ಪೃಥ್ವಿಯೊಳಗೆ ಜನಿಸಿದವಗೆ ಮೃತ್ಯು ಬೆನ್ನು ಹತ್ತಿಹುದು |
ವ್ಯರ್ಥವಿದು ಜನ್ಮ ಹುಟ್ಟಿ ಸಾರ್ಥಕವೇನು |
ಅನರ್ಥವಾಗುವದೊಂದು ದಿನ ತಪ್ಪಿಹದೇನು |
ಪಾರಮಾಥಕ್ಕಾಗಿ ಹತ್ತು ಪುರನಿತ್ತ ಪುಣ್ಯೇನು |
ಹತ್ತೊಂಬತ್ತು ನೂರಾ ಆರು ಆಗಷ್ಟ ಇಪ್ಪತ್ತಮೂರು |
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನಾದ ಲಿಂಗಭೂಪ ಸಿರಸಂಗೀಶನು|| ಪಲ್ಲವಿ ||

ಹತ್ತೂರಪೇಕ್ಷಿತ ಜೀವ ಮೃತ್ಯು ಜನಕೆ ಸಿಗುವದಲ್ಲಾ |
ಮೃತ್ಯುಹರನ ಭಕ್ತರುದ್ದಾರಕ್ಕೆ ಜನಿಸಿದನು |
ಅಜನು ಚಿತ್ತದಿಂದ ರೂಪವನ್ನು ತಿದ್ದಿ ಮಾಡಿದನು |
ಮಿರ್ಜಿ ಸಂಸ್ಥಾನ ಶಿಗ್ಲಿ ಗ್ರಾಮದಲ್ಲಿ ಜನಿಸಿದನು |
ದತ್ತದಿಂದಾ ದತ್ತಕ್ಕಾಗಿ, ಹತ್ತು ಹಳ್ಳಿಗೊಡೆಯನಾಗೈವತ್ತು |
ಸಾವಿರುತ್ಪನ್ನಕ್ಕಾಗಧೀಶನಾದಾನು |
ಸರದೇಶಗತ ನವಲಗುಂದ ಸಂಸ್ಥಾನಿಕನು || ೧ ||

ಫಕ್ತ ದೈವದಿಂದ ಇವರು ದತ್ತಕ್ಕಾದ್ದದಂತ ಸಂಕ್ಷಿಪ್ತ ಕಥೆಯನು |
ಹೇಳುವೆನು ಅರಿಯದಾತನು |
ಶಿಗ್ಲಿ ರೈತಾ ಘೂಳಪ್ಪನ ಪುತ್ರ ಭಕ್ತಕುಲದವನು |
ಮಾತಾಪಿತೃರರಿತಿದ್ದಿಲ್ಲೀ ಸಂಸ್ಥಾನವನು |
ಸ್ವಸ್ಥ ಉಂಡು ತಾನು ರಸ್ತೆಯಲ್ಲಿ ಆಡುವವನು |
ಎತ್ತಿಬಂದು ಜಾಯಸತಿಯರ ಪುತ್ರನಾದನು |
ಇಂತಾ ಕಥೆಯ ಹೇಳುವೆ ಕೇಳೀರೀಗ ಸಭಿಕರಿನ್ನು ||

ರೂಪದಿ ವಿರೂಪಾಕ್ಷ ವೈರಿ | ಕೋಪದಿ ಪಾಪಿಗಳ ವೈರಿ |
ತಾಪದಲ್ಲಿ ಅಗ್ನಿಯ ಸ್ವರೂಪನಿದ್ದನು |
ಭೂಪ ಶಾಂತಿಯಲ್ಲಿ ಚಂದ್ರ ದಾತೃದಲ್ಲಿ ಕರ್ಣನು |
ಶಕ್ತಿ ಭೀಮ ಯುಕ್ತಿ ವಾಮ ವಚನದಲ್ಲಿ ರಾಮನು |
ದೀಪಲಿಂಗ ಧಾರಣರ ತಾಪವನ್ನು ಲೋಪಮಾಡಿ |
ಭೂಪಾದ್ವೀಪಾಂತರಲ್ಲಿ ಧೂಪನಿದ್ದನು |
ಇಂಥಾ ಕರ್ಪೂರೊಡೆಯು ದೇಶದಲ್ಲಿ ಎಲ್ಲಿ ಸಿಕ್ಕಾನು ||

ದೊರೆಯ ವರ್ಣನೆಯನ್ನು ನಾನು ಸ್ಮರಣೆಯಿಂದ ಮಾಡುವೆನು |
ಕರುಣದಿಂದ ಕೇಳಿರೆಂದು ಬೇಡಿಕೊಂಡೇನು |
ಹರಳು ಒಡೆದು ಹೋಗ ಗೆಜ್ಜೆಯಂತೆ ಬಾಯಿ ತೆರೆದೇನು |
ಅರಸು ತಾನೆಂಬ ಅಹಂಕಾರ ದೂರ ಮಾಡಿದನು |
ಅರಿಯದವಗೆ ಅರಸಾಗಿ ಸಿರಿಯು ಭಾಗ್ಯವಂತನಾಗಿ |
ಮೂವತ್ತು ವರ್ಷ ದೇಶಗತನಾಳಿದನು |
ಪುರುಷರಲ್ಲಿ ತನ್ನ ಹೆಸರು ಮುಂದೆ ತಂದನು ||

ಸತ್ಯದಲ್ಲಿ ಹರಿಶ್ಚಂದ್ರ, ಅಸತ್ಯವನ್ನು ನುಡಿದವರಿಗೆ |
ಮೃತ್ಯುವಾಗಿ ಮೈಯದೊಗಳು ಸುಲಿಸಿಬಿಟ್ಟಾನು |
ದುಷ್ಟ ಕೃತ್ಯ ಪಾಪ ಕರ್ಮವನ್ನು ದೂರ ಮಾಡಿದನು |
ತನ್ನ ಹತ್ತರಲ್ಲಿ ಸತ್ಯವಂತನಿರಿಸಿಕೊಂಡಾನು |
ಧಾತ್ರಿಪಾಲನ ಕೀರ್ತಿ ಜಗತ್ತಿನಲ್ಲಿ ವ್ಯಾಪಿಸಿಹುದು |
ವೀರಶೈವ ಸಭೆದಲ್ಲಿ ಸಾರುವದನ್ನು |
ದಾನವೀರ ಪುಣ್ಯವಂತ ಲಿಂಗಭೂಪನು ||

||ಏರು||

ಮಾತು ಕೇಳಿ ಪೃಥ್ವಿ ದೂರದಲ್ಲಿ ನಿಂತ ಬೃಹಸ್ಪತಿ |
ರಸನಾಂತ್ಯದಲ್ಲಿ ಸರಸ್ವತಿ |
ದ್ರೌಪತಿ ಸರಿ ಭಾಗೀರಥಿ ಬಾಯಿ ಮೇಲೆ ಪ್ರೀತಿ |
ರೂಪದಲ್ಲಿ ಧನ್ಯರತಿ ಸತಿ |
ಹಗಲಿರುಳು ರನ್ನದಾ ಹರಳು ಮಾಳ್ಪೆನಾ ಸ್ತುತಿ |
ದೇವ ಮುನಿದ ನಮ್ಮ ಮೇಲತಿ ||

ಸೂರ್ಯನುದಯದಿಂದಿ ತಾನು ಸೂರ್ಯಾಸ್ತನಾಗುವತನಕಾ |
ಆರ್ಯರಲ್ಲಿ ಶ್ರೇಷ್ಠ ವೀರಶೈವ ಜನರಿನ್ನು |
ಕಾರ್ಯದಕ್ಷರಾಗಲಿಲ್ಲವೆಂಬ ಚಿಂತಿಕಾಲನ್ನು |
ಧೈರ್ಯದಿಂದಾ ವಹಿಸಿ ಈಶ್ವರಾಜ್ಞೆಗೈದಾನು |
ಹತ್ತೊಂಬತ್ತು ನೂರಾ ಆರು ಆಗಸ್ಟ್ ಇಪ್ಪತ್ತಮೂರು |
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನಾದ ಲಿಂಗಭೂಪ ಸಿರಸಂಗೀಶನು ||

ಅವರಾದಿ ವಿಠ್ಠಪ್ಪಗೌಡ ಇರುವನಿವರ ಮೂಲಪುರುಷ |
ಸರಿಯ ತಮ್ಮನ ಕೂಡ ಕಲಹ ಮಾಡಿ ಹೊರಟಾನು |
ವಿಜಾಪುರ ಬಾದಾಶಹನಲ್ಲಿ ಸ್ವಾರನಾದನು |
ವಿಜಯನಗರದರಸು ಬಾದಶಹನ ಶತ್ರುವಿದ್ದನು |
ಕೇಳಿರಿಲ್ಲಿ ಸಭಿಕರೆಲ್ಲಾ ತಾಳಿಕೋಟಿ ಹತ್ತರಲ್ಲಿ |
ಕಾಳಗಾಗಿ ಅಲ್ಲಿಆದಿಲಶಹಾ ಗೆದ್ದಾನು |
ರಾಮರಾಜ ಸೋತು ಸತ್ತು ಮಣ್ಣುಗೂಡಿ ಹೋದನು |
ತಾಳಿಕೋಟ ಕಾಳಗದಲ್ಲಿ ಅಲ್ಲಿಆದಿಲಶಹಾ ತಾನು |
ವಿಠೂಗೌಡನ ಶೂರತನವ ಕಂಡು ಕೊಂಡನು |
ಅರಸು ಮೆಚ್ಚಿ ಅರ್ಧರಾಜ್ಯವನ್ನು ಕೊಟ್ಟು ಬಿಟ್ಟಾನು |
ನವಲಗುಂದ ರಾಜ್ಯ ಮೂರುಲಕ್ಷ ವರಹ ಉತ್ಪನ್ನು |
ಜಾಗೀರ‍್ಹಾಕಿ ಕೊಟ್ಟ ಮೇಲೆ ಪುತ್ರ ಪೌತ್ರಾದಿಗಳು |
ಸೌಖ್ಯದಿಂದ ಕಾಲಕಳೆದರ‍್ಹೇಳಲಿನ್ನೇನು |
ಮೈಸೂರಲ್ಲಿ ಪ್ರಬಲನಾದ ಹೈದರಲ್ಲಿಯ ಮಗನು ||

ಮೈಸೂರೀಶಾ ಟೀಪು ದೊರೆಯು ಸೈನ್ಯದೊಡನೆ ಬಂದು
ನವಲಗುಂದ ಸಂಸ್ಥಾನ ವಶವ ಮಾಡಿಕೊಂಡಾನು |
ತನ್ನ ರಾಜ್ಯದೊಳಗೆ ಸೇರಿಸಿಲ್ಲಿಯ ಒಡೆಯನ್ನಟ್ಟಿದನು |
ಸರದೇಸಾಯಿ ವೃತ್ತಿ ಕಳೆದಕೊಂಡ ಕೂತಾನು |
ಟೀಪು ಉರಿಯುವುದನ್ನು ಕಂಡು ನೈಝಾಮೇಂಗ್ಲ ಪೇಶ್ವಾಯವರು |
ಐಕ್ಯಮತದಿಂದ ಕಾದೆ ಟೀಪು ಮಡಿದನು |
ತ್ರಿರಾಜರ್ ಹಂಚಿಗೊಂಡರ್ ಟೀಪುಗೆದ್ದ ಭೂಮಿಯನು ||

ನವಲಗುಂದ ಸಂಸ್ಥಾನ ಪೇಶ್ವೆಯವರ ಸ್ವಾಧೀನವಾಗಿ |
ಯುದ್ಧದಲ್ಲಿ ಆದ ಖರ್ಚಿಗೆ ವತ್ತಿ ಹಾಕಿದರು |
ಜಾಯದೇಸಾಯರೆಂಬುವವರು ಅರ್ಜಿಕೊಟ್ಟಾರು |
ಪರತ ಸಂಸ್ಥಾನ ಬಿಡಲಿಕ್ಕೆ ಕೇಳಿಕೊಂಡಾರು |
ವತ್ತಿಯಿಂದ ಬಿಡಿಸಿ ನಿಮ್ಮ ಸಂಸ್ಥಾನ ಕೊಡುವೆವೆಂದು
ಹತ್ತು ಪುರವ ಹೊಟ್ಟಿ ಖರ್ಚಿಗಾಗಿ ಕೊಟ್ಟರು |
ಅಷ್ಟರಲ್ಲಿ ಪೇಶ್ವೆಯರ‍್ಹೋಗಿ ಇಂಗ್ರಜಿಯವರು ಬಂದರು ||

ಹೊಟ್ಟೆ ಖರ್ಚಿಗಾಗಿ ಪೇಶ್ವೆಕೊಟ್ಟ ಹತ್ತು ಗ್ರಾಮಗಳಿಗೆ |
ಧಿಟ್ಟರಾಗಿ ತಾವು ಕಾಲ ಕಳೆದರೈವರು |
ಒಟ್ಟ ಹನ್ನೊಂದು ತಲೆಯವರಾದ ಜಾಯದೇಸಾಯರು |
ಹುಟ್ಟಿದೊಬ್ಬ ಮಗನು ಹೆಂಡರಿರಲು ಮರಣವಾದಾರು |
ಮುಂದೆ ಮಗನು ತೀರಲಾಗಿ ಹಿಂದೆ ಉಳಿದ ಬಾಯಿಯವರು
ನಾನು ನೀನು ಒಡೆಯರೆಂದು ನ್ಯಾಯವಾಡಿದರು |
ತಮ್ಮ ತಮ್ಮ ಪಕ್ಷದವರು ದತ್ತಕೆಂದು ನುಡಿದರು ||

||ಏರು||

ಇಬ್ಬರಲಿ ಕಲಹ ತಪ್ಪದಲಿ ನಡಿತು ಹೆಚ್ಚುತಾ |
ಬುದ್ಧಿವಂತರ್ ಕೇಳಿ ಸಮ್ಮತಾ |
ಇಬ್ಬರು ಕೂಡಿ ಬಂದರು ನೋಡಿ ಜಾಹೀರಾತಾ |
ಸರಿಕಂಡನು ಮಗನಂತಾ |
ಆತುರದಿ ಜನರು ಬಂದು ಭರದಿ ಗ್ರಾಮ ತುಂಬುತಾ |
ಐಶ್ವರ್ಯದೊಡನೆ ಜರಗುತಾ ||

ಪಾಸ ಕಂಡರ ಸಂಸ್ಥಾನಕ್ಕೀಶನನ್ನು ಮಾಡುವರಂಥಾ
ದೇಶದಲ್ಲಿ ಸರ್ವಜನರು ವಾರ್ತೆ ಕೇಳಿದರು |
ದಿವ್ಯಭೂಷಣಾದಿಗಳಿಂದ ಅಶ್ವವನ್ನೇರಿ ಬಂದಾರು |
ಶಿಗ್ಲಿಯೊಳಗೆ ಇವರ ತಂದೆ ಬಡವರಿದ್ದರು |
ಹತ್ತೊಂಬತ್ತು ನೂರಾ ಆರು ಆಗಸ್ಟ ಇಪ್ಪತ್ತುಮೂರು
ಭಾದ್ರಪದ ಶುದ್ಧಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನನಾದ ಲಿಂಗಭೂಪ ಸಿರಸಂಗೀಶನು |||| ೩ ||

ಬಂದ ಉಮೇದವಾರರೊಳಗೆ ಅಂದಗಂಡ ರಾಮಪ್ಪನು |
ರಾಮಪ್ಪನು ಇಂದುವಿನಂತೆ ಚಂದ್ರಶೇಖರ ಪಾಸಕಂಡಾನು |
ದತ್ತಪುತ್ರ ಬರಿದು ಇಟ್ಟ ಹೆಸರು ಲಿಂಗಭೂಪನು |
ದಿವ್ಯವೈಭವದಿಂದ ಸಂಸ್ಥಾನಕ್ಕೊಡೆಯನಾದನು |
ಹಿರಿಯ ಅಣ್ಣನ ಕೂಡ ಬಂದು ಸಿರಸಿಂಗಿಯೊಳಗೆ |
ಬಂದು ದೂರದಲ್ಲಿ ಮಠದೊಳಗೆ ಇಳಿದಿದ್ದನು |
ಇವರ ಪೂರ್ವದಲ್ಲಿಯ ಹೆಸರು ರಾಮಪ್ಪನು ||

ಗಂಗಾಬಾಯಿ ಸಾಹೇಬರದು ಲಿಂಗಭೂಪನ ಮೇಲೆ
ಪ್ರೇಮ ಅಂಗಜಾತನಂಥ ಸಿರಸಂಗೀಶನು |
ರಾಜಪುತ್ರ ಶಾಲೆಯ ಕೊಲ್ಹಾಪುರದಿ ಕಲಿಯುತಿದ್ದನು |
ರಾಜಭಾಷೆ ಇಂಗ್ಲೀಷ ಕನ್ನಡಾದಿ ಮರಾಠಿಯನ್ನು |
ಕಲಿಯುತಾತ ಇರುವುವಲ್ಲಿ ಪ್ರೀತಿ ತಾಯಿ ತೀರಲಾಗಿ
ಉಮಾಬಾಯಿ ಸಾಹೇಬರು ದ್ವೇಷದಿಂದಿನ್ನು |
ಕಲಿಸಿದಾನು ಸಿದ್ಧರಾಮಪ್ಪನೆಂದು ದುಷ್ಟನು ||

ಖುಷಿ ದತ್ತಕ ಸುಳ್ಳೆಂದು ಹುಸಿ ಮಾತು |
ಆಡುತ್ತ ದ್ವೇಷದಿಂದ ವಾಸಿಸಿದಳು ಸಿರಸಂಗಿಯಲ್ಲಿ |
ಸುದ್ದಿ ಕೇಳಿ ಈಶ ಕೊಲ್ಹಾಪುರದಿ ಹೊರಡುತಲಿ |
ಭರದಿ ಸಿರಸಂಗಿಗೆ ಬಂದ ತೀವ್ರದಲಿ |
ಗ್ರಾಮದಲ್ಲಿ ಬರುವವನ ನೇಮದಿಂದಾ ನೂಕಿದಳು |
ಕಾಮನಂಥಾ ತಿರುಗಿದಾಸರಿಲ್ಲದಲ್ಲಿ |
ದೇವ ತನ್ನ ಮೇಲೆ ಮುನಿದನೆಂಬ ಚಿಂತೆಯಲಿ ||

ಕೈಯಲ್ಲಿ ದುಡ್ಡು ಇಲ್ಲಾ ಜನರ ಸಹಾಯವಿಲ್ಲ
ನ್ಯಾಯಕ್ಕೆ ಆಸರಿಲ್ಲಾ ನಿಂತ ಅಂತರಲ್ಲಿ |
ಇವರನ್ನಾರು ಕೇಳುವರು ಬಾಯಿಯ ದುರದಲ್ಲಿ |
ಯಾವ ಆಸರರಿಂದ ನಿಂತಾರು ವೈರದಲ್ಲಿ |
ನದೇವೋ ನ ನಧರ್ಮಾಯನೆನ್ನುತ ಭೂವರ |
ನಿರ್ಧಾರನಾಗಿ ಬಾ ನಿಲ್ಲುತಲ್ಲಿ |
ಪರಸಗಡದ ಪರಪ್ಪ ಧೈರ್ಯ ಹೇಳುತಲಿ ||

ಮೂರು ಕೋರ್ಟಿನ ವರೆಗೆ ನ್ಯಾಯ |
ಧೀರತನದಿಂದ ನಡಿಸಿದಾನು |
ಸಿದ್ಧರಾಮ ಚರಮೂರ್ತಿ ಹತವಾದಾನು |
ಸಂಸ್ಥಾನದ ಸಿಲ್ಕೆಲ್ಲಾ ಅಯ್ಯನ ಸ್ವಾಧೀನು |
ಕಾಗಿ ಹಿರಿಯತನದಂಥವನು ಮಾಡಿ ಬಿಟ್ಟಾನು |
ಸಿಕ್ಕಂತೆ ವೆಚ್ಚಮಾಡಿ ಲೆಖ್ಖಿಲ್ಲದ್ಹಾಳು ಮಾಡಿ |
ಬಳಿದುವಾಡೆ ದುಡ್ಡೆಲ್ಲಾ ತೊಳೆದು ಬಿಟ್ಟಾನು ||

ಸಿದ್ಧರಾಮ ಸತ್ತಮೇಲೆ ಬುದ್ಧಿವಂತಳಾಗಿ ಬಾಯಿ |
ಇದ್ದ ಮಗನಗೂಡ ರಾಜಿ ಆಗುತಲಿ |
ಮತ್ತು ಸಿದ್ಧವಾಗಿ ದತ್ತಪತ್ರ ಕೋರ್ಟಿನಲ್ಲಿ |
ವಾಡೆ ಸಂಪೂರ್ಣ ಸಿಕ್ಕತವನ ತಾಬೇದಲ್ಲಿ |
ತಾಯಿ ತಾ ಹತ ತನ್ನ ಕೈಯಿಂದ ಒಂದು ಹಳ್ಳಿ |
ಹೊಟ್ಟೆ ಖರ್ಚಿಗಾಗಿ ಕೊಟ್ಟಾ ಮಹಾಕಲಿ |
ವಾಡೆ ಕಟ್ಟಿಸಿಟ್ಟ ತಾಯಿಯನ್ನು ಬೇವೂರಲ್ಲಿ ||

||ಏರು||

ಅತಿ ಕಷ್ಟ ಕಾಡಿತು ಅರಿಷ್ಟಾ ಗೆದ್ದ ರಾಜೇಂದ್ರಾ |
ಖಾಲಿ ವಾಡೆಕ್ಕಾದ ತಾ ಇಂದ್ರ |
ಖರ್ಚಿಗಿ ಹಣಾ ಇಲ್ಲದಾಗಿ ಗ್ರಾಮದಲಿ ಬಂದಾ |
ಕುಡಿಯಲಿಕ್ಕೆ ತಂಬಿಗಿಲ್ಲ ಒಂದಾ |
ತುರ್ತಕ್ಕೆ ದುಡ್ಡ ಕಳಿಸುವದಕ ಪತ್ರ ತಾ ಬರೆದಾ |
ಇಂಗಳೇಶ್ವರದ ಗೌಡ ಕಳಿಸಿದಾ ||

ವಾಡೆ ಹೊಕ್ಕು ನೋಡಿದನು ಮಾಡದಲಿ ಇಲಿಯ ಹಿಕ್ಕಿ |
ಕೋಠಿಯಲ್ಲಿ ಕಾಲಿ ಚೀಲು ಒಂದೂ ಉಳಿದಿಲ್ಲಾ |
ಭೋಜನಾಲಯದಲ್ಲಿ ಪಂಕ್ತಿ ಚಾಪಿ ಸಹ ಕಂಡಿಲ್ಲಾ |
ಹಂಡೆ ಭಾಂಡೆ ತಗಡು ತುಣಕು ಮಣ್ಣು ಪಾತ್ರೆ ಇಲ್ಲಾ |
ಔಷಧಕ್ಕೆ ಕಾಳು ಇಲ್ಲ ವಿಷಕ್ಕೆ ದುಡ್ಡು ಇಲ್ಲಾ |
ಕಸಕ್ಕ ಬಾರಿಗಿಲ್ಲಾ ಬೀಸುವ ಕಲ್ಲಾ |
ನಾಶಮಾಡಿ ಬಿಟ್ಟು ಸಿದ್ಧರಾಮ ಸತ್ತನಲ್ಲಾ ||

ನಳನ ಸತಿಯ ಬಿಡಿಸಿ ರಾಮಚಂದ್ರನಡವಿಗಟ್ಟಿ |
ಹರಿಶ್ಚಂದ್ರನ ಹೊಲಿಯರಲ್ಲಿ ದುಡಿಯಲಿಟ್ಟಾನು |
ಬಲಿ ಚಕ್ರವರ್ತಿಯನ್ನು ಭೂಮಿಯಲ್ಲಿ ತುಳಿದಾನು |
ವಿಧಿಯಂಥ ಕುಕ್ಷಿಯನ್ನು ನಾನು ಎಂದೂ ಕಾಣೆನು |
ಹತ್ತೊಂಬತ್ತು ನೂರಾ ಆರು ಆಗಸ್ಟ ಇಪ್ಪತ್ತು ಮೂರು |
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನಾದ ಲಿಂಗಭೂಪ ಸಿರಸಂಗೀಶನು || ೪ ||

ದೇವಲೋಕದಿಂದ ಇಳಿದ ಜೀವನಿದು ಭುವನದಲ್ಲಿ
ಭಾವ ಮೂಡಿ ತೋರಿ ಅಡಗಿ ಇಹದಲ್ಲಿ |
ಸ್ವಭಾವದಲ್ಲಿ ಕಮಲಾಕ್ಷ ಜಿಹ್ವದಲ್ಲಿ |
ಸರಸ್ವತಿ ಮಚ್ಛನಿದ್ದು ತೊಡೆಯಲ್ಲಿ |
ನಾವು ನೀವು ನೋಡಿದೆವು ಸುಳ್ಳು ಮಾತು ಒಂದು ಇಲ್ಲ
ಸರಿಯ ಮಾತು ಶಿವನ ಭಕ್ತಿ ಮನದಲ್ಲಿ |
ಎನ್ನ ಕಿವಿಯ ಕೊಯ್ಯಬೇಕು ಸುಳ್ಳು ಕಂಡಲ್ಲಿ ||

ಸತಿಯರನ್ನು ಬಿಟ್ಟು ಪರಸ್ತ್ರೀಯರನ್ನು ನೋಡಲಿಲ್ಲ |
ಹಿತದ ಮಾತು ಬೋಧಿಸಿದನು ಜನರಲ್ಲಿ |
ಹೆತ್ತ ತಂದೆಗೊಂದು ಮನೆಯ ಕಟ್ಟಿಸಿಟ್ಟಿದಲ್ಲಿ |
ಗೋರಾ ಜನರಗೂಡ ಗೆಳೆತನ ನೇಮದಲ್ಲಿ |
ಹತ್ತೊಂಭತ್ತು ವಯಾದಲ್ಲಿ ಸಂಸ್ಥಾನ ತಾಬೇಯಾಗಿ |
ಚಿತ್ತದಿಂದ ದೇಶಗತ ಪಾಲಿಸುತಲಿ |
ವಸೂಲಿಪ್ಪತ್ತೈದು ಸಾವೀರಿತ್ತು ಪೂರ್ವದಲ್ಲಿ ||

ಬೆಳ್ಳೇರಿ ಹೊಂಗಲ ಚಿಕ್ಕ ಉಳ್ಳಿಗೇರಿ ಹೂಲಿಯಕಟ್ಟಿ |
ಹಳ್ಳದ ದಂಡಯಲಿರುವ ಕುರುವಿನಕೊಪ್ಪಾ |
ಬೆಳ್ಳಗ್ಹುಳ್ಳಗರಿಯಲಾರದಂಥ ಗೋವಿನಕೊಪ್ಪ |
ಒಳ್ಳೆ ಬಾಳ್ವೆಯುಳ್ಳ ಹೊಸಬಾಳ ಕೆಂಚನಕೊಪ್ಪ |
ನಳ್ಳ ಸಿರಸಂಗಿ ನೆರೆಹಳ್ಳಿ ಕಲ್ಲಾಪುರ ಧೊರಿ |
ನವಲಗುಂದ ಪರಸಗಡ ಚಾವರಾತ ಭೂಪಾ |
ವರ್ಷ ಮತ್ತೆಯಾಗುವದು ಸತ್ಯಬಾವಿಯ ಕೂಪಾ ||

ತಾಯಿ ನ್ಯಾಯದಲ್ಲಿ ತನ್ನ ಪಕ್ಷ ಹಿಡಿದ |
ಪಂತನಿಗೆ ಹತ್ತು ನಂಬರೀನಾಮು ಹಚ್ಚಿ ಕೊಟ್ಟಾನು |
ಸಾಲಿ ಕಲಿಯುವಾಗ ಹಸ್ತ ನೋಡಿದ ವಿಷ್ಣುಪಂತನು |
ರಾಜನಾಗುವಂಥ ಲಕ್ಷಣಾತ ಹೇಳಿದ್ದನು |
ಭವಿಷ್ಯ ಮಾತು ನಿಶ್ಚಯಾಗಿ ವರ್ಷಾ ಇನ್ನೂರು ರೂಪಾಯಿ |
ಹರ್ಷದಿಂದ ಸಾಯುತನಕಾ ಸಂಬಳ ಕೊಟ್ಟಾನು |
ವಚನಕೊಟ್ಟಂತೆ ಪಾರುಮಾಡಿ ದೇಹ ಬಿಟ್ಟಾನು ||
ಯುಕ್ತಿಯಿಂದಾ ದೇಶಗತದುತ್ಪನ್ನದ ಬೆಳಿಸಿದಾನು |
ರೈತಕೀಯ ತರ್ಮ ಆಕಾರ ಏರಿಸಿಟ್ಟಾನು |
ಖರಾಬ ನಂಬರ ಕಿರ್ದಿ ಮಾಡಿ ಲಾವಣಿ ಸಾಗಿಸಿದನು |
ಮೂರು ಊರಲ್ಲಿ ಸ್ವಂತ ಕಮತಾ ನಡಿಸುತಿರ್ದನು |
ಮೂರು ಕೆರೆಯ ಕಟ್ಟಿಸಿ ತಾ ಮೂರು ಲಕ್ಷ ಖರ್ಚು
ಮಾಡಿ ಬಿಡಿ ನೀರಿನಿಂದ ಕಬ್ಬ ಬೆಳೆಸುತ್ತಿದ್ದನು |
ಮತ್ತು ಆರುತಿಂಗಳತನಕಾ ನಡ್ಸಿ ದಾಲಿಗಾಣು ||

ಬಂಟ ತಾನು ಒಂಟಿಯನ್ನು ರೆಂಟಿಗಾಗಿ ಸಾಕಿದನು |
ಎತ್ತು ಕೋಣೆಂಭತ್ತುಗಳನು ಕಮತಕಿಟ್ಟಾನು |
ತಗ್ಗು ದಿನ್ನೆಗಳನು ಸಾಫ ಮಾಡಿ ಸಾಗು ಮಾಡಿದನು |
ಠೇವು ಖಾತೆ ಇಟ್ಟು ಬಡ್ಡಿಯಂತೆ ಸಾಲ ಕೊಟ್ಟಾನು |
ಬೇರೆ ಬೇರೆ ಖಾತೆ ಇಟ್ಟು ಕಾರಕೂನರನ್ನು ನೇಮಿಸಿಟ್ಟು |
ಒಟ್ಟ ಉತ್ಪನ್ನ ಒಂದು ಲಕ್ಷ ಕಟ್ಟಿ ಇಟ್ಟಾನು |
ದಿವಾರಾತ್ರಿಯಲ್ಲಿ ನಿದ್ರೆ ಇಲ್ಲಾ ದುಡಿಯುತಿರ್ದನು ||

||ಏರು||

ಜೋಗುಳ ಬಾವಿ ದರಸಾಲ ಲಲಾವ ಸಾವಿರಕ್ಕ |
ಕಾಳಿದೇವಿ ಜಾತ್ರೆಗಿಟ್ಟು ಸುಂಕಾ |
ಗುಡ್ಡದಲ್ಲಿ ಕಟ್ಟಿಗಿದ್ದಲ್ಲಿ ಮೇಲೆ ಇವರ ಹಕ್ಕಾ |
ಜಂಗಲ ಖಾತೆಯಿಂದಾ ಬೇರೆ ರೊಕ್ಕಾ |
ಮಾವಿನತೋಫಿನುತ್ಪನ್ನ ತಪ್ಪದೊರುಷಕ್ಕ |
ಕಮತದ ಮೇಲೆ ಒಳೆ ಲೆಕ್ಕಾ ||

ತಾಕಿ ಜಮೀನ ಮೇಲೆ ರೈತರ ಹಕ್ಕ ತೆಗೆದುಹಾಕಿ
ಜಾತ ಇನಾಮು ಸನದು ತಾನು ಪಡೆದುಕೊಂಡಾನು |
ಸೂಜಾತ ಲಿಂಗವಂತ ಜಂಗಮಕ್ಕೆ ಪ್ರಿಯನು |
ಈ ಭೂತಳದಲ್ಲಿ ಕ್ರೀಡೆಯನಾಡಿ ಮಾಯವಾದಾನು |
ಹತ್ತೊಂಭತ್ತು ನೂರಾ ಆರು ಆಗಸ್ಟ ಇಪ್ಪತ್ತು ಮೂರು
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನನಾದ ಲಿಂಗಭೂಪ ಸಿರಸಂಗೀಶನು || ೫ ||

ಖರ್ಚಿನ ಬಾಬ ಹೇಳತೀನಿ ವೆಚ್ಚಕ್ಕೆಯೆಣೆಯಿಲ್ಲ
ಬಚ್ಚಿಟ್ಟ ತಿಜೋರಿ ಸೂರಿ ಮಾಡಿದರು |
ಹುಟ್ಟಿದೂರ ಭೆಟ್ಟಿಗಾಗಿ ಹೋಗಲಿಚ್ಛಿಸಿದರು |
ರಿತ್ತಿ ಸ್ವಾರಿ ನೆವದಿಂದ ಸಿಗ್ಲಿಗ್ಹೊರಟಾರು |
ಸುತ್ತ ಮುತ್ತಲಿನ ಊರ ತೃಪ್ತಿಗೊಳಿಸಿದರು |
ಪ್ರೀತಿಯಿಂದ ವಸ್ತ್ರವನ್ನು ಹೊರಿಸಿಬಿಟ್ಟಾರು |
ಅರವತ್ತು ಸಾವಿರ ಹಣ ತೂರಿಬಿಟ್ಟಾರು ||

ನ್ಯಾಯ ಹಿಡಿದ ತಾಯಿ ಉಮಾಬಾಯಿಯವರು
ತೀರಿದರೆ ಸಾರ್ಥಕ್ಕೆ ಆರು ಸಾವಿರ ದಾನಕೊಟ್ಟಾರು |
ಬೆನಕ ಚತುರ್ಥಿಯುತ್ಸವ ಮಾಡುತ್ತಿದ್ದಾರು |
ಸಕಲ ಸಂಸ್ಥಾನ ಗಾನದಾರರು ಬರುತಿದ್ದರು |
ನೇಮಣೂಕ ಇದ್ದಂತೆ ಬ್ರಾಹ್ಮಣ ಜಂಗಮರಿಗೆ
ಪಂಚದಿವ್ಯ ಮೃಷ್ಟಾನ್ನವ ಉಣಿಸುತ್ತಿದ್ದರು |
ಘನಯಾತ್ರೆ ಖರ್ಚು ದರಸಾಲ ಮಾಡುತ್ತಿದ್ದರು ||

ದಾಸೋಗಿತ್ತು ಲಿಂಗಾಂಗರೇಸುಮಂತಿ ಬಂದರು
ಉಪವಾಸ ಬೀಳುತ್ತಿದ್ದಿಲ್ಲಲ್ಲ ವಸ್ತಿ ಕೊಟ್ಟವರು |
ಸೀದಾ ಒಯ್ಯುವರು ಬ್ರಾಹ್ಮಣ ದಾರಿಕಾರರು |
ಕೋಠಿ ಮೇಲೊಬ್ಬ ಕಾರಕೂನನ್ನಿಟ್ಟು ಬಿಟ್ಟಾರು |
ನೂರಾರು ಗೋವುಗಳು ನೇಮದಿಂದ ಕರೆಯುವವು
ಬಂದವರಿಗೊಂದು ತಂಬಿಗಿ ಹಾಲು ಕೊಟ್ಟಾರು |
ಬೇರೆ ಖೋಲಿ ಕಟ್ಟಿಸಿಯೊಬ್ಬನಲ್ಲಿ ಇರಿಸಿದ್ದರು ||

ಕಾಶೀ ಯಾತ್ರೆಗಾಗಿ ತನ್ನ ದಾಸಿ ದಾಸರಾ
ಶ್ರೀ ತರುಮೇಶನನ್ನು ನೋಡಲು ಸಮೇತ ಹೊರಟರು |
ಕಾಶೀ ತೀರ್ಥವನ್ನು ಒಯ್ದು ರಾಮೇಶಗೆರಿದರು |
ರಾಮೇಶ್ವರನ ಮಳಲ ಪುನಃ ಗಂಗೆಯಲ್ಲಿ ಬಿಟ್ಟಾರು |
ಕಾಶಿಯಾತ್ರೆಯೊಂದು ಮುಗಿಸಿ ವಿಶ್ವನಾಥನ ಹೆಸರಿನಿಂದ |
ದೇಶಗತ ಭೂಮಿಗತ ಭೂಮಿ ಒಂದು ಇನಾಮು ಕೊಟ್ಟಾರು |
ಲಾವಣಿ ವಸೂಲ ಮಾಡಿ ವರ್ಷಾ ಕಾಶಿಗೆ ಕಳಿಸಿಕೊಡುವರು ||

ದೇಶಗತ ನೇಮವನ್ನು ಖಾಸ ನಾನು ಹೇಳುವೆನು
ಜ್ಯೇಷ್ಠ ಬಾಯಿಸಾಹೇವರು ಉಕ್ಕಲಿಯವರು |
ಹೀಂಗ ವಂಶ ಪರಂಪರೆಯಾಗಿನಹಿಡ ಬಂದಾರು |
ಸಂತಾನಾಗದಕ್ಕ ಆರು ಮಂದಿ ಹೆಂಡರಾದಾರು |
ಉಕ್ಕಲಂಕಲಗಿ ಹಿರಿಸಂಗ ಶಿರಹಟ್ಟಿ ಇವರೈದು
ಮಂದಿ ಅಂತರ ಪಟದಿಂದಾ ಮದುವೆ ಮಾಡಿಕೊಂಡಾರು |
ಪಂಚಕಳಸ ಹೂಡಿ ಲಗ್ನವಾದ ಕಲಬುಳಿಗಿಯವರು ||

ಪಂಚಗುರು ಪಂಚಪೀಠಾ ಪಂಚಗೋತ್ರಾ ಪಂಚಸೂತ್ರಾ
ಪಂಚಮ ಸಾಲಿ ಲಿಂಗಾಂಗ ಮುಖ್ಯರು |
ಅಷ್ಟಾವರಣಕ್ಕೆ ಹೊಂದಿದವರು ಒಂದೇ ಕುಲದವರು |
ಹಲವು ದಂಧೆಯಿಂದ ಜಾತಿವರ್ಗ ಮಾಡಿಕೊಂಡಾರು |
ಅನ್ನ ನೀರು ಮುಟ್ಟದಂಥಾ ಅನ್ಯಮತಸ್ಥರಿಂದಾ
ಮಂಗಲಸೂತ್ರ ಧಾರಣ ಬಿಟ್ಟು ಬಿಟ್ಟಾರು |
ಶಾಸ್ತ್ರಶೋಧ ಮಾಡಿಸಿದ್ಧವೆಂದು ಕಂಡುಕೊಂಡಾರು ||

||ಏರು||

ಇಂಗ್ಲಂಡದರಸು ಎಡ್ವರ್ಡ ಬಾದಶಹಾ ರಾಜಧಾನಿ ಲಂಡನ್ನ
ಚಕ್ರವರ್ತಿಯಾದ ಹಿಂದುಸ್ತಾನ |
ಮಹಾರಾಣಿ ಪುತ್ರ ಬಹುಮಾನಿ ಏರಿದನು ಒಂದರಲ್ಲಿ ಸಿಂಹಾಸನಾ |
ದಿಲ್ಲಿಯಲ್ಲಿ ಉತ್ಸವದ ಖೂನಾ |
ದರಬಾರ ಸೇರಿಸಿ ಬರಪೂರ ಇಂಡಿಯಾ ಮುನ್ನೂರುವರಿಸಂಸ್ಥಾನಾ |
ಸಭೆಗಿತ್ತು ಇವರಿಗೆಂತೌತಣಾ ||

ಪಾಶ್ಚಮಾತ್ಯ ಜನರ ಕೂಡಾ ನಿಶ್ಚಯವಾಗಿ
ಸ್ನೇಹವಿಟ್ಟು ನಿಶ್ಚಿಂತನಾಗಿ ಸ್ವರ್ಗವಾಸಿಯಾದಾನು |
ಸಮಾನರಲ್ಲಿ ಯಶಸ್ಸು ಪಡೆದುಕೊಂಡಾನು |
ಹತ್ತೊಂಭತ್ತು ನೂರಾ ಆರು ಆಗಸ್ಟ್ ಇಪ್ಪತ್ತು ಮೂರು
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗಸ್ವಾಧೀನಾದ ಲಿಂಗಭೂಪ ಸಿರಸಂಗೀಶನು || ೬ ||

ಹಳ್ಳಿಯಲ್ಲಿ ವಾಸಿಸುವದು ಒಳ್ಳೇಯದಲ್ಲವೆಂದು ತಿಳಿದು
ಜಿಲ್ಹೆಯಾದ ಬೆಳಗಾಂವಿಯಲ್ಲಿ ಇದ್ದರು |
ಜಿಲ್ಲಾ ಕಲೆಕ್ಟರ ನಾಮದಾರ ಕಮೀಶನರು |
ರಾವಬಹದ್ದೂರ ಅರಟಾಳ ಇಲಾಖೆ ಸಾಹೇಬರು |
ರಾಜಧಾನಿಕರೆಲ್ಲಾ ಮೇಜವಾನಿ ಮಾಡಿಸುತ್ತ |
ಒಂಟಮುರಿಗ ಶ್ರೀಮಂತರೊಟ್ಟುಗೂಡುವರು |
ತಲ್ಲೂರ ಯಜಮಾನ ನೇಮದಿಂದ ಸಂಗಡಿರುವರು ||

ಬೆಳಗಾವಿ ಲಷ್ಕರ ನಡುವೆ ನಾಲ್ಕು ಎಕರೆ ಭೂಮಿ |
ಕೊಂಡು ಹೊಳೆಯುವಂಥ ಬಂಗ್ಲೆಯನ್ನು ಕಟ್ಟಿಸಿರುವರು |
ಮೇಲು ಮಾಡೆ ಅಶ್ವಶಾಲೆಯನ್ನು ಸಿದ್ಧಗೊಳಿಸಿಹರು |
ಇಂದ್ರವನದಂತೆ ಪುಷ್ಪ ವೃಕ್ಷ ಹಚ್ಚಿಸಿರುವರು |
ಸುತ್ತು ಮುತ್ತು ಕಂಪೌಂಡ ಉತ್ತರಕ್ಕೆ ಮಹಾದ್ವಾರ |
ಮಧ್ಯದಲ್ಲಿ ಕೂಪವನ್ನು ತೋಡಿಸಿರುವರು |
ಎಪ್ಪತ್ತೈದು ಸಾವಿರ ರೂಪಾಯಿ ಖರ್ಚು ಮಾಡಿದರು ||

ಡಿ.ಪಿ. ಗುರುಸಿದ್ಧಾಖ್ಯ ಮತ್ತು ಅರಟಾಳ ಸಾಹೇಬರು
ಕಲ್ಪಿಸಿದ ಫಂಡಿನವರು ಸಹಾಯ ಕೊಟ್ಟಾರು |
ಅಮ್ಮಣಗೇರಿಯೆಂಬ ಗ್ರಾಮವನ್ನು ಖರೀದಿ ಕೊಂಡಾರು |
ತಮ್ಮ ಖುಷಿಯಿಂದ ಫಂಡಿಗಾಗಿ ಹಚ್ಚಿಕೊಟ್ಟಾರು |
ಜೀವಂತನಿರುವಾಗ್ಗೆ ಅಮ್ಮಣಗೇರಿ ಉತ್ಪನ್ನ ಫಂಡಿನವರು |
ಬೇರೆ ವಸೂಲಿ ಮಾಡಿಕೊಳ್ಳುವರು |
ದೇಶಗತದಿಂದಾ ಪರಭಾರೆ ಮಾಡಿಬಿಟ್ಟಾರು |
ಧಾರವಾಡ ಮಹಾಸಭಾಕ್ಕಾರು ಸಹಸ್ರಕೊಟ್ಟು
ಮೈಸೂರು ಇಲಾಖೆಕ್ಕೆ ಎರಡು ಸಾವೀರ |
ಯುವರಾಜ ದರ್ಶನಕ್ಕೆ ಮುಂಬಯಿ ಸ್ವಾರಿ ಹೋದಾರು |
ಶ್ರೀಮಂತೋಂಟಮುರಿ ಮಲ್ಲಪ್ಪಣ್ಣಾ ವಾರದರು
ಬೋರ್ಡಿಂಗ ಸಭೆಗೈದು ಮೂರು ಸಾವಿರ ಹಣವು |
ಧೀರ ಮನಸಿನಿಂದ ಕೊಟ್ಟು ಬಂದಾರು |
ಧೈರ್ಯ ಎಷ್ಟೆಂತ ಹೇಳಲಿಯ್ಯೊ ಕಾರ್ಯದಕ್ಷರು ||

ದುರ್ಮುಖಿ ನಾಮ ದುಷ್ಕಾಳದಿ ಗೋರಾಬಾಳ
ಬಸಿದೋಣಿ ಸಿರಸಂಗಿ ಹೂಲಿಕಟ್ಟಿ ಬಡಜನರು |
ಆಜು ಬಾಜು ಇರುವ ಸಣ್ಣ ಸಣ್ಣ ಹಳ್ಳಿಯವರು |
ಕೂಳು ಇಲ್ಲದಾಗಿ ಬಾಯಿ ಬಿಡುವುದನ್ನು ಕಂಡಾರು |
ದೂರದಿಂದ ಹರಿದು ಬಂದ ದೊಡ್ಡದೊಂದು ಹಳ್ಳಾಕಟ್ಟಿ |
ಮೂರು ಮೈಲು ಅರಣಿಯನ್ನು ಹಾಕಿಸಿರುವರು |
ಆರು ವರ್ಷ ಬಿಡದೆ ಕಾಮಗಾರಿ ಮಾಡಿಸಿರುವರು |
ಮೂರು ಮೈಲು ನೀರು ಕಟ್ಟಿ ಯಂತ್ರದಿಂದಾ ನೀರು ಬಿಟ್ಟು |
ಭತ್ತ ಕಬ್ಬು ಪೈರುಗಳನ್ನು ಬೆಳೆದುಕೊಂಡಾರು |
ಕೆರೆಯ ಕೆಳಗೆ ಒಂದು ಬಂಗ್ಲೆಯನ್ನು ಕಟ್ಟಿಸಿರುವರು |
ಪ್ಲೇಗ ರೋಗ ತಗಲಿದಾಗ ಅಲ್ಲಿ ಹೋಗಿ ನಿಲ್ಲುವರು |
ಮೂರು ಲಕ್ಷ ಹಣದಿಂದ ಧೀರರು ಸ್ವತಃ ನಿಂತು |
ನೋಡತಕ್ಕ ಕೆರೆಯನ್ನು ಕಟ್ಟಿಸಿರುವರು |
ಹುಣಸಿ ಪಕ್ಕ ಮಾಡಿ ಹಣವನ್ನು ವೆಚ್ಚ ಮಾಡಿದರು ||

||ಏರು||

ಕುಲದವನು ವಿದ್ಯೆ ಕಲಿತವನು ಸಿಕ್ಕರವ ಮಗನು |
ಬಿ.ಎ. ಆಗಲಿಲ್ಲ ಒಬ್ಬವನು |
ಉಕ್ಕಲೀ ಬಾಯಿ ಹೊಟ್ಟೇಲೆ ಹುಟ್ಟಿದೊಬ್ಬ ಮಗನು |
ಹರುಷೆಷ್ಟು ಹೇಳಲಯ್ಯೊ ನಾನು |
ಸವದತ್ತಿ ಪೇಟೆಯಾ ಸುತ್ತಿ ಹಂಚಿ ಸಕ್ಕರೆಯನು |
ಪುತ್ರೋತ್ಸವದ ವರ್ಣನವನು ||

ಹತ್ತು ದಿವಸ ಜೀವದಿಂದ ಇತ್ತ ಕೂಸು |
ಊರ ಊರ ಪತ್ರ ಬರೆದು ಮನುಷ್ಯರನ್ನು ಕಳಿಸಿಕೊಟ್ಟಾರು |
ಎತ್ತಿನಂಥ ಕೈ ಇಳವಲಿಲ್ಲಾ ದಾನ ಮಾಡಿದನು |
ಶಿಲ್ಕ ಇದ್ದಷ್ಟು ಹಣವೆಲ್ಲಾ ಹಂಚಿ ಬಿಟ್ಟಾನು |
ಹತ್ತೊಂಭತ್ತು ನೂರಾ ಆರು ಆಗಸ್ಟ ಇಪ್ಪತ್ತು ಮೂರು
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನಾದ ಲಿಂಗಭೂಪ ಸಿರಸಂಗೀಶನು || ೭ ||

ಸಾರ್ವಜನಿಕ ಮಹಾಸಭಾ ಪೂರ್ವದಲ್ಲಿ
ಬಸವರಾಜಾ ನೆರವೇರಿಸಿದ್ದನೆಂದು ಹೇಳುತ್ತಿರುವರು |
ಧಾರವಾಡ ಜನರು ಪ್ರಥಮದಲ್ಲಿ ನಿರ್ಮಿಸಿದರು |
ಪೂರ್ವಿಪಾಲಯ ಲಿಂಗೇಂದ್ರ ಅಧ್ಯಕ್ಷರು |
ಸರ್ವಜನರ ಮಧ್ಯದಲ್ಲಿ ಸೂರ್ಯನಂತೆ ಒಪ್ಪಿದಾನು |
ಧೈರ್ಯದಿಂದ ಭಾಷಣವನ್ನು ಸೂಚಿಸಿರುವರು |
ಮಹಾಸಭಾ ಚರಿತ್ರದಲ್ಲಿ ಇದನು ಛಾಪಿಸಿರುವರು ||

ಎಕ್ಕೋಣಿ ಶೇ ಪಾಚ ಯಕಣಾತೀಸ
ಡಿಸೆಂಬರಕ್ಕೇಕಾಗಿ ಬೆಂಗಳೂರ ವೀರಶೈವರು |
ಎರಡನೆ ಮಹಾಸಭೆಯನ್ನು ತಾವು ನಿಶ್ಚೈಯಿಸಿದರು |
ಸಭೆಗಧ್ಯಕ್ಷರಾಗಲಿಕ್ಕೆ ಕೇಳಿಕೊಂಡಾರು |
ಶ್ರೀಮಂತ ಒಂಟಮುರಿ ಶ್ರೀಮಂತ ವಾರದ |
ರಾವಬಹಾದ್ದೂರರಟಾಳರೊಲ್ಲೆಂದರು |
ಸಭಾ ಸೆಕ್ರೆಟರಿ ನಂಜುಂಡ ಡಾಕ್ಟರರು ||

ನವ್ಹಂಬರವರೆಗೆ ಸಭಾ ನಾಯಕರಿಲ್ಲದಾಗಿ
ಚೇರಮನ್ ಸಭಿಕರು ಬೇಡಿಕೊಂಡಾರು |
ಸಭಾಧೀಶನಾಗಲಿಕ್ಕೆ ವಿನಯ ಮಾಡಿಕೊಂಡಾರು |
ಅನಿರ್ವಾಹ ಅಧ್ಯಕ್ಷ ವಹಿಸಿಕೊಂಡಾರು |
ಒಡೆಯನಾಗಲಿಕ್ಕೆ ರಾಜ ಒಡಂಬಡಲು |
ಸಹಾಯಕರಿಗೆ ಧನದ ಕುಂಭ ಕಂಡ ಬಡವನಂತೆಯಾದಾರು |
ಧನ್ಯರಾದೆವೆಂದು ಮಾನ್ಯರನ್ನು ಕರಿಸಿಕೊಂಡಾರು ||

ಸ್ವಾರಿದೇಹರಕ್ಷಕರು ಪಾಕಸ್ವಾದೀನೀಕರೆಲ್ಲಾ
ಪಾರಮಾರ್ಥ ಕಾರ್ಯಕ್ಕಾಗಿ ಸಾಗಿ ಪೋದಾರು |
ಅಣ್ಣಿಗೇರಿ ಸ್ಟೇಶನಕ್ಕೆ ರೈಲು ಹತ್ತಿಕೊಂಡಾರು |
ಹುಬ್ಬಳ್ಳಿ ಹಾವೇರಿ ಬ್ಯಾಡಗಿ ರಾಣೀಬೆನ್ನೂರು |
ಬೆಂಗಳೂರ ದೊಡ್ಡ ದೊಡ್ಡ ನಿಲ್ವನೆಯ ಗ್ರಾಮದವರು |
ದರ್ಶನಕ್ಕೆ ಐದಿದ್ದರು |
ಪುಷ್ಪ ಮಾಲೆಯಿಂದ ಅಪ್ಪಿಕೊಂಡು ಸಾಗಿ ಪೋದಾರು ||

ಪುಣ್ಯ ಕಾಲದಲ್ಲಿ ಅಗ್ರಗಣ್ಯರೆಲ್ಲಾ ವಿನಯದಿಂದ
ಮಾನ್ಯನಂ ನಿರೀಕ್ಷಿಸುತ್ತಾ ನಿಂತು ಕೊಂಡಾರು |
ಸೂರ್ಯನುದಯ ಕಾಲದಲ್ಲಿ ಗಾಡಿಯನ್ನಿಳಿದರು |
ಕಮೀಶನ್ನರಾದ ಬಹುಮಾನ್ಯ ಪುಟ್ಟಣಾಖ್ಯರು |
ಸರ್ವಸಭಾ ಜನರೆಲ್ಲ ಗರ್ವಹರಣರಾಗಿ ತಾವು |
ಹರುಷವಾಯಿತೆಂದುಕೊಂಡು ಎದುರುಗೊಂಡರು |
ಈ ವೈಭವಕ್ಕೆ ದೇವತೆಯರು ಪುಷ್ಪ ಕರೆದರು ||

ಬೆಂಗಳೂರ ಮಹನೀಯರು ಲಿಂಗಭೂಪರನ್ನು
ಮತ್ತು ಸಂಗಡಿರುವ ತಲ್ಲೂರ ಶ್ರೀಮಂತರು |
ರಾವಬಹದ್ದೂರ ಅರಟಾಳ ರುದ್ರಗೌಡರು |
ಸರ್ವ ಮಂಡಳಿಯ ಮೆರವಣಿಗೆಯನ್ನು ತೆಗೆದರು |
ಇಷ್ಟೆಂದು ಹೇಳಲಾರೆ ಕೃಷ್ಣನಾಲೋಚಿತನ |
ನೈಷ್ಠಿಯಿಂದ ಬಂಗ್ಲೆಯಲ್ಲಿ ಇಳಿಸಿಕೊಂಡರು |
ಈ ಸೃಷ್ಟಿಯಲ್ಲಿ ಕಾಣರಿಂಥಾ ಪುಣ್ಯವಂತರು ||

ಮೂರು ದಿವಸ ಸಭಾದಲ್ಲಿ ಧೀರರು ಸ್ವಮುಖ
ಲೆಕ್ಚರಿಯನು ಕೊಟ್ಟರಲ್ಲಿ ಘಾಬರ‍್ಯಾದರು |
ಪೂರ್ವ ಪುಣ್ಯದಿಂದ ಕಂಡೆವೆಂದು ಹೊಗಳಿಕೊಂಡರು |
ಜನರ ಸಂಘವೆಂಬ ನಕ್ಷತ್ರಕ್ಕುಡುರಾಜರು |
ಬೃಹಸ್ಪತಿಯ ಮುಖಕ್ಕೆ ಕಾಳಿದಾಸ ರಸನೆ ಸರಸ್ವತಿಯು
ಸ್ವರದಲ್ಲಿ ಮಾಯವಾದರು |
ವಕ್ರ ತುಂಡ ತಾನು ಜ್ಞಾನದಲ್ಲಿ ಮುಳುಗಿಕೊಂಡಾರು ||

||ಏರು||

ಮೈಸೂರ ಸೀಮೆ ಕಾರಭಾರ ಮಾಳ್ಪ ಪೂರ್ಣಯ್ಯ ಸಭೆಗೆ ಬಂದಿದ್ದಾ |
ಭಾಷಣ ಕೇಳಿ ಬೆರಗಾದಾ |
ಮಹಾರಾಜ ಅರಸು ಚಾಮರಾಜ ವಾರ್ತೆ ಕೇಳಿದಾ |
ಭೆಟ್ಟಿಗಾಗಿ ಕರಿಸಿಕೊಂಡಿದ್ದಾ |
ರಾಜಮಂದಿರಾ ಉತ್ತರದ ಪ್ರಜೆಯ ನೋಡಲುಮ್ಮೇದಾ |
ಪರವಾನಿಗೆಯನು ಕೊಡಿಸಿದಾ ||

ಮೇಘರಾಜಾ ಪುಷ್ಪ ಕರೆದಾ ವಾಯುರಾಜಾ ವಾಸನಾದಾ |
ಅಗ್ನಿದೇವಾ ಶಾಂತಿಯನ್ನು ತಾಳಿಕೊಂಡಾನು |
ಸೂರ್ಯಕಿರಣವನ್ನು ಮಂಜಿನಲ್ಲಿ ಇಳಿಸಿಬಿಟ್ಟಾನು |
ಚಂದ್ರಶಾಂತಸ್ವರೂಪ ನೋಡಿ ಕ್ಷಯವಾದನು |
ಹತ್ತೊಂಭತ್ತು ನೂರಾ ಆರು ಆಗಸ್ಟ ಇಪ್ಪತ್ತು ಮೂರು
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನನಾದ ಲಿಂಗಭೂಪ ಸಿರಸಂಗೀಶನು || ೮ ||

ಹಿಂದು ಸಭಾ ಡ್ರೆಸ್ ಬೇರೆ ನಿಲುವಂಗಿ ಪಾಗೋಟಿ
ಶ್ವೇತ ಶೆಲ್ಲೆ ಮೈಯ ಮೇಲೆ ಹಾಕಿಕೊಳ್ಳುವರು |
ಚರ್ಮ ಜೋಡು ಮೆಟ್ಟು ಛತ್ರಿಯನ್ನು ಹಿಡಿಸಿಕೊಳ್ಳುವರು |
ಸಾದಾಧಡಿ ಧೋತರ ಉಟ್ಟು ಉಲ್ಪಿ ಬಡಿಗಿ ಹಿಡಿಯುವರು |
ಜೋಡು ಎತ್ತು ಹೂಡಿದಂಥಾ ಡಮಣಿಯಲ್ಲಿ ಕೂಡ್ರುವರು |
ಸಂಗಡಿರುವರು ಉಕ್ಕಲೀ ಭೀಮರಾಯರು |
ಆಪ್ತ ಜನರೆಲ್ಲಿವರ ಮೇಲೆ ಪ್ರೀತಿ ಇದ್ದರು ||

ರಾಜಧಾನಿ ಸಿಸ್ತ ಬೇರೆ ಶರ್ಟ ಫಾರ್ಸಿಕೋಟಗಳು
ಪಲ್ ಪಾಯ್ಮೋಜ ಹಾಕಿಕೊಂಡು ಬೂಟು ಮೆಡುವರು |
ಪಾಟ್ಲೋನುಟ್ಟುಕೊಂಡು ಜರದ ಮಂದಿಲ ಸುತ್ತಿಕೊಳ್ಳುವರು |
ಕಟ್ರಾ ಬಿಗಿಸಿ ಬತ್ತಲಕುದುರೆಯನ್ನು ಹತ್ತುತ್ತಿದ್ದರು |
ವಿಕ್ಟೋರಿಯ ರಥ ಟಾಂಗೆಕಶ್ವಗಳನ್ನು ಹೂಡಿಕೊಂಡು |
ವಾಸಮಾಡುತಿದ್ದರೀ ಶ್ರೀಮಂತರು |
ಮನಸಿಗೆ ಬಂದದ್ದರ ಮೇಲೆ ಕೂಡ್ರುವರು ||

ಆದರ ಸತ್ಕಾರವಿತ್ತು ಅತಿಥಿ ಸನ್ಮಾನವಿತ್ತು ಆನರೇಬಲ್
ಬಹುಮಾನ ಪಡಕೊಂಡನು |
ಸುಭೇದಾರ ಹಕ್ಕು ಎರಡನೇ ವರ್ಗ ಮ್ಯಾಜಿಸ್ಟ್ರೇಟರು |
ಕೋರ್ಟ ನ್ಯಾಯ ಮಾಡುವವರು ಇವರು ಸಬ್‌ಜಜ್ಜರು |
ಇಂಗ್ರೇಜಿ ಹದ್ದಿನಿಂದಾ ವಾದಿ ಪ್ರತಿವಾದಿಯರು |
ಬೇಕಂತ ನ್ಯಾಯವನ್ನು ಹಾಕಿಕೊಳ್ಳುವರು |
ಅನ್ಯಾಯವಾಗುವದಿಲ್ಲ ಪಾಂಡು ಪುತ್ರನೆಂದು ತಿಳಿದರು ||
ಹತ್ತು ಹಳ್ಳಿಯೊಳಗೆ ಇರುವ ರೈತ ಜನರ ಕ್ಷೇಮವನ್ನು
ಪ್ರೀತಿಯಿಂದ ಕೇಳಿ ಸಂತೋಷವಾಗುತಿದ್ದರು |
ಅಂಗರಹಿತ ಕುರುಡ ಕುಂಟ ಬಡ ಜನರನು |
ಬೇರೆ ಶಾಲೆ ಕಟ್ಟಿ ಡೋಲನಿಟ್ಟು ಪಾಲಿಸಿದನು |
ರಾಜ ಪೇಚಿನಲ್ಲಿ ಸಿಕ್ಕ ನಿರಪರಾಧಿಯನ್ನು ತಾನು |
ಪೂಜ್ಯ ಬುದ್ಧಿಯಿಂದಾ ಹೇಳಿ ಬಿಡಿಸುತ್ತಿದ್ದನು |
ಲಂಚ ತಿನ್ನುವಂಥ ಪಾಪಿಯನ್ನು ಪಾತ್ತಲಕ್ಕಿದನು ||

ಬಸವರಾಜನೆಂದು ನಾನು ವಸುದಿಯಲ್ಲಿ ಸಾರುತಿದ್ದೆ
ಮಂತ್ರಿಯಲ್ಲ ಸ್ವತಃ ಈತಾ ರಾಜನಿದ್ದನು |
ಕರ್ಣನಲ್ಲ ತಂದೆ ತಾಯಿಯಲ್ಲ ಜನಿಸಿದಾತನು |
ಧರ್ಮರಾಜನೆನ್ನಲಿಕ್ಕೆ ಬಂಧು ಇಲ್ಲದಾತನು |
ಬಳಿಚಕ್ರನಲ್ಲ ನಿವ ನಿಗರ್ವಿಯಾದಲ್ಲಿ ಕ್ಲೈವನಲ್ಲಾ ಪರದೇಶ ನೌಕರನು
ಶಿವಾಜಿಯೆಂದೆ ಇದ್ದಿದ್ದಿಲ್ಲ ವಿದ್ಯಾಹೀನನು ||

ಪ್ರಬಲನಾದ ಬಾದಶಹ ಅಕಬರನೆನ್ನಲಿಕೈ ಸತಿಯು
ಪರಜಾತಿಯವಳಾಗಲಾರನು |
ಹರಿಶ್ಚಂದ್ರನೆಂದೆ ನೀತನಿಗಿದ್ದಿದ್ದಿಲ್ಲ ಮಗನು |
ಹೊನ್ನು ಹೆಣ್ಣು ಮಣ್ಣು ಮೂರು ತಾ ಅಳಿತಾತನು |
ಮುವತ್ತೆರಡು ವರ್ಷತನಕಾ ಮಾಡಿ ಹೋದ ಕ್ರೀಡೆಯನ್ನು |
ಘಳಿಗೆ ತಾಸಿನಲ್ಲಿ ನಾನು ಹೇಳಲಾರೆನು |
ಅಳಿದು ಬಿಟ್ಟ ಕಾಯಾ ಉಳಿಸಿದನು ಕೀರ್ತಿಯನು ||

||ಏರು||

ಸುಜನರಿಗೆ ಆಶ್ರೀತಾ ಧರೆಗೆ ತವರ ಮನೆಯಾಗಿ |
ಉಪಕಾರ ಮಾಡಿದನು ಸಾಗಿ |
ಭವದಲ್ಲಿ ಜನಿಸಿ ಬಂದ್ನಲ್ಲ ಸಾರ್ಥಕನಾಗಿ |
ಮಹಾಪುರುಷ ಪ್ರಪಂಚಕ ಯೋಗಿ |
ಲಿಂಗೇಂದ್ರನಲ್ಲ ದೇವೇಂದ್ರ ಕರುಣಕನಾಗಿ |
ಕಣ್ಣಾರೆ ಜಗಕೆ ತೋರಿಯಡಗಿ |
ಸತಿ ಸುತ ಸುಖಮಾತ್ರ ಅತಿ ಮಾತ್ರ ಕಾಣಲಿಲ್ಲ
ಪಾರಮಾರ್ಥದಲ್ಲಿ ಹೊತ್ತು ಕಳೆದು ಬಿಟ್ಟಾನು |
ಯೋಗ್ಯ ಸ್ಥಾನ ನೋಡಿ ದಾನವನ್ನು ಕೊಡುತ್ತಿದ್ದನು |
ಭಾಗ್ಯದಾಶೆಯಿಲ್ಲ ದೂರದೃಷ್ಟಿ ಲಿಂಗಭೂಪನು |
ಹತ್ತೊಂಬತ್ತು ನೂರಾ ಆರು ಆಗಸ್ಟ ಇಪ್ಪತ್ತು ಮೂರು
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನಾದ ಲಿಂಗಭೂಪ ಸಿರಸಂಗೀಶನು || ೯ ||

ಭಾಗೀರಥಿ ಬಾಯಿಯವರು ಮಹಾಪತಿವ್ರತೆಯರು
ನಿತ್ಯ ಪುರುಷನ ಪಾದ ತೊಳೆದು ನೀರು ಕುಡಿಯುವರು |
ಪತಿಯ ಎಂಜಲಿಲ್ಲದ ವಿನಃ ಉಗುಳು ಸಹ ನುಂಗರು |
ಪತಿಯ ಮುಂದೆ ದೇಹವನ್ನು ತ್ಯಾಗಮಾಡಿದರು |
ಸೀತಾ ಮಂಡೋದರಿ ಅರುಂಧತಿ ದ್ರೌಪತಿ
ಪ್ರೀತಿಯಿಂದ ಇವರಲ್ಲಿ ವಾಸ ಮಾಡಿದರು |
ಅಹಿರಸಂಗ ತಿಮ್ಮನಗೌಡ ಇವರ ಅಗ್ರಜರು ||

ಅವರಸಂಗ ಬಾಯಿಯವರು ದೈವದಿಂದ
ಗರ್ಭಿಣಿಯಾಗಿ ಸಿರಸಂಗಿಯ ಸ್ಥಾನಾಂತರಾಗಲೆಂದರು |
ವಿಜಾಪುರದಲ್ಲಿ ಪ್ರಸವದ ಕಾಲ ನಿಶ್ಚಯಿಸಿದರು |
ವಿಧಿಯು ಎತ್ತ ಹೋಗಲು ಬೆನ್ನು ಹತ್ತುವದ್ಯಾರು ಕಂಡಾರು |
ತಿಕ್ಕೋಟಿ ಉಕ್ಕಲಿಗೌಡಾ ಇಂಗಳೇಶ್ವರ ರಾಯನಗೌಡಾ
ಇಂಡಿ ಗುರಪ್ಪನವರು ತಂದಾರು |
ಸಕ್ತ ಅವ್ವನವರ ಸರ್ಬಾರೆಯನ್ನು ಸ್ವಂತ ಮಾಡಿದರು ||

ಐಶ್ವರ್ಯೇನು ಹೇಳುವುದು ಈಶ್ವರಿತ್ತ ಧನಿಕತನಾ
ಅಶ್ವವಾಹನೀಗಳೆಲ್ಲಾ ಸಂಗಡಿದ್ದರು |
ದಾಸೀ ದಾಸರೇಸು ಮಂಡಿ ಪಾಕ ಸಾಧನೀಕರು |
ಶಹಾಪೂರ ಪೇಟೆಯಲ್ಲಿ ಮನೆಯ ಬಾಡಗಿ ಹಿಡಿದರು |
ನೂರಾರು ಜನಕ್ಕಿಂತ ಹೆಚ್ಚಿತ್ತು ಸರಬರಾಯ
ವಿಜಾಪುರದಲ್ಲಿ ಭರದಿವಾಸ ಮಾಡಿದರು |
ಸರ್ವಜನರಿಗೆಲ್ಲ ಗೊತ್ತಿದ್ದದ್ದು ಯಾರು ಅರಿದವರು ||

ಅಪ್ಪಾ ಸಾಹೇಬ ದೊರೆಗಳವರು ಎಪ್ಪತ್ತು ಸಾವಿರ
ನೋಟ ತಪ್ಪದಿಂದ ತೆಗೆದುಕೊಂಡು ಸ್ವಂತ ಬಂದಾರು |
ಪುತ್ರೋತ್ಸವಕ್ಕೆ ಖರ್ಚಿಗವರು ಸಿದ್ಧವಾದರು |
ದಾಸೋಗಿಟ್ಟಂತೆ ವನದಲ್ಲಿ ಧರ್ಮರಾಯರು |
ಕರ್ಪುರಂಥ ದೊರೆಯ ಮುಖ ಕಪ್ಪಾಗು ಕಾಲಕ್ಕೆ
ಎದ್ದು ಬಂದಲ್ಹದ್ದು ಬಡಿದು ಖಿನ್ನವಾದರು |
ಸತಿಯ ಚಿಂತೆಯಿಂದ ಭ್ರಾಂತರಾಗಿ ಆಶೆನಳಿದರು ||

ಭಾಗೀರಥಿಬಾಯಿಯರಿಗೆ ಆಗಿತ್ತೆಂಟು ತಿಂಗಳ ಗರ್ಭಿ
ಶನಿ ಹನ್ನೊಂದು ಸ್ಥಾನಕ್ಕೈದನು |
ಆಗ ನೇತ್ರ ಧೂತರನ್ನು ಕಳಿಸಿ ಕರಿದು ವೈದನು |
ಭೋಗ ಏನ ಹೇಳಲಯ್ಯೋ ಬ್ರಹ್ಮ ಹಾಗೆ ಬರೆದಾನು |
ಹುಟ್ಟಿದಾರಭ್ಯದಿಂದ ಕಟ್ಟಕಡೆಯಾಗುತನಕಾ
ಕಷ್ಟದಲ್ಲಿ ಕಾಲಕಳೆದು ಖ್ಯಾತಿ ಹೊಂದಿದನು |
ಸೌಖ್ಯವಿದ್ದರೆಷ್ಟು ಕೀರ್ತಿ ಘಳಿಸುವಾ ಹೇಳಲಾರೆನು ||

ವೀರಶೈವ ಸಂಘಕ್ಕೆಲ್ಲ ಗುಂಪು
ಕೊಡಲಿಕ್ಕೆ ವ್ಯಾಪಾರ ಮಾರ್ಗವೆಂದು ತಿಳಿದಿದ್ದರು |
ಬಹು ಜನರೆಲ್ಲಾ ಆಗಲೆಂದಾ ಶೇರದಾರರು |
ಈ ಸಂಪರ್ಕದಿಂದ ಪ್ರೀತಿ ಹೆಚ್ಚಲೆಂದಾರು |
ದೊಡ್ಡ ದೊಡ್ಡ ಗ್ರಾಮಕ್ಕೊಂದು ಅಂಗಡಿಯ ಸ್ಥಾಪಿಸಿ
ದೊಡ್ಡದೊಂದು ಕಂಪನಿ ಕಲ್ಪಿಸಿದರು |
ಸದಾಕಾಲದಲ್ಲಿ ಚಿಂತಿಸುತ್ತ ಕುಳಿತಿದ್ದರು ||
ಕಲ್ಪಿಸಿದ ಹೇತುವನ್ನು ಸ್ವಲ್ಪಕಾಲದಲ್ಲಿ ತಾನು
ಬಲ್ವಜನರ ಕೂಡಿಕೊಂಡು ಸ್ಥಾಪಿಸಿದನು |
ಬೆನಕನಕೊಪ್ಪ ಬಾಪುಗೌಡ ಹೊಂಗಲ ಹವಾಲದಾರನು |
ಶೇಗುಣಿಸಿ ಭೀಮನಗೌಡ ತಾಳಿಕೋಟಿ ಗುರಪ್ಪಣ್ಣಾ
ಏಳು ಮಂದಿ ತುರ್ತ ಶೇರ ಹಾಕಿಸಿಟ್ಟಾನು |
ವಿಜಾಪುರದ ಅಂಗಡಿ ಪ್ರಥಮದಲ್ಲಿ ಸುರುವು ಮಾಡಿದನು ||

||ಏರು||

ವಿಜಾಪುರದಲ್ಲಿ ಏಳೂರ ಗೌಡರ ಅಂಗಡಿ |
ಇಟ್ಟಾನ ಇವರನ್ನೆಲ್ಲ ಕೂಡಿ |
ಕಂಪನಿ ತೆಗೆದ ಮಹಾಜ್ಞಾನಿ ಪಾಯಾಹಾಕಿ ನೋಡಿ |
ಬರಲಿಲ್ಲ ಮಾತು ಕೈಗೂಡಿ |
ಅಷ್ಟರೊಳಗೆ ಆಯ್ತು ನೋಡು ಬೆಳಗ ಶಿವನ ಪಾದ ಕೂಡಿ |
ಕಂಪನಿ ಆಯ್ತು ಅಡತಿ ಅಂಗಡಿ ||

ತುರ್ತುಕಡಿಮೆ ಬಿದ್ದರಕಮು ಭರ್ತಿ ಮಾಡತೀನಿ ಅಂತಾ
ಶರ್ತಿನಿಂದ ಸುರುವಾತ ಮಾಡಿದ್ದನು |
ಸಿದ್ದಿಗ್ಹೋಗಲಿಲ್ಲ ನಟ್ಟು ನಡುವೆ ಕೈಬಿಟ್ಟನು |
ಹತ್ತೊಂಬತ್ತು ನೂರಾ ಆರು ಅಗಷ್ಟ ಇಪ್ಪತ್ತು ಮೂರು
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನಾದ ಲಿಂಗಭೂಪ ಸಿರಸಂಗೀಶನು || ೧೦ ||

ಬೆಳ್ಳೇರಿ ವಸೂಲಿಗಾಗಿ ಏಳು ದಿವಸ ಹೋಗಿ ನಿಂತ
ಕಾಳಬಂದು ಒದಗಿತಯ್ಯಾ ಊಟದಲ್ಲಿ |
ಅನ್ನ ಜೀರ್ಣವಾಗಲಿಲ್ಲ ಹೊಟ್ಟೆಯುಬ್ಬತಲಿ |
ಕೈಕಾಲು ತಲೆಶೂಲಿ ಹಾಕಿ ಮಲಗುತಲಿ |
ನಳಿನಳಿ ಅಂತಾ ತಿರುಗಿ ಬಳಲುತ ಬಂದಾರು
ತಿಂಗತಿಂಗಳಲ್ಲಿ ಬೇನೆ ಹೆಚ್ಚುತಲಿ |
ಕ್ಷಯರೋಗವಾಗಿ ಮಾಯ ಬಲಿ ಒದಗುತಲಿ ||

ದೇಶಿವೈದ್ಯರಿಂದ ಬೇನೆ ವಾಸಿಯಾಗಲಿಲ್ಲಾ
ಗೋವೆಯ ಡಾಕ್ಟರರಿಂದಾ ಕಷಾಯ ತೆಗೆದುಕೊಂಡಾರು |
ಮಿರ್ಜಿ ಜಮಖಂಡಿ ವೈದ್ಯರು ನಿಲುವ ನಿಂತರು |
ನಿತ್ಯ ನಿತ್ಯ ಬೇನೆ ಹಚ್ಚಿ ಕೃಶವಾದರು |
ಅಕ್ಟೋಬರ ತಿಂಗಳಿಂದಾ ಅಗಸ್ಟ ತಿಂಗಳತನಕಾ
ಹದಿನೈದು ತಿಂಗಳ ಬೇನೆ ತಾಳಿಕೊಂಡರು |
ವಾಂತಿ ಶೌಚಾದಿ ಕ್ಷೀಣವಾಗಿ ಧೈರ್ಯಗುಂದಿದರು ||

ಬೇನೆಯ ಸ್ವರೂಪವನ್ನು ತಿಳಿದುಕೊಂಡು
ಅಂತ್ಯಕಾಲ ಒದಗಿತೆಂದು ಮರಣ ಪತ್ರ ಬರೆದು ಇಟ್ಟಾರು |
ಸಾವು ಎರಡು ತಿಂಗಳಿರತ ಬರಹ ಸುರುವು ಮಾಡಿದರು |
ಮೃತ್ಯು ಪತ್ರ ಬರೆದು ಪೆಟ್ಟಿಗೆಯಲ್ಲಿ ಮುದ್ರೆ ಹಾಕಿದರು |
ಬೆಳಗಾಂವಿ ಅಧಿಕಾರಿಯಾದ ಕಲೆಕ್ಟರರ ಸ್ವಾಧೀನಕ್ಕೆ
ಸ್ವತಃ ಹೋಗಿ ಪೆಟ್ಟಿಗೆ ಕೊಟ್ಟು ಬಂದಾರು |
ಸ್ಥಾನಾಂತರ ಆಗಲಿಕ್ಕೆ ಬೆಳಗಾಂವಿ ಬಿಟ್ಟರು ||
ನವಲಗುಂದದಲ್ಲಿ ಹೋಗಿ ಒಂದು ತಿಂಗಳಿದ್ದರಯ್ಯಾ
ಕೆರಿಗಾಗಿ ರೈತರ ಭೂಮಿ ತಕ್ಕೊಂಡಿದ್ದರು |
ಅಲ್ಲಿ ಕರಿಸಿ ಇಚ್ಛಾ ಜಮೀನವನ್ನು ಕೊಟ್ಟು ಬಿಟ್ಟರು |
ಪುರವಣಿ ಉಯಿಲ್ ಒಂದು ಬರೆದು ಮೃತ್ಯು ಪತ್ರ ಮುಗಿಸಿದರು |
ರಾವಸಾಹೇಬ ದೇವಣಾರ್ಯ ನವಲಗುಂದ ಸುಭೇದಾರ
ಅಂತಕಾಲದಲ್ಲಿ ಅವರ ಹತ್ತರಿದ್ದರು |
ಟ್ರೇಝರಿ ಕೀಲಿಯನ್ನು ಅವರ ಸ್ವಾಧೀನಕ್ಕೆ ಕೊಟ್ಟರು ||

ಮರಣ ಕಾಲದಲ್ಲಿ ತಾನು ಕರಿಸಿಕೊಂಡನು
ಪ್ರಿಯಮಿತ್ರ ರಾವಬಹಾದ್ದೂರ ಅರಟಾಳ ಸಾಹೇಬರನ್ನು |
ನವಲಗುಂದ ಸುಭೇದಾರ ಸಿದ್ದಪ್ಪಣ್ಣನನ್ನು |
ರಾಯನಗೌಡ ಪಾಟೀಲ ಇಂಗಳೇಶ್ವರ ಹತ್ತರಿದ್ದಾನು |
ಚೌತಿ ಗುರುವಾರ ದಿವಸ ಐದುಗಳಗಿ ಹೊತ್ತು
ಏರಿ ಸ್ವರ್ಗ ಸೋಪಾನ ಕಣ್ಣು ತೆರೆದು ನೋಡಿದನು |
ಹರನ ಸ್ಮರಣೆಯಿಂದಾ ಮೇಲಕ್ಕೇರಿ ಮಾಯವಾದನು ||

ತಾರಿನಿಂದ ಮರಣವಾರ್ತೆ ಸಂಸ್ಥಾನಕ್ಕೆಲ್ಲಾ ತಿಳಿಸಿ
ದಿಕ್ಕದಿಗಂತಕೆಲ್ಲಾ ಹರಿಸಿಬಿಟ್ಟರು |
ಪಾಹರೆ ಮಾಂಡಲಿಕ ರಾಜರೆಲ್ಲಾ ಬಂದು ಮಾಡಿದರು |
ಮುಂಬಯಿ ಕನ್ಯಾಕುಮಾರಿ ಜನರು ಹೌಹಾರಿದರು |
ವ್ಯಾಪಾರ ಕಚೇರಿಯಲ್ಲಾ ಬಂದ ಮಾಡಿ ದುಃಖದಲ್ಲಿ
ಸರ್ವ ಜನಾಂಗ ಮುಳುಮುಳುಗಿ ಎದ್ದಾರು |
ದೇವರನ್ಯಾಯ ಮಾಡಿದ್ದಕ್ಕೆ ಯಾರೇನು ಮಾಡ್ಯಾರು ||

||ಏರು||

ನವಲಗುಂದ ಸುಭೇದಾರ ಬಂದು ಪ್ರೇತಯೆರಿಸಿದಾ |
ಪೂರ್ವಜನರ ಕೂಡ ಕಲಿಸಿದಾ |
ದಾನ ಧರ್ಮ ಜಾತಿಯ ಕರ್ಮ ಪ್ರಕಾರ ಮಾಡಿದಾ |
ದ್ವಿಸಹಸ್ರ ಖರ್ಚಿಗಿಟ್ಟಿದ್ದಾ |
ಸಾಯುವ ಮುಂದ ಅಳುವದ ಬಂದ ಮಾಡಿ ತಾ ಹೋದಾ |
ಶಿವನಾಮ ಸ್ಮರಿಸಿ ದೇಹ ಒಗೆದಾ ||

ಶರಣನಾದ ಲಿಂಗದೊರೆಯು ಮರಣ ಪತ್ರದಲ್ಲಿ
ತನ್ನ ಜನ್ಮ ಗೃಹದಲ್ಲೊಬ್ಬನನ್ನು ದತ್ತಕ ಮಗನು |
ಮಾಡಿಕೊಂಡನೆಂಬ ಸಂಶಯ ಸೇರಿ ಸರ್ವರನ್ನು |
ಅಂತ ತಿಳಿಯಲಾರದಾತ ಲೇಖಿ ಬರೆದು ಇಟ್ಟಾನು |
ಹತ್ತೊಂಭತ್ತು ನೂರಾ ಆರು ಅಗಸ್ಟ ಇಪ್ಪತ್ತು ಮೂರು
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನಾದ ಲಿಂಗಭೂಪ ಸಿರಸಂಗೀಶನು || ೧೧ ||

ದೇಹ ಸ್ಥಾಪನೆಯಾದ ಮೇಲೆ ಮೃತ್ಯು ಪತ್ರ ಮುದ್ರಿಸುವದಕೆ
ಹಿತದ ಜನರು ಜಿಲ್ಹೆಯಲ್ಲಿ ಹೋಗಿ ನಿಂತರು |
ಉಯಿಲ್ ಮಹಿಮ ತಿಳಿದುಕೊಳ್ಳಲಿಕ್ಕೆ ಹಂಗು ದೊರಿದರು |
ರಾವಬಹದ್ದೂರವರು ಅರ್ಜಿಕೊಟ್ಟು ಪೆಟ್ಟಿಗೆ ತೆಗಿಸಿದರು |
ಮೆಹರ್ಬಾನ ಕಲೆಕ್ಟರವರು ಮೊಹರು ಒಡೆದು ನೋಡಿದರು |
ಮಹಾರಾಷ್ಟ್ರ ಭಾಷೆಯಲ್ಲಿ ಬರೆದಿದ್ದರು
ದೇವ ಬರಹವನ್ನು ರಜಿಸ್ಟರ ಮಾಡಿಸಿದರು ||

ಹಿಂದಕ್ಕೆ ದ್ವಾಪಾರದಲ್ಲಿ ಗಾಂಧಾರಿ ಗರ್ಭದೊಳಗೊಂದು
ಕುಂಭದಲ್ಲಿ ನೂರಾವೊಂದು ಮಕ್ಕಳಿದ್ದರು |
ಬ್ರಹ್ಮನಂದನ ನಾರದ ಸ್ತ್ರೀರೂಪವಾದನು |
ಕೃಷ್ಣನಿಂದಾ ಆಗಿ ಅರವತ್ತು ಸಂವತ್ಸರು |
ಎಂದು ನಾವು ಕಥೆಯನ್ನು ಇಂದಿನವರೆಗೆ ಕೇಳುವೆವು |
ಪ್ರತ್ಯಕ್ಷವಾಗಿ ಕಂಡಿಲ್ಲ್ಯಾರ‍್ಯಾರು |
ಇದು ಒಂದೇ ನೋಡಿದೆವು ಎಂಥಾ ಮಹಾತ್ಮರು ||

ಶ್ರೇಷ್ಠನಾದ ಲಿಂಗಭೂಪನ ಹೊಟ್ಟೆಯೊಳಗಿನ ಕುವರರನ್ನು
ಹಸ್ತದಿಂದಾ ತೆಗೆದು ದಸ್ತಿನಲ್ಲಿ ಇಟ್ಟರು |
ಜಿಲ್ಲಾ ಅಧ್ಯಕ್ಷ ಒಡೆದು ನೋಡಿ ಘಾಬರ‍್ಯಾದರು |
ಮುವತ್ತೈದು ಲಕ್ಷ ಕುವರರನ್ನು ಹೆತ್ತಿದ್ದರು |
ಇಷ್ಟೇ ಅಲ್ಲ ಲಿಂಗಿಗಳು ಸೃಷ್ಟಿಯೊಳಗೆ ಹುಟ್ಟುವವರು |
ಭಂಟ ರಾಜಗ ಆಗುವವರು ನಂದನರು |
ಇಂಥಾ ಲೇಖವನ್ನು ಬರೆದಿದ್ದಿಲ್ಲ ಹಿಂದೆ ಯಾರ‍್ಯಾರು ||

ದಕ್ಷವಾದ ಮಾತು ಈಗ ಪಕ್ಷವಿಲ್ಲದೆ ಹೇಳುವೆನು
ಲಕ್ಷಕೊಟ್ಟು ಕೇಳಿರೀ ಸಭೀಕರು |
ಲಕ್ಷಕ ಲಕ್ಷ ಕೊಟ್ಟರೂ ಸಿಗರಿಂಥಾ ಮಹನೀಯರು |
ವೈಭವ ಭಿಕ್ಷಾ ಕೊಟ್ಟಿದ್ದನ್ನು ಯಾರು ಕೇಳಿರುವರು |
ಸಾಕ್ಷಾತ ಪರಶಿವನು ಅರ್ಧಾಲಕ್ಷ ಉತ್ಪನ್ನ ಭೂಮಿ
ಪಕ್ಷವಿಲ್ಲದೆ ತಾವು ಭಿಕ್ಷಾ ಕೊಟ್ಟರು |
ವಿದ್ಯಾ ಲಕ್ಷಕೊಟ್ಟು ಕಲಿತು ಹೇಳಿರಾತನ ಹೆಸರು ||

ಮೃತ್ಯು ಪತ್ರ ಮಹಿಮೆಯನ್ನು ಸತ್ಯ ನಾನು ಹೇಳುವೆನು
ಪಂಚರೇಳು ಜನರನ್ನು ನೇಮಿಸಿದರು |
ರಾವ ಬಹದ್ದೂರರಟಾಳ ದೊರಿ ಹಿರಿಯವರು |
ರಾವಸಾಹೇಬ ರೇವಣಾರ್ಯ, ಘಾಳಿಯವರು |
ಬೀ.ಪ. ರೇಣಾಪುರ ಮತ್ತು ತಿಕ್ಕೋಟಿಯ ತಿಮ್ಮನಗೌಡರು
ಇಂಗಳೇಶ್ವರ ರಾಯನಗೌಡ ಅಣ್ಣನವರು |
ಅತಿ ಸಂಭಾವಿತ ಉಕ್ಕಲಿಯ ಭೀಮರಾಯರು ||

ಬುದ್ಧಿವಂತರೇಳು ಜನರು ಮುದ್ದಿಯಾಗಿ ವಿಚಾರಿಸಿ
ಅಧ್ಯಕ್ಷ ಬೆಳಗಾಂವಿ ಜಿಲ್ಹೆ ಕಲೆಕ್ಟರರು |
ಸಿದ್ಧ ಮಾಡಿದಂಥ ಮಾತಿಗಿವರು ತುತ್ತ ಕೊಡುವವರು |
ಕಾರಭಾರಿಯನ್ನು ಪಂಚರಿಂದ ನೇಮಿಸುವರು |
ನೌಕರ ಚಾಕರ ಖರ್ಚು ಹಕ್ಕು ಬಾಬು ಹೋಗಲಾಗಿ
ಶಿಲ್ಕು ಉಳಿದ ದುಡ್ಡನ್ನೆಲ್ಲ ಕೂಡಿ ಇಡುವರು |
ವರ್ಷ ಅಂತ್ಯದಲ್ಲಿ ಲಿಂಗಾಯತ ಫಂಡಿಗೆ ಕೊಡುವರು ||

||ಏರು||

ತನ್ನ ಬಂಧು ಬಳಗದವರಿಗೊಂದು ಕೊಟ್ಟ ಅರಲಕ್ಷ |
ಉಳಿದದ್ದು ಎಲ್ಲಾ ನೀಡಿ ಭಿಕ್ಷಾ |
ಮನದಲ್ಲಿ ಇದ್ದ ಮಾತು ಕೈಲೆ ಬರೆದ ನವದಕ್ಷಾ |
ವಿದ್ಯೆ ಹೆಚ್ಚಲೆಂಬ ಅಪೇಕ್ಷಾ |
ಕಲ್ಯಾಣ ಕಲಿತ ಪಾಷಾಣದಂತೆ ಇವರ ಕುಕ್ಷ |
ಶಿವನಿಂದ ತಾ ಪಡೆದ ತಾ ಮೋಕ್ಷ ||

ಶ್ರೀಮಂತ ಸತಿಯಳಾದ ಸುಂದ್ರಾಬಾಯಿ ಸಾಹೇಬರಿಗೆ
ಮಹಿನಾ ನೂರು ರೂಪಾಯಿ ಪೋಟಿಗಿಟ್ಟಾನು |
ಸಂಸ್ಥಾನದಿಂದ ನೇಮಿಸಿದ ರಕ್ಷಕರನ್ನು |
ಯಾತ್ರೆ ಖರ್ಚಿಗಾಗಿ ಹಣವನು ಮಂಜೂರಿಟ್ಟನು |
ಹತ್ತೊಂಭತ್ತು ನೂರಾ ಆರು ಅಗಸ್ಟ ಇಪ್ಪತ್ತುಮೂರು
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನನಾದ ಲಿಂಗಭೂಪ ಸಿರಸಂಗೀಶನು || ೧೨ ||

ದೇಶಗತ ಮನೆತನದ ವಂಶದವನು ಅಲ್ಲಿ ನಾನು
ಬೇಸಾಯ ನಂದನನು ದತ್ತಕಾದೇನು |
ಖಾಸ ಹೊಟ್ಟೇ ಮಕ್ಕಳಿಲ್ಲ ಒಂದೇ ಕುಟುಂಬ ನಾನು
ದೇಶ ರೂಢಿಯಂತೆ ದತ್ತಕ ಮಗನ ಆಸೆ ಬಿಟ್ಟೆನು |
ಹಿಂದೆ ಉಳಿದ ಕುಟುಂಬಕ್ಕೆ ನಂದನರ ಕೊಳ್ಳಲಿಕ್ಕೆ
ಬಂದ ಮಾಡಿ ಅಧಿಕಾರ ತೆಗೆದು ಹಾಕಿದೆನು |
ಸಾಯುವ ಮುಂದ ಹೇಳಿದನೆಂದು ನೊಂದಕೊಂಡರೆ ಸುಳ್ಳದೇನು ||

ಒಂಭತ್ತು ತಿಂಗಳದೊಳಗೆ ಶಂಭುವಿನ ದಯದಿ
ಕುಟುಂಬದಲ್ಲಿ ಗಂಡು ಮಗು ಎನಗೆ ಜನಿಸಿದಲ್ಲಿ |
ಐದು ವರ್ಷ ತನಕಾ ಕುಟುಂಬ ತಾಬೇದಲ್ಲಿ
ನಂತರಧ್ಯಕ್ಷ ಕೊಳ್ಳಿ ತನ್ನ ಸ್ವಾಧೀನದಲ್ಲಿ |
ಬುದ್ಧಿವಂತ ಕೊಂಕಣಿಯ ಬ್ರಾಹ್ಮಣನ
ಶಿಕ್ಷಣೇಯ ಕನ್ನಡ ಮರಾಠಿ ಕಲಿಯುತಲಿ |
ತೇರ್ಗಡೆಯಾಗುತನಕಾ ಇಂಗ್ಲೀಷ ವಿದ್ಯೆಯಲ್ಲಿ ||

ಹಿಂದುಸ್ತಾನದಲ್ಲಿ ಬೇಕಾದ್ದೊಂದು ಭಾಗದಲ್ಲಿ |
ಇಟ್ಟು ಕಂದನಿಗೆ ಕೊಡಲೆಂದು ಶಿಕ್ಷಣೆಯನ್ನು
ಧರ್ಮರೀತಿಯಂತೆ ಅನ್ನೋದಕ ವ್ಯವಸ್ಥೆಯನ್ನು |
ಜಿಲ್ಹಾಧೀಶ ಮಾಡಲೀ ಅಪೇಕ್ಷೆಯನ್ನು |
ದೇಶಾಂತರಕ್ಕೆ ವಿದ್ಯಾಭ್ಯಾಸಗೋಸ್ಕರವಾಗಿ
ಏಸು ಕಾಲದಿ ಕಳಿಸಬಾರದೆಂದೆನು |
ಸುಜ್ಞಾನನೆಂದಮೇಲೆ ಮದುವೆಯನ್ನು ಮಾಡಲೆಂದನು ||

ಹಿಂದಿನ ಶರೀರ ಸಂಬಂಧಗಳಿಂಗೇಶ್ವರ
ತಿಕ್ಕೋಟಿ ಉಕ್ಕಲಿ ಗ್ರಾಮೀಣಿಯರನ್ನು |
ಕೇಳಿ ಕಂದನಿಗೆ ತೆಗೆಯುವುದು ಕನ್ಯೆಯನ್ನು
ಅವರ ಮರ್ಜಿಯಂತೆ ಮಾಡಿರೆಂದೆ ಲಗ್ನವನ್ನು |
ಸುಜ್ಞಾನ ಮೇಲೆ ಮೇಲೆ ಸಂಸ್ಥಾನನಾಳುವಂಥ
ಸುಜ್ಞಾನಾದರೆ ತಾಬೆ ಕೊಡಲೆಂದನು |
ಲಿಂಗವಂತ ಫಂಡಿಗಾಗಿ ಕೊಟ್ಟು ಶಿಲ್ಕು ಹಣವನ್ನು ||

ಪುತ್ರಿಯಳು ಹುಟ್ಟಲು ಅವಳ ಆಪ್ತರ ಸಮ್ಮತಿಯಂತೆ
ಜ್ಯಾತಿಯಲ್ಲಿ ವಿದ್ಯಾವಂತ ವರವನ್ನು |
ನೋಡಿ ಐದು ಸಾವಿರುತ್ಪನ್ನ ವೃತ್ತಿಯನ್ನು |
ನೀಡಿ ಲಗ್ನಮಾಡಿ ಕೊಡಿರೆಂದು ಅವಳನ್ನು |
ತನುಜೆಯಳ ಉದರದಲ್ಲಿ ಜನಿಸಿದಂಥ ಕುವರನನ್ನು
ದೇಶಗತಕೊಡೆಯನನ್ನು ಮಾಡಿದರೆಂದೆನು |
ಸಜ್ಞಾನಾಗುತನಕಾ ಶಿಲ್ಕು ಹಣ ಫಂಡಿಗಿಟ್ಟೇನು ||

||ಏರು||

ಕುವರೀ ಕುವರ ಕೂಡಿ ಜನಿಸಿದರ ಕುವರ ಮಾಲಕನು |
ಮಗಳಿಗೆ ಕೊಟ್ಟ ವೃತ್ತಿಯನು |
ಆ ಪುತ್ರನಾಗಲು ಪುತ್ರ ದತ್ತ ದತ್ತಕ ಮಗಳ ಮಗನು |
ಸಂಸ್ಥಾನಕ್ಕೆ ಒಡೆಯನು |
ಮಗಳ ವಂಶ ಆದರೆ ನಷ್ಟಾಂಶ ಮಗನು ಮಾಲಕನು |
ಹೀಗಿರುವದಯ್ಯ ಸ್ವಮನು |
ಸಂಸ್ಥಾನದಲ್ಲಿ ನಿಶ್ಚಿಂತರಾಗಿ ಉಣ್ಣುವಂಥ ಪೋಟ
ಇನಾಮದಾರರನೇಕರನ್ನು |
ಅವರ ಸನದ ನೋಡಿ ನಡಿಸಲೆಂದೆ ವತನಿಯನು |
ಹೆಚ್ಚಗಿರುವಂಥಾ ಸಾಮಾನೆಲ್ಲಾ ಮಾರಲೆಂದನು |
ಹತ್ತೊಂಭತ್ತು ನೂರಾ ಆರು ಅಗಷ್ಟ ಇಪ್ಪತ್ತು ಮೂರು
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನನಾದ ಲಿಂಗಭೂಪ ಸಿರಸಂಗೀಶನು || ೧೩ ||

ಸಿರಸಂಗಿ ಸವದತ್ತಿ ಮತ್ತು ನವಲಗುಂದ ವಾಡೆಗಳನು
ದುರಸ್ತ ಇಟ್ಟು ಉಳಿದ ಜಾಗಾ ಮಾರಲೆಂದನು |
ಬೆಳಗಾಂವಿ ಬಂಗಲೆಕ್ಕ ಇಟ್ಟು ಒಂದು ಆಳನ್ನು |
ತಿಂಗಳಾ ಹನ್ನೆರಡು ರೂಪಾಯಿ ಕೊಟ್ಟು ಪಗಾರವನ್ನು |
ಕನ್ನೂಲ ಮಾಧುಬಾಯೆನಗೆ ಖರ್ಚಿಗಾಗಿ ಕೊಟ್ಟ
ಹಣವು ಬಿನ್ ಜಿಖೇರಿಯಿಂದ ಮುಟ್ಟಿಸೆಂದನು |
ಅವನಿಗೆ ಎರಡು ಸಾವಿರ ರೂಪಾಯಿ ಬಕ್ಷೀಸವನ್ನು ||

ಸೋದರಳಿಯನಾದ ಅಂಣು ಬಸವಂತ ಇವರಿಗೆ
ಮೊದಲಿನಿಂದ ವಿದ್ಯೆಯನ್ನು ನಾನು ಕಲಿಸಿಹೆನು |
ಅವರು ಬಿ.ಎ. ಆಗುವತನಕಾ ಕೊಟ್ಟು ಆದ ಖರ್ಚನ್ನು |
ಅವರ ಲಗ್ನಕ್ಕೆ ನಾಲ್ಕು ಸಾವಿರ ರೂಪಾಯಿಯನ್ನು |
ಬ್ರಾಹ್ಮಣ ಕಾರಕೂನರನ್ನು ಕಡಿಮೆ ಮಾಡಿ
ಪಂಚರಿಂದಾ ನೂರು ರೂಪಾಯಿಯ ಕಾರಬಾರಿಯನ್ನು
ನೇಮಿಸಿದ್ದಂತೆ ನಡಿಸಲೆಂದೆ ಸಂಸ್ಥಾನ ||

ತಿಕೋಟಿ ಗಂಗವ್ವಮ್ಮಾ ಅನೇಕ ವರ್ಷ ನನ್ನಲ್ಲಿದ್ದು
ಬೇನೆಯಲ್ಲಿ ಸಕ್ತ ಸಂರಕ್ಷಣೆಯನ್ನು |
ಮಾಡಿದರಾದ ಕಾರಣವರಿಗೆ ಸ್ತ್ರೀಧನವನ್ನು |
ಮೊದಲು ಕೊಟ್ಟ ಬಂಗಾರವವರಿಗೆ ಬಿಟ್ಟು ಬಿಟ್ಟೆನು |
ಜೀವಂತ ಇರುವತನಕಾ ತಿಂಗಳ ಎಂಟು ರೂಪಾಯಿ
ಇದ್ದಲ್ಲಿ ಮುಟ್ಟಿಸೆಂದು ಬರೆದಿಹೆನು |
ಬಸಮ್ಮನಿಗೆ ತಾಹಾತಾರು ರೂಪಾಯಿಯನ್ನು ||

ಸಿಗ್ಲಿ ಮುದಿಯಪ್ಪನಿಗೆ ಸಾಲಪಟ್ಟಿ ಕಮತಮನಿ
ನಾಲ್ಕು ಎತ್ತು ಸಾಮಾನು ಕೊಟ್ಟಿರುವೆನು |
ಇಲ್ಲಿ ಬಿನ್ ಪಗಾರದಿಂದ ಕಮತಾಮಾಡಿಸಿರುವನು |
ಕರಿಬಸವ ತನುಜಾ ಸಿಗ್ಲಿ ಮಲ್ಲಪ್ಪಗಿನ್ನು |
ಹುಟ್ಟಿನಿಂದಾ ರಕ್ಷಿಸೇನಿ ಕೊಟ್ಟು ಬಿಟ್ಟೆ ವಿಜಾಪುರ
ಇಟ್ಟ ಅಂಗಡಿಯ ಪಾಲವಿದ್ದದ್ದನ್ನು |
ಇವನ ತಂದೆಗಿತ್ತ ಐದು ಸಾವಿರ ರೂಪಾಯಿಯನ್ನು ||

||ಏರು||

ಹೊಟ್ಟೆಯ ಮಗನು ಹುಟ್ಟದಿದ್ದರಿದನು ಕೊಟ್ಟೆ ದಾನವನು |
ಪಂಚರಿಂದ ಸಾಗಿ ಸಂಸ್ಥಾನು |
ಹೀಗೆ ಬರೆದು ತಿಳಿದನವರಿದು ಲಿಂಗಭೂಪನು |
ತಲೆ ಶುದ್ಧವಿತ್ತು ಕೇಳಿನ್ನು ಜಗದಲ್ಲಿ
ದಾನಕೊಡುವಲ್ಲಿ ಸಿಗನು ಇಂಥವನು |
ಪಾಲಿಸಿದ ಹತ್ತು ಪುರವನ್ನು ||

ಅಂಬೆಯ ತೊಡೆಯ ತಲೆಗಿಂಬು ಮಾಡಿಕೊಂಡ ದೇವಾ
ಅಂಬುಜಾಕ್ಷ ನೀಯಲೆಂದೆ ಮೋಕ್ಷವನು |
ಸಾಂಬ ರಹಿತ ಮಾಡಲೆಂದೆ ಜರಾಮರಣವನು |
ಹತ್ತೊಂಭತ್ತು ನೂರಾ ಆರು ಅಗಷ್ಟ ಇಪ್ಪತ್ತು ಮೂರು
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನನಾದ ಲಿಂಗಭೂಪ ಸಿರಸಂಗೀಶನು || ೧೪ ||

ಭವಿಷ್ಯತ್ತು ಜೋತಿಷ್ಯ ಮತ್ತು ಸಾಮಗ್ರಿಕಾದಿಗಳೆಲ್ಲಾ
ಸಹವಿದ್ಯೆ ಸಕಲ ಗುಣ ಸಂಪನ್ನನು |
ವೇದಶೃತಿ ಆಗಮಾದಿಗಳ ಪಾರಾಯಣನು |
ಗಾನ ವಿದ್ಯೆಯಲಿ ಸಂಪೂರ್ಣ ಬಲ್ಲಿದನು |
ತೆಲಗು ತಮಿಳ ಅರವು ಆಂಗ್ಲ ಕನ್ನಡ ಹಿಂದು
ಸಂಸ್ಕೃತ ಬಲ್ಲವ ಭಾಷೆಯನು |
ಮಹಾರಾಷ್ಟ್ರ ವಿದ್ಯೆಯಲಿ ಪ್ರವೀಣನು ||

ತ್ರಿಕಾಲ ಶಿವಪೂಜೆ ನಕುಲ ಸಹದೇವ ವಿದ್ಯೆಯಲಿ
ಅಕಲ ಅನಂತನು ಮಹಾತ್ಮನು |
ಸಕಲ ಸಿದ್ಧಾಂತಿ ದುಷ್ಟರಿಗೆ ತಾ ವ್ಯಾಘ್ರನು
ಅಮಲ ಭರಪೂರ ಪ್ರತ್ಯಕ್ಷ ನರಯಮನನು |
ಶ್ರೀಶೈಲ ಕಾವಡಿಯು ವರ್ಷಾ ಕಳುಹಿಸುವವನು
ಕಾಡಸಿದ್ಧೇಶ್ವರ ಕುಲದೇವನು |
ಸಿದ್ಧಗಿರಿ ಮಹಾಸ್ವಾಮಿಗಿವ ಶಿಷ್ಯನು ||

||ಏರು||

ಇದ್ದನಿವ ಸರಳಾ ಕನ್ನಡದಿ ಹರಳಾ ಭುವನದಿ ಜನಿಸಿದನು
ಧರ್ಮಾನುಜ ಪಾರ್ಥ ವೀರನು |
ವಿದ್ಯದ ಸದನ ರೂಪದಲ್ಲಿ ಮದನ ಗಣಾಧೀಶ್ವರನು |
ಶಿವಲೋಕದಿಂದ ಇಳಿದನು |
ಶಿವನಾಜ್ಞೆಧರಿಸಿ ಸರ್ವಜ್ಞ ಲೀಲನಾಡಿದನು |
ತೀರದೆಷ್ಟು ಹೇಳಲಾರಿದನು ||

ಸಮಾಜ ಸುಧಾರಕರೆ ಉಮಾ ಮಹೇಶ ತಾನು
ಕಮಲಾಕ್ಷನನ್ನು ಕಳುಹಿಸಿಕೊಟ್ಟನು |
ಅಮಿತ ಮಹಿಮ ಅಖಿಳಾಂಡ ಸ್ವರೂಪನು |
ಹತ್ತೊಂಭತ್ತು ನೂರಾ ಆರು ಅಗಸ್ಟ ಇಪ್ಪತ್ತು ಮೂರು
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನನಾದ ಲಿಂಗಭೂಪ ಸಿರಸಂಗೀಶನು || ೧೫ ||

ದಾನ ಕೊಟ್ಟ ಆಸ್ತಿಯು ಅಜ್ಞಾನ ನಾತೆಯಿಂದ
ಸಂಸ್ಥಾನವಾಗಿ ಸರಕಾರಿ ಸ್ವಾಧೀನು |
ಧೂಮೆ ಸಾಹೇಬ ಬಂದು ಹೇರಿಸಿದ ಖಜೀನಿಯನ್ನು |
ಬಾಯಿ ಸಾಹೇಬರಿಗೆ ಆಗಲಿಲ್ಲಾ ಇದ ಸಹನ |
ತನ್ನ ಅಣ್ಣ ಕಲ್ಲನಗೌಡನನ್ನು ದತ್ತಕನಾಗಿ ಮಾಡಿ
ಮರಣ ಕಾಲದಲ್ಲಿ ವಚನ ಕೊಟ್ಟಿದ್ದನು |
ಎಂದು ನುಡಿಸಿದರು ಬಾಯಿಯವರು ನ್ಯಾಯವನು ||

ದೇಶಗತ ಭೂಮಿ ತನ್ನ ಖಾಸಗತವಾದದ್ದೆಂದು
ಮುಲಕೀನಾತೆಯಿಂದ ಸರಟಿಫಿಕೇಟು ಬೇಡಿದರು |
ಎದುರದಾರರಾದರಪ್ಪ ಕೇಳ್ ಫಂಡಿನವರು |
ಹಾಯಕೋರ್ಟಿನವರು ಫಂಡಿನವರ ತಾಬೇ ಕೊಟ್ಟಾರು |
ದಿವಾಣಿ ಮಾರ್ಗದಿ ತಾವು ದಾವೇ ತಂದರಿದಕ್ಕಾಗಿ
ಸಿದ್ಧಗಿರಿ ಸ್ವಾಮಿಯವರು ಸಹಾಯ ಮಾಡುವರು |
ಜಜ್ಜ ಕೋರ್ಟಿನಿಂದ ದತ್ತಕ ಕಾಹೀಮ ಆದರು ||

ಫಂಡಿನ ಮುಖ್ಯಸ್ಥರಾದ ಸಂಸ್ಥಾನ ಟ್ರಸ್ಟಿಯವರು
ಹಾಯಕೋರ್ಟಿಗಪೀಲ ಮಾಡಿ ಕೆಲಸ ನಡಿಸಿದರು |
ಆರು ತಿಂಗಳ ಹಿಂದೆ ಫಂಡಿನಂತೆ ಹುಕುಂ ಪಡೆದರು |
ಪುಣ್ಯವಂತ ಬರೆದ ಲೇಖೀ ಸಿದ್ಧಮಾಡಿದರು |
ಅತ್ತ ಮಗನ ಕೈಯಲ್ಲೊಂದು ಹೆತ್ತ ತಂದೆಯು ದುಡ್ಡು ಕೊಡನು
ಸತ್ಯವಂತ ಶೀಲರಿವರು ಎಂಥ ಬಹುಳಾರು |
ಸೂರ್ಯ ಚಂದ್ರರಿರುವತನಕಾ ತಮ್ಮ ಕೀರ್ತಿ ಉಳಿಸಿದರು ||
ಸೊಲ್ಲಾಪುರ ಸಭಾದಲ್ಲಿ ಸಾರ್ವತ್ರಿಕ ಜನರು
ಕೂಡಿ ಕೈಲಾಸವಾಸಿ ಲಿಂಗರಾಜರನ್ನು ಸ್ಮರಿಸಿ
ಯಾವತ್ತರು ಮಾಡಿದರು ದುಃಖವನ್ನು
ಪುಟ್ಟಣ್ಣ ಶೆಟ್ಟರಿದ್ದರದಕ ಅಧ್ಯಕ್ಷರು |
ತ್ರಿಸಷ್ಟಿ ಪ್ರಮಥರೊಳು ನೈಷ್ಠಿಯಿಂದಾ ಕೂಡಿಸಿದರು
ಒಟ್ಟು ಅರವತ್ತು ನಾಲ್ಕು ಮಂದಿಯನ್ನು |
ಪ್ರಮಥನಾದ ಕೇಳಿರಿಹದಲ್ಲಿ ಲಿಂಗೇಂದ್ರನು ||

ದೋಣಿ ತೀರದಲ್ಲಿ ಭೂಮಿ ಏನು ಹೇಳಲಯ್ಯೋ ನಾನು
ಕ್ಷೋಣಿಯಲ್ಲಿ ಇಲ್ಲದಂಥಾ ಕ್ಷಾರವುಳ್ಳದ್ದು |
ಮನಗೂಳಿ ಉಕ್ಕಲಿ ಎರಡು ಜೋಡಿ ಎಂದು ಗೊತ್ತು ಇದ್ದದ್ದು |
ಪರಮಾನಂದದೇವರು ಎರಡು ಊರು ನಡುವೆ ಇರುವುದು |
ರಾಮರಾಜ್ಯನಾದಂಥ ಕಾಮನನ್ನು ಸುಟ್ಟಂಥ ಯಮನಿಂದ
ಭೂಮಿ ನಿರ್ಮಾಣ ಆಗಿರುವದು |
ಅಂಥ ಲಿಂಗಕ್ಕೆ ಎನ್ನ ಹೃದಯ ಗ್ರಾಹ್ಯವಾದದ್ದು ||
ತಾಳಿಕೋಟಿ ಕಂಠಿ ಸ್ವಾಮೀ ಗೋತ್ರಕ್ಕೆ ಹೊಂದಿದವನು
ಹೇಳುವೆನು ಆತನಿಗೆ ನಾನು ಶಿಷ್ಯನು |
ಮೂಲ ಕುಂಟೋಜಿಯ ಬಸವೇಶ್ವರ ಭಕ್ತನು |
ಉಕ್ಕಲಿಯ ಪರಮಾನಂದ ಗ್ರಾಮದಾತನು |
ಶಬ್ದ ದೋಷ ತೆಗೆದು ಹಾಕಿ ಇದ್ದ ಸಾರ ತಿಳಿದು
ಕೊಂಡು ಬುದ್ಧಿವಂತ ಕೊಟ್ಟ ಮೌಲ್ಯ ಧನವನ್ನು |
ತಪ್ಪು ತಗೆಯಲಿಕ್ಕೆ ಅಲ್ಲ ನಾನು ಕವಿಗಾರನು ||

||ಏರು||

ಕೊಟ್ಟ ಸಾಮ್ರಾಜ್ಯ ಹೊಂದಿ ಸಾಯುಜ್ಯ ಸ್ವರ್ಗನಾಥನಲ್ಲಿ |
ದಯವಿರಲಿ ದೇವರಿವರ ಮೇಲೆ |
ಜಯ ಜಯ ಲಿಂಗ ಮಹಾರಾಯ ಕೂಡಿ ಪುಣ್ಯದಲಿ |
ಸ್ವರ್ಗದಿಂದ ಬಂದಂಥ ಪುಷ್ಪಮಾಲೆ |
ನವಲಗುಂದ ಸಾರ್ಥಕನಾದ ಪ್ರಾಣ ಕಡೆಯಲ್ಲಿ |
ಬಸವ ತನುಜ ಹೀಂಗ ಹೇಳುತಲಿ ||

ಭೀಮನಗೌಡನ ಪ್ರೀತಿಯಲ್ಲಿ ನೇಮದಿಂದ ಇರುವೆನು
ಕಾಮಧೇನು ಅಗಲಿಹೋದಾ ಸುಮ್ಮನೆ ಕೂತೆನು |
ಸೋಮಧರನು ಕಾಯಲೆಂದು ನಾನು ಬೇಡಿಕೊಂಡೆನು |
ಹತ್ತೊಂಭತ್ತು ನೂರಾ ಆರು ಅಗಸ್ಟ ಇಪ್ಪತ್ತು ಮೂರು
ಭಾದ್ರಪದ ಶುದ್ಧ ಚೌತಿಗೆ ಐಕ್ಯವಾದನು |
ಸ್ವರ್ಗ ಸ್ವಾಧೀನನಾದ ಲಿಂಗಭೂಪ ಸಿರಸಂಗೀಶನು ||

ರಚನೆ :
ಅಯ್ಯಪ್ಪ ಇಂಡಿ, ಉಕ್ಕಲಿ ತಾ|| ಬಸವನ ಬಾಗೇವಾಡಿ
ಕೃತಿ :
ಲಿಂಗರಾಜು ವಿಜಯ ಕಾವ್ಯ ಹಾಗೂ ಕೆಲವು ಲಾವಣಿಗಳು