ಭಕ್ತಿ ಇದ್ದವರಿಗೆ ಮುಕ್ತಿ ಆಗುವುದು
ಭಕ್ತಿ ಇಲ್ಲದವ ನರಕ ಸ್ವಾಧೀನಾ
ಭಕ್ತಿಯಿಂದ ಶಕ್ತಿ ಸರ್ವ ಸಾಧನಾ ||
ಕಾಂಚಿಪುರದ ಸಿರಿಯಾಳನ ಭಕ್ತಿ
ನೋಡಲಿಕ್ಕೆ ಬಂದ ಭಗವಾನಾ
ಆದ ಪ್ರಸನ್ನಾ ||
ಶಿವಾ ಪಾರ್ವತಿ ಆನಂದದಲ್ಲಿ ತಾವು
ಏರಿಕೊಂಡ ಕೂತಾರ ಸದನಾ
ತಂಬೂರಿ ನಾದ ಆತ ಜನನಾ ||
ತ್ರಿಲೋಕ ಸಂಚಾರಿ ನಾರದಮುನಿ ಬಂದ
ಜೋಡಿಸಿ ನಿಂತ ಎರಡು ಕೈಗಳನು
ಮಾಡಿ ಮುಜರಿಯನಾ ||
ಶಿವಾ ಪಾರ್ವತಿ ಪ್ರೀತೀಲಿ ಕೂಡ್ರಿಸಿ
ಪ್ರಶ್ನೆ ಮಾಡತಾರ ನಾರದನ್ನಾ
ನಿಮ್ಮ ಭೇಟಿಯಾಗಿದ್ದಿಲ್ಲ ಬಾಳ ದಿನಾ ||
ಯಾವ ಕಡಿಂದ ಬಂದ್ರಿ ಏನ ಸಮಾಚಾರ ತಂದ್ರಿ
ಚಂದದಿಂದ ಮಾಡರಿ ಕಥನಾ
ಇನ್ನ ಯಾವ ಕಡೆ ನಿಮ್ಮ ಗಮನಾ ||
ಮೃತ್ಯ ಲೋಕವೆಲ್ಲಾ ಸುತ್ತಹಾದ ಬನ್ನಿ
ಕಾಂಚಿಪುರ ಅಂಬೋದು ರಾಜಪಟ್ಟಣಾ
ಅದು ಸಿರಿಯಾಳ ಅರಸನ ಸ್ವಾಧೀನಾ ||
ಚೆಂಗಳಿ ಅವನ ಸತಿ ತಕ್ಕಂತ ಒಳ್ಳೆ ಗರತಿ
ಚೆಲ್ಲಾಳ ಅಂಬುವವ ಮಗನಾ
ಸತ್ಯತ್ವದಲ್ಲಿ ಪ್ರಜಾಪಾಲನಾ ||
ಒಂದನೇ ಚಾಲ
ಅತಿಥಿಗಳಿಗೆ ದಿನಾ ದಿನಾ ಹಾಕತಾನ ಅನ್ನಾ
ಅರವಿ ಕೊಡತಾನು
ಸತ್ಕಾರ್ಯ ಸದಾ ಲೋಲನು ||
ಕಾಂಚಿ ಪುರಕ ಅನಬೇಕ ಕೈಲಾಸ ನೋಡಿ ಆತ ಹರುಷ
ಮಾಡುತ ಸದಾಶಿವ ಧ್ಯಾನಾ
ಎಲ್ಲಿ ಕೇಳಿದಲ್ಲಿ ಕೀರ್ತನಾ ||
ಯಾರು ಇಲ್ಲನೋಡ್ರಿ ಅವನ ಸರಿ ಸುಳ್ಳ ಅಂದೇರಿ
ಐತಿ ಇಲ್ಲೇನಾ
ಹೋಗಿ ನೋಡಿ ಬರ್ರಿ ಒಂದ ದಿನಾ ||
ಎರಡನೇ ಚಾಲ
ಶಿವಾ ಅಂದ ನಾರದ ಮುನಿ ಮುಂದಾ
ಕಾಂಚಿಪುರಕೆ ಹೋಗುವ ನಾನು ಇಂದಾ ||
ಭಕ್ತಿ ಪರೀಕ್ಷೆ ಮಾಡುವೆ ಆತಂದಾ
ಜಂಗಮ ವೇಷ ಶಿವಾ ಧರಿಸೀದಾ ||
ಮೃತ್ಯಲೋಕ ಮಾರ್ಗಾ ಹಿಡಿದ ನಡದಾ
ಕೈಲಾಸದಿಂದ ಕಾಂಚಿಪುರಕ ಬಂದಾ ||
||ಏರು||
ಕೆಟ್ಟ ವೇಷ ಮೈ ಗಾಯ ತುಂಬಿತ್ತು
ರಕ್ತ ಕೀಂವ ಇಪ್ಪಿಯ ನೊಣಾ
ಜೊಲ್ಲ ಸೋರತಿತ್ತ ಇಲ್ಲರಿ ಹಸನಾ
ಪಿಚ್ಚ ಮೆತ್ತಹಾಕಿ ಎರಡೂ ಕಣ್ಣಾ ||
ಕಾಂಚಿಪುರದ ಸಿರಿಯಾಳನ ಭಕ್ತಿ
ನೋಡಲಿಕ್ಕೆ ಬಂದ ಭಗವಾನಾ
ಆದ ಪ್ರಸನ್ನ || ೧ ||
ಅತಿಥಿ ಬಂದಿದೇನ ಅನ್ನಾ ನೀಡಿರೆಂತ
ಒದರತಿದ್ದ ವಾಡೇದ ಮುಂದಾ
ಹಸದೇನು ಅಂದಾ ||
ನೋಡಿದ್ವಾರಪಾಲ ಓಡಿಹೋಗಿ ಆಗ
ತಿಳಿಸಿದಾನ ಅರಸನ ಮುಂದಾ
ಅವನ್ನ ಹಿಂದಕ್ಕೆ ಅಟ್ಟುವೆನೆಂದಾ ||
ಕೆಟ್ಟಮಾರಿ ಹಿಂತಾ ಬಟ್ಟಹರಕನ್ನ
ನಾ ಎಂದೂ ನೋಡಿದ್ದಿಲ್ಲ ದುರ್ಗಂಧಾ
ನಾರುವುದಂದಾ ||
ಕೆಟ್ಟ ಇದ್ದರ ಅಂವ ಸಿಟ್ಟಿಗೇಳಬ್ಯಾಡ
ಹಿಂದಕ್ಕಟ್ಟಿದೆ ಕರತಾ ಅಂದಾ
ಬಂದೀತ ಕುಂದಾ ||
ಏಳೂತ ಬೀಳೂತ ಬಗ್ಗಿ ಬಡಗಿ ಹಿಡಿದ
ಮುದುಕ ನಿಂತಕೊಂಡಾನ ಬಂದಾ
ಅರಸನ ಮುಂದಾ ||
ಅಕರಾತಿಲೆ ಅರಸ ಎತ್ತಿಕೊಂಡ
ತನ್ನ ಸಿಂಹಾಸನಕ ಇಳಿಸಿದಾ ಓದಾ
ಅರವಿಯ ಕಳದಾ ||
ಸಿರಿಯಾಳ ಚಂಗಳಿ ಕೂಡಿ ಬಚ್ಚಲಕ ಓದು
ನಾನಾತರದ ತೈಲ ಮಕರಂದಾ
ಹೆಚ್ಚ್ಯಾರು ತಂದಾ ||
ಗಂಧ ಕಸ್ತೂರಿ ಚೆಂದದಿ ಬೆರಸಿ
ಜಳಕ ಮಾಡಿಸಿದಾರ ಮುದಕಂದಾ
ಆತ ಆನಂದಾ ||
ಒಂದನೇ ಚಾಲ
ಕುಂಡರಸ್ಯಾರು ದೇವ ಮನಿಯೊಳಗ ಗದ್ದಿಗಿ ಮ್ಯಾಗ
ಪರಿಮಳ ಪುಷ್ಪ ತರಿಸ್ಯಾನು
ಪಾದಪೂಜೆ ಮಾಡಿ ಕೇಳ್ಯಾನು ||
ಏನ ಐತಿ ನಿಮ್ಮ ಇಷ್ಟಾರ್ಥ ಹೇಳರಿ ಸ್ಪಷ್ಟ
ಬೇಡಿದ್ದ ಕೊಡತೇನು
ಕೊಟ್ಟ ವಚನ ತಪ್ಪುವನಲ್ಲ ನಾನು ||
ಬೇಕಷ್ಟ ಬೆಳ್ಳಿ ಬಂಗಾರ ರೊಕ್ಕದ ಭಂಡಾರ
ಅಲ್ಲದೆ ಮತ್ತೆ ಬೇಕೇನು
ಕಡಿಮಿಲ್ಲ ನನಗೆ ಏನೇನು ||
ಎರಡನೇ ಚಾಲ
ಅತಿಥಿ ಅಂತಾನು ಇದು ಖಾಲಿ
ದ್ರವ್ಯ ಓದ ನಾಯೇನ ಮಾಡsಲಿ ||
ನರಮಾಂಸ ಬೇಕೋ ಸಧ್ಯದಲ್ಲಿ
ಇದು ನಿಚ್ಚ ತಿಳಿಯೋ ಮನದಲ್ಲಿ ||
ಆಗದಿದ್ದರೆ ಹೇಳೋ ತೀವ್ರದಲ್ಲಿ
ಶಾಪ ಕೊಟ್ಟು ಹೋಗುವೆ ಕ್ಷಣದಲ್ಲಿ ||
||ಏರು||
ಘಾತ ಆತ ಅಂದ ಹೋತ ವಚನ ನಂದ
ಸಿರಿಯಾಳ ಕರದ ತನ್ನ ನೌಕರನಾ
ತರಬೇಕೋ ಮನುಷ್ಯರ ಮಾಂಸವನಾ ||
ಕಾಂಚಿಪುರದ ಸಿರಿಯಾಳನ ಭಕ್ತಿ
ನೋಡಲಿಕ್ಕೆ ಬಂದ ಭಗವಾನಾ
ಆದ ಪ್ರಸನ್ನ || || ೨ ||
ಸಿರಿಯಾಳ ಅರಸ ತನ್ನ ಆಳಿಗೆ ತಿಳಿಸಿದ್ದು
ಸ್ವಾಮಿ ಕೂತ ಕೇಳ್ಯಾನು ಆಗ
ಅಂತಾನ ಹಿಂಗ ||
ಅನ್ಯರ ಮಾಂಸಾನಾನು ಉಣಲೊಲ್ಲೆ ನಿಮ್ಮ ಮಗನ
ಮಾಂಸಾ ನೀಡರಿ ಬೇಗ
ಉಣ್ಣುವೆನೀಗ ||
ಇಷ್ಟಕೇಳಿ ಅರಸ ನಿಷ್ಠುರಮಾಡಿ ಮನಸ
ಮಡದಿ ನೀ ಬಾ ಅಂದ ಚಂಗಳಿಗೆ
ಹೇಳ್ಯಾನು ಹಿಂಗೆ ||
ಕೇಳಿ ಚಂಗಳಿ ಮೂರ್ಚೆ ಬಂದು
ಉರುಳಿ ಬಿದ್ದಾಳ ಧರಣಿಯ ಮ್ಯಾಗ
ಬಡದಿತ ದಿಂಗ ||
ಬಿದ್ದ ಚಂಗಳಿ ಒದ್ದಾಡಿ ಎದ್ದ ಕುಂತ
ಶೋಕಮಾಡತಾಳ ಮನದಾಗ
ಏನ ಬಂತೊ ಶಂಭೋ ಶಂಕರ ನನಗ ||
ಹೆತ್ತ ಕೂಸಿನ ಕುತ್ಗಿ ಕೊಯ್ದು
ತುತ್ತ ಮಾಡೋದಾತ ಜಂಗಮಗ
ಅಂತಾಳ ಹಿಂಗ ||
ಸಿರಿಯಾಳ ಅರಸ ಆಗ ಸಮಾಧನ ಹೇಳಿ
ಮ್ಯಾಲ ಎಬ್ಬಿಸಿದ ಚಂಗಳಿಗೆ
ಶೋಕ ಮಾಡಬ್ಯಾಡ ನೀ ಈಗ ||
ಸಿಟ್ಟಿಗೆದ್ದ ಅತಿಥಿ ಅಂತಾನ
ಹೊಟ್ಟಿ ಹಸಿವಿ ಆಗೇತಿ ನನಗ
ನೀಡಿರಿ ಬೇಗ ||
ಒಂದನೇ ಚಾಲ
ಅತಿಥಿ ಆಡಿದಂಥಾ ವಚನ ಒಪ್ಪಿಕೊಂಡ ತಾನ
ಮಗನ್ನ ಕರಿ ಅಂತಾ
ಚಂಗಳಿಗೆ ಹೇಳಿದ ತುರ್ತಾ ||
ಲಗುಬಗಿ ಕಂದನ್ನ ಕರಿಸಿ ಚಂಡ ರುಂಡ ಕೊರೆಸಿ
ಮಾಡಿಸು ಅಡಿಗಿ ತುರ್ತಾ
ಇಷ್ಟಹೇಳಿ ಸುಮ್ಮನೆ ಕುಂತಾ ||
ಎರಡನೇ ಚಾಲ
ಹೋಗಿ ನಿಂತಾಳು ಚಂಗಳಿ ಬಾಗಿಲ ಮುಂದಾ
ಎಲ್ಲಿ ಇರುವಿ ಚಿಲ್ಲಾಳಾ ಬಾರೋ ಕಂದಾ ||
ತಕ್ಷಣಕ ಮಗಾ ಅವ್ವಾ ಅಂದಾ
ಅಡಬಡಿಸಿ ಚಿಲ್ಲಾಳಾ ಓಡಿ ಬಂದಾ ||
ಚಂಡಗುಂಡಿನ ಆಟ ಒಳ್ಳೆದುಂದಾ
ಆಡೋ ಸರತಿ ಬಂದಿತ್ತು ಈಗ ನಂದಾ ||
||ಏರು||
ಗಂಟಲ ಬಿಗಿದು ದುಃಖ ವಟ್ಟರಿಸಿ
ತೆಕ್ಕಿಯೊಳಗ ಅಪ್ಪ್ಯಾಳ ಮಗನಾ
ಕುಂತಾಳ ಸುಮ್ಮನಾ ||
ಕಾಂಚಿಪುರದ ಸಿರಯಾಳ ಭಕ್ತಿ
ನೋಡಲಿಕ್ಕೆ ಬಂದ ಭಗವಾನಾ
ಆದ ಪ್ರಸನ್ನಾ || || ೩ ||
ಯಾಕಕರದೆ ತಾಯಿ ಏನ ಕಾರಣಾ
ಶೋಕ ಮಾಡುವಿ ಚಿಂತಿ
ಅಳವುತ ಕುಂತಿ ||
ನಿನ್ನ ಶಿರಾ ಕೊಯ್ದು ಮಾಂಸದ ಅಡಿಗಿ
ಮಾಡಿ ನೀಡಿರೆಂದ ಅತಿಥಿ
ಇನ್ನೇನು ಗತಿ ||
ಮಗನ್ನ ಮೇಲಕ್ಕೆತ್ತಿ ಮುದ್ದಾಡಿ ಅಂತಾಳ
ನಿನ್ನ ಮುಖಾ ಇಂದಿಗೆ ಎರವಾತಿ
ನಮ್ಮನ್ನ ಮರತಿ ||
ಚಿಲ್ಲಾಳ ಅನ್ನೋ ಸಲ್ಲ ಇಲ್ಲದಾತೊ
ನಾ ತಿನಿಸಿ ಉಣಿಸಿ ಮಾಡಿನ್ನೊ ಪ್ರೀತಿ
ಒಳ್ಳೆ ಅಕ್ಕರತಿ ||
ಮಾತೆ ಕೇಳ ಇದು ಮಿಥ್ಯಾ ಶರೀರಾ
ಹುಟ್ಟೋದು ಸಾಯೋದು ನಡದsತಿ
ಎಂದ ಬಿಟ್ಟsತಿ ||
ಸುತ್ಪಾತ್ರಕ್ಕದ ನನ್ನ ದಾನಾ ನೀಡಿರಿ
ಮೂರೂ ಮಂದಿಗೆ ಆಗೋದು ಮುಕ್ತಿ
ಹಬ್ಬೀತು ಕೀರ್ತಿ ||
ಅಂದ ಚೆಂದದ ಮಾತ ಕಂದ ಆಡೋದ ಕೇಳಿ
ಶೋಕ ಮಾಡತಾಳ ಪತಿವರತಿ
ಮಾತ ಕೊಟ್ಟಿದಾನ ಪ್ರಾಣಪತಿ ||
ನಿಷ್ಠುರ ಮನಸಮಾಡಿ ನಿಂತಾಳ ಎದುರಿಗಿ
ವರಿಯ ಜಗ್ಗಿ ಹಿರಿದಾಳ ಕತ್ತಿ
ಕಡಿದಾಳ ಎತ್ತಿ ||
ಒಂದನೇ ಜಾಲ
ಕುಲು ಕುಲು ಕೂಸ ನಗುವೂತ ಪ್ರಾಣ ಬಿಟ್ಟೇತ
ಸಣ್ಣ ಕಳಲಾ
ಮಾರಿ ಕಳಾ ಕಡಿಮಿ ಆಗಿಲ್ಲಾ ||
ಲಗುಬಗಿ ಕೂಸಾನ್ನ ಕೊಚ್ಚಿ ತೊಳದಾರು ಸ್ವಚ್ಛಿ
ಸಾಹಿತ್ಯ ಸರ್ವೆಲ್ಲಾ
ಕೂಡಿಸ್ಯಾರ ತಡಾ ಆಗಲಿಲ್ಲಾ ||
ತಗದಿಟ್ಟಕೊಂಡಾಳು ಚಂಡ ಮಾಡ್ಯಾಳ ಬರೆರುಂಡ
ಮಗನ ಹಂಬಲಾ
ಅವಸರಲಿ ಅಡಿಗಿ ತಾತ್ಕಾಲಾ ||
ಎರಡನೇ ಚಾಲ
ಎಡಿ ಬಡಿಸಿ ಕೊಟ್ಟಾಳ ಸ್ವಾಮಿ ಮುಂದಾ
ಖೂನಾ ಹಿಡದ ಶಿವಾ ಸಿಟ್ಟಿಗೆದ್ದಾ ||
ರುಂಡ ಉಂಡ ಬತಿಗೆಡೆನು ಅಂದಾ
ಚೆಂಡ ತಿನ್ನುವೆ ಮೊದಲ ತಾ ಅಂದಾ ||
ಇಟ್ಟಾಳ ಚಂಗಳಿ ಚಂಡ ತಂದಿದಾ
ನೋಡಿ ಅತಿಥಿ ಆದಾನು ಆನಂದಾ
||ಏರು||
ಈ ಚೆಂಡ ಒಯ್ದು ಒಳಕಲ್ಲಿನೊಳಗ ಹಾಕಿ
ಒಳಕಿಲಿಂದ ಕುಟ್ಟರಿ ಇದನ್ನಾ
ಮಾಡರಿ ಸಣ್ಣಾ ||
