ಭಾರತದೇಶದ ಮುಂದಾಳಾಗಿ | ಗಾಂಧಿ ನೆಹರು ಸಂಗಮವಾಗಿ |
ತಂದ ಸ್ವರಾಜ್ಯ ಮುಂದುವರಿಸಿದ ನೆಹರೂ ಪುತ್ರಿಯರೂ |
ಹಿಂದಿನ ಕುಂದುಕೊರತೆ ನೀಗಿ | ಇಂದಿನ ಪ್ರಧಾನ ಮಂತ್ರಿಯಾಗಿ |
ಮುಂದಾಳಾಗಿ ಆನಂದಬೀರಿದ ಇಂದಿರಾಜಿಯವರು|| ೧ ||
ಸುಂದರ ಆನಂದ ಭವನದಲ್ಲಿ | ಹತ್ತೊಂಬತ್ತು ನೂರಾ ಹದಿನೇಳರಲ್ಲಿ |
ಹತ್ತೊಂಬತ್ತನೇ ನವ್ಹಂಬರದಲ್ಲಿ ಜನಿಸಿದರಿವರು |
ಇಂದಿರಾ ಎಂಬ ಹೆಸರನ್ನಿಟ್ಟು | ನಾಯಡು ಅವರು ಸಂತಸಪಟ್ಟು |
ಭಾರತಕಣ್ಮಣಿ ಎಂದು ಜೋಗುಳ ಹಾಡಿ ಹರಿಸಿದರು|| ೨ ||
ಮದನ ಮೋಹನ ಮಾಲವಿಯವರು | ಗೋಪಾಲಕೃಷ್ಣ ಗೋಖಲೆಯವರು |
ಆನಿಬೆಸೆಂಟ ಆದಿಯಾಗಿ ಅನಸಾರಿ ಡಾಕ್ಟರರು ||
ಚಿತ್ತರಂಜನದಾಸ ಸಪ್ರು | ಮಹಾತ್ಮಾಗಾಂಧಿ ಆಂಡ್ರೂಸರವರು |
ವರಿಷ್ಠ ವ್ಯಕ್ತಿ ವಿಶಿಷ್ಟ ಶಕ್ತಿ ಎಂದು ಭವಿಷ್ಯ ನುಡಿದಿಹರು|| ೩ ||
||ಚಾಲ||
ಪ್ರೀತಿಯ ಪುತ್ರಿ ನೆಹರೂರ | ರಾಷ್ಟ್ರನಾಯಕರ |
ಏಕೈಕರಾಗಿ ಜನಿಸಿದರು | ಅತಿಪ್ರೀತಿಪಾತ್ರರಾಗಿಹರು|| ೧ ||
ದಿನನಿತ್ಯದ ಅಭ್ಯಾಸ ಮುಗಿಸಿ | ತಂದೆಯೊಡಗೂಡಿ
ಭಾರತವನೆಲ್ಲ ಸುತ್ತಿಹರು | ಅನುಭವ ಪಡೆದಿಹರು|| ೨ ||
ನೈತಿಕದ ಆತ್ಮಬಲ | ರಾಜಕೀಯ ಹಂಬಲ |
ದೈವಬಲದಿ ಆರಿಸಿ ಬಂದಿಹರು | ಕಾಂಗ್ರೆಸ ಅಧ್ಯಕ್ಷರಾಗಿಹರು|| ೩ ||
||ಏರ||
ಭಾರತ ಪ್ರಧಾನ ಮಂತ್ರಿಯೆಂದು ಹತ್ತೊಂಬತ್ತು ನೂರಾ ಅರವತ್ತ |
ಆರರಲ್ಲಿ ಆರಿಸಿಕೊಂಡಿತು ಕೇಂದ್ರ ಸರ್ಕಾರ|| ೧ನೆಯ ಚೌಕ ||
ಮಳೆಯ ಹನಿ ನಿಂತರು ಸಹಿತ | ಮರದ ನೀರು ಬೀಳುವಂತೆ |
ಫಿರಂಗೆಯರ ದುಷ್ಟಗುಣಗಳು ಮತ್ತೆ ತಲೆಯೆತ್ತಿ ||
ಆಳುವಪಕ್ಷದ ವಿಭಜನೆಯಾಗಿ | ಆಡಳಿತಪಕ್ಷ ತಾನೊಂದಾಗಿ |
ಒಡೆದ ಪಕ್ಷ ಇನ್ನೊಂದಗಿ ವಿಘ್ನ ಹೂಡಿಹರು|| ೧ ||
ಅಳ್ಳೆದೆಯಾಗದೆ ಹೆದರದೆ | ಕುಗ್ಗದೆ ಬಗ್ಗದೆ ಹಿಂದೆ ಸರಿಯದೆ |
ಧೀರೋದಾತ್ತರಾಗಿ ಇವರು ಮುಂದೆ ನಡೆದಿಹರು |
ಹಳೆಯಪಕ್ಷವೆ ಚುನಾವಣೆಯಲಿ | ಕಳ್ಳ ಚಾಯನಾ ಆಕ್ರಮಣದಲಿ |
ಬಾಂಗ್ಲಾದೇಶದ ಹೋರಾಟದಲಿ ಭಾಗವಹಿಸಿದರು|| ೨ ||
ಎನಿತೂ ಸೋಲಿನ ಭಯವಿಲ್ಲದಲೆ | ಹಿಡಿದ ಹಟವ ಸಾಧಿಸುವಲ್ಲಿ |
ಆತ್ಮದ ಬಲ ಒಂದರಿಂದಲೆ ಗೆಲವು ಪಡೆದಿಹರು ||
ಹಳೆಯರೂಢಿ ವಿಷಮತೆ ಹೀರಿ | ದೀನದಲಿತರ ಭಾಗ್ಯವ ತೊರೆದು |
ಸಮಾಜವಾದಿ ರಾಷ್ಟ್ರವ ಮಾಡಲು ಪಣವನು ತೊಟ್ಟಿಹರು|| ೩ ||
||ಚಾಲ||
ಕಳ್ಳಸಂತೆಯ ಕೂಡಿದ ಹಣ | ಲಂಚಗುಳಿತನ
ಸುಳ್ಳು ಹೇಳಿ ಮೋಸ ಮಾಡುವರನು | ಸುಳಿದಾಡಿ ಹಿಡಿದು ಸೆರೆಗಟ್ಟಿ|| ೧ ||
ಸೇವೆಯಲಿ ಅಂಜಿಕಿಲ್ಲದವನ | ಕಳಿಸಿ ಮನೆಗವನ |
ದುರ್ಬಲ ಜನತೆಗನುದಿನ | ಪೀಡಿಸುವ ನೀಚ ಜನರನ್ನು|| ೨ ||
ಮಾಡಿ ಮರ್ಧನ ಕೊಳಚೆ ನಿರ್ಮೂಲನ | ಕಲಿಸುವ ಸ್ವಾವಲಂಬನ |
ನಾಗರಿಕ ಹಕ್ಕು ರಕ್ಷಿಸಿ | ನಿರ್ಗತಿಕ ಜನಕೆ ನೆರವಾಗಿ|| ೩ ||
||ಏರ||
ಅಲ್ಪ ಸಂಖ್ಯಾತ ದಲಿತರನ್ನು ದೀನ ದುರ್ಬಲ ದೈವವನ್ನು |
ನಿರಾಶ್ರಿತ ನಿರ್ಗತಿಕರಿಗೆ ಬಾಳಿನಾಸಾರಾ|| ೨ನೆಯ ಚೌಕ ||
ಸಿರಿವಂತರು ಮುಚ್ಚಿಟ್ಟ ರೊಕ್ಕ | ಸರಕಾರ ತೆಗೆಸಲು ಪೇಚಿಗೆ ಬಿತ್ತ |
ಕರೆಯಿಸಿ ಕೇಳ್ಯಾರ ಸರ್ವರಿಗೆಲ್ಲ | ಗಳಿಕೆಯ ಸರಿಲೆಕ್ಕ |
ತೋರಿಸಲಾಗದ ಕೂಡಿದ ರೊಕ್ಕ | ಬೆಳ್ಳಿಬಂಗಾರ ಮುಚ್ಚ್ಯಾರಚೊಕ್ಕ |
ಎದುರುಕಾಣದ ಆಸ್ತಿಮಾತ್ರ ಸರ್ಕಾರಕ ತೋರ್ಸಿದರು|| ೧ ||
ಭಾರತದೇಶಕ್ಕ ಆಪತ್ಕಾಲ | ಆಗುವದೆಂದು ಕೋಲಾಹಲ |
ತುರ್ತುಪರಿಸ್ಥಿತಿ ಘೋಷಿಸಿ ರಾಷ್ಟ್ರದ ಹಿತವನು ಮಾಡಿದರು |
ಮೂರುತಿಂಗಳ ಅವಧಿಯೊಳಗೆ | ನೂರಾರು ಕಾಯ್ದೆ ಅಮಲಿಗೆ ತಂದು |
ಇಪ್ಪತ್ತಂಶದ ಆರ್ಥಿಕ ತತ್ವದಿ ವಿಪತ್ತು ಓಡಿಸಿದರು|| ೨ ||
ಸಿರಿವಂತರಿಗೆ ಭೂ ಮಿತಿ ಮಾಡಿ | ನಗರದ ಆಸ್ತಿಯ ಲೆಕ್ಕವ ಇಟ್ಟು |
ಭೂಸುಧಾರಣೆ ಕಾಯ್ದೆ ಮಾಡಿ | ರೈತರಲಿ ಆಸ್ಥೆ ವಹಿಸಿದರು ||
ಸಹಕಾರಿ ಸಂಘ ಸಂಸ್ಥೆಯ ಬೆಳೆಸಿ | ಬಳಕೆಯ ಅವಶ್ಯಕತೆ ಪೂರೈಸಿ |
ಕಡಿಮೆ ದರದ ಅಂಗಡಿ ತೆರೆದು ಕಾಳನು ಹಂಚಿದರು|| ೩ ||
||ಜಾಲ||
ಭಾರತ ಪ್ರಧಾನ ಮಂತ್ರಿಯಾಗಿ | ಜನತೆಯ ತಾಯಿಯಾಗಿ |
ತಾಯ್ನೆಲದ ಗುಣವೆ ತಾನಾಗಿ | ಸರ್ವರಲಿ ಬೆರೆತು ಒಂದಾಗಿ|| ೧ ||
ದುರ್ಬಲರಿಗೆ ಶಕ್ತಿ ದೇವತೆಯಾಗಿ | ವಿಧಿಲಿಖಿತ ಬದಲಿಸಿ |
ತಾ ಬರೆದ ಭವಿಷ್ಯ ಬೆಳಕಾಗಿ | ದೇಶದ ಪರ್ವಶಕ್ತಿಯೆನಿಸಿ|| ೨ ||
ಜನತೆಯ ಸುಖದ ತಾಯಾಗಿ | ಸ್ವಾರ್ಥವನು ನೀಗಿ |
ಈ ಜಟಿಲ ಕಾರ್ಯದಲಿ ಜಯಪಡೆದು | ಹಗಲಿರುಳು ಶಾಂತಿ ನಮಗಾಗಿ|| ೩ ||
||ಏರ||
ಮಾನ್ಯ ಪ್ರಧಾನಿ ಜನಿಸಿ ಇಂದು ಐವತ್ತೆಂಟು ವರುಷವಾಯ್ತು |
ಅವರಿಗೆ ಆಯುರಾರೋಗ್ಯ ಬೇಡಿ ಹಾಡ್ಯಾರ ವಾಲಿ ಶರಣರು ||| ೩ನೆ ಚೌಕ ||
||ಖ್ಯಾಲಿ||
ಬಡಭಾರತ ಬಡತನವ ಓಡಿಸುವ ದೃಢತೆಯ ಹಿಡಿದಿಹರು |
ಭಾರತ ಒಡೆತನ ಪಡೆದಿಹರು |
ನುಡಿದಂತೆ ನಡದೇ ತೋರ್ಸಿದರು |
ಕಳ್ಳವ್ಯಾಪಾರದಿ ಗಳಿಸಿದ ರೊಕ್ಕ | ಒಳ್ಳೆಯ ಕಾರ್ಯಕ್ಕೆ ಬಾರದಕ್ಕ |
ಬೆಳ್ಳಿ ಬಂಗಾರ ಕೇಳ್ಯಾರ ಲೆಕ್ಕ | ಮುಚ್ಚಿಟ್ಟ ನಿಧಿಯ | ಒಯ್ದಾರ ಚೊಕ್ಕ|| ೧ ||
ಸಿರಿವಂತರದು ಬೆಳೆದಿದೆ ಹೊಟ್ಟಿ | ಬಡವರಿಗಿಲ್ಲ ಹೊಟ್ಟೆ ತುಂಬ ರೊಟ್ಟಿ |
ಆರ್ಸಿಸಿ ಮೇಲ್ಮನಿ ಕಟ್ಟಿಸ್ಯಾರ ಗಟ್ಟಿ | ಬಡವರು ನಿಂತಾರ ಗುಡಿಸಲು ಕಟ್ಟಿ|| ೨ ||
ಲಂಚತಿನ್ನುವ ನೌಕರರ ನೋಡಿ | ಹೊಂಚುಹಾಕಿ ಕಳಿಸ್ಯಾರ ಮನಿಕಡಿ |
ವಂಚಕ ವ್ಯಾಪಾರಿ ಗಳಿಸಿದ ಬಡ್ಡಿ | ದುಡ್ಡ ಒಯ್ದಾರ ಸಿಆಯ್ಡಿ|| ೩ ||
ಸರ್ವಜನರ ವಿಷಯಮತೆಯನು ನೋಡಿ | ಸರಿಯಾಗಿ ಯೋಚಿಸಿ
ಕಾಯ್ದೆ ಮಾಡಿ |
ಕಾಯ್ದೆಗೆ ಮೀರಿ ನಡೆದರೆ ಬೇಡಿ | ವಾಲಿ ಶರಣರು ತಿಳಿಸ್ಯಾರ ಹಾಡಿ|| ೪ ||
ರಚನೆ : ಶರಣಪ್ಪ ವಾಲಿ
ಕೃತಿ : ಶರಣ ಸಂಸ್ಕೃತಿ
Leave A Comment