ನಮಿಸುವೆ ಗಣಪತಿ | ನುತಿಸುವೆ ಭಾರತಿ |
ಮತಿಗೆ ಮಂಗಲವ ನೀಡೆನುತ | ಮತಿಗೆ ಮಂಗಲವ ನೀಡೆನುತ |
ಕರಮುಗಿಯುವೆ ಕರ್ನಾಟಕ ಮಾತಾ|| ೧ ||

ಭಾರತ ಜೀವನ | ಭಾರತ ಪಾವನ |
ಭಾರತ ರಾಜ್ಯ ತಪೋಧನನ | ಭಾರತ ರಾಜ್ಯ ತಪೋಧನನ |
ಅರವಿಂದನ ವಂದನ ಮಾಡುವೆನಾ|| ೨ ||

ಸ್ಮರಿಸಿ ಹಾಡುವೆನು | ಗುರುವರ ಗಾಂಧಿಯ |
ಚರಿತವ ಹಾಲ್-ಸಕ್ಕರಿ ಬೆರೆತ ||
ನೆರೆದಿಹ ಸಭೆಗಿದು ನವರಸಭರಿತ|| ೩ ||

ಸೃಷ್ಟಿ ಭಾಗದೊಳು ಹುಟ್ಟಿದ ಗಾಂಧಿಯು |
ಕೆಟ್ಟಗುಣವ ಹೊಡೆದಟ್ಟಲುತಾ ||
ನಿಜ ಭಾರತ ಮಾತೆಯ ಪ್ರೇಮಸುತ|| ೪ ||

ಭರತಖಂಡವಿದು | ಪರಿಪರಿ ಕಷ್ಟದಿ |
ಪರದಾಸ್ಯದಿ ಬಳಲುವದನ್ನಾ ||
ನೆರೆತಿಳಿದ ಗಾಂಧಿ ಗುಣಸಂಪನ್ನ|| ೫ ||

ಧರೆಯ ಕಷ್ಟವನು | ಸಿರಿಯ ನಷ್ಟವನು |
ಬರಿಗೈಭಾರತಿ ತಾಪವನಾ ||
ಕಣ್ದೆರೆದು ನೋಡಿ ಮರುಗಿದ ಮುನ್ನಾ|| ೬ ||

ವಂದೇ ಮಾತರಂ | ಎಂದು ಭಾರತಿಗೆ |
ವಂದಿಸಿ ವರವನು ಬೇಡಿದನು ||
ದೇಶೋದ್ಧಾರಕೆ ಮನ ಮಾಡಿದನು|| ೭ ||

ಗೀತೆಯ ಧರ್ಮದ | ನೀತಿಯ ನುಡಿದನು |
ಓತು ಹೇಳಿದನು ಧರ್ಮರತಿ ||
ಲೋಕಾತಿಶಾಯಿ ಗುಣ ಪರಿಪೂರ್ತಿ|| ೮ ||

ಭಾರತ ಕಷ್ಟ | ನಿವಾರಣೆ ಮಾಡಲು
ಸ್ವಾರಾಜ್ಯಕೆತಾನಡಿಗಲ್ಲ ||
ಮಡಗಿದ ಸತ್ಯದ ತಳಹದಿ ಮೇಲಾ|| ೯ ||

ಸತ್ಯವ ನುಡಿವುದು | ಸತ್ಯದಿ ನಡೆವುದು |
ಸತ್ಯದಿ ವಿಶ್ವದ ಸಂಸ್ಥಿತಿಯು ||
ನಿಜ ಸತ್ಯದೊಳಿದೆ ದೇಶೋನ್ನತಿಯು|| ೧೦ ||

ಭಾರತ ಪುತ್ರರೆ | ಮಿತ್ರೆ ಬಾಂಧವ |
ಮಾತೃಭಗಿನಿ ನಿಜ-ಸಹೋದರರೆ ||
ವರಭಾರತಸೇವಾತತ್ಪರರೆ || ೧೧ ||

ಕೃಷಿಕರೆ ರಸಿಕರೆ | ಕಲಿಕಗಳೆ ಬಲಿಗಳೆ |
ಶ್ರೀಮಂತರೆ ನೀವೆದ್ದೇಳಿ ||
ದೇಶದ ಕೊರಗನು ಕಿವಿಯಿಂಕೇಳಿ|| ೧೨ ||

ಸತ್ಯವೆ ಜೀವನ | ಸತ್ಯವ ದೇವನ |
ಸತ್ಯವೇ ಮುಕ್ತಿಯ ಮಂದಿರವು ||
ಸತ್ಯಾಗ್ರಹವೊಂದೆ ಮಹಾಬಲವು|| ೧೩ ||

ಸತ್ಯದಿ ಬೆಳಗುವ | ಸತ್ಯದಿ ಮುಳುಗುವ |
ಸತ್ಯದಿ ಸಕಲ ಚರಾಚರವು ||
ಸ್ಥಿರ ಸತ್ಯದೊಳಿದೆ ನಿಮ್ಮಯ ಬಲವು|| ೧೪ ||

ಹಿಂಸೆಗೆ ಸರಿಸಮ | ಪಾಪವದಿಲ್ಲಿವು |
ಹಿಂಸೆಗೆ ನರಕದ ಬಾಗಿಲವು |
ಜನ-ಹಿಂಸೆಗಳಿಂದಿಗಿಲ್ಲವು ಜಯವು|| ೧೫ ||

ಜರ್ಮನಿ ಗಿರ್ಮನಿ | ಹಿಟ್ಲರ ಗಿಟ್ಲರ |
ಬ್ರಿಟಿಷ ಗ್ರಿಟಿಷ ರಾಜ್ಯದ ಗೆಲುವು ||
ಜನ-ಹಿಂಸೆಹೊಳಿಲ್ಲವು ಶಾಶ್ವತವು|| ೧೬ ||

ಶಾಂತಿಯ ಯುದ್ಧವು | ಶಾಂತಿಯ ಆಯುಧ |
ಶಾಂತಿಯೇ ನಮ್ಮ ಮಹಾಶರವು ||
ನಿಜ ಶಾಂತಿಯೇ ಸ್ವಾರಾಜ್ಯದ ಗೆಲುವು|| ೧೭ ||

ರಾಟಿಯೆ ಬಾಣವು | ರಾಟಿಯೆ ಪ್ರಾಣವು ||
ರಾಡಿಯೆ ಟ್ಯಾಂಕೂ ಕ್ರೂಝರವು ||
ನಲ್ವತ್ತು-ಕೋಟಿ ಹಿಂದೂ ಬಲವು|| ೧೮ ||

ಖಾದಿಯೆ ಭಾರತ | ರಕ್ಷಣಾ ಕವಚವು |
ಖಾದಿಯೆ ಬಾಂಬಿನ ಬರ್ಭರವು ||
ಪರದೇಶದ ಬಾಯಿಗೆ ಗೊಬ್ಬರವು|| ೧೯ ||

ಮುಟ್ಟದಿರುವ | ಹಿಂದೂ ಬಾಂಧವರನು |
ಮುಟ್ಟಿ ಪಾಪವ ಕಳಕೊಳ್ಳುವುದು ||
ದೇಶೋದ್ಧಾರದ ಸನ್ಮಾರ್ಗವಿದು|| ೨೦ ||

ಸತ್ಯ ಅಹಿಂಸಾ | ವೃತವನು ಪಾಲಿಸಿ |
ಶಾಂತಿ ಸಮರವನು ಹೂಡುವದು ||
ಸ್ವಾರಾಜ್ಯಗಳಿಕೆಯ ಮಾರ್ಗವಿದು|| ೨೧ ||

ಸ್ವಾತಂತ್ರ್ಯದ ಸಂ | ಗ್ರಾಮದೊಳೆಲ್ಲರು |
ಆತುರ ಭಾವದಿಕೂಡುವದು ||
ಆತ್ಮಾರ್ಪಣವಾದರು ಮಾಡುವುದು||| ೨೨ ||

ರಸಿಯಾ-ಜರ್ಮನಿ ಯುದ್ಧವಿಲ್ಲದವು |
ಬೇಕಿಲ್ಲವು ಶಸ್ತ್ರಾಸ್ತ್ರಗಳು ||
ನೆಲನೀರು ಬೈಲಿನೊಳು ಗುಡುಗುಗಳು|| ೨೩ ||

ಸಾಯಲಿ ಬೀಳಲಿ | ಸ್ವಾತಂತ್ರ್ಯವನೆ |
ಗಳಿಸುವದೊಂದೆ ಮಾರ್ಗವಿದು ||
ಸತ್ಯಾಗ್ರಹವೊಂದೇ ನಿಯಮವಿದು|| ೨೪ ||

ಕರ್ಮದ ಗೀತೆಯ | ಧರ್ಮದ ನೀತಿಯ |
ಮರ್ಮವಪೇಳಿದ | ಧರ್ಮಪಿತಾ |
ಪರಮಾತ್ಮ ನುಡಿದ ಭಗವದ್ಗೀತಾ|| ೨೫ ||

ಗಾಂಧಿಯೆ ವೇದವು | ಗಾಂಧಿಯೆ ಬೋಧವು |
ಗಾಂಧಿಯೆ ಸಾಧು ಸದ್ಗುರುವು ||
ನಿಜ ಗಾಂಧಿಯೆ ವಿಶ್ವಜಗದ್ಗುರುವು|| ೨೬ ||

ಗಾಂಧಿಯೆ ತೀರ್ಥವು | ಗಾಂಧಿಯೆ ಕ್ಷೇತ್ರವು |
ಗಾಂಧಿಯೆ ಸುರನಂದನ ವನವು ||
ಗುರುಗಾಂಧಿಯೆ ರಾಟಿಯ ಸುರತರವು|| ೨೭ ||

ಗಾಂಧಿ ಸುಭಾಸ | ಜವಾಹರನೇಹರು |
ವಂದನವನು ನಾ ಮಾಡುವೆನು |
ಪದ ಬಂಧವನಿಲ್ಲಿಗೆ ಮುಗಿಸುವೆನು || ೨೮ ||

ಜಯಭಾರತಿ | ಬೆಳಗುವೆನಾರತಿ |
ಜಯಮಂಗಲವನು ಕೊಡು ನಮಗೆ ||
ನಮ್ಮ ಭಾರತ ರಾಜ್ಯದ ಸಂಸ್ಥಿತಿಗೆ|| ೨೯ ||

ವಂದಿಪೆ ಜನನಿ | ಸುಜಲ ಫಲ ಮಲಯಜ |
ಗಾಂಧಿಸಸ್ಯ ಶಾಮಲೆ ನಿನಗೆ ||
ಬೆಳದಿಂಗಳ ಬಿಳಿಎಲೆ ತಿಳಿಯನಗೆ|| ೩೦ ||

ಗಾಂಧಿ ಸುಭಾಸ ಜವಾಹಿರ ಘೋಷ | ರವೀಂದ್ರರ ಪಡೆದಮ್ಮಾ ನಿನಗೆ
ಇಂದ್ರರ ಪಡೆದಮ್ಮ ನಿನಗೆ ||
ಯೋಗೀಂದ್ರರ ಹಡೆದಮ್ಮ ನಿನಗೆ|| ೩೧ ||

ವಿಂಧ್ಯ ಹಿಮಾದ್ರಿನ | ಗಂಗಳ ನಡುವಿನ |
ಪುಣ್ಯಭೂಮಿ ಪಾದಂಗಳಿಗೆ ||
ಬೆಳಗುವೆನಾರತಿ ಶುಭ ಮಂಗಳೆಗೆ|| ೩೨ ||

ಜಯಿಸಲಿ ಸ್ವಾತಂತ್ರ್ಯದ ಸಮರದಲಿ |
ಶಾಂತಿಯ ವಾದ್ಯವು ನಾದಮಯ ||
ಗುರುಗಾಂಧಿಯ ತತ್ವಕೆ ಜಯವಿಜಯ|| ೩೩ ||

ರಚನೆ : ನಲವಡಿ ಶ್ರೀಕಂಠಶಾಸ್ತ್ರಿ
ಕೃತಿ : ರಾಷ್ಟ್ರಗೀತಾವಳಿ