ಜಗಜ್ಯೋತಿ ಬಸವಣ್ಣನ ನೆನೆಯಿರೋ ಹಗಲಿರುಳು ಯನ್ನದೆ || ಪ ||

ಬಾಗೇವಾಡಿಯ ಭಾಗ್ಯದ ಬಸವಣ್ಣ |
ಸಂಗಮ ನಾಥನ ನಂಬಿದ ಬಸವಣ್ಣ |
ಜಂಗಮಸೇವೆಯ ಕೈಕೊಂಡ ಬಸವಣ್ಣ |
ಮಂಗಲ ಮೂರ್ತಿ ಶೃಂಗಾರ ಬಸವಣ್ಣ || ೧ ||

ಹನ್ನೆರಡನೆ ಶತಮಾನದ ಬಸವಣ್ಣ |
ಧನ್ಯಧನ್ಯ ಕ್ರಾಂತಿ ಪುರುಷನು ಬಸವಣ್ಣ |
ಕನ್ನಡ ನುಡಿಯಲಿ ಬರಿಸಿದ ವಚನ |
ಅನುಭವನ ಮಂಟಪ ಮಾಡಿದ ರಚನ || ೨ ||

ಜನತಾವಾದ ಉದ್ಯೋಗ ವಿಕೇಂದ್ರಿಕರಣ |
ಜನತೆಗೆ ಕೊಟ್ಟೆನೋ ನೈತಿಕ ಶಿಕ್ಷಣ |
ಘನವಾದ ಕಾಯಕ ಕೈಲಾಸವೆನುತ |
ಮಾನವನಿಗೆ ಮಾರ್ಗದರ್ಶಕ ಬಸವಣ್ಣ || ೩ ||

ಸದ್ಭಾವನೆಯಿಂದ ಇದ್ದಾಂವ ಬಸವಣ್ಣ |
ಸದ್ಭೋದನೆಯಿಂದ ತಿದ್ದಾಂವ ಬಸವಣ್ಣ |
ಅದ್ಭುತ ಕಾರ್ಯದ ಧುರೀಣ ಬಸವಣ್ಣ |
ಬಿದ್ದ ಕೈಲಾಸ ಲಿಪಿ ಓದಿದ ಬಸವಣ್ಣ || ೪ ||

ಭಕ್ತಿ ಭಂಡಾರಿ ನಿತ್ಯ ಶಿವ ಶರಣ |
ಯುಕ್ತಿಲೆ ತೋರಿಸಿದ ಮುಕ್ತಿ ಸೋಪಾನ |
ಸತ್ಪಾತ್ರಕ್ಕೆ ನೀಡಿದನೋ ದಾನ |
ಮೃತ್ಯಂಜಯನಿಗೆ ಆದ ವಾಹನ || ೫ ||

ಶರಣ ಮಾರ್ಗದ ರಹಸ್ಯ ಅರಿತವ |
ಪರಿಪೂರ್ಣ ದಲಿತೋದ್ಧಾರಕ ಬಸವಣ್ಣ |
ಮರೆಯಲಾರದ ರಾಜಕಾರಣ |
ಧರಣಿಯೊಳಗೆ ಮಾಡಿದ ಪರಿಪೂರ್ಣ || ೬ ||

ಮೂಲ ಷಟಸ್ಥಲ ಕಾರ್ಯಾಚರಣ
ಲೀಲಾ ತೋರಿಸಿದ ನೀಲಾಂಬೆ ರಮಣ |
ಕಲಿಯುಗದಲಿ ಶಿವನೇ ಬಸವಣ್ಣ |
ಹುಲಕುಂದ ಭೀಮಕವಿ ಮಾಡಿದ ಭಜನ || ೭ ||


ರಚನೆ :
ಹುಲಕುಂದ ಭೀಮಕವಿ
ಕೃತಿ :
ಸರ್ವೋದಯ ಗ್ರಾಮೀಣ ಜನಪದ ಗೀತೆಗಳು