ಕಾಲ ಚಕ್ರದ ಲೀಲಾ ಪುರುಷರು ಲಾಲ ಬಹದ್ದೂರ ಶಾಸ್ತ್ರೀಯವರು |
ಶೀಲ ಸಚ್ಚರಿತ್ರೆಯ ಮೂಲ ನಾಯಕರು ಅಗಲಿ ಹೋದ್ರ |
ಭಾರತ ಮಂತ್ರಿವರ್ಯರು|| ಪ ||

ಬಡತನದಲ್ಲಿ ಶಿಕ್ಷಣ ಪಡೆದು ಪ್ರವೀಣರಾಗಿ ಧೃಡದಿಂದ ದೇಶಕ್ಕೆ ದುಡಿದವರು |
ಕಡು ವೈರಿಗಳ ಕೂಡ ಬಿಡದೆ ಧೈರ್ಯದಿಂದ ಹಿಡಿದ ಕಾರ್ಯವನ್ನು ನಡಿಸಿದ್ದರು ||
ಗಾಂಧಿ ತತ್ವವನ್ನು ಹೊಂದುಗೂಡಿಸಿಕೊಂಡ ರಾಜಕಾರಣ ದುರಂಧರು ||
ಹಿಂದುಸ್ಥಾನವನು ಮುಂದುವರಿಸಿಕೊಂಡು ಚಂದದಿಂದ ಕೆಲಸ ಸಾಗಿಸಿದರು ||
ವಿನೋಬಾಜಿಯವರ ಅನುಮತಿ ಪಡಕೊಂಡ ಅನ್ಯ ರಾಷ್ಟ್ರದಲ್ಲಿ ಕ್ರಾಂತಿ ಎಬ್ಬಿಸಿದರು |
ಕೊನೆಗೆ ಶಾಂತಿ ಮಾರ್ಗವನ್ನು ಅನುಸರಿಸಿ ಮನಮುಟ್ಟಿ ದುಡಿದರು ಮಹನೀಯರು ||

||ಚಾಲ||

ಹದಿನೆಂಟು ತಿಂಗಳದಲ್ಲಿ |
ಸುಧಾರಣೆ ಮಾಡಿದರು ಇಲ್ಲಿ ||
ಹಿಂದುಸ್ತಾನದ ಕೀರ್ತಿ ಜಗದಲ್ಲಿ |
ತಂದ ಕೊಟ್ಟ ಹೋದ್ರ ಕ್ಷಣದಲ್ಲಿ |

||ಏರು||

ಸೋಲನರಿಯದ ವಿಶಾಲ ಹೃದಯದ ಮೇಲ್ತರಗತಿಯ ಪ್ರಧಾನರು|| ೧ ||

ಭಯಗೊಂಡ ಪ್ರಪಂಚ ಹೊಯ್ದಾಡು ಕಾಲಕ್ಕ ಧೈರ್ಯಗೆಡಲಿಲ್ಲ    ಶೌರ್ಯವಂತರು |
ಜೈ ಜವಾನ ಜೈ ಕಿಸಾನ ಅಂತ ಆಹಾರ ಅಭಾವ ಪ್ರಶ್ನಕ್ಕಣಿಯಾದರು ||
ಜಗತ್ತಿಗೆಲ್ಲಾ ಶಾಂತಿ ಪಾಠ ಕಲಿಸಿದರು ಅಂತರಾಷ್ಟ್ರೀಯ ಮುಖಂಡರು |
ಯುಗದ ನೊಗ ಕಿತ್ತೊಗೆದ ವೀರರು ಹಗೆಗಳಲ್ಲಿ ಸ್ನೇಹ ಬೆಳೆಸಿದರು |
ಸಾದಾ ಜೀವನ ಸಾತ್ವಿಕ ಆಹಾರ ಸೋಮವಾರ ಒಪ್ಪತ್ತ ವ್ರತ ಸಾರಿದರು |
ಹೃದಯದಿಂದ ವೈರಿಗೆದೆಯುವ ಕಲೆಯಲ್ಲಿ ಸದಾಯುಕ್ತಿಯಿಂದ ನಡೆದವರು ||

||ಏರು||

ಶಾಸ್ತ್ರೀಯವರು ನಿಷ್ಕಾಮ ಕರ್ಮಯೋಗಿ |
ಆಸ್ತಿ ಮಾಡಲಿಲ್ಲ ಸಾಯುವವರಿಗಿ |
ಅಹಿಂಸಾ ಮೂರ್ತಿ ಸ್ವಾರ್ಥತ್ಯಾಗಿ |
ಮಹತ್ಮಾಜಿ ಪರಮ ಶಿಷ್ಯರಾಗಿ ||

||ಏರು||

ಹುಲಕುಂದ ಭೀಮೇಶ ಅಂದ ನಮ್ಮ ರಾಷ್ಟ್ರಕ
ಹಾನಿಯಾಯಿತು ಭರಪೂರಾ|| ೨ ||


ರಚನೆ :
ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು