ಸಿರಸಿಂಗಿ ದೇಸಾಯ್ರ ವರತನ ಬಿಟ್ಟು ಹೋದ್ರು ತಮ್ಮ ಸಂಸ್ಥಾನ
ಚಂದ್ರಮನಂತ ಚಲುವರ ಮೌಲ್ಯ ಶಿವಾ ಮುನಿದ ಬೆಸ್ತ್ಯಾರ ದಿನ ||

ಏನು ಹೇಳಲಿ ದುಃಖ ಬರತೈತಿ ದೊರೆಗಳ ಮನದ ಅಕ್ಕರತಿ
ಲೋಡಲೆಜಿಮಾ ತಾಲೀಮ ಕಾನ್ಯಾಗ ಶಿವಪೂಜೆ ಬಹಳ ಪ್ರೀತಿ
ಚಲುವಿಕೆ ಚಿತ್ರಾಯ ಬರದೈತಿ ಕೈಕಾಲು ಬಾಳಿ ದಿಂಡಗತಿ
ಕಾಮನಂಗವರು ಇಬೂತಿ ಹಚ್ಚತಾರ ಸದರಿಗೆ ಒಪ್ಪು ಸೊರ‍್ಪತಿ
ಸಿಪಾಯಿ ಸಿಲೆದಾರಿ ಬಹುಬರತಿ ಚಬಕ ಸ್ವಾರ ಕುದುರಿಯ ಹತ್ತಿ
ಕುದರಿಯ ಮುಂದ ಹೊಗಳುವ ಮಾದಿಗರಂತಾರ ದೊರಿಗಳ ಕೀರ್ತಿ
ಸುತ್ತಲು ರಾಜ್ಯದ ದೇಶ್ಗತಿ ಎಲ್ಲಾರಿಗಿಂತ ಅವರು ಚಡತಿ
ಯಾರೊಬ್ಬರಂತಾರ ಏನ ದೊರಿಯವರ ಪೂರ್ವದ ಪುಣ್ಯ ಹೆಚ್ಚೈತಿ
ಹಿಂಗಂತ ಹೋದರು ಬೇಲೂರಿಗೆ ತಟ್ಟಿತು ವಿಗ್ನವನ
ಉರಿ ಬಡಿದು ಬಿಗದಾವು ಬೆನ್ನ ಬಾಯಿ ಇಸಾ ಕಯಿಯಾಯಿತಿನ್ನ
ಸದಾ ಶಿವಪ್ಪ ಕೇಳೊ ಇನ್ನ ನನ್ನ ಜೀವಕಿಲ್ಲೊ ಸಮಾದಾನ
ತಿರುಗಿ ಬಂದ್ರು ಅವರು ಮರುದಿನಾ ದೊರಿಗುಳಿಗೆ ಇಲ್ಲೊ ಸಮಾದಾನ ||
ಸಿರಸಿಂಗಿ ದೇಸಾಯ್ರ ವರತನ ಬಿಟ್ಟು ಹೋದ್ರು ತಮ್ಮ ಸಂಸ್ಥಾನ
ಚಂದ್ರಮನಂತ ಚಲುವರ ಮ್ಯಾಲ ಶಿವಾ ಮುನಿದ ಬೆಸ್ತ್ಯಾರ ದಿನ || ೧ ||

ಒಂದು ದಿನ ಸಿರಸಿಂಗಿ ಊರಾಗ ಅಪ್ಪಾ ಸಾಹೇಬ್ರು ಕುಳಿತಿದ್ರು ಸದರಿನ್ಯಾಗ
ಮೋಸಮಾಡಿ ವಿಷಾ ಹಾಕಿದಾರ ದೂದ ಪೇಡೆ ಸಕ್ಕರಿಯಾಗ
ಪಳಾರ ಮಾಡ್ಯಾರ ರಾತ್ರಿಯಾಗ ದೊರಿ ಮಲಗಿದ್ರ ಮಂಚದ ಮ್ಯಾಗ.
ಕನಸು ಬಿದ್ದಿತವರ ಮನಸಿಗೆ ಟಾವಿಕೆ ದೊರಿ ತಿಳಿದ ತನ್ನ ಮನಸಿಗೆ
ಸಿಪಾಯ ಬಾಗೋಜಪ್ಪ ಹಿಂಗ ತಿಳಿದು ಕಸಾರ‍್ಕಿ ಬಂದೈತ್ರಿ ದೊರಿ ನಿಮಗ
ಹ್ಯಾವ ತೋರಿಸ್ಯಾರ ಗಂಟಲದಾಗ ಉಗಳಿಸಿದ ಹೆಸಿಕೆ ಮ್ಯಾಲ
ಹಿಂಗಂತ ಹೋದರೊ ಹೂಲಿಕಟ್ಟಿಗೆ ಸಿದ್ಧೇಶ್ವರ ಇರುವ ದೇವರಿಗೆ
ಬೇಡಿಕೊಂಡ್ರೊ ಮನೆಯ ದೇವರಿಗೆ ಸಾಹಿತ್ಯ ಕೊಟ್ರೊ ಬ್ರಾಹ್ಮಣರಿಗೆ
ಅಲ್ಲಿ ಚಡವಾತೊ ದೊರಿಗಳಿಗೆ ಎಂಟಾನೆಂಟು ದಿನ ಮಲಗಿ
ಜಗ ಬದಲು ಮಾಡಬೇಕು ದೊರಿಗೆ ಅಂತಾವೊದಾರೋ ಬೆಳಗಾಂವಿಗೆ
ದೊರಿ ಹೇಳತಾರೊ ತಮ್ಮ ಮಂದಿಗೆ ಒಯ್ಯಬ್ಯಾಡ್ರೊ ನನ್ನ ಬೆಲೂರಿಗೆ
ಸಿಪಾಯ ಬಾಗೋಜಪ್ಪ ಹಿಂಗ ತಿಳಿದ ಲಗು ಮಾಡಿ ಗಾಡಿ ತರಿಸಿದ
ಗಾಡಿಯ ಒಳಗ ಮಲಗಿದ್ದ ದೊರಿ ನವಲಗುಂದ ಊರಿಗೆ ತಾ ಬಂದ ||
ಸಿರಸಿಂಗಿ ದೇಸಾಯ್ರ ವರತನ ಬಿಟ್ಟು ಹೋದ್ರು ತಮ್ಮ ಸಂಸ್ಥಾನ
ಚಂದ್ರಮನಂತ ಚಲುವರ ಮ್ಯಾಲ ಶಿವಾ ಮುನಿದ ಬೆಸ್ತ್ಯಾರ ದಿನ ||೨ ||

ಬಾಯಿ ಸಾಹೇಬ್ರು ಹೇಳತಾರೊ ಬಾಗೋಜಪ್ಪಗ ಕೇಳರಿ ನೀವು ನನ ಮಾತ
ಎಲ್ಲಿ ಇದ್ದಲ್ಲಿ ವೈದ್ಯಗಾರನ ಈ ವ್ಯಾಳಕ ತರಿಸರಿ ತುರತ
ಬಾಗೋಜಪ್ಪ ತಾ ಬುದ್ಧಿವಂತ ವೈದ್ಯಗಾರನ ತರಿಸ್ಯಾನ ತುರಿತ
ವೈದ್ಯಗಾರನು ತಿಂದು ಹೋದನು ರೂಪಾಯಿ ಮುನ್ನೂರ ಅರವತ್ತ
ಔಷದ ಮಾಡಿಸುತ್ತ ಅಲ್ಲಿ ವರುಷವಾಯ್ತು ದೊರಿ ಬೇಸತ್ತ
ಎಂತ ಬೇನೆ ಇದು ಯಾರಿಗೆ ಟಾವಿಕೆ ತಿಳಿಯವಲ್ಲದು ಇದರಿಂದ
ಬುದವಾರ ದಿನ ಹರ‍್ಯಾಗ ಕರೆಸಿಕೊಂಡಾರೊ ತಮ್ಮ ಗುರುಗಳನ
ಎರಡು ಆಕಳ ಅಚ್ಚೇರ ಬಂಗಾರ ದಾನ ಕೊಟ್ಟರು ಐಗುಳಿಗೆ
ಕುಲಾಯಿ ಕುಂಚಿಗೆ ಹುಡುಗರಿಗೆ ರೊಕ್ಕ ರೂಪಾಯಿ ಕೊಟ್ರು ಬಡವರಿಗೆ
ಮುತ್ತಿನಂತಹ ಒಂದು ಹತ್ತು ಕೂಸಿಗೆ ಕೊಟ್ರು ಪುನ್ನೆದ ಐಗುರು ಸ್ವಾಮಿಗೆ
ಉಪ್ಪನ್ನ ಕೊಟ್ರೊ ಮಠದವರಿಗೆ ಒಂದೊಂದು ಬಳಿವಿಲೆ ಎಲ್ಲರಿಗೆ
ಬುಧವಾರ ಮೂರು ತಾಸು ರಾತ್ರಿಯ ಮ್ಯಾಲ ಕರಿಸಿಕೊಂಡಾರೊ ತಮ್ಮ ಮಡದಿಯನ್ನ
ದೊರಿ ಅಂತಾರ ತಾ ಸಮರಂತ ಏನ ಮುನಿದಿ ನೀ ಭಗವಂತ
ಜೀವದ ರಾಣಿ ಕಿಲಿಕೈಯಾ ಹಿಡಿ ನೀ ಕೊಡಬ್ಯಾಡ ಯಾರಿಗೆ
ತಾ ಮಲಗು ಅರಮನೆ ಕೋಲಿ ದೊರಿ ನೋಡತಾರ ಸುತ್ತೆಲ್ಲಾ
ಮೇಲ ಉಸಲಗಟ್ಟಿತೊ ತೀರಾ ದೊರಿ ಮಾಡತಾರ ಎತ್ತಾರಾ
ಬಾಯಿ ಸಾಹೇಬರು ಕುಂತಾರೊ ಹಂತಿಲೆ ನೀರು ಚಲ್ಲತಾರೊ ಕಣ್ಣೀಲೆ
ಕುದರಿ ಬಿಟ್ರು ಅವರು ಸಿರಸಿಂಗಿಗೆ ಕಾರ್ಕೂನ ಕಳಿವ್ಯಾರೊ ತುರ್ತಿಲೆ
ಗೌಡ ಶಾನಬವರು ರೈತರು ಹಳಬರು ವತ್ರ ಮಾಡಿ ಹೋದರು ಅದೇ ದಿನಾ
ನಿತ್ರಾಣಕ ಬಿದ್ದಿದ್ರು ಅಪ್ಪಾಸಾಹೇಬ್ರು ಎದ್ದು ಹೇಳುವಂತ ತ್ರಾಣವಾಗಲಿಲ್ಲ
ಗಾತ ಮಾಡಿ ಹೋದ್ರು ಅಪ್ಪಾಸಾಹೇಬ್ರು
ಬೇಸ್ತ್ಯಾರ ಮೂರು ತಾಸು ಹೊತ್ತೇರಿತು ಜೀವ ಬಿಟ್ಟು ಅವರಿನ್ನ ||
ಸಿರಸಿಂಗಿ ದೇಸಾಯ್ರ ವರತನ ಬಿಟ್ಟು ಹೋದ್ರು ತಮ್ಮ ಸಂಸ್ಥಾನ
ಚಂದ್ರಮನಂತ ಚಲುವರ ಮ್ಯಾಲ ಶಿವ ಮುನಿದ ಬೆಸ್ತ್ಯಾರ ದಿನ || ೩ ||

ಬೆಸ್ತ್ಯಾರ ದಿನ ಹರಿಯಾಗ ಸುದ್ದಿ ಹರಡಿತ್ತು ಸುತ್ತ ನಾಡಿಗೆಲ್ಲ
ಸುದ್ದಿ ಕೇಳಿದವರು ಎದೆಬಾಯಿ ಬಡಕೊಂಡು ಬಿದ್ದಾರೊ ತಂದಿಲ್ಲ ದರಣಿಯ ಮ್ಯಾಲ
ಅಗಾದ ಹತ್ತು ಹಳ್ಳ್ಯಾಗ ಗೋಳಿಕ್ಕ್ಯಾರ ಅವರ ಮನಿಯಾಗ
ಬೆಳ್ಳೇರಿ ಶಿಗ್ಲ ಉಕ್ಕಲಿ ಅಕ್ಕ ತಂಗಿಯಾರ ಬಂದಾರ ಆಗ
ಅಕ್ಕ ತಂಗಿಯರಿಗೆ ದುಃಖ ದುಂದ ಏನು ಹೇಳಲಿ ನಿಮ್ಮ ಮುಂದ
ಚಪ್ಪನ್ನ ದೇಶಕ್ಕ ಒಪ್ಪುವ ದವಲತ ಕೊಟ್ಟ ಹೋಗ್ಯಾರ ಯಾರ ಕೈಯಾಗ
ಇಂಗ್ರೇಜಿ ಸಾಹೇಬರು ಆವಾಗ ಸುದ್ದಿ ಕೇಳ್ಯಾರೊ ಬೆಳಗಾಂವಿಯಾಗ
ಬತ್ತಲಗುದರಿ ಒತ್ತರ ಮಾಡಿ ಹತ್ತಿ ಬಂದ್ರೊ ಮರುಗಳಿಗ್ಯಾಗ
ಸರುವ ಸಿಂಗಾರ ಕುದುರಿಗೆ ಮಾಡಿ ಚಾಬಕ ಸೋರ ಬೋರ‍್ಯಾಡಿ
ಕುದುರಿ ಹಿಡದಾರ ಮುಂದ ಮುಂದ ಜೋಡ ಕುದರಿ ಅಳತಾವ ಮುಖಬಾಡಿ
ಕುದರಿ ಕಣ್ಣಿನ ನೀರು ನೋಡಿ ಜನ ಅಳತೈತಿ ಹೊರಳಾಡಿ
ಊರ ಹೊರಗ ಹೊಂಟಿತೋ ವಿಮಾನ ಸುತ್ತಗಟ್ಟಿ ಅಳತೈತಿ ಜನ ||
ಸಿರಸಿಂಗಿ ದೇಸಾಯ್ರ ವರತನ ಬಿಟ್ಟು ಹೋದ್ರು ತಮ್ಮ ಸಂಸ್ಥಾನ
ಚಂದ್ರಮನಂತ ಚಲುವರ ಮ್ಯಾಲ ಶಿವಾ ಮುನಿದ ಬೆಸ್ತ್ಯಾರ ದಿನ || ೪ ||

ನಗಾರಿ ನೌಬತ್ತ ಹೊಡೆಸುತ್ತ ಡೆಂಕಿ ನಿಶಾನಿ ಹಿಡಿಸುತ್ತ
ಬಿರದಿನ ಕಾಳಿ ಅವರ ಮುಂದ ಮುಂದ ಸಂಬಳದವರು ನಡವುತ್ತ
ದೊರಿಗುಳ ಇಳಿವ್ಯಾರ ತಡಿಯಾಗ ಬಾಯಿ ಸಾಹೇಬ್ರು ಹೊಕ್ಕಾರು ಒಳಿಯಾಕ
ತೆಕ್ಕಿಹಾದ ಮಹಾದುಃಖ ಮಾಡತಾರ ಮುನಿಗೆದ್ದರು ಚಿಂತಿ ಮನದಾಗ
ಬಂದು ಬಳಗ ಎಲ್ಲರೂ ಕೂಡಿ ಬಾಯಿ ಸಾಹೇಬರ‍್ನ ಸಮಾದಾನ ಮಾಡಿ
ಬಹುಮಂದಿ ಎಲ್ಲರೂ ಕೂಡಿ ದೊರಿಗುಳನ ಮಣ್ಣಮರೆ ಮಾಡಿ
ರೊಕ್ಕ ರೂಪಾಯಿ ದಾನ ಮಾಡಿ ತಿರಿಗಿ ಬಂದರವರು ಅರಮನಿಗೆ
ಅಲ್ಲಿ ಗೈಬು ಸಾಹೇಬು ಜೋಡು ಹುಸೇನು ಸಾಹೇಬು ಕವಿ ಮಾಡಿ
ಮೇಲೆ ಆಗಿದ್ದಿಲ್ಲಾ ಅವ ದಿನ ಏನು ಮುನಿದು ಸ್ವಾಮಿ ಬಗವಾನ ||
ಸಿರಸಂಗಿ ದೇಸಾಯ್ರ ವರತನ ಬಿಟ್ಟು ಹೋದ್ರು ತಮ್ಮ ಸಂಸ್ಥಾನ
ಚಂದ್ರಮನಂತ ಚಲುವರ ಮ್ಯಾಲ ಶಿವ ಮುನಿದ ಬೆಸ್ತ್ಯಾರ ದಿನ || *|| ೫ ||

ರಚನೆ : ಗೈಬುಸಾಬ ಮತ್ತು ಹುಸೇನ ಸಾಬ
ಕೃತಿ :
ಲಿಂಗರಾಜು ವಿಜಯ ಕಾವ್ಯ ಹಾಗೂ ಕೆಲವು ಲಾವಣಿಗಳು