ಸುಂದರಮೂರ್ತಿ ಸುಭಾಸಚಂದ್ರ ಹುಟ್ಟಿ ಬಂದ ಮುಂದೆ
ಮಂದಮತಿ ಇಂಗ್ಲೀಷರನ್ನ ಕಾಡಾಕ
ರಾಜಿಯಿಂದ ಹೋಗತಿದ್ದರ ಒತ್ತಿ ದೂಡಾಕ
ನಮ್ಮ ಹಿಂದುಸ್ಥಾನ ಸ್ವಾತಂತ್ರ್ಯ ಬೇಡಾಕ
ಬುದ್ಧಿಗೇಡಿ ಬ್ರಿಟಿಶರನ್ನು ಗುದ್ದಿಕೊಂತ ಬಿದ್ದ ರಕ್ತ
ಹದ್ದು ನಾಯಿ ನರಿಗಳಿಗೆ ನೀಡಾಕ
ರಣವಾದ್ಯ ಹೊಡದ ಯುದ್ಧವನ್ನು ಮಾಡಾಕ
ಅಷ್ಟಪುತ್ರ ಸೌಭಾಗ್ಯ ಶ್ರೇಷ್ಠ ಪ್ರಭಾವತಿ ತಾಯಿ
ಹೊಟ್ಟೆಯಿಂದ ಹುಟ್ಟಿಬಂದ ಧರಣಿಯಲ್ಲಿ
ಸೂರ್ಯಕೋಟಿ ಬೆಳಕ ಬಿದ್ದಾಂಗ ಆತ ಮನೆಯಲ್ಲಿ
ಹೆಸರು ಇಟ್ಟು ಕರೆದಾರ ಶುಭದಿನದಲ್ಲಿ
ಭೋಗಭಾಗ್ಯದ ಆಶೆಯಿಲ್ಲ ತ್ಯಾಗ ಬುದ್ಧಿ ಉಳ್ಳವನು
ಯೋಗಾಭ್ಯಾಸ ಮಾಡಿದ ಬಾಲ್ಯದಲ್ಲಿ
ಅನುರಾಗದಿಂದ ಆಡುತ್ತಿದ್ದ ಮಿತ್ರರಲ್ಲಿ
ಹುಟ್ಟಿದಂದಿನಿಂದ ಮುಂದೆ ಇಪ್ಪತ್ತಮೂರು ವರ್ಷಕ್ಕೆ
ಪಾಸಾದ ಆಯ್.ಸಿ.ಎಸ್. ಪರೀಕ್ಷೆಯಲ್ಲಿ
ಸರಸ್ವತಿ ವಾಸ ಇತ್ತ ಅವರ ಹೃದಯದಲ್ಲಿ
ಬಾಳ ಚಮತ್ಕಾರ ಆಗಿ ಹೋಯ್ತೀ ಧರಣಿಯಲ್ಲಿ
ಮಹಾತ್ಮಾಗಾಂಧಿಯವರಿಂದ ಸ್ವಾತಂತ್ರ್ಯ ಸಂಗ್ರಾಮದ ಕಹಳೆ
ಚೀರಿ ಸಾರತ್ತಿತ್ತ ಇಡೀ ರಾಷ್ಟ್ರದಲ್ಲಿ
ನೋಡಿ ಗಾಂಧೀಜಿಯವರ ಬಳಿಗೆ ಹೋದ್ರು ಅರ್ಥಿಯಲಿ
ಮಹಾತ್ಮ ಗಾಂಧಿಯವರ ತತ್ವ ಸತ್ಯವೆಂದು ತಿಳಿದುಕೊಂಡು
ನಿತ್ಯದಲ್ಲಿ ಸಂಚಾರ ಮಾಡುತಲಿ

ದೇಶಭೃತ್ಯನಾಗಿ ಶಿಸ್ತಿನಿಂದ ದುಡಿಯುತಲಿ
ಸನ್ ಹತ್ತೊಂಭನೂರಾ ಇಪ್ಪತ್ತನಾಲ್ಕರಲಿ
ಕಲಕತ್ತಾ ಮಹಾನಗರಸಭೆಯ ಚೀಫ್ ಆಫೀಸರ ಆಗಿ
ಚಳವಳಿಯಲ್ಲಿ ಹೋರಾಡುತಲಿ
ಮನೋವೃತ್ತಿ ಬದಲಾಗಲಿಲ್ಲ ಎಲ್ಲೆಲ್ಲಿ
ಮುಂದೆ ಆರುತಿಂಗಳದೊಳು ಕೆಂದಮಾರಿ ಇಂಗ್ಲೀಷರು
ಸುಂದ್ರ ಸುಭಾಸರನ್ನು ಹಿಡಿಯಬೇಕು ಪಹಲಿ
ಹೀಂಗಂದ ಮುಂದ ನಿಂತ ಒಗದ್ರು ಬಲೆ
ಬಂಗಾಲದಲ್ಲಿ ಆದ ಕ್ರಿಮಿನಲ್‌ನಲ್ಲಿ
ಲಾ ಅಮೆಂಡಮೆಂಟ್ಸ ಆರ್ಡಿನನ್ನ ಪ್ರಕಾರ
ಹಿಡದು ವೋದು ಹಾಕಿದ್ರು ಜೇಲಿನಲ್ಲಿ
ಆನಂದದಿಂದ ನಗತಿದ್ರ ಕಿಲಿಲಿಲಿಲಿ

||ಚ್ಯಾಲ||

ಹಿಡಿದಾರ ಮಾಡಿ ಬಂದೋಬಸ್ತ ಇಲ್ಲಿ ಬ್ಯಾಡ ಅಂತ ಬ್ರಹ್ಮದೇಶಕ್ಕ
ಮಂಡಾಲೆ ಜೇಲಿನೊಳು ಒಯ್ದ ಇಟ್ಟಾರೊ ಮಾಡಿ ರಿಕ್ಕ
ಸುಭಾಸರ ಶರೀರ ಆತೋ ಕ್ಷೀಣ ಉಳಿಯಲಿಲ್ಲ ತ್ರಾಣ
ಚೈನ ಇಲ್ಲದಕ್ಕ ರಾಜಯಕ್ಷಯೋಗ ಆತಿ ಮಂಡಾಲೆ ಹವಾ ತಡಿಯದಕ
ಬರಬರತ ಬದಲ ಅತಿ ಚಿನ್ಹ ಕುಂದುಹೋತಿ ಬಣ್ಣ ಕಾಡು ಕಾಲಕ
ದೇಹದ ಆಸೆಯಿಲ್ಲ ದೇವಸ್ಮರಣೆ ಹಗಲಿ ಬೆಳೆತನಕ

||ಏರು|

ಹುಟ್ಟಿದ ಮ್ಯಾಲ ಮರಣ ಎಂದೂ ಬಿಟ್ಟದ್ದಲ್ಲ
ಬೆನ್ನಹಿಂದೆ ಗಟ್ಟಿಯಾಗಿ ನಿಂತೈತಿ ಒಯ್ಯಾಕ
ಎಳ್ಳಷ್ಟು ಚಿಂತಿಮಾಡೋದಿಲ್ಲ ಸಾಯಾಕ
ಈ ರಾಷ್ಟ್ರ ಉದ್ಧಾರ ಆಗುವತನಕ ಇರಬೇಕ
ಬುದ್ಧಿಗೇಡಿ ಬ್ರಿಟಿಶರನ್ನು ಗುದ್ದಿಕೊಂತ ಬಿದ್ದ ರಕ್ತ
ಹದ್ದು ನಾಯಿ ನರಿಗಳಿಗೆ ನೀಡಾಕ
ರಣವಾದ್ಯ ಹೊಡೆದ ಯುದ್ಧವನ್ನು ಮಾಡಾಕ|| ೧ ||

ಬಾಲ ಸುಭಾಸ ಬೋಸರಿಗೆ ಜೇಲಿನಲ್ಲಿ ರಾಜಯಕ್ಷರೋಗ
ಆದಿತೆಂಬ ಸುದ್ದಿ ಕೇಳ್ಯಾರ
ದೇಶಭಕ್ತರೆಲ್ಲ ಉಗ್ರಕೋಪ ತಾಳ್ಯಾರ
ಹೋಗಿ ಮುಂದೆ ನಿಂತ ಸರಕಾರಕ್ಕೆ ಹೇಳ್ಯಾರ
ಸಧ್ಯ ಈಗ ಸುಭಾಸರನ್ನ ಜೇಲಿನಿಂದ ಬಿಡಬೇಕ
ಬಿಡದಿದ್ದ   ಮಾಡತೀವ ಸತ್ಯಗ್ರಹ
ಹೀಂಗ ಹೋಗಿ ಕೂಗತಾರ ಕೋಟ್ಯಾವಧಿ ಜನರ
ಗದ್ದಲಬಿದ್ದ ಸರಕಾರಕ್ಕೆ ಬುದ್ಧಿ ಬಂದು ಜೇಲಿನೊಳಗ
ಇದ್ದ ಸುಭಾಸರನ್ನು ಅವರಿಗೆ ಅಪ್ಪಣೆ ಕೊಟ್ಟಾರ
ಅವರ ಮೇಲೆ ಯಾವಾಗಲೂ ನಜರ ಇಟ್ಟಾರ
ಸನ್ ಹತ್ತಂಭತ್ತನೂರಾ ಇಪ್ಪತ್ತೇಳನೇ ಇಶ್ವಿಯಲ್ಲಿ
ಚನ್ನಾಗಿ ಮನೆಗೆ ಬಂದು ಮುಟ್ಟ್ಯಾರ
ರಾಜವೈದ್ಯರಿಂದ ನಡೆದಿತು ಉಪಚಾರ
ಪೃಥ್ವಿಪತಿ ಸುಭಾಸರ ಮೃತ್ಯು ದೂರ ಆಗಲೆಂದು
ನಿತ್ಯದಲ್ಲಿ ದೇವರಧ್ಯಾನ ಮಾಡುವರ
ಅಸಂಖ್ಯಾತ ಜನ ಬಂದ ಬಂದ ನೋಡುವರ
ದೇವ ಮೃತ್ಯುಂಜಯ ಕಾಯಲೆಂದು ಬೇಡುವರ
ವರ್ಷ ಆರುತಿಂಗಳದಲ್ಲಿ ನೆಟ್ಟಗಾಗಿ ಮತ್ತು
ನಡಕಟ್ಟಿ ರಾಷ್ಟ್ರಸೇವಾದಲ್ಲಿ ನಿಂತಾರ
ಪ್ರಾಣನಷ್ಟ ಆದ್ರು ಚಿಂತೆಯಿಲ್ಲ ಅಂತಾರ
ಬರಗಾಲದ ಕಾಟದಿಂದ ನಿರಾಶ್ರಿತರಾದವರಿಗೆ
ಪರಿಹಾರ ದ್ರವ್ಯವನ್ನು ಕೊಡಿಸ್ಯಾರ
ಅನ್ನ ನೀರು ದೊರೆಯುವಂತೆ ಶಿಸ್ತ ಪಡಿಸ್ಯಾರ
ಒಳ್ಳೆಯ ಜೋರಿನಿಂದ ಚಳವಳಿ ನಡಿಸ್ಯಾರ
ರಕ್ತಪಾತ ಆಗದ ಹೊರತು ಸ್ವಾತಂತ್ರ್ಯ ಸಿಗಲಾರದೆಂದು
ಸತ್ಯವಾಗಿ ಸಾರಿ ಸಾರಿ ಹೇಳ್ಯಾರ
ಮಹಾತ್ಮಾ ಗಾಂಧಿಯವರನ್ನು ಹೋಗಿ ಕೇಳ್ಯಾರ

