ಸೌಖ್ಯ ಸೂತ್ರ ಸ್ವಾತಂತ್ರ್ಯ ಬೇಕಾದರೆ ನಾವೆಲ್ಲರು
ಏಕಾಗಬೇಕ ಬಿಟ್ಟ ಭೇದ-ಭಾವನ
ಇನ್ನ ಸಾಕಮಾಡಬೇಕ ನಮ್ಮ ಸ್ವಾರ್ಥ ಗುಣ
ನೀವು ಏಕಚಿತ್ತದಿಂದ ಕೇಳ್ರಿ ಎಲ್ಲ ಜನ
ಸೌಖ್ಯ ಭೋಗ ತ್ಯಾಗಮಾಡಿ ಏಕನಿಷ್ಠೆಯಿಂದ ಇದ್ದ
ಲೋಕಮಾನ್ಯ ಸುಭಾಸರ ಚರಿತ್ರೆಯನ ಹೇಳುವೆ ಪೂರ್ಣ
ಬ್ರಿಟಿಶರೆಂಬುವ ಆನೆಗಳ ಮೆಟ್ಟಲಿಕ್ಕೆ ಸಿಂಹ ಆಗಿ
ಹುಟ್ಟಿ ಬಂದ ಪೃಥ್ವಿಯೊಳು ಸರದಾರ
ಇವರ ದೃಷ್ಟಿಯಿಂದ ರಾಷ್ಟ್ರ ಅತಿ ಉದ್ಧಾರ
ನರಶ್ರೇಷ್ಠನಾಗಿ ಮೆರೆದ ಗುಣ ಗಂಭೀರ
ದುಷ್ಠರಿಗೆ ಸೇರಲಿಲ್ಲ ಶ್ರೇಷ್ಠರಲ್ಲಿ ಭಕ್ತಿ ಮನವ
ಇಟ್ಟು ದುಡಿಯುವಂಥ ದಿಟ್ಟ ದುರಧೀರ ಧೈರ್ಯದ ಶಿಖರ
ಪಾರತಂತ್ರದಲ್ಲಿ ಬಿದ್ದು ಬೋರಿ ಬಳಲುವಂಥ ನಮ್ಮ
ಭಾರತಾಂಬೆ ನೋಡಿ ರುದ್ರದೇವರ
ಕ್ರೂರ ಚೋರರನ್ನು ನಾಶಮಾಡುವುದಕ್ಕೋಸ್ಕರ
ಈ ಧರಣಿಯೊಳು ಜನಿಸಿ ಬಂದ ಜಯವೀರ
ಸುಭಾಸಚಂದ್ರಬೋಸ ಎಂಬ ಶೋಭಿಸುವ ನಾಮದಿಂದ
ಪೃಥ್ವಿಯೊಳು ಪ್ರಬಲಾದ ನರೇಂದ್ರ ಸುಂದ್ರದ ಗಾತ್ರ

ದೇಶದದೊಳು ಲೇಸಾದ ಬಂಗಾಲ ಇಲಾಖಾ ಪೈಕಿ
ಶೃಂಗಾರದ ಕಟಕವೆಂಬುವ ಸಣ್ಣ ಊರ
ಅಲ್ಲಿ ಬೋಸ ಎಂಬುವ ರಾಜ ಮನೆತನದವರ
ಸದ್‌ವಾಸನಾದ ಜಾನಕೀನಾತ ಬಾಬುರಾಯರ
ಅಟ್ಟಸಿರಿ ಸಂಪತ್ತಿನ ಶ್ರೇಷ್ಠ ಜಾನಕಿನಾಥರಿಗೆ
ಒಟ್ಟಿಗೆಂಟು ಮಂದಿ ಇದ್ದರ ಸುಕುಮಾರರ ಸದ್ಗುಣವಂತರ

||ಚ್ಯಾಲ||

ಎಂಟು ಮಂದಿ ಗಂಡು ಮಕ್ಕಳಲ್ಲಿ ಸುಭಾಸರೇ ಹುಲಿ ಛತ್ರಪತಿ ಜಿನ್ಹ
ಉಗ್ರಮೂರ್ತಿ ಕ್ಷಾತ್ರ ತೇಜದಿಂದ ಉಕ್ಕತಿತ್ತ ವದನ
ರೂಪದಲ್ಲಿ ಪ್ರತಿ ಮನ್ಮಥ ವೈಶ್ಯ ನರನಂತ ಕೆಂಪ ಕಿಡಿಗಣ್ಣ
ಎರಡು ಚಕ್ರ ಹಸ್ತದಲ್ಲಿ ರಾಜಪೂಜಿತದಿ ಚರಣ
ಬಲಪಾದ ಬೆರಳಿನಲ್ಲಿ ಪದ್ಮ ಸಾಮುದ್ರಿಕೆ ನೇಮ ಹೇಳತದ ಪೂರ್ಣ
ಪದ್ಮದ ಲಕ್ಷಣ ಕೀರ್ತಿ ಪ್ರಕಾಶದ ಕಿರಣ

||ಪದ್ಯ||

ನ್ ಹದಿನೆಂಟನೂರ ತೊಂಬತ್ತೇಳನೇ ಇಶ್ವಿಯಲ್ಲಿ
ಜಾನೇವರಿ ತಾರೀಖ ಇಪ್ಪತ್ತಮೂರನೇ ದಿವಸ
ಕಟಕ ಗ್ರಾಮದಲ್ಲಿ ಶುಭ ಶೋಭನಾಂಗಿಯರು
ಶುಭಗೀತೆಯನ್ನು ಪಾಡುತ್ತ
ತೊಟ್ಟಿಲಲ್ಲಿ ವೀರಮುದ್ರೆ ಚಾರುಗಾತ್ರ ಸೂರ್ಯನಂತೆ ಒಪ್ಪುವ
ಸುಭಾಸ ಬೋಸರನ್ನು ತೊಟ್ಟಿಲಲ್ಲಿ ಶಯನಮಾಡಿಸಿ ಹೆಸರನ್ನು ಇಟ್ಟರು
ಮಂಗಲಾಂಗಿಯರೆಲ್ಲ ಮಹಾನಂದದಿಂದ ಗೀತೆಯನ್ನು ಅನ್ನುತ್ತಿದ್ದರು
ಆ ಗೀತೆ ಯಾವುದೆಂದರೆ –
ತೂಗೀರೆ ಕೂಸಿನ ತೂಗೀರೆ ಈಶನ
ತೂಗೀರೆ ಸುಭಾಸ ಬೋಸರನ
ತೂಗೀರೆ ವಂಶವ ಬೆಳೆಸುವ ಕುವರನ
ತೂಗೀರೆ ಸುಜ್ಞಾನ ರಾಶಿಯನ
ದಿನಕರ ರೂಪದ ತನು ಗೌರವರ್ಣದ
ಜನಪ್ರಿಯ ತರುಳನ ತೂಗೀರೆ
ಜಾನಕಿನಾಥನ ತನುಜಾತ ಕಂದನ
ವನಜಾಕ್ಷಿಯರು ಬಂದು ತೂಗೀರೆ
ತಿಳಿಯುಳ್ಳ ರುದ್ರನ ಕಳೆಯುಳ್ಳ ಸಂಗನ
ಇಳೆಯೊಳು ಜನಸಿದ ತೂಗೀರೆ
ಸುಳಿಯ ಬಾಳೆಯಂಥ ಎಳೆಯ ಕೋಮಲ ಕಾಯ
ನಳಿನಾಕ್ಷಿನಂದನ ತೂಗೀರೆ

||ಏರು||

ಮಂದಗಮನೆ ಮುತ್ತೈದಿಯರು ಚಂದದಿಂದ ಜೋಗುಳ ಹಾಡಿ
ನಂದದಿಂದ ಸುಭಾಸರೆಂಬ ನಾಮಕರಣ
ಹೀಂಗ ಅಂದ ಅಂದ ಸಕ್ರಿ ಹಂಚಿ ಸರ್ವ ಜನ
ವೃಂದದಿಂದ ಸೇರ‍್ಯಾರ ತಮ್ಮ ಗ್ರಹಗಳನ
ಸೌಖ್ಯ ಭೋಗ ತ್ಯಾಗಮಾಡಿ ಏಕನಿಷ್ಠೆಯಿಂದ ಇದ್ದ
ಲೋಕಮಾನ್ಯ ಸುಭಾಸರ ಚರಿತ್ರೆಯನ ಹೇಳುವೆ ಪೂರ್ಣ|| ೧ ||

ಮುಂದೆ ಆರು ವರ್ಷದೊಳು ತಂದೆ ಹೇಳಿದಂಥ ಮಾತು
ಒಂದು ಮೀರಲಿಲ್ಲ ಸಾಲಿಗೆ ಹೋಗುವರು
ಶೀಘ್ರ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು
ಚಿತ್ತ ಚಲಿಸಲಿಲ್ಲ ಕಲಕತ್ತಾಕ ತೆರಳಿದರು
ಸನ್ ಹತ್ತೊಂಬತ್ತನೂರ ಹದಿನೇಳನೆ ಇಶ್ವಿಯಲ್ಲಿ
ಮ್ಯಾಟ್ರಿಕ್ ಪರೀಕ್ಷೆ ಪಾಸಾದ ಮಹಾಪಂಡಿತರು
ಪಟ್ಟಣದಲ್ಲಿ ವಾಸ ಇದ್ದೂ ದುಷ್ಟಚಟ ಒಂದು ಇಲ್ಲ
ನಿತ್ಯನೇಮದಿಂದ ಪಾಠ ಕಲಿಯುವರು
ಸಾಧು ಶ್ರೇಷ್ಠರಲ್ಲಿ ನಿಷ್ಠೆಯಿಂದ ದುಡಿಯುವರು
ಮುಂದೆ ಇಂಟರ್‌ದಲ್ಲಿ ಪೈಲಿ ನಂಬರ ಆಗಿದ್ದರು
ವಾರಿಗೆ ಗೆಳೆಯರಲ್ಲಿ ಕ್ರೂರರಿಗೆ ಸೇರಲಿಲ್ಲ
ವೀರವಾಣಿಯಿಂದ ನೀತಿ ಹೇಳುವರು ದೇಶೋದ್ಧಾರಕರು
ಹಿಮಾಲಯದಲ್ಲಿ ಇರುವ ರಾಮಕೃಷ್ಣ ಆಶ್ರಮದ
ಉತ್ಸವಕ್ಕೆ ಹೋಗುತ್ತಿದ್ದರ ಕೆಲ ಜನರು
ನೋಡಬೇಕು ಎಂಬ ಇಚ್ಛೆಯಿಂದ ಸುಭಾಸ ಬೋಸರು
ಜನಜಂಗುಳಿಯ ಕೂಡಿಕೊಂಡು ಸಾಗಿದರು
ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರು
ಪ್ರೇಮದಿಂದ ಸಂಭಾಷಣೆ ಮಾಡಿದರು ನಲಿದಾಡಿದರು

||ಪದ್ಯ||

ಸ್ವಾಮಿವಿವೇಕಾನಂದರು ಮಾಡಿದ ವ್ಯಾಖ್ಯಾನದಲ್ಲಿ
ಮುಖ್ಯ ಪ್ರಶ್ನೆ ಒಂದು ರತ್ನಸ್ವರೂಪದ್ದು
ಅದು ಯಾವುದೆಂದರೆ –
ಭಾರತಮಾತೆಯ ಕರೆಯನ್ನು ಕೇಳುವವರು
ಇಲ್ಲಿ ಯಾರಾದೂ ಇರುವರೋ ಎಂಬುದೊಂದು
ಹಿಮಾಲಯದ ಗಿರಿ ಶಿಖರಗಳ ಸಾಧನೆಯ
ಪಾಠ ಹೇಳಲು ನಿಮ್ಮನ್ನು ಕರೆಯುತ್ತೇವೆ
ಬರಲಿಚ್ಛೆಯುಳ್ಳವರು ಬರಬೇಕು ಎಂಬುದ ಕೇಳಿ
ಎಳೆ ಯುವಕನಾದ ಸುಭಾಸನ ಮನಸ್ಸು ಆನಂದಮಯವಾಗಿತ್ತು
ಅನುಭವ ರಸ ಹೃದಯದಲ್ಲಿ ತುಂಬಿತ್ತು

||ಚ್ಯಾಲ||

ಸಂಸಾರ ವಾಸನ ಆಳದ ಮಿಥ್ಯವೆಂದು ತಿಳಿದ ಸತ್ಯ ಸಾಧನ
ಮಾನವ ಜನ್ಮಕ್ಕೆ ಮುಖ್ಯ ದಿವ್ಯ ಸುಜ್ಞಾನ
ಹೀಗಂತ ನಿಶ್ಚಯಮಾಡಿ ಸುಭಾಸರು ನೋಡಿ ಹಿಮಾಲಯವನ್ನ
ಗವಿಯಲ್ಲಿ ವಾಸಮಾಡಿ ನಡಸಿದ ದೇವರ ಧ್ಯಾನ
ಭಾರತಮಾತೆಯ ಶಾಂತಿ ಆಗುವಂಥ ಶಕ್ತಿ ನೀಡೋ ಭಗವಾನ
ಭಾರತ ಉದ್ದಾರ ಸಲುವಾಗಿ ಹೋಗಲಿ ಪ್ರಾಣ

||ಏರು||

ಕಾಡು ಮೃಗದ ಭೀತಿ ಇಲ್ಲ ಜೋಡ ಅವರಿಗೆ ಯಾರು ಇಲ್ಲ
ನೋಡ್ರೆಪ್ಪ ಸುಭಾಸರ ಧೈರ್ಯವನ
ನಾವು ಪ್ರೌಢರಾಗಿ ತಿರಗತೇವ ಸುಮ್ಮ ಸುಮ್ಮನೆ
ನಮ್ಮ ಹೇಡಿತನ ಕಾಡತೈತಿ ಒಂದೇಸವನ
ಸೌಖ್ಯ ಭೋಗ ತ್ಯಾಗಮಾಡಿ ಏಕನಿಷ್ಠೆಯಿಂದ ಇದ್ದ
ಲೋಕಮಾನ್ಯ ಸುಭಾಸರ ಚರಿತ್ರೆಯನ ಹೇಳುವೆ ಪೂರ್ಣ|| ೨ ||

ರಾಷ್ಟ್ರಪತಿ ಸುಭಾಸರ ನಿಷ್ಠಾನೋಡಿ ವಿವೇಕರು
ಬಟ್ಟಕಚ್ಚಿದಾರ ಬಹು ಕಾಂತಾಗಿ
ಹಸ್ತ ಇಟ್ಟ ಆಶೀರ್ವಾದ ನೀಡಿ ಚೆಂದಾಗಿ
ಬಾಳಾ ದೃಷ್ಟಿ ಗತಿ ಅಂತ ಹೇಳತಾರ ಕೂಗಿ
ದೃಷ್ಟಿ ತಗದ ವಿವೇಕರಿಗೆ ಸಾಷ್ಟಾಂಗ ಹಾಕಿ ಸುಭಾಸರು
ಕಷ್ಟದೂರ ಆಯಿತೆಂದು ಶಿರಬಾಗಿ ನಯದಿಂದ ನಲಿಗಿ
ಮುಖ್ಯ ಎರಡು ವಾಕ್ಯಗಳು ವಿವೇಕರು ಹೇಳಿದರು
ತಕ್ಕದಲ್ಲ ತಪಾಚರಣೆ ಚಿಕ್ಕವರಿಗೆ
ನೀನು ಮೂರ್ಖನಲ್ಲ ತರ್ಕಜ್ಞಾನಿ ಮೊದಲಿಗಿ
ನಿಂತ ಲೋಕಸೇವಾ ಮಾಡಬೇಕ ಒಳಿತಾಗಿ
ಕುಹಕ ಬುದ್ಧಿ ಪರಕೀಯರನ್ನು ನೂಡಿ ಹೊರಗೆ ಹಾಕಬೇಕು
ಸೌಖ್ಯ ಆಗತದ ಸದಾ ಸರ್ವರಿಗೆ ಜಯ ಜಯವಾಗಿ
ಭಾರತಾಂಬೆ ಘೋರ ತಾಪ ದೂರ ಮಾಡುವ ಸಲುವಾಗಿ
ಧರೆಯೊಳು ಬಂದೆ ನರರೂಪಾಗಿ
ನೀನು ನರನಲ್ಲ ದೇವಪ್ರಭು ವರಯೋಗಿ
ಜಯಲಕ್ಷ್ಮಿ ಬರತಾಳ ನಿನ್ನ ಬೆಂಬಲಾಗಿ
ವಿವೇಕರ ಮಾತ ಕೇಳಿ ಮನೆಗೆ ಬಂದ ಸುಭಾಸರು
ವಿದ್ಯಾಭ್ಯಾಸ ನಡಿಸ್ಯಾರ ಜೋರಾಗಿ ಜಾಗ್ರತವಾಗಿ

||ಪದ್ಯ||

ಮುಂದೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿದ್ದಾಗ ಅಲ್ಲಿಯ ಪರೀಕ್ಷಾ ತೀರಿಸಿ
ಪ್ರಿನ್ಸಿಪಾಲ ಪಾಶ್ಚಾತ್ಯ ಒಬ್ಬ ಪ್ರೊಫೆಸರ್ ಆಡಿದ ಮಾತು ಯಾವದೆಂದರೆ,
ಭಾರತೀಯರಂದರ ನಾಯಿ ಇದ್ದ ಹಾಗೆ
ಅವರನ್ನು ರಕ್ಷಿಯಂತೆ ನಡೆಸಿಕೊಳ್ಳಬೇಕು ಎಂಬುವ
ಭಾವನೆಯುಳ್ಳವನಾಗಿದ್ದ
ಆ ಭಾವನೆಗೆ ಅನುಸಾರವಗಿ ಅವನು ಸುಭಾಸರನ್ನು ಅವಮಾನಿಸುತ್ತಿದ್ದ
ಅವಮಾನ ಸಹಿಸಲಾರದೆ ನಾನು ಭಾರತ ನಾಯಿಯಲ್ಲ
ನಿಮ್ಮಂಥ ಪರಕೀಯರನ್ನು ಹೋಡೆದೋಡಿಸುವ ಸಿಂಹ ಎಂದಾಕ್ಷಣಕ
ಪ್ರಿನ್ಸಿಪಾಲ ಸುಭಾಸರನ್ನು ಕಾಲೇಜು ಬಿಟ್ಟು ಹೊರಗೆ ಹಾಕಿದನು
ತಪ್ಪಿಗೆ ಒಪ್ಪಿಗೆಯನ್ನು ಕೊಟ್ಟು ಶರಣ ಮಾಡಿದರೆ
ಒಳಗೆ ಕರೆದುಕೊಳ್ಳುತ್ತಿದ್ದನು ಅದಕ್ಕೆ ಸುಭಾಸರು ಒಪ್ಪಲಿಲ್ಲ

||ಚ್ಯಾಲ||

ಆಮೇಲ ಸರ್ ಅಸತೋಷ ಎಂಬುವ ಧರ್ಮಗುರು
ಮುಖರ್ಜಿಯವರು ಮಾಡಿದಾರ ಯತ್ನ
ಸ್ಕಾಟಿಶ್ ವಿಶ್ವವಿದ್ಯಾಲಯದಲ್ಲಿ ಕೊಡಿಸಿದಾರ ಸ್ಥಾನ
ಬಿ.ಎ. ಪಾಸಾಗಿ ಆಯ್.ಸಿ.ಎಸ್.ಗಾಗಿ ಹೋಗಿ ಇಂಗ್ಲಂಡಕ್ಕೆ ಪಡೆದ ಸನ್ಮಾನ
ಆಯ್.ಸಿ.ಎಸ್. ಪದವಿಗೆ ರಾಜಿನಾಮೆ ಕೊಟ್ಟ ಪೂರ್ಣ
ಭಾರತ ಸಂಗ್ರಾಮದ ಹಾವಳಿ ಊದತಿತ್ತ ಕಾಳಿ ತಾಳಿ ಸ್ವಾಭಿಮಾನ
ಚಳವಳಿ ನಡಸಿದನು ಆಳದ ಪ್ರಪಂಚದ ವ್ಯಸನ

||ಏರು||

ಗಾಂಧೀ ಸೂತ್ರಧಾರರಾಗಿ ಹಿಂದುಸ್ಥಾನ ಸಂಚರಿಸಿ
ಮಂದಿಗೆಲ್ಲ ಮಾಡಿದಾರ ಸದ್‌ಬೋಧವನ
ಹೀಗಂದ ಹುಲಕುಂದ ಶಿವಲಿಂಗನ ವಚನ
ಮಹಾನಂದ ಮೂರ್ತಿ ಸುಭಾಸರ ಗೀತೆಯನ
ಸೌಖ್ಯ ಭೋಗ ತ್ಯಾಗ ಮಾಡಿ ಏಕನಿಷ್ಠೆಯಿಂದ ಇದ್ದ
ಲೋಕಮಾನ್ಯ ಸುಭಾಸರ ಚರಿತೆಯನು ಹೇಳುವೆ ಪೂರ್ಣ|| ೩ ||

ರಚನೆ : ಹುಲಕುಂದ ಶಿವಲಿಂಗಸ್ವಾಮಿ
ಕೃತಿ :
ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