ಹರಿಶ್ಚಂದ್ರ ಶಿಬಿಚಕ್ರವರ್ತಿ ಕರ್ಣ ಮಹಾದಾನಿಗಳಾಗಿ ಹೋದ್ರಾ ಅಮರಾ |
ಎಲ್ಲಾ ದಾನಿಗಳ ಮರಿಸಿದ ತ್ಯಾಗವೀರ ಅರಸ ಸಿರಸಂಗಿ ಲಿಂಗರಾಜರಾ || ಪಲ್ಲವಿ ||

ಸಿರಸಿಂಗಿ ರಾಜ್ಯ ಸ್ಥಾಪನೆ ಮಾಡಿದ ವಿಠ್ಠಪ್ಪಗೌಡನೆಂಬುವ ಹುಲಿ |
ಸಿರಸಂಗಿ ಹೆಸರ ಅಳಿಯದಾಂಗ ಮಾಡಿದ ಅರಸ ಲಿಂಗರಾಜ ಭೂಮಿಯಲಿ ||
ಪುಣ್ಯ ಕ್ಷೇತ್ರ ಸಿರಸಿಂಗಿ ತಾಣದಿ ಕಾಳಮ್ಮದೇವಿ ನೆಲಸಿದಳಲ್ಲಿ |
ರಾಜ್ಯಲಕ್ಷ್ಮಿ ಕಾಳಮ್ಮನ ವರದಿಂದ ಮೆರಿತದ ದಶದಿಕ್ಕಿನಲಿ ||
ಧೀರ ಶೂರ ಗಂಭೀರ ಗುಣದಿಂದ ರಾಜ್ಯವಾಳಿದಾರ ಪ್ರೀತಿಯಲಿ |
ಅರಸ ವಿಠ್ಠಪ್ಪಗೌಡ ಜಾಯಪ್ಪನವರೆಗೆ ರಾಜ್ಯ ಬೆಳಿತ ವಂಶವೃದ್ಧಿಯಲಿ|| ೧ ||

||ಚ್ಯಾಲ||ಅರಸ ಜಾಯಪ್ಪ ದೇಸಾಯರ | ಹಾಸಿಗೆ ಹಿಡಿದಾರ | ಜಡ್ಡ ಜೋರಾಗಿ |
ಶಿವ ಅಂದ ಹೋದ್ರ ಅಸು ನೀಗಿ |
ರಾಜ್ಯಕ ಬಿತ್ತ ಅಂಧಕಾರ | ದುಃಖ ಸಾಗರ | ಶೋಕದ ಬೇಗಿ |
ಸಿರಸಿಂಗಿಯ ಸೂರ್ಯ ಹೋದಾನೋ ಮುಳುಗಿ ||
||ಏರು||ಗಂಡನ ಅಗಲಿದ ಗಂಗೂತಾಯಿ ತಾ | ಕುಂತಾಳ ಆಗಿ ಬೇಖಬರಾ |
ಹರಿಶ್ಚಂದ್ರ ಶಿಬಿಚಕ್ರವರ್ತಿ ಕರ್ಣ ಮಹಾದಾನಿಗಳಾಗಿ ಹೋದ್ರ ಅಮರಾ |
ಎಲ್ಲಾ ದಾನಿಗಳ ಮರಸಿದ ತ್ಯಾಗವೀರ ಅರಸ ಸಿರಸಂಗಿ ಲಿಂಗರಾಜರಾ|| ೨ ||

ವಾಡಿಕೆಯಂತೆ ರಾಜ್ಯಕ ಒಡೆಯನ ಹುಡುಕುತಿದ್ಲ ಗಂಗಮ್ಮ ತಾನಾ |
ಸಡಗರದೊಡೆಯನ ಶೋಧಿಸಿ ಬೇಸತ್ತಾ ಸಾರಿದಾಳ ಡಂಗೂರವನಾ ||
ಕನ್ನಡ ರಾಜ್ಯದ ಚನ್ನಾದ ಮಕ್ಕಳ ತನ್ನಿರೆಂದ ಹೇಳ್ಯಾಳ ಪುನಃ |
ತಮ್ಮ ಮಕ್ಕಳ ಮಹಾರಾಜರಾಗಲೆಂದ ಕೂಡಿದಾರ ರಾಜ್ಯದ ಜನಾ ||
ಸಮಸ್ತ ಶಿಶುಗಳ ಪರೀಕ್ಷಿಸಿದಾಗ ಮನಸೆಳೆದ ಗುಣ ಸಂಪನ್ನಾ |
ಸಿಂಹದ-ಮರಿ ಇದು ಸಿಂಹಾಸನಕಧಿಕಾರಿ ಯೋಗ್ಯ ಅಂತ ಹೇಳಿದ ಪ್ರಜಾ ಜನಾ ||
ವನಶಿಗ್ಲಿ ರೈತ ಘೂಳಪ್ಪನ ಮಗ ಅವನ ಹೆಸರ ಇತ್ತ ರಾಮಣ್ಣಾ |
ಹೆಸರ ಬದಲ ಮಾಡಿ ಲಿಂಗರಾಜರಂತಾ ಪುನಃ ಮಾಡಿದಾರ ನಾಮಕರಣಾ

||ಚ್ಯಾಲ||

ಹದಿನೆಂಟ ನೂರಾ ಎಪ್ಪತ್ತೆರಡನೇ ಸಾಲ | ಜೂನ ತಿಂಗಳ |
ಶುಭಧಿನದಂದಾ | ದತ್ತಕ ಮಾಡಿದಾರ ಆನಂದಾ |
ಅಪ್ಪಾಸಾಹೇಬ ಅಂತ ತಾಯಿ ಪ್ರೀತಿಲಿ | ತುಂಬ ಬಾಯಲಿ |
ಕರೆಯೂಳ ಬಹು ಚಂದಾ | ಎಲ್ಲಾರ ಪ್ರೀತಿಯ ಕಂದಾ ||

||ಏರು||

ಕನ್ನಡ ನಾಡಿನ ಕಡುಗಲಿ ಲಿಂಗರಾಜ ಬೆಳೆದು ಬಂದ ಭೂಪ ಗಂಭೀರಾ |
ಹರಿಶ್ಚಂದ್ರ ಶಿಖಿಚಕ್ರವರ್ತಿ ಕರ್ಣ ಮಹಾದಾನಿಗಳಾಗಿ ಹೋದ್ರ ಅಮರಾ |
ಎಲ್ಲಾ ದಾನಿಗಳ ಮರಿಸಿದ ತ್ಯಾಗವೀರ ಅರಸ ಸಿರಸಂಗಿ ಲಿಂಗರಾಜರು|| ೩ ||

ಸರಳಸ್ವಭಾವದ ತರುಳ ಲಿಂಗರಾಜ ಕೊಲ್ಹಾಪೂರದಲ್ಲಿ ಪಡೆದ ಶಿಕ್ಷಣಾ |
ಮನೆತನದಲ್ಲಿ ಒಳಜಗಳ ಹತ್ತಿ ಅಂದೇ ಶಿಕ್ಷಣಕ ಹೊಡೆದಾರ ಶರಣಾ ||
ಜಾಯಪ್ಪದೇಸಾಯ್ರ ಕಿರಿಯ ಹೆಂಡತಿ ಉಮಾದೇವಿ ನಡಿಸ್ಯಾಳ ಕದನಾ |
ಸಾಧ್ವಿಶಿರೋಮಣಿ ಗಂಗಾದೇವಿಯವರು ನೋಡಲಾರದೆ ಮುಚ್ಯಾಳ ಕಣ್ಣಾ ||
ತಾಯಿ ತೀರಿದ ಮ್ಯಾಲ ಚಿಕ್ಕಮ್ಮ ಉಮಾದೇವಿ ವಹಿಸಿಕೊಂಡ್ಲ ಅಧಿಕಾರವನ್ನಾ |
ಲಿಂಗರಾಜರನ್ನ ಕಿತ್ತಒಗೆದ ಸುಳ್ಳ ಮಾಡಬೇಕಂದ್ಲ ದತ್ತಕವನ್ನಾ ||
ಚಂಡಿಯಾಗ ಶನಿಯಾಗಿ ಬೆನ್ನಹತ್ತಿ ಕಾಡಿದಾಳ ಲಿಂಗರಾಜರನ್ನಾ |
ಮುಂಬೈ ಹಾಯಕೋರ್ಟಿಗೆ ನ್ಯಾಯ ಹೂಡಿದಾಳ ಸುಳ್ಳಮಾಡಬೇಕಂದ್ರ   ಸಿಂಹಾಸನಾ ||

||ಚಾಲ||

ಲಿಂಗರಾಜರಂತೆ ತೀರ್ಪಾತ | ಅಧಿಕಾರ ಕೈಗೆ ಬಂತ |
ಹರುಷದಿ ಮನಾ ತುಂಬಿ ತುಳಿಕಿಶ್ಯಾರ ನಾಡ ಜನಾ |
ಪ್ರಜರಿಷ್ಟ ಕೈಗೂಡಿತ | ದೇವರ ಚಿತ್ತ | ಆತ ಪ್ರಬಲಾ |
ಲಿಂಗರಾಜರ ಹೆಸರ ನಾಡಮ್ಯಾಲಾ ||

||ಏರು||

ಧರ್ಮದ ಮೂರುತಿ ಬಡವರ ತಾಯಿ ತಂದಿ ಅನಿಸಿಕೊಂಡ್ರ ದೊರಿ ಲಿಂಗರಾಜರಾ |
ಹರಿಶ್ಚಂದ್ರ ಶಿಬಿಚಕ್ರವರ್ತಿ ಕರ್ಣ ಮಹಾದಾನಿಗಳಾಗಿ ಹೋದ ಅಮರಾ |
ಎಲ್ಲಾ ದಾನಿಗಳ ಮರಿಸಿದ ತ್ಯಾಗವೀರ ಅರಸ ಸಿರಸಂಗಿ ಲಿಂಗರಾಜರಾ|| ೪ ||

ಪರಶುರಾಮನ ಪ್ರತಿ ಅವತಾರ ಲಿಂಗರಾಜ ಪವಿತ್ರ ಮನದಿ ರಾಜ್ಯವಾಳಿದಾ |
ಬೇಡಿದವರಿಗಿ ಇಲ್ಲ ಎಂದೂ ಅನ್ನಲಿಲ್ಲ ತುಂಬು ಮನಸಿನಿಂದ ಕೊಡುತಿದ್ದಾ ||
ಗೋದಾನ ಭೂದಾನ ಬಡವರ ಕಲ್ಯಾಣ ಅನ್ನಛತ್ರ ಊರೂರಿಗೊಂದಾ |
ಕಾಶಿ-ರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ಧರ್ಮಛತ್ರಗಳ ಕಟ್ಟಿಸಿದಾ ||
ಇದ್ದ ಎರಡು ಮಕ್ಕಳು ಸತ್ತ ಹೋದರೂ ಚಿಂತಿಸಲಿಲ್ಲ ಎಳ್ಳಷ್ಟು ಸುದ್ದಾ |
ನಾಡಿನ ಮಕ್ಕಳೇ ತನ್ನ ಮಕ್ಕಳಂತ ಲಿಂಗರಾಜ ಮನಸಿಗೆ ತಿಳಿದಿದ್ದಾ ||
ದಾನಪತ್ರವನ್ನು ಮುಂಚಿತವಾಗಿ ಬರೆದ ಕೋರ್ಟಿನಲ್ಲಿ ಅದನಿಟ್ಟಿದ್ದಾ |
ಹತ್ತೊಂಬತ್ತನೂರು ಆರನೆ ಆಗಸ್ಟ್‌ದಲ್ಲಿ ಆನಂದದಿಂದ ಕಣ್ಣ ಮುಚ್ಚಿದ್ದಾ ||

||ಚ್ಯಾಲ||

ಶಿಕ್ಷಣ ಸಂಸ್ಥೆಗೆ ಮೀಸಲಾಗಿ | ಸಂಸ್ಥಾನ ಖುದ್ದಾಗಿ |
ಕೊಟ್ಟ ಹೋದ್ರ ನಿತ್ಯ ತಂದೆಯಾಗಿ | ನಾಡು ಮರೆಯಲಾರದೆಂದಿಗಿ |
ಕೆ.ಎಲ್.ಇ. ಸಂಸ್ಥಾ ಸ್ಥಾಪನೆಯಾಗಿ | ನಾಡ ತುಂಬ ಬೆಳಗಿ |
ಲಿಂಗರಾಜರಿಂದಾಗಿ ಕಾಲೇಜ ಆದವು ಊರ ಊರಿಗಿ ||

||ಏರು||

ಖ್ಯಾತ ಬನಹಟ್ಟಿ ಕವಿ ಗಂಗಾತನಯ ಅಪ್ಪಣ್ಣ ಹೇಳಿದ ಈ ಸಾರಾ |
ಹರಿಶ್ಚಂದ್ರ ಶಿಬಿ ಚಕ್ರವರ್ತಿ ಕರ್ಣ ಮಹಾದಾನಿಗಳಾಗಿ ಹೋದ್ರ ಅಮರಾ |
ಎಲ್ಲಾ ದಾನಿಗಳ ಮರಿಸಿದ ತ್ಯಾಗವೀರ ಅರಸ ಸಿರಸಿಂಗಿ ಲಿಂಗರಾಜರಾ ||

ರಚನೆ : ಅಪ್ಪಣ್ಣ ಜಂಬಗಿ, ಬನಹಟ್ಟಿ
ಕೃತಿ :
ಲಿಂಗರಾಜು ವಿಜಯ ಕಾವ್ಯ ಹಾಗೂ ಕೆಲವು ಲಾವಣಿಗಳು