||ಪದ್ಯ||

ಸರಕಾರದವರ ಕೂಡ ಒಪ್ಪಂದ ಮಾಡಕೊಳ್ಳಬೇಕೆಂಬ
ಗಾಂಧೀಜಿಯವರ ಗೊತ್ತವಳಿ ಸುಭಾಸರ ಮನಸ್ಸಿಗೆ ಬರಲಿಲ್ಲ
ಸ್ವಲ್ಪಾವಧಿಯಲ್ಲಿ ಅಖಿಲ ಭಾರತೀಯ ಸ್ವಾತಂತ್ರ್ಯತೆಯ
ಸಂಘವನ್ನು ಸ್ಥಾಪಿಸಿ ಎಬ್ಬಿಸಿದಾರೋ ಗುಲ್ಲ
ಇದರಲ್ಲಿ ಶ್ರೀನಿವಾಸ ಐಯ್ಯಂಗಾರ ಜವಾಹರಲಾಲರು
ತುಂಬಿ ತುಂಬಿ ಆಗಿದ್ದರು ಬೆಂಬಲ
ಸನ್ ಹತ್ತೊಂಬತ್ತನೂರಾ ಇಪ್ಪತ್ತೊಂಭತ್ತರಲ್ಲಿ
ಬಂಗಾಲ ಪ್ರಾಂತಿಕ ಕಾಂಗ್ರೆಸ ಕಮಿಟಿ ಅಧ್ಯಕ್ಷರಾಗಿ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಮಹಾತ್ಮರ ದಿನಾಚರಣೆ ಮಾಡಲು ತೊಡಗಿದ್ದರು

||ಚ್ಯಾಲ||

ಜನಪ್ರಿಯ ಸುಭಾಸರನ್ನು ಒತ್ತಿಹಿಡಿದಾರ
ಮತ್ತೆ ಒಯ್ದರು ಜೇಲೀಗಿ
ಸಶ್ರಮ ಶಿಕ್ಷೆ ಕೊಟ್ಟಾರು ಬಾಳ ಸಿಟ್ಟಾಗಿ

ಒಂಭತ್ತು ತಿಂಗಳ ಇದ್ದು ಜೇಲ ಭೋಗಿಸಿದ್ದು ಒಳ್ಳೆಯ ಹುರುಪಾಗಿ
ಹೊರಬಿದ್ದ ಬಂದಮ್ಯಾಲೆ ಹಚ್ಚಿದ್ದ   ಚಳವಳಿ ಬ್ಯಾಗಿ
ದೇಶಭಕ್ತರ ಮೇಲೆ ಗೋಳಿಬಾರ ಆದ ಅತ್ಯಾಚಾರ ಸುದ್ದಿ ಬಂತ ಸಾಗಿ
ಕೇಳಿ ಸುಭಾಸರು ಕುಂತ್ರ ಬಹಳ ಸಿಟ್ಟಾಗಿ

||ಏರು||

ದುಷ್ಟಗುಣದ ಬ್ರಿಟಿಶರನ್ನು ಬಿಟ್ಟು ಇನ್ನು ಫಲ ಇಲ್ಲ
ಮೆಟ್ಟಿ ತುಳಿಯಬೇಕ ಪಾತಾಳಕ
ಕಾಲಕಟ್ಟಿ ಕುಟ್ಟಿ ಅಟ್ಟಬೇಕ ಇಂಗ್ಲಂಡಕ
ಇಷ್ಟು ನಿಷ್ಠುರ ಆಡಿದರ ಸಿಟ್ಟ ತಡಿಯದಕ
ಬುದ್ಧಿಗೇಡಿ ಬ್ರಿಟಿಶರನ್ನು ಗುದ್ದಿಕೊಂತ ಬಿದ್ದ ರಕ್ತ
ಹದ್ದು ನಾಯಿ ನರಿಗಳಿಗೆ ನೀಡಾಕ
ರಣವಾದ್ಯ ಹೊಡೆದ ಯುದ್ಧವನ್ನು ಮಾಡಾಕ|| ೨ ||

