ಎಂಥ ವೀರ ಕ್ರಾಂತಿಕಾರ | ಶೂರ ಸುಭಾಶ್ಚಂದ್ರ ಧೀರ|| ಪ ||
ಹದಿನೆಂಟನೂರ ತೊಂಬತ್ತೇಳನೇ ಇಸ್ವಿಯಲ್ಲಿ ಜನಿಸಿ ಬಂದ |
ಬಂಗಾಲ ಪ್ರಾಂತದಲಿ |
ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿಯಾಗಿದ್ದ ಜಾನಕಿನಾಥನ |
ಜ್ಞಾನ ಕುವರ|| ೧ ||

ಯುರೋಪಿಯನ್ನ ಪ್ರಿನ್ಸಿಪಾಲ ಓಟನ್ನ ಹೆಸರಿನವ ಭಾರತ |
ಜನರನ್ನ ದೂರವುದನ್ನು ನೋಡಿ |
ಭಾರಿ ಸಿಟ್ಟಿಗೆದ್ದ ಕರ್ ಕರ್ ಹಲ್ಲತಿಂದ ಜೋರಿಲಿಂದ ಅವನ |
ಮಾರಿಗ್ಹೊಡಿದ|| ೨ ||

ಆಯ್.ಸಿ.ಎಸ್. ಆಗಿ ಅಧಿಕಾರ ವಹಿಸಲಿಲ್ಲ ತಾಯಿ ನಾಡಿನ |
ಸೇವೆ ಜೀವನಾಧಾರ |
ಸಾವಿನ ಭಯವಿಲ್ಲ ಸದಾ ಜೇಲಿನಲ್ಲಿ ಭವಾನಿ |
ಪ್ರಾಥನಾ ನಿರಾಹಾರಿ|| ೩ ||

ಪಾರಾ ಇದ್ದವರ ಮಾರಿ ತಪ್ಪಿಸಿ ಪಾರ ಆದನೋ |
ಭಾರತ ಗಡಿ ದಾಟಿ |
ಜೀಯಾ ಉದ್ದೀನ ಪಠಾಣ ವೇಷ ಹಾಕಿ ಪರಿಪರಿಯಿಂದ |
ಅವರನ ಫಸಾಸಿ ಹೋದ|| ೪ ||

ಝಾಂಸಿ ರಾಣಿದಲ ಆಝಾದ ಹಿಂದ ಫೌಜ ಸ್ವತಂತ್ರ ಸರಕಾರ |
ಬ್ಯಾಂಕ ಸ್ಥಾಪನೆ ಮಾಡಿ |
ರೊಕ್ಕದ ಸುರಿಮಳಿ ತಕ್ಕಡಿ ತುಲಭಾರ ರಕ್ತದ |
ತಿಲಕವೆ ಸಾಕ್ಷಿ ಅದಕ|| ೫ ||

ಒಂಭತ್ತ ಸರಕಾರ ಮನ್ನಣೆ ಪಡಕೊಂಡ ಅಂದಮಾನ |
ನಿಕೋಬಾರ ಸ್ವತಂತ್ರ ಮಾಡಿಕೊಂಡ |
ಪತ್ರಿಕಾ ಪ್ರಸಿದ್ಧಿ ಪ್ರಚಾರ ಶಾಖೆಯ ವಿಸ್ತಾರಗೊಳಿಸಿ |
ಪ್ರಖ್ಯಾತನಾದ|| ೬ ||

ಸತ್ತನೆಂಬ ಸುದ್ದಿ ಸುತ್ತುಕಡೆ ಅದ ಮಿಥ್ಯವೆಂದು |
ಮಹಾತ್ಮಜಿ ಹೇಳಿದ್ದಾ |
ಮತ್ತೊಮ್ಮೆ ನಿಮಗ ದರ್ಶನ ಕೊಡಲಿ ಎಂದು ಪ್ರತ್ಯಕ್ಷ |
ಹುಲಕುಂದ ಭೀಮ ಹೇಳಿದ|| ೭ ||

ರಚನೆ : ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು