ನೆರೆದು ಕುಳಿತಿರುವಂಥ ನನ್ನ ಹಿರಿಯರಿಗೆಲ್ಲ ಮಾಡಿ ನಮನ |
ಸರಳ ಶೈಲಿಯಲ್ಲಿ ಬರೆದಂಥ ಕವನ
ಸರಸವಾಗಿ ಸಾರುವೆನು | ಹರುಷದಿಂದ ಹಾಡುವೆನು |
ಸುರಪೂರ ಮಲ್ಲಪ್ಪಣ್ಣನವರ ವರಕೀರ್ತಿಯನಾ|| ೧ ||

ಸುರಪೂರ ಕರಿಬಸಪ್ಪ ಎನ್ನುವ | ಹೊತ್ತು ತಿರುಗಿ ಮಸಾಲಿ ಮಾರುವ |
ವೃತ್ತಿ ಮಾಡುತ ಧರ್ಮಪತ್ನಿ ದಾನಮ್ಮನ ||
ಬೆರೆತು ಭೀಮಾನದಿಯ ತೀರ | ರಹವಾಸಿಯಾಗಿ ಭೂಯಾರ |
ವೀರಶೈವರಾಗಿ ನಿತ್ಯಕಾಯಕ ಮಾಡುವರು|| ೨ ||

ವಿಭೂತಿ ಧರಿಸಿ ಹಣೆಯಲ್ಲಿ | ಕೆಂಪು ವಸ್ತ್ರ ಕೊರಳಲ್ಲಿ |
ಶಿರದಿ ರುಮಾಲ ಸುತ್ತಿಧರಿಸಿ ಕಸಿಯ ಅಂಗಿಯನು |
ಬೆರೆತು ಶಿವ-ಪಾರ್ವತಿಯಂತೆ | ಧರೆಗೆ ಬಂದ ದೇವರಂತೆ |
ಗುರುಲಿಂಗ ಜಂಗಮ ಪೂಜೆಯ ಮಾಡಿ ಸೇವೆಯನು|| ೩ ||

ಸರಸವಾಗಿ ಸಂಸಾರದೊಳಗ | ಹರುಷದಿಂದ ಇರುತಿರುವಾಗ |
ವರುಷ ಹಲವು ಗತಿಸುದರಾಗ ಆರು ಮಕ್ಕಳು |
ಪಾರಮಾರ್ಥ ಪ್ರಪಂಚ ಮಾಡಿ | ಸತಿ ಸುತರ ಒಂದುಗೂಡಿ
ಸುಖ ಭೋಗದ ಐದನೇ ಸುತನೆ ಮಲ್ಲಪ್ಪಣ್ಣನವರು|| ೪ ||

||ಇಳುವು||

ಚಿಕ್ಕ ಹಳ್ಳಿಯಲ್ಲಿ ದಕ್ಷತೆಯಿಂದಲಿ ಮಕ್ಕಳ ಶಿಕ್ಷಣವನ್ನು
ಬೆಳೆಸುವದಕೆ ಇತ್ತು ಬಡತನ || ೧ ||

ರಕ್ಷಣೆ ಮಾಡುತ ಸ್ವಲ್ಪ ಗಳಿಕೆಯಲಿ ಪ್ರಾಥಮಿಕ ಅಭ್ಯಾಸವನು |
ಮುಗಿಸುತ ವ್ಯವಹಾರವನು || ೨ ||

ಚೊಕ್ಕ ಹೃದಯದಿಂದ ತಕ್ಕವ್ಯಾಪಾರಕೆ ಬೆಳೆಸಿ ತಮ್ಮ ಬುದ್ಧಿಯನು
ಓಡಿಸಿದರು ಬಡತನವನ್ನು || ೩ ||

||ಚಾಲ||

ಜನಮನವನೊಲಿಸಿ ಅನುದಿನ | ಇಟ್ಟು ನಿಷ್ಠೆಯನು |
ಒಟ್ಟಿನಲಿ ಮೆಚ್ಚಿ ಶಾಂತೇಶನು | ಕರೆಸಕೊಂಡ ಇಂಡಿಗೆ ಅವರನು || ೧ ||

ದಿನದಿನಕೆ ಬೆಳೆಸಿ ಕೀರ್ತಿಯನು | ದಕ್ಷತೆಯ ಧೋರಣವ |
ತಾಲೂಕ ಜಿಲ್ಲೆ ಸಂಪೂರ್ಣ | ಅಭಿವೃದ್ಧಿಯನು ಸಾಧಿಸಿದರು|| ೨ ||

ಕಿರಾಣಿಯಲ್ಲದೆ ಅಡತ ಅಂಗಡಿ | ಮಾಡಿ ನಿರ್ಮಾಣ |
ಯಾಂತ್ರಿಕ ಕಬ್ಬಿಣ ಎಣ್ಣೆಯಗಾಣ | ಸರ್ವವಿಧದ ವ್ಯಾಪಾರವನು|| ೩ ||

||ಏರ||

ಲಕ್ಷ್ಯಗಟ್ಟಲೆ ರೊಕ್ಕಗಳಿಸಿ | ಲೆಕ್ಕವಿಲ್ಲದೆ ಮನೆಕಟ್ಟಿಸಿ |
ಲಕ್ಷ್ಮೀಪುತ್ರರಾದರು ಸುರಪೂರ ದೊಡ್ಡ ಮನೆತನ || ೧ನೆಯ ಚೌಕ ||
ಬೆಳೆದ ಬಳಗದ ಒಲುಮೆಯಿಂದ ಗಳಿಸಿ ಎಲ್ಲರು ಹೊಲಮನೆಗಳನು |
ಹಳ್ಯಾಗ ಅವರು ಬೆಳೆಸಿದರುತ್ತಮ ಬೇಸಾಯವನು|| ೧ ||

ಬೆಳೆದ ಪ್ರಭಾವಕೆ ಎಳೆದು ಬಂದು ಸಿರಿವಂತರ ಬೀಗತನ |
ಒಳ್ಳೇತನದಿ ಹೊಳೆಯುತ ಮಕ್ಕಳು ಮರಿಮಕ್ಕಳನು|| ೨ ||

ಎಲ್ಲಾ ಬಲ್ಲಿದ ಮಲ್ಲಪ್ಪಣ್ಣನವರಲಿ ಸಲಹಾಕೇಳಿ ಸರ್ವಜನಾ |
ತಾಲೂಕ ಜಿಲ್ಲಾ ಅಧಿಕಾರಿಗಳು ಸ್ನೇಹದಿ ಬಂದು ಮನೆಯತನ|| ೩ ||

||ಇಳುವು||

ಜೇವೂರ ಹೇಮಗಿರಿ ಶಿವಲಿಂಗಮ್ಮ ಹಿರಿಯಧರ್ಮಪತ್ನಿಯಿಂದ |
ಗುರುಶಾಂತನೆಂಬ ವರಕುವರ || ೧ ||

ವ್ಯವಹಾರದಿ ಚತುರತನದಲಿ ಜನಮನವನೊಲಿಸಿ ಆಗಿಹರು |
ವಿಜಾಪುರ ಮುನ್ಸಿಪಾಲ್ಟಿ ಮೆಂಬರ|| ೨ ||

ನವಯುಗ ನವನಾಗರಿಕ ನೆವದಲಿ ಬಂದಿಹರು ದ್ವಿತೀಯ ಪತ್ನಿಯವರು
ಶ್ರೀಮಂತ ಮನೆತನ ಆತನೂರ|| ೩ ||

||ಚಾಲ||

ಎರಡನೆಯ ಪುತ್ರನೋರ್ವನು | ಈಶ್ವರನೆಂಬವನು |
ಎಂ.ಎ. ಪದವಿ ಪಡೆದಿಹನು | ಪ್ರೊಫೆಸರನಾಗಿ ಇರುವನು

ಕುಶಾಗ್ರಬುದ್ಧಿ ಅಣ್ಣಾ ಅವರು | ವಂಶ ಪರಂಪರೆಯ |
ವ್ಯಾಪಾರವನು ನಡೆಸಿಹರು | ಬಜಾರಕೆ ಸುರಪೂರ ಖ್ಯಾತ ಹೆಸರು ||

ವ್ಯಾಪಾರದ ಪ್ರಗತಿ ಹೊಂದಿಹರು | ನಿಪುಣರೆನಿಸಿದರು |
ಗ್ರಾಹಕರ ಜೊತೆಗೆ ಸಹಕಾರ | ಎಲ್ಲರ ಪ್ರೀತಿ ಗಳಿಸ್ಯಾರು |

||ಏರ||

ಹಳ್ಳಿಯಿಂದ ದಿಲ್ಲಿಯತನಕ ಒಳ್ಳೆಯವಸ್ತು ಅಗ್ಗದಿ ಮಾರಿ |
ಎಳೆದು ಗಿರಾಕಿ ಬೆಳೆಸಿಕೊಂಡರು ವ್ಯಾಪಾರವನು|| ೨ನೆಯ ಚೌಕ ||

ಧೋರಣೆ ಕಟ್ಟಿ ವ್ಯವಹಾರದಲಿ | ಮೀರದ ಮಾರವಾಡಿ ಭಾಟರಲ್ಲಿ |
ಧೂರ್ತರಾಗಿ ಸರ್ವರನೆಲ್ಲ ಕೂಡಿಸಿ ಬಿಟ್ಟಿಹರು ||
ಪ್ರಾಮಾಣಿಕ ವ್ಯವಹಾರ ಬೆಳೆಸಿ | ದೂರನತನಕ ಹೆಸರು ಗಳಿಸಿ |
ಕರ್ನಾಟಕದ ತುಂಬೆಲ್ಲಾ ಉಳಿಯಿತು ಸುರಪೂರದ ಹೆಸರು|| ೧ ||

ಪೂರ್ವಜನ್ಮದಿಂದ ಬಂದ | ಚಾಣಾಕ್ಷತೆಯ ದೃಷ್ಟಿಯಿಂದ |
ಸಾರ್ವಜನಿಕ ಪ್ರಗತಿ ಮಾಡಲು ಮನಸ್ಸು ಮಾಡಿದರು ||
ವ್ಯಾಪಾರದಿಂದ ಹಣವನು ಪಡೆದು | ಸಮಾಜದಲ್ಲಿ ಮುಂದುವರೆದು |
ಸ್ವಾರ್ಥತ್ಯಾಗಮಾಡಿ ರಾಜಕೀಯರಂಗ ಸೇರಿದರು|| ೨ ||

ಸರ್ವರ ಶಿಕ್ಷಣ ಪ್ರಗತಿಯ ಬಯಸಿ | ಸೇರಿ ವಿಜಾಪುರದಿ ನೆಲೆಸಿ |
ಲಿಂಗಾಯತ ವಿದ್ಯಾವರ್ಧಕ ಸಂಘವ ಕಟ್ಟಿದರು ||
ಮೀರಿದ ಕಾರ್ಯಮಾಡಿತೋರಿಸಿ | ಶಿಕ್ಷಣ ಸಂಸ್ಥೆ ಕಟ್ಟಿ ನಿಲ್ಲಿಸಿ |
ರಾಜ್ಯಕೇಂದ್ರ ದೂರದತನಕ ಅಣ್ಣಾವರ ಹೆಸರು|| ೩ ||

||ಇಳುವು||

ಅಧಿಕಾರದ ಆಶೆ ತೊರೆದರೂ | ಅಧಿಕಾರವೇ ಬೆನ್ನು ಹತ್ತಿತ್ತು |
ವಿಧಾನ ಸಭೆಗೆ ಆರಿಸಿತು|| ೧ ||

ಮುಂದುವರಿದ ಮೇಧಾವಿ ಬುದ್ಧಿವಂತ | ಮೈಸೂರು ಮುಂಬಯಿ ಪ್ರಾಂತ
ಆರಿಸಿದರು ಶಾಸಕರು ಅಂತ|| ೨ ||

ಉದಾರಹೃದಯ ಮುಂಧೋರಣೆಯ ಆದರ್ಶ ವ್ಯಕ್ತಿಯಂತ |
ಕೇಂದ್ರದಲಿ ಮಂತ್ರಿಯಾಗಿ ಸಹಿತ|| ೩ ||

||ಚಾಲ||

ಉಪರಾಷ್ಟ್ರಪತಿ ಜತ್ತಿಯವರು | ಮುಖ್ಯಮಂತ್ರಿಗಳು |
ರಾಜಕಾರಣದ ತೊಡಕನು ಕುರಿತು | ಅಣ್ಣಾ ಅವರ ಸಲಹೆ ಕೇಳುತ|| ೧ ||

ಎರಡು ದಶಕ ಅವರು ಸೇವೆಯಲಿ | ದೀನದಲಿತರಲಿ |
ತನು-ಮನದಿ ಕಾರ್ಯ ಮಾಡುತ್ತ | ನಿಮ್ನರನು ಮೇಲೆ ಎತ್ತುತ್ತ ||
ಈಗಿನ ಪ್ರಧಾನಿ ಗಾಂಧಿಯವರು | ತೆಗೆದ ಕಾಯ್ದೆ ಆಗಲೇ |
ಅಣ್ಣಾ ಅವರ ಮನದಿ ನಾಟಿತ್ತ | ಮಾಡಿಕೊಂಡಿದ್ದರು ರಕ್ತಗತ ||

||ಏರ||

ಉಚ್ಚ ಶಿಕ್ಷಣ ಪಡೆಯದಿದ್ದರೂ | ಸರ್ವಭಾಷೆಯಲ್ಲಿ ಅವರು |
ಸ್ವಚ್ಛ ಮಾತನಾಡುವರು ಇಂಗ್ಲೀಷ ಭಾಷೆಯನು|| ೩ನೆಯ ಚೌಕ ||

ರಾಷ್ಟ್ರವಿಸ್ತರಣಾ ಯೋಜನೆಯಲ್ಲಿ | ತೀರ ಹಿಂದುಳಿದ ಹಳ್ಳಿಯಲ್ಲಿ |
ಬೇಡಿದಷ್ಟು ಧನಸಹಾಯ ಮಾಡಿಕೊಟ್ಟಿಹರು ||

ರಾಷ್ಟ್ರೀಯ ಪಕ್ಷಗಳೆಷ್ಟೋ ಇದ್ದರೂ | ರಾಷ್ಟ್ರಹಿತದ ಪಕ್ಷಕ್ಕವರು |
ಶ್ರೇಷ್ಠತೆ ಕೊಟ್ಟು ಪಕ್ಷಾಂತರದಿ ಹೊಂದಿ ನಿಂತಿಹರು ||

ರಾಷ್ಟ್ರೀಯ ಕಾರ‍್ಯಕರ್ತರಲ್ಲಿ | ರಾಜಕೀಯ ರಂಗದಲ್ಲಿ |
ಸದವಕಾಶ ನೋಡಿ ಸಲಹೆಯ ಪಾತ್ರವಾಡುವುದು ||

ಮುಖ್ಯಮಂತ್ರಿ ಆಯ್ಕೆಯಲ್ಲಿ | ದಕ್ಷಧೋರಣೆ ವಿಚಾರದಲ್ಲಿ |
ಚತುರ ಚಾಣಾಕ್ಷ ಮಲ್ಲಪ್ಪಣ್ಣನವರು ||

ಶ್ರೇಷ್ಠ ಮುಕುಟದೊಳಗಿನ ಒಂದು | ವಿಶಿಷ್ಟ ರತ್ನದ ಹರಳು ಎಂದು |
ರಾಷ್ಟ್ರದಲ್ಲಿ ಪ್ರಕಟವಾಗಿ ಕೀರ್ತಿ ಗಳಿಸಿದ ||

ಸ್ಪಷ್ಟ ನಿಷ್ಠುರ ಸ್ವತಂತ್ರವಾದಿ | ಶ್ರೇಷ್ಠ ತಾತ್ವಿಕ ವಿಚಾರವಾದಿ |
ದೇಶಕ್ಕಾಗಿ ದೇಹವನ್ನೇ ಮುಡುಪಾಗಿಟ್ಟವರು|| ೩ ||

||ಇಳುವು||

ಸರಳ ಹೃದಯದಿ ಸದ್ಭಾವದಿ ಶರಣಮಾರ್ಗವನು ತುಳಿದವರು |
ಸ್ವಾರ್ಥತ್ಯಾಗಿಯಾಗಿ ನಡೆದವರು|| ೧ ||

ದೇಹದ ಮೋಹದ ಭಾವನೆಯಿಲ್ಲದೆ ದೇಶಕ್ಕಾಗಿ ದುಡಿದವರು |
ಸಿರಿವಂತಿಕೆ ಸೊಕ್ಕಳಿದವರು|| ೨ ||

ವರುಷಕಾಲ ನೆಲಹಿಡಿದ ಶರೀರದಿ ಸ್ವಾರ್ಥಭಾವ ಮರೆತವರು |
ಸರ್ವರ ಹಿತವ ಬಯಸುವರು|| ೩ ||

ಕರ್ನಾಟಕದಲಿ ಕೇಸರಿ ಅನಿಸಿ ಇಹಲೋಕವ ಮರೆತವರು |
ಸದಾ ಅಮರರಾಗಿ ನಿಂತಿಹರು|| ೪ ||

||ಚಾಲ||

ಎಪ್ಪತ್ತೈದನೇ ಇಸ್ವಿ ನವ್ಹಂಬರ | ವಿಜಾಪುರ ಶಹರ |
ವಿವಿಧ ಅಧಿಕಾರಿ ವರ್ಗದವರು | ಹತ್ತು ಸಾವಿರ ಜನ ಕೂಡಿಹರು|| ೧ ||

ಸುರಪುರ ಆತ್ಮಕ್ಕೆ ಅವರು | ಚಿರಶಾಂತಿಯ ಬೇಡಿಹರು |
ಮೆರೆಸಿ ಇಂಡಿಗೆ ಬಂದಿಹರು | ಜನ್ಮಭೂಮಿ ಅಂತ್ಯ ಸಂಸ್ಕಾರ|| ೨ ||

ಇಂಡಿ ಕೋರ್ಟು ಕಚೇರಿ ಅಂಗಡಿ ಮುಚ್ಚಿ ಸರ್ವರು
ಸಾವಿರಾರು ಜನರು ನೆರೆದಿಹರು ಕಣ್ಣೀರ ಮುಡಿಯುತ ನಿಂತಿಹರು|| ೩ ||

||ಏರ||

ಎಷ್ಟು ಹೇಳಿದರೂ ತೀರದು ಎಂದು ಆತ್ಮಕೆ ಶಾಂತಿ ಸಿಗಲಿ ಎಂದು |
ಸೃಷ್ಟಿ ಕರ್ತಗೆ ಬೇಡಿ ವಾಲಿ ಶರಣನ ಕವನ|| ೪ನೆಯ ಚೌಕ ||
ಸಾಲುಟಗಿ ಮೇಳ ನಾಲ್ವರು | ಬಸಯ್ಯ ಹಾಡುವರು |
ಹಿಮ್ಮೇಳ ನಿಂಗಪ್ಪರೇವಣಸಿದ್ಧರು | ಎಲ್ಲರೂ ಒಂದೆ ಊರವರು ||

 

ರಚನೆ : ಶರಣಪ್ಪ ವಾಲಿ
ಕೃತಿ :
ಶರಣ ಸ್ಮೃತಿ