ಜಗತ್ತಿನಲ್ಲಿ ಶಾಂತಿಯುಗದ ಪುರುಷರು ಹಗಲಿರುಳೆನ್ನದೆ ದುಡಿಯುವರು |
ಆಗರ್ಭ ಶ್ರೀಮಂತ್ರ ತ್ಯಾಗಿ ಧೈರ್ಯವಂತ್ರ ಆಗಲಿ ಹೋದ್ರ |
ಭಾರತ ಮಂತ್ರಿವರ್ಯರು|| ಪ ||

ಭಾರತ ದೇಶದ ಬಂಧ ವಿಮೋಚನಕ ಭಾರಿ ಕಷ್ಟನಷ್ಟ ಸೋಸಿದರು |
ತಾರುಣ್ಯವೆಲ್ಲಾ ತುರಂಗದೋಳು ಕಳದ ಧೀರತನದಿಂದ ಮುಂದೆ
ಸಾಗಿದರು ||
ಬ್ರಿಟಿಶ್ ಸರಕಾರದ ಲಾಠಿ ಹೊಡತಕ್ಕೆ ಏಟು ಮಣಿಯಲಿಲ್ಲ ಪಂಡಿತರು |
ಕಠಿಣ ಪ್ರಸಂಗಗಳಲ್ಲಿ ಕಾಲದೆಗೆಯದೆ ಧಿಟ್ಟತನದಿ ಮುಂದೆ ಸಾಗಿದರು ||
ರಾಷ್ಟ್ರಸೇವೆ ಮಾಡಿ ಕಾಂಗ್ರೇಸ ಅಧ್ಯಕ್ಷರಾಗಿ ಎಷ್ಟೋ |
ಗೊತ್ತುವಳಿ ಮಂಡಿಸಿದರು |
ರಾಷ್ಟ್ರಪಿತಾ ಮಹಾತ್ಮಾ ಗಾಂಧಿಜಿಯವರ ಪಟ್ಟದ ಶಿಷ್ಯರಾಗಿ
ನಡಕೊಂಡು ||

||ಚಾಲ||

ರಾಷ್ಟ್ರಧ್ವಜದ ಮೇಲಶೋಕ ಚಕ್ರ ಇಟ್ಟಾ |
ರಾಷ್ಟ್ರಸಭೆಯಲ್ಲಿ ಮಾಡಿಕೊಂಡ್ರ ಶ್ರೇಷ್ಠಾ ||
ಮಹಾ ಮಹಾ ಮುತ್ಸದ್ದಿಗಳನ ಬಿಟ್ಟಾ |
ಮಹಾತ್ಮ ಮುಳ್ಳಿನ ಕಿರೀಟ ಇವರ ತಲಿಯ ಮೇಲಿಟ್ಟಾ ||
ಹಿಂದುಸ್ತಾನದ ಪ್ರಧಾನ ಮಂತ್ರಿ ಪದವಿ ಕೊಟ್ಟಾ |
ಗಾಂಧಿಜಿಯವರು ಹೋದ್ರ ಕೈ ಬಿಟ್ಟಾ ||

||ಏರು||

ನಿರ್ಗತಿಕ ಭರತಖಂಡ ಪ್ರಗತಿಗೊಯ್ಯುವದಕ್ಕ |
ಬಗಿ ಬಗಿ ಯೋಜನೆ ನಡಸಿದರು|| ೨ ||

ಪಂಚವಾರ್ಷಿಕ ಯೋಜನೆ ಪ್ರಪಂಚಕ್ಕೆಲ್ಲಾ ಘನ |
ಉಪಯೋಗವಾಗುವಂತೆ ಯೋಚಿಸಿದರು |
ಹಂಚಿಕೆಯಿಂದಲಿ ಫ್ರೆಂಚ ಮುಂತಾದಂಥ |
ವಸಾಹತುಗಳನ್ನ ಮುಕ್ತಗೊಳಿಸಿದರು ||
ಯುದ್ಧದ ಬೇಗೆಗೆ ಭುಗಿಲ್ ಎನ್ನುತ್ತಿದ್ದಾಗ |
ಬಾಂಡುಂಗ ಪರಿಷತ್ತ ಸಜ್ಜಗೊಳಿಸಿದರು |
ಮುದ್ದಾಂ ಜನತಾ ಚೀನಕ ಖುದ್ದ ದರ್ಶನ ಕೊಟ್ಟ  |
ಜನರಲ್ಲಿದ್ದಂಥ ತಪ್ಪು ಭಾವನಾ ದೂಡಿದರು ||
ಯುರೋಪ ಮತ್ತು ರಶಿಯಾದಲ್ಲಿ ಪ್ರವಾಸ ಕೈಕೊಂಡು |
ಹಿಂದುಸ್ತಾನಕ ಕೀರ್ತಿಯನ್ನು ತಂದುಕೊಟ್ಟರು |
ಪರರಾಷ್ಟ್ರದೊಳಗಿನ ಮುಖಂಡರನ ಭಾರತಕ್ಕೆ |
ಬರಮಾಡಿಕೊಂಡು ಸತ್ಕರಿಸಿದರು ||

