ಕರ್ನಾಟಕ ಪ್ರಾಥಮಿಕ ಮಾಧ್ಯಮಿಕ ರಾಜ್ಯ ಶಿಕ್ಷಣ ಸಚಿವರು |
ಮೇರುವಿನಂತೆ ಕೀರ್ತಿಪಡೆದ ಖರಗೆ ಮಾನ್ಯ ಮಲ್ಲಿಕಾರ್ಜುನರು ||
ಬೀದರ ಜಿಲ್ಲೆ ಭಾಲ್ಕಿ ತಾಲೂಕ ವರವಟ್ಟಿಯಲ್ಲಿ ಜನಿಸಿದರು |
ಬಡತನ ಸ್ಥಿತಿಗತಿ ಅರಿತ ನುರಿತ ತಂದೆ ಮಾನ್ಯ ಶ್ರೀ ಮಾನಪ್ಪನವರು ||

||ಚಾಲ||

ನಾಲ್ವತ್ತೆರಡು ಜುಲೈ ಇಪ್ಪತ್ತೊಂದರಲ್ಲಿ ಜನಿಸಿಹರು |
ಹಳ್ಳಿಯಲ್ಲಿ ಬಾಲ್ಯ ಪ್ರಾಥಮಿಕ ಶಿಕ್ಷಣ ಪಡೆದವರು |
ಕಲಬುರಗಿಯಲ್ಲಿ ಹಾಯಸ್ಕೂಲ ಓದನು ಮುಗಿಸಿದರು | ಕರ್ನಾಟಕ
ಕರ್ನಾಟಕ ವಿಶ್ವವಿದ್ಯಾಲಯದಲಿ ನ್ಯಾಯಶಾಸ್ತ್ರ ಪದವಿ ಗಳಿಸಿದರು
ವಿದ್ಯಾರ್ಥಿಸಂಘವನು ಕಟ್ಟಿದರು|| ೧ನೆಯ ಚೌಕ ||
ಬಡವಕಾರ್ಮಿಕರ ಒಡಲವ್ಯಥೆಯ ಓಡಿಸುವ ದೃಢತೆ ಹಿಡಿದಿಹರು |
ಒಡನೆ ಗಿರಣಿಯಲಿ ದುಡಿವ ಜನಕೆ ಕಲ್ಯಾಣಯೋಜನೆಯ ತೆಗೆದಿಹರು |
ಬಡವ ಬಲ್ಲಿದರ ತೊಡಕು ತೆಗೆದ ಆಡಳಿತ ಪಕ್ಷ ಸೇರಿಹರು |
ಹಿತಚಿಂತಕರನು ಕೇಂದ್ರಕೆ ಕಳಿಸಿ ವಿಧಾನಸಭೆಗೆ ನಿಂತಿಹರು ||

||ಚಾಲ||

ವಿಧಾನ ಸಭೆಯ ಶಾಸಕರಾಗಿ ದುಡಿವವರು |
ಚರ್ಮಕೈಗಾರಿಕೆ ಅಧ್ಯಕ್ಷರಾಗಿ ಶ್ರಮಿಸುವರು |
ಪೌರಾಡಳಿತ ಆರ್ಥಿಕ ವಿನಿಮಯ ಮಾಡುವರವರು | ಬೇಸಾಯ |
ಬೇಸಾಯ ವಿಶ್ವವಿದ್ಯಾಲಯ ಬೋರ್ಡಿನ ಸದಸ್ಯರಾಗಿರುವರು |
ದಲಿತರಿಗೆ ನೆರವು ನೀಡಿಹರು || ೨ನೆಯ ಚೌಕ ||
ಹರಿಜನರನು ಉದ್ಧಾರಗೊಳಿಸಿದ ಡಾ|| ಅಂಬೇಡಕರರ |
ಮರ್ಮತಿಳಿದು ಆ ದಾರಿಯ ತುಳಿದ ನಿಷ್ಠಾವಂತ ಸಚಿವರ ||
ಸ್ಮಾರಕ ಸಂಸ್ಥೆಯ ರಚಿಸಿ ಮಿಲಂದ ಪ್ರೌಢಶಾಲೆ ತೆಗೆದವರ |
ಹಿರಿ-ಕಿರಿ ಜನರುದ್ಧಾರಕಾರ್ಯಕೆ ಪಣವ ತೊಟ್ಟು ನಿಂತವರ ||