ಕಾಂಚಿಪುರದ ಸಿರಿಯಾಳನ ಭಕ್ತಿ
ನೋಡಲಿಕ್ಕೆ ಬಂದ ಭಗವಾನಾ
ಆದ ಪ್ರಸನ್ನಾ || || ೪ ||
ಸಿರಿಯಾಳ ಚಂಗಳಿ ಚೆಂಡ ಕುಟ್ಟುವಾಗ
ಆನಂದದಲ್ಲಿ ಹಾಡ್ಯಾರ ಗೀತಾ
ಸ್ವಾಮಿ ಅದನ್ನ ಹಿಡದಾನ ಗುರತಾ ||
ಚೆಂಡ ರುಂಡ ಎರಡೂ ಕೂಡಿಸಿ ಕಲಸೋದು
ಶಿವಾ ನೋಡಿದಾನ ಕುಂತಾ
ಅಂತಾನ ಮಸ್ತಾ ||
ಮಗನ ಮೋಹದಲ್ಲಿ ನೀವು ದುಃಖ ಮಾಡಿದರ
ಊಟಕ್ಕ ನಾನು ಒಲ್ಲೆನು ಅಂತಾ
ಮೊದಲ ತಿಳಿಸಿದೇನ ಈ ಮಾತಾ ||
ಸರ್ವ ಕೆಲಸ ಪರಿಹಾರವಾದೀತ
ಮೂರು ಎಡಿಯ ಮಾಡರಿ ತುರಿತಾ
ತೆಗದಾನ ಬೇತಾ ||
ಅತಿಥಿ ಆಡಿದ್ದಕ್ಕ ಸಿರಿಯಾಳ ಅಂತಾನ
ಮೂರು ಎಡಿ ಯಾರ್ಯಾರಿಗಂತಾ
ಕೇಳ್ಯಾನು ಅಂಜುತಾ ||
ನಾನು ನೀನು ನಿನ್ನ ಮಡದಿ ಚಂಗಳಿ
ಮೂವರು ಕೂಡಿ ಉಣ್ಣೋನು ಕೂತಾ
ಅದೋನು ಶಾಂತಾ ||
ಚಂಗಳಿ ಅಂತಾಳಾಗ ಹಡದ ಕೂಸನ್ನ
ಕಡಿದ ತಿನ್ನೋದ ಬಂದೀತ ಹೊತ್ತಾ
ದೇವಾ ಭಗವಂತಾ ||
ಅರಸನ ವಚನಾ ಅಲ್ಲಗಳಿಯಲಿಲ್ಲ
ಮೂರ ಎಡಿಯ ಮಾಡ್ಯಾಳ ತುರ್ತಾ
ಉಣ್ಣುವೆನಂತಾ ||
ಒಂದನೇ ಚಾಲ
ಎಡಿಬಿಟ್ಟ ಸ್ವಾಮಿ ಎದ್ದನಿಂತ ಹೋಗುವೆನು ಅಂತ
ಊಟ ಮಾಡೋದಿಲ್ಲಾ
ಅರಸ ಹಿಡಿದ ಅತಿಥಿಯ ಕಾಲಾ ||
ಸ್ವಾಮಿ ಏನ ಬಂತ ಸಂಕೋಚ ಹೇಳರಿ ಸ್ವಚ್ಛ
ಕೊಟ್ಟ ವಚನ ನಾನು ತಪ್ಪಿಲ್ಲಾ
ಇದು ಏನು ನನಗ ತಿಳಿಲಿಲ್ಲಾ ||
ಮಕ್ಕಳು ಇಲ್ಲದ ಮನಿಯಾಗ ಉಂಡಿಲ್ಲ ಯಾವಾಗ
ನಿಮ್ಮ ಮಗನ್ನ ಕರಿಯೋ ತಾತ್ಕಾಲಾ
ಉಣ್ಣುವೆನು ಅಮ್ಯಾಲಾ ||
ಎರಡನೇ ಚಾಲ
ನಿಮಗ ನೀಡೆವರಿ ಒಬ್ಬ ಮಗಾ ಇದ್ದಾ
ಇನ್ನ ಕರದಿರ ಬಂದಾನು ಎಲ್ಲಿಂದಾ ||
ಯಾವ ದೋಸ ಆಗಿಲ್ಲರಿ ನಮ್ಮಿಂದಾ
ತಿಳಸಿ ಹೇಳರಿ ಚೆಂದದಿಂದಾ ||
ಸಂಶೆ ಬಿಡಿರಿ ಮನಸಿನೊಳಗಿಂದಾ
ತಡಾ ಆದೀತು ಮಗನ್ನ ಕರೀರೆಂದಾ ||
||ಏರು||
ಅತಿಥಿ ಆಡಿದ ವಚನವ ಕೇಳಿ
ಕರಿಲಿಕ್ಕೆ ಹ್ವಾದಾಳು ಚಂಗಳೆ ತಾನಾ
ನಡಗುತಿದ್ದಳು ಒಂದೇ ಸವನಾ ||
ಕಾಂಚಿಪುರದ ಸಿರಿಯಾಳನ ಭಕ್ತಿ
ನೋಡಲಿಕ್ಕೆ ಬಂದ ಭಗವಾನಾ
ಆದ ಪ್ರಸನ್ನ || ೫ ||
ಹೊರಗ ಬಂದ ಎತ್ತ ಹ್ವಾದ್ಯೋ ಮಗನ ಅಂತ
ದುಃಖದಿಂದ ಚಂಗಳೆ ತಾನಾ
ಕರದಾಳ ಮಗನ್ನಾ |
ಅಪ್ಪಾ ಬಾರೋ ನೀನು ಇಲ್ಲದೆ ಅತಿಥಿ
ಮಾಡೋದಿಲ್ಲ ಅಂತ ಊಟವನಾ
ಕುಂತಾನ ಸುಮ್ಮನಾ ||
ಸಾಲಿಗಿ ಹೋಗಿದ್ದ ಪುಸ್ತಕ ಕೈಯ್ಯಾಗ
ಓಡಿ ಬಂದ ಚೆಲ್ಲಾಳ ತಾನಾ
ಯಾಕ ಕರದೆ ಅವ್ವಾ ನನ್ನಾ ||
ಅಪ್ಪಾ ಬಾರೊ ಎಂದು ಗಪ್ಪನೆ ಎತ್ತಿಕೊಂಡು
ಒಳಗ ಬಂದಾಳ ಆ ಕ್ಷಣಾ
ಇಳಿಸ್ಯಾಳ ಮಗನ್ನಾ ||
ಮೊದಲಿನ ವೇಷಾ ಬದಲ ಆಗಿ
ನಗ ಮುಖದಲ್ಲಿ ಕೂತಿದ್ದ ಶಿವನಾ
ಕಂಡಾರು ಅವನ್ನಾ ||
ಗಂಡಾ ಹೇಣತಿ ಮಗಾ ಕೂಡಿಕೊಂಡ
ಗಟ್ಟ್ಯಾಗಿ ಹಿಡದಾರ ಪಾದವನಾ
ಕಾಡಿದ್ಯೋ ನಮನ್ನಾ ||
ಮಾಯಾ ರೂಪದಿಂದ ಮಾಂಸದ ಅಡಿಗಿ
ಪಂಚಾಮೃತ ಆತ ಆಕ್ಷಣಾ
ನೋಡ್ಯಾರು ಅದನ್ನಾ ||
ನಾಲ್ಕು ಎಡಿಯಮಾಡಿ ನಾಲ್ವರು ಕೂಡಿ
ನಕ್ಕೊಂತ ಮಾಡ್ಯಾರ ಊಟವನಾ
ಆತ ನಿವಾರಣಾ ||
ನಿಮ್ಮ ಸತ್ವ ಪರೀಕ್ಷೆ ಸ್ವಂತ ಮಾಡಲಿಕ್ಕೆ