ಸ್ವಚ್ಛವಾಗಿ ಸುಭಾಸರು ಬಿಚ್ಚಿ ಹೇಳತಾರ ನಿಂತ
ಲುಚ್ಚಾ ಬ್ರಿಟಿಶರನ್ನು ಹಚ್ಚಿ ಹೊಡೀಬೇಕ
ಮಣ್ಣ ಮುಚ್ಚಿ ಕಿಚ್ಚಿನೊಳಗ ಹಾಕಿ ಸುಡಬೇಕ
ಹೀಂಗ ನಿಶ್ಚಯಿಸಿ ನಿಂತಾರ ಸಂಗ್ರಾಮಕ
ಕೆಚ್ಚೆದೆಯ ವೀರರೆಲ್ಲ ನಿಚ್ಚಳಾಗಿ ಕ್ರಿಯಾ ಮಾಡಿ
ಕಿಂಚಿತ್ ವಂಚನೆಯಿಲ್ಲ ಒಕ್ಕೂಟಕ್ಕ
ಬಂದು ಕೂಡ್ಯಾರ ಆಗ ಸುಭಾಸರ ಲಷ್ಕರಕ್ಕ
ಹಿಂಡ ಹಿಂಡಾಗಿ ತಿರಗುವರ ಲಂಡ ಭಂಡಕೋರರನ್ನು
ಕಂಡಕಂಡಲ್ಲೆಲ್ಲ ಹಿಡಿದ ಕೊಲಬೇಕ
ನಿಂತ ಗುಂಡಹಾಕಿ ಚೆಂಡ ಕಡದ ಕೊಲಬೇಕ
ದೇಹ ತುಂಡ ತುಂಡ ಆಗುವಂತೆ ಕಡಿಬೇಕ
ರಂಡಿಮುಂಡ್ಯಾರಂತೆ ಭಯಗೊಂಡ ನಿಲ್ಲುವ ಕಾರಣೇನು?
ಪುಂಡರಾಗಿ ದಂಡಯಾತ್ರೆ ಮಾಡಬೇಕ
ರಣಮಂಡಲದಿ ನಿಂತ ಹೋರಾಡಬೇಕ
ಶ್ರೇಷ್ಠ ಭಾರತ ಸಿರಿಯ ನಷ್ಟ ಮಾಡಿದಂಥ
ಮಹಾದುಷ್ಟ ಆಂಗ್ಲೇಯರನ್ನು ಓಡಿಸಬೇಕ
ಕೈಕಟ್ಟಿ ಬಿಟ್ಟ ಮ್ಯಾಲ ಹೊರಸಬೇಕ
ಒಳ್ಳೆ ದಿಟ್ಟತನದಿಂದ ಯುದ್ಧ ಮಾಡುದಕ
ಲಕ್ಷಾವಧಿ ಲಷ್ಕರ ನಡುವೆ ನಿಂತ ಸಿಂಹನಂತೆ
ಗುಡುಗ ಹೊಡಿತಾನ ಅಳತಿಲ್ಲ ಅದಕ
ಕೇಳಿ ನಡಗ ಹುಟ್ಟಿತಾಗ ಇಂಗ್ಲಂಡಕ
ಸಾರು ಅಂಥ ಶಬ್ದಗಳು ಪೂರ ಕೇಳಿ ಇಂಗ್ಲೀಷರು
ವೈರಿ ಇದ್ದ ಸುಭಾಸರನ್ನು ಹಿಡಿಬೇಕ
ಹದ್ದುಪಾರಮಾಡಿ ದೂರ ಓದ ಇಡಬೇಕ
ಸುತ್ತ ಪಾರ ಇಟ್ಟ ಆಹೋರಾತ್ರಿ ತಿರಗಬೇಕ
ಕಲ್ಯಾಣ ನಿಲ್ದಾಣದಲ್ಲಿ ಬಲೆ ಒಗದ ಬಂಗಾಲದ
ಹುಲಿ ಹಿಡಿದ ಒಯ್ದರಾಗ ತುರಂಗಕ
ಬಾಳ ಕಷ್ಟ ಆದೀತ ಆಗ ಭಾರತ ಜನಕ

||ಪದ್ಯ||

ಸತ್ಯವಂತರಿಗೆ ಸಾವಿರಾರು ವಿಘ್ನಗಳು ಎಂಬುವ ಮಾತು ಸುಳ್ಳಲ್ಲ
ಹತ್ತೊಂಬತ್ತನೂರಾ ಮೂವತ್ತಮೂರರಲ್ಲಿ ಸುಭಾಸರಿಗೆ ಒದಗಿತ್ತ ಸಾಮಾನ್ಯದ ಕಾಲ
ಪುನಃ ರಾಜಯಕ್ಷ್ಮರೋಗಾಗಿ ಶರೀರಕ್ಕೆ ಚೈನ ಇಲ್ಲ
ಇಷ್ಟ ಆದರೂ ವೀರಪುರುಷ ಸುಭಾಸರು ಧೈರ್ಯ ಬಿಡಲಿಲ್ಲ

||ಚ್ಯಾಲ||

ರೋಗ ಪರಿಹಾರಗೊಸ್ಕರಕ್ಕಾಗಿ ಯುರೋಪ ಖಂಡಕ್ಕ ಹೋಗಿ ವಾಸ ಮಾಡಂತ
ಹೀಂಗ ಹುಕುಂ ಆದೀತು ಪರತ
ಯುರೋಪ ಖಂಡಕ್ಕ ಒಯ್ದಾರ ಔಷದೋಪಚಾರ ನಡಸಿದಾರ ಪೂರ್ತಿ
ರೋಗ ಹೋಗಿ ಆದಾರು ಸ್ವಸ್ಥ
ಹಗಲಿರುಳು ಭಾರತದ ಚಿಂತಿ ಮನದೊಳು ಭ್ರಾಂತಿ ವಾಸ ಏಕಾಂತ
ದೇವರಲ್ಲಿ ಇಟ್ಟ ಏಕಚಿತ್ತ
ಭಾರತೀಯ ಸಮರವೆಂಬ ಸಾರ ತುಂಬಿ ವಿಚಾರ
‘ಇಂಡಿಯನ್ ಸ್ಟ್ರಗಲ್’ ಎಂಬ ಗ್ರಂಥ

||ಏರು||

ಚಂದವಾದ ಇತಿಹಾಸ ಮುಂದೆ ನಾನು ಹೇಳತೇನಿ
ಬೆಳಸಿದ್ರ ಆಗತದ ಬೆಳತನಕ
ಹುಲಕುಂದವಾಸ ಶಿವಲಿಂಗನ ಕೌತುಕ
ಸುಭಾಸ ಬೋಸ ವೀರ ಭಾರತದ ಮಾಣಿಕ
ಬುದ್ಧಿಗೇಡಿ ಬ್ರಿಟಿಶರನ್ನು ಗುದ್ದಿಕೊಂತ ಬಿದ್ದ ರಕ್ತ
ಹದ್ದು ನಾಯಿ ನರಿಗಳಿಗೆ ನೀಡಾಕ
ರಣವಾದ್ಯ ಹೊಡೆದ ಯುದ್ಧವನ್ನು ಮಾಡಾಕ|| ೩ ||

ರಚನೆ : ಹುಲಕುಂದ ಶಿವಲಿಂಗಸ್ವಾಮಿ
ಕೃತಿ :
ಲಾವಣಿ ಸಾಹಿತ್ಯದಲ್ಲಿ ರಾಷ್ಟ್ರೀಯತೆ