ಭಾರತಾಂಬೆ ಪಾರತಂತ್ರ ದೂರ ಮಾಡಲಿಕ್ಕೆ ಹೊರಟ ವೀರನಿಗಂದು
ಪರರಾಷ್ಟ್ರದೊಳಗ ನಿತ್ಯಪೂಜೆ |
ವಾರಂಟ ಪಾರಾದವರಿಗೆ ನೀರ ಹಚ್ಚಿ ಪಾರ ಆದ ಶೂರ |
ಸುಭಾಸಶ್ಚಂದ್ರಭೋಸ ನೇತಾಜಿ ||
ಅನ್ಯಾಯಕ್ಕ ಸಹನಿಲ್ಲ ತನ್ನ ದೇಹ ಪರಿವಿಲ್ಲ ಧನ್ಯ ಧನ್ಯ
ಜನಿಸಬಹುದ ಬಂಗಾಲದಲ್ಲಿ |
ಸಣ್ಣಂದಿರತ ಶರೀರವೆಲ್ಲಾ ಸಣ್ಣ ಆತ ಜೇಲಿನಲ್ಲಿ |
ಸಣ್ಣ ವ್ಯಕ್ತಿ ಅಲ್ಲ ಶ್ರೇಷ್ಟ ಗಂಡಗಲಿ ||
ಪರತಂತ್ರ ದೇಶದ ಭ್ರಾಂತಿ ತುರಂಗ ವಾಸದ ಕ್ರಾಂತಿ |
ವಿದ್ಯಾ ಅಭ್ಯಾಸ ಚಿಂತಿ ಬಾಲಕನಲ್ಲಿ |
ಯುರೋಪಿಯನ್ನ ಪ್ರಿನ್ಸಿಪಾಲ ಓಟನ್ಂಬು ಹೆಸರಿನವ |
ಕಲಸತಿದ್ದ ಪ್ರೆಸಿಡೆನ್ಸಿ ಕಾಲೇಜದಲ್ಲಿ ||
ಹಿಂದು ಜನರಿಗೆ ಅವನಿಂದಾ ಮಾಡುದ ಕಂಡು ಸಹನ |
ಆಗಲಿಲ್ಲ ಸುಭಾಶ್ಚಂದ್ರರಲ್ಲಿ |
ವಿದ್ಯಾರ್ಥಿಗಳ ಗುಂಪುಗೂಡಿ ತಾತ್ಕಾಲಿಕ ಸಂಪಹೂಡಿ |
ದೇಹ ದಂಡನ ಮಾಡಿರವಂಗ ಕ್ಷಣದಲ್ಲಿ ||
ಅದೇ ಸಿಟ್ಟಿಹಿಡಿದ ಭೋಸರನ್ನ ಹದ್ದಪಾರ ಮಾಡಿದರು |
ಬಂದ ಆತ ಎರಡವರುಷ ತನಕ ಸಾಲಿ |
ಮಂದಿ ಆಗ್ರಹದಿಂದ ಬಂದ ಮುಂದೆ ಕಾಲೇಜಕ್ಹೆಸರ ಹಚ್ಚಿ |
ವಿದ್ಯಾಪೀಠದ ಪರೀಕ್ಷೆ ಪಾಸಾದರಲ್ಲಿ |
ತಾಯಿ ತಂದಿ ಮಾತ ಕೇಳಿ ಆಯ್.ಸಿ.ಎಸ್. ಕಲಿಲಕ್ಕೆ ಹೋಗಿ
ತೇರ್ಗಡೆ ಹೊಂದಿದಿಪ್ಪತ್ಮೂರ ವಯಸ್ಸಿನಲ್ಲಿ |
ಮಾಯದ ನೌಕರಿಗೆ ಮರುಳ ಆಗಲಿಲ್ಲ ರಾಜಿನಾಮೆ ಕೊಟ್ಟ ಬಂದ |
ಬಿದ್ರ ಚಳವಳಿಯಲ್ಲಿ ||

||ಚಾಲ||

ದೇಶಗೌರವ ಸುಭಾಶ್ಚಂದ್ರಭೋಸ |
ದೇಶಬಂಧು ದಾಸ | ಇಬ್ಬರು ಜೋಡಿ ||
ಕೆಲಸ ನಡಸಿತಿದ್ರ ಕೂಡಿ ಕೂಡಿ ||
ಕಲಕತ್ತೆಗೆ ಪ್ರಿನ್ಸ ಆಃಪವೆಲ್ಸ |
ಬರುವ ದಿವಸ | ಮಸಲತ ಮಾಡಿ |
ಬಹಿಷ್ಕಾರ ಹಾಕ್ಯಾರ ಸಭೆ ಗೂಡಿ ||
ಆರ ತಿಂಗಳ ಕಾರಾಗ್ರಹವಾಸ | ಬರದಾರ ಮರುದಿವಸ |
ಹಾಕಿದರು ಬೇಡಿ |
ತಗೊಂಡ್ಹೋದರು ಜೇಲಿನ ಕಡಿ ||
ತುರಂಗ ಬಿಟ್ಟ ಹೊರಬಿದ್ದ ತರುಣರು ನೂರಪಟ್ಟ |
ಜೋರ ಇಟ್ರ ಮುಂದ ಹೆಜ್ಜಿ
ಮಂದ ಪಕ್ಷದವರ ಕೂಡ ಬಂದು ಹೊಂದಿಕೊಳ್ಳಲಿಲ್ಲ |
ಶೀಘ್ರ ತತ್ವ ಉಗ್ರಪಕ್ಷ ಬಹದ್ದೂರರ |
ಸಂಹೇಹವಿಲ್ಲದೆ ಸಂಘಟನೆ ಮಾಡುವವರು ಸ್ವರಾಜ್ಯ ಪಕ್ಷ |
ಸ್ಥಾಪಿಸಿದರು ಗಂಭೀರರು ||
ಫಾರರ್ವಡೆಂಬ ಪತ್ರಿಕೆಯ ಸಂಪಾದಕರು ತಾವಾಗಿ |
ಅದರಿಂದ ಮಾಡತಿದ್ರ ಪ್ರಚಾರ |
ಎರಡ ಸಾರೆ ಕಾಂಗ್ರೆಸ ಅಧ್ಯಕ್ಷಾಗಿ ಆರಿಸಿ ಬಂದ್ರ ಗೌರ್ಮೆಂಟದಿತ್ತ
ಇವರ ಮೇಲೆ ನದರ ||
ಮೂವತ್ತೆರಡನೇ ಇಸ್ವಿಯಲ್ಲಿ ದುಂಡು ಮೇಜಿನ ಪರಿಷತಿನಿಂದ |
ನಿರಾಶರಾಗಿ ಮರಳಿ ಬಂದ್ರ ಗಾಂಧಿಯವರ ||
ಆವಾಗ ಸುಭಾಸರಿಗೆ ಆಮಂತ್ರಮಣ ಕೊಟ್ಟ ಕರೀ ಕಳಿಸಿ |
ತುರಂಗ ಕಟ್ಟಿದ್ರ ನೀಚ ಸರಕಾರಾ ||
ಇಪ್ಪತ್ತ ವರುಷದೊಳಗ ಇವರ‍್ನ ಹತ್ತಸಾರೆ ಜೇಲಗಟ್ಟಿ |
ಹದ್ದಪಾರ ಮಾಡಿದ್ದರು ಬ್ರಿಟಿಷರಾ |
ನೂರಾ ಎಂಟ ಸೇರ ತೂಕ ಕಡಿಮಿ ಆದ್ರು ಬಿಡಲಿಲ್ಲ ಕರುಣ |
ಇಲ್ದ ಕುಲಗೇಡಿ ಭದ್ಮಾಸರಾ ||
ಸೆರೆಮನೆಯೊಳಗಿದ್ದವರು ಸಹಿತ ಯುರೋಪಿಯನ್ರ ಕಾಯ್ದೆ ಮುಂದ
ವಿಮಾನದಿಂದ ಕಲಕತ್ತೆಗೆ ಬಂದ್ರ ಸುಭಾಶ್ಚಂದ್ರರಾ |
ಬರುದರೊಳಗ ತಂದಿಯವರು ತೀರಿಕೊಂಡ ಸುದ್ದಿ ಕೇಳಿ |
ಹೌಹಾರಿ ಹಾಕಿದರು ಕಂಣೀರಾ ||

||ಚಾಲ||

ನಿಂತಲ್ಲೆ ಮತ್ತೆ ಪೋಲಿಸರ ಮುತ್ತಿಗಿ ಹಾಕಿದರ | ಇಲ್ಲದೆ ದಯ ಕರುಣ
ತಡಮಾಡದೆ ಬಿಡಿಶಾರ ಹಿಂದುಸ್ತಾನಾ ||
ಆರೋಪ ಹೊರಿಸಿದರ ಪುರಾವೆ ಇಲ್ಲ ಬರೇ ಒಂದೇ ಅಮಲ |
ಎಷ್ಟು ಮೂರ್ಖತನಾ |
ತುಂಬಿ ತುಳುಕುತ್ತಿದ್ದುವ ದುರ್ಗುಣಾ ||
ಹದಿನೆಂಬನೂರ ಹದಿನೆಂಟ ರೆಗ್ಯೂಲೇಶನ್ ಪ್ರಕಾರ ಬಂಧನ |
ಇವೇ ಮುಖ್ಯ ಬಾಣಾ |
ಜೇಲಿಗಟ್ಟಿ ಮಾಡತಿದ್ರ ಸಂಣಾ ||

||ಏರು||

ಸಂಣ ಆದರು ಕೂಡಾ ತಣ್ಣಗ ಕೂಡ್ರವರಲ್ಲ ಹೊರಗ ಬಂದ |
ಹಾರಸತಿದ್ರ ಧಡಲ್ ಬಾಜಿ|| ೨ ||

ಬ್ರಿಟಿಷ ಸಾಮ್ರಾಜ್ಯಶಾಹಿ ನಾಮಶೇಷ ಮಾಡುವಂಥಾ |
ನೇಮ ಹಿಡಿದಿದ್ದ ಆ ಬ್ರಹ್ಮಚಾರಿ |
ಕುಟಿಲ ಕಾರಸ್ಥಾನ ಅನ್ಯಾಯಗಳನ್ನೆಲ್ಲ ನಷ್ಟ ಮಾಡುದು |
ಒಂದ ಶ್ರೇಷ್ಟ ಗುರಿ ||
ಬಿಸಿ ಬಿಸಿ ರಕ್ತದ ಹೊಸ ಹೊಸ ತರುಣರಿಗೆ ಉಪದೇಶ |
ಮಾಡುವಂಥ ಕ್ರಾಂತಿಕಾರಿ |
ಮುಸಗುಡುವಂಥ ಬಿಳಿ ಆನಿಗಳಿಗೆ ಎಲ್ಲಾ ಅಂಕುಶ |
ಇದ್ದಾಂಗ ಸುಭಾಶ್ಚಂದ್ರ ಧೊರಿ ||
ಕಲಕತ್ತೆಯಲ್ಲಿ ಹಾಲ್‌ವೆಲನ ಪುತ್ಥಳಿ ತಗದ ಹಾಕಲಕ್ಕೆ |
ಚಳವಳಿ ನಡದಿತ್ತ ಅತಿ ಮಿತಿ ಮೀರಿ |
ಪೋಲೀಸರ ಬಂದ ಇವರ ಮೇಲೆ ಮುತ್ತಿಗಿ ಹಾಕಿ |
ಜೇಲಿಗಟ್ಟಿದ್ರ ಮತ್ತೊಂದ ಸಾರಿ ||
ಬರೇ ತುರಂಗವಾಸ ಶರೀರೆಲ್ಲ ಕರಿಗ್ಹೋತ ಯಾರ‍್ಯಾರು |
ಹೋಗಿಲ್ಲ ಇವರ ಸರಿ |
ಸೆರೆಮನೆಯೊಳಗ ದುರ್ಗಾದೇವಿ ಆರಾಧನ ಬಾರಿ ಬಾರಿಗಿ |
ಇರತಿದ್ರ ನಿರಾಹಾರಿ ||
ಇರುವ ಮನಿಸುತ್ತ ಪಾರಾ ಇಟ್ಟಿದ್ದರು ವಾರಂಟ ತಗದಿದ್ರ |
ಮತ್ತೊಂದ ಬಾರಿ |
ಜಾನೇವರಿ ಇಪ್ಪತ್ತಾರ ನಾಲ್ವತ್ತೊಂದನೆ ಇಸ್ವಿಯಲ್ಲಿ |
ಮಾಯವಾದರು ದಾಟಿ ಗುಲಾಮಗಿರಿ ||

||ಚಾಲ||

ಕಂಣಿಗೆ ಕಾಣುವ ಜಗತ್ತೆಲ್ಲ ಮಿಥ್ಯೆ ವಿಚಾರ ಧ್ಯೇಯ ಸತ್ಯ | ನಷ್ಟವಾಗುದಿಲ್ಲಾ ||
ಹಿಗೆಂತ ಸಾರ‍್ಯಾರ ನಾಡಮ್ಯಾಲಾ ||
ವಿಚಾರ ಬೆನ್ನಹತ್ತಿ ವ್ಯಕ್ತಿಯು ಸತ್ತ ವಿಚಾರ ಉಳಿದ ಮತ್ತೆ ಆಗುದು ಪ್ರಬಲಾ
ಅನುಕರಣ ಮಾಡುರ ಸಾವಿರಾರ ಜನರೆಲ್ಲಾ ||
ಪದದ ಮೊದಲನೇ ಅಧ್ಯಾಯ ಇಲ್ಲಗಿ ಮುಗೀತ ಮುಂದಿನ ಚರಿತ ಭೀಮೇಶ ಬಲ್ಲಾ
ಕವಿ ಮಾಡಿ ಹೇಳಾವ ಸರ್ವೆಲ್ಲಾ ||

||ಏರು||

ಸಿರಿಗನ್ನಡದಲ್ಲಿ ಮೆರೆವ ಹುಲಕುಂದದ |
ಸರಸ ಜನ ಪದದ ಸರಗೆಜ್ಜ|| ೩ ||


ರಚನೆ :
ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು