದಿದ ನೂತನದಲ್ಲಿ|| ೨೭ ||
ಜಯ ಜಯ ಗಾಂಧಿ ||

ಪ್ರತಿಯೊಂದನ್ನು ತಿಳಿಸುತ ಸರಕಾರ |
ದತಿನೀತಿಯನು ಖಂಡಿಸುತೀತನು ||
ಚಳವಳಿಹೂಡುತ, ತನ್ನ ಮಾತನು |
ಘಳಿಲನೆ, ನಡೆಯಿಸಿಕೊಳ್ಳುವ ಚತುರನು|| ೨೮ ||
ಜಯ ಜಯ ಗಾಂಧಿ ||

ಉಪ್ಪಿನ ಚಳವಳಿ ನೀಲಿಯಚಳವಳಿ |
ತಪ್ಪದೆ, ತೊಲಗಿರಿ ಎನ್ನುವ ಚಳವಳಿ ||
ಮಾಡುತ ಸ್ವರಾಜ್ಯಗಳಿಸಿದನಾತನು |
ನೋಡದೆ, ನಡೆದನು ಮುಂದಿನ ಕಥೆಯನು|| ೨೯ ||
ಜಯ ಜಯ ಗಾಂಧಿ ||

ಭೂಮಿಯೊಳಿಲ್ಲಿ ಜನಿಸಿದನಾವೆಲ್ಲ |
ಈ, ಮನೆ ನೆಲಜಲ ಬೆಳಕುಗಳೆಲ್ಲ ||
ಸಮನಾಗಿಕೊಳ್ಳಿರಿ ನೀವೆಂದಾತನು |
ವಿಮಲಬುದ್ಧಿವಾದ ಹೇಳಿದನಾತನು|| ೩೦ ||
ಜಯ ಜಯ ಗಾಂಧಿ ||

ಸತ್ಯಸಮಾನತೆ, ನ್ಯಾಯ ಶೀಲವನು |
ನಿತ್ಯಪಡೆಯಲು ವ್ಯರ್ಥಕಾಲವನು ||
ಕಳೆಯದೆ ಎಲ್ಲರು ಒಂದೇ ಎಂಬ |
ಬೆಳೆಯಲಿ ಭಾವನೆ, ನಿಮ್ಮೊಳು ತುಂಬ|| ೩೧ ||
ಜಯ ಜಯ ಗಾಂಧಿ ||

ಈ, ಸ್ವರಾಜ್ಯವ, ಪಡೆಯಲ್ಕಾತನು |
ವಾಸಿಸಿದನು ಬಹು ಸೆರೆಮನೆಗಳನು ||
ಉಪವಾಸ ವೃತಗಳನೆಷ್ಟೋಮಾಡುತ |
ಕಪಟವಿರಹಿತ ಮೋಹನನಾತ|| ೩೨ ||
ಜಯ ಜಯ ಗಾಂಧಿ ||

ಶೋಕಗಳೆನಿತೋ ಪೊಂದುತಲಾತನು |
ನಾಕಸ್ವರಾಜ್ಯವ ನಮಗಿತ್ತಿಹನು ||
ಈ ಕಾರಣದಿಂದಾತನಿಗೆಂದರು |
ಶೋಕರಹಿತಘನ ಮಹಾತ್ಮಗಾಂಧಿ|| ೩೩ ||
ಜಯ ಜಯ ಗಾಂಧಿ ||

ರಾಷ್ಟ್ರಪಿತನೆ, ನಿನ್ನೀವರ ಚರಿತೆಯ
ರಾಷ್ಟ್ರದಲೆನಿತೋ, ಜನಹಾಡುವರು
ನನ್ನಯೋಗ್ಯತೆಯೋ? ನಿನ್ನ ಹಾಡಲು |
ಇನ್ನೊಮ್ಮೆ ನೀ ಬಾ, ಈ ಭುವಿನೋಡಲು|| ೩೪ ||
ಜಯ ಜಯ ಗಾಂಧಿ ||

ಎಂದು ಹಾಡುವನು ನರಸಿಂಹಗುಪ್ತನು |
ಅಂದದ ಶಂಕರಲಿಂಗನ ಭಕ್ತನು ||
ಬಳಿಚಕ್ರ ಪುರದವನೀತಗೆ ಸತ್ಯವ |
ತಿಳಿಸಾಲುಬಾರೈ ಮತ್ತೊಮ್ಮೆ ನಿತ್ಯವ
ಜಯ ಜಯ ಗಾಂಧಿ ||

ಸೂಚನೆ : ಜಯ ಜಯ ಗಾಂಧಿ ಮಹಾತ್ಮ ಗಾಂಧಿ ||
ಜಯ ಜಯ ಗಾಂಧಿ ಮಹಾತ್ಮ ಗಾಂಧಿ|| ೦||
ಈ ಎರಡು, ಅಡಿಗಳನ್ನು ಪ್ರತಿಯೊಂದು ನುಡಿಗೂ ಹಿಮ್ಮೇಳದವರು ‘ಲಾವಣಿ’ಯಲ್ಲಿ ನುಡಿಯಬೇಕು.

ರಚನೆ :
ನರಸಿಂಹಗುಪ್ತ ಬಳಿಚಕ್ರ
ಕೃತಿ :
ಜನಪದ ಗೀತೆಗಳು