||ಚಾಲ|

ಭಾರತಕ್ಕೆ ಎಲ್ಲರು ಬೇಕು |
ಭಾರತವು ಎಲ್ಲರಿಗೆ ಬೇಕು ||
ಎಲ್ಲಾ ರಾಷ್ಟ್ರಕ್ಕೆ ಯುದ್ಧದ ಭೀತಿ ಸಾಕು |
ಸಲೆ ಶಾಂತಿ ಮಾರ್ಗದಿ ನಡಿ ಬೇಕು ||
ಜಿನೇವಾ ಪರಿಷತ್ತಿನಲ್ಲಿ ತಗಿದ ತೂರು |
ಮಾನ ಜನ್ಮದ ಮೂಲಭೂತ ಹಕ್ಕು ||

||ಏರು||

ಆಗದಂಥ ಕಾರ್ಯಗಳನ ಸಾಗರ ಬಿದ್ದ ನೀಗಿಸುವರು |
ಯೋಗ್ಯತಾವಾನರು ನಮ್ಮ ನೆಹರುರವರು
ಹತ್ತ ಹದಿನೈದ ವರುಷ ಮಸ್ತಖಟಪಟ ಮಾಡಿ |
ಯುಕ್ತಿಲಿಂದ ಕಾರಭಾರ ನಡೆಸಿದರು |
ಸತ್ತು ಕಡೆ ರಾಷ್ಟ್ರಗಳು ಇತ್ತ ಹೊರಳಿ ನೋಡುವಂತೆ |
ಉತ್ತಮ ತತ್ವಕೆ ಅಂಟಿಕೊಂಡಿಹರು ||
ಹಿಂದುಸ್ತಾನದೊಳಗಿನ ಕುಂದು ಕೊರತೆಗಳು ಬಂದ ಆದಾಗ |
ಶಾಂತಿ ಹೊಂದುವರು |
ಸುಂದರ ಭಾರತ ನಂದನವನಾ ಮಾಡುದೊಂದೆ |
ಅವರ ಹೃದಯದ ಉಸಿರು ||
ಜಾತ್ಯಾತೀತ ನೀತಿವಂತ ರಾಷ್ಟ್ರಕಟ್ಟಲಿಕ್ಕೆ ಆತುರ |
ಪಡುವಂಥ ಖ್ಯಾತಿವಂತರು |
ಮಾತನಾಡಿದಂತೆ ಕೃತಿ ಸತತ ಸಾಗಲೆಂದು ಪ್ರೀತಿಲಿಂದ |
ಸಾರುವಂಥ ಸಾತ್ವಿಕರು ||

||ಚಾಲ||

ಮಾನವ ಕೋಟಿಗೆ ಜ್ಞಾನದ ಶಿಖರಾ |
ಅನುಭವಿಕ ರಾಜಕಾರಣ ಮುಕುರಾ |
ವರ್ಣನ ಮಾಡಲಿಕ್ಕೆ ಇಲ್ಲ ಅಕ್ಷರಾ |
ಪೂರ್ಣ ಅರುಣೋದಯದ ಭಾಸ್ಕರಾ ||
ದೀನ ದಲಿತರ ಉದ್ಧಾರ ಗೋಸ್ಕರಾ |
ಹೊಣೆ ಹೊತ್ತ ಕಾಂಗ್ರೆಸ ಸರಕಾರಾ ||

||ಏರು||

ಜಾಗ ಹುಲಕುಂದದೊಳಗ ಕವಿ ಹೇಳಿದ ಭೀಮ ಸಿಂಗ |
ತೂಗಿದಂಗ ಬಂಗಾರ ಪಕ್ಕ ಸೇರು|| ೩ ||

ರಚನೆ : ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು