ಗಿಡ ಬಳ್ಳಿಗಿಂತ ಕೀಳೇನ ನಮ್ಮ ಬಾಳು? |
ಮಾವು-ಬೇವಿನಕಿಂತ ಕಡಿಯೇನ ಬಾಳು? |
ಕೇಳಿಕೊಳ್ಳತಾರs ಲಿಂಗರಾಜರು ತಮಗsತಾವು |
ಗಿಡಬಳ್ಳಿಗಿಂತ ಕೀಳೇನ ನಮ್ಮ ಬಾಳು? ||

ತಿಳಿಗೇಡಿ ಹುಡುಗ ಎಸೆದಾಗ ಕಲ್ಲೊಂದು |
ತಡಮಾಡದೆ ಕೊಟ್ಟಿತು ಎರಡ ಹಣ್ಣು ಗಿಡವೊಂದು |
ಬೀಸಿದ ಕಲ್ಲು ತಾಗಿದರೆ ಉರುಳಿ ತಾ ಬಂದು |
ಬಡಿದರೆ ಸಿಟ್ಟೇಕೆ ಇಷ್ಟು ನನ್ನ ಮನಕಿಂದು? ||

ಕೇಳಿಕೊಳ್ಳತಾರ ಲಿಂಗರಾಜರು ತಮಗsತಾವು |
ಗಿಡ-ಬಳ್ಳಿಗಿಂತ ಕೀಳೇನ ನಮ್ಮ ಬಾಳು ||

ತಾಕಿತು ಕಲ್ಲು ದೇಸಾಯರ‍್ಗೆಯೆಂದು |
ತೋಟದ ಆಳು ಬಂದು ಮನನೊಂದು |
ತುಂಟ ಮಗನೆಂದು ಬಡಿತಾನ ಹಿಡತಂದು |
ಉಪ್ಪುಂಡ ಮನಿಗೆ ಬಗಿದಲ್ಲೊ ಎರಡೆಂದು ||

ಆಳು-ಮಗನ ಪರದಾಟ ಕಂಡು |
ದೇಸಾಯರು ಹೇಳತಾರ ಖಂಡತುಂಡು |
ಇನ್ಮೇಲೆ ಬಡಿದರೆ ಮಗನ್ನ ಕೇಳೇನಿಕಂಡು |
ನಾಳೆ ಬಾ ವಾಡೇಕ ಹುಡುಗನ್ನ ಕರಕೊಂಡು ||

ವಾಡೇದ ಸಭಾದಾಗ ಕೇಳತಾರ ಲಿಂಗರಾಜರು |
ಗಿಡ ಬಳ್ಳಿಗಿಂತ ಕೀಳೇನ ನಮ್ಮ ಬಾಳು? |
ಮಾವು ಬೇವಿನಕಿಂತ ಕಡಿಯೇನ ಬಾಳು ? |
ಕೂಡಿದ ಮಂದಿಗೆ ಕೇಳತಾರ ಲಿಂಗರಾಜರು |
ಹಸುಗೂಸು ಹಸಗೊಂಡು ಹಂಬಲಿಸಿ ಅತ್ತಾಗ |
ಹಾತೊರೆದು ತಾಯಿ ಮೊಲೆಹಾಲನಿತ್ತಂಗ |
ಅರೆಮರುಳ ಎಸೆದ ಕಲ್ಲೊಂದಕ್ಕಾಗ |
ಮಾಮರವು ಕೊಟ್ಟಿತು ಎರಡ ಹಣ್ಣಾಗ ||

ತಾಕಿದರೆ ಉರುಳಿ ಆ ಕಲ್ಲು ನನಗಂದು |
ನಾನೇನು ಕೊಡಬೇಕು ಈ ಹುಡುಗನಿಗಿಂದು |
ಕೂಡಿದ ಮಂದ್ಯಾಗ ಕೇಳತಾರ ಲಿಂಗರಾಜರು |
ಗಿಡ ಬಳ್ಳಿಗಿಂತ ಕೀಳೇನ ನಮ್ಮಬಾಳು? ||

ಊರ ಮುಂದಿನ ವಾಡೇದ ತೋಟ |
ಮಾವು-ನಿಂಬೆ-ಕಂಚಿ ಬಾಳೆಯತೋಟ |
ಎರಡು ಎಕರೆಗೆ ಮಿಕ್ಕಿದರೂ ಅಷ್ಟ ||
ಉಂಬಳಿ ಕೊಡಬೇಕ ಹುಡುಗಗ ಹಕ್ಕ ಬಿಟ್ಟ ||

ಆಗಬಾರದು ಬಾಳು-ಗಿಡಬಳ್ಳಿಗಿಂತ ಕೀಳು |
ಮಾವು-ಬೇವಿನಕಿಂತ-ಕಡಿಯೇನ ನಮ್ಮಬಾಳು ||

ರಚನೆ :
………….   ?
ಕೃತಿ :
ಲಿಂಗರಾಜು ವಿಜಯ ಕಾವ್ಯ ಹಾಗೂ ಕೆಲವು ಲಾವಣಿಗಳು