ಮೆರೆವ ಮುತ್ತನು ತೆರೆದು ತೋರ್ವತೆರ ವರದ ಸಿಂಪಿ ಲಿಂಗಣ್ಣನವರು |
ಭಾರತ ರಾಷ್ಟ್ರದ ರಾಷ್ಟ್ರಪತಿಗಳಿಂದ ಶ್ರೇಷ್ಠ ಪ್ರಶಸ್ತಿಯ ಪಡೆದವರು|| ೧ ||

ಹತ್ತೊಂಬತ್ತು ನೂರಾ ಐದರಲ್ಲಿ ಚಡಚಣ ಗ್ರಾಮದಲಿ ಜನಿಸಿಹರು |
ಹೆತ್ತ ತಾಯಿತಂದೆ ಮರಣಹೊಂದಿ ಶಾರದೆಯ ಹಸ್ತದಲಿ ಇತ್ತಿಹರು|| ೨ ||

ಪ್ರಾಥಮಿಕ ಶಿಕ್ಷಣದಲ್ಲಿ ಪ್ರಥಮ ಸ್ಥಾನ ಆರನೆ ಇಯತ್ತೆಗೆ ಬಂದಿಹರು |
ಪ್ರಾಮಾಣಿಕತನ ನಿಬಂಧ ವಿಷಯದಿ ಶಿಕ್ಷಣಾಧಿಕಾರಿ ಬೆರಗಾದರು|| ೩ ||

||ಚಾಲ||

ಮುಲ್ಕೀಪರೀಕ್ಷೆ ಇಪ್ಪತ್ತೆರಡರಲಿ | ಮೇಲ್ಮೆಯ ಸ್ಥಾನ ಜಿಲ್ಲೆಯಲಿ |
ಬಲ್ಲಬಲ್ಲ ನಾಡಕವಿಗಳಲಿ | ಮೇಲೆಂದು ಸರ್ವರ ಬಾಯಿಯಲಿ |
ಶಾಲೆ ಬಿಟ್ಟರು ಮನೆಗೆಲಸದಲಿ | ನೇಯುವರು ಸೀರೆ ಓದುತಲಿ |

||ಏರ||

ಬಾಲ್ಯದಲ್ಲೇ ಸಾಹಿತ್ಯತಲೆಯಲಿ ಗ್ರಂಥಾಲಯ ಸಹ ತೆಗೆದಿಹರು|| ೧ನೆಯ ಚೌಕ ||

‘ಮುದ್ದು’ಕೈ ಬರಹದ ಸುದ್ದಿ ಪತ್ರಿಕೆಯಲಿ ಕನ್ನಡ ಕವಿತೆಯ ಬರೆಯುವರು |
ಎದ್ದು ನೇಮದಲಿ ಮಿಂದು ಬಾವಿಯಲಿ ಬಂದು ಬರಹದಲೇ ತೊಡಗುವರು ||
ವರುಷದಲ್ಲೇ ಟ್ರೇನಿಂಗ ಪಡೆಯಲು ಸರ್ವರಲ್ಲಿ ಇವರ‍್ನ ಆರಿಸಿಹರು |
ಹರುಷದಲ್ಲಿ ಸಾಹಿತ್ಯ ಶಕ್ತಿಗೆ ಹೊಸಕಳೆ ಮೆರುಗನು ಪಡೆದಿಹರು ||
ಶಿಕ್ಷಕರಾಗಿ ಭತಗುಣಕಿಯ ಜನ ಮನ ಮೆಚ್ಚುಗೆಯನು ಪಡೆದಿಹರು |
ಉಕ್ಕೇರಿ ಸಾಹಿತ್ಯ ‘ಜನಜೀವನ’ ಮೊದಲಾದ ನಾಟಕವ ಬರೆದಿಹರು ||

||ಚಾಲ||

ನಾಟಕ ಆಡಿಸಿ ನಾಯಕ ಕಲೆಕ್ಟರರು | ಅದರ ರಚನೆಗಾಗಿ ಹೊಗಳಿದರು |
ರಾಜಕೀಯ ಅನ್ಯಾಯ ತೋರಿಹರು | ರಾಜದ್ರೋಹಿ ಕತೆಯ ಬರೆದಿಹರು |
ರಾಷ್ಟ್ರೀಯ ಲಾವಣಿ ರಚಿಸಿದರು | ಶಿಕ್ಷೆಯೆಂದು ಇಂಗಳೇಶ್ವರ ಕಳಿಸಿದರು |

||ಏರ||

ಇಷ್ಟಾದರು ಸಹ ಕಷ್ಟದಲ್ಲಿಯೆ | ರಾಜನಿಷ್ಠರ ಕತೆ ಬರೆದಿಹರು|| ೨ನೆಯ ಚೌಕ ||
ಹಲಸಂಗಿಗೆ ವರ್ಗಾಗಿ ಚೆನ್ನರ ಮಧುರ ಸಾಹಿತ್ಯವ ಪಡೆದಿಹರು |
‘ಮಲ್ಲಿಗೆದಂಡೆ’ ‘ಗರತಿಯಹಾಡು’ ‘ಮಿಲನ’ ಕಾವ್ಯವನು ರಚಿಸಿದರು ||
ಭಾಷಾಪ್ರಭುತ್ವ ನೈಜಪ್ರತಿಭೆಯ ಗಣ್ಯವ್ಯಕ್ತಿಯೆಂದೆನಿಸಹರು |
ಆಶುಕವಿತೆಯ ಸ್ಪರ್ಧೆಯಲ್ಲಿ ಸಹ ಪ್ರಥಮ ಸ್ಥಾನವ ಪಡೆದಿಹರು ||
‘ಪವಿತ್ರ ಜೀವನ’ ಕೃತಿಯನು ಕಂಡು ಕಾಲೇಜ ಶಿಕ್ಷಕರಾದವರು |
ಇವರನು ನೋಡಿ ಟ್ರೇನಿಂಗ ಕಾಲದಿ ಪ್ರತಿಭೆಗೆ ಬೆರಗಾಗಿ ನಿಂತಿಹರು ||

||ಚಾಲ||

ಕನ್ನಡ ಶಿಕ್ಷಣ ಗಣಿತದಲ್ಲಿ | ಉನ್ನತ ನಾಲ್ಕು ಜಿಲ್ಲೆಯಲ್ಲಿ |
ಸನ್ ಇಸ್ವಿ ನಾಲ್ವತ್ತೆರಡರಲಿ | ಟ್ರೇನಿಂಗ ಮುಗಿಸಿ ಶಾಲೆಯಲಿ |
ಸನ್ ನಾಲ್ವತ್ಮೂರನೇ ಇಸ್ವಿಯಲ್ಲಿ | ಶ್ರೀ ಅರವಿಂದರ ಮಾರ್ಗದಲಿ |

||ಏರ||

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಹೊಸ ಹೊತ್ತಿಗೆಯನು ಬರೆದಿಹರು|| ೩ನೆಯ ಚೌಕ ||
ಸನ್ ನಾಲ್ವತ್ತಾಲ್ಕರಲಿ ರಬಕವಿ ಸಾಹಿತ್ಯಗೋಷ್ಠಿಯ ಅಧ್ಯಕ್ಷರಾಗಿಹರು |
ಜನಪದ ಸಾಹಿತ್ಯ ಸವಿಸೌರಭವನು ಜನಜನತೆಗೆ ಉಣಬಡಿಸಿಹರು ||
ಶ್ರೀ ಭಗವಾನ್ ಅರವಿಂದರ ತತ್ವವ ಕನ್ನಡದಲಿ ತಿಳಿಬರೆದವರು |
ಸರಳಶೈಲಿಯ ವಿಚಾರ ಸರಣಿ ಧ್ಯೇಯ ಧೋರಣೆಗೆ ಮೆಚ್ಚಿಹರು ||
ಕರ್ನಾಟಕ ವಿಶ್ವವಿದ್ಯಾಲಯವು ಪಠ್ಯಪುಸ್ತಕವೆಂದು ಆರಿಸಿಹುದು |
‘ಗರತಿಯಬಾಳು’ ‘ಪವಿತ್ರ ಜೀವನ’ ಬಿ.ಎ. ತರಗತಿಗ್ಹಚ್ಚಿಹರು ||

||ಚಾಲ||

ತಕ್ಕ ‘ಸ್ವರ್ಗದೋಲೆ’ ರಚಿಸಿದರು | ಮುಖ್ಯ ವಿದ್ಯಾಲಯಕ್ಹಚ್ಚಿದರು |
ಸಮಾಜ ಶಿಕ್ಷಣಕೆ ಅಧಿಕಾರಿ | ಆಗಿ ಸೇವೆಯನು ಮಾಡಿದರು |
ಮುಖ್ಯಸ್ಥರಾಗುತ ಮೈಸೂರು | ಶಿಕ್ಷಣ ಬೋರ್ಡಿಗೆ ಸದಸ್ಯರು |

||ಏರ||

ಮೂವತ್ತೈದು ವರ್ಷ ಸೇವೆ ಸಲ್ಲಿಸಿ ಶಿಕ್ಷಕವೃತ್ತಿಯ ಮುಗಿಸಿಹರು|| ೪ನೆಯ ಚೌಕ ||
ಎಲ್ಲರಲ್ಲಿ ಬಲ್ಲ ಶಿಕ್ಷಕರಿವರೆಂದು ಬಾಬು ರಾಜೇಂದ್ರ ಪ್ರಸಾದರು |
ದಿಲ್ಲಿಯ ಭವನದಿ ರಾಷ್ಟ್ರಪ್ರಶಸ್ತಿಯ ಪಡೆದಿಹ ಗುರುವರ ನೋಡಿದರು ||
ಬಹುಮುಖ ಪ್ರತಿಭೆಯ ಕನ್ನಡ ಲೇಖಕ ಜನಪದ ಕವಿಯೆಂದೆನಿಸಿದರು |
ಬಹುಮಾನಿತ ಶ್ರೀ ಸಿಂಪಿಯವರು ಈಗ ಎಪ್ಪತ್ತಾರಕೆ ಬಂದಿಹರು ||
ಶ್ರೀ ಅರವಿಂದ ಗ್ರಂಥಮಾಲೆಯ ನೂರಾರು ಕೃತಿಗಳ ತಂದಿಹರು |
ಸರಕಾರವು ಸಹ ಪ್ರತಿಭೆಗೆ ತಿಂಗಳ ಹಣವನು ಕೊಡುತಿದೆ ಐನೂರು ||

||ಚಾಲ||

ಸದೃಢ ಕ್ರಾಂತಿ ಶರೀರ | ಸೂಕ್ಷ್ಮನೋಟ ತೀಕ್ಷ್ಣ ಕಿವಿಯವರು |
ಗಾಂಧಿತಲೆಯ ಖಾದಿ ತೊಡುವವರು | ಆಧುನಿಕ ಚೈನಿ ಅರಿಯದವರು |
ಎದ್ದು ವ್ಯಾಯಾಮ ಜಳಕ ತಣ್ಣೀರ | ತಮ್ಮ ಬಟ್ಟೆ ತಾವೆ ತೊಳೆಯುವರು ||

||ಏರು||

ಕಸವಗೂಡಿಸಿ ಕಟ್ಟಿಗೆಯನು ಸಹ ತರುಣರಂತೆ ಜಿಗಿದೊಡೆಯುವರು
|| ೫ನೆಯ ಚೌಕ ||

(ಖ್ಯಾಲಿ : ದಾಡಿ ಏಳು ಕೊಳ್ಳದಲಿ ಇರುವ …… ಎಂಬಂತೆ)
ಶ್ರೀ ಭಗವಾನ್ ಅರವಿಂದರ ತತ್ವದ ಅರ್ಥವ ಅರಿತವರು |
ಶ್ರೀಮಹಾಮಾತೆಗೆ ಅರ್ಪಿತರು |
ಶ್ರೀಮಾನ್ ಸಿಂಪಿಲಿಂಗಣ್ಣನವರು|| ಪಲ್ಲ ||
ಭಕ್ತಿಭಾವ ಕರ್ತವ್ಯ ನಿಷ್ಠರು | ಶಕ್ತಿ ಮಾತೆಯ ಮೂರ್ತಿವಂತರು |
ರಕ್ತದ ಕಣದಲಿ ಶಕ್ತಿ ಪಡೆದವರು | ನಕ್ಕುನಗಿಸುವಾ ಹಾಸ್ಯರಸಿಕರು|| ೧ ||

ಧ್ಯಾನ ಮೌನ ಪ್ರಾರ್ಥನೆ ಗೈವವರು | ಜ್ಞಾನದಿಂದ ತತ್ವವ ತಿಳಿದವರು |
ತನುಮನದಿಂದನುಭವ ಪಡೆದವರು | ಮಾನವ ಪ್ರಗತಿಯ ಮಾರ್ಗದರ್ಶಕರು|| ೨ ||

ಇಂಥವರಿಂದಲೆ ನಾಡಿಗೆ ಕೀರ್ತಿಯು | ಇಂಥವರಿಂದಲೆ ಜನಜಾಗೃತಿಯು |
ಇವರಿಗಾಯುರಾರೋಗ್ಯ ಕೊಡಲಿ ಎಂದು | ಬೇಡಿಕೊಳ್ಳುವರು ವಾಲಿ ಶರಣರು|| ೩ ||


ರಚನೆ :
ಶರಣಪ್ಪ ವಾಲಿ
ಕೃತಿ :
ಶರಣಸ್ಮೃತಿ