ಮೃತ್ಯೇಕ ಇಳದ ಬಂದೆನು ನಾನಾ
ಆಗ್ರಿ ಉದ್ಧರನಾ ||
ನಿಮ್ಮ ಭಕ್ತಿ ಭಾವಕ್ಕ ನಾನು ಧನ್ಯನಾದೆನು
ನಿಮ್ಮ ಸರಿ ಕಾಣೆನು ಯಾರನ್ನಾ
ಮೆಚ್ಚಿದೆ ನಿಮ್ಮನ್ನಾ ||
ಯಾವ ವರವ ಬೇಕೊ ಬೇಡೋ ಅರಸಾ ನೀನು
ಹರುಷದಿಂದ ಕೊಡುವೆನು ನಾನಾ
ಯಾಕ ಅನುಮಾನಾ ||
ನಮ್ಮನ್ನ ಕಾಡಿದಂತೆ ಮತ್ತ್ಯಾರ್ನು ಕಾಡಬ್ಯಾಡ್ರಿ
ಬೇಡುವೆ ಇದನಾ
ಇಲ್ಲ ಮತ್ತೇನಾ ||
ಒಂದನೇ ಚಾಲ
ಸಿರಯಾಳಗ ಅಂತಾನು ಶಂಕರನು ಭೂಲೋಕ ಜನರನ್ನು
ಕಾಡೊದಿಲ್ಲ ನಾನು
ಹಿಂಗಂತ ವಚನ ಕೊಟ್ಟಾನು ||
ಶಿವಾ ಅಂದ ಬಾಲ ಚೆಲ್ಲಾಳಗ ತಂದಿ ಸಿರಿಯಾಳಗ ತಾಯಿ ಚಂಗಳಿಗೆ
ಮುಕ್ತಿ ಕೊಡತೇನು
ಚಿರಂಜೀವಿ ಆಗಿ ಇರೋ ನೀನು ||
ವರವ ಕೊಟ್ಟಾನು ಹಿಂಗ ಅವರ ತಲಿಮ್ಯಾಗ
ಹಸ್ತ ಇಟ್ಟಾನು
ಮರ್ತ್ಯ ಬಿಟ್ಟ ಮಾಯ ಆದಾನು ||
ಎರಡನೇ ಚಾಲ
ಸಿರಿಯಾಳ ಅನಿಸಿದ ಗುಣಶೀಲಾ
ಚಂಗಳಿ ಹಂತಾಕಿ ಯಾರಿಲ್ಲಾ ||
ಚೆಲ್ಲಾಳ ಇನ್ನೂ ಸಣ್ಣ ಬಾಲಾ
ಅವನ ಕೀರ್ತಿ ಹಬ್ಬಿತ ನಾಡಮ್ಯಾಲಾ ||
ತಿಗಡೊಳ್ಳಿ ಮಾರುತಿ ಪ್ರಬಲ್ಲಾ
ಶಿಷ್ಯಾಗ ತಿಳಿಸಿದ ಕವಿ ಅಕಲಾ ||
||ಏರು||
ಪಕ್ಕಾಶ್ಯಾಣೆ ಅಲ್ಲ ಹುಚ್ಚ ಮರಿಕಲ್ಲ
ಸಾರಾಂಶ ತಗದ ನೋಡಿದ ಕತನಾ
ಬರದಾನ ಹಸನಾ ||
ಕಾಂಚಿಪುರದ ಸಿರಯಾಳನ ಭಕ್ತಿ
ನೋಡಲಿಕ್ಕೆ ಬಂದ ಭಗವಾನಾ
ಆದ ಪ್ರಸನ್ನ || ೬ ||
ರಚನೆ : ಮರಿಕಲ್ಲಕವಿ
ಕೃತಿ : ಮರಿಕಲ್ಲಕವಿಯ ಗೀಗೀ ಪದಗಳು
Leave A Comment