||ಚಾಲ||

ಒಂದೇ ತಾಯಿಯ ಮಕ್ಕಳೆನ್ನುವ ಭಾವ ಬರಬೇಕು |
ಹಿಂದುಳಿದ ವರ್ಗದಲಿ ಬಂಧು ಭಾವವಿರಬೇಕು |
ಬಂದ ಸುಖದಲಿ ಸರ್ವರು ಸಮನಾಗಿ ಹಂಚಿಕೊಳ್ಳಬೇಕು ಹರಿಜನರ |
ಹರಿಜನ ಚಿಂತಕ ಶಿಕ್ಷಣ ಖಾತೆಯ ಸೇವೆಗೈವ ಸಚಿವರರು |
ಮಾನ್ಯ ಖರಗೆ ಮಲ್ಲಿಕಾರ್ಜುನರು || ೩ನೆಯ ಚೌಕ ||
ತರುಣ ಸಚಿವರಿಗೆ ಕ್ಯಾಬಿನೆಟ್ ದರ್ಜೆಯ ಪದವಿ ದೊರೆಯಲೆಂದು ಬೇಡುವರು
ಸಾಲೊಟಗಿ ವಾಲಿ ಶರಣರು

||ಖ್ಯಾಲಿ||

ಸತ್ಯಕ್ಕೆ ಸಾವಿಲ್ಲೆನ್ನುವ ಮಾತಿನ ಅರ್ಥವ ಅರಿಯೋಣ ಬಾ |
ಖರಗೆ ಸಚಿವರ ಕೇಳೋಣ ಬಾ | ಸತ್ಯದ ತತ್ವವ ತಿಳಿಯೋಣ ಬಾ ಬಾ || ಪಲ್ಲ ||

ಉಪ್ಪಿನ ಬೆಟಗೇರಿ ಸಭೆ ಮುಗಿಸ್ಯಾರ | ಜೀಪಿನಾಗ ರೋಣ ದಾರಿ ಹಿಡಿದಾರ |
ನವಿಲಗುಂದ ಬಳಿ ಅಪಘಾತ ಆದರ | ಮುದ್ದಿಯಾಗಿ ಬಿದ್ದಾದ ಮೋಟಾರ|| ೧ ||

ಸಚಿವರ ಸಂಗಡ ಕೃಷ್ಣರಾವರು | ಬೆಳಗಾವಿ ಶಿಕ್ಷಣ ನಿರ್ದೇಶಕರು |
ಕಲಬುರ್ಗಿ ಕಾಂಗ್ರೆಸ್ ಕಾರ‍್ಯಕರ್ತರು | ಸಚಿವರ ಗನ್‌ಮುನ್ನ ಚೆನ್ನಪ್ಪನವರು|| ೨ ||

ಬಾಗಿಲ ಮಣ್ಣಾಗ ಮುಳುಗ್ಯಾವ ಪೂರಾ | ದಾರಿಯಿಲ್ಲ ಹೊರ ಬಂದೇನೆಂದರು |
ಖರಗೆಯವರ ಪುಣ್ಯದ ಜೋರ | ಉಳಿದು ಬಂದಾರ ಹೊರಗೆ ನಾಲ್ವರು|| ೩ ||

ಸಂತ ತುಕಾರಾಮ ಸ್ವರ್ಗಕ ನಡದರ | ಕಾಲು ಹಿಡಿದು ಹಾಗೆ ಒಬ್ಬರಿಗೊಬ್ಬರು |
ಊರಿಗೆ ಊರೇ ಸ್ವರ್ಗಕ ಹೋಗ್ಯಾರ | ಅದರಂತೆ ಖರಗೆ ಲೀಲಾ ಮಾಡ್ಯಾರ|| ೪ ||

ಸರಳ ಹೃದಯ ಸದ್ಭಾವನೆಯವರು | ತರುಣ ಉತ್ಸಾಹಿ ಶಿಕ್ಷಣ ಸಚಿವರು |
ಹಿರಿಯ ಪದವಿಯ ಪಡೆಯಲೆನ್ನುತ | ಹರಶಿ ಹಾಡುವರು ವಾಲಿ ಶರಣರು|| ೫ ||


ರಚನೆ :
ಶರಣಪ್ಪ ವಾಲಿ
ಕೃತಿ :
ಶರಣಸ್ಮೃತಿ